ಪಿ. ಶೇಷಾದ್ರಿ

ಕಂಡಿದ್ದು ಕಂಡಂತೆ…

‘ಕ’ ‘ಮ’ ‘ಲ’ ‘ಮ್ಮ’ ನಾಲ್ಕೇ ಅಕ್ಷರಗಳು…

ಅಮ್ಮ, ಇದು ನಾನು, ನಿನ್ನ ಕೊನೇ ಮಗ!Amma

ಇದೆಂಥ ವಿಚಿತ್ರ ನೋಡು!

ನನ್ನ ಐವತ್ತೆರಡನೇ ವಯಸ್ಸಿನಲ್ಲಿ;
ನಿನ್ನ 85-86 ರ ಹರೆಯದಲ್ಲಿ;
ನಾನು ನಿನಗೊಂದು ಕಾಗದ ಬರೀತಾ ಇದ್ದೀನಿ.
ಇದು ನಾನು ನಿನಗೆ ಬರೆಯುತ್ತಿರುವ ಮೊದಲನೆಯ ಪತ್ರ!<a

ಹೌದು,
ನಾನು ನಿಂಗೆ ಯಾವತ್ತೂ ಕಾಗದ ಬರೆದೇ ಇಲ್ಲ.
ಯಾಕೇಂದ್ರೆ, ನಿಂಗೇಂತ ಒಂದು ಅಡ್ರೆಸ್ಸೇ ಇರಲಿಲ್ಲ!

ನೀನು ಹುಟ್ಟಿದ ಮನೇಲಿ ಯಾವುದೇ ಕಾಗದ-ಪತ್ರ ಬಂದ್ರೂ ಅದು ನಿಮ್ಮಪ್ಪನ ಹೆಸ್ರಿಗೆ ಬರತ್ತಿದ್ದವು. ಆಮೇಲೆ ಅರವತ್ತೆರಡು ವರ್ಷಗಳ ಹಿಂದೆ, ನೀನು ಮದ್ವೆಯಾಗಿ ಬಂದ ಮೇಲೆ ಯಾವುದೇ ಲೆಟರ್ ಬಂದ್ರೂ ಅದು ನಮ್ಮ ಅಪ್ಪನ ಹೆಸ್ರಿಗೆ ಬರೋಕೆ ಶುರುವಾಯಿತು. ಈಗ ನೀನು ಮುದುಕಿ ಆಗಿದ್ದೀಯ. ಮಕ್ಕಳೂ ನಿಂಗೆ ಕಾಗದ ಬರೆಯೋಲ್ಲ; ಇನ್ನು ಮೊಮ್ಮಕ್ಕಳನ್ನಂತೂ ಕೇಳಲೇ ಬೇಡ. ಇನ್ಯಾರು ನಿಂಗೆ ಲೆಟರ್ ಬರೀಬೇಕು ಹೇಳು? ಹೋಗಲಿ ಈ ಎಸ್‌ಎಮ್‌ಎಸ್ ಯುಗದಲ್ಲಿ ನಿಂಗೆ ಒಂದು ಮೆಸೇಜ್ ಕಳಿಸೋಣ ಅಂದ್ರೆ, ನೀನು ಅದನ್ನ ಓದೋದು ಹೇಗೆ?!

ಹಾಗಂತ ನಿಂಗೆ ಇಂಪಾರ್ಟೆನ್ಸ್ ಏನೂ ಕಮ್ಮಿ ಇರಲಿಲ್ಲ ಬಿಡು. ನಾನೇ ಓದಿದ್ದೀನಿ. ಆಗೆಲ್ಲಾ ಯಾರೇ ಕಾಗದ ಬರೆದ್ರೂ ಆ ಪತ್ರದ ಕೊನೆಯ ಸಾಲಿನಲ್ಲಿ ನಿಂಗೊಂದು ಸಾಲಿರುತ್ತಿತ್ತು. ದೊಡ್ಡೋರು ಬರೆದಿದ್ರೆ ಹಕುಂಶೋಚಿಸೌ ಕಮಲಮ್ಮನಿಗೂ ನನ್ನ ಆಶೀರ್ವಾದಗಳು. ಚಿಕ್ಕೋರಾಗಿದ್ರೆ, ‘ಬೇಡುವ ಆಶೀರ್ವಾದಗಳು’.

ಅದಕ್ಕೇ ಹೇಳಿದ್ದು ಹುಟ್ಟಿದ ಡೇಟ್ ಗೊತ್ತಿಲ್ಲದ; ಓದು ಗೊತ್ತಿಲ್ಲದ; ಅಡ್ರೆಸ್ಸಿಲ್ಲದ ವ್ಯಕ್ತಿ ನೀನು. ನಮ್ಮಮ್ಮ! ಕಮಲಮ್ಮ!!

ಬೇಜಾರಾಯ್ತಾ? ಬರ್ತ್‌ಡೇ ಗೊತ್ತಿಲ್ಲದೋಳು, ಓದೋಕೆ ಬರದೇ ಇರೋಳು ಅಂದಿದ್ದಕ್ಕೆ? ಏನ್ ಮಾಡೋದು? ಅದು ಫ್ಯಾಕ್ಟ್.

ಹೋಗಲುಬಿಡು. ಅಣ್ಣ, ಅಂದ್ರೆ ನಮ್ಮಪ್ಪ ತೀರಿಕೊಂಡು ಹತ್ತು ವರ್ಷ ಆಗ್ತಾ ಬಂತು. ನೀನೊಬ್ಬಳೇ ತುಮಕೂರು ಜಿಲ್ಲೆಯ ದಂಡಿನಶಿವರ ಅನ್ನೋ ನನ್ನೂರಲ್ಲಿ ಇದ್ದೀಯ. ಈಗಲಾದ್ರು ನಿಂಗೊಂದು ಅಡ್ರೆಸ್ ಇರಲೇ ಬೇಕಲ್ಲ?

ಹೌದು, ಇದೆ. ಆದ್ರೆ ಆ ಅಡ್ರೆಸ್ ಹೇಗಿರುತ್ತೆ ಗೊತ್ತಾ?
ದಿವಂಗತ ಡಿ.ಸಿ.ಪಟ್ಟಾಭಿರಾಮಯ್ಯ, ಇವರ ಧರ್ಮಪತ್ನಿ ಕಮಲಮ್ಮ!

ಪಾಪ! ಇಲ್ಲೂ ನೀನು ಸೆಕೆಂಡ್ ಗ್ರೇಡ್ ಸಿಟಿಜನ್!!

ಹೋಗಲಿ ಹೇಗೋ ಒಂದು ಅಡ್ರೆಸ್ ಆದ್ರೂ ಇದೆಯಲ್ಲಾ ಅಂತ ಯಾರಾದ್ರೂ ಕಾಗದ ಬರೀತಾರ ಅಂದ್ರೆ ಅದೂ ಇಲ್ಲ. ಎಲ್ಲಾ ಫೋನಲ್ಲೇ ವ್ಯವಹಾರ. ನಿನ್ನ ಅಡ್ರೆಸ್‌ಗೆ ಬರೋದು ಎರಡೇ ಕಾಗದ. ಒಂದು ಕೆ‌ಇಬಿ ಬಿಲ್ಲು, ಇನ್ನೊಂದು ಟೆಲಿಫೋನ್ ಬಿಲ್ಲು, ಅಷ್ಟೇ!

ಅದಕ್ಕೇ ಈಗೊಂದು ಕಾರಣ ಸಿಗ್ತು ಅಂತ ನಾನೇ ಒಂದು ಕಾಗದ ಬರೀತಾ ಇದ್ದೀನಿ ನಿಂಗೆ. ಈ ಪತ್ರ ನಾನಾಗೇ ಏನು ಬರೀತಾ ಇಲ್ಲ. ನನ್ನ ಸ್ನೇಹಿತರೊಬ್ಬರು ‘ಅಮ್ಮಂದಿರ’ ಬಗ್ಗೆ ಒಂದು ಪುಸ್ತಕ ತರತಾ ಇದ್ದೀವಿ, ಒಂದು ಲೇಖನ ಬರೆದುಕೊಡಿ ಅಂದ್ರ. ಲೇಖನ ಬರೆಯೋಕೆ ಹೊಳೀತಿಲ್ಲ, ಅದ್ಕೆ ಲೆಟರ್ ಬರೀತಾ ಇದ್ದೀನಿ.

ಆದ್ರೆ ದುರಾದೃಷ್ಟ ನೋಡು, ನಾನು ಏನು ಬರೆದ್ರೂ ನಿಂಗೆ ಅದನ್ನ ಓದೋಕಾಗಲ್ಲ. ಈ ವಿಚಾರದಲ್ಲಿ ನಮ್ಮ ತಾತನೇ ನಿಂಗೆ ವಿಲನ್! ನಿನ್ನ ಓದನ್ನ ಮೂರನೇ ಕ್ಲಾಸಿಗೇ ನಿಲ್ಲಿಸಿ ಬಿಟ್ರಂತಲ್ಲ! ಆದ್ರೂ ನೋಡು. ನಮ್ಮ ಅಣ್ಣಾವ್ರು, ಡಾ.ರಾಜ್‌ಕುಮಾರ್. ಓದಿದ್ದು ಮೂರನೇ ಕ್ಲಾಸು. ಆದ್ರೆ ಮುಂದೆ ಎಷ್ಟು ಚನ್ನಾಗಿ ಓದೋದು ಬರೆಯೋದು ಕಲಿತು ಬಿಟ್ರು! ಇದು ನಿನ್ನ ಕೈನಲ್ಲಿ ಯಾಕೆ ಆಗಲಿಲ್ಲ?

ನಿನ್ನ ಮದ್ವೆಯಾದ ಮೇಲೆ ನಮ್ಮ ಅಪ್ಪನೂ, ‘ಕಮಲಾ, ನೀನು ಮೇಷ್ಟ್ರ ಹೆಂಡತಿಯಾಗಿ ಓದೋದು ಬರೆಯೋದು ಮಾಡ್ದೇ ಇದ್ರೆ ನಂಗೆ ಅವಮಾನ ಕಣೇ. ನಾನು ಸ್ಕೂಲ್‌ನಲ್ಲಿ ಮಕ್ಳಿಗೆಲ್ಲ ಪಾಠ ಹೇಳ್ತೀನಿ, ಇಲ್ಲಿ ಮನೇಲಿ ನಿಂಗೆ ಅಕ್ಷರಾಭ್ಯಾಸ ಮಾಡಿಸ್ತೀನಿ ಬಾ…’ ಅಂತ ಕೂರಿಸ್ಕೊಂಡು ಸ್ಲೇಟು-ಬಳಪ ಹಿಡಿದು ವರ್ಷಗಟ್ಟಲೆ ತಿದ್ದಿಸಿದ್ರಂತೆ.

ಆದ್ರೆ ನೀನು ಕಲಿತಿದ್ದ ನಾಲ್ಕೇ ಅಕ್ಷರಗಳು!

‘ಕ’ ‘ಮ’ ‘ಲ’ ‘ಮ್ಮ’

ಈಗಲೂ ನೀನು ಪೆನ್ಷನ್ ತಗೊಳೋಕೆ ಅಂತ ಸೈನ್ ಮಾಡ್ತೀಯಲ್ಲ, ಆಗ ನೋಡಬೇಕು. ಒಂದೊಂದು ಅಕ್ಷರವೂ ಒಂದೊದು ದೇಶದ ಮ್ಯಾಪ್ ಇದ್ದಂಗಿರುತ್ತೆ. ಅದಕ್ಕೇ ನಾವು ನಾಲ್ಕು ಜನ ಮಕ್ಕಳಿಗೊಂದು ಧೈರ್ಯ. ಮುಂದೊಂದು ದಿನ ನಿನ್ನ ಸಹೀನ ನಾವು ಸುಲಭವಾಗಿ ಫೋರ್ಜರಿ ಮಾಡಬಹುದು. ಯಾರಿಗೂ ಗೊತ್ತಾಗಲ್ಲ.

ಇರಲಿ ಬಿಡು.

ನಿಂಗೊತ್ತಾ? ನನ್ನ ಹತ್ರ ನೀನು ಸೈನ್ ಮಾಡಿ ಕೊಟ್ಟಿರೋ ಒಂದು ಚೀಟಿ ಇದೆ. ಈಗ ಅದನ್ನ ನನ್ನ ಮುಂದೆ ಇಟ್ಟುಕೊಂಡೇ ಈ ಕಾಗದ ಬರೀತಾ ಇದ್ದೀನಿ. ಅದು ಯಾವುದೂ ಅಂತ ತಲೇ ಕೆಡಿಸ್ಕೋತಾ ಇದ್ದೀಯಾಮ್ಮ? ಆ ಕತೆ ಹೇಳ್ತೀನಿ ಕೇಳು.

ಇಲ್ಲಿಗೆ ಸರಿಯಾಗಿ ಇಪ್ಪತ್ತೊಂಬತ್ತು ವರ್ಷಗಳ ಹಿಂದೆ ನಾನು ಊರಿಂದ -ಓಡಿ- ಬೆಂಗಳೂರಿಗೆ ಬಂದ ಮೇಲೆ ನಾನೊಂದು ಪುಸ್ತಕ ಅಂಗಡೀಲಿ ಕೆಲಸಕ್ಕೆ ಸೇರಿಕೊಂಡೆ. 1985 ನೇ ಇಸವಿ ಜುಲೈ ತಿಂಗಳು. ನನ್ನ ಮೊದಲ ತಿಂಗಳ ಎಷ್ಟು ಗೊತ್ತಾ? ಬರೋಬ್ಬರಿ 275 ರೂಪಾಯಿ!

ನೆನಪಿದೆಯಾ ನಿಂಗೆ? ಆ ಸಂಬಳದಲ್ಲಿ ನಿಂಗೆ ಐವತ್ತು ರೂಪಾಯಿ ಎಂ.ಓ.ಕಳಿಸಿದ್ದೆ. ನಿನ್ನಿಂದ Acknowledgement ಬೇಕು ಅನ್ನೋ ಕಾರಣಕ್ಕೆ ನಿಂಗೆ ಓದೋಕೆ ಬರೋಲ್ಲ ಅಂತ ಗೊತ್ತಿದ್ರೂ ಎಂ.ಓ. ಫಾರಂನ ಕೊನೆಯಲ್ಲಿ, ‘ಪ್ರೀತಿಯ ಅಮ್ಮ, ಈ ಹಣ ತಲಪಿದ್ದಕ್ಕೆ ತಪ್ಪದೆ ತಿಳಿಸುವುದು’ ಎಂದು ಒಂದೇ ಒಂದು ಸಾಲು ಬರೆದಿದ್ದೆ.

ಆವತ್ತು ನಮ್ಮೂರಿನ ಅಂಚೆಯ ಗುಂಡಣ್ಣ ಮಾಮೂಲಿನಂತೆ ಬೆಳಗ್ಗೆ ಹನ್ನೊಂದು ಗಂಟೆ ಹೊತ್ತಿಗೆ ಮನೆ ಮುಂದೆ ನಿಂತು ಜೋರಾಗಿ ‘ಕಮಲಮ್ಮಾ..’ ಅಂತ ಕೂಗಿದಾಗ ನಿಂಗ್ ಆಶ್ಚರ್ಯ ಆಯ್ತಂತೆ. ಯಾವಾಗ್ಲೂ ‘ಮೇಷ್ಟ್ರೇ..’ ಅಂತ ಕೂಗೋ ಈ ಗುಂಡಣ್ಣ ಇವತ್ತು ಯಾಕೆ ನನ್ನ ಹೆಸರನ್ನ ಕೂಗ್ತಾ ಇದ್ದಾನೆ ಅಂತ. ಆಗ ಅಲ್ಲೇ ಇದ್ದ ಅಣ್ಣ ‘ನಾನಿಲ್ಲೇ ಇದ್ದೀನಿ ಗುಂಡಣ್ಣ, ಏನ್ಸಮಾಚಾರ?’ ಅಂದ್ರಂತೆ. ಅದಕ್ಕೆ ಗುಂಡಣ್ಣ, ‘ನೀವು ಬೇಡ ಮೇಷ್ಟ್ರೆ, ಕಮಲಮ್ಮನೇ ಬೇಕು’ ಅಂತ ಹೇಳಿ ನಿನ್ನನ್ನ ಮುಂಬಾಲಿಗೆ ಕರೆಸಿ, ಎಂ.ಓ. ಫಾರಂ ಕೈನಲ್ಲಿಟ್ಟು ಇದ್ರಲ್ಲಿ ಒಂದು ಸಹಿ ಮಾಡೀಮ್ಮ ಅಂದ್ರಂತೆ.

ನೀನು ಅದನ್ನ ಗೋಡೆಗೆ ಒತ್ತಿಟ್ಟುಕೊಂಡು ನಿಧಾನವಾಗಿ ಸಹಿ ಮಾಡಿ ಕೊಟ್ಟೆಯಂತೆ. ಗುಂಡಣ್ಣ, ‘ನಿಮ್ಮಗ ನಿಮಗೆ ದುಡ್ಡು ಕಳ್ಸಿದ್ದಾನೆ’ ಅಂತ ನಿಂಗೆ ಐವತ್ತು ರೂಪಾಯಿ ಕೊಟ್ಟು ನಂಗೆ ಅಕ್ನಾಲೆಡ್ಜ್‌ಮೆಂಟ್ ಕಳಿಸಿದ್ದ. ಅದೇ ಚೀಟೀ ಬಗ್ಗೇನೆ ನಾನು ಈಗ ಹೇಳಿದ್ದು. ಆವತ್ತೆಲ್ಲ ಅಣ್ಣ ‘ಥಕ ತೈ… ಥಕ ತೈ’ ಅಂತ ಕುಣೀತಾ ಇದ್ರಂತಲ್ಲ? ‘ನೋಡೆ, ನಿನ್ನ ಮಗ ದೊಡ್ಡಮನುಷ್ಯ. ತಾನೂ ದುಡೀ ಬಲ್ಲೆ ಅಂತ ಜಂಬ ಕೊಚ್ಕಳೋಕೆ ಐವತ್ತು ರೂಪಾಯಿ ಕಳ್ಸಿದ್ದಾನೆ. ಅಯೋಗ್ಯ ತಂದು..’ ಎಂದು ಮೇಲಕ್ಕೂ-ಕೆಳಕ್ಕೂ ಓಡಾಡ್ತಿದ್ರಂತಲ್ಲ! ನೀನೇ ಹೇಳಿದ್ದೆ. ಅದು ಅಣ್ಣನ ಕೋಪ ಅಲ್ಲ ಜಲಸಿ.. ಅಸೂಯೆ! ನಾನು ನಿಂಗೆ ಮಾತ್ರ ದುಡ್ಡು ಕಳ್ಸಿ ಅವರನ್ನ ಇಗ್ನೋರ್ ಮಾಡಿದ್ನಲ್ಲ ಅಂತ!

ಅದರ ಮಾರನೇ ದಿನಾನೆ, ಅದೇ ಗುಂಡಣ್ಣ ಮತ್ತೆ ಮನೆ ಮುಂದೆ ನಿಂತು, ‘ಮೇಷ್ಟ್ರೇ..’ ಅಂತ ಕೂಗಿ, ಅವರ ಕೈನಲ್ಲೂ ಎಂ.ಓ.ಫಾರಂ ಕೊಟ್ಟು ಸೈನ್ ಹಾಕಿಸಿಕೊಂಡು ಐವತ್ತು ರೂಪಾಯಿ ಕೊಟ್ಟು ಹೋದಾಗ ನೀನು ಬಾಗಿಲು ಮರೇಲಿ ನಿಂತ್ಕೊಂಡು ಮುಸಿ ಮುಸಿ ಅಂತ ನಗತಾ ಇದ್ದೆಯಂತೆ?

ಅಣ್ಣನ ಹೆಸ್ರಿಗೆ ಒಂದಿನ ತಡವಾಗಿ ದುಡ್ಡು ಕಳಿಸೋ ಐಡಿಯಾನ ನಾನು ಬೇಕಂತಲೇ ಮಾಡಿದ್ದೆ. ಆದ್ರೆ ನೋಡು. ಈಗ ಅಣ್ಣ ಇಲ್ಲ. ಆದ್ರೆ ಅವರು ಸೈನ್ ಮಾಡಿಕೊಟ್ಟಿರೋ Acknowledgement ನನ್ನ ದಾಖಲೇಲಿ ಭದ್ರವಾಗಿದೆ. ನಿಮಗೆ ಆವತ್ತು ಬೇಜಾರು ಮಾಡಿದ್ದಕ್ಕೆ ಸ್ಸಾರಿ ಅಣ್ಣ…

ನಂಗೊತ್ತು. ಆಗ ನಿಮ್ಮಿಬ್ಬರಿಗೂ ನನ್ನ ಈ ಐವತ್ತು ರೂಪಾಯಿಯ ಅವಶ್ಯಕತೆ ಖಂಡಿತ ಇರಲಿಲ್ಲ. ನಿಮ್ಮ ಮಾತು ಮೀರಿ ಬೆಂಗಳೂರಿನಲ್ಲಿ ಬಂದಿದ್ದ ನನಗೆ ನನ್ನ ಅಹಂಕಾರನ ಪ್ರದರ್ಶಿಸ ಬೇಕಿತ್ತು. ನಿಮ್ಮ ನೆರವಿಲ್ಲದೆ ನಾನೂ ಸಂಪಾದಿಸಬಲ್ಲೆ ಅಂತ ನಿಮಗೆ, ಅದ್ರಲ್ಲೂ ಮುಖ್ಯವಾಗಿ ಅಣ್ಣಂಗೆ ತೋರಿಸೋ ಕೆಟ್ಟ ಹಠ ಇತ್ತು. ಈಗ ಆ ಹುಚ್ಚಾಟ ಎಲ್ಲ ನೆನಸಿಕೊಂಡ್ರೆ ನಂಗೇ ನಗು ಬರುತ್ತೆ. ಆದ್ರೂ ಆ ಹುಚ್ಚಾಟದಿಂದ ನನ್ನ ಹತ್ರ ನಿಮ್ಮಿಬ್ಬರ ಸಹಿ ಇರೋ ಈ ಫಾರಂ ಇವೆಯಲ್ಲ, ಇದಕ್ಕೆ ಎಷ್ಟು ಬೆಲೆ ಕಟ್ಟೋಕೆ ಸಾಧ್ಯ?

ಎಂಥ ಮಧುರವಾದ ನೆನಪುಗಳು ಇವು!

ಆಮೇಲೆ ಒಂದೆರಡು ತಿಂಗಳು ಕಳೆದ ಮೇಲೆ ನಾನು ಒಂದು ದಿನದ ರಜೆ ಮೇಲೆ ಊರಿಗೆ ಬಂದಿದ್ದಾಗ ನನಗೆ ಆ ಐವತ್ತು ರೂಪಾಯಿಯ ಬಗ್ಗೆ ತಿಳಿದುಕೊಳೋ ಕುತೂಹಲ. ಆದರೆ ನೀನಾಗಲೀ, ಅಣ್ಣನಾಗಲೀ ಅದರ ಬಗ್ಗೆ ಬಾಯೇ ಬಿಡಲಿಲ್ಲ! ನಾನಾಗೇ ಮೇಲೆ ಬಿದ್ದು ಕೇಳೋಕೆ ನನಗೆ ಮುಜಗರ. ಸುಮ್ಮನೇ ಇದ್ದುಬಿಟ್ಟೆ. ಕೊನೆಗೆ ಆವತ್ತು ಸಂಜೆ ನಿನ್ನ ಜೊತೆ ತೋಟಕ್ಕೆ ಹೋಗುತ್ತಾ ದಾರಿಯಲ್ಲಿ ಮರ್ಯಾದೆ ಬಿಟ್ಟು ಕೇಳಿದ್ದೆ. ‘ಅಮ್ಮಾ, ಆವತ್ತು ಕಳಿಸಿದ ನನ್ನ ಐವತ್ತು ರೂಪಾಯಿ ನಿಂಗೆ ಸಿಕ್ಕಿತಾ?’ ನೀನು ರಸ್ತೆ ನೋಡ್ತಾ ಸುಮ್ಮನೇ ಹೂಗುಟ್ಟಿದೆ. ಮುಖ್ಯವಾಗಿ ನನಗೆ ಅಣ್ಣನ ಪ್ರತಿಕ್ರಿಯೆ ಬೇಕಿತ್ತು. ಅವರು ಆ ಐವತ್ತು ರೂಪಾಯಿ ನೋಡಿ ಏನು ಮಾತಾಡಿದರೆ ಎಂದು ತಿಳಿದುಕೊಳ್ಳುವ ಕುತೂಹಲ. ಆದರೆ ನೀನು ಮಾತು ಮುಂದುವರಿಸಲಿಲ್ಲ. ನಾನೂ ಬಾಲ ಮುದುರಿಕೊಂಡು ಸುಮ್ಮನಾಗಿಬಿಟ್ಟೆ.

ಆಮೇಲೆ ನಾನು ರೈಲಿಗೆ ಹೊರಟು ನಿಂತಾಗ, ಕಳಿಸಿಕೊಡೋಕೆ ನೀನು ಗೇಟಿನವರೆಗೂ ಬಂದವಳು ನನ್ನ ಜೇಬಿಗೆ ಒಂದಿಷ್ಟು ನೋಟನ್ನು ತುರುಕಿ ‘ಈ ದುಡ್ಡಿಟ್ಟುಕೋ, ಅಲ್ಲಿ ಸಿಟಿಯಲ್ಲಿ ನಿನಗೆ ಖರ್ಚಿಗಿರುತ್ತೆ. ನಿನಗೆ ಬೇಕೆನಿಸಿದ್ದನ್ನು ಕೊಂಡುಕೊಂಡು ತಿನ್ನು, ಹಸ್ಕೊಂಡಿರಬೇಡ’ ಅಂದಾಗ ನನಗೆ ಹೇಗೆ ರಿಯಾಕ್ಟ್ ಮಾಡಬೇಕು ಅಂತ ಗೊತ್ತಾಗಲಿಲ್ಲ. ನನ್ನ ಕಣ್ಣೀರನ್ನ ತಡ್ಕೊಂಡು ತಲೆತಗ್ಗಿಸಿಕೊಂಡು ರೈಲ್ವೆ ಸ್ಟೇಷನ್ ಕಡೆ ಹೊರಟುಬಿಟ್ಟೆ.

ರೈಲಿನಲ್ಲಿ ಕೂತ್ಕೊಂಡು ಬರತಾ ಇದ್ದಾಗ ಮತ್ತೆ ನಿನ್ನ ನೆನಪು ಬಂತು ನಂಗೆ. ಹೊರಡೋವಾಗ ನೀನು ನನ್ನ ಜೇಬಿಗೆ ಮುದುರಿಟ್ಟಿದ್ದ ನೋಟನ್ನು ಕೈಗೆ ತೆಗೆದುಕೊಂಡು ನೋಡಿದೆ. ಅದರಲ್ಲಿ ಹತ್ತು ರೂಪಾಯಿಯ ನಾಲ್ಕು ನೋಟುಗಳಿದ್ದವು! ನನಗೆ ಆಶ್ಚರ್ಯವಾಯಿತು. ನೀನು ಈ ನಲವತ್ತು ರೂಪಾಯಿ ಮಾತ್ರ ಯಾಕಿಟ್ಟೆ ಅಂತ ತುಂಬಾ ತಲೆಕೆಡಿಸಿಕೊಂಡಿದ್ದೆ.

ಆಮೇಲೆ ಮುಂದೆ ಇನ್ನೊಂದು ಸಂದರ್ಭದಲ್ಲಿ ನೀನು ಆ ನಲವತ್ತು ರೂಪಾಯಿ ಯಾಕೆ ಕೊಟ್ಟೇ ಅಂತ ಹೇಳಿದ ಮಾತು ನನ್ನ ಕಿವಿಯಲ್ಲಿ ಇನ್ನೂ ಗುಂಯ್‌ಗುಡ್ತಾ ಇದೆ.

‘ಅದು ನಿನ್ನ ಮೊದಲ ಸಂಪಾದನೆ ಅಲ್ವಾ? ಅದಕ್ಕೆ ಐವತ್ತು ರೂಪಾಯಿ ಮುರಿಸಿ, ಹತ್ತು ರುಪಾಯಿನಲ್ಲಿ ದೇವರಿಗೆ ಹಣ್ಣು-ಕಾಯಿ ಮಾಡಿಸಿದೆ ಕಣೋ’

ಇಂಥ ಕ್ರಿಯೆಗಳೆಲ್ಲಾ ಅಮ್ಮಂದಿರಿಂದ ಮಾತ್ರ ಸಾಧ್ಯ.

ಅಮ್ಮಾ, ಈ ನಿನ್ನ ಆಶೀರ್ವಾದವೇ ನನಗೆ ದೊಡ್ಡ ಆಸ್ತಿ.

ಥ್ಯಾಂಕ್ಸ್ ಅಮ್ಮಾ!

ನಿಂಗೆ ಇನ್ನೊಂದು ವಿಚಾರ ಗೊತ್ತಾ? ನಿನ್ನೆ ‘ಮದರ್ಸ್ ಡೇ’ ಅಂತೆ. ನಾನು ನಿಂಗೆ ಫೋನ್ ಮಾಡಿ ವಿಶ್ ಮಾಡಿದ್ನಲ್ಲ. ಆಮೇಲೆ ಸುಮ್ಮನೇ ಫೇಸ್‌ಬುಕ್‌ನಲ್ಲಿ ನಿನ್ನ ಫೋಟೋ ಹಾಕಿ ಒಂದು ಸಣ್ಣ ಕಮೆಂಟ್ ಹಾಕಿದ್ದೆ. ಅದಕ್ಕೆ ಎಷ್ಟೊಂದು ಲೈಕ್ಸ್ ಬಂದಿದೆ ಗೊತ್ತಾ? ನೀನು ಬೆಂಗಳೂರಿಗೆ ಬಂದಾಗ ತೋರಿಸ್ತೀನಿ ಆಯಿತಾ?

ಸರ್ಕಾರಕ್ಕೂಂದು ಮನವಿ…

ಗೆ,
ಡಾ ಎನ್.ನಾಗಾಂಬಿಕಾ ದೇವಿ,
ಕಾರ್ಯದರ್ಶಿಗಳು,
ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಕರ್ನಾಟಕ ಸರ್ಕಾರ,
ಬೆಂಗಳೂರು

ಮಾನ್ಯರೆ,

ಕಳೆದ ಶನಿವಾರ ಮೈಸೂರಿನಲ್ಲಿ 2012 ಮತ್ತು 2013 ರ ಸಾಲಿನ ರಾಜ್ಯಪ್ರಶಸ್ತಿ ಸಮಾರಂಭವನ್ನು ಯಶಸ್ವಿಯಾಗಿ ನಡೆಸಿದ ನಿಮಗೆ ಅಭಿನಂದನೆಗಳು. ಹಾಗೆಯೇ ಈ ಸಮಾರಂಭದ ಕುರಿತು ನನ್ನ ಕೆಲವು ಅನಿಸಿಕೆಗಳನ್ನು ಹೇಳಲೇಬೇಕಾಗಿ ಬಂದದ್ದರಿಂದ ಈ ಪತ್ರ ಬರೆಯುತ್ತಿದ್ದೇನೆ.

ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೆ ಅದರದ್ದೇ ಆದ ಘನತೆ, ಗೌರವ ಇದೆ. ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ಗೌರವಕ್ಕೆ ಪಾತ್ರರಾಗಬೇಕೆಂದು ಚಲನಚಿತ್ರದ ಕಲಾವಿದರು, ತಂತ್ರಜ್ಞರು ಆಸೆ ಪಡುತ್ತಾರೆ. ಅಂಥವರಲ್ಲಿ ನಾನೂ ಒಬ್ಬ. ಅದೃಷ್ಟವಶಾತ್ ಹಲವು ಬಾರಿ ಈ ಪ್ರಶಸ್ತಿಗೆ ಭಾಜನವಾಗಿರುವುದು ನನಗೆ ಹೆಮ್ಮೆಯ ಸಂಗತಿ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗುವುದಂತೂ ಸಂತೋಷದ ವಿಚಾರ.

ಆದರೆ ಈ ಸಲ ಮಾತ್ರ ಸಮಾರಂಭ ನಡೆದ ರೀತಿ ನನಗೆ ನಿರಾಶೆ ಉಂಟು ಮಾಡಿತು. ಸಾಮಾನ್ಯವಾಗಿ ಈ ಪ್ರಶಸ್ತಿಗಳನ್ನು ರಾಜ್ಯಪಾಲರು ಅಥವಾ ಮುಖ್ಯಮಂತ್ರಿಗಳು ಪ್ರದಾನ ಮಾಡುತ್ತಾರೆ. ಹಾಗಾಗಿಯೇ ಈ ಸಮಾರಂಭಕ್ಕೆ ವಿಶೇಷ ಮನ್ನಣೆ. ಆದರೆ ಈ ವರ್ಷ ಆದದ್ದೇನು? ಪ್ರಶಸ್ತಿಗಳನ್ನು ವೇದಿಕೆಯಲ್ಲಿದ್ದ ಸಚಿವರುಗಳು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಕೊನೆಗೆ ಪಂಚಾಯಿತಿ ಸದಸ್ಯರೂ ಕೂಡ ಪ್ರದಾನ ಮಾಡಿದರು! ಇಲ್ಲಿ ನಾನು ಯಾರನ್ನೂ ದೊಡ್ಡವರು ಮತ್ತು ಸಣ್ಣವರು ಎಂದು ವಿಭಾಗೀಕರಿಸುತ್ತಿಲ್ಲ. ಸರ್ಕಾರದ ಪ್ರಶಸ್ತಿಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಿಂದ ಪಡೆಯಬೇಕು, ಅದರ ನೆನಪನ್ನು ಬಹುಕಾಲ ಉಳಿಸಿಕೊಳ್ಳಬೇಕು ಎಂದು ಪ್ರತಿಯೊಬ್ಬ ಪ್ರಶಸ್ತಿ ವಿಜೇತನೂ ಆಸೆ ಪಡುತ್ತಾನೆ.

