ಪಿ. ಶೇಷಾದ್ರಿ

ಕಂಡಿದ್ದು ಕಂಡಂತೆ…

ಚಿತ್ರೋತ್ಸವ ಮತ್ತು ನಾನು…

Image

ನಾನು ಹುಟ್ಟಿದ್ದು, ಬಾಲ್ಯ ಕಳೆದದ್ದು, ಯೌವನಿಗನಾದದ್ದು ಹಳ್ಳಿಯಲ್ಲಿ…

ಇದು ಅರವತ್ತರ ದಶಕದ ಮಾತು.. 

Image

ಆಗ ನಮ್ಮೂರಲ್ಲೂ ಒಂದು ಟೆಂಟಿತ್ತು!
ರಾತ್ರಿ ಕತ್ತಲೆಯಾದ ಮೇಲೆ ಚಿತ್ರದ ಆಟ ಆರಂಭವಾಗುತ್ತಿತ್ತು.
ಸಂಜೆ ಏಳು ಗಂಟೆಗೆ ಮೊದಲ ಆಟ ಮತ್ತು ರಾತ್ರಿ ಒಂಭತ್ತೂವರೆಗೆ ಎರಡನೆಯದು.
ಅಪ್ಪ ಮೇಷ್ಟ್ರಾಗಿದ್ದರು.  ವಿದ್ಯಾರ್ಥಿಗಳು ಸಿನಿಮಾ ನೋಡಿದರೆ ಹಾಳಾಗುತ್ತಾರೆ ಎಂದೇ ನಂಬಿದ್ದವರು ಹಾಗೂ ಅದನ್ನೇ ಬೋಧಿಸುತ್ತಿದ್ದವರು.  ಇನ್ನು ಮೇಷ್ಟ್ರ ಮಗ ಸಿನಿಮಾ ನೋಡುವುದು ಹೇಗೆ?
ಆಗ ನೆರವಿಗೆ ಬರುತ್ತಿದ್ದವಳು ಅಮ್ಮ.  
ಅವಳು ಹೇಳಿದಂತೆ ಕೇಳಿಕೊಂಡಿದ್ದರೆ ತಿಂಗಳಿಗೊಂದು ಸಿನಿಮಾ ನೋಡಲು ಪರ್ಮಿಷನ್ ಸಿಗುತ್ತಿತ್ತು.
ಆ ಒಪ್ಪಿಗೆ ಮುದ್ರೆಯ ದಿನಕ್ಕಾಗಿ ನಾನೂ ಜಾತಪಪಕ್ಷಿಯಂತೆ ಕಾದು ಕುಳಿತಿರುತ್ತಿದ್ದೆ, ಸಿನಿಮಾ ನೋಡಿ ಬೆರಗಾಗುತ್ತಿದ್ದೆ.

ಇನ್ನು ನಮ್ಮೂರ ಟೆಂಟ್‌ನಲ್ಲಿ ಚಿತ್ರ ಪ್ರದರ್ಶನಕ್ಕೆ ಅರ್ಧಗಂಟೆ ಮುಂಚೆ ಬೇರೆ ಚಿತ್ರಗಳ ಚಿತ್ರಗೀತೆಗಳನ್ನು ಇಡೀ ಊರಿಗೆ ಕೇಳಿಸುವಂತೆ ಮೈಕ್‌ನಲ್ಲಿ ಹಾಕಿ ಚಿತ್ರಮಂದಿರ ಆಟಕ್ಕೆ ಅಣಿಯಾಗಿದೆ ಎನ್ನುವುದನ್ನು ಸೂಚಿಸುತ್ತಿದ್ದರು.  

‘ನಮೋಽಽಽ ವೆಂಕಟೇಶ, ನಮೋಽಽ ತಿರುಮಲೇಶ…’

