ಒಂದೇ ದಿನ, ಮೂರು ಕಡೆ, ಮೂರು ಚಿತ್ರಗಳ ಪ್ರದರ್ಶನ…
ನಿನ್ನೆ,
ಅಂದರೆ ೨೦೧೧ ಜುಲೈ ತಿಂಗಳ ಹದಿಮೂರನೇ ದಿನ, ನನಗೆ ಸಂತೋಷವಾಗಲು ಮೂರು ಕಾರಣಗಳಿದ್ದವು.
ಒಂದು,
‘ಬೆಟ್ಟದ ಜೀವ’ ಚಿತ್ರ ಮೂರನೇ ವಾರ ಚಿತ್ರಮಂದರದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇಂದೂ ಕೂಡ ತುಂಬ ಫೋನ್ ಮಾಡಿ ಚಿತ್ರನೋಡಲು ಎರಡನೇ ಬಾರಿ ಹೋಗುತ್ತಿದ್ದೇವೆ ಎಂದು ಹೇಳಿದ್ದರು. ಇದು ನಿಜವಾದ ಸಮಾಧಾನವಲ್ಲವೇ?
ಎರಡು,
ಮಧ್ಯಾಹ್ನ ಬೆಂಗಳೂರಿನ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ‘ತುತ್ತೂರಿ’ಚಿತ್ರವನ್ನು ಪ್ರದರ್ಶಿಸಿ ನಂತರ ಪ್ರೇಕ್ಷಕರೊಂದಿಗೆ ಚರ್ಚೆ ಏರ್ಪಡಿಸಿದ್ದರು. ಚಿತ್ರ ಬಂದು ಆರು ವರ್ಷ ಕಳೆದಿದ್ದರೂ, ಈ ಕಥಾವಸ್ತು ಅಂದಿಗಿಂತ ಇಂದಿಗೆ ಇನ್ನೂ ಹೆಚ್ಚಿನ ಪ್ರಸ್ತುತತೆ ಹೊಂದಿದೆ ಎಂದು ಪ್ರೇಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದರು. ‘ಮಕ್ಕಳ ಚಿತ್ರ ಎಂದರೇನು?’ ಎಂಬ ಪ್ರಶ್ನೆ ಎದ್ದಿತು. ಆಸ್ಟ್ರೇಲಿಯಾದಲ್ಲಿರುವ ಮಿತ್ರ ಸುದರ್ಶನ (‘ಮುಖಾಮುಖಿ’ ಚಿತ್ರ ನಿರ್ದೇಶಕ) ಬಂದಿದ್ದರು. ಆಸ್ಟ್ರೇಲಿಯಾದ ಮಕ್ಕಳ ಸಮಸ್ಯೆಗೂ, ಭಾರತದ ಮಕ್ಕಳ ಸಮಸ್ಯೆಗೂ ವ್ಯತ್ಯಾಸ ಮಾತಿನ ನಡುವೆ ಬಂತು…
ಈ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದಾಗಲೇ ರಾತ್ರಿ ಹತ್ತಾಗಿತ್ತು. ಊಟ ಮಾಡಿ ಮಲಗುವ ಮುಂಚೆ ನ್ಯೂಸ್ ನೋಡೋಣವೆಂದು ಟಿವಿ ಆನ್ ಮಾಡಿದೆ. ಆಗ ರಾತ್ರಿ ಸುಮಾರು ಹನ್ನೊಂದು ದಾಟಿತ್ತು. ದೂರದರ್ಶನದ (ಡಿಡಿ-೧) ನ್ಯಾಷನಲ್ ನೆಟ್‌ವರ್ಕ್‌ನಲ್ಲಿ ‘ವಿಮುಕ್ತಿ’ ಚಿತ್ರ ಪ್ರದರ್ಶನವಾಗುತ್ತಿದೆ! ನನ್ನ ಮೂರನೇ ಸಂತೋಷಕ್ಕೆ ಇಷ್ಟು ಸಾಕಲ್ಲವೆ?