ನಾನು ಒಂಬತ್ತು ಭಾರಿ ರಾಷ್ಟ್ರ ಚಲನಚಿತ್ರಪ್ರಶಸ್ತಿಯನ್ನು ನಾಲ್ವರು ರಾಷ್ಟ್ರಪತಿಗಳಿಂದ ಪಡೆದಿದ್ದೇನೆ. ಅಲ್ಲಿಯ ಶಿಸ್ತು, ಸಮಯಪಾಲನೆ, ಅಚ್ಚುಕಟ್ಟುತನ ಮತ್ತು ಘನತೆಯನ್ನು ಈ ಬಾರಿಯ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಣಲಾಗಲಿಲ್ಲವಲ್ಲ ಎಂದು ವಿಷಾದ ಪಡುತ್ತಿದ್ದೇನೆ.

ಪ್ರತಿವರ್ಷದ ಮೇ 3ನೇ ತಾರೀಖಿನಂದು ದೆಹಲಿಯ ವಿಜ್ಞಾನಭವನದಲ್ಲಿ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಜರುಗುವುದು ತಮಗೆ ತಿಳಿದೇ ಇದೆ. ಕಥಾಚಿತ್ರ ಮತ್ತು ಕಥೆಯೇತರ ಚಿತ್ರಗಳೆಂದು ಸುಮಾರು 100 ಕ್ಕೂ ಹೆಚ್ಚು ಪ್ರಶಸ್ತಿಗಳಿರುತ್ತವೆ. ಅಷ್ಟನ್ನೂ ಸ್ವತಃ ರಾಷ್ಟ್ರಪತಿಗಳೇ ಸುಮಾರು ಎರಡೂವರೆ ಗಂಟೆಗಳ ಕಾಲ ತಮ್ಮ ಕೈಯಾರ ಪ್ರತಿಯೊಬ್ಬರಿಗೂ ಪ್ರಶಸ್ತಿ ಪ್ರದಾನ ಮಾಡುತ್ತಾರೆ. ಇದು ಒಂದು ಹೆಮ್ಮೆಯ ವಿಚಾರ. ಅಲ್ಲಿಯ ಪರಿಸ್ಥಿತಿ ಹಾಗಿರುವಾಗಿ ಇಲ್ಲಿ ಎರಡು ವರ್ಷದ್ದೂ ಸೇರಿ 59 ಪ್ರಶಸ್ತಿಗಳನ್ನು ವಿತರಿಸಲು ಈ ಗೊಂದಲವೇಕೆ?

ಸ್ವತಃ ಮುಖ್ಯಮಂತ್ರಿಗಳೇ ಸಮಾರಂಭದಲ್ಲಿ ಭಾಗವಹಿಸಿರುವಾಗ ಎಲ್ಲ ಪ್ರಶಸ್ತಿಗಳನ್ನು ಅವರೇ ಏಕೆ ಪ್ರದಾನ ಮಾಡಬಾರದು? ವೇದಿಕೆಯಲ್ಲಿರುವ, ಶಿಷ್ಟಾಚಾರಕ್ಕೆಂದು ಕರೆದ ಎಲ್ಲ ಸ್ಥಳೀಯ ಪ್ರಮುಖರೂ, ರಾಜಕಾರಣಿಗೂ ಪ್ರಶಸ್ತಿಯನ್ನು ಕೊಡುಮಾಡುವುದು ಎಷ್ಟರ ಮಟ್ಟಿಗೆ ಸಮಂಜಸ?

ಜೊತೆಗೆ, ಸಮಾರಂಭದಲ್ಲಿ ಅಷ್ಟೊಂದು ಹಾಡು, ನೃತ್ಯಗಳೇಕೆ? ಒಂದುವೇಳೆ, ಪ್ರೇಕ್ಷಕರ ಮನರಂಜನೆಗೂ ಅವಕಾಶ ಇರಲಿ ಎನ್ನುವುದಾದರೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಮತ್ತು ಚಲನಚಿತ್ರದ ಇತಿಹಾಸ ಮತ್ತು ಮಹತ್ವವನ್ನು ಸಾರುವ ಒಂದೆರಡು ಹಾಡು-ನೃತ್ಯ ಸಾಕಿತ್ತು. ಅನರ್ಥದ ಹಾಡು/ನೃತ್ಯಗಳ ಬದಲು ಹಿನ್ನೆಲೆ ಗಾಯನಕ್ಕೆ ಪ್ರಶಸ್ತಿ ಪಡೆದ ಗಾಯಕರಿಂದಲೇ ಅದೇ ಹಾಡನ್ನು ಹಾಡಿಸಬಹುದಿತ್ತಲ್ಲವೆ? ಜೊತೆಗೆ ಪ್ರಶಸ್ತಿ ಪ್ರಡೆದ ಚಿತ್ರದ ತುಣುಕಗಳನ್ನು ತೋರಿಸುವುದರೊಂದಿಗೆ, ಆ ಚಿತ್ರದ ಸಂಗೀತ, ಹಾಡು, ನೃತ್ಯವನ್ನು ಬಳಸಿಕೊಂಡಿದರೆ ಎಷ್ಟು ಚನ್ನಾಗಿರುತ್ತಿತ್ತು! ಮನರಂಜನೆ ಎಂಬ ಹೆಸರಿನಲ್ಲಿ ನಾವು ಅಭಿರುಚಿ ಕೆಡಿಸುವುದು ಬೇಡ ಎನ್ನುವುದು ನನ್ನ ಮನವಿ. ಈ ನೃತ್ಯಗಳನ್ನು ಕಡಿಮೆ ಮಾಡಿದರೆ ಸಾಕಷ್ಟು ಹಣ ಉಳಿತಾಯವಾಗುತ್ತದೆ. ಅದೇ ಹಣದಲ್ಲಿ ಪ್ರತಿವರ್ಷ ಎಲ್ಲಿ ಪ್ರಶಸ್ತಿ ಸಮಾರಂಭ ನಡೆಯುತ್ತದೆಯೋ ಅಲ್ಲೊಂದು ಚಿತ್ರಮಂದಿರವನ್ನು ಬಾಡಿಗೆಗೆ ಪಡೆದು, ಒಂದು ವಾರ ಮುಂಚೆಯೇ ಆ ವರ್ಷದ ಪ್ರಶಸ್ತಿ ವಿಜೇತ ಚಿತ್ರಗಳ ಪ್ರದರ್ಶನ ಏರ್ಪಡಿಸಬಹುದು! ಜೊತೆಗೆ ಸಮಾರಂಭದಲ್ಲಿ ಪ್ರಶಸ್ತಿ ಸಮಿತಿಯ ಅಧ್ಯಕ್ಷರು ಆ ವರ್ಷದ ಚಿತ್ರಗಳ ಕುರಿತು ಒಂದು ಸಣ್ಣ ವಿಶ್ಲೇಷಣೆ ಮಾಡಿದರೆ ಎಷ್ಟು ಅರ್ಥಪೂರ್ಣವಾಗಿರುತ್ತದೆ. ಈ ಹಿಂದೆ ಈ ಪದ್ಧತಿ ಇತ್ತು ಈ ಬಾರಿ ಯಾಕೋ ಚಾಲನೆಗೆ ಬರಲಿಲ್ಲ.

ಇನ್ನೊಂದು ವಿಚಾರ, ಈ ಬಾರಿ ಶ್ರೇಷ್ಠ ನಟ ದರ್ಶನ್ ಅವರು ಖಳನಟರಿಗೆ ಪ್ರಶಸ್ತಿ ಕೊಡುವುದರ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲೇ ಸರ್ಕಾರವೂ ಅದನ್ನು ಪರಿಗಣಿಸಿಬಿಟ್ಟಿತು ಕೂಡ. ತಮಗೇ ತಿಳಿದಿರುವಂತೆ ಸರ್ಕಾರದ ಪ್ರಶಸ್ತಿಗಳಲ್ಲಿ ಪೋಷಕ ನಟ ಹಾಗೂ ನಟಿ ಪ್ರಶಸ್ತಿ ಈಗಾಗಲೇ ಇವೆ. ಈ ವಿಭಾಗದಡಿಯಲ್ಲಿ ಖಳನಟರೂ ಕೂಡ ಬರುತ್ತಾರೆ. ಈ ಹಿಂದೆ ಅಂಥವರಿಗೆ ಪ್ರಶಸ್ತಿ ದೊರಕಿದ ಉದಾಹರಣೆಯೂ ಇವೆ. ಹೀಗಿರುವಾಗ ಅತ್ಯುತ್ತಮ ಖಳನಟ ಪ್ರಶಸ್ತಿ ಸೇರ್ಪಡೆ ಎಷ್ಟು ಸೂಕ್ತ? ನಾಳೆ ಅತ್ಯುತ್ತಮ ಹಾಸ್ಯ ನಟ-ನಟಿ, ಅತ್ಯುತ್ತಮ ಅತ್ತೆ-ಸೊಸೆ ಪಾತ್ರಗಳಿಗೂ ಪ್ರಶಸ್ತಿ ಕೊಡಬೇಕಾಗಿ ಬಂದೀತು!

ತಾವು ಕನ್ನಡ ಸಂಸ್ಕೃತಿ, ಕಲೆ ಮತ್ತು ಪರಂಪರೆ ಬಗ್ಗೆ ಕಾಳಜಿ ಉಳ್ಳವರು ಮತ್ತು ಅತ್ಯುತ್ತಮ ಆಡಳಿತಗಾರರು. ಇನ್ನು ಮುಂದಿನ ವರ್ಷಗಳಲ್ಲಾದರೂ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಗಮನಾರ್ಹ ಕಾರ್ಯಕ್ರಮವಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುತ್ತೀರಿ ಎಂದು ನಂಬುತ್ತೇನೆ. ಜೊತೆಗೆ, ಈ ಸಮಾರಂಭಕ್ಕೆ ಒಂದು ಖಚಿತ ದಿನಾಂಕವನ್ನು ಕೂಡ ನಿಗದಿ ಮಾಡಬಹುದು. ರಾಷ್ಟ್ರಮಟ್ಟದಲ್ಲಿರುವಂತೆ ನಮ್ಮಲ್ಲಿ ಮಾರ್ಚ್ ಮೂರನೇ ತಾರೀಖನ್ನು ಪ್ರಶಸ್ತಿ ಸಮಾರಂಭಕ್ಕೆ ಎಂದು ನಿಗದಿ ಮಾಡಬಹುದು. ಅದು ಕನ್ನಡದ ವಾಕ್ಚಿತ್ರ ಹುಟ್ಟಿದ ದಿನ ಎಂದು ತಮಗೆ ತಿಳಿದೇ ಇದೆ.

ನನ್ನ ಕಳಕಳಿಯ ವಿಚಾರಗಳನ್ನು ಅನ್ಯಥಾ ಭಾವಿಸದೆ, ಮನ್ನಿಸುತ್ತೀರಿ ಎಂದು ನಿರೀಕ್ಷಿಸುತ್ತೇನೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,
ಪಿ.ಶೇಷಾದ್ರಿ

(ಈ ಪತ್ರದ ಪ್ರತಿಯನ್ನು ನಿರ್ದೇಶಕರು, ವಾರ್ತಾ ಇಲಾಖೆಗೆ ಕೂಡ ಕಳುಹಿಸಲಾಗಿದೆ)

ಕಥೆ ಹುಟ್ಟಿದ ಸಮಯ…

ನಿಮಗೆ ಗೊತ್ತಿರಬೇಕಲ್ಲವೇ? ನಾನೀಗ ನನ್ನ ಒಂಬತ್ತನೇ ಸಿನಿಮಾ ಮಾಡಲು ಹೊರಟಿದ್ದೇನೆ. ಮತ್ತೊಂದು ಸಾಹಸದ ಅಧ್ಯಾಯ ಪ್ರಾರಂಭ!

‘ವಿದಾಯ’ ಅಂತ ಸಿನಿಮಾದ ಹೆಸರು.

ಈ ಸಿನಿಮಾದ ನಿಜವಾದ ಎಳೆ ಹುಟ್ಟಿದ್ದು ಒಂಬತ್ತು ವರ್ಷಗಳ ಹಿಂದೆ. ಆಗ ನಮ್ಮ ತಂದೆ ಆಸ್ಪತ್ರೆಯಲ್ಲಿದ್ದರು. ಅವರಿಗೆ ಪಾರ್ಕಿನ್‌ಸನ್ ಎಂಬ ವಿದೇಶಿ ಹೆಸರಿನ ಕಾಯಿಲೆ ಬಂದಿತ್ತು. ಇದು ನರಮಂಡಲಕ್ಕೆ ಸಂಬಂಧಿಸಿದ ರೋಗ. ಜೊತೆಗೆ ಹೈ ಡಯಾಬಿಟಿಕ್ ಬೇರೆ. ಸುಮಾರು ಮೂವತ್ತೇಳು ವರ್ಷ ಮಕ್ಕಳಿಗೆ ಪಾಠ ಮಾಡಿದ್ದ ಮೇಷ್ಟ್ರು ಅವರು. ಮಾತಾಡಿ ಮಾತಾಡಿ ಧ್ವನಿ ಗಟ್ಟಿಯಾಗಿತ್ತು. ಆದರೆ ಏಳು ವರ್ಷದ ಹಾಸಿಗೆ ವಾಸ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿತು. ತಮ್ಮ ಎಪ್ಪತ್ತನೆಯ ವಯಸ್ಸಿನಲ್ಲಿ ಅವರು ಮಾತು ಅಸ್ಪಷ್ಟವಾಗಿ, ಹಗಲೂ-ರಾತ್ರಿ ಕೈ ಕಾಲು ಒದರುತ್ತಾ ನರಳುವುದನ್ನು ನೋಡಿದರೆ ಸಂಕಟವಾಗುತ್ತಿತ್ತು.

Anna- Amma

ಅಪ್ಪ-ಅಮ್ಮ ಇಬ್ಬರೂ ಇದ್ದದ್ದು ಬೆಂಗಳೂರಿನಿಂದ ಸುಮಾರು 140 ಕಿಲೋ ಮೀಟರ್ ದೂರದ ಊರಿನಲ್ಲಿ. ದಂಡಿನಶಿವರ ಅನ್ನೋದು ನನ್ನ ಹುಟ್ಟೂರಿನ ಹೆಸರು. ಅದೊಂದು ಹೋಬಳಿ ಕೇಂದ್ರ. ದೊಡ್ಡ ಹಳ್ಳಿ ಎನ್ನಬಹುದು. ಊರಿನಲ್ಲಿ ಇದ್ದವರು ಅಣ್ಣ-ಅಮ್ಮ ಇಬ್ಬರೇ. ಊರಿಗೊಬ್ಬರೇ ವೈದ್ಯರು. ಹಾಗಾಗಿ ಅಣ್ಣನನ್ನು ತಿಂಗಳಿಗೊಮ್ಮೆ ಎರಡು ತಿಂಗಳಿಗೊಮ್ಮೆ ಬೆಂಗಳೂರಿಗೆ ಕರೆದುಕೊಂಡು ಬಂದು ನರಮಂಡಲದ ತಜ್ಞರಿಗೆ ತೋರಿಸಿಕೊಂಡು ಹೋಗಬೇಕಿತ್ತು. ಅಮ್ಮನಿಗೆ ವಯಸ್ಸಾಗಿದ್ದರೂ ಗಟ್ಟಿ-ಮುಟ್ಟಾಗಿದ್ದರು. ಹಾಗಾಗಿ ಅಣ್ಣನನ್ನು ಚನ್ನಾಗಿ ನೋಡಿಕೊಂಡರು. ಬೆಂಗಳೂರಿನಲ್ಲಿದ್ದ ನಮಗಾರಿಗೂ ಕಷ್ಟ ಕೊಡಲಿಲ್ಲ. ಒಮ್ಮೆ ಅಮ್ಮ ಮನೆಯಲ್ಲಿ ಜಾರಿ ಬಿದ್ದು ಸೊಂಟ ಮುರಿದುಕೊಂಡರು. ಆಗ ನಮ್ಮ ಅವಸ್ಥೆ ನೋಡಬೇಕಿತ್ತು.

ಒಮ್ಮೆ ಅಣ್ಣನನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೆವು. ಅಣ್ಣನನ್ನು ನೋಡಿದ ವೈದ್ಯರು. ಇದು ಇಷ್ಟೇ. ಇನ್ನೂ ಕೆಟ್ಟ ಪರಿಸ್ಥಿತಿಗೆ ಹೋಗಬಹುದು. ಕೊನೆಯವರೆಗೂ ಮಾತ್ರೆ ಔಷಧಿ ಕೊಡುತ್ತಿರಿ. ಇರುವಷ್ಟು ದಿನ ಚನ್ನಾಗಿ ನೋಡಿಕೊಳ್ಳಿ ಎಂದರು. ಮುಂದೇನು ಎಂಬುದನ್ನು ಚರ್ಚಿಸಲು ನಾನು, ನಮ್ಮಣ್ಣ ಮತ್ತು ನಮ್ಮಕ್ಕ ಆಸ್ಪತ್ರೆಯಲ್ಲಿ ಸೇರಿದ್ದೆವು. ಆಗ ನಾನು ಪ್ರಾಸಂಗಿಕವಾಗಿ ಮಾತನಾಡುತ್ತಾ ‘ದಯಾಮರಣ’ದ ವಿಚಾರ ತೆಗೆದೆ. ನಮ್ಮಕ್ಕ ಕೆಂಡಾಮಂಡಲವಾಗಿಬಿಟ್ಟಳು. ನೀವು ಗಂಡು ಮಕ್ಕಳು ಸ್ವಾರ್ಥಿಗಳು. ಹೆತ್ತವರನ್ನು ನೋಡಿಕೊಳ್ಳಲು ಕಷ್ಟವಾದರೆ ಸುಮ್ಮನಿದ್ದು ಬಿಡಿ. ಅಣ್ಣನ ಕೊನೆಯ ಉಸಿರಿನವರೆಗೂ ನಾನು ನೋಡಿಕೊಳ್ಳುತ್ತೇನೆ ಎಂದಳು. ಮುಂದೆಂದೂ ‘ದಯಾಮರಣ’ದ ವಿಚಾರ ಬರಲಿಲ್ಲ. ಅದಾದ ಸುಮಾರು ಒಂದು ವರ್ಷದಲ್ಲಿ ಅಣ್ಣ ಸಹಜವಾದ ಕೊನೆಯನ್ನು ಕಂಡರು ಎನ್ನಿ.

ಮತ್ತೆ ನನಗೆ ‘ದಯಾಮರಣ’ದ ಸಂಗತಿ ಕಾಡಿದ್ದು ಅನುಣಾ ಶಾನಭಾಗ್ ಕತೆಯನ್ನು ಓದಿದ ಮೇಲೆ.

ಸುಮ್ಮನೇ ಯೋಚಿಸಿ. ನಮ್ಮ ದೇಶದಲ್ಲಿ ಸಚಿನ್ ತೆಂಡೂಲ್ಕರ್ ಹೆಸರನ್ನು ಕೇಳದವರು ಯಾರಾದರೂ ಇರಬಹುದೆ? ಹುಡುಕಿದರೆ ಸಿಗಬಹುದೇನೋ. ಇಂಥವರು ಪ್ರಾಯಶ: ಹಳ್ಳಿಗಳಲ್ಲಿ, ಗುಡ್ಡ-ಗಾಡುಗಳಲ್ಲಿ ಸಿಕ್ಕರೂ ಸಿಗಬಹುದು. ಆದರೆ ಮುಂಬಯಿನಲ್ಲಂತೂ ಸಾಧ್ಯವೇ ಇಲ್ಲ! ಸಚಿನ್, ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್‌ಗಳೆಲ್ಲಾ ಮುಂಬಯಿನಲ್ಲಿ ಸುಪ್ರಸಿದ್ಧ ವ್ಯಕ್ತಿಗಳು.

ಆದರೆ ಮುಂಬಯಿಯ ಹೃದಯಭಾಗದಲ್ಲಿರುವ ಒಬ್ಬ ವ್ಯಕ್ತಿಗೆ ಇವರು ಯಾರೂ ಗೊತ್ತಿಲ್ಲ! ಸಚಿನ್ ಏನಾದರೂ ಮುಂದೆ ಬಂದು ನಿಂತರೆ ‘ನೀನಾರಪ್ಪ?’ ಎಂದು ಖಂಡಿತ ಕೇಳುತ್ತಾರೆ ಎಂದರೆ ನೀವು ನಂಬಲೇ ಪಡಲೇಬೇಕು. ಈಕೆಯೇ ಅರವತ್ತು ವರ್ಷ ದಾಟಿರುವ ಅರುಣಾ ಶಾನಭಾಗ್ ಎಂಬ ಕನ್ನಡತಿ.

Aruna Shanbag.  When she was young

Aruna Shanbag. (When she was young)

ಇಂದೂ ಕೂಡ ಮುಂಬಯಿಯ ಕೆ‌ಇ‌ಎಂ (ಕಿಂಗ್ ಎಡ್ವರ್ಡ್ ಮೆಮೋರಿಯಲ್) ಆಸ್ಪತ್ರೆಯ ವಾರ್ಡ್ ನಂಬರ ನಾಲ್ಕರಲ್ಲಿ ಮಲಗಿರುವ ಅರುಣಾಳದ್ದು ಘೋರ ಕತೆ. ಹುಟ್ಟಿದ್ದು ಕಾರವಾರದ ಬಳಿಯ ಹಳದೀಪುರದಲ್ಲಿ. ದಾದಿಯಾಗಿ ಸಮಾಜ ಸೇವೆ ಮಾಡುವ ಕನಸನ್ನು ಹೊತ್ತು ನಲವತ್ತು ವರ್ಷಗಳ ಹಿಂದೆ ಆಗಿನ ಬಾಂಬೆಗೆ ಹೋಗಿ ನರ್ಸ್ ಆಗಿ ಆಸ್ಪತ್ರೆ ಸೇರಿಕೊಂಡಿದ್ದಳು. ಅಲ್ಲೇ ಕೆಲಸ ಮಾಡುತ್ತಾ ಅಲ್ಲಿಯ ವೈದ್ಯನೊಬ್ಬನನ್ನು ಪ್ರೀತಿಸಿ ಮದುವೆಯ ಹೊಸ್ತಿಲಲ್ಲಿ ನಿಂತಿದ್ದ ಚಂದದ ಹೆಣ್ಣು ಮಗಳು ಈಕೆ. ಅಂದೊಂದು ದಿನ ಅದೇ ಆಸ್ಪತ್ರೆಯ ಕಸಗುಡಿಸುವ ಸೋಹನ್‌ಲಾಲ್ ಎಂಬುವವನ ತಪ್ಪನ್ನು ಎತ್ತಿ ತೋರಿಸದ್ದೇ ಈಕೆಗೆ ಮುಳುವಾಯಿತು.
ಅಂದು, 1973 ನೆಯ ಇಸವಿ ನವೆಂಬರ್ ತಿಂಗಳ ಇಪ್ಪತ್ತೇಳನೇ ತಾರೀಖಿನ ಇಳಿ ಸಂಜೆ. ಹಗಲಿನ ಡ್ಯೂಟಿ ಮುಗಿಸಿದ ಅರುಣಾ ಆಸ್ಪತ್ರೆಯ ಕೆಳಮಹಡಿಯಲ್ಲಿ ಬಟ್ಟೆ ಬದಲಿಸಲು ಬಂದಳು. ಅಲ್ಲಿ ಹುಲಿಯಂತೆ ಹೊಂಚಿ ಕುಳಿತಿದ್ದ ಆ ದುಷ್ಟ ಸೋಹನ್‌ಲಾಲ್ ಈಕೆಯ ಮೇಲೆ ಆಕ್ರಮಣ ಮಾಡಿ ರೇಪ್ ಮಾಡಲು ಯತ್ನಿಸಿದ. ನಾನು ಬಹಿಷ್ಠೆಯಾಗಿದ್ದೇನೆ ಬಿಟ್ಟುಬಿಡು ಎಂದು ಈಕೆ ಗೋಗರೆದಳು. ಕಾಮುಕ ಹಸಿದಿದ್ದ. ಅರುಣಾಳ ಕುತ್ತಿಗೆಯನ್ನು ನಾಯಿಯ ಚೈನಿನಿಂದ ಬಿಗಿದು ಗುದಸಂಭೋಗ (sodomized) ಮಾಡಿ ಕ್ರೌರ್ಯ ಮೆರೆದುಬಿಟ್ಟ. ಅಂದು ಅರುಣಾಗೆ ಹೋದ ಪ್ರಜ್ಞೆ ಇಂದೂ ಮರಳಿಲ್ಲ!

ನಲವತ್ತೊಂದು ವರ್ಷಗಳಿಂದ ಮಲಗಿದ್ದಲ್ಲೇ ಮಲಗಿರುವ ಅರುಣ ಈಗ ಮುರುಟಿ ಹೋಗಿದ್ದಾಳೆ. ಇರುವ ಒಬ್ಬ ಅಕ್ಕ-ಅಣ್ಣ ಅಸ್ಪತ್ರೆ ಕಡೆ ತಲೆ ಹಾಕಿ ಕೂಡ ಮಲಗಿಲ್ಲ. ಬೇರೆ ಇನ್ಯಾವ ಬಂಧುಗಳೂ ನೀನು ಹೇಗಿದ್ದೀ? ಎಂದು ಕೇಳಿಲ್ಲ. ಇಷ್ಟೂ ವರ್ಷ ಇವಳ ಶುಶ್ರೂಷೆ ಮಾಡುತ್ತಿರುವವರು ಅದೇ ಆಸ್ಪತ್ರೆಯ ದಾದಿಯರು. ಈ ನಲವತ್ತೊಂದು ವರ್ಷದಲ್ಲಿ ನೂರಾರು ಜನ ದಾದಿಯರು ಬಂದಿದ್ದಾರೆ ಹೋಗಿದ್ದಾರೆ. ಆಗಿದ್ದವರೆಲ್ಲಾ ರಿಟೈರ್ ಆಗಿ ಹೋಗಿದ್ದಾರೆ. ಆದರೆ ಅರುಣಾಳ ಆರೈಕೆಯಲ್ಲಿ ಕೊಂಚವೂ ಕಮ್ಮಿಯಾಗಿಲ್ಲ. ಇಂದೂ ಹೊಸಬರು ಡ್ಯೂಟಿಗೆ ಬಂದಾಗ ಅವರನ್ನು ಅರುಣಾ ಮುಂದೆ ನಿಲ್ಲಿಸಿ, ಈಕೆ ನಮ್ಮ ಸಹೋದರಿಯಂತೆ, ಚನ್ನಾಗಿ ನೋಡಿಕೊಳ್ಳಿ ಎಂದು ಪರಿಚಯಿಸುತ್ತಾರೆ. ನಿಜವಾಗಿಯೂ ಇವರೆಲ್ಲ ಗ್ರೇಟ್! ಅವರಿಗೊಂದು ಸಲ್ಯೂಟ್.

Aruna now!

ಅರುಣಾ ಬಾಲಕಿಯಾಗಿದ್ದಾಗ ಅವರ ತಾಯಿ ಯಾರೋ ಜ್ಯೋತಿಷಿಗೆ ಮಗಳ ಜಾತಕ ತೋರಿಸಿದ್ದರಂತೆ. ಅವರು ಅದನ್ನು ಅಭ್ಯಸಿಸಿ ನೋಡಿ ಹೇಳಿದರಂತೆ. ‘ಈ ಹುಡುಗಿ ಮುಂದೆ ಲೋಕಪ್ರಸಿದ್ಧಳಾಗುತ್ತಾಳೆ’ ಎಂದು! ಅದನ್ನು ಕೇಳಿ ಹಿರಿ ಹಿರಿ ಹಿಗ್ಗಿದ್ದ ಅರುಣಾ ಎಲ್ಲರ ಬಳಿಯೂ ಮುಂದೊಂದು ದಿನ ನಾನು ದೊಡ್ಡ ಮನುಷ್ಯಳಾಗುತ್ತೇನೆ ಎಂದು ಹೇಳಿಕೊಂಡು ಸಂಭ್ರಮಿಸುತ್ತಿದ್ದಳಂತೆ. ನಲವತ್ತೊಂದು ವರ್ಷಗಳಿಂದ ಅರುಣಾಳ ಬಗ್ಗೆ ಮೀಡಿಯಾಗಳು ಥಾನ್‌ಗಟ್ಟಲೆ ಬರೆದಿವೆ. ಟಿವಿಯಲ್ಲಿ ದಿನಗಟ್ಟಲೆ ಚರ್ಚೆ ಮಾಡಿದ್ದಾರೆ. ದೇಶ, ವಿದೇಶಗಳಲ್ಲಿ ಈಕೆಯ ಹೆಸರು ಚರ್ಚೆಯಾಗುತ್ತಲೇ ಇದೆ. ಆದರೆ ಅರುಣಾ ಮಾತ್ರ ಮಲಗಿದ್ದಲ್ಲಿಯೇ ಮಲಗಿದ್ದಾಳೆ. ಈಕೆಗೆ ನೋಡಲು ಕಣ್ಣಿನ ದೃಷ್ಟಿಯಿಲ್ಲ. ಕಿವಿ ಕೇಳಿಸುತ್ತಿರಬಹುದು, ಆದರೆ ಯೋಚನಾಶಕ್ತಿ ಇಲ್ಲ.

ಪಿಂಕಿ ವಿರಾನಿ ಎಂಬ ಮುಂಬಯಿಯ ಪತ್ರಕರ್ತೆ ಅರುಣಾಳ ಬಗ್ಗೆ `Aruna’s Story’ ಎಂಬ ಒಂದು ಪುಸ್ತಕ ಕೂಡ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅರುಣಾಗೆ ‘ದಯಾಮರಣ’ ಕೊಡಿಸಲು ಆಕೆ ಕೋರ್ಟ್ ಮೆಟ್ಟಿಲೇರಿದರು. ಕೋರ್ಟ್ ವೈದ್ಯರಿಂದ ಅರುಣಾಳ ಸ್ಥಿತಿ ಕುರಿತು ವರದಿ ತರಿಸಿಕೊಂಡು ಪರಿಶೀಲಿಸಿತು. ಅರುಣಾಳ ಅರ್ಧ ಮೆದುಳು ಮಾತ್ರ ಸತ್ತಿದೆ, ಹೃದಯ ಸತ್ತಿಲ್ಲ. ಮೇಲಾಗಿ ಆಕೆ ನನ್ನನ್ನು ಸಾಯಿಸಿ ಎಂದು ಯಾರಲ್ಲೂ ಕೇಳಿಲ್ಲ. ಆಕೆಯ ಬಂಧುಗಳೂ ಕೂಡ ಕೇಳುತ್ತಿಲ್ಲ. ಆಸ್ಪತ್ರೆಯ ದಾದಿಯರು ಅರುಣಾಗೆ ಸಹಜ ಸಾವು ಬರುವವರೆಗೂ ಕಾಪಾಡುತ್ತೇವೆ ಎಂದು ಮಾನವೀಯತೆ ಮೆರೆದಿದ್ದಾರೆ. ಹಾಗಾಗಿ ‘ದಯಾಮರಣ’ಕ್ಕೆ ಅವಕಾಶವಿಲ್ಲ ಎಂದು ಶರಾ ಬರೆದು ಬಿಟ್ಟಿತು. ಜೊತೆಗೆ ಇದೇ ಕೇಸಿನ ಹಿನ್ನೆಲೆಯಲ್ಲಿ ‘ನಿಷ್ಕ್ರಿಯ ದಯಾಮರಣ’ಕ್ಕೆ ಅನುಮತಿಯನ್ನೂ ಕೊಟ್ಟಿತು. ಆದರೆ ಇದಿನ್ನೂ ಕಾನೂನಾಗಿಲ್ಲ.
ಈಗ ಕಳೆದ ಜುಲೈ ತಿಂಗಳಲ್ಲಿ ಸುಪ್ರೀಂ ಕೋರ್ಟ್ ರಾಷ್ಟ್ರದಾದ್ಯಂತ ದಯಾಮರಣದ ಕುರಿತು ಚರ್ಚೆಗೆ ಆಹ್ವಾನ ನೀಡಿದೆ. ಎಲ್ಲ ರಾಜ್ಯಸರ್ಕಾರಗಳಿಗೂ ನೋಟಿಸ್ ನೀಡಿ, ನಿಮ್ಮ ಅಭಿಪ್ರಾಯ ತಿಳಿಸಿ ಎಂದು ತಾಕೀತು ಮಾಡಿದೆ.