Image

ಈ ಹಾಡು ಕೇಳಿಸಿತೆಂದರೆ ನನಗೆ ರೋಮಾಂಚನವಾದ ಅನುಭವ.  ದೇವರ ಮೇಲಿನ ಭಕ್ತಿಯಿಂದಲ್ಲ; ಸಿನಿಮಾ ಮೇಲಿನ ಪ್ರೀತಿಯಿಂದ! ಇದು ಪ್ರತಿ ಪ್ರದರ್ಶನಕ್ಕೆ ಮುಂಚಿನ ಕೊನೆಯ ಹಾಡು.  ಮೂರು ನಾಲ್ಕು ಕಿಲೋಮೀಟರಿನಿಂದ ಗಾಡಿಕಟ್ಟಿಕೊಂಡು, ಸೈಕಲ್‌ನಲ್ಲಿ, ನಡೆದುಕೊಂಡು ಬರುತ್ತಿದ್ದ ಹಳ್ಳಿಗರು ಈ ಹಾಡು ಕೇಳುತ್ತಿದ್ದಂತೆ ಟೆಂಟಿನತ್ತ ದೌಡಾಯಿಸುತ್ತಿದ್ದರು.  ಇನ್ನು ಮೂರೇ ಮೂರು ನಿಮಿಷ ಬಿಳಿಯ ಪರದೆಯ ಮೇಲೆ ಚಲನಚಿತ್ರದ ರಂಗು ರಂಗಿನ ಜಗತ್ತು ಅನಾವರಣಗೊಳ್ಳುತ್ತದೆ ಎಂಬ ಅವಸರ.  ನಾನೂ ಎಷ್ಟೋ ಬಾರಿ ಓಡಿದ್ದೇನೆ, ಏದುರಿಸು ಬಿಡುತ್ತಾ ಮುಂದಿನ ಸಾಲಿನಲ್ಲಿ ಕುಳಿತು ಕಳೆದು ಹೋಗಿದ್ದೇನೆ…

ಇಂದಿಗೂ ಈ ಹಾಡನ್ನು ಎಲ್ಲೇ ಕೇಳಿದರೂ ನನಗೆ ನನ್ನ ಬಾಲ್ಯದ ಆ ದಿನಗಳು ಕಣ್ಣಮುಂದೆ ಬರುತ್ತವೆ.  ನನ್ನ ಕಂಪ್ಯೂಟರ್ ಹಾಗೂ ಮೊಬೈಲ್‌ನಲ್ಲಿ ಈ ಹಾಡಿನ ಧ್ವನಿಮುದ್ರಿಕೆ ಹಾಕಿಕೊಂಡಿದ್ದು ಆಗಾಗ ಕೇಳಿ ಫ್ಲ್ಯಾಷ್‌ಬ್ಯಾಕ್‌ಗೆ ಹೋಗುತ್ತಿರುತ್ತೇನೆ!

ತುಮಕೂರು ಜಿಲ್ಲೆಯಲ್ಲಿದ್ದ ದಂಡಿನಶಿವರ ಎಂಬ ನಮ್ಮ ಊರಿನಲ್ಲಿ ಕನ್ನಡ ಬಿಟ್ಟರೆ ಬೇರೆ ಭಾಷೆಯ ಪ್ರಭಾವ ಸುತರಾಂ ಇರಲಿಲ್ಲ.  ಹಾಗಾಗಿ ನನಗೆ ಸಿನಿಮಾ ಎಂದರೆ ಕನ್ನಡ ಸಿನಿಮಾ, ಹೀರೋ ಎಂದರೆ ರಾಜ್‌ಕುಮಾರ್, ಕಾಮಿಡಿ ಎಂದರೆ ನರಸಿಂಹರಾಜು, ಕೇಡಿ ಎಂದರೆ ವಜ್ರಮುನಿ.  

ಕೆಲವು ವರ್ಷಗಳ ಕಳೆದ ಮೇಲೆ, ಎಂಭತ್ತರ ದಶಕದಲ್ಲಿ ಟೆಂಟ್ ಇದ್ದ ಜಾಗದಲ್ಲಿ ಶೆಡ್ ಆಯಿತು.  ಹಾಗಾಗಿ ಮ್ಯಾಟಿನಿ ಪ್ರದರ್ಶನ ಕೂಡ ಆರಂಭವಾಯಿತು. ಆಗ ಕೆಲವು ಹಿಂದಿ ಚಿತ್ರಗಳ ಪ್ರದರ್ಶನವನ್ನು ಭಾನುವಾರ ಬೆಳಗ್ಗೆ ಇಟ್ಟುಕೊಳ್ಳುತ್ತಿದ್ದರು.  ಅಲ್ಲೂ ಪ್ರೇಮ, ಹಾಡು, ಕಣ್ಣೀರು, ಹೊಡೆದಾಟ ಇದ್ದೇ ಇರುತ್ತಿತ್ತು.  