ರಾತ್ರಿ ಒಂದರವರೆಗೂ ಪಾಂಡಿಚರಿಯಿಂದ, ಹುಬ್ಬಳ್ಳಿಯಿಂದ, ಹೈದರಾಬಾದಿನಿಂದ ಫೋನ್ ಬರುತ್ತಲೇ ಇತ್ತು. ಭಾರತದ ಉದ್ದಗಲಕ್ಕೂ ‘ವಿಮುಕ್ತಿ’ ಹರಡಿದೆ. ಯಾವುದೇ ಖಾಸಗಿ ಚಾನಲ್ ಏನೇ ಹೇಳಿದರೂ ದೂರದರ್ಶನನದ ವ್ಯಾಪ್ತಿ ಬಹಳ ದೊಡ್ಡದು. ಚಿತ್ರ ಅಷ್ಟು ಜನರನ್ನು ತಲಪಿತಲ್ಲ ಎಂದು ನನಗೆ ಸಮಾಧಾನವಾಯಿತು. ಇದು ಯಾವುದೇ ಪ್ರಶಸ್ತಿಗಿಂತಲೂ ದೊಡ್ಡದು. ಒಬ್ಬ ನಿರ್ದೇಶಕನಿಗೆ ಇನ್ನೇನು ಬೇಕು?
ಇದೇ ಸಂದರ್ಭದಲ್ಲಿ ‘ತುತ್ತೂರಿ’ ಚಿತ್ರ ಮಾಡಿದ ಹಿನ್ನೆಲೆ ಎಲ್ಲಾ ನೆನಪಿಗೆ ಬರುತ್ತಿದೆ. ಅದನ್ನು ನಿಮಗೆ ಹೇಳುತ್ತಿದ್ದೇನೆ:
ನಾನು ಮಕ್ಕಳ ಚಿತ್ರವೊಂದನ್ನು ಮಾಡಬೇಕೆಂದು ಹೊರಟಿದ್ದು ಹನ್ನೆರಡು ವರ್ಷಗಳ ಹಿಂದೆ, ೧೯೯೮ ರ ಸುಮಾರಿನಲ್ಲಿ, ಗೆಳೆಯ ಪ್ರಹ್ಲಾದ್ ಒಮ್ಮೆ ಮಾತನಾಡುತ್ತಾ ಈಗಿನ ‘ತುತ್ತೂರಿ’ಯ ವಸ್ತುವನ್ನು ಹೇಳಿದಾಗ. ಆಗ ನಾನು ಸ್ವತಂತ್ರವಾಗಿ ಯಾವುದೇ ಚಲನಚಿತ್ರವನ್ನು ನಿರ್ದೇಶಿಸಿರಲಿಲ್ಲ. ಈ ವಸ್ತುವನ್ನು ಹಿಡಿದು ಕಥೆ ಹೆಣೆಯುತ್ತಾ ಚರ್ಚೆಗಳನ್ನು ಪ್ರಾರಂಭಿಸಿದೆ. ಈ ಚಿತ್ರದ ಆಶಯ ಏನಾಗಿರಬೇಕು? ಯಾರನ್ನು ತಲಪಬೇಕು? ಏನನ್ನು ಹೇಳಬೇಕು? ಎಂಬ ಪ್ರಶ್ನೆಗಳು ಮುಂದಿದ್ದವು. ಇವಕ್ಕೆ ನಾನು ಉತ್ತರಿಸಿಕೊಂಡದ್ದು ಹೀಗೆ: ಮುಖ್ಯವಾಗಿ ಚಿತ್ರ ಮಕ್ಕಳನ್ನು ಮನರಂಜಿಸಬೇಕು ಮತ್ತು ಅವರನ್ನು ಚಿಂತನೆಗೆ ಹಚ್ಚಬೇಕು. ಹಾಗೆಯೇ ಪೋಷಕರಿಗೆ ಮಕ್ಕಳ ಮನಸ್ಸನ್ನು ಅರಿಯಲು ಸಹಾಯ ಮಾಡಬೇಕು, ಜೊತೆಗೆ ಸರ್ಕಾರದ ಗಮನ ಮಕ್ಕಳ ಸಮಸ್ಯೆಗಳ ಮೇಲೆ ಅರಿಯಬೇಕು. ಈ ಮೂರೂ ಅಂಶಗಳನ್ನು ಇಟ್ಟುಕೊಂಡು ಚಿತ್ರಕಥೆ ಪ್ರಾರಂಭಿಸಿದೆ. ಆದರೆ ಇದು ತೆರೆಯ ಮೇಲೆ ಬಂದದ್ದು ಎಂಟು ವರ್ಷಗಳ ಮೇಲೆ, ೨೦೦೫ರಲ್ಲಿ!