ಇದೆಲ್ಲದರ ಹಿನ್ನೆಲೆಯಲ್ಲಿ ನಾನು ‘ವಿದಾಯ’ ಎಂಬ ಚಿತ್ರಕತೆ ಬರೆದೆ. ಅದನ್ನು ದೃಶ್ಯಕ್ಕೆ ಇಳಿಸಲು ಹೊರಟಿದ್ದೇನೆ.

ಹೇಳಿ ಮಿತ್ರರೆ, ನಿಮಗೇನನ್ನಿಸುತ್ತೆ?

ದಯಾಮರಣ ಬೇಕೇ? ಬೇಡವೇ?

ಕುಚೇಲನ ಮನೆಗೆ ಕೃಷ್ಣ ಬಂದ…

ಈಗ ನೋಡಿದರೆ ಇದೆಲ್ಲ ಒಂದು ಅಚ್ಚರಿ ಅಂದೆನ್ನಿಸುತ್ತದೆ!

ಅದು ಕಳೆದ ವರ್ಷದ ಜನವರಿ ತಿಂಗಳು.  ಎಂದಿನಂತೆ ಆ ಮುಂಜಾನೆ ದಿನಪತ್ರಿಕೆಯನ್ನು ತೆರೆದಾಗ ಮೊದಲ ಪುಟದಲ್ಲೇ ಒಂದು ಸುದ್ದಿ ಗಮನಸೆಳೆಯಿತು.  ಅದರ ಶೀರ್ಷಿಕೆ ಹೀಗಿತ್ತು:  “ಗ್ರಾಮವಾಸ್ತವ್ಯದಿಂದ ‘ವಾಸ್ತವ್ಯ’ವನ್ನೇ ಕಳೆದುಕೊಂಡವರು!ಹ್” ಈ ಮೂರೂವರೆ ಪದಗಳು ನನ್ನ ಈವತ್ತಿನ ‘ಡಿಸೆಂಬರ್-1’ ಚಲನಚಿತ್ರಕ್ಕೆ ನಾಂದಿ ಹಾಡಿದವು!
ಪತ್ರಿಕೆಯ ಆ ವರದಿಯಲ್ಲಿ ಉತ್ತರಕರ್ನಾಟಕದ ಪುಟ್ಟ ಹಳ್ಳಿಯೊಂದರಲ್ಲಿ ಒಂದು ಬಡ ಕುಟುಂಬ ತಾನು ಬದುಕಿ ಬಾಳಿದ ಊರನ್ನೇ ಹೇಗೆ ತೊರೆದು ಹೋಗಬೇಕಾಯಿತು ಎನ್ನುವುದರ ಬಗ್ಗೆ ಬರೆಯಲಾಗಿತ್ತು.  ತತ್ತ್‌ಕ್ಷಣ ನನ್ನೊಳಗಿದ್ದ ಪತ್ರಕರ್ತ, ಕಥೆಗಾರ ಹಾಗೂ ನಿರ್ದೇಶಕ ಎಲ್ಲರೂ ಒಟ್ಟೊಟ್ಟಿಗೇ ಜಾಗ್ರತರಾದರು.  ಇವರೆಲ್ಲ ಎದ್ದು ಕುಳಿತಾಗ ನಾನು ಹೇಗೆ ತಡ ಮಾಡುವುದು? ಕೆಲವೇ ದಿನಗಳಲ್ಲಿ ನನ್ನ ಪ್ರಯಾಣ ಆ ಪ್ರದೇಶದತ್ತ ಸಾಗಿತು.  

Image
ಪರಿಚಿತರನ್ನು ಜೊತೆಯಲ್ಲಿ ಕರೆದುಕೊಂಡು ಆ ಹಳ್ಳಿಗೆ ಹೋದೆ.  ಆ ಕುಟುಂಬ ಬದುಕಿದ್ದ ಮನೆಯನ್ನು ಕಂಡೆ.  ಅದೊಂದು ಸುಮಾರು ಐದು ಚದುರದ ಪುಟ್ಟ ಮನೆ.  ಅಲ್ಲಿ ಈಗ ಬೇರೆ ಯಾರೋ ಹೊಸಬರು ಇದ್ದರು.  ಅವರ ಅಪ್ಪಣೆ ಪಡೆದು ಒಳಗೆ ಹೋಗಿ ಇಂಚಿಂಚನ್ನೂ ಗಮನಿಸಿದೆ.  ಜೊತೆಯಲ್ಲಿ ಬಂದವರು ನನ್ನ ಕಿವಿಯ ಬಳಿ ಪಿಸುಗುಡುತ್ತಾ ವಿವರಿಸುತ್ತಿದ್ದರು.  ಇದೇ ಜಾಗದಲ್ಲಿ ಅಡುಗೆ ತಯಾರಿಸಿದ್ದು.  ಇದೇ ಜಾಗದಲ್ಲಿ ಮಂಚ ಹಾಕಲಾಗಿದ್ದು.  ಇಲ್ಲೇ ಕೂಲರ್ ಇಟ್ಟಿದ್ದರು.  ಈ ಎಲೆಕ್ಟ್ರಿಕ್ ವೈರಿಂಗ್ ಎಲ್ಲ ಮಾಡಿದ್ದು ಆಗಲೇ.  ಬನ್ನಿ ಮನೆಯ ಹಿಂಬಾಗಕ್ಕೆ ಬನ್ನಿ.  ಅದೋ ನೋಡಿ ಟಾಯ್‌ಲೆಟ್!  ಅದನ್ನು ಕಟ್ಟಿಸಿದ್ದು ಆಗಲೇ.  ಯಾರು ಇನ್ಯಾಗುರೇಟ್ ಮಾಡಿದ್ದು ಅಂತ ಗೊತ್ತಲ್ಲ? ಈ ನಾಡಿನ ದೊರೆ!  ಈ ಕಡೆ, ಮನೆಯ ಆಚೆ ಬನ್ನಿ.  ಸುತ್ತ ನೋಡಿ. ಆವತ್ತು ಅಲ್ಲೆಲ್ಲ ಎಂಥ ಸರ್ಪಗಾವಲು ಇತ್ತು ಗೊತ್ತೇನೂ?  ಇಡೀ ಪ್ರದೇಶವನ್ನು ಸುಮಾರು ಸಾವಿರ ಪೊಲೀಸರು ಸುತ್ತುವರಿದಿದ್ದರು.  ಒಂದೇ ಒಂದು ಸೊಳ್ಳೆ ಕೂಡ ಇಲ್ಲಿಗೆ ಪ್ರವೇಶಿಸುವ ಹಾಗಿರಲಿಲ್ಲ!  ಅಷ್ಟು ಟೈಟ್ ಸೆಕ್ಯುರಿಟಿ!

ಇದೆಲ್ಲ ನೋಡಿಕೊಂಡು.  ಸಾಕಷ್ಟು ಫೋಟೋ ತೆಗೆದುಕೊಂಡು ಆಚೆ ಬಂದು ಅಕ್ಕ-ಪಕ್ಕದ ಬೀದಿಗಳಲ್ಲಿ ಕಾಲಾಡಿಸಿದೆವು.  ಇದ್ಯಾರು ಹೊಸಬರಿವರು ಎಂದು ಊರಿನವರು ಹತ್ತಿರ ಬಂದು ಮಾತನಾಡಿಸಿದರು.  ನಾನು ಚಲನಚಿತ್ರನಿರ್ದೇಶಕ ಎಂದು ಯಾರೂ ಗುರುತಿಸಲಿಲ್ಲ, ನಾನೂ ಹೇಳಲು ಹೋಗಲಿಲ್ಲ.  ಅವರೆಲ್ಲ ಪ್ರೀತಿಯಿಂದ ನನ್ನನ್ನು ಕರೆದು ಕೂರಿಸಿ ಚಹಾ ಕೊಟ್ಟರು.  ಅದನ್ನು ಹೀರುತ್ತಲೇ ಊರು ತೊರೆದವರ ಕುರಿತು ಮೆಲ್ಲನೆ ಮಾತೆತ್ತಿದೆ.

ಅವರು ಹೇಳಿದರು:
ಆ ಫ್ಯಾಮಿಲಿ ಇಲ್ಲಿಂದ ಹೋಗುವುದಕ್ಕೆ ನಾವು ಊರಿನವರು ಯಾರೂ ಕಾರಣರಲ್ಲವೇ ಅಲ್ಲ.  ಈಚೆಗೆ ಒಂದು ದಿನ ಅವರು ತಾವಿದ್ದ ಈ ಮನೆಯನ್ನು ಒಂದೂವರೆ ಲಕ್ಷಕ್ಕೆ ಮಾರಿ ಇಲ್ಲಿಂದ ನಾಲ್ಕೈದು ಕಿಲೋ ಮೀಟರ್ ದೂರದಲ್ಲಿ ಜಮೀನಿನ ಬಳಿ ಮನೆಕಟ್ಟಿಕೊಂಡು ಒಂಟಿಯಾಗಿ ಜೀವಿಸಿದ್ದಾರೆ.   ಅದ್ಯಾಕೆ ಹಾಗೆ ಮಾಡಿದರೋ ಏನೋ ಗೊತ್ತಿಲ್ಲ.  ಈಗ ನೋಡಿ ಎಲ್ಲರೂ ನಮ್ಮನ್ನು ದೂರುತ್ತಿದ್ದಾರೆ!  

ಒಂದೆರಡು ಗಂಟೆ ಹೀಗೇ ಮಾತಾಡಿ ನಂತರ ಆ ದಂಪತಿಗಳು ಈಗ ಜೀವಿಸಿರುವ ಕಡೆಗೆ ಕಾರು ಓಡಿಸಿದೆ. ದೂರದ ನೆರಳಲ್ಲಿ ಕಾರು ನಿಲ್ಲಿಸಿ ಅವರ ಮನೆಯತ್ತ ನಡೆದೇ ಹೋದೆವು.  ನನ್ನೊಳಗೆ ವಿಚಿತ್ರ ಭಾವ.

ಮುಖ್ಯವಾಗಿ ಆ ದಂಪತಿಗಳನ್ನು ಕಾಣುವ ಕುತೂಹಲ ನನ್ನಲ್ಲಿ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿತ್ತು.  ಆದರೆ ಬಾಗಿಲು ಬಡಿದಾಗ ಆ ಮನೆಯಿಂದ ಹೊರಬಂದವರು ಒಬ್ಬ ವೃದ್ಧೆ!  ಆಕೆ ನಮ್ಮನ್ನು ಆಪಾದಮಸ್ತಕ ನೋಡಿದರು.  ನೀವು ಯಾರು? ಏಕೆ ಬಂದಿದ್ದೀರಿ? ಇಲ್ಲೇನು ಕೆಲಸ? ಎಂದು ಕಟುವಾಗಿ ಒಂದೊಂದಾಗಿ ಪ್ರಶ್ನೆಗಳ ಬಾಣಗಳನ್ನು ಎಸೆದರು.  ಬೇರೆಯದೇ ಸ್ವಾಗತ ನಿರೀಕ್ಷಿಸಿದ್ದ ನಮಗೆ ಇದು ಅನಿರೀಕ್ಷಿತ!  ನಾಲಗೆಯಿಂದ ತುಟಿಯನ್ನು ಸವರಿಕೊಂಡು, ಪೆಕರು ನಗೆ ನಕ್ಕು: ನಾವು ದೂರದಿಂದ ಬಂದಿದ್ದೇವೆ. ಹೀಗೇ ಸುಮ್ಮನೇ ನೋಡಿಕೊಂಡು ಹೋಗಲು ಬಂದೆವು ಎಂದೆ.   ನೋಡಲು ನಾವೇನು ಕೋಡಂಗಿಗಳೇ? ಈಗ ಯಾರೂ ಬಂದು ನಮ್ಮನ್ನು ನೋಡುವುದೂ ಬೇಡ, ಮಾತಾಡಿಸುವುದೂ ಬೇಡ! ಈಗ ನೋಡಿರುವುದೇ ಈ ಜನ್ಮಕ್ಕಾಗುವಷ್ಟಿದೆ! ಎಂದು ಹೇಳಿ ದಢಾರನೆ ಮನೆ ಬಾಗಿಲು ಹಾಕಿಕೊಂಡು ಹೋದರು… ಪೆಚ್ಚು ಮೋರೆ ಹೊತ್ತು ಅಲ್ಲೇ ಸ್ವಲ್ಪ ಹೊತ್ತು ಕಾದೆವು.  ಮತ್ತಿನ್ನಾರಾದರೂ ಮನೆಯಿಂದ ಹೊರಗೆ ಬರಬಹುದು.  ನಮ್ಮನ್ನು ಒಳಗೆ ಕರೆದು ಕೂರಿಸಿ ಮಾತಾಡಿಸಬಹುದು ಎಂಬ ಆಸೆ.  ಹತ್ತು ನಿಮಿಷದ ನಂತರೆ ಆ ವೃದ್ಧೆಯೇ ಮತ್ತೆ ಬಂದರು.  ಇನ್ನೂ ಯಾಕೆ ಇಲ್ಲಿ ನಿಂತಿದ್ದೀರಿ, ಹೊರಡಿ ಇಲ್ಲಿಂದ.  ಈ ಬಾರಿ ಜೋರಾಗಿಯೇ ಗದರಿದ್ದರು.

ಸಾಕಲ್ಲ! ಅಲ್ಲಿಂದ ಹಿಂತಿರುಗಲು.

ಆದರೆ ಅಷ್ಟಕ್ಕೆ ಸೋಲುವ ಜಾಯಮಾನ ನನ್ನದಲ್ಲ.  ಅದೇ ಪ್ರದೇಶದಲ್ಲಿ ಇನ್ನೂ ಎರಡು ದಿನವಿದ್ದು ಬೇರೆ ಬೇರೆಯವರನ್ನು ಭೇಟಿ ಮಾಡಿ ಇನ್ನಷ್ಟು ಮಾಹಿತಿ ಸಂಗ್ರಹಿಸಿದೆ.  ನಂತರ ಬೆಂಗಳೂರಿಗೆ ಬಂದೆ.  ಎಂಟು ವರ್ಷದ ಹಿಂದಿನ ಪತ್ರಿಕೆಗಳನ್ನು ಕಲೆ ಹಾಕಿದೆ.  ಇನ್ನಷ್ಟು ವಿವರಗಳು ಲಭಿಸಿದವು.  ಅಲ್ಲೇ ಆ ದಂಪತಿಗಳ ಫೋಟೋ ಕೂಡ ಸಿಕ್ಕಿತು.  ಇದೇ ತರಹ ಮುಖ್ಯಮಂತ್ರಿಗಳು ವಾಸ್ತವ್ಯ ಹೂಡಿದ್ದು ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಮನೆಗಳು ಕರ್ನಾಟಕದಲ್ಲಿ ಇದ್ದವು.  ನಾವು ಒಂದು ರೌಂಡ್ ಮೈಸೂರು, ಕನಕಪುರ, ಕೆ.ಆರ್.ಸಾಗರ, ಹುಬ್ಬಳ್ಳಿ, ಗದಗ ಇತ್ಯಾದಿ ಕಡೆಯೆಲ್ಲಾ ಸುತ್ತಾಡಿ ಬಂದೆವು.  ಅವರನ್ನೆಲ್ಲ ಮಾತಾಡಿಸಿ, ಕತೆ ಕೇಳಿಕೊಂಡು ಬಂದ ಮೇಲೆ ಎಲ್ಲ ಅನುಭವಗಳನ್ನೂ ಕ್ರೂಢೀಕರಿಸಿ ನನ್ನದೇ ಆದ ದೇವಕ್ಕ, ಮಾದೇವಪ್ಪನ ಕತೆ ಬರೆಯಲು ಕೂತೆ.  ಹಾಗಾಗಿ ಇದು ಯಾರೊಬ್ಬರ ಕತೆಯೂ ಅಲ್ಲ; ಆದರೆ ಎಲ್ಲರೂ ಕತೆಯೂ ಹೌದು!

ಇದಕ್ಕೂ ಮುಂಚೆ ನಾನು ನಿಮಗೆ ಒಂದು ಪ್ಲ್ಯಾಷ್‌ಬ್ಯಾಕ್‌ನಲ್ಲಿ ಇನ್ನೊಂದು ವಿಚಾರ ಹೇಳಬೇಕು.

ಸುಮಾರು ಎಂಟು ವರ್ಷಗಳ ಹಿಂದೆ ‘ಗ್ರಾಮವಾಸ್ತವ್ಯ’ ದ ಪರಿಕಲ್ಪನೆಯನ್ನು ಹುಟ್ಟು ಹಾಕಿದ ನಮ್ಮ ಮಾಜೀ ಮುಖ್ಯಮಂತ್ರಿಗಳು ರಾಜ್ಯ, ರಾಷ್ಟ್ರ, ರೇಗನ್ ಮುಂತಾದ ಅಂತರಾಷ್ಟ್ರೀಯ ನಾಯಕರು ಹಾಗೂ ವಿಶ್ವಸಂಸ್ಥೆಯಂಥ ಸಂಸ್ಥೆಯಿಂದಲೂ ಹೊಗಳಿಸಿಕೊಂಡಿದ್ದರು.  

ನಾಡಿನ ದೊರೆಯೊಬ್ಬ ಬಡವನ ಮನೆಯಲ್ಲಿ ಒಂದು ದಿನ ಕಳೆಯುವುದು, ಅವನು ಮಾಡಿದ ಊಟವನ್ನೇ ಮಾಡುವುದು, ರಾತ್ರಿ ಅಲ್ಲೇ ತಂಗುವುದು, ಎಂಥ ವಿಶಿಷ್ಟ ಯೋಜನೆ!  ಇದು ಒಂದು ಮುಖ.  ಅದರೆ ಜಗತ್ತಿಗೆ ಗೊತ್ತಿರದ ಇನ್ನೊಂದು ಮುಖವೂ ಇದೆ.  ಅದೇ ‘ಡಿಸೆಂಬರ್-1’.

ಸಿಂಪಲ್ಲಾಗಿ ನಾನು ಬರೆದ ಕಥೆ ಹೇಳಿ ಬಿಡ್ತೀನಿ ಕೇಳಿ.  

ದಕ್ಷಿಣಭಾರತದ ಉತ್ತರ ಕರ್ನಾಟಕ ಸೀಮೆಯಲ್ಲಿ ಬಸಾಪುರವೆಂಬುದು ಒಂದು ಪುಟ್ಟ ಹಳ್ಳಿ.  ಅಲ್ಲಿ, ರೊಟ್ಟಿ ಮಾರಿ ಜೀವನ ಸಾಗಿಸುತ್ತಿರುವ ದೇವಕ್ಕನದ್ದು ಒಂದು ಪುಟ್ಟ ಕುಟುಂಬ. ಗಂಡ ಮಾದೇವಪ್ಪ ಟ್ರಕ್ ಓಡಿಸುತ್ತಾ ಸೀಮೆ ಸುತ್ತುತ್ತಿದ್ದವನು, ಅಪಘಾತದಲ್ಲಿ ಕಾಲು ಊನ ಮಾಡಿಕೊಂಡು ಈಗ ಹಿಟ್ಟಿನ ಗಿರಣಿಯಲ್ಲಿ ಚಿಕ್ಕಾಸಿಗೆ ದುಡಿಯುತ್ತಿದ್ದಾನೆ.  ಪುಟ್ಟ ಮಕ್ಕಳಿಬ್ಬರು ಹಾಗೂ ವೃದ್ಧ ಮುದುಕಿ ಮನೆಯಲ್ಲಿದ್ದಾರೆ.  ದೇವಕ್ಕ-ಮಾದೇವಪ್ಪರಿಗೆ ಕಿರಣ-ಜ್ಯೋತಿಯರ ಭವಿಷ್ಯ ತಮ್ಮದರಂತಾಗಬಾರದು ಎಂಬ ಬಗ್ಗೆ ಕಾಳಜಿ.
ಕುಟುಕು ಜೀವಕ್ಕೆ ಎರವಾದಂತೆ ದೇವಕ್ಕನ ರೊಟ್ಟಿ ವ್ಯಾಪಾರ ಸೋಲತೊಡಗಿದಾಗಲೇ ಈ ಕುಟುಂಬಕ್ಕೆ ಹೊಚ್ಚ ಹೊಸ ಸುದ್ದಿ ಬರುತ್ತದೆ. ಅದು, ಮುಖ್ಯಮಂತ್ರಿಗಳ ‘ಗ್ರಾಮ ವಾಸ್ತವ್ಯ’! ದೇವಕ್ಕನ ಮನೆ ಇದಕ್ಕೆ ಆಯ್ಕೆಯಾಗುತ್ತದೆ.  ‘ಡಿಸೆಂಬರ್-1’ ರಂದು ರಾಜ್ಯದ ಮುಖ್ಯಮಂತ್ರಿಗಳು ಆ ಮನೆಯಲ್ಲಿ ತಂಗಿ ದೇವಕ್ಕನ ರೊಟ್ಟಿಯೂಟ ಸವಿಯಲಿದ್ದಾರೆ ಎಂಬುದು ಇಡೀ ಪ್ರದೇಶದಲ್ಲಿ ಸಂಚಲನವನ್ನು ಉಂಟು ಮಾಡುತ್ತದೆ.  ಊರವರ ಕಣ್ಣಿನಲ್ಲಿ ಈ ದಂಪತಿಗಳು ಧುತ್ತೆಂದು ದೊಡ್ಡವರಾಗುತ್ತಾರೆ.  ದೇವಕ್ಕನ ರೊಟ್ಟಿಗೆ ಡಿಮ್ಯಾಂಡ್ ಸೃಷ್ಟಿಯಾಗುತ್ತದೆ.  ಹಾಗೆಯೇ ಸಿ‌ಎಂ ಬಂದಾಗ ನಮ್ಮ ಕೆಲಸಗಳನ್ನು ಮಾಡಿಸಿಕೊಡಿ ಎಂಬ ಬೇಡಿಕೆಗಳೂ ಬಂದು ಬೀಳುತ್ತವೆ.  ಮಾಧ್ಯಮದ ಪ್ರತಿನಿಧಿಗಳ ದೃಷ್ಟಿಯಲ್ಲಿ ದೇವಕ್ಕ-ಮಾದೇವಪ್ಪ ಈಗ  ಸೆಲೆಬ್ರಿಟಿಗಳು.  ಸೌಲಭ್ಯ ಎನ್ನುವ ಹೆಸರಿನಲ್ಲಿ ದೇವಕ್ಕ-ಮಾದೇವಪ್ಪರ ಪುಟ್ಟ ಮನೆ ಮುಖ್ಯಮಂತ್ರಿಗಳಿಗಾಗಿ ನವೀಕರಣವಾಗುತ್ತದೆ.  ಕರೆಂಟು, ಟೀವಿ, ಫ್ರಿಜ್ಜು, ಸೋಫಾ ಬಂದು ಕೂರುತ್ತವೆ.  ಆದರೆ ಹುಡುಕಿ ಬಂದ ನೆಂಟರನ್ನು ಮಾತ್ರ ರಕ್ಷಣಾ ಸಿಬ್ಬಂದಿ ಒಳಕ್ಕೆ ಬಿಡುವುದಿಲ್ಲ.  ದೇವಕ್ಕ ದಂಪತಿಗಳು ಅಸಹಾಯಕರಾಗುತ್ತಾರೆ.  


ಹೆಲಿಕಾಪ್ಟರ್‌ನಲ್ಲಿ ಹಾರಿ ಬಂದ ಸಿ‌ಎಂಗೆ ಬಸಾಪುರದ ಮಂದಿ ಅದ್ದೂರಿ ಸ್ವಾಗತ ಕೋರುತ್ತಾರೆ. ತಮ್ಮ ವಂಧಿ-ಮಾಗದರೊಂದಿಗೆ ದೇವಕ್ಕನ ಮನೆ ಪ್ರವೇಶಿಸಿದ ಮುಖ್ಯಮಂತ್ರಿಗಳು ರೊಟ್ಟಿಯೂಟ ಉಂಡು ಹರ್ಷಿಸುತ್ತಾ, ಸ್ಥಳೀಯ ರಾಜಕೀಯ ಪರಾಮರ್ಶಿಸುತ್ತಾರೆ.  ಈ ನಡುವೆ ಅವರಿಗೆ ದೇವಕ್ಕ ದಂಪತಿಗಳೊಂದಿಗೆ ಮಾತನಾಡಲು ಪುರುಸೊತ್ತೇ ಸಿಗುವುದಿಲ್ಲ.  ಊರವರ, ಬಂಧುಗಳ ಬೇಡಿಕೆಗಳನ್ನು ಹೊತ್ತು ಕೂತಿದ್ದ ದಂಪತಿಗಳು, ಅಂದು ರಾತ್ರಿ ತಮ್ಮ ಮನೆಯಲ್ಲಿ ತಮಗೇ ಉಳಿದುಕೊಳ್ಳಲು ತಾವಿಲ್ಲದೆ ಹೊರಗೆ ಜಗಲಿಯ ಮೇಲೆ ಕಾಲ ಕಳೆಯಬೇಕಾದ ಪ್ರಸಂಗ ಎದುರಾಗುತ್ತದೆ!

ಮುಖ್ಯಮಂತ್ರಿಗಳು ದೇವಕ್ಕನ ಮನೆಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಬಡತನವನ್ನು ಮೀರಿದ ಕಾರಣಗಳಿವೆ.  ಯಾವಾಗಲೂ ಬ್ರೇಕಿಂಗ್ ನ್ಯೂಸ್‌ಗೆ ಹಸಿದಿರುವ ಮಾಧ್ಯಮ ಪ್ರತಿನಿಧಿಯೊಬ್ಬ ಆ ಕಾರಣವನ್ನು ಪತ್ತೆ ಮಾಡುತ್ತಾನೆ.  ಅದು ಬೆಳಗ್ಗೆ ಪತ್ರಿಕೆ, ಟಿವಿಗಳಲ್ಲಿ ರಟ್ಟಾದಾಗ ಇಡೀ ಹಳ್ಳಿ ದಂಗಾಗುತ್ತದೆ!  ಸಾಮಾಜಿಕ ಕಳಕಳಿ ಯಾರಿಗೂ ಮುಖ್ಯವೆನಿಸುವುದಿಲ್ಲ.  ಮುಖ್ಯಮಂತ್ರಿ ಹೊರಟ ನಂತರ ದೇವಕ್ಕ ದಂಪತಿಗಳು ಊರಿನವರಿಂದ ಒಂದು ರೀತಿಯ ಅಘೋಷಿತ ಬಹಿಷ್ಕಾರಕ್ಕೆ ಒಳಗಾಗುತ್ತಾರೆ.  ಈಗ ದೇವಕ್ಕನ ರೊಟ್ಟಿ ಯಾರಿಗೂ ಬೇಡ. ಮಾದೇವಪ್ಪ ಅನ್ನ ತರುವ ದಾರಿಯಾದ ಗಿರಣಿಯ ಕೆಲಸ ಕಳೆದುಕೊಳ್ಳುತ್ತಾನೆ. ಇದರ ಬಿಸಿ ಶಾಲೆಯಲ್ಲಿ ಕಿರಣನಿಗೂ ತಟ್ಟುತ್ತದೆ.
ಸುದ್ದಿಗೆ ಹಸಿದ ಮಾಧ್ಯಮಕ್ಕೆ ಆಹಾರವಾಗಿ, ಸಂವೇದನಾರಹಿತ ವ್ಯವಸ್ಥೆಯ ಚಕ್ರಕ್ಕೆ ಸಿಲುಕಿ, ಯಾರದ್ದೋ ಸಾಮಾಜಿಕ ಕಳಕಳಿಗೆ ಕೇವಲ ಪ್ರತೀಕವಾಗಿ, ಆಘಾತದ ಮೇಲೆ ಆಘಾತ ಅನುಭವಿಸುವ ದೇವಕ್ಕನ ಕುಟುಂಬಕ್ಕೆ ಡಿಸೆಂಬರ್ ಒಂದರ ರಾತ್ರಿ ಕರಾಳ ರಾತ್ರಿಯಾಗಿ ಪರಿಣಮಿಸುತ್ತದೆ!

 
(ಉದಯವಾಣಿ (ಸಾಪ್ತಹಿಕ ಸಂಪದ) ಏಪ್ರಿಲ್ 20, 2014, ಪ್ರಕಟವಾದ ಲೇಖನ)

ಎಂಥಾ ಭಾಗ್ಯವಂತ!

ಡಾ.ರಾಜ್‌ಕುಮಾರ್ ನಮ್ಮಿಂದ ಭೌತಿಕವಾಗಿ ದೂರಾಗಿ ಎಂಟು ವರ್ಷಗಳೇ ಕಳೆದಿವೆ. ಆದರೆ ಅವರು ಮಾನಸಿಕವಾಗಿ ಕೋಟ್ಯಾಂತರ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ನಾನು ಪ್ರತ್ಯೇಕ ಹೇಳಬೇಕಾಗಿಲ್ಲ. ಒಂದು ಸಮೀಕ್ಷೆಯ ಪ್ರಕಾರ, ಅವರ ಕುರಿತ ಒಂದು ಕಾರ್ಯಕ್ರಮವೋ, ಅವರು ಅಭಿನಯಿಸಿದ ಒಂದಲ್ಲ ಒಂದು ಚಲನಚಿತ್ರವೋ, ಕರ್ನಾಟಕದ ಒಂದಲ್ಲ ಒಂದು ಕಡೆ, ಚಿತ್ರಮಂದಿರದಲ್ಲೋ ಅಥವಾ ಟೀವಿಯಲ್ಲೋ, ಪ್ರತಿ ಕ್ಷಣ ಪ್ರದರ್ಶನವಾಗುತ್ತಿರುತ್ತದೆ!

ಈ ಭಾಗ್ಯ ಎಷ್ಟು ಜನಕ್ಕೆ ಸಿಗುತ್ತದೆ?

ರಾಜ್ ಕಂಪೆನಿಗೆ ‘ನಿಕ್ಷೇಪ’ ಎಂಬ ಧಾರಾವಾಹಿಯನ್ನು ನಿರ್ದೇಶನ ಮಾಡಿಕೊಟ್ಟ ಸಂದರ್ಭ.  ಹಿನ್ನೆಲೆಯಲ್ಲಿ ನನ್ನ ಪತ್ನಿ ಅನುಪಮ. (ಇಸವಿ 2000)

ರಾಜ್ ಕಂಪೆನಿಗೆ ‘ನಿಕ್ಷೇಪ’ ಎಂಬ ಧಾರಾವಾಹಿಯನ್ನು ನಿರ್ದೇಶನ ಮಾಡಿಕೊಟ್ಟ ಸಂದರ್ಭ. ಹಿನ್ನೆಲೆಯಲ್ಲಿ ನನ್ನ ಪತ್ನಿ ಅನುಪಮ. (ಇಸವಿ 2000)

ಇಪ್ಪತ್ತೆರಡು ವರ್ಷಗಳ ಹಿಂದೆ ಅವರ ಅಭಿನಯದ ‘ಆಕಸ್ಮಿಕ’ ಚಲನಚಿತ್ರಕ್ಕೆ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಆ ಸಂದರ್ಭದಲ್ಲಿ ಅವರನ್ನು ತೀರ ಹತ್ತಿರದಿಂದ ಕಂಡದ್ದು ನನ್ನ ಸೌಭಾಗ್ಯ ಎಂದೇ ಭಾವಿಸಿದ್ದೇನೆ. ಆಗ ಅವರು ಹೇಳುತ್ತಿದ್ದ ಈ ಮಾತು ಈಗಲೂ ನನ್ನ ಕಿವಿಯಲ್ಲಿವೆ.

“ನಮ್ಮ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಭರ್ಜರಿ ಮೀಸೆ ಬಿಟ್ಟಿದ್ದರು. ನನಗೆ ಅವರನ್ನು ಕಂಡರೆ ವಿಪರೀತ ಭಯ-ಭಕ್ತಿ. ಆಗ ನಾನಿನ್ನೂ ರಾಜಕುಮಾರ್ ಆಗಿರಲಿಲ್ಲ. ನಾಟಕಗಳಲ್ಲಿ ಅವರೊಂದಿಗೆ ಸಣ್ಣ-ಪುಟ್ಟ ಪಾತ್ರ ಮಾಡುತ್ತಿದ್ದೆ. ಒಂದು ದಿನ, ಮುತ್ತುರಾಜ್ ಆಗಿದ್ದ ನನ್ನನ್ನು ಹತ್ತಿರ ಕರೆದು ಹೇಳಿದರು: ‘ಕಂದಾ, ನನಗೆ ನಿನ್ನ ಪ್ರತಿಭೆ ಗೊತ್ತಿದೆ. ಒಂದಲ್ಲ ಒಂದು ದಿನ ನೀನು ಇಡೀ ನಾಡಿನಲ್ಲೇ ದೊಡ್ಡ ಹೆಸರು ಮಾಡತೀ ಕಣಾ… ಇದು ನನ್ನ ಮೀಸೆಯ ಮೇಲಾಣೆ ತಿಳ್ಕಾ’ ಎಂದು ತಮ್ಮ ಗಿರಿಜಾ ಮೀಸೆಯನ್ನು ಹುರಿಮಾಡಿದ್ದರು. ನಾನೋ ಸಿಂಹದ ಹೊಟ್ಟೆಯಲ್ಲಿ ಹುಟ್ಟಿದ ಇಲಿಮರಿಯಂತಿದ್ದೆ. ಆದರೆ ನಮ್ಮ ತಂದೆಯ ಮಾತು ಸುಳ್ಳಾಗಲಿಲ್ಲ. ದುರಾದೃಷ್ಟ, ಇದನ್ನು ನೋಡಲು ಅವರು ಬದುಕಿರಲಿಲ್ಲ! ಅವರ ಆಶೀರ್ವಾದದಿಂದ, ಮುತ್ತೆತ್ತಿರಾಯನ ಕೃಪೆಯಿಂದ ನಾನು ಹೀಗಾಗಿಬಿಟ್ಟೆ. ನಿಜ ಹೇಳ್ತೀನಿ, ಇದರಲ್ಲಿ ನನ್ನ ಶ್ರಮ ಏನೇನೂ ಇಲ್ಲ. ಎಲ್ಲಾ ಅವನದ್ದು” ಎಂದು ಬಾನಿನೆಡೆ ಮುಖ ಮಾಡಿ ಒಂದರೆಕ್ಷಣ ಕಣ್ಣಗಳನ್ನು ಮುಚ್ಚಿ ಧ್ಯಾನಸ್ಥರಾಗುತ್ತಿದ್ದರು.

ಇತ್ತೀಚೆಗೆ ಕನ್ನಡಚಿತ್ರರಂಗದಲ್ಲಿ ಎದ್ದಿರುವ ಡಬ್ಬಿಂಗ್ ಹಾವಳಿ ನಿಮಗೇ ಗೊತ್ತಿದೆಯಲ್ಲ. ಅದರ ಕುರಿತು ನಮ್ಮ ನಮ್ಮಲ್ಲೆ ಒಂದು ಖಾಸಗಿ ಚರ್ಚೆ ನಡೆಯುತ್ತಿತ್ತು. ಅಲ್ಲಿ ನಾವು ಸುಮಾರು ಆರೇಳು ಮಂದಿ ಇದ್ದೆವು. ಆಗ ಅಲ್ಲಿ ಪ್ರಾಸಂಗಿಕವಾಗಿ ರಾಜ್‌ಕುಮಾರ್ ಹೆಸರು ಪ್ರಸ್ತಾಪಕ್ಕೆ ಬಂತು. ‘ನಮ್ಮ ರಾಜ್‌ಕುಮಾರ್ ಇದ್ದಿದ್ದರೆ ಈ ಡಬ್ಬಿಂಗ್ ಬಗ್ಗೆ ಒಬ್ಬನೇ ಒಬ್ಬನೂ ಉಸಿರು ಬಿಡುತ್ತಿರಲಿಲ್ಲ; ಈಗ ನೋಡಿ ಅವರಿಲ್ಲ ಅಂತ ಎಲ್ರೂ ನಿಧಾನವಾಗಿ ಬಾಲ ಬಿಚ್ಚಿಕೊಳ್ಳುತ್ತಿದ್ದಾರೆ…’ ಎಂದು ಸ್ನೇಹಿತರೊಬ್ಬರು ಹೇಳಿದರು. ಈ ಮಾತಿಗೆ ಎಲ್ಲರೂ ತಲೆಯಾಡಿಸಿದರು. ಡಾ.ರಾಜ್ ಶಕ್ತಿಯ ಬಗ್ಗೆ ಯಾರದ್ದೇ ಭಿನ್ನಾಭಿಪ್ರಾಯವಿರಲಿಲ್ಲ.

ಈಗ ರಾಜ್‌ಕುಮಾರ್‌ರನ್ನು ಹೊಗಳಿ ಮಾತಾಡಿದ್ದರಲ್ಲ ಇದೇ ಸ್ನೇಹಿತರು, ಹಿಂದೊಮ್ಮೆ, ರಾಜ್‌ಕುಮಾರ್ ಬದುಕಿದ್ದಾಗ, ಇದೇ ತರಹದ ಖಾಸಗಿ ಬೈಠಕ್ ಒಂದರಲ್ಲಿ ರಾಜ್‌ಕುಮಾರ್ ಅವರನ್ನು ವಿರೋಧಿಸಿ ಮಾತನಾಡುತ್ತಾ, ‘ಅಲ್ರೀ ಈ ರಾಜ್‌ಕುಮಾರ್‌ದು ಏನ್ರೀ ದೊಡ್ಡಸ್ತಿಕೆ? ಎಲ್ಲರೂ ರಾಜ್‌ಕುಮಾರ್.. ರಾಜ್‌ಕುಮಾರ್ ಎಂದು ಮೆರೆಸ್ತಾರಲ್ಲ, ಈ ರಾಜ್‌ಕುಮಾರ್ ತಮ್ಮ ಸ್ವಂತಕ್ಕೆ ಎಲ್ಲ ಮಾಡಿಕೊಂಡ್ರೇ ಹೊರತು ಫಿಲಂ ಇಂಡಸ್ಟ್ರಿಗೆ ಏನ್ ಮಾಡಿದ್ದಾರೆ? ಕನ್ನಡನಾಡಿಗೆ ಏನು ಮಾಡಿದ್ದಾರೆ? ಶಂಕರ್‌ನಾಗ್ ನೋಡಿ ಡಬ್ಬಿಂಗ್ ಸ್ಟುಡಿಯೋ ಮಾಡಿದ್ರು, ಬಾಲಕೃಷ್ಣ, ಅಬ್ಬಯ್ಯನಾಯ್ಡು ಅಂಥವರು ಕೂಡ ಸ್ಟುಡಿಯೋ ಮಾಡಿದ್ರು, ವಜ್ರಮುನಿಯಂಥವರು ಎಷ್ಟೊಂದು ಸಿನಿಮಾ ಪ್ರೊಡ್ಯೂಸ್ ಮಾಡಿದ್ದಾರೆ. ಆದ್ರೆ ಈ ರಾಜ್‌ಕುಮಾರ್ ಏನ್ ಮಾಡಿದ್ದಾರೆ? ಒಂದು ಸ್ಟುಡಿಯೋ ಕಟ್ಟಿದ್ದಾರೆಯೇ, ಒಂದು ಆಸ್ಪತ್ರೆ ಕಟ್ಟಿಸಿದ್ದಾರೆಯೇ, ಒಂದು ಧರ್ಮಛತ್ರ ಕಟ್ಟಿಸಿದ್ದಾರೆಯೇ? ಒಂದೇ ಒಂದು ಜನೋಪಯೋಗಿ ಕೆಲಸ ಮಾಡಿದ್ದಾರೆಯೇ ಹೇಳಿ ನೋಡುವಾ?…’ ಎಂದು ಆವೇಶದಿಂದ ಆರೋಪಗಳ ಬಾಣಗಳನ್ನೇ ತೂರಿದ್ದರು.

ಅಂದು ನಾನು ಅವರಿಗೆ ಹೇಳಿದ್ದೆ. ‘ನಿಜ, ನೀವು ಹೇಳಿದಂತೆ ರಾಜ್‌ಕುಮಾರ್ ಅವರು ಕನ್ನಡ ನಾಡಿಗೆ ಆಸ್ಪತ್ರೆ, ಧರ್ಮಛತ್ರ ಯಾವುದನ್ನೂ ಮಾಡಿಲ್ಲದಿರಬಹುದು. ಆದರೆ ಅದಕ್ಕಿಂತ ಹೆಚ್ಚಿನದನ್ನು ಈ ಕರ್ನಾಟಕದ ಜನತೆಗೆ ಕೊಟ್ಟಿದ್ದಾರೆ. ಕನ್ನಡಚಿತ್ರರಂಗ ಸದೃಢವಾಗಲು ಅವರ ಪಾತ್ರ ಪ್ರಮುಖವಾದುದ್ದು. ನನಗೆ ಗೊತ್ತಿದ್ದ ಹಾಗೆ ಅವರು ತಾವು ಹಾಡಿದ ಯಾವ ಹಾಡಿಗೂ ಸಂಭಾವನೆ ಪಡೆಯದೆ, ಆ ಸಂಭಾವನೆಯ ಹಣವನ್ನು ಮಹಿಳಾ ಸಂಘಟನೆ ಇತ್ಯಾದಿ ಸಂಸ್ಥೆಗಳಿಗೆ ದೇಣಿಗೆಯಾಗಿ ಕೊಡುತ್ತಿದ್ದರು. ಅವರ ಮನೆಯ ಮುಂದೆ ಬೇರೆ ಬೇರೆ ಊರುಗಳಿಂದ ಬಂದ ಸುಮಾರು ಅಭಿಮಾನಿಗಳು ಸಾಲುಗಟ್ಟಿರುತ್ತಿದ್ದರು. ಮದುವೆ ಎಂದೋ, ಶುಭಸಮಾರಂಭ ಎಂದೋ ಸಹಾಯ ಪಡೆದದ್ದನ್ನು ಗಮನಿಸಿದ್ದೇನೆ.

ಇದೆಲ್ಲಕ್ಕಿಂತ ಹೆಚ್ಚಾಗಿ, ರಾಜ್‌ಕುಮಾರ್ ಅವರು ತೆರೆಯ ಮೇಲೆ ನೂರಾರು ಪಾತ್ರಗಳ ಮೂಲಕ ಒಂದು ಒಂದು ಸಾಂಸ್ಕೃತಿಕ ಜಗತ್ತನ್ನು ನಿರ್ಮಾಣ ಮಾಡಿದ್ದಾರೆ. ತಾವು ನಿರ್ವಹಿಸಿದ ಪಾತ್ರಗಳ ಮೂಲಕ ಒಂದು ಮೌಲ್ಯವನ್ನು ಬೆಳೆಸಿದ್ದಾರೆ. ಆದರೆ ಇದನ್ನು ಯಾವ ಮಾನದಂಡದಿಂದ ಅಳೆಯುವುದು? ಇದು ನಮ್ಮ ನಾಡಿಗೆ ಅವರು ಕೊಟ್ಟ ದೊಡ್ಡ ಕೊಡುಗೆಯಲ್ಲವೇ? ಎಂದಿದ್ದೆ. ನನ್ನ ಅಂದಿನ ವಾದ ಯಾರಿಗೂ ಪಥ್ಯವಾಗಿರಲಿಲ್ಲ.

ಇದೇ ವಾದವನ್ನು ಇತ್ತೀಚೆಗೆ ಸಭೆಯೊಂದರಲ್ಲಿ ವಿಸ್ತರಿಸುತ್ತಾ, ಇಂದು ನಮ್ಮ ಸಮಾಜದಲ್ಲಿ ಸಂಬಂಧಗಳು ಕ್ಷೀಣಿಸುತ್ತಿವೆ. ನಮ್ಮಲ್ಲಿ ಒಂದೊಂದು ಸಂಬಂಧಕ್ಕೆ ಒಂದೊಂದು ಸಂಬಂಧ ಸೂಚಕ ಹೆಸರಿದೆ. ಉದಾ: ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅತ್ತೆ-ಮಾವ, ದೊಡ್ಡಮಾವ-ದೊಡ್ಡತ್ತೆ, ಚಿಕ್ಕಮಾವ-ಚಿಕ್ಕತ್ತೆ, ಅಕ್ಕ, ತಂಗಿ, ಭಾವ, ನಾದಿನಿ, ಅತ್ತಿಗೆ, ಮೈದುನ, ಷಡ್ಡಕ, ವಾರಗಿತ್ತಿ… ಹೀಗೇ ಪಟ್ಟಿ ಮಾಡುತ್ತಾ ಹೋದರೆ ಇವುಗಳ ಸಂಖ್ಯೆ ಇಪ್ಪತ್ತನ್ನೂ ದಾಟಿ ಮುಂದೆ ಹೋಗುತ್ತದೆ. ಆದರೆ ಇಂದು ಈ ಎಲ್ಲ ಸಂಬಂಧಸೂಚಕ ಪದಗಳು ಕರೆಯಲ್ಪಡುವುದು ಇಂಗ್ಲೀಷಿನ ಎರಡೇ ಪದಗಳಿಂದ! ‘ಅಂಕಲ್’ ಮತ್ತು ‘ಆಂಟಿ’… ಇದು ಆಧುನಿಕತೆಯ ದೊಡ್ಡ ಕೊಡುಗೆ. ಇದರ ವಿರುದ್ಧ ಯಾರೂ ಮಾತನಾಡುತ್ತಿಲ್ಲ.

ಇರಲಿ. ಅರವತ್ತು, ಎಪ್ಪತ್ತು, ಎಂಭತ್ತರ ದಶಕದಲ್ಲಿ ಬರುತ್ತಿದ್ದ ಚಲನಚಿತ್ರಗಳಲ್ಲಿ ರಾಜ್‌ಕುಮಾರ್ ಮೇಲ್ಕಾಣಿಸಿದ ಸಂಬಂಧಗಳ ಬಹುತೇಕ ಪಾತ್ರಗಳನ್ನ ಅಭಿನಯಿಸಿದ್ದಾರೆ. ಅವುಗಳ ಗುಣ-ವಿಶೇಷಣಗಳನ್ನು ಕಣ್ಣಿಗೆ ಕಟ್ಟುವಂತೆ ಕೆತ್ತಿದ್ದಾರೆ. ಅವುಗಳ ಮೂಲಕ ಮಮತೆ, ಪ್ರೀತಿ, ವಾತ್ಸಲ್ಯವನ್ನು ದೃಗ್ಗೋಚರಿಸಿದ್ದಾರೆ. ಅಲ್ಲೊಬ್ಬ ಆದರ್ಶ ಅಪ್ಪ, ಇನ್ನೊಬ್ಬ ಜವಾಬ್ದಾರಿಯ ಅಣ್ಣ, ವಿಧೇಯ ತಮ್ಮ, ಶ್ರೀರಾಮಚಂದ್ರನಂಥ ಪತಿ ಹೀಗೆ ತಾವು ಅಭಿನಯಿಸಿದ ಪಾತ್ರಗಳ ಮೂಲಕ ಸಾಮಾಜಿಕ ಮೌಲ್ಯಕ್ಕೆ ಒಂದು ಚೌಕಟ್ಟು ಹಾಕಿಕೊಟ್ಟಿದ್ದಾರೆ. ಇದನ್ನು ನೋಡಿದ ಪ್ರೇಕ್ಷಕ, ಅಣ್ಣ ಎಂದರೆ ಹೀಗಿರಬೇಕು, ಅಪ್ಪ ಎಂದರೆ ಹೀಗಿರಬೇಕು, ಗಂಡ ಎಂದರೆ ಹೀಗಿರಬೇಕು ಎಂದು ತಲೆದೂಗಿದ್ದಾರೆ. ಎಷ್ಟೋ ಮಂದಿ ಈ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅನುಸರಿಸಿದ್ದಾರೆ, ಅನುಕರಿಸಿದ್ದಾರೆ, ಆನಂದಿಸಿದ್ದಾರೆ. ಆದರೆ ಇದಾವುದೂ ಕಣ್ಣಿಗೆ ಕಾಣುವಂಥದ್ದಲ್ಲ. ಏನು ಮಾಡುವುದು? ಪ್ರಾಯಶಃ ಇಂದು ರಾಜ್‌ಕುಮಾರ್ ಬದುಕಿದ್ದರೆ ಇನ್ನಷ್ಟು ಬೆಲೆಯುಳ್ಳ ಚಿತ್ರಗಳನ್ನು ಕೊಟ್ಟಿರುತ್ತಿದ್ದರು.

ಇಂದೂ ಕೂಡ ನಮ್ಮ ಚಿತ್ರರಂಗದ ಭಂಡಾರದಲ್ಲಿ ಶ್ರೀರಾಮ, ಹರಿಶ್ಚಂದ್ರ, ಸರ್ವಜ್ಞ, ಮಯೂರ, ಪುಲಕೇಶಿ ಭಕ್ತಕುಂಬಾರ, ಕನಕದಾಸ, ಪುರಂದರದಾಸ, ರಾಘವೇಂದ್ರ ಸ್ವಾಮಿ, ಕೃಷ್ಣದೇವರಾಯ, ಮುಂತಾದ ಪಾತ್ರಗಳು ವಿಜೃಂಭಿಸುತ್ತಿವೆ. ಇವುಗಳಲ್ಲಿ ಡಾ.ರಾಜ್ ಅವರನ್ನು ಬಿಟ್ಟು ಯಾರನ್ನು ಊಹಿಸಿಕೊಳ್ಳುವುದು ಹೇಳಿ?

ಮತ್ತೆ ಡಬ್ಬಿಂಗ್ ವಿಚಾರಕ್ಕೆ ಬರುತ್ತೇನೆ.

ಹನ್ನೆರಡು ವರ್ಷಗಳ ಹಿಂದೆ ನಾನು ಚೆನ್ನೈನ ರಾಧಿಕಾ ಶರತ್ ಅವರ ಕಚೇರಿಯಲ್ಲಿ ಕುಳಿತಿದ್ದೆ. ಸೀರಿಯಲ್ ಒಂದರ ನಿರ್ಮಾಣದ ಕುರಿತಾಗಿ ಚರ್ಚಿಸಲು ನನ್ನನ್ನು ಕರೆಸಿದ್ದರು. ಆಗ ಹೀಗೇ ನಮ್ಮ ಚಲನಚಿತ್ರ ಕ್ಷೇತ್ರದ ಬಗ್ಗೆ ಮಾತನಾಡುತ್ತಾ ರಾಧಿಕಾ ಒಂದು ಮಾತನ್ನು ಕೇಳಿದ್ದರು.

`Is Mr.Rajkumar still strong in your film industry?’
`Yes, very much’ ಎಂದು ನಾನು ಹೇಳಿದ್ದೆ.
`Then, it’s impossible to dub our serial in Kannada…’

ಪ್ರಾಯಶಃ ಅವರು ತಮಿಳಿನಲ್ಲಿ ಹೆಸರುವಾಸಿಯಾಗಿದ್ದ ತಮ್ಮ ‘ಚಿತ್ತಿ’ ಎಂಬ ಧಾರಾವಾಹಿಯೊಂದನ್ನು ಕನ್ನಡಕ್ಕೆ ಡಬ್ ಮಾಡಲು ಯೋಚಿಸಿದ್ದರು ಎಂದು ಕಾಣುತ್ತದೆ. ಆಮೇಲೆ ಈ ಪ್ರಸ್ತಾಪ ಬಿಟ್ಟು ಬೇರೆ ಮಾಡಿದರು ಎನ್ನಿ. ಆದರೆ ಇಂದು ರಾಜ್‌ಕುಮಾರ್ ಇಲ್ಲ ಎಂಬುದನ್ನೇ ಬಂಡವಾಳ ಮಾಡಿಕೊಂಡು ಕನ್ನಡ ಚಲನಚಿತ್ರರಂಗದ ಮೇಲೆ ಧಾಳಿ ಮಾಡಲು ಅದೆಷ್ಟು ಜನ ಕತ್ತಿಮಸೆಯುತ್ತಿದ್ದಾರೋ ಏನೋ? ಇದರಲ್ಲಿ ಹೊರಶತೃಗಳೂ ಇದ್ದಾರೆ, ಹಾಗೆಯೇ ಒಳಶತೃಗಳೂ ಸಾಕಷ್ಟು ಸಂಖ್ಯೆಯಲ್ಲೇ ಇದ್ದಾರೆ ಎನ್ನಿ.

* * *
ರಾಜಕೀಯ ನನ್ನಗಲ್ಲ… ಓದನ್ನು ಮುಂದುವರೆಸಿ

ಒಂದು ಪ್ರಶ್ನೆ ಪತ್ರಿಕೆ!

1. ‘ಡಿಸೆಂಬರ್ 1’ ರ ಸ್ಥೂಲ ಕಥಾ ನಕ್ಷೆ?

ಅದೊಂದು ಉತ್ತರಕರ್ನಾಟಕದ ಒಂದು ಪುಟ್ಟ ಹಳ್ಳಿ. ಅಲ್ಲಿ ರೊಟ್ಟಿ ಮಾರಿ ಜೀವನ ಸಾಗಿಸುತ್ತಿರುವ ದೇವಕ್ಕನದ್ದು ಒಂದು ಪುಟ್ಟ ಕುಟುಂಬ. ಗಂಡ ಮಾದೇವಪ್ಪ ಟ್ರಕ್ ಓಡಿಸುತ್ತಾ ಸೀಮೆ ಸುತ್ತುತ್ತಿದ್ದವನು, ಅಪಘಾತದಲ್ಲಿ ಕಾಲು ಊನ ಮಾಡಿಕೊಂಡು ಈಗ ಹಿಟ್ಟಿನ ಗಿರಣಿಯಲ್ಲಿ ಚಿಕ್ಕಾಸಿಗೆ ದುಡಿಯುತ್ತಿದ್ದಾನೆ. ಗ್ರಾಮವಾಸ್ತವ್ಯದ ಹಿನ್ನೆಲೆಯಲ್ಲಿ ಡಿಸೆಂಬರ್ ಒಂದರಂದು ರಾಜ್ಯದ ಮುಖ್ಯಮಂತ್ರಿಗಳು ಆ ಮನೆಯಲ್ಲಿ ತಂಗುವ ನಿರ್ಧಾರ ಮಾಡುತ್ತಾರೆ. ದಿಢೀರನೆ ಮಾದೇವಪ್ಪ ದಂಪತಿಗಳಿಗೆ ಎಲ್ಲಿಲ್ಲದ ಪ್ರಾಮುಖ್ಯತೆ ಬರುತ್ತದೆ. ದೇವಕ್ಕನ ರೊಟ್ಟಿಗೆ ಡಿಮ್ಯಾಂಡ್ ಸೃಷ್ಟಿಯಾಗುತ್ತದೆ. ಮುಖ್ಯಮಂತ್ರಿಗಳ ಹೆಸರಿನಲ್ಲಿ ಕರೆಂಟು, ಟೀವಿ, ಫ್ರಿಜ್ಜು, ಸೋಫಾ ಬಂದು ಕೂರುತ್ತವೆ. ಆದರೆ ಸಿ‌ಎಂ ಉಳಿಯಲು ದೇವಕ್ಕನ ಮನೆಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಬಡತನವನ್ನು ಮೀರಿದ ಕಾರಣಗಳಿರುತ್ತವೆ. ಯಾವಾಗಲೂ ಬ್ರೇಕಿಂಗ್ ನ್ಯೂಸ್‍ಗೆ ಹಸಿದಿರುವ ಮಾಧ್ಯಮದ ಪ್ರತಿನಿಧಿಯೊಬ್ಬ ಆ ಕಾರಣವನ್ನು ಪತ್ತೆ ಮಾಡುತ್ತಾನೆ. ಸಿ‌ಎಂ ಬಂದು ಹೋದಮೇಲೆ ಅದು ಮಾಧ್ಯಮಗಳಲ್ಲಿ ರಟ್ಟಾದಾಗ ಇಡೀ ಹಳ್ಳಿ ಬೆಚ್ಚಿಬೀಳುತ್ತದೆ. ಈ ಕುಟುಂಬದ ಬದುಕು ಛಿದ್ರವಾಗುತ್ತದೆ!
Dec-1

2. ‘ಡಿಸೆಂಬರ್ 1’ ಕೃತಿಯಾಗಿ ರೂಪು ತಳೆದದ್ದು ಹೇಗೆ? (ಕಥೆ ಹೊಳೆದ ಕಥಾ ಸಮಯ, ಚಿತ್ರದ ಮೇಕಿಂಗ್ ಗಾಗಿ ಪಟ್ಟ ಕಷ್ಟ ಇತ್ಯಾದಿ)

ಪತ್ರಿಕೆಯೊಂದರಲ್ಲಿ ಬಂದ ಸಣ್ಣ ವರದಿಯೊಂದು ಈ ಕಥೆ ಹೊಳೆಯಲು ಕಾರಣವಾಯಿತು. ಸುಮಾರು ಎಂಟು ತಿಂಗಳು ಈ ಸುದ್ದಿಯ ಬೆನ್ನು ಹಿಡಿದು ಕರ್ನಾಟಕದ ಹಲವು ಹಳ್ಳಿಗಳನ್ನು ಸುತ್ತಿದೆ. ಮುಖ್ಯಮಂತ್ರಿಗಳು ಗ್ರಾಮವಾಸ್ತ್ಯವ್ಯ ಹೂಡಿದ್ದ ಮನೆಗಳ ಕದ ತಟ್ಟಿಬಂದೆ. ನಿಧಾನವಾಗಿ ನನ್ನ ಚಿತ್ರದ ಸ್ಪಷ್ಟ ರೂಪ ಸಿಕ್ಕಿತು. ಆಮೇಲೆ ಇದರ ಆವರ ಕುರಿತು ಚಿಂತಿಸಿದೆ. ನನ್ನ ಹಿಂದಿನ ಚಿತ್ರಗಳಲ್ಲಿ ಇಲ್ಲಿಯವರೆಗೆ ಬರದೇ ಇದ್ದ ಉತ್ತರ ಕರ್ನಾಟಕದ ಸೀಮೆ, ಭಾಷಾ ಸೊಗಡನ್ನು ಯಥಾವತ್ತಾಗಿ ಹಿಡಿದಡಲು ನಿರ್ಧರಿಸಿದೆ. ಹಳ್ಳಿ ಹುಡುಕುವುದೇ ತ್ರಾಸವಾಯಿತು. ಸಿಮೆಂಟ್ ಕಟ್ಟಡವಿಲ್ಲದ, ಸೀಮೆ ಮನೆಗಳೇ ಇರುವ ಒಂದು ಬೀದಿ ನನಗೆ ಬೇಕಿತ್ತು. ಇದಕ್ಕಾಗಿ ಎಷ್ಟು ಚಪ್ಪಲಿ ಸವೆಸಿದೆನೋ! ಕೊನೆಗೆ ಅದನ್ನು ಹುಬ್ಬಳ್ಳಿ ಬಳಿಯ ಶಿರಗುಪ್ಪಿಯಲ್ಲಿ ಕಂಡೆ. ನಂತರದ್ದು ಪಾತ್ರವರ್ಗ. ಇದರಲ್ಲಿ ಉತ್ತರಕರ್ನಾಟಕದ ಸ್ಥಳೀಯ ಕಲಾವಿದರನ್ನೇ ಬಳಸಬೇಕೆಂದು ನಿರ್ಧರಿಸಿದೆ. ಸುಮಾರು ಒಂದೂವರೆ ಸಾವಿರ ಜನರ ಆಡಿಷನ್ ಮಾಡಿ, ಅದರಲ್ಲಿ ಸುಮಾರು ನೂರಿಪ್ಪತ್ತು ಜನರನ್ನು ಆಯ್ಕೆ ಮಾಡಿಕೊಂಡೆ. ಅವರೆಲ್ಲರೂ ಈ ಚಿತ್ರದಲ್ಲಿದ್ದಾರೆ. ಇದರಲ್ಲಿ ಕೇವಲ ಮೂರು ಮಂದಿ ಮಾತ್ರ (ನಿವೇದಿತ, ದತ್ತಣ್ಣ, ಶಶಿ) ಬೆಂಗಳೂರಿನವರು.

3. ‘ಡಿಸೆಂಬರ್ 1’ ಚಿತ್ರವನ್ನು ಜನರು ಇಷ್ಟ ಪಟ್ಟು ನೋಡಲು 5 ಅತಿ ಪ್ರಮುಖ ಕಾರಣಗಳು?

ಒಂದು ಮುಖ್ಯವಾಹಿನಿ ಚಿತ್ರದಂತೆ ಇದನ್ನು ನೀವು ನೋಡಲೇ ಬೇಕು, ನೋಡದಿದ್ದರೆ ಮಿಸ್ ಮಾಡಿಕೊಳ್ಳುತ್ತೀರಿ ಎಂದೆಲ್ಲ ಹೇಳುವುದು ನನಗೆ ಕಷ್ಟ. ಒಂದು ಒಳ್ಳೆಯ ಕೃತಿಯನ್ನು ಓದಿದಾಗ ಸಿಗುವ ಅನುಭವ, ಒಂದು ಒಳ್ಳೇ ಸಂಗೀತ ಕೇಳಿದಾಗ ಸಿಗುವ ಆನುಭೂತಿ ಈ ಚಿತ್ರ ನೋಡಿದಾಗಲೂ ಆಗಬಹುದು ಎಂದು ಮಾತ್ರ ಹೇಳಬಲ್ಲೆ. ಹಾಂ! ಇನ್ನೊಂದು ಮಾತನ್ನು ಹೇಳಲೇಬೇಕು. ಒಂದು ಪ್ರಶಸ್ತಿಯೋ, ಪುರಸ್ಕಾರವೋ ಬಂದ ತಕ್ಷಣ ಅದೊಂದು ಆರ್ಟ್ ಫಿಲಂ, ಅವಾರ್ಡ್ ಫಿಲಂ ಎಂದು ಮೂಗು ಮುರಿಯುವವರು ಮೊದಲು ಇದನ್ನು ನೋಡಿ ನಂತರ ನಿರ್ಧರಿಸಲಿ.

4. ‘ರಾಜಕೀಯ ಚಿತ್ರ’ ಮಾಡುವಾಗ ಸಂಕಟಗಳಿರುತ್ತವೆಯೆ? ಅಥವಾ ಈ ಚಿತ್ರ ಮಾಡುವಾಗ `ಧರ್ಮ ಸಂಕಟ’ ಏನಾದರೂ ಇತ್ತೆ …?

ಡಿಸೆಂಬರ-1 ಅನ್ನು ನಾನು ರಾಜಕೀಯ ಚಿತ್ರ ಎಂದು ಕರೆಯುವುದಿಲ್ಲ. ಬಹುಶಃ ಒಂದು ರಾಜಕೀಯದ ಹಿನ್ನೆಲೆಯಲ್ಲಿ ಬಂದಿರುವ ಚಿತ್ರ ಎನ್ನಬಹುದೇನೋ. ಮುಖ್ಯ ಧರ್ಮಸಂಕಟ ಎಂದರೆ, ಗ್ರಾಮವಾಸ್ತವ್ಯದ ಹೆಸರು ಕೇಳಿದ ತಕ್ಷಣ ಇದನ್ನು ಮತ್ತಾವುದಕ್ಕೋ ತಳಕು ಹಾಕುತ್ತಾರಲ್ಲ ಅದು ಸ್ವಲ ಕಷ್ಟ.

5. ‘ಭಾರತ್ ಸ್ಟೋರ್ಸ್’ ಚಿತ್ರವನ್ನು ಪಕ್ಷವೊಂದು ’ಪ್ರಮೋಟ್’ ಮಾಡಿದಂತೆ, ’ಡಿಸೆಂಬರ್ 1’ ಮತ್ತೊಂದು ಪಕ್ಷದ ಚಿತ್ರವಾದೀತೇ?

ನಿಜವಾಗಿಯೂ ಹೇಳ್ತೇನೆ, `ಭಾರತ್ ಸ್ಟೋರ್ಸ್’ ನ ಬೆಳವಣಿಗೆ ನನಗೆ ಅನಿರೀಕ್ಷಿತ. ಯಾರಿಗೆ ಯಾವ ಚಿತ್ರದಲ್ಲಿ ಏನು ಕಾಣಿಸುತ್ತದೆಯೋ! ಹೇಗೋ ಒಟ್ಟಿನಲ್ಲಿ ಚಿತ್ರಗಳು ಹೆಚ್ಚು ಜನರನ್ನು ತಲಪಿದರೆ ಅದಕ್ಕಿಂತ ಬೇರೆ ಸಂತೋಷ ಇನ್ನೇನಿದೆ? ಒಟ್ಟಾರೆ ನನ್ನ ಚಿತ್ರಗಳ ಉದ್ದೇಶವಂತೂ ರಾಜಕೀಯ ಪ್ರೇರಿತವಲ್ಲ. ನಿಮಗೆ ಗೊತ್ತೆ? `ಭಾರತ್ ಸ್ಟೋರ್ಸ್’ ಹಿಂದಿಯಲ್ಲಿ ಡಬ್ ಆಗುವ ಮಾತುಕತೆ ನಡೆಯುತ್ತಿದೆ!

6.ಈ ಚಿತ್ರದ ದತ್ತಣ್ಣನವರ ಪಾತ್ರ ಮತ್ತು ಅವರ ಅಬಿನಯದ ಬಗ್ಗೆ ಹೇಳುವಿರಾ?