ಆಗ ತಾನೇ ನನ್ನ ಹೈಸ್ಕೂಲ್ ಮುಗಿದಿತ್ತು. ಪಿಯುಸಿ ಓದುತ್ತಿದ್ದೆ. ಆಗ ಒಂದು ದಿನ ನಮಗೆ ಇನ್ನೊಂದು ಚಿತ್ರದ ಅನುಭವವಾಯಿತು.  ಅದೇ ರಿಚರ್ಡ್ ಆಟನ್‌ಬರೋ ಅವರ ‘ಗಾಂಧಿ’!  ವಿದ್ಯಾರ್ಥಿಗಳಿಗಾಗಿ ಸ್ಪೆಷಲ್ ಡಿಸ್‌ಕೌಂಟ್ ಎಂದು ಐವತ್ತು ಪೈಸೆ ಪ್ರವೇಶದರಕ್ಕೆ ತೋರಿಸಿದ ಸಿನಿಮಾ ಅದು! ನಮ್ಮನ್ನು ಗಾಂಧೀಯುಗಕ್ಕೆ ಒಯ್ದ ಆ ಸಿನಿಮಾ ಪಾಠ ಓದಿದಾಗಲೂ ಅರ್ಥವಾಗದ ಗಾಂಧಿಯನ್ನು ಸುಲಭವಾಗಿ ನಮ್ಮ ಮಿದುಳಿನಾಳಕ್ಕೆ ಇಳಿಸಿತ್ತು.  ಅದರಲ್ಲಿಯ ಅದ್ದೂರಿ ಚಿತ್ರೀಕರಣ, ಸಾಗರದೋಪಾದಿಯ ಜನರನ್ನು ಕಂಡು ದಂಗು ಬಡಿದು ಹೋಗಿದ್ದೆ.  ಫೈಟಿಂಗ್ ಮತ್ತು ಹಾಡುಗಳಿಲ್ಲದೆ ಒಂದು ಸಿನಿಮಾ ಹೀಗೂ ಇರಬಹುದು ಎಂದು ಅರ್ಥವಾಗಿದ್ದು ಆಗಲೇ…

Image

ಎಂಭತ್ತರ ದಶಕದ ಉತ್ತರಾರ್ಧದಲ್ಲಿ ಬೆಂಗಳೂರಿಗೆ ಜೀವನೋಪಾಯಕ್ಕೆ ಬಂದ ಮೇಲೆ ನಮ್ಮ ದೇಶದ ಬೇರೆ ಬೇರೆ ಭಾಷೆಯ ಚಿತ್ರಗಳಿಗೆ ನನ್ನನ್ನು ನಾನು ತೆರೆದುಕೊಳ್ಳುತ್ತಾ ಹೋದೆ.  ಅನುಭವ ವಿಸ್ತರಿಸಿತು.  

ಅದು ತೊಂಬತ್ತರ ದಶಕದ ಆರಂಭ.  ಬೆಂಗಳೂರಿನಲ್ಲಿ ಭಾರತದ ಇಪ್ಪತ್ತಮೂರನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆಗೊಂಡಿತ್ತು.  ದೇಶ-ವಿದೇಶಗಳ ಚಿತ್ರಗಳನ್ನು ನೋಡುವ ಸದವಕಾಶ ನಮ್ಮ ಮನೆಬಾಗಿಲಿಗೇ ಬಂದಿತ್ತು!  

ಆ ಹತ್ತು ದಿನಗಳು.  ನಾನು ಎಂದಿಗೂ ಮರೆಯಲಾಗದ ದಿನಗಳು.