ಎಂಟು ವರ್ಷಗಳ ಕಾಲ ಚಿತ್ರದ ಕಥೆ ನನ್ನೊಳಗೆ ಸುತ್ತತ್ತಲೇ ಇತ್ತು. ಅಷ್ಟು ವರ್ಷ ಕಥೆಯ ಹಿನ್ನೆಲೆಯಲ್ಲಿ ಮಕ್ಕಳ ಮನಸ್ಸನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದೆ, ಜೊತೆಯಲ್ಲಿ ನನ್ನ ಮಗ ಪ್ರಥಮ ಕೂಡ ಬೆಳೆಯುತ್ತಿದ್ದ. ತೀರ ಹತ್ತಿರದಿಂದ ಮಗುವಿನ ಮನಸ್ಸನ್ನು ಅರಿಯಲು ಇದು ಸಹಕಾರಿಯಾಯಿತು. ಅವನ ಮನರಂಜನೆಯ ಆಯ್ಕೆಯನ್ನು ಗಮನಿಸುತ್ತಿದ್ದೆ. ಇದರಲ್ಲಿ ಟಿವಿ ಪ್ರಮುಖ ಪಾತ್ರ ವಹಿಸಿತ್ತು. ಅದರಲ್ಲೂ ಮುಖ್ಯವಾಗಿ ಕಾರ್ಟೂನ್ ನೆಟ್‌ವರ್ಕ್ ಹಾಗೂ WWF ಹಾಗೂ ಇತರ ಕಂಪ್ಯೂಟರ್ ಗೇಮ್‌ಗಳು ಅವರನ್ನು ಸುಲಭವಾಗಿ ಸೆಳೆಯುತ್ತಿದ್ದವು. ಆದರೆ ನನ್ನ ಚಿತ್ರದಲ್ಲಿ ಇವು ಯಾವುವೂ ಇರಲಿಲ್ಲ!
ಮಕ್ಕಳನ್ನು ಆಟದ ಜೊತೆಗೆ ಆಕರ್ಷಿಸುವ ಇನ್ನೊಂದು ಮಾಧ್ಯಮ ಸಂಗೀತ ಹಾಗೂ ಹಾಡುಗಳು. ಹೀಗಾಗಿ ನನ್ನ ಚಿತ್ರದಲ್ಲಿ ಯಥೇಚ್ಛವಾಗಿ ಹಾಡುಗಳನ್ನು ಸೇರಿಸಲು ತೀರ್ಮಾನಿಸಿದೆ. ಇವು ಎಲ್‌ಕೆಜಿಯ ಮಕ್ಕಳಿಗೆ ಹೇಳಿಕೊಡುವ ರೈಮ್ ಮಾದರಿಯಲ್ಲಿರಬೇಕು ಎಂಬುದರ ಕಡೆ ಗಮನ ಹರಿಸಿದೆ.
ಕಥೆ ಹುಟ್ಟಿದ್ದಕ್ಕೂ ತೆರೆಯ ಮೇಲೆ ಬಂದದ್ದಕ್ಕೂ ಅಷ್ಟು ವರ್ಷಗಳ ಅಂತರವಿದ್ದರೂ ಮೂಲ ಆಶಯದಲ್ಲಿ ಹೆಚ್ಚಿನ ಬದಲಾವಣೆಗಳಾಗಲಿಲ್ಲ. ಈ ಚಿತ್ರ ಅಷ್ಟು ವರ್ಷ ಪೇಪರ್ ಮೇಲೆಯೇ ಇರಲು ಮುಖ್ಯ ಕಾರಣ ಮಕ್ಕಳಚಿತ್ರಗಳಿಗೆ ಹಣ ಹೂಡವವರ ಕೊರತೆ. ನಿರ್ಮಾಪಕಿ ಜಯಮಾಲ ಚಿತ್ರನಿರ್ಮಾಣದ ಹೊಣೆ ಹೊತ್ತ ಮೇಲೆಯೇ ಇದು ಪ್ರಾರಂಭವಾದದ್ದು.