ದತ್ತಣ್ಣನದು ಇದರಲ್ಲಿ ಮುಖ್ಯಮಂತ್ರಿಯ ಪಾತ್ರ. ಅವರು ಈ ಹಿಂದೆ ಬೇರೆ ಚಿತ್ರಗಳಲ್ಲಿ ಮಂತ್ರಿ, ಮುಖ್ಯಮಂತ್ರಿ, ರಾಜ್ಯಪಾಲರಾಗಿಯೂ ಅಭಿನಯಿಸಿದ್ದರಂತೆ. ಅವುಗಳಲ್ಲಿ ಒಂದೋ ಕೆಟ್ಟವ ಇಲ್ಲವೇ ತೀರ ಒಳ್ಳೆಯವವ. ಆದರೆ ಇಲ್ಲಿ ಅವರದ್ದು ಬ್ಲಾಕ್ ಅಂಡ್ ವೈಟ್ ಎರಡೂ ಶೇಡ್ ಇರುವ ಪಾತ್ರ. ಕೇವಲ ಚಿತ್ರ ಹತ್ತು-ಹದಿನೈದು ನಿಮಿಷ ಬಂದು ಹೋಗುವ ಪುಟ್ಟ ಪಾತ್ರವಾದರೂ ಪರಿಣಾಮಕಾರಿಯಾಗಿದೆ.

7. ನಿವೇದಿತಾರಿಗೆ ಈ ಚಿತ್ರ ಎಷ್ಟು ಪ್ರಮುಖವಾಗಲಿದೆ?

ಆಕೆಯನ್ನು ನಾನು ಕನ್ನಡದ ಸ್ಮಿತಾಪಾಟೀಲ್ ಎಂದು ಕರೆಯುತ್ತೇನೆ. ಶ್ರದ್ಧೆಯಿಂದ ತನ್ನ ಕೆಲಸ ನಿರ್ವಹಿಸಿದ್ದಾಳೆ. ಒಳ್ಳೇ ಭವಿಷ್ಯವಿದೆ. ಕಲಾತ್ಮಕ ಚಿತ್ರಗಳ ಕ್ವೀನ್ ಆದರೂ ಆಶ್ಚರ್ಯವಿಲ್ಲ.

8. ಚಿತ್ರದ youtube ಲಿಂಕ್ ನೋಡಿದಾಗ ಛಾಯಾಗ್ರಹಣ ಸೊಗಸಾಗಿದೆ ಎನ್ನಿಸಿತು, ಛಾಯಾಗ್ರಹಕರ ಕುರಿತು?

ಅಶೋಕ್ ವಿ.ರಾಮನ್ ಅವರಿಗೆ ನಾನು ಈ ಚಿತ್ರದಲ್ಲಿ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೆ. ಅವರು ಅದನ್ನು ಸದ್ಬಳಕೆ ಮಾಡಿಕೊಂಡಿರುವುದನ್ನು ನೀವೇ ಕಾಣಬಲ್ಲಿರಿ. ತುಂಬ ಆಸಕ್ತಿಯಿಂದ ಕೆಲಸ ಮಾಡಿದ್ದಾರೆ. ಎಸ್.ರಾಮಚಂದ್ರ, ಎಚ್‍ಎಂ, ಭಾಸ್ಕರ್ ಇವರ ಸಾಲಿನಲ್ಲಿ ನಿಲ್ಲುವ ಪ್ರತಿಭೆಯಿರುವ ವ್ಯಕ್ತಿ. ಚಿತ್ರೀಕರಣ ಮುಗಿದ ಮೇಲೆ ನನ್ನ ಕೆಲಸ ಮುಗಿಯಿತು ಎನ್ನುವ ಮನೋಭಾವದವನಲ್ಲ. ಡಬ್ಬಿಂಗ್, ರೀರೆಕಾರ್ಡಿಂಗ್, ಮಿಕ್ಸಿಂಗ್ ಎಲ್ಲ ಹಂತಗಳಲ್ಲೂ ನಮ್ಮೊಂದಿಗೆ ಕೂತಿದ್ದಾರೆ, ಚಿತ್ರವನ್ನು ರೂಪಿಸುವುದರಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ. ಇದು ನನಗೆ ಅವರಲ್ಲಿ ಇಷ್ಟವಾದ ಸ್ವಭಾವ.

9. ರಾಜಕಾರಣವನ್ನು ಸೂಕ್ಷ್ಮವಾಗಿ ಗ್ರಹಿಸುವವರಿಗೆ ಮಾತ್ರ ಹೊಳೆವ ಸಂಗತಿ – ’ಡಿಸೆಂಬರ್ 1′ … ನಿಮ್ಮ ಜೀವನದಲ್ಲಿ ನೀವೆಷ್ಟು ಈ ಕ್ಷೇತ್ರದ ಕುರಿತು ಆಸಕ್ತಿ ವಹಿಸುತ್ತೀರಿ? ಚುನಾವಣೆಯ ಈ ಘಟ್ಟದಲ್ಲಿ ಇಂದಿನ ರಾಜಕೀಯ ನಿಮ್ಮ ಮುಂದಿನ ಕಥಾ ವಸ್ತು ಆದರೂ ಆಗಬಹುದಲ್ಲ!

ನಿಜವಾಗಿಯೂ ನನಗೆ ರಾಜಕೀಯ ಕೊಂಚವೂ ಇಷ್ಟವಿಲ್ಲದ ಕ್ಷೇತ್ರ. ಈ ಚುನಾವಣಾ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ಇವರ ವಿಚಿತ್ರ ದೊಂಬರಾಟವನ್ನು ಕಂಡರೆ ಅಚ್ಚರಿ ಹುಟ್ಟುತ್ತದೆ. ಇವರ ತಂತ್ರ-ಪ್ರತಿತಂತ್ರ ಯಾವ ಚಿತ್ರಕ್ಕಾದರೂ ಸೊಗಸಾದ ವಸ್ತುವಾಗಬಹುದು. ಆದರೆ ನಾನು ಇದನ್ನು ಹೊರಗಿನಿಂದ ಮಾತ್ರ ಕಂಡಿದ್ದೇನೆ. ಒಳಹೊಕ್ಕರೆ ಇನ್ನೂ ಏನೇನಿದೆಯೋ?

10.ನೀವು ಇಷ್ಟಪಡುವ 5 ಭಾರತೀಯ ನಿರ್ದೇಶಕರು?

ಇದನ್ನು ಐದಕ್ಕೇ ಸೀಮಿತಗೊಳಿಸುವುದು ಕಷ್ಟ. ಒಂದೊಂದು ಚಿತ್ರದ ನಿರ್ದೇಶಕ ಒಂದೊಂದು ಕಾರಣಕ್ಕೆ ಇಷ್ಟವಾಗುತ್ತಾನೆ. ಅದೇ ನಿರ್ದೇಶಕನ ಬೇರೆ ಚಿತ್ರ ಇಷ್ಟವಾಗದೇ ಇರುವುದೂ ಉಂಟು.

11. ಇಂದಿನ ಸಿನೆಮಾ ಪತ್ರಿಕೋದ್ಯಮದ ಕುರಿತು ನಿಮ್ಮ ಅಭಿಪ್ರಾಯವೇನು?

ಏನು ಹೇಳಲಿ? ಸಾಹಿತ್ಯ ಕ್ಷೇತ್ರದಲ್ಲಿ ಕಾಣಿಸುವ ವಸ್ತುನಿಷ್ಠ ವಿಮರ್ಶೆ, ಚರ್ಚೆಗಳು ಚಲನಚಿತ್ರಗಳ ಕುರಿತು ಆಗುತ್ತಿಲ್ಲ ಎಂಬ ವಿಷಾದವಿದೆ. ಸಿನಿಮಾ ಎಂದರೆ ಬರೀ ಮನರಂಜನೆ ಕೊಡುವ ಕೃತಿ ಎಂಬಂತೆ ಭಾವಿಸುತ್ತಾರೆ. ಸಿನಿಮಾ ಅಷ್ಟೇ ಅಲ್ಲ, ಅಲ್ಲವೆ?

12. ನೀವು ಸೆಲೆಬ್ರಿಟಿಯಾಗಿ ಎದುರಿಸುವ ಮುಜುಗರಗಳೇನು?

ಹಾಗೇನಿಲ್ಲ… ನಮಗ್ಯಾವ ಸೀಮೆ ಫೇಸ್ ವ್ಯಾಲ್ಯೂ ಇದೆ?

13. ನಿಮಗೆ ಅತಿ ಇಷ್ಟವಾದ ಜಗತ್ತಿನ 5 ಚಿತ್ರಗಳು?

ಸಿಟಿ ಲೈಟ್ಸ್ (ಚಾಪ್ಲಿನ್), ಬ್ಯಾಟ್ಲ್‍ಶಿಪ್ ಪೊಟಮ್‍ಕಿನ್ (ಐಸೆನ್‍ಸ್ಟೈನ್), ಬೈಸಿಕಲ್ ಥೀವ್ಸ್ (ಡಿಸಿಕ), ದಿ ಬಡ್ರ್ಸ್ (ಹಿಚ್‍ಕಾಕ್), ರೊಷೊಮನ್ (ಕುರಸೋವ)

14. ಚಿತ್ರಕಥೆ ಮಾಡುವಾಗ ಒಬ್ಬ ಹೊಸ ಕಥೆಗಾರನಿಗೆ ನೀವು ಕೊಡುವ ಟಿಪ್ಸ್ ಏನು? ಒಂದು ಸ್ಕ್ರಿಪ್ಟ್ ಬರಯುವಾಗ ನಿಮ್ಮ ಸಿದ್ಧತೆ ಹೇಗಿರುತ್ತದೆ?

ಮೊದಲು ನಾನು ಚಿತ್ರಕಥೆಯ ಸ್ಥೂಲ ರೂಪದ ನಕ್ಷೆಯನ್ನು ಮನಸ್ಸಿನಲ್ಲೇ ಹೆಣಿಗೆ ಮಾಡಿಕೊಳ್ಳುತ್ತೇನೆ. ಬೆಳಗ್ಗೆ ವಾಕ್ ಮಾಡುವಾಗ, ಸ್ನಾನ ಮಾಡುವಾಗ, ಡ್ರೈವ್ ಮಾಡುವಾಗ ಹೀಗೆ ಒಬ್ಬನೇ ಇರುವಾಗ ಸುಮ್ಮನೇ ಅದರ ಕುರಿತೇ ಧ್ಯಾನಿಸುತ್ತೇನೆ. ಆಗಾಗ ಹೊಳೆದದ್ದನ್ನೆಲ್ಲ ನೋಟ್ಸ್ ಮಾಡಿಕೊಳ್ಳುತ್ತೇನೆ. ನನ್ನ ಸ್ನೇಹಿತರ ವಲಯಕ್ಕೆ ಅದನ್ನು ನಿರೂಪಿಸುತ್ತೇನೆ. ಆಗ ಹೊಸ ಹೊಸ ವಿಚಾರಗಳು ತಾನಾಗೇ ಹೊಳೆಯುತ್ತವೆ. ಅವನ್ನು ಒಟ್ಟುಗೂಡಿಸಿಕೊಂಡು ಮೊದಲು ಸಿಂಗಲ್‍ಲೈನ್ (ಚಿತ್ರಕಥಾ ಸಾರಾಂಶ) ಬರೆಯುತ್ತೇನೆ. ಆ ವಸ್ತುವಿಗೆ ಶಕ್ತಿಯಿದ್ದರೆ ಅದೇ ತನ್ನಷ್ಟಕ್ಕೆ ತಾನೇ ಅರಳಿಕೊಳ್ಳುತ್ತಾ ಹೋಗುತ್ತದೆ. ಮಧ್ಯೆ ತೊಡಕು ಉಂಟಾದರೆ ಅದನ್ನು ಸ್ವಲ್ಪ ಕಾಲ ಮುಚ್ಚಿಟ್ಟುಬಿಡುತ್ತೇನೆ. ಒಮ್ಮೆ ಸಿಂಗಲ್ ಲೈನ್ ಆಗಿಬಿಟ್ಟರೆ ಮಿಕ್ಕದ್ದು ನನಗೆ ಸುಲಭ.

15. “ಮುನ್ನುಡಿ’ಯ ಕಾಲದಿಂದ ’ಡಿಸೆಂಬರ್ 1′ ರ ವರೆಗಿನ ನಿಮ್ಮ ಪಯಣದಲ್ಲಿ ನಿಮಗೆ ಸಿಕ್ಕ ಅತಿ ದೊಡ್ಡ ಕಾಂಪ್ಲಿಮೆಂಟ್ ಏನು?

ನನ್ನ `ಬೇರು’ಚಿತ್ರ ಕರ್ನಾಟಕದಲ್ಲಿ ಆರನೇ ತರಗತಿಗೆ ಪಠ್ಯವಾಗಿರುವುದು. ಮತ್ತು ಕೆ‌ಎ‌ಎಸ್ ಓದುವವರು ಮೈಸೂರಿನಲ್ಲಿರುವ ಅಡ್‍ಮಿಸ್ಟ್ರೇಷನ್ ಟ್ರೈನಿಂಗ್ ಇನ್ಸ್‍ಟಿಟ್ಯೂಟ್‍ನಲ್ಲಿ ಮೂರು ತಿಂಗಳ ಟ್ರೈನಿಂಗ್ ಪಡೆದುಕೊಳ್ಳುತ್ತಾರೆ. ಅಲ್ಲೂ ಇವರಿಗೆ `ಬೇರು’ ಚಿತ್ರವನ್ನು ಬೋಧಿಸುತ್ತಾರೆ!

16. ‘ಡಿಸೆಂಬರ್ 1’ ನಿಮಗೆ ರಾಷ್ಟ್ರಪ್ರಶಸ್ತಿ ತರಲಿದೆ ಎಂಬಷ್ಟು ಒಳ್ಳೆಯ ಅಭಿಪ್ರಾಯವಿದೆ, ಈ ಚಿತ್ರ ನಿಜವಾಗಿಯೂ ಆ ಚಮತ್ಕಾರ ತೋರಲಿದೆಯೇ? ನಿಮ್ಮ ಹಿಂದಿನ ಎಲ್ಲ ಸಿನಿಮಾಗಳಿಗೆ ಹೋಲಿಸಿದಲ್ಲಿ ಇದು ಹೇಗೆ ಹೊಸತು ಅಥವಾ ವಿಭಿನ್ನ?

ನನ್ನ ಒಂದೊಂದು ಚಿತ್ರ ಒಂದೊಂದು ಕಾರಣಕ್ಕೆ ವಿಭಿನ್ನವಾಗಿಯೇ ಇದೆ ಎಂದು ಭಾವಿಸುತ್ತೇನೆ. `ಡಿಸೆಂಬರ್-1’ ನ್ನು ಅವೆಲ್ಲವುಕ್ಕಿಂತ ಚನ್ನಾಗಿದೆ ಎಂದು ನೋಡಿದವರು ಹೇಳುತ್ತಾರೆ. ಇದೆಲ್ಲ ನಾನು ಮಾಡಿದೆ ಎನ್ನುವುದಕ್ಕಿಂತ ಅದು ಆಗಿದೆ ಎಂದು ಮಾತ್ರ ಹೇಳಬಲ್ಲೆ. ಇನ್ನು ರಾಷ್ಟ್ರಪ್ರಶಸ್ತಿ ಬರುತ್ತದೋ ಇಲ್ಲವೋ ಅದನ್ನು ಈಗಲೇ ಹೇಳುವುದು ಕಷ್ಟ. ಈ ಸಲ ಭಾರತದ ಎಲ್ಲ ಭಾಗಗಳಿಂದ ಸೇರಿ ಒಟ್ಟು ಮುನ್ನೂರ ಹತ್ತು ಚಿತ್ರಗಳು ಸ್ಪರ್ಧೆಯಲ್ಲಿವೆ ಎಂದು ಸರ್ಕಾರ ಹೇಳಿದೆ. ಇದೊಂದು ದಾಖಲೆ! ಹದಿನಾಲ್ಕು ವರ್ಷಗಳ ಹಿಂದೆ ನನ್ನ ಮೊದಲ ಚಿತ್ರ `ಮುನ್ನುಡಿ’ ಸ್ಪರ್ಧೆಯಲ್ಲಿದ್ದಾಗ ಕಣದಲ್ಲಿದ್ದದ್ದು ಸುಮಾರು ಎಪ್ಪತ್ತು ಚಿತ್ರಗಳು. ಈ ಸಲ ಏನಾಗುತ್ತದೆಯೋ ಗೊತ್ತಿಲ್ಲ, ಮರಕ್ಕಿಂತ ಮರ ದೊಡ್ಡದಿರುತ್ತದೆ ಅಲ್ಲವೇ?

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಹೊಸ ಅಲೆ/ಪ್ರಯೋಗಶೀಲತೆ ಈಗ ಹೇಗಿದೆ?

ಹಿಂದೆ ನಮ್ಮ ದೇಶದಲ್ಲಿ `ಹೊಸ ಅಲೆ’ ಯ ಚಿತ್ರಗಳಲ್ಲಿ ಮೊದಲ ಸ್ಥಾನ ಬೆಂಗಾಲಿ ಚಿತ್ರಗಳಿಗೆ, ಎರಡನೆಯದು ಕೇರಳಕ್ಕೆ ಮೂರನೆಯದು ಕರ್ನಾಟಕಕ್ಕೆ ಇತ್ತು. ಈಗ ನಾವು ಆ ಸ್ಥಾನವನ್ನು ಮರಾಠಿಗೆ ಮತ್ತು ಇತರೆ ಭಾಷೆಗಳಿಗೆ ಬಿಟ್ಟುಕೊಟ್ಟಿದ್ದೇವೆ. ನಮ್ಮಲ್ಲಿ ಪ್ರಯೋಗಶೀಲತೆ ಕಡಿಮೆಯಾಗಿದೆ. ಬೇರೆ ಭಾಷೆಗಳಲ್ಲಿ ಬಂದಷ್ಟು ಹೊಸಬರು ಇಲ್ಲಿ ಬರುತ್ತಿಲ್ಲ. ಬಂದರೂ ಅವರೂ ಏಕೋ ವಿಭಿನ್ನವಾಗಿ ಯೋಚಿಸಿ ಚಿತ್ರ ಮಾಡುತ್ತಿಲ್ಲ. ಕೈಯಲ್ಲಿ 15-20 ಲಕ್ಷ ಇಟ್ಟುಕೊಂಡು ಹೊರಡುತ್ತಾರೆ. ಅಂದುಕೊಂಡದ್ದನ್ನು ತೆರೆಯ ಮೇಲೆ ತರಲಾರದೆ ಅವರ ಚಿತ್ರಗಳು ಸೊರಗುತ್ತವೆ. ಬೇರೆ ಭಾಷೆಗಳಲ್ಲಿ ನಮ್ಮ ಧಾಟಿಯ ಚಿತ್ರಗಳ ಬಜೆಟ್ ಕನಿಷ್ಠ ಒಂದು ಕೋಟಿ ಇರುತ್ತದೆ. ಅಲ್ಲಿ ಬಂಡವಾಳ ಹಿಂತಿರುಗಿ ಬರುವ ಮಾರ್ಗಗಳಿವೆ. ಅಲ್ಲಿ ಸ್ಯಾಟಿಲೈಟ್ ರೈಟ್ಸೇ ಎಪ್ಪತ್ತು ಎಂಬತ್ತು ಲಕ್ಷಕ್ಕೆ ಹೋಗುತ್ತದೆ. ನಮ್ಮಲ್ಲಿ ಈ ಚಿತ್ರಗಳನ್ನು ಯಾರೂ ಮೂಸಿಯೂ ನೋಡುತ್ತಿಲ್ಲ. ನಿಮಗೇ ಗೊತ್ತಿರುವಂತೆ ಕನ್ನಡದ ಕಲಾತ್ಮಕ ಚಿತ್ರಗಳ ಬಜೆಟ್ ಮೂವತ್ತು-ನಲವತ್ತು ಲಕ್ಷ ದಾಟಿಲ್ಲ. ಮಿತಿಗಳಲ್ಲೇ ಕೆಲಸ ಮಾಡಬೇಕು. ಸಹಜವಾಗಿ ಅದರ ಕೊರತೆ ನಮ್ಮ ಚಿತ್ರಗಳ ಮೇಲೆ ಆಗುತ್ತದೆ. ಮರಾಠಿಯಲ್ಲಿ ಅತ್ಯುತ್ತಮ ಚಿತ್ರಗಳನ್ನು ತಯಾರಿಸುತ್ತಿದ್ದಾರೆ. ಅವರ ಮಲ್ಟಿಪ್ಲೆಕ್ಸ್‍ಗಳಲ್ಲಿ ಮರಾಠಿ ಚಿತ್ರ ಪ್ರದರ್ಶಿಸಲೇಬೇಕು ಎಂಬ ಕಾನೂನಿದೆ. ಅಲ್ಲಿ `ಎ’ ಗ್ರೇಡ್ ಚಿತ್ರಕ್ಕೆ ನಲವತ್ತು ಲಕ್ಷ, `ಬಿ’ ಗ್ರೇಡ್ ಚಿತ್ರಕ್ಕೆ ಮೂವತ್ತು ಲಕ್ಷ ಸಬ್ಸಿಡಿ ಕೊಡುತ್ತಾರೆ. ನಮ್ಮಲ್ಲಿ ನೂರು ಚಿತ್ರಗಳಿಗೆ ತಲಾ ಹತ್ತು ಲಕ್ಷ ಹಂಚುತ್ತಾರೆ! ಜೊತೆಗೆ ನಮ್ಮಲ್ಲಿ ಏಕೋ ಈ ಚಿತ್ರಗಳ ಕುರಿತು ಅವಗಣನೆ ಹೆಚ್ಚು. ನೀವು ನಮ್ಮ ಚಿತ್ರಗಳ ಕುರಿತು ಮಾತಾಡುತ್ತಿದ್ದೀರಲ್ಲ ಥ್ಯಾಂಕ್ಸ್!

(೨೬ ಮಾರ್ಚ್ ೨೦೧೪ ರಂದು ‘ಕನ್ನಡಪ್ರಭ’ದಲ್ಲಿ ಪ್ರಕಟವಾದ ಸಂದರ್ಶನ)

ಜಲಪಾತದಲ್ಲಿ ‘ಅಜ್ಜಿಗುಂಡಿ.ಕಾಮ್’!

ನಾವು ಈ ‘ಅಜ್ಜಿಗುಂಡಿ’ಯನ್ನು ತಲುಪಿದಾಗ ಇಳಿ ಸಂಜೆಯಾಗುತ್ತಿತ್ತು.

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಸುಮಾರು ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿದೆ ಈ ಅಜ್ಜಿಗುಂಡಿ ಫಾಲ್ಸ್. ನನ್ನೊಂದಿಗೆ ಕುಂ.ವೀರಭದ್ರಪ್ಪ, ಪ್ರಜಾವಾಣಿಯ ಸಂಪಾದಕರಾದ ಶಾಂತಕುಮಾರ್, ಡಿ.ಎಸ್.ಚೌಗಲೆ, ರವೀಂದ್ರಭಟ್ ಐನಕೈ ಹಾಗೂ ಡಿ‌ಎಂ ಹೆಗಡೆ ಇದ್ದರು. ನಾವು ಜಲಪಾತ ನೋಡಲು ಹೋದವರಲ್ಲ. ಆ ಜಲಪಾತದಲ್ಲಿ ನಡೆಯುವ ನಾಟಕ ನೋಡಲು ಹೋದವರು! ಆಶ್ಚರ್ಯ ಆಗುತ್ತಿದೆಯೇ? ಹೌದು, ನಾವು ನೋಡಲು ಹೋದದ್ದು ಜಲಪಾತದಲ್ಲಿ ನಡೆಯಲಿದ್ದ ‘ಅಜ್ಜಿಗುಂಡಿ.com’ ಎಂಬ ನಾಟಕವನ್ನು! ಮುಂಚೆಯೇ ಹೇಳಿದ್ದರು. ಇಲ್ಲಿ ಸ್ಟೇಜ್ ಇಲ್ಲ, ಕುರ್ಚಿ ಇಲ್ಲ, ಟಿಕೆಟ್ ಕೂಡ ಇಲ್ಲ ಎಂದು!
Ajjigundi

ನಾಟಕಗಳನ್ನು ರಂಗದ ಮೇಲೆ ಆಡುವುದನ್ನು ನಾವು ನೋಡಿದ್ದೇವೆ. ಬೀದಿಯಲ್ಲಿ ಆಡುವುದನ್ನೂ ಕಂಡಿದ್ದೇವೆ. ರಂಗಾಯಣದಲ್ಲಿ ಮರ-ಗಿಡಗಳ ನಡುವೆ ‘ವನರಂಗ’ದಲ್ಲೂ ರಂಗಪ್ರದರ್ಶನ ಆಗಿರುವುದನ್ನು ಕಂಡಿರುವುದುಂಟು. ಇತ್ತೀಚೆಗೆ ಬೆಂಗಳೂರಿನ ಕಲಾಗ್ರಾಮದ ನಿಸರ್ಗದ ನಡುವೆ ಅಹೋರಾತ್ರಿ ನಡೆದ ‘ಮಲೆಗಳಲ್ಲಿ ಮದುಮಗಳು’ ನಾಟಕವನ್ನು ಕೂಡ ಕಂಡು, ನಾನು ಬೆರಗಾಗಿದ್ದೆ. ಆದರೆ ಈ ಜಲಪಾತದಲ್ಲಿ ನಾಟಕ ಹೇಗೆ? ಏನು? ಎತ್ತ? ನಾಟಕ ನೋಡುವ ದಿನ ಹತ್ತಿರ ಬಂದಂತೆಲ್ಲ ನನ್ನಲ್ಲಿನ ಕುತೂಹಲವೂ ಹೆಚ್ಚುತ್ತಲೇ ಇತ್ತು.

ನಾನು ಯಲ್ಲಾಪುರಕ್ಕೆ ನಾಟಕ ನೋಡಲು ಹೋಗಲಿರುವ ಸುದ್ದಿ ತಿಳಿದ ಮಿತ್ರರೊಬ್ಬರು ನಗುತ್ತಾ, ‘ಅಲ್ಲ, ಜಲಪಾತದಲ್ಲಿ ನಾಟಕವೇ! ಇವರಿಗೆ ನಾಟಕವಾಡಲು ಬೇರೆ ಜಾಗ ಸಿಗಲಿಲ್ಲವೆ? ಮರದ ಮೇಲೆ ಮಂಗನಂತೆ ನೆಗೆಯುತ್ತಾ ನಾಟಕವಾಡಬೇಕಿತ್ತು’ ಎಂದಿದ್ದರು. ಅಲ್ಲೂ ನಾಟಕ ಆಡಿದ್ದಾರೆ. ಆಲದಮರದ ಬಿಳಲುಗಳ ಮೇಲೆ ನಾಟಕ ಯಶಸ್ವಿಯಾಗಿತ್ತಂತೆ ಅಂದೆ. ನನ್ನ ಮಿತ್ರರು ಸೋಲಲಿಲ್ಲ. ಹಾಗಾದರೆ ಇವರು ಸ್ಮಶಾನವೊಂದನ್ನು ಬಿಟ್ಟಿರಬೇಕು ಎಂದರು. ನಾನು ತಣ್ಣಗೆ, ಅಲ್ಲೂ ನಾಟಕವಾಗಿದೆ ಎಂದಾಗ ಅವರು ಮುಂದೆ ಮಾತಾಡಿರಲಿಲ್ಲ. ಮರ, ಸ್ಮಶಾನ, ಸಮುದ್ರ ಅಷ್ಟೇ ಅಲ್ಲ, ಉತ್ತರಕರ್ನಾಟಕದ ಯಾಣದ ಗುಹೆಯಲ್ಲೂ ನಾಟಕವಾಡಿಸಿದ್ದಾರೆ ಈ ಕೆ.ಆರ್.ಪ್ರಕಾಶ್ ಎಂಬ ಮಹಾನುಭಾವ!

ಇವೆಲ್ಲವುಗಳ ನಂತರದ ಮುಂದಿನ ಸಾಹಸವೇ ಮಾರ್ಚ್ ಒಂದರಂದು ಸಂಜೆ ಜಲಪಾತದಲ್ಲಿ ನಾಟಕ ಮತ್ತು ಎರಡರಂದು ಸಂಜೆ ಬಾವಿಯಲ್ಲಿ ನಾಟಕ! ನನ್ನನ್ನು ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಕರೆದಾಗ ಹಿಂದೆ-ಮುಂದೆ ನೋಡದೆ ಒಪ್ಪಿಕೊಂಡಿದ್ದೆ.

ಒಂದು ವಾರದ ಮುಂಚೆ ನನ್ನ ಕೈಗೆ ನಾಟಕದ ಪಾಂಪ್ಲೆಟ್ ಸಿಕ್ಕಿತು. ಅದರಲ್ಲಿ ಹೀಗೆ ಬರೆಯಲಾಗಿತ್ತು:

‘ವಿಶಿಷ್ಟ ರಂಗ ಪ್ರಯೋಗ ಇದಾಗಿದ್ದು, ಇಲ್ಲಿ ರಂಗಮಂದಿರ ಇಲ್ಲ! ಕುಳಿತುಕೊಳ್ಳಲು ಕುರ್ಚಿಕೂಡಾ ಇಲ್ಲ! ಪ್ರಕೃತಿ ನಡುವಿನ ಇಳಿಜಾರಿನ ಜಾಗದಲ್ಲಿ ನೆಲದ ಮೇಲೆ ಕುಳಿತು ನಾಟಕ ವೀಕ್ಷಿಸಬಹುದಾಗಿದೆ. ತಾರಗಾರಿನ ‘ಅಜ್ಜಿಗುಂಡಿ’ಗೆ ಬರುವವರು ಅರ್ಧಗಂಟೆ ಮುಂಚಿತವಾಗಿ ಬಂದು ಸ್ಥಳವನ್ನು ಕಾಯ್ದಿರಿಸಿಕೊಳ್ಳಬೇಕು. ಊಟ-ತಿಂಡಿ, ನೀರು ಒಳಗೊಂಡಂತೆ ಅಗತ್ಯವಸ್ತುಗಳು ನಿಮ್ಮೊಂದಿಗಿರಲಿ. ಬ್ಯಾಟರಿ ಕೂಡಾ!’

ಇದನ್ನು ಓದಿ ನನಗೆ ಅಚ್ಚರಿಯಾಯಿತು. ಇಷ್ಟು ತ್ರಾಸ ತೆಗೆದುಕೊಂಡು ಯಾರು ನಾಟಕ ನೋಡಲು ಬರುತ್ತಾರೆ? ಇದೊಂದು ಗಿಮಿಕ್ ಇರಬಹುದು ಅಷ್ಟೇ ಎಂದು ನನ್ನ ಮನಸ್ಸಿನ ಮೂಲೆಯಲ್ಲಿ ಒಂದು ಸಣ್ಣ ಅನುಮಾನ ಹುಟ್ಟಿದ್ದು ಸುಳ್ಳಲ್ಲ. ಆದರೆ ಇವರ ಹಿಂದಿನ ಪ್ರದರ್ಶನಗಳು ಯಶಸ್ವಿಯಾಗಿವೆ ಎಂದು ನನ್ನ ಜೊತೆಯಲ್ಲಿದ್ದ ಪತ್ರಕರ್ತ ಮಿತ್ರರಾದ ರವೀಂದ್ರಭಟ್ ಹೇಳಿದಾಗ ಸ್ವಲ್ಪ ಗಂಭೀರವಾಗಿಯೇ ಘಟ್ಟ ಇಳಿದಿದ್ದೆ.

ವಜ್ರಳ್ಳಿಯ ಈ ಪರಿಸರಕ್ಕೆ ಒಂದು ಹಂತದವರೆಗೆ ಮಾತ್ರ ಕಾರು ಇತ್ಯಾದಿ ವಾಹನಗಳು ಹೋಗುತ್ತವೆ. ಆಮೇಲೆ ‘ಅಜ್ಜಿಗುಂಡಿ ಜಲಪಾತ’ಕ್ಕೆ ಸುಮಾರು ಐನೂರಕ್ಕೂ ಹೆಚ್ಚು ಅಡಿ ಕೆಳಕ್ಕೆ ಇಳಿದೇ ಹೋಗಬೇಕು. ಪ್ರಪಾತಕ್ಕೆ ಇಳಿದಿರುವ ಅನುಭವ ನಿಮಗಿದ್ದರೆ ಸುಮ್ಮನೆ ಊಹಿಸಿಕೊಳ್ಳಿ. ನಾವು ಕೈಗೆ ಸಿಕ್ಕ ಬಂಡೆ ತುದಿ, ಬಳ್ಳಿ-ಕಾಂಡ ಇವನ್ನು ಹಿಡಿದು, ಕಾರಂತರ ‘ಬೆಟ್ಟದ ಜೀವ’ ಕಾದಂಬರಿಯ ಶಿವರಾಮಯ್ಯನಂತೆ ಚತುಷ್ಪಾದಿಯಾಗಿ ಕೆಳಗಿಳಿದಿದ್ದೆವು. ಇಳಿಯುತ್ತಾ ಹೋದಂತೆ ನಮಗೆ ಜಲಪಾತದ ನೀರು ಧುಮ್ಮಿಕ್ಕುವ ಸದ್ದು ಸ್ಪಷ್ಟವಾಗಿ ಕೇಳಿಸತೊಡಗಿತು. ಒಂದೆಡೆ ನಿಂತು ಸುತ್ತಲೂ ನೋಡಿದರೆ ಶಾಮಿಲಿ ನದಿ, ಅಜ್ಜಿಗುಂಡಿಯಲ್ಲಿ ಧುಮ್ಮಿಕ್ಕಿ, ಬಳುಕುತ್ತಾ ನಡೆದಿದ್ದಳು. ಅಲ್ಲಲ್ಲಿ ಬ್ಯಾಟರಿ ಹಿಡಿದ ವಜ್ರಳ್ಳಿ ಆಸುಪಾಸಿನ ಗ್ರಾಮಸ್ಥರು, ಮಕ್ಕಳು, ಮಹಿಳೆಯರು ಉತ್ಸಾಹದಿಂದ ನಾಟಕ ನೋಡಲು ನರೆದಿದ್ದಾರೆ!

ಸಭಾಂಗಣ ಆಗಲೇ ಭರ್ತಿಯಾಗಿತ್ತು! ಸಂಭಾಂಗಣ ಎಂದರೆ ಏನು? ನೀರಿನ ಮಧ್ಯೆ ಇರುವ ತುಂಡು ತುಂಡು ಬಂಡೆಗಲ್ಲುಗಳು, ಏರಿ, ಗುಡ್ಡೆ, ಮರ, ಗಿಡಗಳ ಬುಡ, ಇನ್ನೂ ಕೆಲವರು ರೆಂಬೆಗಳ ಮೇಲೆ ಏರಿ ಕುಳಿತಿದ್ದಾರೆ! ನನಗೆ ಆಶ್ಚರ್ಯ ಹುಟ್ಟಿಸಿದ್ದು ಅಲ್ಲಿದ್ದ ಮಕ್ಕಳು ಮತ್ತು ಮಹಿಳೆಯರ ಸಂಖ್ಯೆ. ಈಗ ನನ್ನ ಮನಸ್ಸಿನ ಮೂಲೆಯಲ್ಲಿದ್ದ ಅನುಮಾನ ಸಂಪೂರ್ಣವಾಗಿ ಕರಗಿ ಹೋಯಿತು. ಓಹೋ! ಇವರೇನೋ ಪವಾಡ ಮಾಡಲಿದ್ದಾರೆ ಎಂದು ಖಚಿತವಾಗಿ ಅನ್ನಿಸತೊಡಗಿತ್ತು. ಅಲ್ಲಿ ನಮ್ಮನ್ನು ಎದುರುಗೊಂಡ ನಾಟಕದ ಕರ್ತೃ, ನಿರ್ದೇಶಕ ಪ್ರಕಾಶ್ ಸುಮಾರು ಮೂವತ್ತೈದರ ಆಸು-ಪಾಸಿನಲ್ಲಿರುವ ಕುರುಚಲುಗಡ್ಡದ ವ್ಯಕ್ತಿ. ಒಂದು ದೊಗಳೆ ಶರ್ಟ್ ಹಾಕಿಕೊಂಡು, ತುಂಡು ಪಂಚೆ ಉಟ್ಟಿದ್ದರು. ಆ ವ್ಯಕ್ತಿಯನ್ನು ನೋಡಿದರೆ ವಿಶೇಷ ಅನ್ನಿಸುವಂತಿರಲಿಲ್ಲ ಆದ್ರೆ ಅಲ್ಲಿ ನಡೆದಿದ್ದ ತಯಾರಿ ನಿಜವಾಗಿಯೂ ವಿಶೇಷವಾಗಿತ್ತು!

ವಿಶಾಲವಾಗಿ ಹರಡಿಕೊಂಡಿದ್ದ ಜಲಪಾತದ ಮುಂದೆ ಪ್ರಾಕೃತಿಕವಾಗಿ ನಿರ್ಮಿತವಾಗಿದ್ದ ಕಲ್ಲು, ಬಂಡೆಗಳ ಸ್ಥಳವೇ ನಮ್ಮ ವೇದಿಕೆಯಾಗಿತ್ತು. ಅದರ ಹಿಂದೆ ಒಂದು ಬ್ಯಾನರ್. ಅದರ ಹಿಂದೆ ಸುಮಾರು ಎಪ್ಪತ್ತು ಅಡಿಯಿಂದ ಸಣ್ಣಗೆ ಧುಮ್ಮಿಕ್ಕುತ್ತಿದ್ದ ಜಲಪಾತ. ಅಲ್ಲಿದ್ದ ಸ್ಥಳೀಯರನ್ನೊಬ್ಬರನ್ನು ನಾನು ಕೇಳಿದೆ. ಇದಕ್ಕೆ ‘ಅಜ್ಜಿಗುಂಡಿ’ ಎಂದು ಏಕೆ ಕರೆಯುತ್ತಾರೆ? ಅವರು ಕಥೆ ಹೇಳಿದರು. ಬಹಳ ಹಿಂದೆ ಅಜ್ಜಿಯೊಬ್ಬಳು ಬಂದು ಇಲ್ಲಿ ಮೇಲಿಂದ ಧುಮುಕಿ ಪ್ರಾಣ ಬಿಟ್ಟಿದ್ದಳಂತೆ ಅಂದಿನಿಂದ ಇದನ್ನು ಅಜ್ಜಿಗುಂಡಿ ಎಂದು ಕರೆಯುತ್ತಾರೆ. ಅಜ್ಜಿಯ ಪ್ರೇತಾತ್ಮ ಅಲೆಯುತ್ತಿರಬಹುದಾದ ಈ ಜಾಗಕ್ಕೆ ನಾವು ರಾತ್ರಿ ನಾಟಕ ನೋಡಲು ಬಂದಿದ್ದೇವೆ!

ಅದೇ ವ್ಯಕ್ತಿ ಮುಂದುವರಿಸುತ್ತಾ ಇನ್ನೊಂದು ಬಾಂಬ್ ಹಾಕಿದರು! ಈ ಅಜ್ಜಿಗುಂಡಿಯಲ್ಲಿ ವರ್ಷೊಂಬತ್ತು ಕಾಲವೂ ನೀರು ಹಿಂಗುವುದಿಲ್ಲ. ಈಗ ನೀವು ನೋಡುತ್ತಿರುವ ನೀರು ನೀರೇ ಅಲ್ಲ. ಇವತ್ತು ನಾಟಕ ಇರುವುದರಿಂದ, ಅಲ್ಲಿ ಘಟ್ಟದ ಮೇಲೆ ನದಿಗೆ ಅಡ್ಡಲಾಗಿ ಕಟ್ಟೆ ಕಟ್ಟಿ, ನೀರನ್ನು ಅರುಗು ಮಾಡಿ ಅತ್ತ ಹರಿಸಿದ್ದೇವೆ. ಎಲಾ ಎಲಾ! ಇವರು ಕಟ್ಟಿರುವ ತಾತ್ಕಾಲಿಕ ಕಟ್ಟೆ ನದಿಯ ರಭಸವನ್ನು ತಡೆದೀತೆ? ನಾವು ನಾಟಕ ನೋಡುತ್ತಿದ್ದಾಗ ಕಟ್ಟೆ ಒಡೆದು ಹೋದರೆ ಏನಪ್ಪಾ ಗತಿ? ಸುನಾಮಿಯಂತೆ ನೀರು ಏರಿಬಂದು ನಮ್ಮನ್ನೆಲ್ಲ ಕೊಚ್ಚಿಕೊಂಡು ಹೋಗುವುದಿಲ್ಲವೆ? ಈಗ ತಾನೇ ಕಷ್ಟಪಟ್ಟು ಘಟ್ಟ ಇಳಿದು ಬಂದಿದ್ದೆ. ಮತ್ತೆ ಮೇಲೆ ಹತ್ತಿಹೋಗಲು ನನ್ನಲ್ಲಿ ಶಕ್ತಿಯಿರಲಿಲ್ಲ. ಧೈರ್ಯಮಾಡಿ ಕುಳಿತೆ. ನನ್ನ ಲೈಫ್ ಇನ್ಷೂರೆನ್ಸ್ ಪಾಲಿಸಿಯನ್ನು ಎರಡು ತಿಂಗಳ ಹಿಂದೆ ರಿನೀವಲ್ ಮಾಡಿಸಿಟ್ಟಿರುವು ನೆನಪಿಗೆ ಬಂದು ಕೊಂಚ ಸಮಾಧಾನ ಆಯಿತು. ಅಟ್‌ಲೀಸ್ಟ್ ಮೊಬೈಲ್‌ನಲ್ಲಿ ಮನೆಯವರಿಗೆ ಮೆಸೇಜ್ ಕಳಿಸೋಣ ಎಂದರೆ ಸಿಗ್ನಲ್ ಕೂಡ ಪಡ್ಚ!

ಇಷ್ಟರಲ್ಲಾಗಲೇ ಸೂರ್ಯ ಪೂರ್ತಿ ಮುಳುಗಿದ್ದ. ಈ ಪುಣ್ಯಾತ್ಮರುಗಳು ಎಲ್ಲಿಂದಲೋ ಜನರೇಟರ್ ತಂದು ಕೇಬಲ್ ಎಳೆದು ಕೃತಕ ನಾಟಕದ ಲೈಟುಗಳು ಉರಿಸಿ ವೇದಿಕೆ ಝಗಮಗಿಸುವಂತೆ ಮಾಡಿದ್ದರು. ನಾಟಕಕ್ಕೆ ಮುಂಚೆ ಪುಟ್ಟ ಸಮಾರಂಭ ಬೇರೆ ಇತ್ತು. ಅದನ್ನು ಉದ್ಘಾಟಿಸುತ್ತಾ ಮಾತಾಡಿದ ಕುಂ.ವೀರಭದ್ರಪ್ಪವನವರು ಈ ವಿಶಿಷ್ಟ ಪ್ರಯತ್ನವನ್ನು ತಮ್ಮದೇ ಧಾಟಿಯಲ್ಲಿ ಹಾಡಿಹೊಗಳಿದರು. ನಂತರ ನಮ್ಮ ಡಿ.ಎಸ್.ಚೌಗಲೆಯವರಿಗೆ 2014ನೇ ಸಾಲಿನ ರಂಗಪ್ರಶಸ್ತಿಯನ್ನು ಪ್ರಜಾವಾಣಿ ಸಂಪಾದಕರಾದ ಶಾಂತಕುಮಾರ್ ಅವರು ಪ್ರದಾನ ಮಾಡಿದರು. ನಾನೆರಡು ಮಾತಾಡಿ ಕುಳಿತೆ. ಅರ್ಧಗಂಟೆಯಲ್ಲಿ ಸಭಾ ಕಾರ್ಯಕ್ರಮ ಮುಗಿಯಿತು. ನಮ್ಮನ್ನು ಅಲ್ಲಿಂದ ಏಳಿಸಿ, ಈಗ ನಾಟಕ ಪ್ರಾರಂಭವಾಗಲಿದೆ, ಅಲ್ಲಿ ಹೋಗಿ ಪ್ರೇಕ್ಷಕರ ಮಧ್ಯೆ ಕುಳಿತುಕೊಳ್ಳಿ ಎಂದರು. ನಮ್ಮ ಸೀಟುಗಳು ರಿಸರ್ವ್ ಆಗಿರಲಿಲ್ಲ. ಥೋ, ಸೀಟೆ ಇಲ್ಲ ಎಂದಮೇಲೆ ರಿಸರ್ವೇಶನ್ ಎಲ್ಲಿಂದ ಬರಬೇಕು? ನಾವು ಬೆಂಗಳೂರಿನಿಂದ ಬಂದಿದ್ದೇವೆ ಎಂಬ ಕರುಣೆಯಿಂದ ಯಾರೋ ಎದ್ದು ಒಂದೊಂದು ಪುಟ್ಟ ಬಂಡೆಯನ್ನು ನಮಗೆ ಬಿಟ್ಟುಕೊಟ್ಟರು.

ಕಟ್ಟಿದ್ದ ಬ್ಯಾನರ್ ಬಿಚ್ಚಿ ವೇದಿಕೆಯನ್ನು ಕ್ಷಣದಲ್ಲಿ ಸಿದ್ಧಗೊಳಿಸಿದರು. ವೇದಿಕೆ ಎಂದರೆ ಏನು ಅಂತೀರಿ? ಜಲಪಾತ, ನೀರು, ಮರ, ಗಿಡ ಅಷ್ಟೇ! ನಿರ್ದೇಶಕ ಪ್ರಕಾಶ್ ಮೈಕ್ ಹಿಡಿದು ಪ್ರಾಸ್ತಾವಿಕವಾಗಿ ನಾಲ್ಕು ಮಾತಾಡುತ್ತಾ, ಎಲ್ಲ ಪ್ರೇಕ್ಷಕರೂ ಹುಷಾರಾಗಿ ಕುಳಿತುಕೊಳ್ಳಿ. ಹೆಚ್ಚು ಕೊಸರಾಡಲು ಹೋಗಬೇಡಿ. ನಿಮ್ಮ ಅಕ್ಕ-ಪಕ್ಕ, ಕಾಲಿನ ಕೆಳಗಿರುವ ಕಲ್ಲು, ಮಣ್ಣು ಉರುಳಿ ನಿಮ್ಮ ಮುಂದಿನ/ಕೆಳಗಿನವರ ಮೇಲೆ ಬೀಳಬಹುದು ಎಂಬ ಎಚ್ಚರಿಕೆಯನ್ನು ಕೊಟ್ಟರು.

ಅಷ್ಟರಲ್ಲಾಗಲೇ ನಾವು ಕುಳಿತ ಬಂಡೆ ನಮ್ಮ ಪೃಷ್ಠಕ್ಕೆ ಒತ್ತಿ ಅಲ್ಲಲ್ಲೆ ರಕ್ತಸಂಚಾರ ನಿಂತು ಮರಗಟ್ಟಿದ ಅನುಭವಾಗುತ್ತಿತ್ತು. ಆದರೆ ಈ ಹುಡುಗರ ಸಾಹಸದ ಮುಂದೆ ನಮ್ಮ ಈ ಕೆಳಗಿನ ಕಷ್ಟ ಏನೇನೂ ಅಲ್ಲ ಎಂದು ಸಮಾಧಾನ ಮಾಡಿಕೊಂಡು ಕುಳಿತಲ್ಲೇ ಕೊಂಚ ಕೊಂಚ ಸರಿಯುತ್ತಾ ಕುಳಿತೆ.
ಹಿನ್ನೆಲೆಯಲ್ಲಿ ತಾಳ-ಮದ್ದಲೆ ಆರಂಭವಾಯಿತು. ಜೊತೆಗೆ ಲೈಟ್ ಜಲಪಾತದ ಎಡ ಬದಿಯ ಸ್ಥಳಕ್ಕೆ ಮತ್ತು ಬಲಬದಿಯ ರಂಗಕ್ಕೆ ಫೋಕಸ್ ಆಯಿತು. ಎರಡೂ ಕಡೆ ಯಕ್ಷಗಾನದ ಒಂದೊಂದು ಪಾತ್ರ ಬಂದು ಹೆಜ್ಜೆಹಾಕತೊಡಗಿತು. ನಾವು ನಮ್ಮ ಕತ್ತುಗಳನ್ನು ಎಡಕ್ಕೊಮ್ಮೆ, ಬಲಕ್ಕೊಮ್ಮೆ ತಿರುಗಿಸುತ್ತಾ ಕಣ್ತುಂಬಿಕೊಳ್ಳತೊಡಗಿದೆವು.

ಈ ದೃಶ್ಯಮುಗಿದ ನಂತರ, ಇದ್ದಕ್ಕಿದ್ದಂತೆಯೇ ಜಲಪಾತ ನೆತ್ತಿಯ ಮೇಲಕ್ಕೆ ಲೈಟ್ ಫೋಕಸ್ ಆಯಿತು. ಅಲ್ಲಿ ಒಂದು ಪುಟ್ಟ ಗುಡಿಸಲಿನ ಸೆಟ್ ಹಾಕಲಾಗಿದೆ! ಅಲ್ಲಿ ಮುದುಕಿಯೊಬ್ಬಳು ಜಗಲಿಯ ಮೇಲೆ ಕುಳಿತು ಮಾತಾಡತೊಡಗಿದಳು. ಅಯ್ಯೋ ಭಗವಂತಾ! ಈ ಮುದುಕಿ ಅಲ್ಲಿಗೆ ಯಾವಾಗ ಹತ್ತಿ ಹೋದಳು? ಒಂದೂ ಗೊತ್ತಿಲ್ಲ. ಆ ದೃಶ್ಯ ಮುಗಿದು ಜಲಪಾತದ ಮುಂದೆ ಲೈಟ್ ಬಂತು. ಅಲ್ಲೊಂದಿಷ್ಟು ಮಂದಿ ಬಂದು, ಸಂಭಾಷಣೆ ಹೇಳಿ ಜಲಪಾತದ ಮೇಲಿಂದ ಇಳಿಬಿಟ್ಟಿದ್ದ ಹಗ್ಗ ಹತ್ತಿ ಸರ ಸರನೆ ಎಪ್ಪತ್ತು ಅಡಿ ಏರಿ ಕತ್ತಲಲ್ಲಿ ಕರಗಿ ಹೋದರು! ಬಲಬದಿಯಲ್ಲಿ ನಾಲ್ಕನೇ ದೃಶ್ಯ. ಮರದ ಮೇಲೆ ಕುಳಿತು ಇಬ್ಬರು ಹೆಬ್ಬಾವನ್ನು ಕೈಯಲ್ಲಿ ಹಿಡಿದು ಮಾತಾಡಿದರು. ಅಲ್ಲೇ ಟಿವಿಯ ರಿಯಾಲಿಟಿ ಶೋ ಆಯಿತು. ಒಂದು ಹುಡುಗಿಯ ಹೆಣಬಿತ್ತು, ಪಂಚಾಯ್ತಿ ನಡೆಯಿತು… ಹೀಗೇ ಒಂದೊಂದು ದೃಶ್ಯವೂ ವಿಭಿನ್ನ, ವಿಶಿಷ್ಟ. ಎಲ್ಲ ಕಲಾವಿದರಿಗೂ ಕಾಲರ್ ಮೈಕ್ ಹಾಕಿದ್ದುದರಿಂದ ಎಲ್ಲರ ಮಾತುಗಳು ಸ್ಪಷ್ಟವಾಗಿ ಕೇಳುತ್ತಿದ್ದವು. ಒಬ್ಬ ಸಿದ್ದಿ ಜನಾಂಗದವನು ಆಡುತ್ತಿದ್ದ ಸ್ಲಾಂಗ್ ಮಾತ್ರ ಅರ್ಥವಾಗಲಿಲ್ಲ ಅಷ್ಟೇ.

ಒಟ್ಟಿನಲ್ಲಿ, ಸುಮಾರು ಒಂದೂವರೆ ಗಂಟೆಯ ಈ ನಾಟಕ ಬರೀ ನಾಟಕವಾಗಿರಲಿಲ್ಲ. ಒಂದು ಅನುಭವವಾಗಿತ್ತು. ಆಧುನಿಕ ಜಗತ್ತು ಹೇಗೆ ಹಳ್ಳಿಗಾಡನ್ನು ಆವರಿಸುತ್ತಾ ಇಲ್ಲಿಯ ಪರಿಸರವನ್ನು ನಿಧಾನವಾಗಿ ಬದಲಾಯಿಸುತ್ತಿದೆ. ಕಾಡು-ಮೇಡಿನಲ್ಲಿರುವವರು ಕೂಡ ನಗರವಾಸಿಗಳನ್ನು ಹೇಗೆ ಕಾಣುತ್ತಿದ್ದಾರೆ. ಟೀವಿಯವರ ಹುಚ್ಚಾಟಗಳು. ಜೊತೆಗೆ ನಗರದವರಲ್ಲಿರುವ ಹಳ್ಳಿಯ ಆಸೆ, ಹಳ್ಳಿಗರಲ್ಲಿರುವರಿಗೆ ನಗರ ಸೇರಿ ಸುಖಿಸುವ ಬಗೆಗಿನ ಬಯಕೆ. ಹಳ್ಳಿಗಳು ವೃದ್ಧಾಶ್ರಮವಾಗುತ್ತಿರುವ ಕುರಿತ ತಾಕಲಾಟ, ದ್ವಂದ್ವ ಇತ್ಯಾದಿ ಈ ಎಲ್ಲ ತಲ್ಲಣಗಳ ಕುರಿತ ಆಪ್ತ ಸಂವಾದ ಇದಾಗಿತ್ತು.
ನಾಟಕ ಮುಗಿದಾಗ ರಾತ್ರಿ ಹತ್ತೂವರೆ ಗಂಟೆ. ಒಮ್ಮೆಲೇ ಎಲ್ಲ ಕಡೆ ಲೈಟ್ ಹರಡಿದಾಗ ಕಂಡಿದ್ದು ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಪ್ರೇಕ್ಷಕರನ್ನ! ಇವರೆಲ್ಲಾ ಎಲ್ಲಿದ್ದರು ಮಾರಾಯ! ಒಬ್ಬನೇ ಒಬ್ಬ ಪ್ರೇಕ್ಷಕನೂ ಕುಳಿತಲ್ಲಿಂದ ಎದ್ದು ಹೋಗಿರಲಿಲ್ಲ. ನಾವು ಮೆಲ್ಲನೆ ಮೇಲೆದ್ದು ಸೊಂಟ ನೆಟ್ಟಗೆ ಮಾಡಿಕೊಂಡು ಎಲ್ಲರಿಗೂ ಶುಭರಾತ್ರಿ ಹೇಳಿ ಅಲ್ಲಿಂದ ಹೊಸ ಅನುಭವ ಹೊತ್ತು ಹೊರಬಿದ್ದೆವು.

ನನ್ನ ಇಷ್ಟೆಲ್ಲ ಮಾತುಗಳನ್ನು ಕೇಳಿದಮೇಲೆ ನಿಮಗೂ ಇದನ್ನು ನೋಡಬೇಕು ಅನ್ನಿಸಿರಬೇಕಲ್ಲವೆ? ಕ್ಷಮಿಸಿ. ಇದನ್ನು ನೀವು ಸದ್ಯಕ್ಕೆ ನೋಡಲು ಆಗುವುವಿಲ್ಲ! ಈ ರಂಗರೂಪಕವನ್ನು ಜಲಪಾತವಲ್ಲದೆ ಬೇರೆಲ್ಲೂ ಆಡಲು ಸಾಧ್ಯವೇ ಇಲ್ಲ. ಇಲ್ಲಿಯ ಜಲಪಾತಕ್ಕೂ, ಪರಿಸರಕ್ಕೂ, ಸ್ಥಳಕ್ಕೂ, ಮರಗಿಡಕ್ಕೂ ಒಂದಕ್ಕೊಂದು ಬಿಡಿಸಲಾರದ ಸಂಬಂಧವಿದೆ. ಈ ನಾಟಕ ನಿಮ್ಮೂರಲ್ಲಿ ಆಗಬೇಕೆಂದಿದ್ದರೆ ನೀವು ಜಲಪಾತವೊಂದನ್ನು ಹುಡುಕಿಟ್ಟಿರಬೇಕು. ಇಲ್ಲವೇ ಜಲಪಾತದ ಸೆಟ್ ಹಾಕಬೇಕು. ಸೆಟ್ ಹಾಕುವುದಂತೂ ಸಾಧ್ಯವಿಲ್ಲದ ಮಾತು ಬಿಡಿ. ಹಾಗಾಗಿ, ಹತ್ತಿರದಲ್ಲಿ ಇದರ ಇನ್ನೊಂದು ಶೋ ಆಗುತ್ತದೆ ಎಂಬ ನಂಬಿಕೆ ನನಗಿಲ್ಲ. ಬೇಕಿದ್ದರೆ ನನ್ನ ಮೊಬೈಲ್‌ನಲ್ಲಿ ನಾಲ್ಕೈದು ನಿಮಿಷದ ದೃಶ್ಯಗಳನ್ನು ಸೆರೆ ಹಿಡಿದಿದ್ದೇನೆ, (Please check this link: http://youtu.be/FXEnX42t-5A and http://youtu.be/0WZXjzUh9TI)

ಜಲಪಾತದಲ್ಲಿ ಇಂಥ ಸಾಹಸ ಮಾಡಿದ ಕೆ.ಆರ್.ಪ್ರಕಾಶ್ ತಂಡ ಮಾರನೆಯ ದಿನ ಬಾವಿಯಲ್ಲಿ ನಾಟಕವಾಡಿತು. ಅದರದ್ದು ಇನ್ನೊಂದು ಕಥೆ ಬಿಡಿ. ಇವರ ಪ್ರಯೋಗಶೀಲತೆಗೆ ನನ್ನದೊಂದು ಸಲಾಂ. ಈ ಯಪ್ಪ ಮುಂದೆ ಹೆಲಿಕ್ಯಾಪ್ಟರ್‌ನಲ್ಲಿ ನಾಟಕವಾಡಿಸಬೇಕು ಎಂದಿದ್ದಾರಂತೆ! ಉಶ್! ಅಬ್ಬಬ್ಬಾ!!

(ಈ ಲೇಖನ ಪ್ರಜಾವಾಣಿ (೨೩ ಮಾರ್ಚ್ ೨೦೧೪) ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿದೆ)

ಸಿಂಹನಿಗೆ ಸಿಂಹನೇ ಸಾಟಿ!

ಇಲ್ಲಿಗೆ ಸರಿಯಾಗಿ ಇಪ್ಪತ್ತೈದು ವರ್ಷಗಳ ಹಿಂದಿನ ಮಾತು.

ಆಗ ನಾನು ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೆ. ಎಂಭತ್ತರ ದಶಕದ ಕೊನೆಯಲ್ಲಿ ಸಿ.ಆರ್.ಸಿಂಹ ಕುಮಾರ್ ಬಂಗಾರಪ್ಪ ಅಭಿನಯದ ‘ಅಶ್ವಮೇಧ’ ಚಲನಚಿತ್ರದ ನಿರ್ದೇಶನದಲ್ಲಿ ತೊಡಗಿದ್ದರು. ಸಿಂಹ ಕಮರ್ಷಿಯಲ್ ಚಿತ್ರ ಕೈಗೆತ್ತಿಕೊಂಡದ್ದು ನಮಗೆಲ್ಲ ಅಚ್ಚರಿಯುಂಟು ಮಾಡಿತ್ತು. ಹಾಗಾಗಿ ಅವರನ್ನು ಈ ಕುರಿತು ಮಾತನಾಡಿಸಲು ಅವರ ಜಯನಗರದ ಮೂರನೇ ಬ್ಲಾಕಿನ ಮನೆಗೆ ಹೋಗಿದ್ದೆ. ಇದು ನನ್ನ ಅವರ ಮೊದಲ ಭೇಟಿ.

ನಾನು ಅವರನ್ನು ಕೇಳಿದ್ದ ಎರಡು ಪ್ರಶ್ನೆಗಳು ಇನ್ನೂ ನನ್ನ ನೆನಪಿನಲ್ಲಿವೆ.

ನಿಮಗಿಟ್ಟಿರುವ ಈ ‘ಸಿಂಹ’ ಹೆಸರಿನ ಬಗ್ಗೆ ನಿಮಗೆ ಖುಷಿಯಿದೆಯೋ, ವಿಷಾದವಿದೆಯೋ?

-ನಿಜ ಹೇಳ್ತೀನಿ. ನನಗೆ ಈ ನಾಯಿ, ಬೆಕ್ಕು ಕಂಡರೇನೆ ಭಯ! ಈ ‘ಸಿಂಹ’ ಅಂತ ಹೆಸರಿಟ್ಟು ಕೊಂಡು ಸಣ್ಣ-ಪುಟ್ಟ ಪ್ರಾಣಿಗಳಿಗೂ ಹೆದರುವಂತಾಯಿತಲ್ಲಾ ಅನ್ನೋ ವಿಷಾದವಿದೆ. ಹಾಗೇನೆ, ಒಳ್ಳೆಯ ಕೆಲಸ ಮಾಡಿ ಶಭಾಷ್ ಅನ್ನಿಸಿಕೊಂಡಾಗ ಈ ಹೆಸರಿಟ್ಟಿದ್ದಕ್ಕೆ ಸಾರ್ಥಕವಾಯಿತು ಅನ್ನೋ ಖುಷೀನು ಇದೆ.

‘ನೀವು ಕಲಾತ್ಮಕ ಚಿತ್ರಗಳನ್ನು ಬಿಟ್ಟು ಕಮರ್ಷಿಯಲ್ ಚಿತ್ರಗಳತ್ತ ಹೊರಳಿದಿರಲ್ಲಾ ಯಾಕೆ?

-ಒಂದು ಮಾತು ಹೇಳ್ತೀನಿ ಶೇಷಾದ್ರಿ, ಈ ಆರ್ಟ್ ಸಿನಿಮಾ ಮಾಡ್ತಾ ಸಾಯೋದಕ್ಕಿಂತ ಕಮರ್ಷಿಯಲ್ ಸಿನಿಮಾ ಮಾಡ್ತಾ ಬದುಕೋದು ವಾಸಿ? ಇದು ನನ್ನ ಸ್ವಂತ ಅನುಭವ. ಏನಂತೀರಿ?

ಎಂದು ಸೀರಿಯಸ್ ಆಗಿ ಹೇಳಿ, ಕ್ಷಣ ಬಿಟ್ಟು ಜೋರಾಗಿ ನಕ್ಕಿದ್ದರು.

ಸಿಂಹ ಇದ್ದ ಕಡೆ ನಗುವಿನದ್ದೇ ರಾಜ್ಯಭಾರ. ಅವರ ಬತ್ತಳಿಕೆಯಿಂದ ಜೋಕುಗಳು ಪುಂಖಾನುಪುಂಖವಾಗಿ ಹೊರ ಬರುತ್ತಿದ್ದವು. ಅಷ್ಟು ಆಕರ್ಷಕವಾದ ಮಾತುಗಾರಿಕೆ ಇವರದ್ದು. ಆದರೆ ಸಿಂಹ ತಾವು ಜೋಕ್ ಹೇಳುತ್ತಿದ್ದಾಗ ಮಾತ್ರ ತಪ್ಪಿಯೂ ನಗುತ್ತಿರಲಿಲ್ಲ, ಆದರೆ ಮಿಕ್ಕವರೆಲ್ಲಾ ಬಿದ್ದು ಬಿದ್ದು ನಗುತ್ತಿದ್ದರು.

ಅವರು ಹೇಳಿದ್ದ ಪಿ.ಲಂಕೇಶ್ ಬಗೆಗಿನ ಜೋಕ್ ಒಂದು ಹೀಗಿದೆ. ಇದು ಜೋಕ್ ಅಲ್ಲ ನಿಜವಾಗಿ ನಡೆದದ್ದು ಎಂದು ಸಿಂಹ ಒತ್ತಿ ಹೇಳುತ್ತಿದ್ದರು, ಜೊತೆಗೆ ಲಂಕೇಶ್ ಮತ್ತು ಆರತಿ ಅವರಂತೆಯೇ ಅದ್ಭುತವಾಗಿ ಅಭಿನಯಿಸಿ ತೋರಿಸುತ್ತಿದ್ದರು. ಸಿಂಹನ ಮಾತುಗಳಲ್ಲೇ ಇದನ್ನು ಕಟ್ಟಿಕೊಡಲು ಪ್ರಯತ್ನಿಸುತ್ತೇನೆ.

ಲಂಕೇಶ್ ಆಗ ‘ಅನುರೂಪ’ ಚಿತ್ರ ಮಾಡ್ತಿದ್ರು. ಆರತಿ ಆ ಚಿತ್ರದ ಹೀರೋಯಿನ್. ಆರತಿ ಶೂಟಿಂಗ್‌ಗೆ ಬರತಾರೆ ಅಂತ ನಮಗೆಲ್ಲ ಥ್ರಿಲ್ಲು. ಆದ್ರೆ ಆವತ್ತು ಬೆಳಗಿನಿಂದ ಲಂಕೇಶ್ ಟೆನ್ಷನ್‌ನಲ್ಲಿದ್ದರು. ಯಾಕೇಂದ್ರೆ ಆವತ್ತು ಅನಂತನಾಗ್ ಮತ್ತು ಆರತಿ ಮಧ್ಯೆ ಒಂದು ಪ್ರೇಮ ಪ್ರಸಂಗವನ್ನು ಚಿತ್ರೀಕರಿಸಬೇಕಿತ್ತು. ಅದನ್ನು ಹೇಗೆ ಚಿತ್ರೀಕರಿಸುವುದು ಎಂಬ ಬಗ್ಗೆ ಯೋಚಿಸಿ ಯೋಚಿಸಿ ಹೈರಾಣಾಗಿದ್ದರು. ಸಿಗರೇಟನ್ನು ಮುಷ್ಠಿಯ ಬೆರಳುಗಳ ಮಧ್ಯೆ ಸಿಕ್ಕಿಸಿಕೊಂಡು ಪುಫ್ ಪುಫ್ ಎಂದು ಸೇದುತ್ತಾ ಶತಪಥ ಹಾಕುತ್ತಿದ್ದರು.

ಅನಂತ್‌ನಾಗ್‌ಗೆ ಆಗಲೇ ದೃಶ್ಯವನ್ನು ವಿವರಿಸಿ ಆಗಿತ್ತು. ಆರತಿ ಸೆಟ್‌ಗೆ ಬಂದರು. ಮೇಕಪ್ ಎಲ್ಲ ಆಯಿತು. ಶಾಟ್ ರೆಡಿ ಆಯಿತು. ಲಂಕೇಶ್ ಆರತಿಯನ್ನು ಒಂದು ಪಕ್ಕಕ್ಕೆ ಕರೆದುಕೊಂಡು ಹೋಗಿ ಪ್ರೇಮ ದೃಶ್ಯವನ್ನು ವಿವರಿಸುತ್ತಾ, ನೋಡೀಮ್ಮ, ಅನಂತ್ ಇಲ್ಲಿ ಬಂಡೆ ಮೇಲೆ ಕೂತಿರತಾರೆ, ನೀವು ಅಲ್ಲಿಂದ ಬರತೀರಿ. ಬಂದವರೇ ಇವರನ್ನ ನೋಡಿ ಸಂತೋಷದಿಂದ ಓಡಿ ಬಂದು ಅಪ್ಪಿಕೋತೀರಿ. ಅಪ್ಪುಗೆ ಹೇಗಿರಬೇಕು ಅಂದ್ರೆ, ರೋಮಿಯೋ ಜೂಲಿಯಟ್ ಅಪ್ಪುಗೆ ಹಾಗಿರಬೇಕು. ಅಪ್ಪಿಕೊಂಡ ಮೇಲೆ ಇಬ್ರೂ ಕಿಸ್ ಮಾಡಬೋದು… ಯೆಸ್! ಯೆಸ್! ಯು ಶುಡ್ ಕಿಸ್ ಹಿಮ್!

ಆರತಿ ಒಂದು ಕ್ಷಣ ಯೋಚಿಸಿದವರಂತೆ ಮಾಡಿ, ಲಂಕೇಶ್ ಹತ್ರ ಬಂದು, ಅಲ್ಲಾ ಸರ್, ಅಪ್ಪಿಕೊಂಡು ಕಿಸ್ ಮಾಡೋದರ ಬದಲು, ನಾನು ಕಣ್ಣಲ್ಲೇ ಎಲ್ಲಾ ತೋರಿಸ್ಲಾ? ಎಂದು ಕೇಳಿದರು. ಲಂಕೇಶ್‌ಗೆ ಇದ್ದಕ್ಕಿದ್ದಂತೆ ಸಿಟ್ ಬಂದ್ ಬಿಡ್ತು. ಏನ್ರೀ ನೀವು! ಎಲ್ಲಾನೂ ಕಣ್ಣಲ್ಲೇ ತೋರಿಸ್ತೀನಿ ಅಂತೀರಿ. ಎಲ್ಲಾನೂ ಕಣ್ಣಲ್ಲೇ ತೋರಿಸೋ ಹಾಗಿದ್ರೆ ದೇವ್ರು ಮಿಕ್ಕಿದ್ದೆಲ್ಲಾ ಯಾಕ್ ಕೊಡ್ತಿದ್ದ? ದೊಽಽಽಡ್ಡದೊಂದು ಕಣ್ಣ ಕೊಟ್ಟು ಸುಮ್ಮನಿರತಿದ್ದ ಅಷ್ಟೇ… ನಾನು ಹೇಳಿದಷ್ಟು ಮಾಡಿ ಎಂದು ನಡೆದು ಹೋದರು.

ಇದನ್ನು ಓದುತ್ತಾ ನಿಮ್ಮ ಕಣ್ಣ ಮುಂದೆ ದೃಶ್ಯ ಹೇಗೆ ತೆರೆದುಕೊಂಡಿತೋ ಗೊತ್ತಿಲ್ಲ. ಆದರೆ ಸಿಂಹರ ಬಾಯಲ್ಲಿ ಇದನ್ನು ಕೇಳಬೇಕು. ಇಪ್ಪತ್ತೈದು ವರ್ಷದಲ್ಲಿ ನಾನು ಹಲವಾರು ಬಾರಿ ಇದನ್ನು ಕೇಳಿದ್ದೇನೆ. ನಕ್ಕಿದ್ದೇನೆ. ವ್ವಾಹ್! ಎಂಥಾ ಚಾತುರ್ಯ!

* * *
ಸಿಂಹ ಯಾವುದೇ ಪಾತ್ರ ವಹಿಸಲಿ, ಅದೇ ಆಗಿ ಹೋಗ್ತಿದ್ರು. ಉದಾಹರಣೆಗೆ ಕೈಲಾಸಂ. ನಾವಂತೂ ಕೈಲಾಸಂರನ್ನು ನೋಡಿಲ್ಲ. ಕೈಲಾಸಂ ತೀರಿಕೊಂಡಾಗ ಸಿಂಹರಿಗೆ ಆರು ವರ್ಷ. ಹಾಗಾಗಿ ಇವರೂ ಕೈಲಾಸಂನ ಕಂಡಿರಲಿಕ್ಕಿಲ್ಲ. ಆದರೂ ‘ಟಿಪಿಕಲ್ ಟಿಪಿ ಕೈಲಾಸಂ’ ನಾಟಕವನ್ನು ನೋಡಿದರೆ ಕೈಲಾಸಂ ಹೀಗೆಯೇ ಇದ್ದಿರಬೇಕು ಅನ್ನಿಸುವಷ್ಟು ಸೊಗಸಾಗಿ ಪಾತ್ರ ನಿರ್ವಹಿಸುತ್ತಿದ್ದರು. ಕೈಲಾಸಂರ ಕ್ಲಿಷ್ಟ ಭಾಷೆ, ಮಾತುಗಾರಿಕೆ, ಹಾವ-ಭಾವವನ್ನು ಎಷ್ಟು ಜೀವಂತವಾಗಿರಿಸುತ್ತಿದ್ದರೆಂದರೆ ಈಗಲೂ ಕೈಲಾಸಂ ಎಂದಾಗ ಕಣ್ಣಮುಂದೆ ಬರುವುದು ಸಿಂಹರ ಮುಖವೇ!
Simha

ನಾಲ್ಕು ವರ್ಷಗಳ ಹಿಂದೆ ನಾನು ಕೈಲಾಸಂ ಬಗ್ಗೆ ಒಂದು ಸಾಕ್ಷ್ಯಚಿತ್ರ ಮಾಡುತ್ತಿದ್ದೆ. ಅದರಲ್ಲಿ ಕೈಲಾಸಂರ ಪಾತ್ರವನ್ನು ಮರುಸೃಷ್ಟಿ ಮಾಡಲು ಯೋಚಿಸಿ ಹಾಗೆಯೇ ಸ್ಕ್ರಿಪ್ಟ್ ಬರೆದುಕೊಂಡಿದ್ದೆ. ಆಗ ಸಿಂಹರಿಗೆ ಆರೋಗ್ಯ ಕೊಂಚ ಸರಿ ಇರಲಿಲ್ಲ. ಅವರು ಯಾವುದೂ ಪಾತ್ರ ಒಪ್ಪಿಕೋತಾ ಇಲ್ಲ ಅಂತ ಯಾರೋ ಹೇಳಿದರು. ನಾನು ವಿಧಿಯಿಲ್ಲದೆ ನನ್ನ ಫೇವರೆಟ್ ಆರ್ಟಿಸ್ಟ್ ದತ್ತಣ್ಣನ ಬಳಿ ಹೋಗಿ, ದತ್ತಣ್ಣ ನೀವು ಕೈಲಾಸಂ ಪಾತ್ರ ಮಾಡಬೇಕು ಎಂದು ಕೇಳಿದೆ. ಅವರು ಹೌಹಾರಿ ಬಿದ್ದರು. ‘ಏನಯ್ಯಾ ನೀನು, ನಿಂಗೇನು ಹುಚ್ಚು-ಗಿಚ್ಚು ಹಿಡಿದಿದೆಯಾ? ಸಿಂಹ ಇರೋವಾಗ ಕೈಲಾಸಂನ ಬೇರೆ ಯಾರಾದ್ರು ಮಾಡೋಕಾಗುತ್ತ? ನೀನು ಹೋಗಿ ಸಿಂಹನ್ನೇ ಕೇಳು. ನಾನು ಬೇಕಿದ್ರೆ ಕೈಲಾಸಂ ಅಪ್ಪ ಪರಶಿವನ್ ಪಾತ್ರ ಮಾಡ್ತೀನಿ’ ಅಂದ್ರು.

ನಾನು ಮತ್ತೆ ಗುಹೆ ಹೊಕ್ಕೆ.

ಕೈಲಾಸಂ ಹೆಸರು ಕೇಳ್ತಿದ್ದ ಹಾಗೆ ಮಲಗಿದ್ದ ಸಿಂಹ ಎದ್ದು ಕುಳಿತೇ ಬಿಟ್ರು. ನನ್ನ ಆರೋಗ್ಯ ಅತ್ಲಾಗಿರಲಿ. ಯಾವತ್ತು ಶೂಟಿಂಗ್ ಹೇಳಿ ನಾನು ರೆಡಿ ಅಂದ್ರು. ನೀವು ಅದಕ್ಕೇಂತ ಕಾಸ್ಟ್ಯೂಮ್, ವಿಗ್ ಎಲ್ಲ ಮಾಡಿಸೋಕ್ ಹೋಗಬೇಡಿ. ನನ್ನ ಹತ್ರ ಎಲ್ಲಾ ಇದೆ. ಅದನ್ನೇ ತರತೀನಿ ಅಂದ್ರು. ಮೂರು ದಿನ ಶೂಟಿಂಗ್ ಮಾಡಿದ್ವಿ. ಕೈಲಾಸಂನ ಅವತರಿಸಿಕೊಂಡಿದ್ದ ಸಿಂಹರನ್ನು ಆಗ ನೋಡಬೇಕಿತ್ತು. ಅದನ್ನು ದೃಶ್ಯಮಾಧ್ಯಮದಲ್ಲಿ ಹಿಡಿದಿಟ್ಟಿರುವ ಖುಷಿ ನನಗಿದೆ.

ಬರೀ ಕೈಲಾಸಂ ಅಷ್ಟೇ ಅಲ್ಲ. ಕುವೆಂಪು ಪಾತ್ರವನ್ನೂ ಕೂಡ ಸಿಂಹ ಅಷ್ಟೇ ಸೊಗಸಾಗಿ ಮಾಡ್ತಿದ್ರು. ಅವರ ಮಗ ಋತ್ವಿಕ್ ನಿರ್ದೇಶಿಸಿದ ‘ರಸ‌ಋಷಿ ಕುವೆಂಪು’ ಚಲನಚಿತ್ರದಲ್ಲಿ ಇವರಿಗೆ ಅತ್ಯುತ್ತಮ ನಟ ಪ್ರಶಸಿ ಬರಲಿಲ್ಲವಲ್ಲ ಅನ್ನೋ ಕೊರಗು ಈಗಲೂ ನನಗಿದೆ. ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿ ಬಂದಾಗ ನಾನು ಸಿಂಹರಿಗೆ ಫೋನ್ ಮಾಡಿ, ಚಿತ್ರದ ಪ್ರಶಸ್ತಿ ಜೊತೆಗೆ ನಿಮ್ಮ ಪಾತ್ರಕ್ಕೂ ಪ್ರಶಸ್ತಿ ಬರಬೇಕಿತ್ತು ಅಂದೆ. ‘ಏ ಬಿಡ್ರೀ, ಜನ ನನಗೆ ಪ್ರಶಸಿ ಕೊಟ್ಟಿದ್ದಾರೆ, ಅದಕ್ಕಿಂತ ಇದು ಮುಖ್ಯಾನ?’ ಅಂದಿದ್ರು.
images

* * *
ಇಪ್ಪತ್ತು ವರ್ಷಗಳ ಹಿಂದೆ. ಆಗಿನ್ನೂ ಬನಶಂಕರಿಯ ರಿಂಗ್ ರೋಡ್ ಈಗಿನಂತೆ ಆಗಿರಲಿಲ್ಲ. ಇಟ್ಟಮಡುವಿನ ಅಂಚಿನಲ್ಲಿ ಸಿಂಹನ ‘ಗುಹೆ’ ತಲೆಯೆತ್ತಿತ್ತು. ನಿಮ್ಮ ಮನೆ ಡೈಮೆನ್ಷನ್ ಏನು? ಎಂದು ಯಾರಾದರೂ ಸಿಂಹರನ್ನು ಕೇಳಿದರೆ, 50x 80 x 30 ಎನ್ನುತ್ತಿದ್ದರು! ಕೇಳಿದವರು ಅರ್ಥವಾಗದೆ ತಲೆಕೆರೆದುಕೊಂಡಾಗ ಸಿಂಹನೇ ಮುಂದುವರಿದು, 50x 80 ಸೈಟ್ ಡೈಮೆನ್ಷನ್ನು, ಸೈಟ್ ಆಳ ರಸ್ತೆಯಿಂದ ಮೂವತ್ತು ಅಡಿ ಕೆಳಕ್ಕಿದೆ ಅಷ್ಟೇ! ಎಂದು ನಗುತ್ತಿದ್ದರು.

ಇಂಥ ವಿಚಿತ್ರ ಆಕಾರದ ಈ ಗುಹೆ(ಮನೆ)ಯನ್ನು ಪ್ರಖ್ಯಾತ ವಿನ್ಯಾಸಗಾರ ಜಯಸಿಂಹ ಡಿಸೈನ್ ಮಾಡಿದ್ದರು. ವಿಶೇಷ ಎಂದರೆ ಮನೆಯ ಮಧ್ಯೆ ಕಲ್ಲಿನಲ್ಲಿ ಎತ್ತರದ ಚಾರ್ಲಿ ಚಾಪ್ಲಿನ್ ಪ್ರತಿಮೆಯನ್ನು ಕಂಬದೋಪಾದಿಯಲ್ಲಿ ಕೆತ್ತಿ ನಿಲ್ಲಿಸಲಾಗಿತ್ತು. ಇದರ ಕಲೆ ಜಾನ್‌ದೇವರಾಜ್ ಅವರದ್ದು! ಮನೆಯೊಳಕ್ಕೆ ಅಲ್ಲಲ್ಲಿ ಸೂರ್ಯನ ಬೆಳಕು ನೇರವಾಗಿ ಹರಡುವಂತೆ ವಿನ್ಯಾಸ ಮಾಡಲಾಗಿತ್ತು. ಮನೆಯ ಹೊರಗೆ ಕಾಂಪೌಂಡ್‌ನಲ್ಲಿ ಒಂದು ರಂಗವೇದಿಕೆ ಮಾಡಿ ಪ್ರೇಕ್ಷಕರು ಕೂರಲು ಮೆಟ್ಟಿಲನ್ನು ಜೋಡಿಸಲಾಗಿತ್ತು. ಈಗಿರುವ ಸಂಸ ರಂಗಮಂದಿರದ ಮಾದರಿಯನ್ನು ನೆನಪಿಸಿಕೊಳ್ಳಿ. ಅಲ್ಲಿ ನಿತ್ಯ ನಾಟಕದ ರಿಹರ್ಸಲ್ ಆಗುತ್ತಿತ್ತು. ಕೆಲವು ನಾಟಕಗಳ ಪ್ರದರ್ಶನಗಳೂ ಆಗಿದ್ದುಂಟು. ಪ್ರತಿ ವರ್ಷ ಡಿಸೆಂಬರ್ ಮೂವತ್ತೊಂದರ ರಾತ್ರಿ ಇಲ್ಲಿ ನಡೆಯುತ್ತಿದ್ದ ಹೊಸವರ್ಷದ ಆಚರಣೆಯಲ್ಲಿ ಭಾಗಿಯಾಗದ ಮಿತ್ರರೇ ಕಡಿಮೆ!

ಈ ಗುಹೆ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ವಿಶೇಷ ಸುದ್ದಿ ಮಾಡಿತ್ತು. ಇದರ ವೈಶಿಷ್ಟ್ಯವನ್ನು ನೋಡಲೆಂದೇ ಜನರು ದೂರದಿಂದ ಬರುತ್ತಿದ್ದರು. ಎಲ್ಲರ ಬಾಯಲ್ಲೂ ಸಿಂಹನ ಗುಹೆಯದ್ದೇ ಮಾತು. ಇದೇನು ಸಿಂಹ, ಇಷ್ಟು ದೂರ ಬಂದು ಮನೆ ಕಟ್ಟಿದ್ದೀರಲ್ಲ, ಈ ಕಾಡಿನಲ್ಲಿ ಹೇಗೆ ವಾಸಿಸುತ್ತೀರಪ್ಪ? ಎಂದು ಯಾರಾದರೂ ಕೇಳಿದರೆ, ಸಿಂಹ ತಮ್ಮದೇ ಶೈಲಿಯಲ್ಲಿ ನಗುತ್ತಾ, ‘ಸಿಂಹ ಕಾಡಲ್ಲಿರದೆ ನಾಡಿನಲ್ಲಿರುತ್ತೇನು?’ ಎನ್ನುತ್ತಿದ್ದರು.

ಈಗ ಇದು ಸಂಪೂರ್ಣ ಕಾಂಕ್ರೀಟ್ ನಾಡೇ ಆಗಿ ಹೋಗಿದೆ. ಹಾಗಾಗಿ ಗುಹೆಯೂ ಕೊಂಚ ಮಂಕಾಗಿತ್ತು. ಇಲ್ಲಿಯ ಸಿಂಹಕ್ಕೂ ವಯಸ್ಸಾಗಿತ್ತು. ಹುಲಿಯಾದರೇನು, ಸಿಂಹವಾದರೇನು? ಈ ಕಾಯಿಲೆ ಅನ್ನುವುದು ಯಾರನ್ನೂ ಬಿಟ್ಟಿದ್ದಲ್ಲ. ಎಪ್ಪತ್ತೆರಡರ ಹರೆಯದ ಸಿಂಹನನ್ನೂ ಬಿಡಲಿಲ್ಲ…
ನಿಜಕ್ಕೂ ಸಿಂಹ ಅಪರೂಪದ ವ್ಯಕ್ತಿಯಾಗಿದ್ದರು.
ಇವರು, ರಂಗಭೂಮಿಯ ಕಲಾವಿದರೂ ಹೌದು ನಿರ್ದೇಶಕರೂ ಹೌದು.
ಇವರು ಚಲನಚಿತ್ರದ ಕಲಾವಿದರೂ ಹೌದು, ನಿರ್ದೇಶಕರೂ ಹೌದು.
ಇವರು ಸಾಹಿತ್ಯ ಪ್ರೇಮಿಯೂ ಹೌದು, ಅಂಕಣಕಾರರೂ ಹೌದು.
ಚುರುಕು ಮಾತಿನ ಸ್ನೇಹಜೀವಿಯೂ ಹೌದು, ಅಪ್ರತಿಮ ಪ್ರತಿಭಾವಂತರೂ ಹೌದು….
ಇಷ್ಟೆಲ್ಲ ಗುಣ-ಲಕ್ಷಣಗಳು ಎಷ್ಟು ಜನರಲ್ಲಿ ಇರಲು ಸಾಧ್ಯ?
ಹಾಗಾಗಿಯೇ ಸಿಂಹನಿಗೆ ಸಿಂಹನೇ ಸಾಟಿ!

(ಮಾರ್ಚ್ ೧, ೨೦೧೪, ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ)

‘ತಿಮ್ಮರುಸು’ ಎಂಬ ಚತುರ ಮಂತ್ರಿ…

ವಿಜಯನಗರದ ಇತಿಹಾಸದಲ್ಲಿ ಶ್ರೀಕೃಷ್ಣದೇವರಾಯನ ಕಾಲದಲ್ಲಿದ್ದ ಮಹಾಮಂತ್ರಿ ತಿಮ್ಮರುಸುವಿಗೆ ವಿಶೇಷ ಸ್ಥಾನವಿದೆ. ಈತನ ಬದುಕೇ ಒಂದು ದುರಂತ ಪಯಣ.

Thimmarusu in Srikrishnadevaraya movie

Thimmarusu in Srikrishnadevaraya movie

ತಿಮ್ಮರುಸು ‘ನಿಯೋಗಿ ತೆಲುಗು ಬ್ರಾಹ್ಮಣ’ ಪಂಗಡಕ್ಕೆ ಸೇರಿದವನು. ಕೃಷ್ಣದೇವರಾಯನಿಗೂ ಮುಂಚೆ ವಿಜಯನಗರ ಸಂಸ್ಥಾನವನ್ನು ವೀರನರಸಿಂಹರಾಯ ಆಳುತ್ತಿದ್ದನು. ಅವನ ಆಳ್ವಿಕೆಯಲ್ಲಿಯೇ ತಿಮ್ಮರುಸು ಮಹಾಮಂತ್ರಿಯಾಗಿದ್ದ. ಪೋರ್ಚಗೀಸ್ ಪ್ರವಾಸಿಗ ಫೆರ್ನಾವ್ ನುನಿಜ್ (Fernao Nuniz) ಬರೆದಿರುವ ಪ್ರಕಾರ, ವೀರನರಸಿಂಹರಾಯನಿಗೆ ಮರಣ ಸನ್ನಿಹಿತವಾದ ಸಂದರ್ಭ. ಮರಣಶಯ್ಯೆಯಲ್ಲಿದ್ದ ದೊರೆಗೆ ತನ್ನ ನಂತರ ವಿಜಯನಗರದ ಸಿಂಹಾಸನ ಯಾರ ಪಾಲಾಗುತ್ತದೋ ಎಂಬ ಚಿಂತೆ ಕಾಡುತ್ತಿದೆ. ಆಗ ಸಿಂಹಾಸನವೇರಲು ಮುಂಚೂಣಿಯಲ್ಲಿದ್ದ ಯೋಗ್ಯ ವ್ಯಕ್ತಿ ಎಂದರೆ ಕೃಷ್ಣದೇವರಾಯ ಮಾತ್ರ. ಆದರೆ ವೀರನರಸಿಂಹರಾಯನಿಗೆ ಮಾತ್ರ ಇದು ಕೊಂಚವೂ ಇಷ್ಟವಿಲ್ಲದ ವಿಚಾರ. ಆತನಿಗೆ ತನ್ನ ಮಗನಿಗೆ ಪಟ್ಟ ಸಿಗುವಂತಾಗಲಿ ಎಂಬ ಆಸೆ. ಆದರೆ ಮಗನೋ ಎಂಟುವರ್ಷದ ಅಪ್ರಾಪ್ತ ವಯಸ್ಕ!

ಆಗ ವೀರನರಸಿಂಹರಾಯ ತನ್ನ ಮಂತ್ರಿ ತಿಮ್ಮರುಸುವನ್ನು ಹತ್ತಿರ ಕರೆದು, ‘ನನ್ನ ಸಹೋದರ ಸಂಬಂಧಿ ಕೃಷ್ಣದೇವರಾಯನ ಕಣ್ಣುಗಳನ್ನು ತೆಗೆದು ಕುರುಡನನ್ನಾಗಿಸಿಬಿಡು… ಆಗ ಆತ ರಾಜಾಡಳಿತಕ್ಕೆ ಬರುವುದು ತಪ್ಪುತ್ತದೆ… ಇದು ರಾಜಾಜ್ಞೆ…’ ಎಂದು ಆದೇಶ ಮಾಡಿದನಂತೆ. ತಿಮ್ಮರುಸುವಿಗೆ ಸಂಕಟಕ್ಕಿಟ್ಟುಕೊಂಡಿತು. ಈ ಕೃತ್ಯ ಅವನಿಗೆ ಇಷ್ಟವಿಲ್ಲದಿದ್ದರೂ ರಾಜಾಜ್ಞೆಯನ್ನು ಮೀರುವಂತಿಲ್ಲ. ಆಗ ತಿಮ್ಮರುಸು ಸಾಕಷ್ಟು ಯೋಚಿಸಿ, ಮೇಕೆಯ ಕಣ್ಣುಗಳನ್ನು ಕಿತ್ತು ತಂದು ಮೃತ್ಯುಮಂಚದಲ್ಲಿದ್ದ ವೀರನರಸಿಂಹರಾಯನ ಮುಂದಿಟ್ಟು ಇವೇ ಕೃಷ್ಣದೇವರಾಯನ ಕಣ್ಣುಗಳು ಎಂದು ನಂಬಿಸಿದನಂತೆ. ತಿಮ್ಮರುಸುವಿನ ಈ ಚತುರತೆಯಿಂದಾಗಿ ನಂತರ ಕೃಷ್ಣದೇವರಾಯ ಪಟ್ಟಕ್ಕೆ ಬರುತ್ತಾನೆ. ಹೀಗೆ ಗದ್ದುಗೆ ಹಿಡಿದ ಶ್ರೀಕೃಷ್ಣದೇವರಾಯ (ಕ್ರಿ.ಶ. 1509–1529) ವಿಜಯನಗರದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಏರಿಸಿದ್ದು ಇತಿಹಾಸ.

ಈ ಮೇಲಿನ ಪ್ರಸಂಗದಲ್ಲಿ ಬಂದ ‘ಕಣ್ಣು’ಗಳ ಪಾತ್ರ ಮತ್ತೊಮ್ಮೆ ಕೃಷ್ಣದೇವರಾಯನ ಬದುಕಲ್ಲಿ ಹೇಗೆ ಬರುತ್ತದೆ ಎಂಬುದನ್ನು ಮುಂದೆ ಓದಿ ನೋಡಿ.

1524 ರಲ್ಲಿ ಕೃಷ್ಣದೇವರಾಯನಿಗೂ ವೀರನರಸಿಂಹರಾಯನಿಗೆ ಬಂದಂತಹುದೇ ಸಂದರ್ಭ ಎದುರಾಗುತ್ತದೆ. ತನ್ನ ನಂತರ ವಿಜಯನಗರ ಸಂಸ್ಥಾನದ ಅಧಿಪತಿ ಯಾರಾಗಬೇಕು? ಕೃಷ್ಣದೇವರಾಯನಿಗೂ ಅಪ್ರಾಪ್ತ ವಯಸ್ಸಿನ ಮಗನಿರುತ್ತಾನೆ. ಆದರೂ ಕೃಷ್ಣದೇವರಾಯ ತನ್ನ ಆ ಪುತ್ರನಿಗೇ ಯುವರಾಜನ ಪಟ್ಟಕಟ್ಟುತ್ತಾನೆ. ಕೆಲವೇ ದಿನಗಳಲ್ಲಿ ಆಕಸ್ಮಿಕವಾದ ಘಟನೆಯೊಂದು ಜರುಗುತ್ತದೆ. ರಾಜಪುತ್ರ ವಿಷಪ್ರಾಶನದಿಂದ ಮರಣಿಸುತ್ತಾನೆ. ಇದರಿಂದ ಕೃಷ್ಣದೇವರಾಯನಿಗೆ ಆಘಾತವಾಗುತ್ತದೆ. ತನ್ನ ವಂಶಕ್ಕೆ ಈ ಆಸ್ಥಾನ ಸಿಗದಿರಲಿ ಎಂದು ಯಾರೋ ಕುತಂತ್ರ ಮಾಡಿದ್ದಾರೆ ಎಂದು ಭಾವಿಸುತ್ತಾನೆ. ಈ ಕುಟಿಲತೆಯ ಹಿಂದೆ ಮಂತ್ರಿ ತಿಮ್ಮರುಸುವಿನ ಪಾತ್ರ ಇರಬೇಕೆಂದು ಸಂದೇಹಿಸುವ ಕೃಷ್ಣದೇವರಾಯ ತಿಮ್ಮರುಸು ಮತ್ತು ಅವನ ಮಗ ಗೋವಿಂದರಾಜುವನ್ನೊಳಗೊಂಡಂತೆ ಅವರ ಕುಟುಂಬದ ಎಲ್ಲರ ಕಣ್ಣುಗಳನ್ನು ಕೀಳಿಸಿ ಕುರುಡರನ್ನಾಗಿಸುತ್ತಾನೆ! ಒಂದುಕಾಲದಲ್ಲಿ ಕೃಷ್ಣದೇವರಾಯನ ಕಣ್ಣುಗಳನ್ನು ಉಳಿಸಿದ್ದ ತಿಮ್ಮರುಸು ಈಗ ತನ್ನದಲ್ಲದ ತಪ್ಪಿಗೆ ಸ್ವತಃ ತನ್ನ ಕಣ್ಣುಗಳನ್ನೇ ಕಳೆದುಕೊಳ್ಳುತ್ತಾನೆ.

B.R.Pantulu

B.R.Pantulu


ಕೆಲಕಾಲದ ನಂತರ ರಾಜನಿಗೆ ಸತ್ಯದ ಅರಿವಾಗುತ್ತದೆ. ತನ್ನ ಪುತ್ರನ ಸಾವಿನ ಕುತಂತ್ರ ಹೆಣೆದದ್ದು ಒರಿಸ್ಸಾದ ದೊರೆ ಗಜಪತಿ ಎಂದು ತಿಳಿಯುತ್ತದೆ. ಕೃಷ್ಣದೇವರಾಯ ತನ್ನ ತಪ್ಪಿಗೆ ಪಶ್ಚಾತ್ತಾಪದ ಬೇಗೆಯಲ್ಲಿ ಬೇಯುತ್ತಾನೆ. ಆದರೆ ಆತನ ಆತುರದ ನಿರ್ಧಾರಕ್ಕೆ ತಿಮ್ಮರುಸು ಶಾಶ್ವತವಾಗಿ ಕುರುಡನಾಗಿರುತ್ತಾನೆ. ಅವನ ಮಗ ಗೋವಿಂದರಾಜ ಕೃಷ್ಣದೇವರಾಯನ ಮೇಲಿನ ಕೋಪದಿಂದ ರಾಜನ ವಿರೋಧಿಗಳೊಂದಿಗೆ ಸೇರಿ ರಾಜ್ಯಬಿಟ್ಟು ಹೋಗಿ ಕತ್ತಿ ಮಸೆಯುತ್ತಾನೆ. ಒಂದು ಮೂಲದ ಮಾಹಿತಿಯು ನಂತರ ತಿಮ್ಮರುಸು ತನ್ನ ಕೊನೆಯ ದಿನಗಳನ್ನು ತಿರುಪತಿಯಲ್ಲಿ ಭಿಕ್ಷೆ ಬೇಡುತ್ತಾ ಕಳೆದು ಅಲ್ಲೇ ಕೊನೆಯುಸಿರೆಳೆದ ಎಂದು ಹೇಳುತ್ತದೆ.

ಈ ತಿಮ್ಮರುಸು ಮಂತ್ರಿಯ ಪಾತ್ರ ಸಾಹಿತ್ಯ, ನಾಟಕ ಹಾಗೂ ಚಲನಚಿತ್ರರಂಗದವರಿಗೆ ತುಂಬ ಇಷ್ಟವಾದ ಪಾತ್ರ. ಇತ್ತೀಚೆಗೆ ಬಿ.ಶಿವಾನಂದ ಅವರು ‘ದುರಂತಪಯಣ’ ಎಂಬ ನಾಟಕ ಬರೆದಿದ್ದಾರೆ. ಅದಕ್ಕೆ ಮುನ್ನುಡಿ ಬರೆದುಕೊಡಲು ನನ್ನನ್ನು ಕೇಳಿಕೊಂಡರು.
ಆಗ ನನಗೆ ಈ ತಿಮ್ಮರುಸು ಕಣ್ಣ ಮುಂದೆ ಬಂದ. ಈತನ ಬಗ್ಗೆ ಇನ್ನೂ ಹೆಚ್ಚು ಅರಿಯಲು ಒಂದಿಷ್ಟು ಇತಿಹಾಸದ ಪುಟಗಳನ್ನು ಮಗುಚಿ ಹಾಕಿದೆ. ಒಬ್ಬೊಬ್ಬರು ತಿಮ್ಮರುಸುವನ್ನು ಒಂದೊಂದು ರೀತಿ ಕಂಡಿದ್ದಾರೆ.

ನಿಮಗೂ ನೆನಪಿರಬಹುದು.
ಕನ್ನಡದಲ್ಲಿ ಬಂದ ‘ಶ್ರೀಕೃಷ್ಣದೇವರಾಯ’ ಎಂಬ ಚಲನಚಿತ್ರ.

ಇದನ್ನು ಶ್ರೀ ಬಿ.ಆರ್.ಪಂತುಲು ಅವರು 1970 ರಲ್ಲಿ ತೆರೆಗೆ ತಂದರು. ಅದರಲ್ಲಿ ಅವರೇ ತಿಮ್ಮರುಸುವಿನ ಪಾತ್ರವನ್ನೂ ನಿರ್ವಹಿಸಿದ್ದರು. ಕರ್ನಾಟಕ ರಾಜ್ಯ ಸರ್ಕಾರ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಘೋಷಿಸಿದಾಗ ಅವರು ಅದನ್ನು ಪಡೆಯಲು ನಿರಾಕರಿಸಿದರು. ‘ಇದು ಕೃಷ್ಣದೇವರಾಯನನ್ನು ಕುರಿತಾದ ಚಿತ್ರ, ರಾಜ್‌ಕುಮಾರ್ ಆ ಪಾತ್ರ ನಿರ್ವಹಿಸಿದ್ದಾರೆ. ಈ ಗೌರವ ಅವರಿಗೆ ಸಲ್ಲಬೇಕು, ನನಗಲ್ಲ…’ ಎಂದು ತಮ್ಮ ದೊಡ್ಡತನ ಮೆರೆದಿದ್ದರು.

Thimmarusu in Telugu movie

Thimmarusu in Telugu movie

ಹಾಗೆಯೇ 1962 ರಲ್ಲಿ ಕೂಡ ‘ಮಹಾಮಂತ್ರಿ ತಿಮ್ಮರುಸು’ ಎಂಬ ಚಿತ್ರ ತೆಲುಗಿನಲ್ಲಿ ತೆರೆಗೆ ಬಂದಿತ್ತು. ಈ ಚಿತ್ರದ ನಿರ್ದೇಶಕರು ಕಮಲಾಕರ ಕಾಮೇಶ್ವರರಾವ್. ಎನ್.ಟಿ.ರಾಮರಾವ್ ಕೃಷ್ಣದೇವರಾಯನ ಪಾತ್ರ ವಹಿಸಿದ್ದರೆ ಗುಮ್ಮಡಿ ವೆಂಕಟೇಶ್ವರರಾವ್ ತಿಮ್ಮರುಸುವಿನ ಪಾತ್ರ ನಿರ್ವಹಿಸಿದ್ದರು. ಈ ಚಿತ್ರ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿತ್ತು.

ಕ್ಯಾಮರಾ ಹಿಂದಿನ ಕ್ರಾಂತಿಕಾರಿ

ಮೇ 30, ಬೆಳಗ್ಗೆ.  

ನ್ಯೂಸ್‌ಚಾನಲ್‌ನ ಮಿತ್ರರೊಬ್ಬರು ಫೋನ್ ಮಾಡಿ, ಹನ್ನೊಂದು ಗಂಟೆಯ ನ್ಯೂಸ್‌ಗೆ ನಿಮ್ಮದೊಂದು ಬೈಟ್(ಪ್ರತಿಕ್ರಿಯೆ) ಬೇಕಿತ್ತು, ಫೋನ್ ಮಾಡ್ತೀವಿ, ಸಿದ್ಧವಿರುವಿರಾ? ಎಂದು ಕೇಳಿದರು.  ‘ಯಾವ ವಿಷಯದ ಕುರಿತಾಗಿ?’ ಎಂದು ಕೇಳಿದೆ.  ‘ರಿತುಪರ್ಣೋ ಘೋಷ್ ಹೋಗಿಬಿಟ್ಟರಲ್ಲ, ಯಾಕೆ ನಿಮಗೆ ಗೊತ್ತಿಲ್ಲವೇ?’ ಎಂದಾಗ ನನ್ನ ಮನದ ತಲ್ಲಣವನ್ನು ನೀವೇ ಊಹಿಸಿಕೊಳ್ಳಿ…

Imageಛೇ ಛೆ! ಹೀಗಾಗಬಾರದಿತ್ತು. ನಲವತ್ತೊಂಬತ್ತು ಸಾಯುವ ವಯಸ್ಸೆ?

ಹಾಗೆ ನೋಡಿದರೆ ನನಗೂ ಈಗ ನಲವತ್ತೊಂಬತ್ತು.  ನನಗಿಂತ ರಿತುಪರ್ಣರು ಕೇವಲ ಮೂರು ತಿಂಗಳು ದೊಡ್ಡವರು ಅಷ್ಟೇ!  ನಮ್ಮದೇ ವಯಸ್ಸಿನವರು, ಅದೂ ನಮ್ಮದೇ ಕ್ಷೇತ್ರದವರು ಇದ್ದಕ್ಕಿದ್ದಂತೆ ಒಂದು ದಿನ ಇಲ್ಲವಾದರು ಎಂಬ ಸುದ್ದಿ ಬಂದಾಗ ಸಾವು ನಮ್ಮ ಮನೆಯ ಕದವನ್ನೂ ತಟ್ಟಲಿದೆಯೇ ಎಂಬ ಆಲೋಚನೆ ಕ್ಷಣಮಾತ್ರದಲ್ಲಿ ಕಣ್ಣಮುಂದೆ ಹಾದು ಹೋಗುತ್ತದೆ.  ಎದೆಯಲ್ಲಿ ಸಣ್ಣ ಛಳಕು.  ಬೆನ್ನ ಹಿಂದಿನಿಂದ ಮೆಲ್ಲನೆ ಇಣುಕುಹಾಕುವ ಸ್ಮಶಾನ ವೈರಾಗ್ಯ.  ಬದುಕು ಎಷ್ಟೊಂದು ಅನಿಶ್ಚಿತ!

ಕೇವಲ ಮೂರು ವಾರದ ಹಿಂದೆ ರಿತುಪರ್ಣೋ ಘೋಷ್ ಅವರನ್ನು ದೆಹಲಿಯಲ್ಲಿ ಕಂಡಿದ್ದೆ.  ಅದು ಅರವತ್ತನೇ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ.  ರಿತು ನಿರ್ದೇಶನದ ‘ಚಿತ್ರಾಂಗದ’ ಚಲನಚಿತ್ರದ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ಪೋಷಕ ನಟ ಜ್ಯೂರಿ ಪ್ರಶಸ್ತಿ ಬಂದಿತ್ತು.   ಈ ಹಿಂದೆ ಎಂಟು ಬಾರಿ ತಮ್ಮ ಚಿತ್ರದ ನಿರ್ದೇಶನಕ್ಕಾಗಿ ರಾಷ್ಟ್ರಪತಿಗಳ ಮುಂದೆ ನಿಂತಿದ್ದ ರಿತು ಈ ಸಲ ತಮ್ಮ ಅಭಿನಯಕ್ಕಾಗಿ ರಾಷ್ಟ್ರಮಟ್ಟದ ಗೌರವ ಸ್ವೀಕರಿಸಲು ಬಂದಿದ್ದರು.  ಹಾಗಾಗಿ ಅವರಿಗೆ ಚಪ್ಪಾಳೆಗಳ ಸ್ವಾಗತ ಹಿಂದೆಂದಿಗಿಂತಲೂ ಹೆಚ್ಚೇ ದೊರೆತಿತ್ತು. ಮುಗುಳ್ನಗುತ್ತ ಪ್ರಶಸ್ತಿ ಸ್ವೀಕರಿಸಿ ಬಂದು ತಮ್ಮ ಸ್ಥಾನದಲ್ಲಿ ಮೌನವಾಗಿ ಕುಳಿತಿದ್ದರು.  ಪ್ರಶಸ್ತಿ ವಿಜೇತರದ್ದೆಲ್ಲಾ ಒಂದೇ ಹೋಟೆಲ್. ಬೆಳಗ್ಗೆ ಹೋಟೆಲ್‌ನಲ್ಲಿ ನಾನು ದತ್ತಣ್ಣ ತಿಂಡಿ ತಿನ್ನುತ್ತಿದ್ದೆವು.  ನಮ್ಮ ಪಕ್ಕದ ಟೇಬಲ್‌ನಲ್ಲಿ ರಿತು ಕುಳಿತು ಬ್ರೇಕ್‌ಫಾಸ್ಟ್ ಮಾಡುತ್ತಿದ್ದರು.  ನನ್ನತ್ತ ತಿರುಗಿದ ದತ್ತಣ್ಣ, ‘ಅಲ್ಲಯ್ಯ, ಈ ನಿರ್ದೇಶಕರೆಲ್ಲಾ ನಟರಾಗಿ ಪ್ರಶಸ್ತಿ ತಗೊಂಡ್‌ಬಿಟ್ರೆ ನಮ್ಮಂತ ನಟರ ಪಾಡೇನಯ್ಯ?’ ಎಂದು ತಮಾಷೆಯಾಗಿ ಕೇಳಿದರು.  ನಾನು ದತ್ತಣ್ಣನ ಕಿವಿಯಲ್ಲಿ ‘ನೀವೆಲ್ಲ ನಟಿಸ್ತೀರಿ, ಅವರು ನಟಿಸಲ್ಲ, ತೆರೆ ಮೇಲೆ ಜೀವಿಸಿದ್ದಾರೆ ಅಷ್ಟೇ’ ಎಂದು ಪಿಸುಗುಟ್ಟಿದ್ದೆ.  ಆ ಚಿತ್ರದಲ್ಲಿ ರಿತು ಮಾಡಿದ್ದು ಟ್ರಾನ್ಸ್‌ಜೆಂಡರ್ ಪಾತ್ರ!

ದೆಹಲಿಯಲ್ಲಿ ಅಷ್ಟೊಂದು ಲವಲವಿಕೆಯಲ್ಲಿದ್ದ ರಿತುಪರ್ಣೋಗೆ ಖಾಯಿಲೆ ಇದೆ ಎಂದು ಯಾರಿಗೂ ಒಂದೇ ಒಂದು ಸಣ್ಣ ಸುಳಿವೂ ದೊರೆತಿರಲಿಲ್ಲ.  ಅದೇನು ಕರ್ಮವೋ!  ಅದ್ಯಾವುದೋ ಮೇದೋಜೀರಕಗ್ರಂಥಿಯ ಉರಿಯೂತ ಖಾಯಿಲೆಯಂತೆ! ಎರಡು ದಿನದ ಹಿಂದೆ ತಾನೇ ತಮ್ಮ ಇಪ್ಪತ್ತನೇ ಚಿತ್ರ ‘ಸತ್ಯಾನ್ವೇಷಿ’ ಮುಗಿಸಿ ತಮ್ಮ ಟ್ವೀಟ್‌ರ್ ಖಾತೆಯಲ್ಲಿ Wrapped up the shoot of Satyanewshi… ಎಂದು ನಿಟ್ಟುಸಿರುಬಿಟ್ಟಿದ್ದವರು ಇದ್ದಕ್ಕಿದ್ದ ಹಾಗೆ ಬದುಕಿನ ಉಸಿರನ್ನೇ ನಿಲ್ಲಿಸಿಬಿಟ್ಟರೆ?  ಇದು ಅನ್ಯಾಯವಲ್ಲದೆ ಮತ್ತೇನು?

ರಿತು ದಾ ಇನ್ನಿಲ್ಲ ಎಂಬ ಮಾತನ್ನು ಮೊದಲಿಗೆ ನನಗೆ ನಂಬಲಾಗಲೇ ಇಲ್ಲ.  ಕೊಲ್ಕತ್ತಾದಲ್ಲಿದ್ದ ನನ್ನ ಮಿತ್ರರೊಬ್ಬರಿಗೆ ಫೋನ್ ಮಾಡಿದೆ.  ಅವರು ವಿಷಯವನ್ನು ಖಚಿತಪಡಿಸಿದಾಗಲೇ ನನಗೆ ನಂಬಿಕೆ ಬಂದಿದ್ದು.  ಅಲ್ಲಿಯವರೆಗೆ ಇದೊಂದು ಸುಳ್ಳಾಗಿರಲಿ ಎಂದು ಒಳಮನಸ್ಸು ಹೇಳುತ್ತಿತ್ತು.  ನನ್ನ ಆಸೆ ನೆರವೇರಿರಲಿಲ್ಲ!

ಹೃದಯಾಘಾತವಾಗುವಂತಹ ಬದುಕಿನ ಒತ್ತಡ ರಿತುಗೆ ಇರಲಿಲ್ಲ ಎಂಬುದು ನನ್ನ ಗ್ರಹಿಕೆ.  ಆತ ತುಂಬ ಸಾಧು ಸ್ವಭಾವದ ಮಿತುಭಾಷಿ.  ಯಾರೇ ಮಾತನಾಡಿಸಲಿ ಒಂದು ಸಣ್ಣ ಮುಗುಳ್ನಗೆಯಷ್ಟೇ ಅವರ ಉತ್ತರವಾಗಿರುತ್ತಿತ್ತು.

ಆದರೆ ನನ್ನ ಬೆಂಗಾಲಿ ಮಿತ್ರರು ಫೋನಿನಲ್ಲಿ ಹೇಳಿದ ವಿಚಾರಗಳು ನನ್ನನ್ನು ನಿಜಕ್ಕೂ ಚಿಂತೆಗೀಡುಮಾಡಿದ್ದವು.  

ಸುಮಾರು ಐದಾರು ವರ್ಷಗಳ ಹಿಂದಿನ ಮಾತು.  ಬೊಂಬಾಯಿಯಲ್ಲಿ ಚಲನಚಿತ್ರಕ್ಕೆ ಸಂಬಂಧಿಸಿದ ಒಂದು ಕಾರ್ಯಕ್ರಮ.  ಅಲ್ಲಿ ನಾನೂ ಇದ್ದೆ.  ಇತರೆ ಅತಿಥಿಗಳೆಲ್ಲಾ ಬರುತ್ತಿದ್ದರು.  ಆಗ ಸಭಾಂಗಣ ಪ್ರವೇಶಿಸಿದ ಒಬ್ಬ ವ್ಯಕ್ತಿಯ ಮೇಲೆ ಎಲ್ಲರ ಗಮನ ಹೋಯಿತು.  ಎತ್ತರದ, ಆಕರ್ಷಕ ವ್ಯಕ್ತಿತ್ವ.  ನುಣ್ಣಗೆ ಬೋಳಿಸಿದ ತಲೆಬುರುಡೆ, ಕಣ್ಣಿಗೆ ಕಾಡಿಗೆ, ತುಟಿಗೆ ಲಿಪ್‌ಸ್ಟಿಕ್, ಆಗತಾನೇ ಫೇಸಿಯಲ್ ಮಾಡಿಸಿಕೊಂಡಂತೆ ಚರ್ಮದ ಹೊಳಪು, ಸಲ್ವಾರ್ ಕಮೀಜ್ ಅನ್ನು ಹೋಲುವಂತಹ ವಿಚಿತ್ರ ಉಡುಪು, ಕೈಯಲ್ಲಿ ಬಳೆ,  ಕಿವಿಯಲ್ಲಿ ಓಲೆ…   ಯಾರೀಕೆ?

ಹತ್ತಿರದವರೊಬ್ಬರು ಪಿಸುಗುಟ್ಟಿದರು.  ಅದು ರಿತುಪರ್ಣೋ ಘೋಷ್!

ಅರೆ! ಈ ಯಪ್ಪನಿಗೇನಾಯಿತು?  ಮೊನ್ನೆ ಮೊನ್ನೆಯವರೆಗೆ ಗುಂಗರು ಕೂದಲು ಬಿಟ್ಟುಕೊಂಡು, ಜೀನ್ಸ್‌ಪ್ಯಾಂಟ್ ಮೇಲೆ ಜುಬ್ಬ ಹಾಕಿಕೊಂಡು ಓಡಾಡುತ್ತಿದ್ದ ಈ ವ್ಯಕ್ತಿ ಇದ್ದಕ್ಕಿದ್ದಂತೆಯೇ ತನ್ನ ವ್ಯಕ್ತಿತ್ವವನ್ನೇ ಬದಲಾಯಿಸಿಕೊಂಡುಬಿಟ್ಟರಲ್ಲಾ!

ಕೆಲವು ದಿನಗಳ ನಂತರ ಯಾವುದೋ ಪತ್ರಿಕೆಯ ಸಂದರ್ಶನವೊಂದರಲ್ಲಿ ನನಗೆ ಇದಕ್ಕೆ ಉತ್ತರ ದೊರೆತಿತ್ತು.  ಅದರಲ್ಲಿ ರಿತು ತಮ್ಮ ಅಂತರಂಗವನ್ನು ಬಹಿರಂಗಗೊಳಿಸಿದ್ದರು.  ‘ಹೌದು, ನಾನೊಬ್ಬ ಟ್ರಾನ್ಸ್‌ಜೆಂಡರ್… ಸಲಿಂಗಿ.  ನನ್ನೊಳಗಿನ ಈ ವ್ಯಕ್ತಿತ್ವವನ್ನು ನಾನು ಇಷ್ಟುದಿನ ಬಚ್ಚಿಟ್ಟುಕೊಂಡಿದ್ದೆ.  ಅದಕ್ಕೆ ಕಾರಣವೂ ಇದೆ.  ಇಲ್ಲಿಯವರೆಗೆ ನನ್ನವರು ಎಂದು ಇದ್ದವರು ನನ್ನ ಹೆತ್ತವರು ಮಾತ್ರ.  ನನಗೆ ಜನ್ಮಕೊಟ್ಟ ತಪ್ಪಿಗೆ ಅವರಿಗೆ ಸಮಾಜದಲ್ಲಿ ನನ್ನ ನಡವಳಿಕೆಯಿಂದ ಅವಮಾನವಾಗಬಾರದಲ್ಲವೇ?.. ಹಾಗಾಗಿ ನನ್ನೊಳಗಿನ ಈ ಬೇಗೆಯನ್ನು ಅನಿವಾರ್ಯವಾಗಿ ಅದುಮಿಟ್ಟುಕೊಂಡಿದ್ದೆ.  ಕೆಲವು ದಿನಗಳ ಹಿಂದೆ ಮೊದಲು ಅಮ್ಮ ಹೋದಳು, ಅಪ್ಪನೂ ಆಕೆಯನ್ನು ಹಿಂಬಾಲಿಸಿದರು.  ನನಗೊಬ್ಬ ತಮ್ಮ ಇದ್ದಾನೆ.  ಆದರೆ ಅವನೂ ನನ್ನನ್ನು ದೂರ ಮಾಡಿಕೊಂಡಿದ್ದಾನೆ. ಈಗ ನಾನು ಯಾರಿಗೂ ಅಂಜಬೇಕಿಲ್ಲ. ಇನ್ನುಮೇಲೆ ನಾನು ನನ್ನ ಇಚ್ಛೆಯಂತೆ ಬದುಕುತ್ತೇನೆ… ನಾನು ಅವನಲ್ಲ; ಅವಳು!’
Rituporno Gosh
ಆಮೇಲೆ ಬಂದ ಬಹುತೇಕ ಚಿತ್ರಗಳಲ್ಲಿ ರಿತು ಒಂದಲ್ಲ ಒಂದು ರೀತಿಯಲ್ಲಿ ಟ್ರಾನ್ಸ್‌ಜೆಂಡರ್‌ಗಳು, ಸಲಿಂಗಿಗಳ ಕುರಿತಾದ ಕತೆಯನ್ನು ಹೇಳುತ್ತಲೇ ಹೋದರು.  ಆ ಚಿತ್ರಗಳ ಸನ್ನಿವೇಶಗಳು ರಿತು ಬದುಕಿಗೆ ಸಮೀಪವಾದಂತಹವು ಎಂದು ಹತ್ತಿರದ ಸ್ನೇಹಿತರು ಹೇಳುತ್ತಾರೆ.  ಕಳೆದ ಕೆಲ ವರ್ಷಗಳಿಂದ ರಿತು ಆ ತರಹದ ಪಾತ್ರಗಳಲ್ಲಿ ತಾವೇ ಅಭಿನಯಿಸಿದರು ಕೂಡ!  ಸುಜಯ್ ಘೋಷ್ ನಿರ್ದೇಶನದ  ‘ಮೆಮೊರೀಸ್ ಆಫ್ ಮಾರ್ಚ್’ ಚಿತ್ರದ ಅವರ ಪಾತ್ರ ಇನ್ನೂ ನನ್ನ ಕಣ್ಣಮುಂದಿದೆ.  ಇತ್ತೀಚಿನ ಅವರದ್ದೇ ನಿರ್ದೇಶನದ ‘ಚಿತ್ರಾಂಗದ್’ ಚಿತ್ರದ ಅಭಿನಯಕ್ಕಾಗಿ ಅವರಿಗೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪೋಷಕನಟ ತೀರ್ಪುಗಾರರ ಪ್ರಶಸ್ತಿ ಕೂಡ ದೊರೆತಿತ್ತು.  ರಾಷ್ಟ್ರಮಟ್ಟದಲ್ಲಿ ಮನ್ನಣೆ ದೊರೆತಿದ್ದರೂ ಸಮಾಜ ಅವರನ್ನು ಕೊಂಚ ಅನುಮಾನದಿಂದಲೇ ನೋಡುತ್ತಿತ್ತು.  ತಮ್ಮನ್ನು ನೂರಾರು ಕಣ್ಣುಗಳು ನೋಡುತ್ತಿವೆ ಎಂದು ರಿತುಗೆ ಚನ್ನಾಗಿ ಗೊತ್ತಿತ್ತು.  ಅವರು ಯಾವುದಕ್ಕೂ ಕೇರ್ ಮಾಡಿದವರಲ್ಲ.   ತಮಗೆ ಅನ್ನಿಸಿದ ಸತ್ಯವನ್ನು ತೆರೆಯಮೇಲೆ ನಿರ್ಭಿಡೆಯಿಂದ ಹೇಳುತ್ತಾ ಹೋದರು.  ಹಾಗಾಗಿ ಅವರು ‘LGBT’ಗಳ (Lesbian, Gay, Bisexual, and Transgender) ಕಮ್ಯೂನಿಟಿಯ ಆರಾಧ್ಯ ದೈವದಂತಾಗಿದ್ದರು!

ಕೆಲವು ದಿನಗಳ ಹಿಂದೆ ರಿತು ಬೊಂಬಾಯಿಯಲ್ಲಿ ಹಿಂದಿಯ ಸೂಪರ್‌ಸ್ಟಾರ್ ಒಬ್ಬರ ಮನೆಗೆ ಹೋಗಿದ್ದರಂತೆ. ಆಗ ಇವರನ್ನು ಸ್ವಾಗತಿಸಿದ ಅವರ ಮಗ ಇವರನ್ನು ಕಂಡು, ‘ನಿಮ್ಮನ್ನು ರಿತು ಅಂಕಲ್ ಎಂದು ಕರೆಯಲೋ, ರಿತು ಆಂಟಿ ಎಂದು ಕರೆಯಲೋ?’ ಎಂದು ಕುಹಕವಾಡಿದ್ದನಂತೆ. ಈತನೂ ಚಿತ್ರನಟನೇ!  ಈ ಮಾತು ಸಹಜವಾಗಿ ರಿತುಗೆ ಇರುಸುಮುರಸು ಉಂಟು ಮಾಡಿತ್ತಂತೆ.  ಹಾಗಾಗಿ ರಿತು ಇತ್ತೀಚೆಗೆ ಜನರಿಂದ ದೂರ ಉಳಿಯಲು ಹೆಚ್ಚು ಹೆಚ್ಚು ಪ್ರಯತ್ನಿಸುತ್ತಿದ್ದರು ಎಂದು ಹತ್ತಿರದವರು ಹೇಳುತ್ತಾರೆ.   ಸಾಮಾನ್ಯವಾಗಿ ಸಂಜೆ ಆರರ ನಂತರ ಚಿತ್ರೀಕರಣ ಮಾಡುತ್ತಿರಲಿಲ್ಲ.  ಸೆಟ್‌ನಲ್ಲಿ ನಟರೊಂದಿಗೆ ಹೆಚ್ಚಿನ ಸಂಪರ್ಕ ಇಟ್ಟುಕೊಳ್ಳುತ್ತಿರಲಿಲ್ಲ.  ರಾತ್ರಿಯ ವೇಳೆಯಲ್ಲಿ ಚಿತ್ರೀಕರಣಕ್ಕೆ ಸಂಬಂಧಪಟ್ಟಂತೆ ಯಾರಾದರೂ ನಟರೊಂದಿಗೆ ಮಾತನಾಡಲೇ ಬೇಕಾದ ಸನ್ನಿವೇಶ ಬಂದರೂ ಅದನ್ನು ಬೇಕೆಂದೇ ತಪ್ಪಿಸುತ್ತಿದ್ದರಂತೆ ಅಥವಾ ಅದನ್ನು ತಮ್ಮ ಸಹಾಯಕರಿಗೆ ಒಪ್ಪಿಸುತ್ತಿದ್ದರಂತೆ.

ಆದರೆ ತೆರೆಯಮೇಲೆ ಅವರು ಯಾವುದಕ್ಕೂ ಅಂಜಲಿಲ್ಲಿ. ಇತ್ತೀಚಿನ ಚಿತ್ರಗಳಲ್ಲಿ ತಾವು ನಂಬಿದ್ದನ್ನೇ ಮಾಡುತ್ತಾ ಹೋದರು. ನಮ್ಮ ಸಮಾಜವನ್ನು ತಿದ್ದಲು ಒಬ್ಬ ಮನುಷ್ಯ ಬಂದೂಕು ಹಿಡಿದು ಕ್ರಾಂತಿಕಾರಿಯಾಗಲೇಬೇಕು ಎಂದೇನಿಲ್ಲ.  ತನ್ನ ಕೆಲಸಗಳ ಮೂಲಕ ಆತ ಸುತ್ತಲಿನ ಸಮಾಜದಲ್ಲಿನ ಬದಲಾವಣೆಗೆ ಪ್ರೇರಕ ಶಕ್ತಿಯಾಗಬಹುದು.  ರಿತು ತಮ್ಮ ಚಿತ್ರಗಳ ಮೂಲಕ, ಕೆಲವು ಪಾತ್ರಗಳನ್ನು ಸೃಷ್ಟಿಸುವುದರ ಮೂಲಕ, ಅವರ ಒಳತೋಟಿಗಳನ್ನು ತೆರೆಯ ಮೇಲೆ ಬರೆಯುವ ಮೂಲಕ ‘ಎಲ್‌ಜಿಬಿಟಿ’ ಜಗತ್ತಿನಲ್ಲಿ ನಿಜವಾದ ಕ್ರಾಂತಿಕಾರಿಯಾಗಿದ್ದರು.  ಅತ್ಯಂತ ಪ್ರಭಾವಶಾಲಿ ಮಾಧ್ಯಮದಲ್ಲಿದ್ದ ಒಬ್ಬ ಸೆಲೆಬ್ರಿಟಿ ಆ ಕಮ್ಯುನಿಟಿಗೆ ಧ್ವನಿಯಾಗಿ ನಿಂತದ್ದು ಭಾರತೀಯ ಚಿತ್ರರಂಗದ ಮಟ್ಟಿಗೆ ನಿಜಕ್ಕೂ ಆಶ್ಚರ್ಯಕರ ಬೆಳವಣಿಗೆಯೇ ಸರಿ.  ರಿತು ದಾ ನಮ್ಮವರಿಗೆಲ್ಲ ಘನತೆ ತಂದುಕೊಟ್ಟಿದ್ದರು ಎಂದು ಎಲ್‌ಜಿಬಿಟಿಯವರು ಹೆಮ್ಮೆಯಿಂದ ಹೇಳುತ್ತಾರೆ.  

ಈ ಕ್ರಾಂತಿಕಾರಕ ಧೋರಣೆಯೇ ಅವರನ್ನು ಇಷ್ಟು ಬೇಗ ಕರೆದುಕೊಂಡಿತೆ? ತಮ್ಮ ದೈಹಿಕ ಬದಲಾವಣೆಗೆ ರಿತುಪರ್ಣೋ ಅನೇಕ ಆಪರೇಷನ್‌ಗಳನ್ನು ಮಾಡಿಸಿಕೊಂಡಿದ್ದರು ಎಂದು ಹತ್ತಿರದವರು ಹೇಳುತ್ತಾರೆ.  ಇದೇ ಅವರ ಬದುಕಿಗೆ ಮುಳುವಾಯಿತೇನೋ?

ಇರಲಿ, ಒಬ್ಬ ಚಿತ್ರನಿರ್ದೇಶಕನಾಗಿ ಅವರ ಕೊಡುಗೆಯನ್ನು ನಾವು ಮರೆಯುವ ಹಾಗಿಲ್ಲ.

ರಿತುಪರ್ಣೋ ಘೋಷ್‌ರ ಚಿತ್ರಜಗತ್ತಿನ ಮೇಲೆ ಸತ್ಯಜಿತ್ ರೇ ಅವರ ಪ್ರಭಾವ ಸಾಕಷ್ಟಿತ್ತು.  ಅವರು ನನ್ನ ಗುರು ಎಂದು ರಿತು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.  ರಿತ್ವಿಕ್‌ಘಟಕ್, ಮೃಣಾಲ್‌ಸೆನ್, ತಪನ್‌ಸಿನ್ಹ ಮುಂತಾದ ನಿರ್ದೇಶಕರ ನಂತರ ಬೆಂಗಾಲಿಯಲ್ಲಿ ಹೆಚ್ಚು ಪ್ರಚಲಿತವಾದ ಹೆಸರು ರಿತುಪರ್ಣೋ ಘೋಷ್ ಅವರದ್ದು.
ಎರಡು ದಶಕಗಳಲ್ಲಿ (1992-2013) ಇಪ್ಪತ್ತು ಚಿತ್ರಗಳು… ಹನ್ನೆರಡು ರಾಷ್ಟ್ರಪ್ರಶಸ್ತಿಗಳು… ಅನೇಕ ಅಂತಾರಾಷ್ಟ್ರೀಯ ಗೌರವ…  ಇದೇನೂ ಸಾಮಾನ್ಯ ಸಾಧನೆಯೇ!  ತೊಂಬತ್ತರ ದಶಕದ ಆರಂಭದಲ್ಲಿ ಬೆಂಗಾಲಿ ಪ್ರೇಕ್ಷಕ ಚಿತ್ರಮಂದಿರದಿಂದ ದೂರ ಉಳಿಯಲು ಪ್ರಾರಂಭಿಸಿದ ಸಂದರ್ಭದಲ್ಲಿ ರಿತು ಚಿತ್ರರಂಗಕ್ಕೆ ಕಾಲಿಟ್ಟರು.  ‘ಕಮರ್ಷಿಯಲ್’ ಮತ್ತು ‘ಕಲಾತ್ಮಕ’ ಎಂಬ ಪ್ರಭೇದಗಳು ಚಿತ್ರರಂಗದಲ್ಲಿ ಪ್ರಚಲಿತವಾಗಿದ್ದವು.  ಪ್ರೇಕ್ಷಕ ಎರಡನ್ನೂ ತಿರಸ್ಕರಿಸುತ್ತಿದ್ದ.  ಆಗ ರಿತು ತಮ್ಮ ಭಿನ್ನಧಾಟಿಯ ಚಿತ್ರಗಳ ಮೂಲಕ ಎರಡಕ್ಕೂ ಹೊರತಾದ ಮೂರನೆಯ ಪ್ರಾಕಾರವನ್ನು ತುಳಿದರು.  ತಮ್ಮನ್ನು A BAD student of Cinema ಎಂದು ತಾವೇ ಗೇಲಿ ಮಾಡಿಕೊಳ್ಳುತ್ತಲೇ, ಬರಿಯ ಬೆಂಗಾಲಿ ಅಷ್ಟೇ ಅಲ್ಲ, ಹಿಂದಿ ಮತ್ತು ಇಂಗ್ಲೀಷಿನಲ್ಲೂ ರಿತು ಚಿತ್ರಗಳನ್ನು ತೆಗೆದರು.  ಅಮಿತಾಬ್ ಬಚ್ಚನ್, ಐಶ್ಚರ್ಯಾ ರೈ ಮುಂತಾದ ಖ್ಯಾತನಾಮರನ್ನು ತಮ್ಮ ಚಿತ್ರಗಳಲ್ಲಿ ಬಳಸಿಕೊಳ್ಳುವ ಮೂಲಕ ತಮ್ಮದೇ ಆದ ಪ್ರೇಕ್ಷಕವರ್ಗವನ್ನು ಸೃಷ್ಟಿಸಿಕೊಂಡಿದ್ದರು.   ‘ಹಿರೇರ್ ಅಂಗ್ತಿ’, ‘ಉನಿಶೆ ಏಪ್ರಿಲ್’, ‘ದಹನ್’, ‘ಅಸುಖ್’, ‘ಚೋಖೇರ್ ಬಾಲಿ’, ‘ರೈನ್ ಕೋಟ್’, ‘ಬರಿವಾಲಿ’, ‘ಅಂತರ್ ಮಹಲ್’, ‘ನೌಕಾದುಬಿ’, ‘ಅಬಹೊಮನ್’, ‘ದೋಸರ್’ ‘ಚಿತ್ರಾಂಗದ’, ‘ದ ಲಾಸ್ಟ್ ಲಿಯರ್’ ಮುಂತಾದವು ಇವರ ಕೆಲ ಪ್ರಮುಖ ಚಿತ್ರಗಳು.   ಇತ್ತೀಚೆಗೆ ಅವರು ಸಾಯುವುದಕ್ಕೆ ಎರಡು ದಿನ ಮುಂಚೆ ತಮ್ಮ ‘ಸತ್ಯಾನ್ವೇಷಿ’ ಚಿತ್ರದ ಚಿತ್ರೀಕರಣ ಮುಗಿಸಿ ಹೀಗೆ ಟ್ವೀಟ್ ಮಾಡಿದ್ದರು.  
Wrapped up the shoot of Satyanewshi, a crime thriller in the molten glow of the pensive falling afternoon. – 7:44 AM – 28 May 13

ಇಲ್ಲಿ Wrapped up ಎನ್ನುವ ಪದಕ್ಕೆ ಎರಡು ದಿನಗಳ ನಂತರ ಏನೇನು ಅರ್ಥಗಳು ಬರುತ್ತಿದೆ ನೋಡಿ! ಹಾಗೆನೋಡಿದರೆ ಈತನೂ ಒಬ್ಬ ಸತ್ಯಾನ್ವೇಷಿಯೇ ಸೈ!

(‘ಮಯೂರ’ ಜುಲೈ-2013, ಪ್ರಕಟವಾದ ಲೇಖನ)