ಆ ಚಿತ್ರೋತ್ಸವದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಚಿತ್ರಗಳನ್ನು ನೋಡಿದೆ.  ಈ ಇಪ್ಪತ್ತು ವರ್ಷಗಳ ನಂತರವೂ ನನ್ನ ನೆನಪಿನಲ್ಲಿ ಉಳಿದಿರುವ ಕೆಲವು ಮುಖ್ಯ ಚಿತ್ರಗಳು-  LA BELLE NOISEUSE (Jacques Rivette) ಫ್ರಾನ್ಸ್‌ನ ಈ ಚಿತ್ರದ ಉದ್ದ ನಾಲ್ಕು ಗಂಟೆಗಳು! ಒಬ್ಬ ಚಿತ್ರಕಲಾವಿದನ ಬದುಕಿನ ಸುತ್ತ ಹೆಣೆದ ಕತೆ…  DON’T LET THEM SHOOT THE KITE (Turkey) ಟರ್ಕಿ ದೇಶದ ಈ ಚಿತ್ರ ಅಲ್ಲಿಯ ಜೈಲೊಂದರಲ್ಲಿ ಬಂಧನದಲ್ಲಿದ್ದ ಅಸಹಾಯಕ ಹೆಣ್ಣು ಮಕ್ಕಳ ಕತೆ.  ಅವರ ನಿತ್ಯದ ಬದುಕು, ಅಲ್ಲೇ ಜನ್ಮ ತಳೆವ ಅವರ ಮಕ್ಕಳು.  ಆ ಮಕ್ಕಳಿಗೆ ಹೊರಗಿನ ಪ್ರಪಂಚದ ಅರಿವೇ ಇಲ್ಲ!  ಜೈಲಿನಲ್ಲಿ ಗೋಡೆಗಳ ನಡುವೆ ಕಾಣಿಸುವ ತುಂಡು ಆಕಾಶವಷ್ಟೇ ಅವರ ಹೊರಗಿನ ಪ್ರಪಂಚ.  ಅಲ್ಲಿ ಆಗಾಗ ಹಾರುವ ಗಾಳಿಪಟವನ್ನೇ ಅವರು ಪಕ್ಷಿಗಳು ಎಂದುಕೊಂಡಿರುತ್ತಾರೆ…   ಹೀಗೆಯೇ ಸ್ಪೇನ್‌ನ HIGH HEELS (Pedro Almodovar),  ಯು‌ಎಸ್‌ಎ ದೇಶದ SLEEPING WITH THE ENEMY,  ಇರಾನ್‌ನ  CLOSE-UP (Abbas Kiarostami)… ಹೀಗೇ…

ವಿದೇಶ ಚಿತ್ರಗಳಷ್ಟೇ ಏಕೆ, ನಮ್ಮದೇ ದೇಶದ ಸತ್ಯಜಿತ್ ರೇ, ಬಿಮಲ್‌ರಾಯ್, ಅರವಿಂದನ್, ಮೃಣಾಲ್ ಸೇನ್, ಕಾಸರವಳ್ಳಿ.. ಮುಂತಾದವರ ಚಿತ್ರಗಳು ನನಗೆ ಹೊಸ ಅನುಭವ ಕೊಟ್ಟಿದ್ದವು.  ಈಗಿನಂತೆ ಆಗ ಇಂಥ ಚಿತ್ರಗಳನ್ನು ವೀಕ್ಷಿಸಲು ಮಾರ್ಗಗಳು ಕಡಿಮೆ.  ಒಂದೋ ದೂರದರ್ಶನದಲ್ಲಿ ಅಥವಾ ಫಿಲಂ ಸೊಸೈಟಿಗಳಲ್ಲಿ ನೋಡಬೇಕಿತ್ತೇ ಹೊರತು ಹೆಚ್ಚಿನವುಚಿತ್ರಮಂದಿರಗಳಿಗೆ ಬರುತ್ತಿರಲಿಲ್ಲ. ಈಗ ಬಿಡಿ, ಎಲ್ಲವೂ ಬೆರಳ ತುದಿಯಲ್ಲೇ ಸಿಗುತ್ತವೆ!  ಜೇಬಿನಲ್ಲಿ ನೂರಾರು ಸಿನಿಮಾ ಸಂಗ್ರಹಿಸಿ ಒಯ್ಯುವ ತಂತ್ರಜ್ಞಾನ ವರವಾಗಿ ಬಂದಿದೆ.

ಹೀಗೆ ಚಿತ್ರೋತ್ಸವ ರುಚಿ ಹತ್ತಿತು.  ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿದೆನೋ ಇಲ್ಲವೋ, ಆದರೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಸಿನಿಮಾ ಅಂತೂ ನೋಡಿದೆ! ನಂತರದ ದಿನಗಳಲ್ಲಿ ಚಲನಚಿತ್ರೋತ್ಸವ ಎಲ್ಲೇ ಆದರೂ ನಾವು ಕೆಲವು ಗೆಳೆಯರು ಒಟ್ಟಾಗಿ ದೆಹಲಿ, ಕಲ್ಕತ್ತ, ಬೊಂಬಾಯಿ, ತಿರುವನಂತಪುರ, ಹೈದರಾಬಾದ್ ಎಂದು ತಿರುಗುತ್ತಿದ್ದೆವು.  ಆ ಹತ್ತು ದಿನಗಳಲ್ಲಿ ನಮ್ಮ ಬಾಯಲ್ಲಿ ಬರುತ್ತಿದ್ದುದು ಒಂದೇ ಮಂತ್ರ ಸಿನಿಮಾ.. ಸಿನಿಮಾ.. ಸಿನಿಮಾ..