‘ತುತ್ತೂರಿ’ಯ ಕಥೆ ನಗರಪ್ರದೇಶದಲ್ಲಿರುವ ಮಕ್ಕಳನ್ನು ಕುರಿತದ್ದಾದರೂ, ಹಳ್ಳಿಯಿಂದ ಬರುವ ಶಿವಲಿಂಗ ಇಲ್ಲಿಯವರ ಮೇಲೆ ತನ್ನ ಪ್ರಭಾವ ಬೀರುತ್ತಾನೆ. ಇವನೊಂದಿಗೆ ಚಿತ್ರದ ಉದ್ದಕ್ಕೂ ಸುಮಾರು ಮುನ್ನೂರಕ್ಕೂ ಹೆಚ್ಚು ಮಕ್ಕಳು ಬಂದು ಹೋಗುತ್ತಾರೆ. ಸುಮಾರು ಒಂದು ಸಾವಿರ ಮಕ್ಕಳನ್ನು ಸಂದರ್ಶಿಸಿ ಅದರಲ್ಲಿ ಮುನ್ನೂರು ಮಕ್ಕಳನ್ನು ಆಯ್ಕೆ ಮಾಡಿಕೊಂಡೆ. ಮುಖ್ಯವಾದ ಮೂವತ್ತು ಮಕ್ಕಳಿಗೆ ನಾಲ್ಕು ದಿನಗಳ ಒಂದು ತರಬೇತಿ ಶಿಬಿರವನ್ನು ಏರ್ಪಡಿಸಿದೆ. ಆ ಮೂಲಕ ಅವರಿಗೆ ಹತ್ತಿರವಾಗಬೇಕಿತ್ತು. ಜೊತೆಗೆ ನನ್ನ ಮತ್ತು ಅವರ ನಡುವೆ ಒಂದು ಬಾಂಧವ್ಯ ಬೆಳೆಯಬೇಕಿತ್ತು. ಇದಕ್ಕೆ ಸಾಕಷ್ಟು ಸಹಾಯ ಮಾಡಿದ್ದು ಚಾಕ್‌ಲೇಟ್ ಹಾಗೂ ಐಸ್‌ಕ್ರೀಂಗಳು. ಶಿಬಿರದ ಕೊನೆಯ ದಿನ ಅಷ್ಟೂ ಮಕ್ಕಳನ್ನು ಒಂದೆಡೆ ಸೇರಿಸಿ ಈ ಚಿತ್ರದ ಕಥೆ ಹೇಳಿದೆ. ಕಥೆ ಹೇಳುವಾಗ ಒಂದು ತಂತ್ರ ಬಳಸಿದೆ. ಮೊದಲಿಗೆ ಒಂದೊಂದೇ ದೃಶ್ಯ ಹೇಳಿ ಮುಂದಿನ ದೃಶ್ಯದಲ್ಲಿ ಕಥೆ ಏನಾಗಬಹುದು, ಎಂದು ಮಕ್ಕಳ ಬಾಯಿಂದಲೇ ಹೊರ ಬರುವಂತೆ ಮಾಡಿದೆ. ಸಣ್ಣ-ಪುಟ್ಟ ಬದಲಾವಣೆಗಳನ್ನು ಬಿಟ್ಟರೆ ನಾವು ಈ ಹಿಂದೆ ಮಾಡಿಕೊಂಡ ಕಥೆಗೂ ಇದಕ್ಕೂ ಹೆಚ್ಚಿನ ಬದಲಾವಣೆಗಳಾಗಲಿಲ್ಲ. ಕಥೆ ಹೇಳುವ ಕ್ರಿಯೆ ಮುಗಿದು ಕೇಳಿದ ಮಕ್ಕಳು ಚಪ್ಪಾಳೆ ತಟ್ಟಿದಾಗ ಅರ್ಧ ಗೆದ್ದಂತಾಯಿತು.