ಅಕಿರ ಕುರಸೋವಾ, ತಾರ್ಕೋವಿಸ್ಕಿ, ಆಂದ್ರೆ ವಾಜ್ದಾ, ಬರ್ಟುಲುಸ್ಸಿ, ಕಾಸ್ಟಾ ಗವ್ರಾಸ್, ಫೆಲಿನಿ, ಫೋರ್ಡ್ ಕೋಪೊಲ, ಟ್ರುಫ್ಯಾಟ್, ಬರ್ಗ್‌ಮನ್, ಗೊಡಾರ್ಡ್, ಮಿಜೋಗುಚಿ, ಕಿಸ್ಲೋವ್‌ಸ್ಕಿ, ಆಂಟೋನಿಯೋನಿ, ರಾಬರ್ಟ್ ಬ್ರೆಸ್ಸನ್, ಪೋಲನ್ಸ್‌ಕಿ, ಐಸೆನ್‌ಸ್ಟೈನ್, ಏಂಜೆಲೋಪೊಲಸ್, ಡಿ ಸಿಕ, ಓಝು… ಮುಂತಾದವರು ನನಗೆ ಪರಿಚಯವಾಗಿದ್ದೇ ಚಿತ್ರೋತ್ಸವಗಳಿಂದ.  ಇವರೆಲ್ಲರೂ ಮೇಷ್ಟ್ರುಗಳೇ!

Image

ತೊಂಬತ್ತರ ದಶಕದ ಆರಂಭದಿಂದಲೇ ನಾನು ಸಿನಿಮಾಕ್ಷೇತ್ರದಲ್ಲಿ ನನ್ನ ಬದುಕನ್ನು ಗುರುತಿಸಿಕೊಂಡೆ.  ವೃತ್ತಿಯಾಗಿ ಇದನ್ನು ಸ್ವೀಕರಿಸಿದ್ದರಿಂದ ವ್ಯಾಪಾರಿಚಿತ್ರಗಳು, ಕಲಾತ್ಮಕ ಚಿತ್ರಗಳು, ಧಾರಾವಾಹಿಗಳು, ಸಾಕ್ಷ್ಯಚಿತ್ರಗಳು ಎಲ್ಲದರಲ್ಲೂ ನನ್ನನ್ನು ತೊಡಗಿಸಿಕೊಂಡು ಬೇರೆ ಬೇರೆ ನಿರ್ದೇಶಕರ ಕೈ ಕೆಳಗೆ ಕೆಲಸ ಮಾಡತೊಡಗಿದೆ.  ನನಗೆ ನನ್ನದೇ ಸ್ವತಂತ್ರ ಸಿನಿಮಾ ಒಂದನ್ನು ಮಾಡುವ ಬಯಕೆ 1995 ರಿಂದಲೂ ತೀವ್ರವಾಗಿತ್ತು.  ಕಮರ್ಷಿಯಲ್ ಚಿತ್ರಕ್ಕೆ ಹಣ ಹೂಡುವ ನಿರ್ಮಾಪಕರು ನನಗೆ ಪರಿಚಯವಿರಲಿಲ್ಲ, ಪರಿಚಯವಿದ್ದ ಬೆರಳೆಣಿಕೆಯಷ್ಟು ಜನ ನನ್ನ ಮೇಲೆ ಹಣ ಹೂಡಲು ತಯಾರಿರಲಿಲ್ಲ.  ಅವರನ್ನು ಮೆಚ್ಚಿಸುವುದಕ್ಕಿಂತ ಮುಂಚೆ ನಾಯಕ ನಟರನ್ನು ಓಲೈಸಿಕೊಳ್ಳಬೇಕಿತ್ತು.  ಆ ಕಲೆ ನನಗೆ ಸಿದ್ಧಿಸಿರಲಿಲ್ಲ.  ಇನ್ನು  ಕಲಾತ್ಮಕ ಚಿತ್ರಗಳಿಗೆ ಹಣ ಹೂಡುವವರನ್ನು ಭೂತಕನ್ನಡಿ ಹಿಡಿದು ಹುಡುಕಬೇಕಿತ್ತು.  ಹೀಗಾಗಿ ಚಿತ್ರ ನಿರ್ದೇಶಿಸಬೇಕೆಂಬ ನನ್ನ ಕನಸು ಕನಸಾಗಿಯೇ ಉಳಿದಿತ್ತು.

ಅದು 2000 ದ ಇಸವಿ.  ದೆಹಲಿಯಲ್ಲಿ ಭಾರತದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಿದ್ಧತೆ ನಡೆದಿತ್ತು. ಮಾಮೂಲಿನಂತೆ ನಮ್ಮ ಗೆಳೆಯರ ತಂಡ ದೆಹಲಿಯ ರೈಲು ಹತ್ತಿತು.  ಹೊರಗೆ ಗಡ ಗಡ ನಡುಗಿಸುವ ಚಳಿ ಇದ್ದರೂ, ಒಳಗೆ ಬೆಚ್ಚಗಾಗಿಸುವ ಚಿತ್ರಗಳ ಸರಮಾಲೆ.  ಆಗ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ್ದ ಒಂದು ಚಿತ್ರ ‘ಕರಣಂ’.  ಮಲೆಯಾಳಂನ ಈ ಚಿತ್ರವನ್ನು ಜಯರಾಜ್ ನಿರ್ದೇಶಿಸಿದ್ದರು.  ಅದನ್ನು ನೋಡಲು ಹೋದೆ. ಚಿತ್ರ ಪ್ರದರ್ಶನಕ್ಕೆ ಮುಂಚೆ ಜಯರಾಜ್ ಅಲ್ಲಿ ನೆರೆದಿದ್ದ ಪ್ರೇಕ್ಷಕರ ಮುಂದೆ ಚಿತ್ರವನ್ನು ಪ್ರಸೆಂಟ್ ಮಾಡುತ್ತಾ, ನಾನು ಈ ಚಿತ್ರವನ್ನು ಒಂಭತ್ತು ಲಕ್ಷದಲ್ಲಿ ಮಾಡಿದೆ ಎಂದು ಹೇಳಿದರು.  ಇಷ್ಟು ಕಡಿಮೆ ಬಜೆಟ್‌ನಲ್ಲಿ ಚಿತ್ರಮಾಡಲು ಸಾಧ್ಯವೆ? ‘ಕರಣಂ’ ಆ ವರ್ಷ ಅಂತಾರಾಷ್ಟ್ರೀಯ ಚಿತ್ರಗಳ ಜೊತೆ ಸ್ಪರ್ಧಾಕಣದಲ್ಲೇ ಬೇರೆ ಇತ್ತು.  ಕುತೂಹಲದಿಂದ ಚಿತ್ರ ನೋಡಿದೆ.  ಚಿತ್ರ ಭಿನ್ನವಾಗಿತ್ತು.  ನಮಗೆಲ್ಲ ನಿಜವಾದ ಆಶ್ಚರ್ಯ ಕಾದಿದ್ದು ಕೊನೆಯ ದಿನದ ಪ್ರಶಸ್ತಿ ಪ್ರಕಟವಾದಾಗ.  ‘ಕರಣಂ’ ಎಲ್ಲ ಅಂತಾರಾಷ್ಟ್ರೀಯ ಚಿತ್ರಗಳನ್ನು ಬದಿಗೆ ಸರಿಸಿ ಭಾರತ ಸರ್ಕಾರ ಕೊಡುವ ‘ಗೋಲ್ಡನ್ ಪೀಕಾಕ್’ ಪ್ರಶಸ್ತಿಯನ್ನು ಗೆದ್ದಿತ್ತು.  ಪ್ರಶಸ್ತಿಯ ಮೊತ್ತ, ಚಿನ್ನದ ನವಿಲಿನ ಜೊತೇ ಇಪ್ಪತ್ತು ಲಕ್ಷ ರೂಪಾಯಿ!

ಇದೇ ನೆನಪಿನಲ್ಲಿ ಹಿಂತಿರುಗಿ ಬೆಂಗಳೂರಿಗೆ ರೈಲಿನಲ್ಲಿ ಬರುತ್ತಿದ್ದೆವು.  (ವಿಮಾನದಲ್ಲಿ ಬರಲು ನಮ್ಮಲ್ಲಿ ದುಡ್ಡಿರಲಿಲ್ಲ!).  ದೆಹಲಿಯಿಂದ ಬೆಂಗಳೂರಿಗೆ ಎರಡು ದಿನದ ಪ್ರಯಾಣ.  ಹತ್ತು ದಿನ ನಾವು ನೋಡಿದ ಚಿತ್ರಗಳನ್ನೇ ಮೆಲುಕು ಹಾಕುತ್ತಾ ಬರುತ್ತಿತ್ತು ನಮ್ಮ ಗುಂಪು.  ಆದರೆ ನನ್ನ ಮನಸ್ಸಿನಲ್ಲಿ ‘ಕರಣಂ’ ಒಂದೇ ರಿಂಗಣಿಸುತ್ತಿತ್ತು.  ಒಂಭತ್ತು ಲಕ್ಷದಲ್ಲಿ ಮಾಡಿದ ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯ ಬಹುದಾದರೆ, ಅಂಥದ್ದೇ ಒಂದು ಚಿತ್ರವನ್ನು ನಾನೂ ಏಕೆ ಮಾಡಬಾರದು? ತಲೆಯಲ್ಲಿ ಹುಳ ಕೊರೆಯ ತೊಡಗಿತು..