ಇಡೀ ‘ತುತ್ತೂರಿ’ಯ ಕಥೆ ಮಕ್ಕಳ ಆಟದ ಸುತ್ತ ಸುತ್ತುತ್ತಿದ್ದುದರಿಂದ ಮಕ್ಕಳು ಶೂಟಿಂಗ್ ಅನ್ನು ಒಂದು ಆಟ ಎಂಬಂತೆಯೇ ಭಾವಿಸಿದರು, ಸಂಭ್ರಮದಿಂದ ಭಾಗವಹಿಸಿದರು. ಜೊತೆ ಚಿತ್ರೀಕರಣ ನಡೆದದ್ದು ಬೇಸಿಗೆ ರಜದಲ್ಲಿ. ಅವರಿಗೆ ಇದು ಒಂದು ಪಿಕ್‌ನಿಕ್‌ನಂತೆಯೇ ಭಾಸವಾಗಬೇಕು ಎಂದು ಎಚ್ಚರಿಕೆ ವಹಿಸಿದ್ದೆವು. ಚಿತ್ರದಲ್ಲಿ ಒಂದು ಬರಡು ಪ್ರದೇಶವನ್ನು ಮಕ್ಕಳೆಲ್ಲ ಸೇರಿ ಸುಂದರವಾದ ಆಟದ ಮೈದಾನ ಮಾಡಿಕೊಳ್ಳುತ್ತವೆ. ಅಲ್ಲೇ ಸಿಗುವ ವಸ್ತುಗಳಿಂದ ಬಗೆ ಬಗೆಯ ಆಟಗಳನ್ನು ಆಡುತ್ತವೆ. ಆಟದ ಮೈದಾನವನ್ನು ಸಿದ್ಧ ಮಾಡುವುದರಲ್ಲಿ ಚಿತ್ರೀಕರಣದ ಮಕ್ಕಳ ಪಾಲೂ ಇತ್ತು. ಕೊನೆಯಲ್ಲಿ ಮಕ್ಕಳು ಕಟ್ಟಿದ್ದ ಆಟದ ಮೈದಾನವನ್ನು ಬುಲ್ಡೋಜರ್ ಬಂದು ಬೀಳಿಸಿ ನೆಲಸಮ ಮಾಡುತ್ತದೆ. ನಿಜವಾಗಿ ಸಮಸ್ಯೆ ಎದುರಾದದ್ದು ಇಲ್ಲಿ!
ಈ ಸನ್ನಿವೇಶದಲ್ಲಿ ಸುಮಾರು ಐವತ್ತು ಮಕ್ಕಳು ಭಾಗವಹಿಸಿದ್ದವು. ನಾವು ಚಿತ್ರೀಕರಣಕ್ಕೆಂದು ಎಲ್ಲ ಸಿದ್ಧಮಾಡಿಕೊಂಡೆವು. ಒಂದೆಡೆಯಿಂದ ಮೈದಾನವನ್ನು ಬೀಳಿಸುವುದು ಮಕ್ಕಳು ಅದನ್ನು ತಡೆಯಲು ಪ್ರಯತ್ನಿಸುವುದು ಈ ಸನ್ನಿವೇಶವನ್ನು ಚಿತ್ರೀಕರಿಸಬೇಕಿತ್ತು. ಮಕ್ಕಳು ಇದರಲ್ಲಿ ಹೇಗೆ ಭಾಗವಹಿಸುತ್ತಾರೆ ಎಂಬ ಕುತೂಹಲವಿತ್ತು. ಮಕ್ಕಳು ಭಿನ್ನವಾಗಿ ಪ್ರಕ್ರಿಯಿಸಿದರು. ತಾವು ಕಟ್ಟಿದ ಆಟದ ಮೈದಾನ ಹಾಳಾಗುವುದನ್ನು ಅದು ಚಿತ್ರೀಕರಣ ಎಂದರೂ ಕೂಡ ಒಪ್ಪಿಕೊಳ್ಳಲಿಲ್ಲ. ‘ಪ್ಲೀಸ್ ಬೀಳಿಸಬೇಡಿ ಅಂಕಲ್’ ಎಂದು ಬಂದು ನನ್ನ ಕೈ ಹಿಡಿದು ನಿಜವಾದ ಕಣ್ಣೀರು ಹಾಕಿದಾಗ ಚಿತ್ರೀಕರಿಸುವುದು ನಮಗೆ ತುಂಬ ಕಷ್ಟವಾಯಿತು. ಸ್ವಲ್ಪ ಕಾಲ ಚಿತ್ರೀಕರಣ ಸ್ಥಗಿತಗೊಳಿಸಿ ಅವರಿಗೆ ಸಮಾಧಾನ ಹೇಳಿ ಚಿತ್ರೀಕರಣ ಮುಂದುವರಿಸಿದಾಗ ಬಿಕ್ಕಿ ಬಿಕ್ಕಿ ಅತ್ತರು. ಸನ್ನಿವೇಶವೂ ಇದೇ ಆಗಿದ್ದುದರಿಂದ ಇದು ನೈಜವಾಗೇನೋ ಬಂತು. ಆದರೆ ಚಿತ್ರೀಕರಣ ಮುಗಿದ ಮೇಲೆ ಮಕ್ಕಳು ಸುಧಾರಿಸಿಕೊಳ್ಳಲು ಸ್ವಲ್ಪ ಸಮಯವೇ ಇಡಿಯಿತು. ಈಗಲೂ ಚಿತ್ರಮಂದಿರದಲ್ಲಿ ಈ ದೃಶ್ಯ ತೆರೆಯ ಮೇಲೆ ಬಂದಾಗ ಮಕ್ಕಳ ಕಣ್ಣಲ್ಲಿ ನೀರು ಬರುವುದನ್ನು ಚಿತ್ರಮಂದಿರದಲ್ಲಿ ಗಮನಿಸಿದ್ದೇನೆ. ಆಗ ಅನ್ನಿಸುತ್ತದೆ ನನ್ನ ಚಿತ್ರದ ಯಶಸ್ಸು ಇದೇ ಎಂದು.
‘ತುತ್ತೂರಿ’ ಬರೀ ನಮ್ಮ ಊರಿನಲ್ಲಿ ಅಷ್ಟೇ ಅಲ್ಲ, ಹೊರಗಿನ ಹಲವಾರು ದೇಶಗಳಲ್ಲಿ ನಮ್ಮ ಭಾಷೆ, ಸಂಸ್ಕೃತಿ ಗೊತ್ತಿಲ್ಲದ ಮಕ್ಕಳ ಮನಸ್ಸನ್ನೂ ಗೆದ್ದಿದೆ, ಜೊತೆಗೆ ಪ್ರಶಸ್ತಿಯನ್ನೂ ತಂದಿದೆ. ಅಲ್ಲಿಗೆ ಒಂದು ಅರ್ಥವಾದ ಸಂಗತಿ ಎಂದರೆ ಮಕ್ಕಳು ಎಲ್ಲಿದ್ದರೂ ಹೇಗಿದ್ದರೂ ಮಕ್ಕಳೇ! ಮಕ್ಕಳ ಚಿತ್ರ ಮಕ್ಕಳನ್ನು ಬರೀ ರಂಜಿಸಿದರೆ ಸಾಲದು, ಅವರನ್ನು ಚಿಂತನೆಗೂ ಹಚ್ಚಬೇಕು. ಆಗ ನಿಜವಾದ ರೀತಿಯಲ್ಲಿ ಒಂದು ಮಕ್ಕಳ ಚಿತ್ರ ಯಶಸ್ವಿಯಾದಂತೆ.
ಆದರೆ ದುರಾದೃಷ್ಟವಶಾತ್ ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಳ್ಳೆಯ ಮಕ್ಕಳ ಚಿತ್ರಗಳು ತಯಾರಾಗುತ್ತಿಲ್ಲ. ಸಿನಿಮಾ ತನ್ನೊಳಗೆ ವ್ಯಾಪಾರವನ್ನು ಮೂರ್ತೀಭವಿಸಿಕೊಂಡಿರುವುದರಿಂದ ಕಮರ್ಷಿಯಲ್ ಚಿತ್ರಗಳೊಂದಿಗೆ ವ್ಯಾವಹಾರಿಕ ಪೈಪೋಟಿಯಲ್ಲಿ ಗೆಲ್ಲಲಾಗದೆ ಮಕ್ಕಳ ಚಿತ್ರಗಳು ಸೊರಗುತ್ತಿವೆ. ಇತ್ತ ನಮ್ಮ ಮಕ್ಕಳು ಟಿವಿಯಲ್ಲಿ ಕಾರ್ಟೂನ್ ನೆಟ್‌ವರ್ಕ್ ಎಂಜಾಯ್ ಮಾಡುತ್ತಾ, WWF ಆನಂದಿಸುತ್ತಾ ಬೆಳೆಯುತ್ತಿವೆ. ನನ್ನ ಮಗ ಹೇಳುತ್ತಿದ್ದಾನೆ- ‘ಅಪ್ಪಾ, ನಿನ್ನ ಮುಂದಿನ ಚಿತ್ರದಲ್ಲಿ ಫೈಟಿಂಗ್ ಇರಲಿ…’ ಎಂದು!
- Posted in: Uncategorized
ಸರ್,
ಕಳೆದ ವಾರ ತಾನೇ ‘ಬೆಟ್ಟದ ಜೀವ’ ಎರಡನೇ ಬಾರಿ ಓದಿಸಿಕೊಂಡಿತು. ಅದೇ ಗುಂಗಿನಲ್ಲಿ ಸಿನಿಮಾ ನೋಡಿ ಬಿಡೋಣವೆಂದುಕೊಂಡು, ಗೆಳೆಯ ರವೀಂದ್ರ ಮಾವಖಂಡರಿಂದ ಹೋದ ಭಾನುವಾರ, ಬೆಟ್ಟದ ಜೀವ ಸಿನಿಮಾದ (ಮಂತ್ರಿಯಲ್ಲಿ) ಶೋ ಟೈಮ್ ಪತ್ತೆ ಮಾಡಿಕೊಳ್ಳುವಷ್ಟರಲ್ಲಿ ಗಂಟೆ 3 ಆಗಿತ್ತು. ಕೋರಮಂಗಲದ ಪಿ.ವಿ.ಆರ್ ನನಗೆ ಇನ್ನೊಂದು ದಿಕ್ಕೇ ಸೈ. ಹಾಗಾಗಿ ಈ ಶನಿವಾರಕ್ಕೆ ಕಾಯುತ್ತಿದ್ದೆ. ಇವತ್ತು ನೋಡಿದರೆ inox ನ ಸಿನಿಮಾ ಯಾದಿಯಲ್ಲಿ ‘ಬೆಟ್ಟದ ಜೀವ’ದ ಹೆಸರೇ ಕಾಣುತ್ತಿಲ್ಲ. ನಿಜಕ್ಕೂ ಬೇಜಾರಾಯ್ತು. ಎಲ್ಲಾದರೂ ವಿಶೇಷ ಪ್ರದರ್ಶನಗಳಿದ್ದರೆ ಕಾತರನಾಗಿದ್ದೇನೆ.
ಧನ್ಯವಾದಗಳು…
-ಪ್ರವೀಣ್ ಬಣಗಿ
ಪ್ರಿಯರೇ,
‘ಬೆಟ್ಟದ ಜೀವ’ ಮೂರು ವಾರಗಳ ಕಾಲ ಐನಾಕ್ಸ್‌ನಲ್ಲಿ ಪ್ರದರ್ಶನಗೊಂಡಿತು.
ಅಷ್ಟೂ ದಿನ ನಿಮ್ಮ ಗಮನಕ್ಕೆ ಬರದೇ ಇರುವುದು ಆಶ್ಚರ್ಯ.
ಈಗ ನಾಲ್ಕನೇ ವಾರ ಪಿವಿಆರ್ ನಲ್ಲಿ ಮುಂದುವರಿದಿದೆ.
ನೀವು ಚಿತ್ರವನ್ನು ನೋಡಲೇಬೇಕೆಂದರೆ ಕೋರಮಂಗಲ ಬೆಂಗಳೂರಿನ ಯಾವುದೇ ಭಾಗಕ್ಕೆ ದೂರವಲ್ಲ.
ನಾವು ದೇವರ ದರ್ಶನಕ್ಕೆ ತಿರುಪತಿ, ಧರ್ಮಸ್ಥಳ ಎಂದು ಹೋಗುವುದಿಲ್ಲವೇ?…
ಪಿ.ಶೇಷಾದ್ರಿ
ಪ್ರತಿಕ್ರಿಯೆಗೆ ಧನ್ಯವಾದಗಳು ಸರ್. ಸ್ವಂತ ವಾಹನ ಇಲ್ಲದಿರುವುದೂ, ಪಿ.ವಿ.ಆರ್ ನಲ್ಲಿ ರಾತ್ರಿ ಶೋ ಮಾತ್ರ ಇರುವುದೂ ಎಲ್ಲವೂ ಮೇಳೈಸಿ ಕೋರಮಂಗಲ ದೂರ ಅಂದುಕೊಂಡೆ ಅಷ್ಟೇ. ಹಾಗೆಯೇ ಐನಾಕ್ಸ್‌ನಲ್ಲಿ ಸಿನಿಮಾ ಇದ್ದಿದ್ದು ತಿಳಿದೂ, ನನ್ನ ಇತರೆ ಉಪದ್ವ್ಯಾಪಗಳೇ ಹೆಚ್ಚಾಗಿ ನೋಡಲಾಗಲಿಲ್ಲ.
ಹೇಗೂ ಇರಲಿ, ಮತ್ತೆ ಕಾಯುತ್ತೇನೆ. 🙂
– ಪ್ರವೀಣ್