ಅಂಥ ಒಂದು ಕಥಾವಸ್ತುವಿಗಾಗಿ ಅಲ್ಲಿಯವರೆಗೆ ನಾನು ಓದಿದ ಕತೆಗಳನ್ನೆಲ್ಲಾ ನೆನಪಿಗೆ ತಂದುಕೊಳ್ಳತೊಡಗಿದೆ.  ಮೊದಲ ಸಾಲಿಗೆ ಬಂದು ಕುಳಿತಿದ್ದು ನಮ್ಮ ಬೊಳುವಾರು ಬರೆದಿದ್ದೆ ‘ಮುತ್ತುಚ್ಚೇರ’ ಕಥೆ.  ಬೆಂಗಳೂರಿನಲ್ಲಿ ರೈಲಿಳಿದವನೇ ಮನೆಗೆ ಬಂದು ಮಾಡಿದ ಮೊದಲ ಕೆಲಸವೆಂದರೆ ಆವರ ಕಥೆಯನ್ನು ಮತ್ತೊಮ್ಮೆ ಓದಿದ್ದು, ಮತ್ತು ಅದನ್ನೇ ಚಿತ್ರ ಮಾಡಲು ನಿರ್ಧರಿಸಿದ್ದು.  ನನ್ನ ನಿರ್ಧಾರವನ್ನು ನನ್ನ ಹತ್ತಿರದ ಬಳಗಕ್ಕೆ ಹೇಳಿದಾಗ ಎಲ್ಲರೂ ಮಾಡಬಹುದು ಎಂದು ಬೆಂಬಲ ಕೊಟ್ಟರು.  

ಆ ಕಥೆಯನ್ನು ಹಿಡಿದು ಗಾಂಧಿನಗರ ಹೊಕ್ಕೆ.  ಅಲ್ಲಿ ನನಗೇನೂ ಲಾಭವಾಗಲಿಲ್ಲ ಬಿಡಿ.  ಆಮೇಲೆ ಸಹಕಾರಿ ತತ್ವದಲ್ಲಿ ನನ್ನ ಒಂದಿಷ್ಟು ಗೆಳೆಯರನ್ನು ಒಟ್ಟುಗೂಡಿಸಿ ಆ ಚಿತ್ರವನ್ನು ಹದಿನೈದು ಲಕ್ಷದಲ್ಲಿ ಮಾಡುವ ಯೋಜನೆ ಹೂಡಿದೆ.  ಮುಂದಿನ ಆರೇ ತಿಂಗಳಲ್ಲಿ ‘ಮುನ್ನುಡಿ’ ಚಿತ್ರದ ಚಿತ್ರೀಕರಣವೂ ಪ್ರಾರಂಭವಾಯಿತು.  ಅದೇ ವರ್ಷ ನಾನು ಯಾರ ಚಿತ್ರಗಳನ್ನು ನೋಡಿ ಬೆರಗು ಪಟ್ಟಿದ್ದೆನೋ, ಅದೇ ನಿರ್ದೇಶಕರ ಹೆಸರಿನಲ್ಲಿ ಮೊದಲ ಚಿತ್ರದ ನಿರ್ದೇಶಕನಿಗೆ ಕೊಡುವ ‘ಅರವಿಂದನ್ ಪ್ರಶಸ್ತಿ’ ನನಗೆ ಬಂತು.  ಮುಂದಿನ ವರ್ಷದ ಭಾರತದ ಅಂತರಾಷ್ಟ್ರೀಯ ಚಿತ್ರೋತ್ಸವದ ಪನೋರಮಾ ವಿಭಾಗದಲ್ಲಿ ನನ್ನ ಚಿತ್ರವೂ ಪ್ರದರ್ಶಿತವಾಯಿತು.  ಈ ಬಾರಿ ನಾನು ಭಾರತ ಸರ್ಕಾರದ ಅತಿಥಿಯಾಗಿ ವಿಮಾನದಲ್ಲಿ ಹೋಗಿ ಬಂದೆ!  ‘ಮುನ್ನುಡಿ’ ಭಾರತದಲ್ಲಿ ನಡೆಯುತ್ತಿದ್ದ ಕೇರಳ, ಕೊಲ್ಕತ್ತ, ಮುಂಬಯಿ ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾದದ್ದಲ್ಲದೇ ಬೇರೆ ಬೇರೆ ದೇಶಗಳಲ್ಲೂ ಪ್ರದಶ್ರನಗೊಂಡು ನನ್ನ ಚಿತ್ರಜೀವನಕ್ಕೆ ಒಂದು ಸಶಕ್ತ ಮುನ್ನುಡಿ ಬರೆಯಿತು.

ನಂತರ ನನ್ನ ಮಾರ್ಗ ಸ್ಪಷ್ಟವಾಯಿತು.  ‘ಅತಿಥಿ’, ‘ಬೇರು’, ‘ತುತ್ತೂರಿ’, ‘ವಿಮುಕ್ತಿ’, ‘ಬೆಟ್ಟದಜೀವ’ ಮತ್ತು ಇದೀಗ ‘ಭಾರತ್ ಸ್ಟೋರ್ಸ್’ ನನ್ನ ಚಿತ್ರಜೀವನದ ಬದುಕನ್ನು ಮುನ್ನೆಡಿಸಿಕೊಂಡು ಬಂದಿವೆ.

ಹೀಗೆ ಚಿತ್ರೋತ್ಸವ ನನ್ನ ಬದುಕಿನಲ್ಲಿ ಬಹುದೊಡ್ಡ ಪಾತ್ರ ವಹಿಸಿತು.  ಅಲ್ಲಿಯ ವೈಶಿಷ್ಟ್ಯಪೂರ್ಣ ಚಿತ್ರಗಳು, ದೇಶ ವಿದೇಶಗಳ ಪ್ರತಿನಿಧಿಗಳು, ಅಲ್ಲಾಗುವ ಮೌಲ್ಯಯುತ ಚರ್ಚೆ ನಮ್ಮಂತ ಚಿತ್ರಾಸಕ್ತರಿಗೆ ಒಂದು ದೊಡ್ಡ ಜ್ಞಾನಶಾಲೆ.  

ಮತ್ತೆ ನನ್ನ ಬಾಲ್ಯಕ್ಕೆ ಹೋಗುವುದಾದರೆ, ಪ್ರತಿ ಶುಕ್ರವಾರ ನಮ್ಮೂರ ಟೆಂಟ್‌ನಲ್ಲಿ ಹೊಸಚಿತ್ರದ ಬದಲಾವಣೆಯಾದಾಗ ಸೈಕಲ್‌ನಲ್ಲಿ, ಎತ್ತಿನಗಾಡಿಗಳಲ್ಲಿ ಬೋರ್ಡ್ ಕಟ್ಟಿಕೊಂಡು ಅನೌನ್ಸ್ ಮಾಡುತ್ತಿದ್ದರು.

‘ಚಿತ್ರರಸಿಕರೇ! ಈ ವಾರದ…..ಚಿತ್ರ ನೋಡಲು ಮರೆಯಬೇಡಿ, ಮರೆತು ನಿರಾಶರಾಗಬೇಡಿ.  ಒಮ್ಮೆ ನೋಡಿದರೆ ಮತ್ತೊಮ್ಮೆ, ಮತ್ತೆ ನೋಡಿದರೆ ಮಗದೊಮ್ಮೆ, ಮಗದೊಮ್ಮೆ ನೋಡಿದರೆ ಇನ್ನೂ ಒಮ್ಮೆ ನೋಡಬೇಕೆನಿಸುವ ಚಿತ್ರ…  ಇಂದೇ ನೋಡಿ, ಆನಂದಿಸಿ!’

Image

(ಬೆಂಗಳೂರಿನಲ್ಲಿ ನಡೆದ ಐದನೇ ಅಂತರಾಷ್ಟ್ರೀಯ ಚಿತ್ರೋತ್ಸವದ ಹಿನ್ನೆಲೆಯಲ್ಲಿ ಡಿಸೆಂಬರ್ ೧೬, ೨೦೧೨ ರಂದು ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: