ಪಿ. ಶೇಷಾದ್ರಿ

ಕಂಡಿದ್ದು ಕಂಡಂತೆ…

‘ಮಾಯಾಬಜಾರ್’ ನೂರು ವರುಷ…

ಯಾರೊಬ್ಬರಿಗಾದರೂ ಅರಿವಿತ್ತೆ?

ಪಶ್ಚಿಮದಲ್ಲಿ ಹುಟ್ಟಿ ಬಂದ ಇದು, ನೂರೇ ವರ್ಷಗಳಲ್ಲಿ ತ್ರಿವಿಕ್ರಮನಾಗಿ ಬೆಳೆದು, ತನ್ನ ಅಸ್ತಿತ್ವವನ್ನು ಸ್ಥಾಪಿಸಿ ನಮ್ಮನ್ನೆಲ್ಲ ಹೀಗೆ ಆಳುತ್ತದೆ ಎಂದು?

ಅದಕ್ಕೇ ಇದನ್ನು ‘ಮಾಯಾಬಜಾರ್’ ಎಂದು ಕರೆಯುವುದು!
Camera

* * *

ಡಿಸೆಂಬರ್ 28, 1895 ಪ್ರಪಂಚದ ಚಲನಚಿತ್ರಜಗತ್ತಿಗೆ ವಿಶೇಷ ದಿನವಾದರೆ; ಮೇ 3, 1913 ಭಾರತದ ಚಲನಚಿತ್ರರಂಗಕ್ಕೆ ಪ್ರಮುಖವಾದ ವರ್ಷ. ಅಲ್ಲಿ ಲ್ಯೂಮಿಯೇರ್ ಸಹೋದರರು ಜಗತ್ತಿನ ಚಲನಚಿತ್ರಕ್ಕೆ ಮಾತಾಪಿತೃಗಳಾದರೆ; ಇಲ್ಲಿ ದಾದಾಸಾಹೇಬ್ ಫಾಲ್ಕೆ ‘ರಾಜಾ ಹರಿಶ್ಚಂದ್ರ’ ಚಿತ್ರವನ್ನು ತಯಾರಿಸಿ ಭಾರತದ ಪಾಲಿಗೆ ಚಲನಚಿತ್ರದ ಭೀಷ್ಮರೆನಿಸಿದರು.

ಪ್ಯಾರಿಸಿನಲ್ಲಿ ಲ್ಯೂಮಿಯೇರ್ ಸಹೋದರರು ಆರಂಭಿಸಿದ ಚಲನಚಿತ್ರದ ವಾಸ್ತವಿಕ ದೃಶ್ಯಗಳು ಹೇಗಿದ್ದವು ಗೊತ್ತೇ?

-ಮಗುವೊಂದು ತಿಂಡಿಯನ್ನು ತಿನ್ನುತ್ತಿರುವುದು.
-ಮನೆಯ ಬೆಕ್ಕು ಹಾಲು ಕುಡಿಯುತ್ತಿರುವುದು.
-ಕೆಲಸಗಾರರು ಕಾರ್ಖಾನೆಯ ಕೆಲಸ ಮುಗಿಸಿಕೊಂಡು ಹೊರಗೆ ಬರುತ್ತಿರುವುದು.
-ಸಮುದ್ರದಲ್ಲಿ ದೋಣಿಯೊಂದು ದಡ ಮುಟ್ಟುತ್ತಿರುವುದು.
-ರೈಲೊಂದು ಫ್ಲಾಟ್‌ಫಾರ್ಮ್‌ಗೆ ಬರುತ್ತಿರುವುದು ಇತ್ಯಾದಿ…

ಇಂತಹ ದೃಶ್ಯಗಳಿಂದ ಆರಂಭವಾದ ಚಲನಚಿತ್ರ ಇಂದು ಕೆಲವು ಗಂಟೆಗಳ ಸ್ವಾರಸ್ಯವಾದ, ಕಲ್ಪನಾಶಕ್ತಿಯಿಂದ ಕೂಡಿದ, ಇತರ ಕಲೆಗಳಾದ ಸಾಹಿತ್ಯ, ಸಂಗೀತ, ನೃತ್ಯಗಳನ್ನು ಒಳಗೊಂಡ ಮನೋರಂಜನೆ ಕೊಡುವ ಒಂದು ವಿಶಿಷ್ಟ ಮಾಧ್ಯಮವಾಗಿ ಬೆಳೆದಿದೆ.
Raja Harishchandra
ದಾದಾಸಾಹೇಬ್ ಫಾಲ್ಕೆ ನೂರು ವರ್ಷದ ಹಿಂದೆ ತೆರೆಗೆ ತಂದ ಮೂಕಿಚಿತ್ರ ‘ರಾಜಾ ಹರಿಶ್ಚಂದ್ರ’. ಹರಿಶ್ಚಂದ್ರ ಎಂಥವನು? ಸತ್ಯ ಪಾಲನೆಗಾಗಿ ತನ್ನ ಅಧಿಕಾರ, ರಾಜ್ಯ, ಪ್ರಜೆಗಳು, ಬಂಧುಗಳು, ಕೊನೆಗೆ ತನ್ನ ಸತಿ-ಸುತರನ್ನೂ ಕಳೆದುಕೊಂಡ. ಎಂಥದ್ದೇ ಸಂದರ್ಭದಲ್ಲೂ ನಾನು ಸುಳ್ಳನ್ನು ಹೇಳುವುದಿಲ್ಲ ಎಂದು ಪಣತೊಟ್ಟ. ಅದರಂತೆಯೇ ನಡೆದುಕೊಂಡ. ವಿಪರ್ಯಾಸ ಎಂದರೆ ನಮ್ಮ ಸಿನೆಮಾಗಳು ಹೇಳುತ್ತಾ ಬಂದದ್ದು ಏನನ್ನು?

* * *

ಮೂಲಭೂತವಾಗಿ ಸಿನೆಮಾ ವಿಜ್ಞಾನದ ಆವಿಷ್ಕಾರ. ದೃಶ್ಯ ಹಾಗೂ ಶ್ರವಣೇಂದ್ರಿಯಗಳನ್ನು ಏಕಕಾಲದಲ್ಲಿ ಪ್ರಚೋದಿಸುವ ಇದು ಪ್ರೇಕ್ಷಕರ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಬಹುದು ಎಂದು ಭಯ-ಕುತೂಹಲ ಎಲ್ಲರಿಗೂ ಇದ್ದೇ ಇದ್ದವು. ಹೊಸದರಲ್ಲಿ ಇದು ಅಕ್ಷರ ತಿಳಿಯದವರಲ್ಲೂ ಜ್ಞಾನವನ್ನು ಹರಡಲು ಹಾಗೂ ಅವರ ಅರಿವನ್ನು ವಿಸ್ತರಿಸಲು ಬಳಕೆಯಾಗಬಹುದು ಎಂಬ ಉತ್ಸಾಹವಿತ್ತು. ಇನ್ನೂ ಕೆಲವರಲ್ಲಿ ಇದು ಒಂದು ಪ್ರಭಾವಶಾಲಿ ಕಲಾಪ್ರಕಾರವಾಗುತ್ತದೆ ಎನ್ನುವ ನಿರೀಕ್ಷೆಯಿತ್ತು. ಇನ್ನೊಂದು ಮಟ್ಟದಲ್ಲಿ ಚಲನಚಿತ್ರಗಳನ್ನು ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಧಿಸಲು ಬಳಕೆಯಾಗಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಎಲ್ಲ ನಿರೀಕ್ಷೆಗಳು ಕರಗುತ್ತಾ ಬಂದವು. ಇದು ಬಹು ಬೇಗನೆ ಮನರಂಜನೆಯ ಹಾಗೂ ವ್ಯಾಪಾರಿ ಉದ್ಯಮದ ದಾರಿಯನ್ನು ಭದ್ರವಾಗಿ ಹಿಡಿಯಿತು. ಇಂದು ಭಾರತದಲ್ಲಷ್ಟೇ ಅಲ್ಲ ಪ್ರಪಂಚದಾದ್ಯಂತ ಸಿನೆಮಾ ಬೆಳೆದಿರುವುದು, ಹರಡಿರುವುದು ಈ ಮಾರ್ಗದಲ್ಲಿಯೇ. ಹಾಗಾಗಿಯೇ, ‘ಚಲನಚಿತ್ರ ಒಂದು ವ್ಯಾಪಾರೀ ಕಲೆಯ ಅತ್ಯುನ್ನತ ರೂಪ’ ಎಂದು ಪ್ರಖ್ಯಾತ ಚಿತ್ರನಿರ್ದೇಶಕ ಸತ್ಯಜಿತ್ ರೇ ಹೇಳುತ್ತಾರೆ.
ಹಾಲಿವುಡ್ (ಅಮೆರಿಕಾದ ಚಲನಚಿತ್ರ ತಯಾರಿಕಾ ಕೇಂದ್ರ) ಘೋಷಣೆ ಹೀಗಿದೆ:

we give what the public wants- ‘ಪ್ರೇಕ್ಷಕ ಏನನ್ನು ಬಯಸುತ್ತಾನೋ ಅದನ್ನು ಕೊಡುತ್ತೇವೆ’. ಮೇಲುನೋಟಕ್ಕೆ ಈ ಘೋಷಣೆಯಲ್ಲಿ ಯಾವ ತಪ್ಪೂ ಕಾಣಿಸುವುದಿಲ್ಲ. ಆದರೆ ಅದರ ಹಿಂದೆ ಅಡಗಿರುವುದು ಚಾಣಾಕ್ಷತನ. ಪ್ರೇಕ್ಷಕರಲ್ಲಿ ಕುಟಿಲತನದಿಂದ ಬಯಕೆಗಳನ್ನು ಪ್ರೇರೇಪಿಸಿ, ನಿಧಾನ ವಿಷದಂತೆ ಆ ಬಯಕೆಗಳನ್ನು ಚಟವಾಗುವಂತೆ ಮಾಡಿ, ಇದೊಂದು ಅತ್ಯುತ್ತಮ ಮನೋರಂಜನೆ ಎಂದು ಪ್ರಚಾರ ನಡೆಸಿ, ಪ್ರೇಕ್ಷಕರ ಮೇಲೆ ಮಂಕು ಬೂದಿಯನ್ನು ಎರಚಿ ಮುಗ್ಧಗೊಳಿಸುವ ತಂತ್ರವಲ್ಲದೆ ಬೇರೇನು? ಎಲ್ಲದರಲ್ಲೂ ಹಾಲಿವುಡ್ ಅನ್ನು ಅನುಕರಿಸುವ ಭಾರತೀಯ ಚಿತ್ರರಂಗದ ಮುಖ್ಯವಾಹಿನಿ ಕೂಡ ಇದನ್ನೇ ಕುರುಡುಗಣ್ಣಿನಿಂದ ಇಲ್ಲಿವರೆಗೂ ಅನುಕರಿಸುತ್ತಾ ಬಂದಿದೆ. ಮುಂದೆಯೂ ಅನುಸರಿಸುತ್ತದೆ!

* * *

ಭಾರತದಲ್ಲಿ ಇಪ್ಪತ್ತು, ಮೂವತ್ತರ ದಶಕದಲ್ಲಿ ಶೈಶವಾವಸ್ಥೆಯಲ್ಲಿದ್ದ ಚಲನಚಿತ್ರ ನಲವತ್ತರ ದಶಕದ ನಂತರ ಹೆಚ್ಚು ಜನರನ್ನು ಆಕರ್ಷಿಸಲು ಪ್ರಾರಂಭಿಸಿತು. ಕಾವ್ಯ, ಪುರಾಣ ಮತ್ತು ನಾಟಕ ಇವು ಮನುಷ್ಯನ ಮೂರು ಭಿನ್ನವಾದ ಪ್ರಜ್ಞೆಗಳ ಒಡಲಿನಿಂದ ಹುಟ್ಟಿಬಂದವುಗಳಾದ್ದರಿಂದ ಇದೇ ವಸ್ತುವನ್ನು ಸಿನಿಮಾ ಮಾಧ್ಯಮ ಸಮರ್ಥವಾಗಿ ಬಳಸಿಕೊಂಡಿತು. ಪೌರಾಣಿಕ ಹಿನ್ನೆಲೆಯ ಚಿತ್ರಗಳು ಭಕ್ತಿಯ ನೆಲೆಯಲ್ಲಿ ಆಕರ್ಷಿಸಿದರೆ, ಜಾನಪದ ಕಥಾವಸ್ತುವಿನ ಚಿತ್ರಗಳು ರಂಜನೆ, ಸಾಹಸ, ತಂತ್ರಗಾರಿಕೆಯನ್ನೇ ಪ್ರಧಾನವಾಗಿರಿಸಿಕೊಂಡು ಅದ್ಭುತ ರಮ್ಯಜಗತ್ತನ್ನು ಸೃಷ್ಟಿಸಿದವು. ನಿಧಾನವಾಗಿ ಸಿನೆಮಾ ಜನಸಾಮಾನ್ಯರ ಬದುಕಿನ ಒಂದು ಸಂಭ್ರಮವಾಗಿ, ಒಂದು ಆಚ್ಚರಿಯಾಗಿ, ಒಂದು ಅನಿವಾರ್ಯವಾಗಿ, ಬಡವ ಶ್ರೀಮಂತ ಅನ್ನುವ ಭೇದ ಅಳಿಸಿ ಹಾಕಿ ವಿಜೃಂಭಿಸತೊಡಗಿತು. ಸಾವಿರ ಜನರ ಭಾವನೆಗಳನ್ನ, ಒಂದೇ ಬಾರಿಗೆ ಅರಳಿಸುವ, ಕೆರಳಿಸುವ, ಸಾಂತ್ವನಗೊಳಿಸುವ ಕೆಲಸವನ್ನ ಈ ಚಲನಚಿತ್ರಗಳು ಮಾಡುತ್ತಿದ್ದವು. ಚಿತ್ರಮಂದಿರದ ಕತ್ತಲ ಜಗತ್ತಿನಲ್ಲಿ ನಡೆಯುತ್ತಿದ್ದ ಈ ಕ್ರಿಯೆ ಹೊರಗೆ ಇಡೀ ಸಮುದಾಯದ ಮೆಚ್ಚುಗೆ ಗಳಿಸಿತ್ತು. ಇದಕ್ಕೆ ಆ ದಿನಗಳಲ್ಲಿ ತಯಾರಾಗುತ್ತಿದ್ದ ಚಿತ್ರಗಳೂ ಕಾರಣವಾಗಿದ್ದವು. ಸಾಮಾನ್ಯವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವವರು ಬಹಳ ಒಳ್ಳೆಯವರು (ನಾಯಕ-ನಾಯಕಿ) ಅಥವಾ ತೀರ ಕೆಟ್ಟವರು (ಖಳನಾಯಕ). ಜೊತೆಗೆ ಇವರೆಲ್ಲ ಹಾಡುವ, ನರ್ತಿಸುವ ಛಾತಿಯಿರುವಂಥಹವರು. ಸಾಮಾನ್ಯರಾಗಿದ್ದರೂ ಅಸಾಮಾನ್ಯ ಕೆಲಸಗಳನ್ನು ಮಾಡುವವರು. ಕೆಲವು ಸಂದರ್ಭಗಳಲ್ಲಿ ಇವರ ಅದ್ದೂರಿಯ ವೇಷ-ಭೂಷಣಗಳು, ವಿಚಿತ್ರ್ರವೆನಿಸುವ ಕೇಶ ಶೃಂಗಾರಗಳು, ಅವರು ವಾಸಿಸುವ ಭವ್ಯ ಸೌಧಗಳು, ಓಡಾಡುವ ಐಷಾರಾಮಿ ಕಾರುಗಳು, ಅವರು ಪ್ರೇಮಿಸುವ ರೀತಿ, ಅವರಿಗೆ ಬರುವ ಕ್ಷುಲ್ಲಕ ಸಮಸ್ಯೆಗಳು, ಅವುಗಳನ್ನು ಎದುರಿಸುವ ಬಾಲಿಶ ರೀತಿಗಳು ಪ್ರೇಕ್ಷಕನಿಗೆ ಇಷ್ಟವಾಯಿತು. ಇದೇ ಈ ಸಿನಿಮಾಗಳ ಜನಪ್ರಿಯತೆಗೆ ಕಾರಣ.

ಸಿನೆಮಾ ತಂತಾನೇ ಸ್ವತಂತ್ರವಲ್ಲದ ಒಂದು ಕಲಾಮಾಧ್ಯಮ. ಅವಲಂಬನೆ ಇದರ ಮೂಲ ಹಾಗೂ ಪ್ರಧಾನ ಲಕ್ಷಣ. ಹಾಗಾಗಿಯೇ ಇದು ಸಮಾಜದಲ್ಲಿನ ಸಿದ್ಧಪರಿಕರಗಳನ್ನು ಬಳಸಿಕೊಳ್ಳುತ್ತಲೇ ಸೃಜನಶೀಲ ಆಯಾಮವನ್ನು ಕೂಡ ಪಡೆದುಕೊಳ್ಳತೊಡಗಿತು. ಇದರ ಪ್ರಯೋಗವನ್ನು ನಾವು ಅರವತ್ತರ ದಶಕದಲ್ಲಿ ಕಾಣಬಹುದು. ಅದು ಭಾರತೀಯ ಚಿತ್ರರಂಗದ ಮಟ್ಟಿಗೆ ಒಂದು ದೊಡ್ಡ ಹೊರಳು. ಕಾದಂಬರಿಯಲ್ಲಿನ ವಾಸ್ತವ ಮತ್ತು ಅತಿವಾಸ್ತವ ನೆಲೆಯ ಅಭಿವ್ಯಕ್ತಿಗಳು ಚಿತ್ರಗಳಲ್ಲಿ ಬಳಕೆಯಾಗತೊಡಗಿದವು. ಇವಕ್ಕೆ ಕೆಳ ಮಧ್ಯಮ ವರ್ಗದ ಜನರು ಉತ್ತಮ ಪ್ರತಿಕ್ರಿಯೆ ತೋರಿದರು. ಇದು ಸರಳ, ಸುಂದರ, ಸಂತೃಪ್ತ ಕೌಟುಂಬಿಕ ಮನಸ್ಥಿತಿಯನ್ನು ಕಟ್ಟಿಕೊಡುವುದರಲ್ಲಿ ಕಾದಂಬರಿ ಆಧಾರಿತ ಚಿತ್ರಗಳು ಪ್ರಮುಖ ಪಾತ್ರ ನಿರ್ವಹಿಸಿದವು. ಇಲ್ಲಿ ಆದರ್ಶ ಪತಿ, ಪತ್ನಿ, ಮಕ್ಕಳು, ತಾಯಿ ಇವರ ನಡುವಿನ ಮಧುರ ಸಂಬಂಧವಾದ ವಿಶಿಷ್ಟ ಪರಂಪರೆಯನ್ನು ಒಂದು ದಶಕಕ್ಕೂ ಹೆಚ್ಚು ಕಾಲ ಸೃಷ್ಟಿಸಿತು.

ಈ ಹಿಂದೆ ಹೇಳಿದಂತೆ ಚಲನಚಿತ್ರ ಮಾಧ್ಯಮ ತನ್ನ ಬುಡದಲ್ಲೇ ಆರ್ಥಿಕ ಹೊರೆಯನ್ನು ಹೊತ್ತುಕೊಂಡೇ ಹುಟ್ಟಿತು. ಹೀಗಾಗಿ, ನಂತರದ ದಶಕದಲ್ಲಿ ಲಾಭದ ಆಸೆಯಿಂದ ಮಸಾಲೆ ಸಿನಿಮಾಗಳ ತಯಾರಿಕೆ ಹೆಚ್ಚಾಗುತ್ತಾ ಹೋಯಿತು. ಕಮರ್ಷಿಯಲ್ ಯಶಸ್ಸಿಗಾಗಿ ಹಲವಾರು ಸೂತ್ರಗಳು ಹೆಣೆಯಲ್ಪಟ್ಟವು. ‘ಒಂದು ತಾರೆ, ಆರು ಹಾಡು, ಮೂರು ನೃತ್ಯ, ನಾಲ್ಕು ಹೊಡೆದಾಟ’ ವಿಜೃಂಭಿಸತೊಡಗಿತು. ನಿಧಾನವಾಗಿ ಸಿನಿಮಾಗಳ ಕತೆಗಳಲ್ಲಿ ಕೋಪ, ದ್ವೇಷ, ಸೇಡು, ಪ್ರತೀಕಾರಗಳು ಮುಖ್ಯ ಸ್ಥಾನಪಡೆದವು. ನಾಯಕ-ಖಳನಾಯಕರ ನಡುವಿನ ವ್ಯತ್ಯಾಸಗಳು ಮಸುಕಾದವು. ನಾಯಕನೇ ಖಳನಾಯಕನಾದ; ಖಳನಾಯನಕನೇ ಜನರಿಗೆ ಅನುಕರಿಸಲು ಯೋಗ್ಯವಾದ ಮಾದರಿ ಎನ್ನುವಂತಾಯಿತು. ಇದರಿಂದ ಚಿತ್ರಗಳಲ್ಲಿ ಹಿಂಸೆ ವಿಜೃಂಭಿಸತೊಡಗಿತು. ಹೆಚ್ಚಿನ ಸಿನಿಮಾಗಳು ಸಮಾಜದ ಕರಾಳ ಮುಖವನ್ನು ತೋರಿಸಲು ಹೊರಟವು; ಈ ಮಾಧ್ಯಮಕ್ಕೆ ಸಹಜವಾದ ಉತ್ಪೇಕ್ಷೆಯಿಂದಾಗಿ ಈ ಕರಾಳ ಮುಖ ಇನ್ನೂ ಕರಾಳವಾಗಿ ಚಿತ್ರಿತವಾಯಿತು. ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳ ಸಿನಿಮಾಗಳು ಅಪರೂಪವಾದವು.
ನಾಯಕನಟ ಅತಿಮುಖ್ಯವಾದದ್ದೂ ಇದೇ ಸಮಯದಲ್ಲಿ. ಕೆಲವೊಮ್ಮೆ ಚಿತ್ರದಲ್ಲಿ ಏನಿರಬೇಕು, ಹೇಗಿರಬೇಕು ಎನ್ನುವುದನ್ನು ನಿರ್ಧರಿಸುವಲ್ಲಿ ನಿರ್ದೇಶಕನಿಗಿಂತ ನಾಯಕನಟ ಮುಖ್ಯನಾದ. ಆತ ತನ್ನ ಇಮೇಜಿಗೆ ತಕ್ಕಂತೆ ತನ್ನ ಪಾತ್ರವನ್ನು, ಪಾತ್ರದ ಸುತ್ತಲಿನ ವಾತಾವರಣವನ್ನು ಪೋಷಿಸಿಕೊಳ್ಳತೊಡಗಿದ…
ಚಲನಚಿತ್ರ ಸಮಾಜದ ಮೇಲೆ ಪ್ರಭಾವ ಬೀರುತ್ತಿದೆ ಎಂಬ ಕೂಗು ಎದ್ದಿತು. ಯಾವುದೋ ಚಲನಚಿತ್ರ ನೋಡಿ ಪ್ರಭಾವಿತರಾದೆವು ಇದರಿಂದ ಕೊಲೆ ಮಾಡಿದೆವು ಎಂದು ಹೇಳಿರುವ ಖೈದಿಗಳು ಅಲ್ಲಲ್ಲಿ ಕಂಡಿದ್ದಾರೆ. ಹಾಗೆಯೇ ಚಲನಚಿತ್ರವೊಂದು ಮದ್ಯಪಾನ ವಿರುದ್ಧ ಆಂದೋಲನಕ್ಕೆ ಜನರನ್ನು ಪ್ರೇರೇಪಿಸಿದ ಉದಾಹರಣೆಯೂ ಇದೆ. ಫಂಡರಿಬಾಯಿ ತಯಾರಿಸಿದ ‘ಅನುರಾಧ’ ಚಿತ್ರದಲ್ಲಿ ಅತಿ ಸಂತಾನದಿಂದ ಬವಣೆಪಡುವ ಸಂಸಾರದ ಕಥೆ ಹೊಂದಿದೆ ಎಂಬ ಕಾರಣಕ್ಕೆ ಸರಕಾರ ಇದನ್ನು ಕುಟುಂಬ ಯೋಜನೆಯ ಪರ ಪ್ರಚಾರಕ್ಕೆಂದು ಬಳಸಿ ಯಶಸ್ವಿಯಾದ ದಾಖಲೆಯೂ ಇದೆ!

ಭಾರತೀಯ ಚಿತ್ರರಂಗದ ಮುಖ್ಯವಾಹಿನಿಯ ಜೊತೆ ಜೊತೆಗೇ ನಲವತ್ತರ ದಶಕದಿಂದಲೇ ‘ಪರ್ಯಾಯ ಮಾರ್ಗದ ಚಿತ್ರ’ಗಳ ಒಂದು ಅಲೆಯೂ ಪ್ರಾರಂಭವಾಯಿತು. ಇದು ಗಟ್ಟಿಯಾದದ್ದು ಐವತ್ತರ ದಶಕದಲ್ಲಿ. ಆದರೆ ಮಾರುಕಟ್ಟೆಯ ಲೆಕ್ಕಾಚಾರದ ಮುಂದೆ ಇವು ಹೆಚ್ಚು ಪ್ರಕಾಶಿಸಲಿಲ್ಲ. ಸಾಮಾನ್ಯ ಪ್ರೇಕ್ಷಕ ಇವುಗಳತ್ತ ಬೆಳೆಸಿಕೊಂಡ ಒಂದು ರೀತಿಯ ಅಸಡ್ಡೆಯನ್ನು ಇಂದೂ ಬಿಟ್ಟಿಲ್ಲ. ಆದರೂ ‘ಪರ್ಯಾಯ ಸಿನೆಮಾ’ಗಳಲ್ಲಿ ಗಂಭೀರವಾದ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಬಂದಿವೆ. ಪಕ್ಕಾಮಸಾಲಾ ಚಿತ್ರಗಳು ತಯಾರಾಗುತ್ತಿದ್ದ ಬಾಲಿವುಡ್‌ನಲ್ಲಿ ಇತ್ತೀಚಿನ ದಶಕದಲ್ಲಿ ಗಂಭೀರ ಚಿತ್ರಗಳು ಬರುತ್ತಿರುವುದು ಸಮಾಧಾನಕರ ಬೆಳವಣಿಗೆ. ಇದಕ್ಕೆ ಮಲ್ಟಿಪ್ಲೆಕ್ಸ್‌ಗಳು ಮುಖ್ಯ ಕಾರಣ ಎಂದರೂ ತಪ್ಪಾಗಲಾರದು. ಕಾರ್ಪೋರೆಟ್ ಸಂಸ್ಥೆಗಳು ಸಿನೆಮಾ ನಿರ್ಮಾಣಕ್ಕೆ ಕೈ ಹಾಕಿದ್ದೂ ಈ ಹೊಸ ಪ್ರಯೋಗಕ್ಕೆ ಶಕ್ತಿ ನೀಡಿತು.

‘ಆದರೆ ಜನಸಾಮಾನ್ಯರಲ್ಲಿ ಈ ಮಾಧ್ಯಮಗಳ ಬಗ್ಗೆ ಇರುವ ಅನಕ್ಷರತೆ ಅಗಾಧವಾದದ್ದು. ಈ ಮಾಧ್ಯಮದಿಂದ ಉತ್ತಮ ಹಾಗೂ ಪೂರ್ಣ ಪ್ರಯೋಜನವನ್ನು, ಇಂದಿನ, ಮುಂದಿನ ಪೀಳಿಗೆಯವರು ಪಡೆಯಬೇಕಾದರೆ ಈ ಅನಕ್ಷರತೆಯನ್ನು ತೊಲಗಿಸುವ ಪ್ರಯತ್ನ ಆಗಬೇಕು…’ ಎಂದು ಚಿತ್ರನಿರ್ಮಾತೃ/ನಿರ್ದೇಶಕ/ಪ್ರಾಧ್ಯಾಪಕ ದಿವಂಗತ ಎಂ.ವಿ.ಕೃಷ್ಣಸ್ವಾಮಿ ಹೇಳಿದ ಮಾತು ಇಂದಿಗೂ ಪ್ರಸ್ತುತವೆನಿಸುತ್ತಿದೆ.

ಹಾಗಾದರೆ ಒಳ್ಳೆಯ ಸಿನಿಮಾ ಎಂದರೆ ಏನು?
Good cinema should lead its audiences and not be led by them- ಎಂದು ಪ್ರಖ್ಯಾತ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಮಾತನ್ನು ಇಲ್ಲಿ ಸ್ಮರಿಸಬಹುದು.

ಅದೇನೇ ಇರಲಿ,

ಈ ನೂರು ವರ್ಷಗಳಲ್ಲಿ ಭಾರತೀಯ ಚಲನಚಿತ್ರರಂಗದ ದೊಡ್ಡ ಸಾಧನೆ ಎಂದರೆ ಸಂಖ್ಯೆ! ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಸಂಖ್ಯೆಯ ಚಲನಚಿತ್ರಗಳು ತಯಾರಾಗುವುದು ನಮ್ಮ ದೇಶದಲ್ಲೇ. ಈಗ ಪ್ರತಿವರ್ಷ ಸರಾಸರಿ ಇಪ್ಪತ್ತಕ್ಕೂ ಹೆಚ್ಚು ಭಾಷೆಗಳೂ ಸೇರಿ ಒಟ್ಟು ಮೂರು ಸಾವಿರಕ್ಕೂ ಹೆಚ್ಚು ಚಲನಚಿತ್ರಗಳು ಇಲ್ಲಿ ತಯಾರಾಗುತ್ತಿವೆ. ನಂತರದ ಸ್ಥಾನ ಅಮೆರಿಕಕ್ಕೆ(ಹಾಲಿವುಡ್) ಮತ್ತು ಚೀನಾಕ್ಕೆ. ನಮ್ಮ ದೇಶದಲ್ಲಿ ಪ್ರತಿದಿನ ಸುಮಾರು ಒಂದು ಕೋಟಿ ನಲವತ್ತು ಲಕ್ಷ ಜನ ಅಂದಾಜು ಎಂಟು ನೂರು ಚಲನಚಿತ್ರಗಳನ್ನು ನೋಡುತ್ತಿದ್ದಾರೆ ಎಂದು ಒಂದು ಅಧ್ಯಯನ ತಿಳಿಸುತ್ತದೆ. ಹಾಗೆಯೇ ಪ್ರಪಂಚದಾದ್ಯಂತ ಸುಮಾರು ಎಂಬತ್ತು ದೇಶಗಳಲ್ಲಿ ಭಾರತೀಯ ಚಿತ್ರಗಳನ್ನು ಜನ ನೋಡುತ್ತಿದ್ದಾರಂತೆ. ಇದರಲ್ಲಿ ಹೆಚ್ಚಿನ ಪಾಲು ದಕ್ಕಿರುವುದು ಬಾಲಿವುಡ್(ಹಿಂದಿ) ಚಿತ್ರಗಳಿಗೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ತನ್ನ ಕಥನಕ್ರಮದಿಂದಲೇ ಖ್ಯಾತಿ ಪಡೆದಿದ್ದ ಭಾರತೀಯ ಚಿತ್ರರಂಗ ಇಂದು ಕಥಾನಿರೂಪಣೆಗಿಂತ ತಂತ್ರಗಾರಿಕೆಗೆ ಹೆಚ್ಚಿನ ಮಣೆ ಹಾಕುತ್ತಿದೆ. 2D ಸಿನಿಮಾ ಜೊತೆ 3D ಪೈಪೋಟಿಗೆ ಇಳಿದಿದೆ. ಈಗ ನೂತನವಾಗಿ ಐಮ್ಯಾಕ್ಸ್-IMAX (Image Maximum)-ಎಂಬ ಅಗಲ ತೆರೆಯ ಪ್ರದರ್ಶನ ವ್ಯವಸ್ಥೆ ನಗರಗಳಿಗೆ ಕಾಲಿಟ್ಟಿದೆ. ಇದರ ಮಧ್ಯೆ 16mm, 35mm, 70mm Gauge ಎಂಬ ಸೆಲ್ಯುಲಾಯ್ಡ್ ಯುಗ ನಿಧಾನವಾಗಿ ತೆರೆಮರೆಗೆ ಸರಿಯುತ್ತಿದೆ. ಅಷ್ಟೇ ವೇಗವಾಗಿ ಡಿಜಿಟಲ್ ಯುಗ ದಾಪುಗಾಲಿಟ್ಟು ಬಂದಿದೆ. ಇನ್ನು ಕೆಲವೇ ವರ್ಷಗಳಲ್ಲಿ ಚಲನಚಿತ್ರದಲ್ಲಿ ಅತ್ಯಂತ ವೇಗದ ಬದಲಾವಣೆಗಳಾಗಲಿವೆ. ಈಗಾಗಲೇ ಹೆಚ್ಚಿನ ಕಡೆ ಫಿಲಂ ಪ್ರೊಜೆಕ್ಟರ್‌ಗಳು ಗುಜರಿ ಅಂಗಡಿ ಸೇರಿವೆ. ಎಲ್ಲವೂ ಡಿಜಿಟಲ್‌ಮಯವಾಗುತ್ತಿದೆ. ಈಗ ಮೆರೆಯುತ್ತಿರುವ ಮಲ್ಟಿಪ್ಲೆಕ್ಸ್ ಮುಂದೆ ಮೆಗಾಪ್ಲೆಕ್ಸ್‌ಗಳು ತಲೆಯುತ್ತುವ ದಿನ ದೂರವಿಲ್ಲ.

ಇಷ್ಟೆಲ್ಲಾ ಆದರೂ ಸಿನಿಮಾ ನಿಧಾನವಾಗಿ ತನ್ನ ಪ್ರಭಾವ ಕಳೆದುಕೊಳ್ಳುತ್ತಿದೆ ಎಂದು ನ್ಯಾಷನಲ್ ರೀಡರ್‌ಷಿಪ್ ಸಮೀಕ್ಷೆ ಹೇಳುತ್ತದೆ. ಅದರಲ್ಲೂ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಿನಿಮಾ ತನ್ನ ಆಕರ್ಷಣೆ ಕಳೆದುಕೊಳ್ಳುತ್ತಿದೆಯಂತೆ. ನಗರದಲ್ಲಿ ಶುರುವಾಗಿರುವ ಮಲ್ಟಿಪ್ಲೆಕ್ಸ್ ಸಂಸ್ಕೃತಿಯಿಂದ ಇಲ್ಲಿಯ ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿರುವುದನ್ನೂ ಈ ಸಂಸ್ಥೆ ಗುರುತಿಸಿದೆ.

ಬಹುತೇಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಾಗಿಲು ಮುಚ್ಚಿಕೊಳ್ಳುತ್ತಿವೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಬೆಂಗಳೂರು ಒಂದು ನಗರದಲ್ಲಿಯೇ ಮೂವತ್ತ್ತಕ್ಕೂ ಹೆಚ್ಚು ಚಿತ್ರಮಂದಿರಗಳು ನೆಲಸಮವಾಗಿವೆ. ಇನ್ನೂ ಇಪ್ಪತ್ತೈದಕ್ಕೂ ಹೆಚ್ಚು ಚಿತ್ರಮಂದಿರಗಳು ಬೀಳಿಸಲು ಪರವಾನಿಗೆ ಬೇಡುತ್ತಾ ನಿಂತಿವೆ. ಸಿನಿಮಾ ಮಾಧ್ಯಮ ತನ್ನ ಪ್ರಭಾವ ಕಳೆದುಕೊಳ್ಳಲು ಪ್ರಮುಖ ಕಾರಣ ಟೆಲಿವಿಷನ್ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ.
ಆರಂಭದ ದಿನಗಳಲ್ಲಿ ರಾತ್ರಿ ಕತ್ತಲಾದ ಮೇಲೆ ಎರಡು ಆಟಕ್ಕೆ ಮಾತ್ರಕ್ಕೆ ಸೀಮಿತವಾದ ಚಿತ್ರಪ್ರದರ್ಶನ ನಂತರ ದಿನಗಳಲ್ಲಿ ಪ್ರಖ್ಯಾತಿ ಹೊಂದಿ ಹಗಲಿನ ಪ್ರದರ್ಶನಗಳು ಸೇರಿ ನಾಲ್ಕು ಪ್ರದರ್ಶನಗಳವರೆಗೆ ಬೆಳೆದಿತ್ತು. ಈಗ ಬೆಳಗಿನ ಪ್ರದರ್ಶನಗಳು ಪ್ರೇಕ್ಷಕರ ಕೊರತೆ ಕಾಣುತ್ತಿವೆ. ಚಿತ್ರಮಂದಿರಗಳ ಮುಂದಿನ ‘ಹೌಸ್‌ಫುಲ್’ ಬೋರ್ಡ್ ಧೂಳು ತಿನ್ನುತ್ತಿದೆ. ವಾರದ ಏಳೂ ದಿನದ ಪ್ರದರ್ಶನಗಳು ಮುಂದೊಂದು ದಿನ ಪಾಶ್ಚಿಮಾತ್ರ ದೇಶಗಳಂತೆ ವಾರಾಂತ್ಯಕ್ಕೆ ಇಲ್ಲೂ ಬಂದರೆ ಆಶ್ಚರ್ಯವೇನಿಲ್ಲ.

ಹಿಂದಿನ ನೂರು ವರ್ಷಗಳ ಹಿಂದೆ ಸಿನೆಮಾ ಇಷ್ಟೆಲ್ಲಾ ರೂಪಾಂತರ ಹೊಂದುತ್ತದೆಂದು ಯಾರೂ ಊಹಿಸಿರಲಿಲ್ಲ. ಹಾಗೆಯೇ ಮುಂದಿನ ನೂರು ವರ್ಷಗಳಲ್ಲಿ ಈ ‘ಮಾಯಾಬಜಾರ್’ನಲ್ಲಿ ಏನೇನೆಲ್ಲ ಅವಿಷ್ಕಾರಗಳು ಕಾಣಲಿಕ್ಕಿದೆಯೋ?

(ವಿಜಯವಾಣಿ ಪತ್ರಿಕೆಯಲ್ಲಿ ಮೇ’3 ರಂದು ಪ್ರಕಟವಾದ ಲೇಖನ)

ಭಾರತೀಯ ಚಿತ್ರಗಳಲ್ಲಿ ಹೊಸ ಅಲೆ

ಈ ಶತಮಾನದ ಅಚ್ಚರಿ ಸಿನಿಮಾ. ಇದು ಭಾರತೀಯ ಚಲನಚಿತ್ರರಂಗದ ನೂರನೇ ವರ್ಷ. ಈ ಸಂದರ್ಭದಲ್ಲಿ ‘ಸಿನಿಮಾ ಎಂದರೆ ಏನು?’ ಎಂದು ಯಾರನ್ನಾದರೂ ಕೇಳಿ ನೋಡಿ. ಅವರು ತಕ್ಷಣ ಕೊಡುವ ಉತ್ತರ:

‘ಸಿನಿಮಾ- ಒಂದು ಮನರಂಜನೆ. ಹಾಡು, ಕುಣಿತ, ಹೊಡೆದಾಟ, ಐಟಂ ಸಾಂಗ್, ಹಾಸ್ಯ, ಮಸಾಲೆ ಇತ್ಯಾದಿ… ಇದೆಲ್ಲ ಬೆರೆತದ್ದೇ ಸಿನಿಮಾ.’ Clap board
ಹೌದು. ನಮ್ಮ ದೇಶದಲ್ಲಿ ಮುಕ್ಕಾಲುಪಾಲು ಸಿನಿಮಾ ಗುರುತಿಸಿಕೊಂಡಿರುವ ಬಗೆ ಹೀಗೆ. ಪ್ರಪಂಚದಲ್ಲೇ ಅತಿ ಹೆಚ್ಚು ಚಿತ್ರಗಳನ್ನು ತಯಾರಿಸುವ ದೇಶ ನಮ್ಮದು. ಭಾರತೀಯ ಸಿನಿಮಾವನ್ನು ಆಳುತ್ತಿರುವುದು ಬಾಲಿವುಡ್. ಹಾಲಿವುಡ್‌ನ ಪ್ರಭಾವ ಬಾಲಿವುಡ್ ಮೇಲೆ, ಬಾಲಿವುಡ್ ನೆರಳು ಇತರ ಪ್ರಾದೇಶಿಕ ಚಿತ್ರಗಳ ಮೇಲೆ ನಿರಂತರವಾಗಿ ಹರಿದಿದೆ. ನಮ್ಮಲ್ಲಿ ತಯಾರಾಗುವ ಸರಕಿನಲ್ಲಿ ಶೇಕಡ ತೊಂಬತ್ತರಷ್ಟು ಚಿತ್ರಗಳು ಮಾರುಕಟ್ಟೆಯ ಅವಶ್ಯಕತೆಗೆ ತಕ್ಕಂತೆ ವ್ಯಾಪಾರೀ ಸೂತ್ರಗಳನ್ನು ಮೈಗೂಡಿಸಿಕೊಂಡು ತಮ್ಮದೇ ಮಾರ್ಗದಲ್ಲಿ ಸಾಗಿ ‘ಮುಖ್ಯವಾಹಿನಿಯ ಸಿನಿಮಾ’ ಎನ್ನಿಸಿಕೊಳ್ಳುತ್ತವೆ.

ನಿಜ, ಸಿನಿಮಾ ಆರ್ಥಿಕ ತಳಹದಿಯ ಮೇಲೇ ನಿಂತಿರುವುದು. ಹಾಗಾಗಿಯೇ ಇದನ್ನು ಉದ್ಯಮ ಎಂದು ಕರೆಯುವುದು. ಆದರೆ ಸಿನಿಮಾ ಬರಿ ಒಂದು ಉದ್ಯಮವಲ್ಲ. ಅದು ಪ್ರತಿಯೊಂದು ದೇಶದ, ಸಮುದಾಯದ, ಸಂಸ್ಕೃತಿಯ ಮುಖವಾಣಿಯೂ ಹೌದು. ಈ ದೃಶ್ಯಮಾಧ್ಯಮದ ಪ್ರಭಾವ ಅಗಾಧವಾದದ್ದು.
ಇರಲಿ, ನಾನೀಗ ಮಾತನಾಡಲು ಹೊರಟಿರುವುದು ಆ ವಿಚಾರವಲ್ಲ.

ಮುಖ್ಯವಾಹಿನಿಯ ಸಿನಿಮಾಗಳಂತೆ ಇನ್ನೊಂದು ಬಗೆಯ ಸಿನಿಮಾಗಳೂ ನಮ್ಮಲ್ಲಿ ತಯಾರಾಗುತ್ತವೆ. ಅವನ್ನು ‘ಪರ್ಯಾಯ ಸಿನಿಮಾ’, ‘ಹೊಸ ಅಲೆ’, ‘ಕಲಾತ್ಮಕ ಚಿತ್ರ’ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಹೆಸರೇ ಸೂಚಿಸುವಂತೆ ಇವು ಸಾಂಪ್ರದಾಯಿಕ ಕಥನಕ್ರಮದಿಂದ ಭಿನ್ನವಾದ ಮಾರ್ಗ ತುಳಿದ ಚಿತ್ರಗಳು. ಇಲ್ಲಿನ ಕಥಾವಸ್ತುವಿನಲ್ಲಿ, ಹೆಣಿಗೆಯಲ್ಲಿ, ಅದರ ನಿರೂಪಣೆಯಲ್ಲಿ, ಅಭಿನಯದಲ್ಲಿ, ಕೌಶಲ್ಯದಲ್ಲಿ ವಾಸ್ತವತೆಗೆ ಹೆಚ್ಚಿನ ಒತ್ತು ಇರುತ್ತದೆ.

ಈ ಮಾರ್ಗದ ಬೇರುಗಳು ಇರುವುದು ಯುರೋಪಿನಲ್ಲಿ.
The Open City
ಆಗ ತಾನೇ ಎರಡನೇ ಮಹಾಯುದ್ಧ ಮುಗಿದಿತ್ತು. ಇಟಲಿಯಲ್ಲಿ ‘ದ ಓಪನ್ ಸಿಟಿ’ (The Open City) ಎಂಬ ಚಿತ್ರ ತಯಾರಾಯಿತು. ಅದರ ನಿರ್ದೇಶಕ ರೊಸೆಲಿನಿ. ಆತ ಈ ಚಿತ್ರದಲ್ಲಿ ಇಟಲಿಯ ಫ್ಯಾಸಿಸಮ್ ಮತ್ತು ಜರ್ಮನಿಯ ನಾಸಿಸಮ್‌ಗಳಿಗೆ ಪ್ರತಿಭಟನೆಯೆಂಬಂತೆ, ಯುದ್ಧದ ಭಯಂಕರ ಪರಿಣಾಮಗಳನ್ನು ಶಕ್ತಿಯುತವಾಗಿ ಚಿತ್ರಿಸಿ ಮಾನವೀಯತೆಯನ್ನು ಎತ್ತಿಹಿಡಿದಿದ್ದ. ಅದರಲ್ಲಿ ಯಾವುದೂ ಅದ್ದೂರಿತನವಿರಲಿಲ್ಲ, ಆಡಂಬರಗಳಿರಲಿಲ್ಲ, ಅದೊಂದು ವಾಸ್ತವಿಕವಾದ ಚಿತ್ರಣವಾಗಿತ್ತು. ಇಡೀ ಚಿತ್ರಜಗತ್ತು ಅದನ್ನು ಕುತೂಹಲದಿಂದ ಗಮನಿಸಿತು. ಚಿತ್ರನಿರ್ಮಾಣದಲ್ಲಿ ಇದೊಂದು ಹೊಸಶೈಲಿ ಎನ್ನಿಸಿಕೊಂಡ ಕಾರಣ ಇದಕ್ಕೆ ‘ನವವಾಸ್ತವಪಂಥ’ (Neo-Realism) ಎಂಬ ಹೊಸ ಹೆಸರಿನಿಂದ ಕರೆಯಲಾಯಿತು. ಹಳೆಯದನ್ನು ಪ್ರತಿಭಟಿಸುವ ಕ್ರಾಂತಿಯ ಹೊಸ ಅಲೆ ಮೊಳೆತದ್ದು ಆಗಲೇ. ಇದರ ನಂತರ ಬಂದ ಇನ್ನೊಂದು ಚಿತ್ರ ‘ಶೂ ಶೈನ್’ (Shoe shine). ಇದರ ಕತೃ ವಿಟ್ಟೊರಿಯೊ ಡಿ’ಸಿಕಾ. ಈತನ ‘ಬೈಸಿಕಲ್ ಥೀವ್ಸ್’ ಬಗ್ಗೆ ನಾನು ಹೇಳಲೇಬೇಕಿಲ್ಲ.
Neech Nagar
ಹೀಗೆ ಆರಂಭವಾದ ಈ ಹೊಸ ಅಲೆಯ ಪ್ರಭಾವ ನಮ್ಮ ದೇಶಕ್ಕೂ ಬಂತು.
ಚೇತನ್ ಆನಂದ್‌ರ ‘ನೀಚ್ ನಗರ್’ (1946), ಎಂಬ ಹಿಂದಿ ಚಿತ್ರದಲ್ಲಿ ಹೊಸ ಅಲೆಯ ಪ್ರಭಾವವನ್ನು ಇತಿಹಾಸಕಾರರು ಸ್ಪಷ್ಟವಾಗಿ ಗುರುತಿಸಿದ್ದಾರೆ. ನಂತರ ಇದು ಮುಂದುವರಿದದ್ದು ಋತ್ವಿಕ್ ಘಟಕ್‌ರ ‘ನಾಗರಿಕ್’ (1952), ಬಿಮಲ್‌ರಾಯ್ ಅವರ ‘ದೋ ಬೀಗಾ ಝಮೀನ್’ (1953) ನಲ್ಲಿ. ಈ ಚಿತ್ರಗಳ ಶೀರ್ಷಿಕೆಯನ್ನು ಗಮನಿಸಿ…
Ray
ಇಂದಿಗೂ ಹೊಸ ಅಲೆಯ ಚಿತ್ರ ಎಂದಾಗ ಭಾರತದ ಸಂದರ್ಭದಲ್ಲಿ ನೆನಪಿಗೆ ಬರುವ ಪ್ರಮುಖವಾದ ಹೆಸರು ಸತ್ಯಜಿತ್ ರೇ ಅವರದ್ದು. ಈ ಪರ್ಯಾಯ ಮಾರ್ಗಕ್ಕೆ ಒಂದು ಸ್ಪಷ್ಟ ರೂಪ ಕೊಟ್ಟು ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಟ್ಟ ಕೀರ್ತಿ ಅವರಿಗೇ ಸಲ್ಲಬೇಕು. ‘ಪಥೇರ್ ಪಾಂಚಾಲಿ’(1955)Pather Panchali ಇವರು ತಯಾರಿಸಿದ ಮೊದಲ ಚಿತ್ರ. ಅವರ ಇತರ ಚಿತ್ರಗಳೂ ಇದೇ ಹಾದಿಯಲ್ಲಿ ಸಾಗಿ ಚಿತ್ರರಂಗದ ಮೈಲುಗಲ್ಲುಗಳಾದವು.
ಭಾರತದಲ್ಲಿ ಈ ಮಾರ್ಗ ಅನುಸರಿಸಿದ ಇತರ ಪ್ರಮುಖರೆಂದರೆ ಕೇತನ್ ಮೆಹತಾ, ಮೃಣಾಲ್‌ಸೇನ್, ಮಣಿಕೌಲ್, ಗಿರೀಶ್ ಕಾರ್ನಾಡ್, ಶ್ಯಾಮ್ ಬೆನಗಲ್, ಗೋವಿಂದ ನಿಹಲಾನಿ, ಅಡೂರ್ ಗೋಪಾಲಕೃಷ್ಣನ್, ಗಿರೀಶ್ ಕಾಸರವಳ್ಳಿ… ಪಟ್ಟಿ ಹೀಗೇ ಮುಂದುವರಿಯುತ್ತದೆ.
ಇಂದಿಗೂ ನಮ್ಮ ಕನ್ನಡವೂ ಸೇರಿದಂತೆ, ಕೇರಳ, ಬೆಂಗಾಲಿ, ಮರಾಠಿ ಚಿತ್ರರಂಗಗಳು ಈ ಪರ್ಯಾಯ ಮಾರ್ಗದ ಚಿತ್ರನಿರ್ಮಾಣದಲ್ಲಿ ಮುಂಚೂಣಿಯಲ್ಲಿವೆ.

(ಮಾರ್ಚ್ 29, 2013 ರಂದು ‘ವಿಜಯ ಕರ್ನಾಟಕ’ದಲ್ಲಿ ಪ್ರಕಟವಾದ ಲೇಖನ)

‘ಭಾರತ್ ಸ್ಟೋರ್ಸ್’ ಹುಟ್ಟಿದ ಕತೆ…

‘ಸಿನಿಮಾ ಮಾಡಲು ನಿಮಗೆ ಕತೆ ಹೇಗೆ ಸಿಗುತ್ತೆ?’

-ಇದು ನನ್ನನ್ನು ಕೆಲವರು ಭೇಟಿಯಾದಾಗ ಕೇಳುವ ಮುಖ್ಯವಾದ ಮಾತು. ಅವರ ಪ್ರಶ್ನೆಗಳು ಮುಂದುವರಿಯುತ್ತವೆ.

‘ಕತೆಯನ್ನು ಎಲ್ಲಿ ಹುಡುಕುತ್ತೀರಿ?
ಇದು ಸಿನಿಮಾಗೆ ಸೂಕ್ತ ಎಂದು ಹೇಗೆ ಆಯ್ಕೆ ಮಾಡಿಕೊಳ್ಳುತ್ತೀರಿ?’ ಇತ್ಯಾದಿ..

***

ನಿಜ ಹೇಳಲಾ?
ಕೆಲವೊಮ್ಮೆ ಕಥೆಯನ್ನು ನಾವು ಹುಡುಕಿಕೊಂಡು ಹೋಗಲೇಬೇಕಿಲ್ಲ. ಅದೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ!

ಉದಾಹರಣೆಗೆ,
ನಾನು ಇತ್ತೀಚೆಗೆ ತಯಾರಿಸಿದ ಚಿತ್ರ ‘ಭಾರತ್ ಸ್ಟೋರ್ಸ್’.
ನಿಮಗೆ ಇದು ಸಿಕ್ಕ ಕತೆ ಹೇಳುತ್ತೇನೆ ಕೇಳಿ.
bharath stores
‘ಬೆಟ್ಟದ ಜೀವ’ ಚಲನಚಿತ್ರದ ನಂತರ ಸುಮಾರು ಒಂದು ವರ್ಷಗಳ ಕಾಲ ನಾನು ಯಾವುದೇ ಸಿನಿಮಾ ಮಾಡಿರಲಿಲ್ಲ. ಸುಮ್ಮನೇ ಕತೆ, ಕಾದಂಬರಿಗಳನ್ನು ಓದುತ್ತಿದ್ದೆ.

ಮೂರು-ನಾಲ್ಕು ಸಣ್ಣ ಕತೆಗಳು ನನಗೆ ಸಿನಮಾದ ಸಾಧ್ಯತೆಯನ್ನು ಕಾಣಿಸಿದ್ದರೂ ಕೂಡ ಸಂಪೂರ್ಣವಾಗಿ ಕೆಣಕಿರಲಿಲ್ಲ.
ಕಳೆದ ವರ್ಷ ಸಪ್ಟೆಂಬರ್ ಹದಿನಾಲ್ಕನೇ ತಾರೀಖು.

ದೆಹಲಿಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಒಂದು ಪ್ರಮುಖ ನಿರ್ಧಾರ ಹೊರಬಂತು.

ಭಾರತದ ಆರ್ಥಿಕ ಸುಧಾರಣೆಯ ನೆಪದಲ್ಲಿ ‘ಬಹುಬ್ರಾಂಡ್ ಚಿಲ್ಲರೆ ವಲಯದಲ್ಲಿ ಶೇಕಡ 51 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಲಾಯಿತು’. ಈ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದ್ದಂತೆಯೇ ಇದರ ‘ಪರ’ ಮತ್ತು ‘ವಿರೋಧ’ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕ್ಷಿಪ್ರವಾಗಿ ಆರಂಭವಾದವು… ನಾನು ಇದನ್ನೆಲ್ಲ ಕುತೂಹಲದಿಂದ ಗಮನಿಸುತ್ತಿದ್ದೆ.

ಒಂದು ಬೆಳಗ್ಗೆ, ನನ್ನ ಮಗನನ್ನು ಟ್ಯೂಷನ್‌ನಿಂದ ಮನೆಗೆ ಕರೆದುಕೊಂಡು ಬರಲು ಹೋಗಿದ್ದೆ. ಇನ್ನೂ ಅವನ ಕ್ಲಾಸ್ ಬಿಟ್ಟಿರಲಿಲ್ಲ. ಹಾಗಾಗಿ ರಸ್ತೆಬದಿಯಲ್ಲಿ ಕಾದಿದ್ದೆ. ಅಲ್ಲೇ ಬದಿಯಲ್ಲಿ ಒಂದು ಪುಟ್ಟ ಕಿರಾಣಿ ಅಂಗಡಿ ಇತ್ತು. ವಯಸ್ಸಾದ ವ್ಯಕ್ತಿಯೊಬ್ಬರು ಗಲ್ಲದಲ್ಲಿಕುಳಿತಿದ್ದರು. ನಿಸ್ತೇಜ ಕಳೆ. ಅಂಗಡಿಯಲ್ಲಿ ಯಾವುದೇ ಆಕರ್ಷಣೆ ಇರಲಿಲ್ಲ. ಮುಂದೆ ಸಾಲಾಗಿ ಜೋಡಿಸಿದ್ದ ಗಾಜಿನ ಶೀಶೆಯಲ್ಲಿ ಚಾಕಲೆಟ್‌ಗಳು, ಪೆಪ್ಪರ್‌ಮೆಂಟ್‌ಗಳು, ತೂಗುಬಿದ್ದ ಪ್ಲಾಸ್ಟಿಕ್ ಚೀಲದಿಂದ ಕರಿದ ತಿಂಡಿ-ಬೋಟಿ, ಮೂಲೆಯಲ್ಲಿ ಕಟ್ಟಿದ್ದ ಒಂದು ಮಾಸಲು ಮಾಸಲಾದ ಬಾಳೆಗೊನೆ, ಹೊರಗೆ ಚೀಲದಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಪೊರಕೆ ಕಟ್ಟು, ಒಳಗೆ ಒಂದಿಷ್ಟು ಸಾಮಗ್ರಿ ಜೊತೆಯಲ್ಲಿ ದಂಡಿಯಾಗಿ ಕತ್ತಲು, ಕತ್ತಲು… ಅವರನ್ನು ನೋಡಿದರೆ ನಮ್ಮೂರಿನ ಶೆಟ್ಟರ ಅಂಗಡಿ ನೆನಪಿಗೆ ಬರುತ್ತಿತ್ತು. ಆದರೆ ಇಲ್ಲಿ ಯಾವುದೇ ಚಟುವಟಿಕೆ ಇರಲಿಲ್ಲ…

‘ಭಾರತ್ ಸ್ಟೋರ್ಸ್’ ಹುಟ್ಟಿದ್ದು ಆಗಲೇ.

ತಕ್ಷಣವೇ ದತ್ತಣ್ಣನಿಗೆ ಫೋನ್ ಮಾಡಿದೆ.
‘ನನಗೆ ಕತೆ ಹುಟ್ಟಿತು ಅಣ್ಣ’ ಎಂದೆ.
‘ಹೌದೇ! ಕಂಗ್ರಾಜ್ಯುಲೇಷನ್ಸ್.. ಮಗು ಹೇಗಿದೆ?’ ಎಂದರು.
ನಾನು ವರ್ಣಿಸಿದೆ.
‘ಗುಡ್! ಇದು ಬರ್ನಿಂಗ್ ಪ್ರಾಬ್ಲಂ ಕಣಯ್ಯ’ ಎಂದರು.
ನಂತರ ನನ್ನ ಸ್ನೇಹಿತ ಪ್ರಹ್ಲಾದ್‌ಗೆ ಫೋನ್ ಮಾಡಿದೆ. ಅವನೂ ಹೊಳಹು ಚನ್ನಾಗಿದೆ ಅಂದ.
ಕತೆಗಾರ ಗೋಪಾಲಕೃಷ್ಣ ಪೈಗೆ ಕರೆ ಮಾಡಿದೆ ಅವರೂ ಬೆನ್ನುತಟ್ಟಿದರು.
ಕೊನೆಯದಾಗಿ ಗಿರೀಶ್ ಕಾಸರವಳ್ಳಿಯ ಮುಂದೆ ನನ್ನ ವಸ್ತು ಇಟ್ಟೆ. ಅವರು ಪಾಸ್ ಮಾಡಿದರು.

ಇನ್ನೇಕೆ ತಡ ನನ್ನ ಮಗುವಿಗೆ ಅಂಗಿ, ಕುಲಾವಿ ಹೊಲೆಯತೊಡಗಿದೆ…

ಮೊದಲಿಗೆ ಗೋವಿಂದಶೆಟ್ಟರು(ದತ್ತಾತ್ರೇಯ) ಪ್ರತ್ಯಕ್ಷವಾದರು, ಚಂದ್ರ(ಬಸುಕುಮಾರ್) ಬಂದ, ಮಂಜುನಾಥ(ಪ್ರಸಾದ್ ಚೆರ್ಕಾಡಿ) ಕಂಡ. ಕೊನೆಗೆ ಭಾರತಿ(ಸುಧಾರಾಣಿ), ಶರತ್(ಚಿ.ಗುರುದತ್) ಸೇರಿಕೊಂಡರು… ಹೀಗೆ ಮಗು ದಷ್ಟಪುಷ್ಟವಾಗಿ ಬೆಳೆಯ ತೊಡಗಿತು.

ವಾರಕ್ಕೊಮ್ಮೆ ಫೋನ್ ಮಾಡಿ, ‘ಸಿನಿಮಾ ಯಾವಾಗ ಮಾಡ್ತೀರಿ ಸಾಹೇಬ್ರೆ?’ ಎಂದು ಕೇಳುವುದು ನಮ್ಮ ಹೆಮ್ಮೆಯ ನಿರ್ಮಾಪಕ ಬಸಂತ್‌ಕುಮಾರ್ ಪಾಟೀಲರ ಧಾಟಿ. ಆವತ್ತು ಅವರು ಫೋನ್ ಮಾಡಿದರು.

ನಾನು, ‘ಶಾಲೆಗೆ ಸೇರಿಸಬೇಕಿದೆ, ಕಾದಿದ್ದೇನೆ’ ಎಂದೆ.
‘ಅದರ ಖರ್ಚು ವೆಚ್ಚ ನನಗಿರಲಿ, ನೀವು ಚಿಂತೆ ಮಾಡಬೇಡಿ’ ಎಂದು ಹಸಿರು ಬಾವುಟ ತೋರಿದರು.
ಮುಂದಿನದು ಇತಿಹಾಸ.

***

‘ಭಾರತ್‌ಸ್ಟೋರ್ಸ್’ ಕಥೆ ಸ್ಥೂಲವಾಗಿ ಹೀಗಿದೆ:

ಆಕೆ ಭಾರತಿ. ಸುಮಾರು ಒಂಬತ್ತು ವರ್ಷಗಳ ನಂತರ ಅಮೆರಿಕಾದಿಂದ ಗಂಡ ಶರತ್‌ನೊಂದಿಗೆ ಬೆಂಗಳೂರಿಗೆ ಬಂದಿದ್ದಾಳೆ. ಆಕೆಯ ಉದ್ದೇಶ ತನ್ನ ತಂದೆಯ ಸ್ನೇಹಿತ ಗೋವಿಂದಶೆಟ್ಟಿಯನ್ನು ಭೇಟಿಯಾಗಿ ಋಣ ಸಂದಾಯ ಮಾಡುವುದು.

‘ಭಾರತ್ ಸ್ಟೋರ್ಸ್’ ಎಂಬುದು ಗೋವಿಂದಶೆಟ್ಟಿ ನಡೆಸುತ್ತಿದ್ದ ಒಂದು ಪುಟ್ಟ ಕಿರಾಣಿ ಅಂಗಡಿ. ಒಂದು ಕಾಲದಲ್ಲಿ ಅದರ ಖ್ಯಾತಿಯಿಂದಾಗಿಯೇ ಆ ಬಸ್‌ನಿಲ್ದಾಣಕ್ಕೆ ‘ಭಾರತ್ ಸ್ಟೋರ್ಸ್ ಸ್ಟಾಪ್’ ಎಂದು ಹೆಸರು ಬಂದಿತ್ತು! ಗೋವಿಂದಶೆಟ್ಟಿಯನ್ನು ಹುಡುಕಿಕೊಂಡು ಬಂದ ಭಾರತಿಗೆ ಭಾರತ್ ಸ್ಟೋರ್ಸ್ ಹೆಸರಿನ ನಿಲ್ದಾಣ ಸಿಗುತ್ತದೆ, ಆದರೆ ಅಂಗಡಿಯಾಗಲಿ, ಶೆಟ್ಟಿಯಾಗಲಿ ಸಿಗುವುದಿಲ್ಲ!

ಚಿ.ಗುರುದತ್ ಮತ್ತು ಸುಧಾರಾಣಿ

ಚಿ.ಗುರುದತ್ ಮತ್ತು ಸುಧಾರಾಣಿ


ಶೆಟ್ಟಿಯ ಪತ್ತೆಯನ್ನು ಹುಡುಕುತ್ತಾ ಹೋದವಳಿಗೆ ಆತನ ಅಂಗಡಿಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಚಂದ್ರ ಮತ್ತು ಮಂಜುನಾಥ ಸಿಗುತ್ತಾರೆ. ಶೆಟ್ಟಿಯನ್ನು ತೀರ ಹತ್ತಿರದಿಂದ ಕಂಡ ಅವರಿಬ್ಬರು ಶೆಟ್ಟಿಯ ಒಂದೊಂದು ಹಂತದ ಕತೆಯನ್ನು ಹೇಳತೊಡಗುತ್ತಾರೆ. ಅದರ ಮೂಲಕ ಶೆಟ್ಟಿಯ ಕಿರಾಣಿ ಅಂಗಡಿಯ ವ್ಯಾಪಾರ, ಆತ ಮತ್ತು ಗಿರಾಕಿಗಳ ಸಂಬಂಧ, ಆತನ ಕುಟುಂಬ, ಅಲ್ಲಿನ ಆಗು-ಹೋಗುಗಳು ಎಲ್ಲವೂ ಪರಿಚಯವಾಗುತ್ತವೆ…

ಕೊನೆಗೆ ಭಾರತಿ ಗೋವಿಂದಶೆಟ್ಟಿಯನ್ನು ತುಂಬ ದಯನೀಯ ಸ್ಥಿತಿಯಲ್ಲಿ ಭೇಟಿಯಾಗುತ್ತಾಳೆ…

***

ಇದೇ ತಿಂಗಳು ಹದಿನೆಂಟನೇ ತಾರೀಖು ಮಧ್ಯಾಹ್ನ ಮೂರುಗಂಟೆ. ಸ್ನೇಹಿತರೊಬ್ಬರು ಫೋನ್ ಮಾಡಿ ಟಿವಿ ಆನ್ ಮಾಡಿ ಎಂದರು. ಮಾಡಿದೆ. ಭಾರತದ ಅರವತ್ತನೇ ರಾಷ್ಟ್ರಪ್ರಶಸ್ತಿಗಳು ಪ್ರಕಟವಾದ ಸುದ್ದಿ ಬರುತ್ತಿತ್ತು.

‘ಭಾರತ್ ಸ್ಟೋರ್ಸ್ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರಪ್ರಶಸ್ತಿ’ ಎಂಬ ಸುದ್ದಿಯನ್ನು ನ್ಯೂಸ್ ಚಾನಲ್‌ಗಳು ಬಿತ್ತರಿಸುತ್ತಿದ್ದವು.

ನಮ್ಮ ಮಗು ಡಿಸ್ಟಿನ್ಕ್ಷನ್‌ನಲ್ಲಿ ಪಾಸಾಗಿತ್ತು!

(ಇದು ‘ವಿಜಯವಾಣಿ’ಯಲ್ಲಿ ಮಾರ್ಚ್ 24, 2013 ರಂದು ಪ್ರಕಟವಾದ ಲೇಖನ)

ಚಿತ್ರೋತ್ಸವ ಮತ್ತು ನಾನು…

Image

ನಾನು ಹುಟ್ಟಿದ್ದು, ಬಾಲ್ಯ ಕಳೆದದ್ದು, ಯೌವನಿಗನಾದದ್ದು ಹಳ್ಳಿಯಲ್ಲಿ…

ಇದು ಅರವತ್ತರ ದಶಕದ ಮಾತು.. 

Image

ಆಗ ನಮ್ಮೂರಲ್ಲೂ ಒಂದು ಟೆಂಟಿತ್ತು!
ರಾತ್ರಿ ಕತ್ತಲೆಯಾದ ಮೇಲೆ ಚಿತ್ರದ ಆಟ ಆರಂಭವಾಗುತ್ತಿತ್ತು.
ಸಂಜೆ ಏಳು ಗಂಟೆಗೆ ಮೊದಲ ಆಟ ಮತ್ತು ರಾತ್ರಿ ಒಂಭತ್ತೂವರೆಗೆ ಎರಡನೆಯದು.
ಅಪ್ಪ ಮೇಷ್ಟ್ರಾಗಿದ್ದರು.  ವಿದ್ಯಾರ್ಥಿಗಳು ಸಿನಿಮಾ ನೋಡಿದರೆ ಹಾಳಾಗುತ್ತಾರೆ ಎಂದೇ ನಂಬಿದ್ದವರು ಹಾಗೂ ಅದನ್ನೇ ಬೋಧಿಸುತ್ತಿದ್ದವರು.  ಇನ್ನು ಮೇಷ್ಟ್ರ ಮಗ ಸಿನಿಮಾ ನೋಡುವುದು ಹೇಗೆ?
ಆಗ ನೆರವಿಗೆ ಬರುತ್ತಿದ್ದವಳು ಅಮ್ಮ.  
ಅವಳು ಹೇಳಿದಂತೆ ಕೇಳಿಕೊಂಡಿದ್ದರೆ ತಿಂಗಳಿಗೊಂದು ಸಿನಿಮಾ ನೋಡಲು ಪರ್ಮಿಷನ್ ಸಿಗುತ್ತಿತ್ತು.
ಆ ಒಪ್ಪಿಗೆ ಮುದ್ರೆಯ ದಿನಕ್ಕಾಗಿ ನಾನೂ ಜಾತಪಪಕ್ಷಿಯಂತೆ ಕಾದು ಕುಳಿತಿರುತ್ತಿದ್ದೆ, ಸಿನಿಮಾ ನೋಡಿ ಬೆರಗಾಗುತ್ತಿದ್ದೆ.

ಇನ್ನು ನಮ್ಮೂರ ಟೆಂಟ್‌ನಲ್ಲಿ ಚಿತ್ರ ಪ್ರದರ್ಶನಕ್ಕೆ ಅರ್ಧಗಂಟೆ ಮುಂಚೆ ಬೇರೆ ಚಿತ್ರಗಳ ಚಿತ್ರಗೀತೆಗಳನ್ನು ಇಡೀ ಊರಿಗೆ ಕೇಳಿಸುವಂತೆ ಮೈಕ್‌ನಲ್ಲಿ ಹಾಕಿ ಚಿತ್ರಮಂದಿರ ಆಟಕ್ಕೆ ಅಣಿಯಾಗಿದೆ ಎನ್ನುವುದನ್ನು ಸೂಚಿಸುತ್ತಿದ್ದರು.  

‘ನಮೋಽಽಽ ವೆಂಕಟೇಶ, ನಮೋಽಽ ತಿರುಮಲೇಶ…’

Image

ಈ ಹಾಡು ಕೇಳಿಸಿತೆಂದರೆ ನನಗೆ ರೋಮಾಂಚನವಾದ ಅನುಭವ.  ದೇವರ ಮೇಲಿನ ಭಕ್ತಿಯಿಂದಲ್ಲ; ಸಿನಿಮಾ ಮೇಲಿನ ಪ್ರೀತಿಯಿಂದ! ಇದು ಪ್ರತಿ ಪ್ರದರ್ಶನಕ್ಕೆ ಮುಂಚಿನ ಕೊನೆಯ ಹಾಡು.  ಮೂರು ನಾಲ್ಕು ಕಿಲೋಮೀಟರಿನಿಂದ ಗಾಡಿಕಟ್ಟಿಕೊಂಡು, ಸೈಕಲ್‌ನಲ್ಲಿ, ನಡೆದುಕೊಂಡು ಬರುತ್ತಿದ್ದ ಹಳ್ಳಿಗರು ಈ ಹಾಡು ಕೇಳುತ್ತಿದ್ದಂತೆ ಟೆಂಟಿನತ್ತ ದೌಡಾಯಿಸುತ್ತಿದ್ದರು.  ಇನ್ನು ಮೂರೇ ಮೂರು ನಿಮಿಷ ಬಿಳಿಯ ಪರದೆಯ ಮೇಲೆ ಚಲನಚಿತ್ರದ ರಂಗು ರಂಗಿನ ಜಗತ್ತು ಅನಾವರಣಗೊಳ್ಳುತ್ತದೆ ಎಂಬ ಅವಸರ.  ನಾನೂ ಎಷ್ಟೋ ಬಾರಿ ಓಡಿದ್ದೇನೆ, ಏದುರಿಸು ಬಿಡುತ್ತಾ ಮುಂದಿನ ಸಾಲಿನಲ್ಲಿ ಕುಳಿತು ಕಳೆದು ಹೋಗಿದ್ದೇನೆ…

ಇಂದಿಗೂ ಈ ಹಾಡನ್ನು ಎಲ್ಲೇ ಕೇಳಿದರೂ ನನಗೆ ನನ್ನ ಬಾಲ್ಯದ ಆ ದಿನಗಳು ಕಣ್ಣಮುಂದೆ ಬರುತ್ತವೆ.  ನನ್ನ ಕಂಪ್ಯೂಟರ್ ಹಾಗೂ ಮೊಬೈಲ್‌ನಲ್ಲಿ ಈ ಹಾಡಿನ ಧ್ವನಿಮುದ್ರಿಕೆ ಹಾಕಿಕೊಂಡಿದ್ದು ಆಗಾಗ ಕೇಳಿ ಫ್ಲ್ಯಾಷ್‌ಬ್ಯಾಕ್‌ಗೆ ಹೋಗುತ್ತಿರುತ್ತೇನೆ!

ತುಮಕೂರು ಜಿಲ್ಲೆಯಲ್ಲಿದ್ದ ದಂಡಿನಶಿವರ ಎಂಬ ನಮ್ಮ ಊರಿನಲ್ಲಿ ಕನ್ನಡ ಬಿಟ್ಟರೆ ಬೇರೆ ಭಾಷೆಯ ಪ್ರಭಾವ ಸುತರಾಂ ಇರಲಿಲ್ಲ.  ಹಾಗಾಗಿ ನನಗೆ ಸಿನಿಮಾ ಎಂದರೆ ಕನ್ನಡ ಸಿನಿಮಾ, ಹೀರೋ ಎಂದರೆ ರಾಜ್‌ಕುಮಾರ್, ಕಾಮಿಡಿ ಎಂದರೆ ನರಸಿಂಹರಾಜು, ಕೇಡಿ ಎಂದರೆ ವಜ್ರಮುನಿ.  

ಕೆಲವು ವರ್ಷಗಳ ಕಳೆದ ಮೇಲೆ, ಎಂಭತ್ತರ ದಶಕದಲ್ಲಿ ಟೆಂಟ್ ಇದ್ದ ಜಾಗದಲ್ಲಿ ಶೆಡ್ ಆಯಿತು.  ಹಾಗಾಗಿ ಮ್ಯಾಟಿನಿ ಪ್ರದರ್ಶನ ಕೂಡ ಆರಂಭವಾಯಿತು. ಆಗ ಕೆಲವು ಹಿಂದಿ ಚಿತ್ರಗಳ ಪ್ರದರ್ಶನವನ್ನು ಭಾನುವಾರ ಬೆಳಗ್ಗೆ ಇಟ್ಟುಕೊಳ್ಳುತ್ತಿದ್ದರು.  ಅಲ್ಲೂ ಪ್ರೇಮ, ಹಾಡು, ಕಣ್ಣೀರು, ಹೊಡೆದಾಟ ಇದ್ದೇ ಇರುತ್ತಿತ್ತು.  

ಆಗ ತಾನೇ ನನ್ನ ಹೈಸ್ಕೂಲ್ ಮುಗಿದಿತ್ತು. ಪಿಯುಸಿ ಓದುತ್ತಿದ್ದೆ. ಆಗ ಒಂದು ದಿನ ನಮಗೆ ಇನ್ನೊಂದು ಚಿತ್ರದ ಅನುಭವವಾಯಿತು.  ಅದೇ ರಿಚರ್ಡ್ ಆಟನ್‌ಬರೋ ಅವರ ‘ಗಾಂಧಿ’!  ವಿದ್ಯಾರ್ಥಿಗಳಿಗಾಗಿ ಸ್ಪೆಷಲ್ ಡಿಸ್‌ಕೌಂಟ್ ಎಂದು ಐವತ್ತು ಪೈಸೆ ಪ್ರವೇಶದರಕ್ಕೆ ತೋರಿಸಿದ ಸಿನಿಮಾ ಅದು! ನಮ್ಮನ್ನು ಗಾಂಧೀಯುಗಕ್ಕೆ ಒಯ್ದ ಆ ಸಿನಿಮಾ ಪಾಠ ಓದಿದಾಗಲೂ ಅರ್ಥವಾಗದ ಗಾಂಧಿಯನ್ನು ಸುಲಭವಾಗಿ ನಮ್ಮ ಮಿದುಳಿನಾಳಕ್ಕೆ ಇಳಿಸಿತ್ತು.  ಅದರಲ್ಲಿಯ ಅದ್ದೂರಿ ಚಿತ್ರೀಕರಣ, ಸಾಗರದೋಪಾದಿಯ ಜನರನ್ನು ಕಂಡು ದಂಗು ಬಡಿದು ಹೋಗಿದ್ದೆ.  ಫೈಟಿಂಗ್ ಮತ್ತು ಹಾಡುಗಳಿಲ್ಲದೆ ಒಂದು ಸಿನಿಮಾ ಹೀಗೂ ಇರಬಹುದು ಎಂದು ಅರ್ಥವಾಗಿದ್ದು ಆಗಲೇ…

Image

ಎಂಭತ್ತರ ದಶಕದ ಉತ್ತರಾರ್ಧದಲ್ಲಿ ಬೆಂಗಳೂರಿಗೆ ಜೀವನೋಪಾಯಕ್ಕೆ ಬಂದ ಮೇಲೆ ನಮ್ಮ ದೇಶದ ಬೇರೆ ಬೇರೆ ಭಾಷೆಯ ಚಿತ್ರಗಳಿಗೆ ನನ್ನನ್ನು ನಾನು ತೆರೆದುಕೊಳ್ಳುತ್ತಾ ಹೋದೆ.  ಅನುಭವ ವಿಸ್ತರಿಸಿತು.  

ಅದು ತೊಂಬತ್ತರ ದಶಕದ ಆರಂಭ.  ಬೆಂಗಳೂರಿನಲ್ಲಿ ಭಾರತದ ಇಪ್ಪತ್ತಮೂರನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆಗೊಂಡಿತ್ತು.  ದೇಶ-ವಿದೇಶಗಳ ಚಿತ್ರಗಳನ್ನು ನೋಡುವ ಸದವಕಾಶ ನಮ್ಮ ಮನೆಬಾಗಿಲಿಗೇ ಬಂದಿತ್ತು!  

ಆ ಹತ್ತು ದಿನಗಳು.  ನಾನು ಎಂದಿಗೂ ಮರೆಯಲಾಗದ ದಿನಗಳು.

ಆ ಚಿತ್ರೋತ್ಸವದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಚಿತ್ರಗಳನ್ನು ನೋಡಿದೆ.  ಈ ಇಪ್ಪತ್ತು ವರ್ಷಗಳ ನಂತರವೂ ನನ್ನ ನೆನಪಿನಲ್ಲಿ ಉಳಿದಿರುವ ಕೆಲವು ಮುಖ್ಯ ಚಿತ್ರಗಳು-  LA BELLE NOISEUSE (Jacques Rivette) ಫ್ರಾನ್ಸ್‌ನ ಈ ಚಿತ್ರದ ಉದ್ದ ನಾಲ್ಕು ಗಂಟೆಗಳು! ಒಬ್ಬ ಚಿತ್ರಕಲಾವಿದನ ಬದುಕಿನ ಸುತ್ತ ಹೆಣೆದ ಕತೆ…  DON’T LET THEM SHOOT THE KITE (Turkey) ಟರ್ಕಿ ದೇಶದ ಈ ಚಿತ್ರ ಅಲ್ಲಿಯ ಜೈಲೊಂದರಲ್ಲಿ ಬಂಧನದಲ್ಲಿದ್ದ ಅಸಹಾಯಕ ಹೆಣ್ಣು ಮಕ್ಕಳ ಕತೆ.  ಅವರ ನಿತ್ಯದ ಬದುಕು, ಅಲ್ಲೇ ಜನ್ಮ ತಳೆವ ಅವರ ಮಕ್ಕಳು.  ಆ ಮಕ್ಕಳಿಗೆ ಹೊರಗಿನ ಪ್ರಪಂಚದ ಅರಿವೇ ಇಲ್ಲ!  ಜೈಲಿನಲ್ಲಿ ಗೋಡೆಗಳ ನಡುವೆ ಕಾಣಿಸುವ ತುಂಡು ಆಕಾಶವಷ್ಟೇ ಅವರ ಹೊರಗಿನ ಪ್ರಪಂಚ.  ಅಲ್ಲಿ ಆಗಾಗ ಹಾರುವ ಗಾಳಿಪಟವನ್ನೇ ಅವರು ಪಕ್ಷಿಗಳು ಎಂದುಕೊಂಡಿರುತ್ತಾರೆ…   ಹೀಗೆಯೇ ಸ್ಪೇನ್‌ನ HIGH HEELS (Pedro Almodovar),  ಯು‌ಎಸ್‌ಎ ದೇಶದ SLEEPING WITH THE ENEMY,  ಇರಾನ್‌ನ  CLOSE-UP (Abbas Kiarostami)… ಹೀಗೇ…

ವಿದೇಶ ಚಿತ್ರಗಳಷ್ಟೇ ಏಕೆ, ನಮ್ಮದೇ ದೇಶದ ಸತ್ಯಜಿತ್ ರೇ, ಬಿಮಲ್‌ರಾಯ್, ಅರವಿಂದನ್, ಮೃಣಾಲ್ ಸೇನ್, ಕಾಸರವಳ್ಳಿ.. ಮುಂತಾದವರ ಚಿತ್ರಗಳು ನನಗೆ ಹೊಸ ಅನುಭವ ಕೊಟ್ಟಿದ್ದವು.  ಈಗಿನಂತೆ ಆಗ ಇಂಥ ಚಿತ್ರಗಳನ್ನು ವೀಕ್ಷಿಸಲು ಮಾರ್ಗಗಳು ಕಡಿಮೆ.  ಒಂದೋ ದೂರದರ್ಶನದಲ್ಲಿ ಅಥವಾ ಫಿಲಂ ಸೊಸೈಟಿಗಳಲ್ಲಿ ನೋಡಬೇಕಿತ್ತೇ ಹೊರತು ಹೆಚ್ಚಿನವುಚಿತ್ರಮಂದಿರಗಳಿಗೆ ಬರುತ್ತಿರಲಿಲ್ಲ. ಈಗ ಬಿಡಿ, ಎಲ್ಲವೂ ಬೆರಳ ತುದಿಯಲ್ಲೇ ಸಿಗುತ್ತವೆ!  ಜೇಬಿನಲ್ಲಿ ನೂರಾರು ಸಿನಿಮಾ ಸಂಗ್ರಹಿಸಿ ಒಯ್ಯುವ ತಂತ್ರಜ್ಞಾನ ವರವಾಗಿ ಬಂದಿದೆ.

ಹೀಗೆ ಚಿತ್ರೋತ್ಸವ ರುಚಿ ಹತ್ತಿತು.  ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿದೆನೋ ಇಲ್ಲವೋ, ಆದರೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಸಿನಿಮಾ ಅಂತೂ ನೋಡಿದೆ! ನಂತರದ ದಿನಗಳಲ್ಲಿ ಚಲನಚಿತ್ರೋತ್ಸವ ಎಲ್ಲೇ ಆದರೂ ನಾವು ಕೆಲವು ಗೆಳೆಯರು ಒಟ್ಟಾಗಿ ದೆಹಲಿ, ಕಲ್ಕತ್ತ, ಬೊಂಬಾಯಿ, ತಿರುವನಂತಪುರ, ಹೈದರಾಬಾದ್ ಎಂದು ತಿರುಗುತ್ತಿದ್ದೆವು.  ಆ ಹತ್ತು ದಿನಗಳಲ್ಲಿ ನಮ್ಮ ಬಾಯಲ್ಲಿ ಬರುತ್ತಿದ್ದುದು ಒಂದೇ ಮಂತ್ರ ಸಿನಿಮಾ.. ಸಿನಿಮಾ.. ಸಿನಿಮಾ..

ಅಕಿರ ಕುರಸೋವಾ, ತಾರ್ಕೋವಿಸ್ಕಿ, ಆಂದ್ರೆ ವಾಜ್ದಾ, ಬರ್ಟುಲುಸ್ಸಿ, ಕಾಸ್ಟಾ ಗವ್ರಾಸ್, ಫೆಲಿನಿ, ಫೋರ್ಡ್ ಕೋಪೊಲ, ಟ್ರುಫ್ಯಾಟ್, ಬರ್ಗ್‌ಮನ್, ಗೊಡಾರ್ಡ್, ಮಿಜೋಗುಚಿ, ಕಿಸ್ಲೋವ್‌ಸ್ಕಿ, ಆಂಟೋನಿಯೋನಿ, ರಾಬರ್ಟ್ ಬ್ರೆಸ್ಸನ್, ಪೋಲನ್ಸ್‌ಕಿ, ಐಸೆನ್‌ಸ್ಟೈನ್, ಏಂಜೆಲೋಪೊಲಸ್, ಡಿ ಸಿಕ, ಓಝು… ಮುಂತಾದವರು ನನಗೆ ಪರಿಚಯವಾಗಿದ್ದೇ ಚಿತ್ರೋತ್ಸವಗಳಿಂದ.  ಇವರೆಲ್ಲರೂ ಮೇಷ್ಟ್ರುಗಳೇ!

Image

ತೊಂಬತ್ತರ ದಶಕದ ಆರಂಭದಿಂದಲೇ ನಾನು ಸಿನಿಮಾಕ್ಷೇತ್ರದಲ್ಲಿ ನನ್ನ ಬದುಕನ್ನು ಗುರುತಿಸಿಕೊಂಡೆ.  ವೃತ್ತಿಯಾಗಿ ಇದನ್ನು ಸ್ವೀಕರಿಸಿದ್ದರಿಂದ ವ್ಯಾಪಾರಿಚಿತ್ರಗಳು, ಕಲಾತ್ಮಕ ಚಿತ್ರಗಳು, ಧಾರಾವಾಹಿಗಳು, ಸಾಕ್ಷ್ಯಚಿತ್ರಗಳು ಎಲ್ಲದರಲ್ಲೂ ನನ್ನನ್ನು ತೊಡಗಿಸಿಕೊಂಡು ಬೇರೆ ಬೇರೆ ನಿರ್ದೇಶಕರ ಕೈ ಕೆಳಗೆ ಕೆಲಸ ಮಾಡತೊಡಗಿದೆ.  ನನಗೆ ನನ್ನದೇ ಸ್ವತಂತ್ರ ಸಿನಿಮಾ ಒಂದನ್ನು ಮಾಡುವ ಬಯಕೆ 1995 ರಿಂದಲೂ ತೀವ್ರವಾಗಿತ್ತು.  ಕಮರ್ಷಿಯಲ್ ಚಿತ್ರಕ್ಕೆ ಹಣ ಹೂಡುವ ನಿರ್ಮಾಪಕರು ನನಗೆ ಪರಿಚಯವಿರಲಿಲ್ಲ, ಪರಿಚಯವಿದ್ದ ಬೆರಳೆಣಿಕೆಯಷ್ಟು ಜನ ನನ್ನ ಮೇಲೆ ಹಣ ಹೂಡಲು ತಯಾರಿರಲಿಲ್ಲ.  ಅವರನ್ನು ಮೆಚ್ಚಿಸುವುದಕ್ಕಿಂತ ಮುಂಚೆ ನಾಯಕ ನಟರನ್ನು ಓಲೈಸಿಕೊಳ್ಳಬೇಕಿತ್ತು.  ಆ ಕಲೆ ನನಗೆ ಸಿದ್ಧಿಸಿರಲಿಲ್ಲ.  ಇನ್ನು  ಕಲಾತ್ಮಕ ಚಿತ್ರಗಳಿಗೆ ಹಣ ಹೂಡುವವರನ್ನು ಭೂತಕನ್ನಡಿ ಹಿಡಿದು ಹುಡುಕಬೇಕಿತ್ತು.  ಹೀಗಾಗಿ ಚಿತ್ರ ನಿರ್ದೇಶಿಸಬೇಕೆಂಬ ನನ್ನ ಕನಸು ಕನಸಾಗಿಯೇ ಉಳಿದಿತ್ತು.

ಅದು 2000 ದ ಇಸವಿ.  ದೆಹಲಿಯಲ್ಲಿ ಭಾರತದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಿದ್ಧತೆ ನಡೆದಿತ್ತು. ಮಾಮೂಲಿನಂತೆ ನಮ್ಮ ಗೆಳೆಯರ ತಂಡ ದೆಹಲಿಯ ರೈಲು ಹತ್ತಿತು.  ಹೊರಗೆ ಗಡ ಗಡ ನಡುಗಿಸುವ ಚಳಿ ಇದ್ದರೂ, ಒಳಗೆ ಬೆಚ್ಚಗಾಗಿಸುವ ಚಿತ್ರಗಳ ಸರಮಾಲೆ.  ಆಗ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ್ದ ಒಂದು ಚಿತ್ರ ‘ಕರಣಂ’.  ಮಲೆಯಾಳಂನ ಈ ಚಿತ್ರವನ್ನು ಜಯರಾಜ್ ನಿರ್ದೇಶಿಸಿದ್ದರು.  ಅದನ್ನು ನೋಡಲು ಹೋದೆ. ಚಿತ್ರ ಪ್ರದರ್ಶನಕ್ಕೆ ಮುಂಚೆ ಜಯರಾಜ್ ಅಲ್ಲಿ ನೆರೆದಿದ್ದ ಪ್ರೇಕ್ಷಕರ ಮುಂದೆ ಚಿತ್ರವನ್ನು ಪ್ರಸೆಂಟ್ ಮಾಡುತ್ತಾ, ನಾನು ಈ ಚಿತ್ರವನ್ನು ಒಂಭತ್ತು ಲಕ್ಷದಲ್ಲಿ ಮಾಡಿದೆ ಎಂದು ಹೇಳಿದರು.  ಇಷ್ಟು ಕಡಿಮೆ ಬಜೆಟ್‌ನಲ್ಲಿ ಚಿತ್ರಮಾಡಲು ಸಾಧ್ಯವೆ? ‘ಕರಣಂ’ ಆ ವರ್ಷ ಅಂತಾರಾಷ್ಟ್ರೀಯ ಚಿತ್ರಗಳ ಜೊತೆ ಸ್ಪರ್ಧಾಕಣದಲ್ಲೇ ಬೇರೆ ಇತ್ತು.  ಕುತೂಹಲದಿಂದ ಚಿತ್ರ ನೋಡಿದೆ.  ಚಿತ್ರ ಭಿನ್ನವಾಗಿತ್ತು.  ನಮಗೆಲ್ಲ ನಿಜವಾದ ಆಶ್ಚರ್ಯ ಕಾದಿದ್ದು ಕೊನೆಯ ದಿನದ ಪ್ರಶಸ್ತಿ ಪ್ರಕಟವಾದಾಗ.  ‘ಕರಣಂ’ ಎಲ್ಲ ಅಂತಾರಾಷ್ಟ್ರೀಯ ಚಿತ್ರಗಳನ್ನು ಬದಿಗೆ ಸರಿಸಿ ಭಾರತ ಸರ್ಕಾರ ಕೊಡುವ ‘ಗೋಲ್ಡನ್ ಪೀಕಾಕ್’ ಪ್ರಶಸ್ತಿಯನ್ನು ಗೆದ್ದಿತ್ತು.  ಪ್ರಶಸ್ತಿಯ ಮೊತ್ತ, ಚಿನ್ನದ ನವಿಲಿನ ಜೊತೇ ಇಪ್ಪತ್ತು ಲಕ್ಷ ರೂಪಾಯಿ!

ಇದೇ ನೆನಪಿನಲ್ಲಿ ಹಿಂತಿರುಗಿ ಬೆಂಗಳೂರಿಗೆ ರೈಲಿನಲ್ಲಿ ಬರುತ್ತಿದ್ದೆವು.  (ವಿಮಾನದಲ್ಲಿ ಬರಲು ನಮ್ಮಲ್ಲಿ ದುಡ್ಡಿರಲಿಲ್ಲ!).  ದೆಹಲಿಯಿಂದ ಬೆಂಗಳೂರಿಗೆ ಎರಡು ದಿನದ ಪ್ರಯಾಣ.  ಹತ್ತು ದಿನ ನಾವು ನೋಡಿದ ಚಿತ್ರಗಳನ್ನೇ ಮೆಲುಕು ಹಾಕುತ್ತಾ ಬರುತ್ತಿತ್ತು ನಮ್ಮ ಗುಂಪು.  ಆದರೆ ನನ್ನ ಮನಸ್ಸಿನಲ್ಲಿ ‘ಕರಣಂ’ ಒಂದೇ ರಿಂಗಣಿಸುತ್ತಿತ್ತು.  ಒಂಭತ್ತು ಲಕ್ಷದಲ್ಲಿ ಮಾಡಿದ ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯ ಬಹುದಾದರೆ, ಅಂಥದ್ದೇ ಒಂದು ಚಿತ್ರವನ್ನು ನಾನೂ ಏಕೆ ಮಾಡಬಾರದು? ತಲೆಯಲ್ಲಿ ಹುಳ ಕೊರೆಯ ತೊಡಗಿತು..

ಅಂಥ ಒಂದು ಕಥಾವಸ್ತುವಿಗಾಗಿ ಅಲ್ಲಿಯವರೆಗೆ ನಾನು ಓದಿದ ಕತೆಗಳನ್ನೆಲ್ಲಾ ನೆನಪಿಗೆ ತಂದುಕೊಳ್ಳತೊಡಗಿದೆ.  ಮೊದಲ ಸಾಲಿಗೆ ಬಂದು ಕುಳಿತಿದ್ದು ನಮ್ಮ ಬೊಳುವಾರು ಬರೆದಿದ್ದೆ ‘ಮುತ್ತುಚ್ಚೇರ’ ಕಥೆ.  ಬೆಂಗಳೂರಿನಲ್ಲಿ ರೈಲಿಳಿದವನೇ ಮನೆಗೆ ಬಂದು ಮಾಡಿದ ಮೊದಲ ಕೆಲಸವೆಂದರೆ ಆವರ ಕಥೆಯನ್ನು ಮತ್ತೊಮ್ಮೆ ಓದಿದ್ದು, ಮತ್ತು ಅದನ್ನೇ ಚಿತ್ರ ಮಾಡಲು ನಿರ್ಧರಿಸಿದ್ದು.  ನನ್ನ ನಿರ್ಧಾರವನ್ನು ನನ್ನ ಹತ್ತಿರದ ಬಳಗಕ್ಕೆ ಹೇಳಿದಾಗ ಎಲ್ಲರೂ ಮಾಡಬಹುದು ಎಂದು ಬೆಂಬಲ ಕೊಟ್ಟರು.  

ಆ ಕಥೆಯನ್ನು ಹಿಡಿದು ಗಾಂಧಿನಗರ ಹೊಕ್ಕೆ.  ಅಲ್ಲಿ ನನಗೇನೂ ಲಾಭವಾಗಲಿಲ್ಲ ಬಿಡಿ.  ಆಮೇಲೆ ಸಹಕಾರಿ ತತ್ವದಲ್ಲಿ ನನ್ನ ಒಂದಿಷ್ಟು ಗೆಳೆಯರನ್ನು ಒಟ್ಟುಗೂಡಿಸಿ ಆ ಚಿತ್ರವನ್ನು ಹದಿನೈದು ಲಕ್ಷದಲ್ಲಿ ಮಾಡುವ ಯೋಜನೆ ಹೂಡಿದೆ.  ಮುಂದಿನ ಆರೇ ತಿಂಗಳಲ್ಲಿ ‘ಮುನ್ನುಡಿ’ ಚಿತ್ರದ ಚಿತ್ರೀಕರಣವೂ ಪ್ರಾರಂಭವಾಯಿತು.  ಅದೇ ವರ್ಷ ನಾನು ಯಾರ ಚಿತ್ರಗಳನ್ನು ನೋಡಿ ಬೆರಗು ಪಟ್ಟಿದ್ದೆನೋ, ಅದೇ ನಿರ್ದೇಶಕರ ಹೆಸರಿನಲ್ಲಿ ಮೊದಲ ಚಿತ್ರದ ನಿರ್ದೇಶಕನಿಗೆ ಕೊಡುವ ‘ಅರವಿಂದನ್ ಪ್ರಶಸ್ತಿ’ ನನಗೆ ಬಂತು.  ಮುಂದಿನ ವರ್ಷದ ಭಾರತದ ಅಂತರಾಷ್ಟ್ರೀಯ ಚಿತ್ರೋತ್ಸವದ ಪನೋರಮಾ ವಿಭಾಗದಲ್ಲಿ ನನ್ನ ಚಿತ್ರವೂ ಪ್ರದರ್ಶಿತವಾಯಿತು.  ಈ ಬಾರಿ ನಾನು ಭಾರತ ಸರ್ಕಾರದ ಅತಿಥಿಯಾಗಿ ವಿಮಾನದಲ್ಲಿ ಹೋಗಿ ಬಂದೆ!  ‘ಮುನ್ನುಡಿ’ ಭಾರತದಲ್ಲಿ ನಡೆಯುತ್ತಿದ್ದ ಕೇರಳ, ಕೊಲ್ಕತ್ತ, ಮುಂಬಯಿ ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾದದ್ದಲ್ಲದೇ ಬೇರೆ ಬೇರೆ ದೇಶಗಳಲ್ಲೂ ಪ್ರದಶ್ರನಗೊಂಡು ನನ್ನ ಚಿತ್ರಜೀವನಕ್ಕೆ ಒಂದು ಸಶಕ್ತ ಮುನ್ನುಡಿ ಬರೆಯಿತು.

ನಂತರ ನನ್ನ ಮಾರ್ಗ ಸ್ಪಷ್ಟವಾಯಿತು.  ‘ಅತಿಥಿ’, ‘ಬೇರು’, ‘ತುತ್ತೂರಿ’, ‘ವಿಮುಕ್ತಿ’, ‘ಬೆಟ್ಟದಜೀವ’ ಮತ್ತು ಇದೀಗ ‘ಭಾರತ್ ಸ್ಟೋರ್ಸ್’ ನನ್ನ ಚಿತ್ರಜೀವನದ ಬದುಕನ್ನು ಮುನ್ನೆಡಿಸಿಕೊಂಡು ಬಂದಿವೆ.

ಹೀಗೆ ಚಿತ್ರೋತ್ಸವ ನನ್ನ ಬದುಕಿನಲ್ಲಿ ಬಹುದೊಡ್ಡ ಪಾತ್ರ ವಹಿಸಿತು.  ಅಲ್ಲಿಯ ವೈಶಿಷ್ಟ್ಯಪೂರ್ಣ ಚಿತ್ರಗಳು, ದೇಶ ವಿದೇಶಗಳ ಪ್ರತಿನಿಧಿಗಳು, ಅಲ್ಲಾಗುವ ಮೌಲ್ಯಯುತ ಚರ್ಚೆ ನಮ್ಮಂತ ಚಿತ್ರಾಸಕ್ತರಿಗೆ ಒಂದು ದೊಡ್ಡ ಜ್ಞಾನಶಾಲೆ.  

ಮತ್ತೆ ನನ್ನ ಬಾಲ್ಯಕ್ಕೆ ಹೋಗುವುದಾದರೆ, ಪ್ರತಿ ಶುಕ್ರವಾರ ನಮ್ಮೂರ ಟೆಂಟ್‌ನಲ್ಲಿ ಹೊಸಚಿತ್ರದ ಬದಲಾವಣೆಯಾದಾಗ ಸೈಕಲ್‌ನಲ್ಲಿ, ಎತ್ತಿನಗಾಡಿಗಳಲ್ಲಿ ಬೋರ್ಡ್ ಕಟ್ಟಿಕೊಂಡು ಅನೌನ್ಸ್ ಮಾಡುತ್ತಿದ್ದರು.

‘ಚಿತ್ರರಸಿಕರೇ! ಈ ವಾರದ…..ಚಿತ್ರ ನೋಡಲು ಮರೆಯಬೇಡಿ, ಮರೆತು ನಿರಾಶರಾಗಬೇಡಿ.  ಒಮ್ಮೆ ನೋಡಿದರೆ ಮತ್ತೊಮ್ಮೆ, ಮತ್ತೆ ನೋಡಿದರೆ ಮಗದೊಮ್ಮೆ, ಮಗದೊಮ್ಮೆ ನೋಡಿದರೆ ಇನ್ನೂ ಒಮ್ಮೆ ನೋಡಬೇಕೆನಿಸುವ ಚಿತ್ರ…  ಇಂದೇ ನೋಡಿ, ಆನಂದಿಸಿ!’

Image

(ಬೆಂಗಳೂರಿನಲ್ಲಿ ನಡೆದ ಐದನೇ ಅಂತರಾಷ್ಟ್ರೀಯ ಚಿತ್ರೋತ್ಸವದ ಹಿನ್ನೆಲೆಯಲ್ಲಿ ಡಿಸೆಂಬರ್ ೧೬, ೨೦೧೨ ರಂದು ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ)

ಬೊಳುವಾರರ ಮಹಾ ಓಟ!

(ವಿಲನ್ ಇಲ್ಲದಿರುವುದೊಂದೇ ಈ ಕಾದಂಬರಿಯ ಕೊರತೆ!)

(ಈಗ ಅವರ ಕೂದಲು ಬೆಳ್ಳಗಾಗಿದೆ!)
ಕೆಲ ವರ್ಷದ ಹಿಂದಿನ ನೆನಪು ಇದು. ಒಂದು ದಿನ ಬೊಳುವಾರು ದಂಪತಿಗಳು ಮನೆಗೆ ಬಂದಿದ್ದರು. ಪ್ರಾಸಂಗಿಕವಾಗಿ ಅದೂ ಇದೂ ಮಾತನಾಡುತ್ತಾ ನನ್ನ ಮುಂದಿನ ಚಿತ್ರದ ಬಗ್ಗೆ ಕೇಳಿದರು. ಅಷ್ಟರಲ್ಲಾಗಲೇ ನಾನು ‘ಮುನ್ನುಡಿ’, ‘ಅತಿಥಿ’ ಮತ್ತು ‘ಬೇರು’ ಚಿತ್ರ ಮಾಡಿದ್ದೆ. ನಾನು ಹೊಸ ಕತೆಯ ಹುಡುಕಾಟದಲ್ಲಿ ಇರುವ ವಿಚಾರ ಹೇಳಿದೆ. ‘ನಿಮಗೆ ಹೇಗೂ ಮುನ್ನುಡಿಯಲ್ಲಿ ನನ್ನೊಂದಿಗಿದ್ದು ಅನುಭವವಿದೆಯಲ್ಲಾ, ಮುಂದಿನ ಸಿನಿಮಾಗೆ ಒಂದು ಒಳ್ಳೇ ಕತೆ ಬರೆದುಕೊಡಿ’ ಎಂದೆ. ‘ನಾನು ಬ್ಯಾಂಕಿನ ಕೆಲಸ ಬಿಡುವವರೆಗೆ ಪೆನ್ನು ಮುಟ್ಟುವುದಿಲ್ಲ ಎಂದು ಶಪಥ ಮಾಡಿದ್ದೇನೆ’ ಎಂದರು. ಅವರದ್ದು ಯಾವಾಗಲೂ ಕಡ್ಡಿ ಮುರಿದಂತೆ ಮಾತು. ಆದರೆ ಅವರ ಮನಸ್ಸು ಬೆಣ್ಣೆ. ಇಪ್ಪತ್ತು ವರ್ಷದಿಂದ ಅವರನ್ನು ಹತ್ತಿರದಿಂದ ಬಲ್ಲ ನಾನು ಅವರ ಮಾತಿನ ಚುರುಕೇಟನ್ನು ಎಂಜಾಯ್ ಮಾಡುತ್ತೇನೆಯೇ ಹೊರತು ತಲೆಕೆಡಿಸಿಕೊಳ್ಳುವುದಿಲ್ಲ.

‘ಹೋಗಲಿ, ನಿಮ್ಮ ಹಳೇ ಕತೆಗಳಲ್ಲಿ ಯಾವುದಾದರು ಒಂದನ್ನು ಸಜೆಸ್ಟ್ ಮಾಡಿ’ ಎಂದೆ. ‘ನನಗೆ ಅದೆಲ್ಲಾ ಗೊತ್ತಾಗುವುದಿಲ್ಲಪ್ಪ’ ಎಂದು ಕೈಯಾಡಿಸಿದರು. ‘ಹೋಗಲಿ ನಿಮಗೆ ಇಷ್ಟವಾಗುವ ಒಂದು ಕತೆ ಹೇಳಿ’ ಎಂದೆ
‘ಸ್ವಾತಂತ್ರ್ಯದ ಓಟ’ ಎಂದರು.
‘ಸರಿ ಅದೇ ಕತೆಯನ್ನು ನಾನು ಸಿನಿಮಾ ಮಾಡುತ್ತೇನೆ’ ಎಂದೆ ನಾನು. ‘ಆ ಕತೆ ಓದಿದ್ದೀರ ನೀವು?’ ಖಾರವಾಗಿಯೇ ಇತ್ತು ಅವರ ಪ್ರಶ್ನೆ. ‘ಹುಂ, ಅದು ಪಾರ್ಟಿಷನ್ ಸಂದರ್ಭದ ಕತೆ ಅಲ್ಲವೆ? ಬಹಳ ಹಿಂದೆ ಓದಿದ ನೆನಪು… ಎಲ್ಲಿ ಒಮ್ಮೆ ಆದರ ಕತೆ ಹೇಳಿ…’ ಎಂದೆ.

ಬೊಳುವಾರು 1947ರ ಫ್ಲ್ಯಾಷ್‌ಬ್ಯಾಕ್‌ಗೆ ಜಾರಿದರು. ಕರಾಚಿಯ ಯಾವುದೋ ಒಂದು ಶಾಲೆಯ ಬಯಲಲ್ಲಿ ಆರ್.ಎಸ್.ಎಸ್ ಹುಡುಗರು ಕವಾಯತು ನಡೆಸುತ್ತಿರುವಲ್ಲಿಂದ ಕತೆ ಶುರುವಾಯಿತು. ಕವಾಯತು ಮುಗಿಸಿದವರ ಜೊತೆಗೆ ಆಟವಾಡುತ್ತಿರುವ ಒಬ್ಬ ಹತ್ತು ಹನ್ನೆರಡು ವರ್ಷದ ಮುಸ್ಲಿಮ್ ಹುಡುಗನನ್ನು, ಅವನ ಪೋಷಕರು ಅಲ್ಲಿಂದ ಎಳೆದುಕೊಂಡು ಹೋಗುವ ಘಟನೆ ವಿವರಿಸುತ್ತಿದ್ದಂತೆ ನನಗೆ ಅರ್ಥವಾಗಿತ್ತು; ನಾನು ಸಿನೆಮಾ ಮಾಡಬಾರದು ಎಂಬ ಸ್ಪಷ್ಟ ಉದ್ದೇಶದಿಂದಲೇ ಬೊಳುವಾರು ತನ್ನ ಕತೆಯನ್ನು ಆರ್.ಎಸ್.ಎಸ್. ಕ್ಯಾಂಪಿನಿಂದ ಶುರು ಮಾಡುತ್ತಿದ್ದಾರೆ ಎಂದು. ಆದರೂ ನಾನು ಆಸಕ್ತಿಯಿಂದ ಕೇಳುವವನಂತೆ ನಟಿಸುತ್ತಿದ್ದೆ. ಅವರು ಕತೆ ಹೇಳುವುದದರಲ್ಲಿ ಮುಳುಗಿದ್ದರು.
ಬೊಳುವಾರರ ಜೊತೆಗೆ ಹರಟುವ ಗೆಳೆಯರಿಗೆ ಗೊತ್ತು. ಅವರ ಮಾತು ಕೇಳುವುದೇ ಒಂದು ಸೊಗಸು. ಅದರಲ್ಲೂ ಅವರ ಬಾಯಿಯಿಂದ ಕತೆ ಕೇಳುವುದೆಂದರೆ, ಲೊಕೇಶನ್‌ನಲ್ಲಿ ಫಿಲ್ಮ್ ಶೂಟಿಂಗ್ ಸ್ಕ್ರಿಪ್ಟ್ ಕೇಳುವಂತಿರುತ್ತದೆ. ಎಡಕ್ಕೆ ಯಾವನಿದ್ದ, ಬಲಕ್ಕೆ ಯಾವನಿರುತ್ತಾನೆ, ಅವನ ಕಣ್ಣುಗಳು ಏನನ್ನು ನೋಡಬೇಕು, ಪಕ್ಕದವನ ರಿಯಾಕ್ಷನ್ ಏನು ಎಂಬುದನ್ನೆಲ್ಲ ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಾರೆ. ಸಿನೆಮಾ ಆಗಲಿ ಆಗದಿರಲಿ, ಕತೆಯಂತೂ ಕುತೂಹಲ ಕೆರಳಿಸುವಂತಿತ್ತು.
ಐದೇ ನಿಮಿಷದಲ್ಲಿ ಕತೆಯ ಲೊಕೇಶನ್ ಕರಾಚಿಯಿಂದ ಬಹಳ ದೂರದ ಲಾಹೋರು ಪ್ರಾಂತ್ಯದ ಬಹವಾಲಪುರಕ್ಕೆ ಶಿಪ್ಟ್ ಆಗಿತ್ತು. ‘ಇದು ನಿಮ್ಮ ಕತೆಯಲ್ಲಿ ಇದ್ದಿರಲಿಲ್ಲವಲ್ಲಾ’ ಎಂದೆ. ‘ಆವತ್ತಿನ ಕತೆಯಲ್ಲಿ ಇರಲಿಲ್ಲವಾದರೆ ಈವತ್ತು ಇರಬಾರದಾ? ಕತೆಗಳಲ್ಲಿ ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲವೆಂದು ನಾನೇನು ಪ್ರಮಾಣ ಮಾಡಿಲ್ಲವಲ್ಲಾ? ನಿಮಗೆ ಬದಲಾವಣೆಯಲ್ಲಿ ನಂಬಿಕೆ ಇಲ್ಲವೆಂದಾದರೆ ನಾಳೆ ಪ್ರಿಂಟೆಡ್ ಕತೆ ಕಳಿಸ್ತೇನೆ, ಓದಿ ಆನಂದಿಸಿ’ ಎಂದರು. ನಾನು ‘ಮುಂದುವರಿಸಿ ಮಾರಾಯರೇ’ ಎಂದೆ.
‘ನಿಮಗೆ ಆರೆಸ್ಸಸ್ ಕ್ಯಾಂಪ್ ಬೇಡವಾದರೆ ‘ನಿರಾಶ್ರಿತರ ಕ್ಯಾಂಪ್’ನಿಂದ ಶುರು ಮಾಡುತ್ತೇನೆ ಎಂದರು. ‘ಮೊಹಿಂದರ್ ಭಾಬಿ ಎಂಬ ಹೆಸರು ಹೇಗಿದೆ?’ ಎಂದು ಪ್ರಶ್ನಿಸಿದರು. ‘ಚೆನ್ನಾಗಿದೆ’ ಎಂದೆ. ‘ತನ್ವೀರ್?’ ಎಂದರು. ‘ಇದೂ ಚೆನ್ನಾಗಿದೆ’ ಎಂದೆ. ಒಮ್ಮೆಲೆ ಮಾತು ಮರೆತವರಂತೆ ಮೌನವಾದರು. ಸುಮ್ಮನೆ ಕೂತರು. ಮುನ್ನುಡಿ ಸ್ಕ್ರಿಪ್ಟ್ ಮಾಡುತ್ತಿರುವಾಗಲೂ ಹಾಗೆಯೇ. ಲೋಕಾಭಿರಾಮ ಮಾತಾಡುತ್ತಿರುವಾಗ ಎದುರಿದ್ದವರನ್ನೆಲ್ಲ ಹುಚ್ಚು ಹಿಡಿಸುವಂತೆ ನಗಿಸುವ ಈ ಬೊಳುವಾರು, ಕತೆ ಹೇಳುವಾಗ, ಅದನ್ನು ಅನುಭವಿಸುತ್ತಾ ಕಣ್ಣೀರು ಹಾಕಲು ಆರಂಭಿಸುತ್ತಾರೆ. ನನಗೊತ್ತಿತ್ತು ಇವರು ಯಾವುದೋ ಗಟ್ಟಿಯಾದುದನ್ನೇ ಕತೆಯಾಗಿ ಹೇಳುತ್ತಿದ್ದಾರೆಂದು. ನಾನು ಸುಮ್ಮನೆ ಕುಳಿತೆ.
ಅವರು ನಕ್ಕರು.
‘ವಿಭಜನೆಯ ದಿನಗಳಲ್ಲಿ ನಾವಿಬ್ಬರು ಒಂದೇ ಗಲ್ಲಿಯಲ್ಲಿ ಬದುಕುತ್ತಿದ್ದ ಗೆಳೆಯರಾಗಿರುತ್ತಿದ್ದರೆ, ನಾವೂ ಪರಸ್ಪರ ತಲವಾರು ಬೀಸುತ್ತಿದ್ದೆವು ಅಂತ ನಿಮಗೆ ಈಗ ಯೋಚನೆ ಮಾಡಲು ಸಾಧ್ಯವಾ?’ ಎಂದು ಪ್ರಶ್ನಿಸಿದಾಗ ನಾನು ಉದ್ದೇಶಪೂರ್ವಕವಾಗಿ, ‘ಗೊತ್ತಿಲ್ಲ’ ಎಂದೆ. ‘ನಿಮಗೆ ಹೆಣ್ಣು ಮಕ್ಕಳಿಲ್ಲ, ನಿಮ್ಮ ಹೆಣ್ಣು ಮಕ್ಕಳನ್ನು ನಿಮ್ಮೆದುರೇ ಕೆಡಿಸುತ್ತಿರುವಾಗ, ನೀವು ಭಜನೆ ಮಾಡುತ್ತಾ ಕುಳಿತುಕೊಳ್ಳುತ್ತಿದ್ದಿರಾ?’
‘ಅದೆಲ್ಲ ಹೋಗಲಿ ನೀವು ಕತೆ ಮುಂದುವರಿಸಿ’ ಎಂದೆ.
ಹೇಳಿದರು.
ನನ್ನ ಕಣ್ಣುಗಳೂ ಮಂಜಾಗತೊಡಗಿದ್ದವು.
ಸುಮಾರು ಅರ್ಧ ತಾಸಿನಲ್ಲಿ ಅವರು ಹೇಳಿದ್ದ ಕತೆ ಎಂತಹ ಕಲ್ಲು ಮನಸ್ಸುಗಳನ್ನೂ ಕರಗಿಸುವಂತಿತ್ತು. ವಿಭಜನೆಯ ಸಂದರ್ಭದಲ್ಲಿ ಚಾಂದ್ ಅಲೀಗೆ ಹದಿನೆಂಟು. ಅವನ ಸರ್ದಾರ್ಜಿ ಯಜಮಾನನ ಹೆಂಡತಿ ಮೊಹಿಂದರ್ ಭಾಬಿಗೆ ಒಂದಿಪ್ಪತ್ತು, ಆಕೆಯ ಸೋದರಿ ತನ್ವೀರಳಿಗೆ ಅವನದ್ದೇ ಪ್ರಾಯ. ಭಾರತ ಮತ್ತು ಪಾಕಿಸ್ತಾನದ ನಡುವೆ ಹೊತ್ತಿಕೊಂಡ ದಳ್ಳುರಿ. ಅಲ್ಲಿಯ ಹಿಂದೂಗಳು, ಇಲ್ಲಿಯ ಮುಸಲ್ಮಾನರ ತಲ್ಲಣಗಳು… ಹಿಂದೂ ಹೆಣ್ಣುಮಕ್ಕಳನ್ನು ಸುರಕ್ಷಿತವಾಗಿ ಪಾಕಿಸ್ತಾನದ ಗಡಿ ದಾಟಿಸಲು ಹೊರಟ ಚಾಂದ್ ಅಲೀ ಆಕಸ್ಮಿಕವಾಗಿ ಭಾರದ ಗಡಿಯೊಳಕ್ಕೆ ಬಂದದ್ದು, ಹಿಂತಿರುಗಿ ಹೋಗದ ಪರಿಸ್ಥಿತಿ ನಿರ್ಮಾಣವಾದದ್ದು…. ನಿರಾಶ್ರಿತ ಶಿಬಿರದಲ್ಲಿನ ದಿನಗಳು… ಶಿಬಿರದಿಂದ ಹೊರಟ ಮೊಹಿಂದರ್, ತನ್ವೀರ್ ಮತ್ತು ಚಾಂದ್ ಆಲೀ… ಬಂಧುಗಳನ್ನು ಹುಡುಕುತ್ತಾ ಬಂದು ತಲಪಿದ್ದು ದೆಹಲಿಯ ರೈಲು ನಿಲ್ದಾಣಕ್ಕೆ. ಅಲ್ಲಿ ನಡೆದ ವಿಚಿತ್ರ ಘಟನೆಗಳು… ಚಾಂದ್ ಆಲೀ ಅನಾಥನಾದದ್ದು ಅಲ್ಲಿವರೆಗೆ ಬಂದು ನಿಂತಿತು. ಅಷ್ಟರಲ್ಲಿ ನನ್ನ ಕಣ್ಣ ಮುಂದೆ ನನ್ನದೇ ಆದ ಚಾಂದ್ ಆಲೀ ರೂಪುಗೊಂಡಿದ್ದ. ಕತೆ ಹೇಳಿ ಮುಗಿಸಿದ್ದ ಬೊಳುವಾರು ಹೇಳಿದರು, ‘ಇದು ಕತೆ, ಇದನ್ನು ಸಿನಿಮಾ ಮಾಡಬೇಕಾದರೆ ನೀವು ಪಾಕಿಸ್ತಾನಕ್ಕೆ ಹೋಗಬೇಕು. ನಿಮಗೆ ವೀಸಾ ಯಾರು ಕೊಡುತ್ತಾರೆ ಸ್ವಾಮಿ?’ ನಾನು ತಮಾಷೆಯಾಗಿ, ‘ಇಲ್ಲೇ ಪಾಕಿಸ್ತಾನವನ್ನು ಕ್ರಿಯೇಟ್ ಮಾಡುತ್ತೇನೆ’ ಎಂದೆ. ‘ನಿಮಗೆ ಇದುವರೆಗೆ ಹಿಂದೂಸ್ತಾನವನ್ನೂ ಕ್ರಿಯೇಟ್ ಮಾಡಲು ಸಾಧ್ಯವಾಗಿಲ್ಲ, ನಿಮಗೆಲ್ಲೋ ಭ್ರಾಂತು’ ಎಂದು ನಕ್ಕರು ಬೊಳುವಾರು. ಅವರು ಅಪರೂಪಕ್ಕೆಂಬಂತೆ ಜೋರಾಗಿ ನಕ್ಕರು. ಎದುರಿಗಿದ್ದವರನ್ನೆಲ್ಲ ಮಾತು ಮಾತಿಗೂ ನಗಿಸುವ ಅವರು ಮಾತ್ರ ನಗುವುದೇ ಇಲ್ಲ. ‘ಮುನ್ನುಡಿ’ ಸಿನೆಮಾದ ದಿನಗಳಲ್ಲಿ ಅವರದೊಂದು ನಗುವ ಫೊಟೋ ಹಿಡಿಯುವಷ್ಟರಲ್ಲಿ ನಮ್ಮ ಕ್ಯಾಮರಾಮನ್ ಕಣ್ಣೀರು ಹಾಕಿದ್ದ.
‘ಏನಿಲ್ಲ, ನಿಮ್ಮ ಸ್ವಾತಂತ್ರ್ಯದ ಓಟವನ್ನು ನಾನು ಸಾಯುವದರೊಳಗೆ ಸಿನಿಮಾ ಮಾಡಿಯೇ ತೀರುತ್ತೇನೆ’ ಎಂದು ನಾನು ಕೂಡ ಅಷ್ಟೇ ತಮಾಷೆಯಾಗಿ ಹೇಳಿ, ಪರ್ಸಿನಿಂದ ಒಂದು ರೂಪಾಯಿಯ ನೋಟನ್ನು ತೆಗೆದು ಕೊಡುತ್ತಾ, ‘ಇದೇ ಅದರ ಅಡ್ವಾನ್ಸ್, ತೆಗೆದುಕೊಳ್ಳಿ’ ಎಂದೆ. ಅವರು ಮರು ಮಾತಾಡದೆ ಆ ನೋಟನ್ನು ಕಿಸೆಗಿರಿಸಿದರು. ಅದನ್ನು ಅವರು ಖರ್ಚು ಮಾಡುವಂತಿರಲಿಲ್ಲ. ಏಕೆಂದರೆ ಅಷ್ಟರಲ್ಲಾಗಲೇ ಒಂದು ರೂಪಾಯಿ ನೋಟಿನ ಚಲಾವಣೆ ನಿಂತಿತ್ತು!
ಇದೆಲ್ಲ ಆದ ನಂತರ ವರ್ಷಗಳಲ್ಲಿ ನಾನು ಮತ್ತೆ ‘ತುತ್ತೂರಿ’, ‘ವಿಮುಕ್ತಿ’ ಮತ್ತು ‘ಬೆಟ್ಟದಜೀವ’ ಸಿನಿಮಾಗಳನ್ನು ಮಾಡಿದೆ.

ಎರಡು ವರ್ಷದ ಹಿಂದೆ ಒಂದು ದಿನ ಬೊಳುವಾರು, ‘ನನ್ನ ಸ್ವಾತಂತ್ರ್ಯದ ಓಟ’ ಕಾದಂಬರಿಯಾಗುತ್ತಿದೆ ಎಂದರು.
‘ಒಳ್ಳೆಯದೇ ಆಯಿತು. ನನ್ನ ಸಿನಿಮಾಗೆ ಇನ್ನಷ್ಟು ಸರಕು ಸಿಕ್ಕಂತಾಯಿತು ಬೇಗ ಬೇಗ ಮಾಡಿ’ ಎಂದೆ.
ನನಗೆ ಗೊತ್ತಿದ್ದಂತೆ ಅವರ ಮನಸ್ಸಿನಲ್ಲಿದ್ದದ್ದು ಸುಮಾರು ಇನ್ನೂರು ಇನ್ನೂರೈವತ್ತು ಪುಟದ ಕಾದಂಬರಿ ಇರಬೇಕು. ‘ನನಗೆ ಬ್ಯಾಂಕಿನಿಂದ ಮುಂದಿನ ವರ್ಷ ಅಕ್ಟೋಬರಿಗೆ ಬಿಡುಗಡೆಯಾಗುತ್ತದೆ. ಇನ್ನು ಸುಮಾರು ಎರಡು ವರ್ಷ ಇದೆ. ನನ್ನ ಬೀಳ್ಕೊಡುಗೆ ಸಮಾರಂಭದಲ್ಲಿಯೇ ಕಾದಂಬರಿ ಬಿಡುಗಡೆ ಮಾಡುತ್ತೇನೆ’ ಎಂದರು. ಬೊಳುವಾರರ ಸಮಯ ಪಾಲನೆಯ ಹಠ ನನಗೆ ಗೊತ್ತಿದ್ದದ್ದೇ. ‘ಮುನ್ನುಡಿ’ ಸಿನೆಮಾ ಮಾಡುತ್ತಿದ್ದಾಗ ಸುಮಾರು ಒಂದು ತಿಂಗಳ ಕಾಲ ರಜ ಹಾಕಿ ನಮ್ಮ ಜೊತೆಗೆ ಇದ್ದ ಅವರನ್ನು, ಆ ಸಿನೆಮಾದ ಕಲಾವಿದರೆಲ್ಲ ನೆನಪಿಟ್ಟುಕೊಂಡಿರುವುದು ಅವರ ಅದೇ ಗುಣಕ್ಕೆ. ಹಿರಿಯ ನಟ ನಟಿಯರಿಗೂ ಇದರಲ್ಲಿ ಯಾವುದೇ ರಿಯಾಯಿತಿ ಇರಲಿಲ್ಲ. ಮುಲಾಜಿಲ್ಲದೆ ನಿದ್ರೆಯಿಂದ ಎಬ್ಬಿಸಿಬಿಡುತ್ತಿದ್ದರು. ಮರುದಿನದ ಶೂಟಿಂಗಿಗೆ ಬೇಕು ಎಂದಾಗ ಒಂದೇ ರಾತ್ರಿಯಲ್ಲಿ, ಚಿತ್ರಕ್ಕೆ ನಾಲ್ಕು ಅದ್ಭುತವಾದ ಹಾಡುಗಳನ್ನು ಬರೆದು ಜೈಸಿಕೊಂಡ ಭೂಪ.
‘ನಾನೊಂದು ಪಥಪರಿವೀಕ್ಷಕರ ಪಟ್ಟಿ ಮಾಡುತ್ತಿದ್ದೇನೆ. ವಾರಕ್ಕೆ ಅಷ್ಟೋ ಇಷ್ಟೋ ಬರೆದು ಕೊಡುವುದನ್ನು 48 ಗಂಟೆಯೊಳಗೆ ಓದಿ ಅಭಿಪ್ರಾಯ ಹೇಳಬೇಕು. ನಿಮ್ಮನ್ನು ಪಟ್ಟಿಯಲ್ಲಿ ಸೇರಿಸಿಕೊಂಡಿದ್ದೇನೆ’ ಎಂದರು. ಬೇಡವೆನ್ನುವ ಆಯ್ಕೆಯನ್ನೂ ನನಗೆ ಉಳಿಸಿರಲಿಲ್ಲ.
ಮೊದಲಿಗೆ ಸುಮಾರು ಐವತ್ತು ಪುಟ ಕಳುಹಿಸಿದರು. ನಾನು ಓದಿದೆ. ಕುತೂಹಲವಿತ್ತು. ಫೋನಿನಲ್ಲೇ ಚರ್ಚೆ ಮಾಡಿದೆವು. ಮುಂದೆ ಸುಮಾರು ಎರಡು ವರ್ಷಗಳ ಕಾಲ ಅವರು ಕಳುಹಿಸುವುದು, ನಾನು ಓದುವುದು. ಫೋನು ಮಾಡುವುದು ನಡೆದೇ ಇತ್ತು. ಹೀಗೇ ನಡೆದುಕೊಂಡು ಬಂದು ಸಾವಿರ ದಾಟಿತು! ಅವರ ‘ಸ್ವಾತಂತ್ರ್ಯದ ಓಟ’ದ ಪ್ರತಿ ಪುಟಗಳಲ್ಲೂ ಕುತೂಹಲವಿತ್ತು. ಲೇಖಕನ ಪ್ರವೇಶವಿಲ್ಲದ ಘಟನೆಗಳ ಸಾಲು ಸಾಲೇ ಇದ್ದವು. ಮನುಷ್ಯನ ಒಳ್ಳೆಯತನವನ್ನು ಓದುವಾಗ ಅಲ್ಲಲ್ಲಿ ಕಣ್ಣು ನೀರಾಗುತ್ತಿತ್ತು. ಒಳ್ಳೆಯವರನ್ನು ಗಲಿಬಿಲಿಗೊಳಿಸುವ ಘಟನೆಗಳು ಗಾಬರಿ ಹುಟ್ಟಿಸುವಂತಿತ್ತು. ಬರಹದಲ್ಲಿ ತಮಾಷೆಯಿತ್ತು, ಸಿಟ್ಟು ಇತ್ತು, ಅವೆಲ್ಲವುಗಳ ನಡುವೆ ಅದ್ಭುತವಾದ ಮನುಷ್ಯರು ಇದ್ದರು. ಅಚ್ಚರಿಯೆಂದರೆ ಸಾವಿರ ಪುಟಗಳ ಕಾಂದಂಬರಿಯಲ್ಲಿ ಹುಡುಕಿದರೂ ಒಂದು ಕೆಟ್ಟ ಹೆಣ್ಣು ಇರಲಿಲ್ಲ! ಇಡೀ ದೇಶದ ಎಲ್ಲ ಗ್ರಾಮಗಳೂ ಅವರ ಕನಸಿನ ಮುತ್ತುಪ್ಪಾಡಿಯಂತೆ ಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಅನ್ನಿಸುತ್ತಿತ್ತು. ನಾನು ಇದನ್ನು ಸಿನಿಮಾ ಮಾಡಬೇಕು ಎಂದರೆ ನೂರು ಪುಟಕ್ಕೆ ಒಂದರಂತೆ ಸುಮಾರು ಹತ್ತು ಸಿನಿಮಾ ಮಾಡಬಹುದು. ಅಷ್ಟೊಂದು ವಿಸ್ತಾರ, ಅಷ್ಟೊಂದು ವಿಚಾರ, ಮುನ್ನೂರರಷ್ಟು ಪಾತ್ರಗಳು. ಇದನ್ನು ಈಗ ಸಿನಿಮಾ ಮಾಡಬೇಕಾದರೆ, ನಾನು ಎಷ್ಟು ರೀಲು ಖರ್ಚು ಮಾಡಬೇಕು, ಎಷ್ಟು ಹಣ ಸುರಿಯಬೇಕು, ಎಷ್ಟು ಪಾತ್ರ ಸೃಷ್ಟಿಸಬೇಕು!
ಇದೆಲ್ಲ ಸಾಧ್ಯವೇ? ‘ಸ್ವಾತಂತ್ರ್ಯದ ಓಟ’ ಸಿನಿಮಾ ಆಗಬಲ್ಲುದೆ? ಒಳ್ಳೆಯ ಸಿನೆಮಾದ ಎಲ್ಲ ಸರಕುಗಳೂ ಇದರಲ್ಲಿವೆ. ಪ್ರೀತಿಯಿದೆ, ಹಾಸ್ಯವಿದೆ, ಕ್ರೌರ್ಯವಿದೆ, ಗಂಭೀರ ಚರ್ಚೆಗಳಿವೆ, ಮನಕಲಕುವ ಸಂಭಾಷಣೆಗಳಿವೆ. ಕಣ್ಣೀರಿಳಿಸುವ ಘಟನೆಗಳಿವೆ. ಗುಂಡು ಹಾರಾಟವಿದೆ. ಹೊಡೆದಾಟಗಳಿವೆ.
ಒಂದೇ ಒಂದು ಕೊರತೆ; ಕಾದಂಬರಿಯಲ್ಲಿ ಸ್ಟ್ರಾಂಗ್ ಆದ ಒಬ್ಬನೇ ಒಬ್ಬ ವಿಲನ್ ಇಲ್ಲದಿರುವುದು!
ಆದರೆ ಒಂದಂತೂ ನಿಜ. ಬೊಳುವಾರರ ಮಹಾ ಕಾದಂಬರಿ ಇದು ನನ್ನ ಕಣ್ಣ ಮುಂದೆ ಒಂದು ಬದುಕನ್ನು ತೆರೆದಿಟ್ಟಿದೆ. ನನ್ನ ಅನುಭವವನ್ನು ವಿಸ್ತಾರಗೊಳಿಸಿದೆ. ಇದು ನಮ್ಮ ರಾಮಾಯಣದ ವಿಸ್ತಾರವನ್ನೂ, ಮಹಾಭಾರತದ ಸಂಕೀರ್ಣತೆಯನ್ನೂ ಹೊಂದಿದೆ. ಇದರ ಓದೇ ಒಂದು ಖುಷಿ ಕೊಡುತ್ತದೆ. ಮಾರ್ಚ್ ಹದಿನೆಂಟಕ್ಕೆ ಈ ಕಾದಂಬರಿಯನ್ನು ಸರೋದ್ ದಿಗ್ಗಜ ಪಂಡಿತ್ ರಾಜೀವ್ ತಾರಾನಾಥರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 10 ಗಂಟೆಗೆ ಬಿಡುಗಡೆ ಮಾಡುತ್ತಾರೆ.
ಈ ಕಾದಂಬರಿಯಲ್ಲಿ ನನಗೆ ಇಷ್ಟವಾದ ಎರಡು ಪುಟ್ಟ ಪ್ರಸಂಗಳು ನಿಮಗಾಗಿ, ಈ ಪತ್ರಿಕೆಯೊಂದಿಗೆ, ಉಚಿತವಾಗಿ.


ಪ್ರಸಂಗ-೧

“ಬಿತ್ತಾ?”
“ಇಲ್ಲ”
“ಬಿತ್ತಾ?”
“ಇಲ್ಲ”
“ಈಗ ಬಿತ್ತಾ?”
“ಇಲ್ಲ”
“ಈಗಾ?”
“ಇಲ್ಲ”
“ಏನೂ!? ಈಗ್ಲೂ ಬೀಳ್ಳಿಲ್ವಾ? ”
“ಇಲ್ಲಾ…, ಇಲ್ಲಾ…, ಇಲ್ಲಾ.”
“ಛೇ!.. ಈಗಾ?”
“ಹಾಂ.., ಬಿತ್ತೂ!, ಇಲ್ಲ.. ಇಲ್ಲ.., ಹೋಯ್ತು. ಸ್ವಲ್ಪ ಎಡಕ್ಕೆ ತಿರ್ಗಿಸು ನೋಡ್ವಾ..”
“ಇದು ಕೊನೇದ್ದು, ಇನ್ನು ನನ್ನಿಂದ ಆಗ್ಲಿಕ್ಕಿಲ್ಲ; ಈಗ ಬಿತ್ತಾ?”
“ಇಲ್ಲ”
“ಈಗಾ?”
“ಹಾಂ.., ಬಿತ್ತು! ಸಾಕ್, ಸಾಕ್, ಇನ್ನು ತಿರ್ಗಿಸಬೇಡ. ಹಾಗೇ ಇರ್ಲಿ, ನೀನು ಇಳ್ದು ಬಾ.”
ಮನೆಯ ಬಲಭಾಗದ ಎತ್ತರದ ಮಣ್ಣಿನ ದಿನ್ನೆಯ ಮೇಲೇರಿದ್ದ ಮಾಂಕು ಪೂಜಾರಿಯ ಮೊಮ್ಮಗಳು ಗುಲಾಬಿಯ ಕಣ್ಣುಗಳಲ್ಲಿ ಗೆಲುವಿನ ನಗು ಅರಳಿತು. ಈ ವರ್ಷ ಅವಳು ಐದನೇ ಕ್ಲಾಸ್ ಸ್ಟೂಡೆಂಟ್. ಹೆಚ್ಚು ಕಮ್ಮಿ ಜಾರುತ್ತಲೇ ದಿನ್ನೆಯಿಳಿದು ಅಂಗಳವನ್ನು ಹಾದು ‘ಆಯಿಷಾ ಮಂಜಿಲ್’ ಜಗಲಿಯೇರಿದವಳು ಬಾಗಿಲ ಬಳಿಯೇ ಕುಳಿತುಕೊಂಡಿದ್ದ ಸಣ್ಣತಮ್ಮ ಸಂಜೀವನನ್ನು ಪಕ್ಕಕ್ಕೆ ಸರಿಸಿ, ಅಲ್ಲಿಯೇ ಕುಳಿತುಕೊಂಡಳು. ಆ ಹೊತ್ತಿಗೆ ಸರಿಯಾಗಿ, ತೋಟದಲ್ಲಿ ಎಂದಿನ ಕೆಲಸ ಮುಗಿಸಿಕೊಂಡು ಬೇಲಿ ಸರಿಸಿ ಅಂಗಳಕ್ಕೆ ಕಾಲಿರಿಸಿದ ಚಾಂದಜ್ಜ, ಜಗಲಿಯೇರಿ ಹೊಸ್ತಿಲಿಗಡ್ಡವಾಗಿ ಕುಳಿತಿದ್ದ ಗುಲಾಬಿಯ ರಟ್ಟೆ ಹಿಡಿದು ಬದಿಗೆ ಸರಿಸಿ ಒಳಗೆ ಬಂದವರು, ಬೇಸರದಿಂದ, “ಓಹ್! ಆಗ್ಲೇ ಶುರುವಾಗಿಯೇಬಿಟ್ಟಿತಾ?” ಎಂದು ಗಡಬಡಿಸಿದ್ದರು.
“ಶುರು ಎಂಥದ್ದು?, ಮುಗೀಲಿಕ್ಕೆ ಬಂತು.” ಐಸಮ್ಮ ತಾನು ಕುಳಿತ ಭಂಗಿಯನ್ನು ಎಳ್ಳಷ್ಟೂ ಬದಲಿಸದೆ ಉತ್ತರಿಸಿದರು.
“ಶುರುವಾಗ್ವಾಗ ನನ್ನನ್ನು ಕರೀಬೇಕು ಅಂತ ಎಷ್ಟು ಸರ್ತಿ ಹೇಳ್ಳಿಲ್ಲ ನಿನ್ಗೇ?” ಚಾಂದಜ್ಜನವರಿಗೆ ಎಲ್ಲಿಲ್ಲದ ಕೋಪ ಬಂದಿತ್ತು.
“ನೀವು ಹೇಳ್ಳಿಲ್ಲ ಅಂತ ನಾನು ಯಾವಾಗ ಹೇಳಿದೇ? ನಮ್ಮ ಮನೆಯಲ್ಲಿ ಶುರುವಾದದ್ದೇ ಈಗ; ಅರ್ಧ ಮುಗ್ದ ಮೇಲೆ. ಆ ಕಂಭದ ಮೇಲೆ ಇದ್ದ ಅಡ್ಡಪಟ್ಟಿ ಮತ್ತೆ ತಿರುಗಿತ್ತು. ಅದನ್ನು ಸರಿಮಾಡುವಾಗ ಅರ್ಧ ಮುಗ್ದೇ ಹೋಗಿತ್ತು” ಎಂದು ತಮ್ಮ ನಿರಾಸೆಯನ್ನು ಹೊರಹಾಕಿದ್ದರು ಐಸಮ್ಮ.
ಹಜಾರದ ಎಡ ಭಾಗದಲ್ಲಿದ್ದ ತನ್ನ ನೆಚ್ಚಿನ ಆರಾಮ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾ, “ನಿನ್ಗೆ ನಾನು ಮಗುವಿಗೆ ಹೇಳಿದ ಹಾಗೆ ಹೇಳಿದ್ದೇನಾ ಇಲ್ವಾ? ಮೀನು ಕೊಯ್ದು ಆರಿಸುವ ಕೆಲ್ಸವನ್ನು ಆ ಕಂಭದ ಹತ್ರ ಮಾಡ್ಬೇಡಾ ಅಂತಾ? ಕಾಗೆಗಳು ಆ ಅಡ್ಡಕೋಲಿನ ಮೇಲೆ ಕೂತ್ರೆ ಅದು ತಿರ್ಗದೆ ಇರ್ತದಾ?” ತಪ್ಪೆಲ್ಲ ಹೆಂಡತಿಯದ್ದೇ ಎನ್ನುವಂತೆ ಚಾಂದಜ್ಜ ಹೇಳಿದ್ದರು.
“ಹೌದೌದು, ತಪ್ಪೆಲ್ಲ ನನ್ನದೇ. ನಿಮ್ಗೆ ಎಷ್ಟು ಸರ್ತಿ ದಮ್ಮಯ್ಯ ಹಾಕ್ಲಿಲ್ಲಾ? ಆ ಕಂಭವನ್ನು ಅಲ್ಲಿಂದ ತೆಗ್ದು, ಅಂಗಳದ ಎಡ ಬದಿಯಲ್ಲಿ ಹಾಕ್ಸಿ ಅಂತಾ? ನೀವು ಹೆಂಡ್ತಿ ಮಾತಿಗೆ ಯಾವಾಗ್ಲಾದ್ರೂ ಬೆಲೆ ಕೊಟ್ಟದ್ದು ಉಂಟಾ?” ಸಿಡುಕಿದ್ದರು ಐಸಮ್ಮ. ಹೆಂಡತಿಯ ಮುಖವನ್ನು ನೇರವಾಗಿ ದಿಟ್ಟಿಸುತ್ತಾ, “ಹೆಂಡ್ತಿ ಮಾತಿಗೆ ಬೆಲೆ ಕೊಟ್ರೆ ಏನಾಗ್ತದೆ ಅಂತ ನೀನೇ ನೋಡಿದಿಯಲ್ವಾ? ಬಂಗಾರದಂತ ಮಗ ಮತ್ತು ಸೊಸೆ ಕಾಡಿಗೆ ಹೋಗುವ ಹಾಗೆ ಆಗ್ಲಿಲ್ವಾ?” ವ್ಯಂಗ್ಯವಾಡಿದ್ದರು ಚಾಂದಜ್ಜ.
ಐಸಮ್ಮ ಸುಲಭದಲ್ಲಿ ಸೋಲುವವರಲ್ಲ; ಎಚ್ಚರಿಸುವ ಸ್ವರದಲ್ಲೇ ಹೇಳಿದ್ದರು, “ಎರಡು ಮೂರು ಕಟ್ಟಿಕೊಳ್ಳುವವರಿಗೆ ಅಲ್ಲಾಹು ಕೊಡುವ ಶಿಕ್ಷೆ ಅದು.”

ಪ್ರಸಂಗ-೨

ಗಡಬಡಿಸಿ ಕಿಟಿಕಿಯಿಂದ ಹೊರಗೆ ದಿಟ್ಟಿಸಿದವಳಿಗೆ ಗಾಜಿನ ಆಚೆಗೆ ಏನೂ ಕಾಣಿಸಿದ್ದಿರಲಿಲ್ಲ. ಅವಸರದಿಂದ ಹೊರಗೆ ಬಂದು ಕಣ್ಣು ಹಾಯಿಸಿದಾಗ ‘ಎಲ್ ಕೆಮಿನೋ ರಿಯಲ್’ ಮೇಲೆ ಮುಂಜಾನೆಯ ಮಂಜು ಹತ್ತಿಯ ರಾಶಿಯಂತೆ ಬಿದ್ದುಕೊಂಡದ್ದು ಕಾಣಿಸಿತು. ಕಣ್ಣೆದುರಿನ ಡ್ರೈವ್ ಏರಿಯಾದಲ್ಲಿ ಹಾರುವ ತಟ್ಟೆ ಬಂದು ಇಳಿದಿದ್ದರೂ ಕಾಣಿಸದು; ಹಾಗಿರುವಾಗ ಹಾಲು ಬಣ್ಣದ ‘ಟೊಯೊಟೋ ಕರೋಲಾ’ ಕಾಣಿಸುವುದು ಹೇಗೇ? ಅತ್ತಿತ್ತ ಕಣ್ಣು ಹಾಯಿಸುತ್ತಿದ್ದವಳಿಗೆ, ಮಂಜಿನ ಮರೆಯಲ್ಲಿ ನಿಂತಿರುವ ಅವನು ತನ್ನನ್ನು ಗುಟ್ಟಾಗಿ ಗಮನಿಸುತ್ತಿರಬಹುದೇ ಎಂಬ ಯೋಚನೆ ಚಿಗುರಿದಾಗ ಮೈಯೆಲ್ಲ ಕಚಗುಳಿ. ಈ ಸರ್ದಾರ್ಜಿಗಳಿಗೆ ಮಾತ್ರ ಯಾಕೆ ಅಲ್ಲಾಹು ಅಂತಹ ‘ಐಲ್ಯಾಷಸ್’ ಕೊಟ್ಟಿರ್ತಾನೇ? ಅವನ ಐಬ್ರೋಸ್ ಆಗಷ್ಟೇ ಪಾರ್ಲರ್‌ನಿಂದ ಸೆಟ್ ಮಾಡಿಕೊಂಡು ಬಂದ ಹುಡುಗಿಯ ಹುಬ್ಬಿನ ಹಾಗೆ; ಕ್ಯೂಟ್. ಆವತ್ತು ಶುಕ್ರವಾರ -ಸರಿಯಾಗಿ ನೆನಪು ಯಾಕೆಂದರೆ, ಅವತ್ತು ಡ್ಯಾಡಿಯ ಷಾಪ್ ಸಂಜೆಯವರೆಗೆ ಓಪನ್ ಇರುವುದಿಲ್ಲ- ಮೊದಲ ‘ಕಾಮನ್ ಕ್ಲಾಸ್’ನಲ್ಲಿ ಮೊತ್ತ ಮೊದಲ ಸಲ ನೋಡಿದಾಗ ಅವನ ಐಲ್ಯಾಷನ್ನು ಮತ್ತೆ ಮತ್ತೆ ನೋಡಬೇಕು ಅನ್ನಿಸಿತ್ತು.
ಅವಳು ಸೇರಿದ್ದದ್ದು ಮೂರು ವರ್ಷದ ‘ಲಾ’ ಕೋರ್ಸಿಗೆ. ಹಾಗೆಂದು ಮಾನವ ಹಕ್ಕುಗಳ ಅಂತರ ರಾಷ್ಟ್ರೀಯ ಒಪ್ಪಂದ, ಒಡಂಬಡಿಕೆ ಮತ್ತು ಅನುಷ್ಠಾನಗಳ ಬಗ್ಗೆ ವಿಶೇಷ ಒತ್ತು ಕೊಡುವ, ‘ಅಂತರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಯನ ಕಾನೂನು’ ವಿಷಯವನ್ನು ಅವಳು ಇಷ್ಟ ಪಟ್ಟು ಆರಿಸಿದ್ದೇನಲ್ಲ. ‘ಸ್ಯಾನ್ ಫ್ರಾನ್ಸಿಸ್ಕೋ’ ಮತ್ತು ‘ಸ್ಯಾನ್ ಜೋಸ್’ ನಡುವಿನ ಸಿಲಿಕಾನ್ ಸಿಟಿಯಲ್ಲಿರುವ ಪ್ರಖ್ಯಾತ ‘ಸ್ಟ್ಯಾನ್‌ಫೋರ್ಡ್’ ಯುನಿವರ್ಸಿಟಿಯಲ್ಲಿ, ‘ಪೌಷ್ಟಿಕಾಂಶಗಳು ನಷ್ಟವಾಗದ ಹಾಗೆ ಆಡುಗೆ ಮಾಡುವುದು ಹೇಗೇ’ ಎಂಬಿತ್ಯಾದಿ ಯಾವುದಾದರೊಂದು ಡಿಗ್ರಿ ಕೋರ್ಸಿಗೆ ಸೇರಿ, ಮೂರು ವರ್ಷ ಮಜಾ ಉಡಾಯಿಸಬೇಕು ಅಂತ ಪ್ರಯತ್ನಿಸಿದ್ದವಳಿಗೆ ಸುಲಭದಲ್ಲಿ ಸಿಕ್ಕಿದ ಕೋರ್ಸ್ ಇದು. ಮೊದಲ ವರ್ಷದಲ್ಲಿ ಬೇರೆ ವಿಷಯಗಳಲ್ಲಿ ಡಿಗ್ರಿ ಮಾಡುವವರೇನಾದರೂ ‘ಆಪ್ಷನಲ್ ಸಬ್ಜೆಕ್ಟ್’ ಆಗಿ ‘ಇಂಟರ್ ನ್ಯಾಷನಲ್ ಹ್ಯೂಮನ್ ರೈಟ್ಸ್’ ತೆಗೆದುಕೊಂಡಿದ್ದರೆ, ಅವರು ಕೂಡ ಲಾ ಸ್ಟೂಡೆಂಟ್‌ಗಳ ಜೊತೆಯಲ್ಲೇ ಕಾಮನ್ ಕ್ಲಾಸ್ ಎಟೆಂಡ್ ಮಾಡಬೇಕು. ಅವನ ‘ಐಡಿ’ ಕಾರ್ಡ್ ಹೇಳುವಂತೆ ತನ್ನ ಮಾಸ್ಟರ್ಸ್’ಗೆ ‘ರಿಲಿಜಿಯಸ್ ಸ್ಟಡೀಸ್’ ತೆಗೆದುಕೊಂಡಿದ್ದಾನೆ. ಇಂಟರ್ ನ್ಯಾಷನಲ್ ಹ್ಯೂಮನ್ ರೈಟ್ಸ್ ಅವನಿಗೆ ಅಪ್ಷನಲ್ ಸಬ್ಜೆಕ್ಟ್.
ಈ ಡೂಡ್ ಇಂಡಿಯನ್ ಫ್ಯಾಮಿಲಿ ಬಾಯ್; ಕನಸರ್ವೇಟಿವ್ ಇರಬಹುದಾ?
ಛೆ!, ತಾನು ಹೀಗೆಲ್ಲಾ ಯೋಚಿಸುತ್ತಿರುವುದು ಡ್ಯಾಡಿಗೆ ಗೊತ್ತಾಗಿಬಿಟ್ಟರೇ?
ಡ್ಯಾಡಿಯದ್ದು ಸ್ಪಷ್ಟ ಅಭಿಪ್ರಾಯ; ತಮ್ಮ ಕುತ್ತಿಗೆಯೆತ್ತರಕ್ಕೆ ಬೆಳೆದಿದ್ದ ಹೈಸ್ಕೂಲ್ ಮುಗಿಸಿದ ಮಗಳನ್ನು ಎದುರಿಗೆ ಕುಳ್ಳಿರಿಸಿಕೊಂಡೇ ಮಮ್ಮಿಯ ಹತ್ತಿರ ಹೇಳಿದ್ದರು, ‘ಇವ್ಳಿಗೆ ಯಾವುದರಲ್ಲಿ ಇಂಟರೆಸ್ಟ್ ಉಂಟೋ ಆ ಕೋರ್ಸಿಗೆ ಸೇರಲಿ. ಡಿಗ್ರಿ ಅಂತ ಒಂದು ಇದ್ರೆ ಸಾಕು. ಮದುವೆಗೆ ಇಂಡಿಯನ್ ಹುಡುಗನನ್ನೇ ಹುಡುಕುವುದು. ಅನ್ವರ್‌ನಿಗೆ ಹೇಳಿಟ್ಟಿದ್ದೇನೆ. ಭಟ್ಕಳದ ಫ್ಯಾಮಿಲಿಯಲ್ಲೇ ನೋಡು ಅಂತ. ಸೌದಿ, ದುಬೈ, ಬೆಹರಿನ್ ಯಾವುದೂ ಆದೀತು. ಬೆಂಗ್ಳೂರಲ್ಲೇ ಇದ್ರೆ ಮತ್ತೂ ಒಳ್ಳೆಯದೆ. ಇಲ್ಲಿ ಒಬ್ನಿಗೆ ಒಂದು ಹೆಂಡ್ತಿ ಅಂತ ಇರುವುದು ಮದುವೆ ಆದರೆ ಮಾತ್ರ. ಮದುವೆಗೆ ಮೊದ್ಲೇ ನಾಲ್ಕು ನಾಲ್ಕು ಗರ್ಲ್ ಫ್ರೆಂಡ್ಸ್ ಇರ್ತಾರೆ. ನನ್ಗೆ ಒಮ್ಮೊಮ್ಮೆ ಅನ್ನಿಸ್ತಾ ಉಂಟು, ಇಲ್ಲಿ ಇರುವುದನ್ನೆಲ್ಲ ಯಾರಿಗಾದ್ರೂ ಕೊಟ್ಟುಬಿಟ್ಟು ಊರಿಗೆ ಗಾಡಿ ಕಟ್ಟುವುದು ಒಳ್ಳೆಯದು ಅಂತ.’
ಶಬಾನಾ ಒಳಗೊಳಗೇ ನಕ್ಕಿದ್ದಳು ಆಗ. ಆದರೆ ಬಾಯಿ ಬಿಟ್ಟಿರಲಿಲ್ಲ.
ಹುಡುಗರು ಮಾತ್ರವಾ? ಬಾಯ್ ಫ್ರೆಂಡ್ ಇಲ್ಲದ ಹುಡುಗಿಯರಾದರೂ ಯಾರಿದ್ದಾರೆ? ತನ್ನಂತೆ ಬೆಳೆಯುತ್ತಿರುವ ಎಲ್ಲ ಹುಡುಗಿಯರಿಗೂ ಒಳಗೊಳಗೇ ಭಯ. ಗರ್ಲ್ ಫ್ರೆಂಡ್ ಇಲ್ಲದ ಹುಡುಗರೇ ಇಲ್ಲವೆಂದ ಮೇಲೆ, ತಮ್ಮನ್ನು ಮುಂದೆ ಮದುವೆಯಾಗುವವರು ಯಾರು? ಹಾಗಾಗಿ, ಆದಷ್ಟು ಬೇಗ -ಕ್ಲಾಸ್ ಮೇಟ್ ಸಾಂಡ್ರಾ ಹೇಳುವಂತೆ ಮೀಸೆ ಹುಟ್ಟುವ ಮೊದಲು- ಯಾರನ್ನಾದರೂ ‘ಸೆಟ್’ ಮಾಡಿಕೊಂಡು ಇಟ್ಟುಕೊಳ್ಳದಿದ್ದರೆ, ಮುಂದೆ ಸೆಟ್ಲ್ ಆಗುವುದು ಕನಸಿನಲ್ಲಿ ಮಾತ್ರ. ಫ್ರೆಷ್ ಆಗಿ ಉಳಿದಿರುವ ಹುಡುಗನನ್ನು ಹುಡುಕುತ್ತಾ ಹೋದರೆ ‘ನನ್’ ಆಗಬೇಕಾದೀತು.
‘ಸ್ಟಾರ್‌ಬಕ್ಸ್’ನಲ್ಲಿ ಕಾಫಿ ಹೀರುವಾಗ ನಾಲ್ಕು ಕಣ್ಣುಗಳು ಪರಸ್ಪರ ಕೂಡಿದ್ದು ಹೌದೋ ಅಲ್ಲವೋ ಎಂಬುದು ಇನ್ನೂ ಅನುಮಾನ. ಸಲ. ಆ ಡ್ಯೂಡ್ ನಾಚಿಕೆ ಸ್ವಭಾವದವನಿದ್ದಿರಬೇಕು; ಇಲ್ಲವಾದರೆ ತಾನು ಅಷ್ಟು ನೇರವಾಗಿ ದಿಟ್ಟಿಸಿ ನೋಡಿದಾಗಲೂ ‘ಹೈ’ ಅನ್ನುವಷ್ಟು ಮುಂದುವರಿದವನಲ್ಲ. ಹಾಗಾದರೆ ಇವನಿಗೆ ಗರ್ಲ್ ಫ್ರೆಂಡ್ ಯಾರೂ ಇರಲಿಕ್ಕಿಲ್ಲವೇ?
ಇದ್ದೇ ಇರುತ್ತಾಳೆ; ಎಷ್ಟು ಮಂದಿ ಎಂಬುದನ್ನಷ್ಟೆ ಲೆಕ್ಕ ಹಾಕಬೇಕು; ಹಾಗಿದ್ದಾನೆ ಅವನು.
ಅವನ ಕರೋಲಾವನ್ನು ಹುಡುಕಿದ್ದು ಅದೇ ಮೊದಲಲ್ಲ. ಈ ಹಿಂದೆಯೂ ಒಂದೆರಡು ಸಲ ಹುಡುಕಿದ್ದು ಇದೆ. ‘ಸ್ಟಾರ್‌ಬಕ್ಸ್’ನ ಎಡಗಡೆಯ ಪಾರ್ಕಿಂಗ್ ಲಾಟಿನಲ್ಲಿ ಕರೋಲಾ ನಿಂತಿದ್ದರೆ, ಅದರ ಬದಿಯಲ್ಲೇ ಶಬಾನಾ ಕಾರು ನಿಲ್ಲಿಸುತ್ತಿದ್ದದ್ದು. ಹಾಗೆಂದು ಅದಕ್ಕೆ ಯಾವುದೇ ಪ್ರತ್ಯೇಕ ಉದ್ದೇಶವಿದ್ದಿರಲಿಲ್ಲ; ಸುಮ್ಮನೆ ಒಂದು ಮಜಾ ಅಷ್ಟೇ.
ಎಂಟು ಗಂಟೆಗೆ ಕ್ಲಾಸು ಶುರುವಾಗುತ್ತದೆ. ‘ಸ್ಯಾನ್ ಹೊಸೇ’ಯಿಂದ ‘ಸ್ಟ್ಯಾನ್‌ಫೋರ್ಡ್ ಯುನಿವರ್ಸಿಟಿ’ಗೆ ಬಹಳವೆಂದರೆ ಮೂವತ್ತು ನಿಮಿಷಗಳ ದಾರಿ. ಅಬ್ಬ ಹೊಸದಾಗಿ ಕೊಡಿಸಿದ್ದ ಹಳದಿ ಬಣ್ಣದ -ಸೆಕೆಂಡ್ ಹ್ಯಾಂಡ್- ವೊಲ್ಸ್ ವ್ಯಾಗನ್ ಬೀಟಲ್. ಒಳಗೆ ಕೂತರೆ ಮುಂಜಾನೆಯ ಚಳಿ ಬಾಧಿಸುವುದಿಲ್ಲ ನಿಜ; ಆದರೆ, ಮನೆಯಿಂದ ಹತ್ತು ನಿಮಿಷದ ದಾರಿಯಲ್ಲಿ ಕಾಣಿಸುವ ‘ಸ್ಟಾರ್‌ಬಕ್ಸ್’ ನಲ್ಲಿ ‘ಸ್ಮಾಲ್ ಲಾಟೆ’ ಕಾಫಿ ಕುಡಿದರೆ ಮಾತ್ರ ಚಳಿ ಬಿಡುತ್ತದೆ ಎಂಬುದು ಹೊಸದಾಗಿ ಶುರುವಾಗಿದ್ದ ನಂಬಿಕೆ. ಲಾ-ಕಾಲೇಜಿಗೆ ಸೇರುವ ಮೊದಲು ಈ ಅಭ್ಯಾಸವಿದ್ದಿರಲಿಲ್ಲ; ಅಗ ಕಾರೂ ಇರಲಿಲ್ಲ. ಡ್ಯಾಡಿಯೊಟ್ಟಿಗೆ ಅಲ್ಲಿಗೆ ಹೋಗಿ ಒಮ್ಮೆಯೂ ‘ಸ್ಮಾಲ್ ಲಾಟೆ’ ಟಚ್ ಮಾಡಿದ್ದಿಲ್ಲ. ಡ್ಯಾಡಿ ಮನೆಯಿಂದ ಹೊರಗೆ ಏನೂ ತಿನ್ನುವುದಿಲ್ಲ. ನೀರು ಖರೀದಿಸುವಾಗಲೂ ಅದು ‘ಹಲಾಲ್’ ಇರುತ್ತದೋ ಇಲ್ಲವೋ ಎಂದು ಅನುಮಾನ ಪಡುವಷ್ಟು ಕನ್ಸರ್ವೇಟಿವ್.
ಅವನಾಗಲೇ ಜರ್ನಲಿಸಂ ಡಿಗ್ರಿ ಗಿಟ್ಟಿಸಿಕೊಂಡಿದ್ದ. ಈಗ ಮಾಡುತ್ತಿರುವುದು ‘ಮಾಸ್ಟರ್ಸ್ ಇನ್ ರಿಲಿಜಿಯಸ್ ಸ್ಟಡೀಸ್’. ಇಷ್ಟಪಟ್ಟು ಆರಿಸಿಕೊಂಡ ಒಂದು ವರ್ಷದ ಕೋರ್ಸ್ ಅಂತೆ ಅದು. ಕ್ರಿಸ್ಮಸ್ ಬಾಲ್‌ಗೆ ಬಂದವನನ್ನು ಪೋರ್ಟಿಕೋದಲ್ಲೇ ತಡೆದು ಮಾತನಾಡಿಸಿದಾಗ ನಾಚುತ್ತಾ ಅವನು ಒಪ್ಪಿಕೊಂಡ ಸತ್ಯ ಅದು. ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ ಐದನೆಯ ಪ್ರಶ್ನೆ ಕೇಳುತ್ತಿದ್ದಂತೆ, “ಎಸ್‌ಕ್ಯೂಸ್ ಮಿ” ಎಂದು ತಪ್ಪಿಸಿಕೊಂಡವನ ಬಗ್ಗೆ ಶಬಾನಾಳಿಗೆ ಕೋಪ ಬರಲಿಲ್ಲ; ಗುಪ್ತಚಾರಿಣಿಯರ ಮೂಲಕ -ಸಾಂಡ್ರಾ ಆ ತಂಡಕ್ಕೆ ಲೀಡರು- ಸಂಗ್ರಹಿಸಿದ ಮಾಹಿತಿಯಂತೆ ಅವನಿಗೆ ಇನ್ನೂ ಗರ್ಲ್ ಫ್ರೆಂಡ್ ಅಂತ ಯಾರೂ ಇಲ್ಲ. ನಂಬಲು ಕಷ್ಟವಾದ ಆದರೆ ಇಷ್ಟವಾದ ಮಾಹಿತಿ ಅದು. ಕ್ರಿಸ್ಮಸ್ ಬಾಲ್‌ಗೆ ಬಂದಿದ್ದವನನ್ನು ಡ್ಯಾನ್ಸಿಗೆ ಕರೆದು ಅವನಿಂದ ‘ಸಾರಿ, ಐ ಡೋಂಟ್ ಡ್ಯಾನ್ಸ್’ ಎಂದು ಹೇಳಿಸುವ ಮೂಲಕ ಸಾಂಡ್ರಾ ತನ್ನ ಗುಪ್ತಚರ ಮಾಹಿತಿಗೆ ಎವಿಡೆನ್ಸ್ ಕೂಡಾ ಕೊಟ್ಟುಬಿಟ್ಟಾಗ, ಶಬಾನಾ ತನ್ನ ಹೊಸವರ್ಷದ ರೆಸಲ್ಯೂಷನ್ ಯಾವುದು ಎಂಬುದನ್ನು ನಿರ್ಧರಿಸಿಬಿಟ್ಟಿದ್ದಳು. ಹೊಸ ವರ್ಷದ ಮೊದಲ ಶುಕ್ರವಾರವೇ ಅದನ್ನು ಕಾರ್ಯರೂಪಕ್ಕೂ ಇಳಿಸಿದ್ದಳು.
‘ಸ್ಟಾರ್‌ಬಕ್ಸ್’ನ ಗಾಜಿನ ಬಾಗಿಲು ತೆಗೆದು ಹೊರಬರುತ್ತಿದ್ದಂತೆ ತಡೆದು ನಿಲ್ಲಿಸಿ, “ನಾವು ಯಾಕೆ ಕಾರ್ ಪೂಲ್ ಮಾಡಿ ಗ್ಯಾಸ್ ಸೇವ್ ಮಾಡಬಾರದೂ?” ಎಂದು ಪ್ರಶ್ನಿಸಿದ್ದ ಪಂಜಾಬಿ ಧಿರಸಿನ ಚಂದದ ಹುಡುಗಿಯ ದೊಡ್ಡ ದೊಡ್ಡ ಕಣ್ಣುಗಳನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಾ ನಿಂತುಬಿಟ್ಟಿದ್ದ ಜೆಸ್ವಿಂದರ್. ಯಾವಾಗಲೂ ಟೈಟ್ ಫಿಟ್ಟಿಂಗ್ ಜೀನ್ಸ್ ಮತ್ತು ಟಾಪ್‌ನಲ್ಲಿ ಕಣ್ಣು ಕೋರೈಸುತ್ತಿದ್ದವಳು, ಆವತ್ತು ಫಿರೋಜ್ ಕಲರಿನ ಕಮೀಜ್, ಅದಕ್ಕೊಪ್ಪುವ ತೆಳು ಗುಲಾಬಿ ಕಲರಿನ ಸೆಲ್ವಾರ್, ಅರೆವಾಸಿ ಕಪ್ಪು ತಲೆಗೂದಲನ್ನು ಮುಚ್ಚಿಕೊಂಡಿದ್ದ ಗುಲಾಬಿ ಕಲರಿನ ದುಪ್ಪಟ್ಟಾದ ಮರೆಯಲ್ಲಿ ಬೆಳದಿಂಗಳು ಹರಡುತ್ತಿದ್ದ ಶಬಾನಾಳ ದೊಡ್ಡ ದೊಡ್ಡ ಕಣ್ಣುಗಳ ಕರೆಯನ್ನು ನಿರಾಕರಿಸುವಂತೆಯೇ ಇರಲಿಲ್ಲ.
ಆ ದಿನವೇ ಜೆಸ್ವಿಂದರ್ ಸಿಂಗ್ ಹೇಳಿದ್ದು, “ಕಾಲ್ ಮಿ ಜೆಸ್ಸಿ.”
ಆವತ್ತು ಇಬ್ಬರೂ ಜೊತೆಯಾಗಿ ಮತ್ತೊಂದು ಸ್ಮಾಲ್ ಲಾಟೆ ಕಾಫಿ ಸಿಪ್ ಮಾಡಿದ್ದರು.
ಅವರಿಬ್ಬರು ಮದುವೆಯಾಗಿದ್ದದ್ದು ಆರು ವರ್ಷಗಳ ಆನಂತರ.

(ಇಂದಿನ-ಮಾರ್ಚ್ ೪, ೨೦೧೨-ಉದಯವಾಣಿಯಲ್ಲಿ ಈ ಲೇಖನ ಪ್ರಕಟವಾಗಿದೆ)

ಕಾಶಿ, ಸಾಯಲು ಹೊರಟವರ ಕೊನೇತಾಣ!

ಕಾಶಿಯ ಮಣಿಕರ್ಣಿಕಾ ಘಾಟ್ (ಮುಖ್ಯ ಸ್ಮಶಾನ)


ಕಾಶಿ ಎಂದಾಕ್ಷಣ ಫಕ್ಕನೆ ನೆನಪಿಗೆ ಬರುವುದು:

ಕಾಶಿ ವಿಶ್ವನಾಥ,
ಕಲುಷಿತವಾದ ಗಂಗೆ,
ಜನನಿಬಿಡ ಗಲ್ಲಿಗಳು,
ಸಾಧು ಸನ್ಯಾಸಿಗಳು,
ಬೆನ್ನು ಬಿದ್ದು ಕಾಸು ಕೀಳುವ ಪಂಡಾಗಳು,

ಮತ್ತು
ಅಗಾಧ ಭಕ್ತ ಸಮೂಹ..

ಇಂಥ ಕಾಶಿಗೆ ಬರೀ ಪುಣ್ಯಕ್ಷೇತ್ರ ದರ್ಶನಕ್ಕೆ ಬರುವುದಿಲ್ಲ, ಸಾಯಲೂ ಬರುತ್ತಾರೆ!

ಕಾಶಿಯಲ್ಲಿ ಸಾಯಲು ಬರುವವರಿಗೆ ವಿಶೇಷ ಮರ್ಯಾದೆ ಇದೆ. ಸತ್ತ ನಂತರ ಅವರಿಗೆ ಮುಕ್ತಿಪ್ರಾಪ್ತಿಯಾಗುತ್ತದಂತೆ. ಹಾಗಾಗಿ, ಕೆಲವರು ಸಾಯುವ ಹಂತದಲ್ಲಿ ಇಲ್ಲಿಗೆ ಬಂದು ಕೆಲಕಾಲ ತಂಗಿ ದೇಹತ್ಯಾಗ ಮಾಡಿದರೆ; ಇನ್ನುಳಿದವರು ಸತ್ತನಂತರ ಕೂಡ ದೇಹವನ್ನು ಇಲ್ಲಿಗೆ ತಂದು ಗಂಗೆಯ ದಡದಲ್ಲಿ ದಹನ ಮಾಡುತ್ತಾರೆ. ಹಾಗಾಗಿ ಬಿಹಾರ, ಉತ್ತರಪ್ರದೇಶದ ಎಷ್ಟೋ ಊರುಗಳಲ್ಲಿ ಸ್ಮಶಾನವೇ ಇಲ್ಲ! ಕಾಶಿಯನ್ನೇ ‘ಮಹಾ ಸ್ಮಶಾನ’ ಎಂದು ಕರೆಯುತ್ತಾರೆ.

ಮಣಿಕರ್ಣಿಕಾ ಸ್ಮಶಾನ - ಇದು ನಿಜವಾದ 24x7 !


ಬಹಳ ವರ್ಷಗಳ ಹಿಂದೆ ಇಲ್ಲಿಗೆ ಬರುವವರು ದೇವರ ಸನ್ನಿಧಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದರ ಮೂಲಕ ಸಹಜವಾಗಿ ಬರದ ಸಾವನ್ನು ತಾವೇ ಆಹ್ವಾನಿಸಿಕೊಳ್ಳ್ಳುತ್ತಿದ್ದರಂತೆ! ಅಂತೆಯೇ ಕಾಶಿಯಲ್ಲಿ ‘ಸಾವು’ ಎಂದರೆ ಒಂದು ‘ಸಂಭ್ರಮ’.

ಸಾವನ್ನು ಹುಡುಕಿ ಇಲ್ಲಿಗೆ ಬರುವವರೆಲ್ಲರ ಆಶಯ ಒಂದೇ. ಮೋಕ್ಷ ಪಡೆಯುವುದು. ‘ಮೋಕ್ಷ’ ಎಂದರೆ ಮನುಷ್ಯ ಜನ್ಮದ ಹುಟ್ಟು-ಸಾವುಗಳ ನಿರಂತರ ಚಕ್ರದಿಂದ ಮುಕ್ತಿ. ಇದು ಕಾಶಿಗೆ ಸಾವನ್ನು ಬಯಸಿ ಹೋದವರ ನಂಬಿಕೆ.

ಈ ನಂಬಿಕೆ ಇಂದು-ನಿನ್ನೆಯದಲ್ಲ. ಶತ-ಶತಮಾನಗಳಿಂದ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಇತರೆ ಊರುಗಳಲ್ಲಿ ಸ್ಮಶಾನ ಊರ ಹೊರಗಿದ್ದರೆ ಇಲ್ಲಿ ಮಾತ್ರ ಊರಿನ ಮಧ್ಯದಲ್ಲಿಯೇ ಇದೆ. ಇಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ನಿರಂತರವಾಗಿ ಹೆಣಗಳನ್ನು ಸುಡುತ್ತಲೇ ಇರುತ್ತಾರೆ. ಚಿತೆಯ ಬೆಂಕಿ ಆರಿದ್ದನ್ನು ನಾವು ಕಂಡೇ ಇಲ್ಲ ಎಂದು ಇಲ್ಲಿಯವರು ಹೇಳುತ್ತಾರೆ. ದಿನವೊಂದಕ್ಕೆ ಕನಿಷ್ಠ ನೂರರಿಂದ ನೂರೈವತ್ತು ಶವಗಳ ದಹನ ಕಾರ್ಯ ಇಲ್ಲಿ ನಡೆಯುತ್ತದೆ. ಕೆಲವೊಮ್ಮೆ ಇದು ಇನ್ನೂರು, ಮುನ್ನೂರನ್ನು ದಾಟುವುದೂ ಉಂಟಂತೆ!

ಮುಂಜಾನೆಯಲ್ಲಿ ಗಂಗಾನದಿ

ನಮಗೂ (ಬೆಂಗಳೂರಿಗೂ) ಕಾಶಿಗೂ ಸುಮಾರು ಎರಡೂವರೆ ಸಾವಿರ ಕಿಲೋ ಮೀಟರಿನಷ್ಟು ದೂರ. ಎರಡು ವಿಮಾನ ಬದಲಿಸಬೇಕು. ರೈಲಿನಲ್ಲಿ ಹೋದರೆ ಎರಡು ದಿನದ ಪ್ರಯಾಣ. ಇದು ಇಂದಿನ ವ್ಯವಸ್ಥೆ. ಹಿಂದೆ? ಆಗ ಕಾಶಿಯಾತ್ರೆ ಹೋಗುವುದು ಎಂದರೆ ‘ನೇರ ಸ್ವರ್ಗಕ್ಕೆ ಯಾತ್ರೆ’ ಅನ್ನುತ್ತಿದ್ದರು. ‘ಕಾಶೀಯಾತ್ರೆ, ಸ್ಮಶಾನಯಾತ್ರೆ ಎರಡೂ ಒಂದೇ’ ಹೋದವರು ಹಿಂತಿರುಗಿ ಬರುವುದಿಲ್ಲ, ಎಂದು ಯಾತ್ರೆ ಹೊರಟವರನ್ನು ಕರೆದು ಸತ್ಕರಿಸಿ, ಪಾದಪೂಜೆ ಮಾಡಿ ತಮ್ಮ ಕೈಲಾದ ಕಾಣಿಕೆ ಸಲ್ಲಿಸಿ ಕಳುಹಿಸಿಕೊಡುತ್ತಿದ್ದರು.

ಯಾತ್ರೆ ಹೋದವರು ಅಕಸ್ಮಾತ್ ಹಿಂತಿರುಗಿ ಬಂದರಂತೂ ಅವರಿಗೆ ಸಿಗುತ್ತಿದ್ದ ಸ್ವಾಗತವೇನು? ಎಲ್ಲರೂ ಅವರ ಕಾಲಿಗೆ ಬಿದ್ದದ್ದೂ ಬಿದ್ದದ್ದೇ, ಆಶೀರ್ವಾದ ಪಡೆದದ್ದೂ ಪಡೆದದ್ದೇ. ಕಾಶಿಯಿಂದ ವಾಪಸ್ ಆದವರು ‘ಗಂಗಾಸಮಾರಾಧನೆ’ ಮಾಡುತ್ತಿದ್ದರು. ಗಂಗಾ ಸಮಾರಾಧನೆ ಎಂದರೆ ಪುಟ್ಟ ಪುಟ್ಟ ಗಿಂಡಿಗಳಲ್ಲಿ ತಂದ ಗಂಗೆಯನ್ನು ಎಲ್ಲರಿಗೂ ವಿತರಿಸುವುದು. ಆ ಪುಟ್ಟ ಗಿಂಡಿಗೆ ದೇವರ ಕೋಣೆಯಲ್ಲಿ ವಿಶೇಷ ಸ್ಥಾನ! ದಿನವೂ ಆರತಿ, ಪೂಜೆ.. ಯಾರಾದರೂ ಹಿರಿಯರು ಸಾವಿನ ಅಂಚಿನಲ್ಲಿದ್ದಾಗ ಮಾತ್ರ ಅದಕ್ಕೆ ಮುಕ್ತಿ. ಗಿಂಡಿ ಒಡೆದು ಮೂರು ಉದ್ಧರಣೆ ಗಂಗೆಯನ್ನು ಬಾಯಲ್ಲಿ ಬಿಟ್ಟು ‘ಶಿವ ಶಿವಾ’ ಎನ್ನುತ್ತಿದ್ದರು.

ಮಣಿಕರ್ಣಿಕಾ ಘಾಟ್‌ನ Top Angle


ಇನ್ನು ಮದುವೆಯ ಸಂದರ್ಭದಲ್ಲಿ ನಡೆಯುವ ‘ಕಾಶೀಯಾತ್ರೆ’ ಶಾಸ್ತ್ರದ ಬಗ್ಗೆ ನಿಮಗೆಲ್ಲ ಗೊತ್ತೇ ಇರಬೇಕು. ಕಾಶೀಯಾತ್ರೆಗೆ ಹೊರಟ ವರನನ್ನು ತಡೆದು ನಿಲ್ಲಿಸಿ, ಉಪಚರಿಸಿ, ಒಲಿಸಿ ಮದುವೆ ಮಂಟಪಕ್ಕೆ ಕರೆತರುವುದು ವಾಡಿಕೆ. ಈ ಶಾಸ್ತ್ರದ ನಂತರವೇ ಕನ್ಯಾಪಿತೃ ತನ್ನ ಮಗಳನ್ನು ಆ ವರನಿಗೆ ಧಾರೆ ಎರೆದುಕೊಡುವುದು. ಈ ಸಂಪ್ರದಾಯ ಈಗಲೂ ಕೆಲವು ವರ್ಗದ ಮದುವೆಗಳಲ್ಲಿ ನಡೆದುಕೊಂಡು ಬಂದಿದೆ.

ಈ ಎಲ್ಲ ಕಾರಣಗಳಿಂದ ‘ಕಾಶಿ’ ಎಂದರೆ ಒಂದು ಬಗೆಯ ಅಚ್ಚರಿ.

ಸುಮಾರು ಎಂಟು ವರ್ಷಗಳ ಹಿಂದೆ ಕಾಶಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರರ ‘ಸುಬ್ಬಣ್ಣ’ -ಕಿರು ಕಾದಂಬರಿ ಆಧರಿಸಿದ ಧಾರಾವಾಹಿಯ-ಚಿತ್ರೀಕರಣಕ್ಕೆ ಹೊರಟಾಗ ನನ್ನ ಮನಸ್ಸಿನಲ್ಲಿ ಈ ಎಲ್ಲ ಅಚ್ಚರಿಗಳನ್ನು ಹೊತ್ತೇ ಹೊರಟಿದ್ದೆ.

2003ರಲ್ಲಿ ಸುಚೇಂದ್ರ ಪ್ರಸಾದ ‘ಸುಬ್ಬಣ್ಣ’ನಾಗಿ...


ಒಂದು ವಾರ ಕಾಲದ ಚಿತ್ರೀಕರಣದಲ್ಲಿ ಒಂದಿಷ್ಟು ಕಾಶಿಯನ್ನು ಸುತ್ತಾಡಿದೆ. ಸೈಕಲ್ ರಿಕ್ಷಾದಲ್ಲಿ ಕುಳಿತು ಬೀದಿ ಬೀದಿ ಸುತ್ತಿದೆ. ಫುಟ್‌ಪಾತ್‌ನಲ್ಲಿ ಕಛೋರಿ, ಜಿಲೇಬಿ, ಮೊರಬ್ಬ, ಮಲಾಯಿ, ಲಂಗ್ಡಾ ಆಮ್, ಠಂಡೈ ಪಾನ್ ಮುಂತಾದುವನ್ನು ತಿಂದೆ. ಗಂಗೆಯ ಹರಿವ ನೀರಲ್ಲಿ ಕೈ ಇಟ್ಟು ಸಂಭ್ರಮಿಸಿದೆ. ಜೊತೆಗೆ ದಡದಲ್ಲಿ ಕಣ್ಣುಕುಕ್ಕುವ ಸ್ಮಶಾನಗಳನ್ನು ಕಂಡೆ, ಗಂಗೆಯಲ್ಲಿ ಅರೆಕೊಳೆತ ಹೆಣಗಳು ತೇಲುವುದನ್ನು ಕಂಡು ಬೆಚ್ಚಿ ಹಿಂದೆ ಸರಿದೆ. ನನ್ನ ಅಚ್ಚರಿಗಳೆಲ್ಲಾ ಜಿಗುಪ್ಸೆಯಲ್ಲಿ ಅಂತ್ಯವಾದವು. ಕಾಶಿ ಎಂದರೆ ಹೆಣ, ಕಾಶಿ ಎಂದರೆ ಸ್ಮಶಾನ, ಕಾಶಿ ಎಂದರೆ ಕಲ್ಮಶಗೊಂಡ ಗಂಗೆ, ಕಾಶಿ ಎಂದರೆ ಪೀಡಿಸುವ ಪಂಡಾಗಳ ತವರೂರು, ಕಾಶಿ ಎಂದರೆ ಇಕ್ಕಟ್ಟಾದ ಕೊಳಕು ಗಲ್ಲಿಗಳ ಊರು..

Kashi is Dirt, Decay, Degeneration, Darkness and Death…

ಇಂಥ ಕಾಶಿಗೆ ಮತ್ತೊಮ್ಮೆ ಹೋಗಬಾರದೆಂದು ಮನಸ್ಸಿನಲ್ಲೇ ನಿಶ್ಚಯಿಸಿ ಹಿಂತಿರುಗಿದ್ದೆ.

ಪವಿತ್ರ ಗಂಗೆಯಲ್ಲಿ ತೇಲುವ ಶವ!

….ಇದಾಗಿ ಸುಮಾರು ನಾಲ್ಕು ವರ್ಷಗಳು ಕಳೆದವು. ಒಂದು ದಿನ ಬೆಳಗ್ಗೆ ಕಾಶಿಯ ಕುರಿತ ಸುದ್ದಿಯೊಂದನ್ನು ದಿನಪತ್ರಿಕೆಯ ಮುಖಪುಟದಲ್ಲಿ ಓದಿದೆ. ‘ನೀವಿಲ್ಲ ಹದಿನೈದು ದಿನದಲ್ಲಿ ಸಾಯಬೇಕು; ಇಲ್ಲವೇ ಜಾಗ ಖಾಲಿ ಮಾಡಬೇಕು!’… ಆ ವರದಿ ನನ್ನನ್ನು ಜಾಗೃತಗೊಳಿಸಿತು, ಮತ್ತೊಮ್ಮೆ ಕಾಶಿಯತ್ತ ಮುಖಮಾಡಲು ಪ್ರಚೋದಿಸಿತು. ನನ್ನ ಪ್ರತಿಜ್ಞೆ ಮುರಿದು ಮತ್ತೆ ಕಾಶಿಯಾತ್ರೆಗೆ ಹೊರಟೆ. ಮನಸ್ಸಿನ ತುಂಬೆಲ್ಲ ‘ಮುಕ್ತಿಭವವ’ವೇ ತುಂಬಿತ್ತು…

ಅದು ಕಾಶಿಯ ಹೃದಯ ಸ್ಥಾನದಲ್ಲಿರುವ ಗೊದೋಲಿಯಾದ ಮುಖ್ಯ ರಸ್ತೆ. ಜನನಿಬಿಡ ಪ್ರದೇಶ. ರಸ್ತೆಯ ಎರಡೂ ಬದಿಯಲ್ಲಿ ಅಂಗಡಿ ಮುಂಗಟ್ಟುಗಳ ಸಾಲು ಸಾಲು. ರಸ್ತೆಯಲ್ಲಿ ಕಾರು, ಸ್ಕೂಟರ್, ಆಟೋರಿಕ್ಷಾಗಳ ಜೊತೆಗೆ ಮುಕ್ಕಾಲು ಪಾಲು ಆಕ್ರಮಿಸಿಕೊಂಡಿರುವವರು ಸೈಕಲ್ ರಿಕ್ಷಾ ಸವಾರರು. ಇವರ ಸೈಕಲ್ ಬೆಲ್‌ನ ‘ಟ್ರಿಣ್ ಟ್ರಿಣ್’ ಸದ್ದು ಇಡೀ ಪ್ರದೇಶವನ್ನು ಆವರಿಸಿದೆ. ಅಲ್ಲೇ ಬದಿಯಲ್ಲಿ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಪುಟ್ಟ ಗಲ್ಲಿಯೊಂದಿದೆ. ಅದರಲ್ಲಿ ಸುಮಾರು ಐವತ್ತು ಮೀಟರ್ ಸಾಗಿದರೆ ಸಿಗುವುದೇ ‘ಕಾಶೀಲಾಭ್ ಮುಕ್ತಿಭವನ’.

‘ಮುಕ್ತಿಭವನ’ ಎಂಬ ಸಾವಿನ ಮನೆ!


ಇದು ಕಾಶಿಗೆ ಸಾಯಲು ಬರುವವರ ತಾತ್ಕಾಲಿಕ ತಂಗುದಾಣ. ಇಲ್ಲಿ ಹನ್ನೆರಡು ಕೋಣೆಗಳಿವೆ. ಉಳಿದುಕೊಳ್ಳಲು ಯಾವುದೇ ರೀತಿಯ ಶುಲ್ಕ ನೀಡಬೇಕಿಲ್ಲ. ಕೋಣೆ, ನೀರು, ವಿದ್ಯುತ್ ಎಲ್ಲವೂ ಉಚಿತ! ಒಂದೇ ಕಂಡೀಷನ್. ನಿಮಗೆ ಅರವತ್ತು ವರ್ಷ ದಾಟಿರಬೇಕು! ಸಾವಿನ ಅಂಚಿನಲ್ಲಿರಬೇಕು. ಜೊತೆಗೆ ಮುಂಚೆಯೇ ಕಾಗದ ಬರೆದು ಇಲ್ಲಿಯ ಕೋಣೆಯನ್ನು ಕಾದಿರಿಸಿರಬೇಕು. ಎಲ್ಲವೂ ಸುಸೂತ್ರವಾಗಿ ನಡೆದು, ಅಲ್ಲಿಯ ಮ್ಯಾನೇಜರ್ ಬನ್ನಿ ಎಂದರೆ, ಇಲ್ಲಿಗೆ ಬಂದು ನಾಲ್ಕು ಜನ ಬಂಧುಗಳೊಂದಿಗೆ ತಂಗಬಹುದು. ಹದಿನೈದು ದಿನ ನೀವು ಅವರ ಅತಿಥಿ. ಆ ಅವಧಿಯಲ್ಲಿ ನಿಮಗೆ ಸಾವು ಬಂದು ಸತ್ತರೆ ನೇರ ಸ್ವರ್ಗ, ಇಲ್ಲವೇ ವಾಪಸ್ ನಿಮ್ಮ ಊರಿಗೆ ಟಿಕೆಟ್!

ತಮಾಷೆಯಲ್ಲ,

ಹೀಗೆ, ಸುಮಾರು ಐವತ್ತೆರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ‘ಕಾಶೀಲಾಭ್ ಮುಕ್ತಿಭವನ’ದಲ್ಲಿ ಈಗಾಗಲೇ ಸುಮಾರು ಇಪ್ಪತ್ತು ಸಾವಿರಕ್ಕು ಹೆಚ್ಚು ಜನರ ಪ್ರಾಣ ಹೋಗಿದೆ! ಅವರಿಗೆಲ್ಲ ಸ್ವರ್ಗ ಸಿಕ್ಕಿದೆಯೇ? ಮನುಷ್ಯ ಜನ್ಮದಿಂದ ಮುಕ್ತಿಪಡೆದಿದ್ದಾರೆಯೇ? ಗೊತ್ತಿಲ್ಲ. ಏಕೆಂದರೆ ಹೋದವರು ಯಾರೂ ವಾಪಸ್ ಬಂದು ಹೇಳಿಲ್ಲ…

‘ಮುಕ್ತಿಭವನ’ದ ಒಳ ಹಜಾರ


ಅಂಥ ಒಂದು ಸಾವಿನ ಮನೆಯ ಮುಂದೆ ನಾನು ನಿಂತಿದ್ದೆ. ಆದರೆ ನಾನು ಸಾಯಲು ಬಂದವನಲ್ಲ. ಅದನ್ನು ನೋಡಲು ಬಂದವನು. ಅದನ್ನು ನೋಡಿ ಒಂದು ಕ್ಷಣ ಮೈ ಜುಂ ಎಂದಿತು.

ಹೊರಗಿಂದ ಸಾಧಾರಣ ಬಂಗಲೆಯಂತೆ ಕಾಣುವ ಇದರೊಳಗೆ ಎಷ್ಟು ಪ್ರಾಣಪಕ್ಷಿಗಳು ಹಾರಿವೆ. ಆ ಆತ್ಮಗಳು ಅಲ್ಲಿ ಇನ್ನೂ ಅಲೆದಾಡುತ್ತಿರಬಹುದೇ? ಸಾವನ್ನು ಎಂದೂ ಹತ್ತಿರದಿಂದ ಕಾಣದಿದ್ದ ನನಗೆ ಒಳಗೆ ಹೋಗಲು ಒಂದು ಸಣ್ಣ ಹಿಂಜರಿಕೆ ಉಂಟಾಯಿತು. ಎರಡೂವರೆ ಸಾವಿರ ಕಿಲೋಮೀಟರಿನಿಂದ ಇದನ್ನು ನೋಡಲೆಂದೇ ಬಂದು ಈಗ ಹಿಂಜರಿದರೆ? ಧೈರ್ಯ ಮಾಡಿ ಒಳಗೆ ಅಡಿಯಿಟ್ಟೆವು.

‘ಮುಕ್ತಿಭವನ’ದ ಮಹಡಿ


ಅದು ಎರಡು ಮಹಡಿಯ ದೊಡ್ಡ ಕಟ್ಟಡ. ಇದನ್ನು ಕಟ್ಟಿ ಸುಮಾರು ನೂರು ವರ್ಷ ದಾಟಿರಬಹುದು. ಕಟ್ಟಡ ಪ್ರವೇಶಿಸಲು ದೊಡ್ಡ ಕಬ್ಬಿಣದ ಗೇಟುಗಳನ್ನು ದಾಟಿ ಹೋಗಬೇಕು. ಗೇಟುಗಳಿಗೆ ಯಾವಾಗಲೂ ಚೈನ್ ಹಾಕಿ ಬೀಗ ಜಡಿದಿರುತ್ತಾರೆ. ಜನರು ಓಡಾಡಲು ಮಾತ್ರ ಕೊಂಚ ಸ್ಥಳಾವಕಾಶ ಇದೆ. ನಾಲ್ಕು ಚಕ್ರದ ವಾಹನಗಳು ಬಂದಾಗ ಮಾತ್ರ ಬೀಗಕ್ಕೆ ಮುಕ್ತಿ.

ಗೇಟಿನ ಸಂದಿಯಲ್ಲಿ ನುಸುಳಿಕೊಂಡು ಕಾಂಪೌಂಡ್ ಹೊಕ್ಕೆವು. ಅಲ್ಲಲ್ಲಿ ಕುಳಿತು ಕೊಳ್ಳಲು ಸಿಮೆಂಟಿನ ಜಗುಲಿಗಳು. ಪಕ್ಕದಲ್ಲಿ ಒಂದು ಕೈ ತೋಟ. ಅಲ್ಲಿರುವುದೆಲ್ಲಾ ತುಳಸಿಯ ಗಿಡಗಳೇ. ಜಗುಲಿಯ ಮೇಲೆ ಬಿಸಿಲು ಕಾಯಿಸುತ್ತಾ ಕುಳಿತ ಕೆಲವು ಹಳ್ಳಿಗರು ನಮ್ಮನ್ನು ಕುತೂಹಲದಿಂದ ನೋಡಿದರು.

‘ನಮಶ್ಕಾರ್ ಬಾಬೂಜಿ… ಶುಕ್ಲಾಜಿ ಹೈ?’ ಎಂದು ಕೇಳಿದ್ದಕ್ಕೆ ಒಳಕ್ಕೆ ಕೈ ತೋರಿಸಿದರು.

ಚಪ್ಪಲಿಯನ್ನು ಹೊರಗೇ ಬಿಟ್ಟು, ಕಮಾನಿನಾಕಾರದ ಹಸಿರು ಬಣ್ಣದ ಹಳೆಯ ಹೆಬ್ಬಾಗಿಲನ್ನು ದಾಟಿ ಒಳಗೆ ಹೋದರೆ ವಿಶಾಲವಾದ ಹಜಾರ. ಮೊದಲು ಬಲಕ್ಕೆ ಸಿಗುವುದೇ ಕಾರ್ಯಾಲಯ. ಅಲ್ಲಿ ಒಂದು ಟೇಬಲ್‌ನ ಹಿಂದೆ ಭೈರವನಾಥ ಶುಕ್ಲಾ ಕುಳಿತಿದ್ದರು. ಆತನ ವಯಸ್ಸು ಅರವತ್ತರ ಹತ್ತಿರ ಹತ್ತಿರ. ಬಲಗೈಯನ್ನು ಸಣ್ಣ ಬ್ಯಾಗಿನೊಳಕ್ಕೆ ಇಟ್ಟು ಯಾವುದೋ ಚಲನೆಯಲ್ಲಿ ತೊಡಗಿದ್ದರು. (ಆತ ಬ್ಯಾಗಿನೊಳಗೆ ಕೈ ತೂರಿಸಿ ಬೆರಳನಲ್ಲಿ ಜಪಮಣಿ ಎಣಿಸುತ್ತಿದ್ದರು ಎಂದು ನಂತರ ತಿಳಿಯಿತು)

‘ಮುಕ್ತಿಭವನ’ದ ಮ್ಯಾನೇಜರ್ ಭೈರವನಾಥ ಶುಕ್ಲಾ...


ನಾವು ಬೆಂಗಳೂರಿನಿಂದ ಬಂದ ವಿಚಾರ ಹೇಳುತ್ತಾಲೇ ‘ಆಯಿಯೇ..’ ಎಂದು ಹೇಳಿ ಎದುರಿನ ಖುರ್ಚಿ ತೋರಿಸಿದರು. ‘ಬೇಟಾ…’ ಎಂದು ಯಾರನ್ನೋ ಕೂಗಿದರು. ಹುಡುಗನೊಬ್ಬ ಸ್ಟೀಲ್ ಲೋಟಗಳಲ್ಲಿ ನೀರು, ನಾಲ್ಕು ತುಂಡು ಮಿಠಾಯಿಯನ್ನು ತಂದಿಟ್ಟ. ತಟ್ಟೆಯನ್ನು ನಮ್ಮ ಮುಂದೆ ತಳ್ಳಿದರು ಶುಕ್ಲಾಜಿ. ಸಾವಿನ ಮನೆಯಲ್ಲಿ ಸಿಹಿ ತಿನ್ನುವುದೇ? ವಿಚಿತ್ರ ಗೊಂದಲಕ್ಕೆ ಬಿದ್ದಾಗ ಆತ ಮಿಠಾಯಿ ತಿನ್ನುವಂತೆ ಮತ್ತೊಮ್ಮೆ ಒತ್ತಾಯಿಸಿದರು. ಸಮಾಧಾನಕ್ಕೆ ಒಂದು ತುಂಡು ಬಾಯಿಗಿಟ್ಟು ಮಾತಿಗಿಳಿದೆವು…

ಮಾತಾಡುತ್ತಲೇ ಆ ಕೋಣೆಯನ್ನು ಅವಲೋಕಿಸಿದೆ. ಸುತ್ತಲೂ ಗೋಡೆಯಲ್ಲಿ ಹುದುಗಿರುವ ಕಪಾಟುಗಳಲ್ಲಿ ದೊಡ್ಡ ದೊಡ್ಡ ರಿಜಿಸ್ಟರ್‌ಗಳು, ಹಳೆಯ ದಾಖಲೆಗಳನ್ನು ಪೇರಿಸಲಾಗಿತ್ತು. ಅದರಲ್ಲಿ ಯಾವ ಆಸ್ತಿ-ಪಾಸ್ತಿಯ ದಾಖಲೆ ಇರಬಹುದು? ನಮ್ಮ ಸಂಶಯ ನಿವಾರಣೆಯಾದದ್ದು ಒಂದು ದಿನ ಕಳೆದಮೇಲೆ! ಅದರಲ್ಲಿ ಇದ್ದದ್ದು ಸತ್ತವರ ದಾಖಲೆಗಳು! ಐವತ್ತು ವರ್ಷಗಳಲ್ಲಿ ಇಪ್ಪತ್ತು ಸಾವಿರ ಸಾವು! ಚಿತ್ರಗುಪ್ತ ದಾಖಲೆ.

ಅಲ್ಲಿಂದ ಹೊರಬಂದರೆ ಎಡಕ್ಕೆ ಪುಟ್ಟ ದೇವರ ಕೋಣೆ. ಅದಕ್ಕೆ ಹೊಂದಿಕೊಂಡಂತೆ ಇನ್ನೊಂದು ಪುಟ್ಟ ಹಜಾರ. ಅಲ್ಲಿ ಕರ್ಮಾಚಾರಿಗಳು ಕುಳಿತು ಭಜನೆ ಮಾಡುತ್ತಿದ್ದರು. ಅದನ್ನು ದಾಟಿ ನೇರ ಹೋದರೆ ಬಿಸಿಲುಮಚ್ಚಿನ ಹಜಾರ. ಬಲಕ್ಕೆ, ಎದುರಿಗೆ ಕಾಣುವ ಹಾಸ್ಟೆಲ್ ಮಾದರಿಯ ರೂಮುಗಳು. ‘ಖಮರೆ-೧/೨/೩…’ ಹೀಗೆ ಅದರ ಮೇಲೆ ಬರೆಯಲಾಗಿತ್ತು. ಕೆಳಗೆ ಆರು, ಮೇಲೆ ಆರು ರೂಮುಗಳು, ಒಟ್ಟು ಹನ್ನೆರಡು ಕೋಣೆಗಳ ವಿಶಾಲ ಕಟ್ಟಡ ಅದು. ಕೆಲವು ರೂಮುಗಳಿಗೆ ಬೀಗ ಹಾಕಲಾಗಿತ್ತು. ಕೆಲವು ಅರೆ ತೆರೆದಿದ್ದವು.

ಅರೆ ತೆರೆದ ಬಾಗಿಲುಗಳ ಹಿಂದಿನಿಂದ ಸಣ್ಣ ಉಸುರಿನ ಸದ್ದು ಕೇಳಿ ಬರುತ್ತಿತ್ತು. ಒಳಗೆ ಇಣುಕಿದರೆ ಹನ್ನೆರಡು-ಹದಿನೈದು ಅಡಿ ಅಳತೆಯ ಕೋಣೆ. ಒಂದು ವಿಶಾಲವಾದ ಕಿಟಕಿ. ಒಂದು ಬದಿಯಲ್ಲಿ ಹಳೆಯ ಮಂಚ, ಗೋಡೆಯಲ್ಲಿ ತೆರೆದ ಕಪಾಟು, ಮೇಲೊಂದು ಹಳೇ ಫ್ಯಾನು. ಎರಡೇ ಎರಡು ಇಲಕ್ಟ್ರಿಕ್ ಸ್ವಿಚ್‌ಗಳು. ಇದಿಷ್ಟೇ ಅಲ್ಲಿಯ ನಿರ್ಜೀವ ವಸ್ತುಗಳು. ಇನ್ನೊಂದು ಜೀವವಿರುವ ವಸ್ತು ಎಂದರೆ ಮಂಚದ ಮೇಲಿನ ಮೂಳೆ ಚಕ್ಕಳವಾದ ವೃದ್ಧದೇಹ.

ಸಾವಿನ ಕ್ಷಣಗಣನೆಯಲ್ಲಿರುವ ವೃದ್ಧ ಮಹಿಳೆ


ಇವರೇ ಮೋಕ್ಷಾರ್ಥಿ!

ಅಸ್ತಿಪಂಜರಕ್ಕೆ ಚರ್ಮದ ಹೊದಿಕೆ ಹೊದ್ದಿಸಿದಂತಿರುವ ನವೆದು ಹೋದ ಜೀವ ಅದು. ಅರೆಪ್ರಜ್ಞಾವಸ್ಥೆಯಲ್ಲಿತ್ತು. ಕೊನೆಯ ‘ಆ ಕ್ಷಣ’ಕ್ಕಾಗಿ ಸುತ್ತಲೂ ಕಾದು ಕುಳಿತ ಬಂಧುವರ್ಗ. ಮುಕ್ತಿ ಯಾವಾಗ ದೊರೆಯುವುದೋ? ಹುಟ್ಟನ್ನು ಇಂದಿನ ವೈಜ್ಞಾನಿಕ ಯುಗದಲ್ಲಿ ಖಚಿತವಾಗಿ ಹೇಳಬಹುದು. ಆದರೆ ಸಾವನ್ನು? ಹಾಗಾಗಿಯೇ ಹದಿನೈದು ದಿನಗಳ ಗಡುವು!

‘ಆದರೆ, ಹದಿನೈದೇ ದಿನದೊಳಗೆ ಸಾಯಬೇಕೆಂದರೆ ಹೇಗೆ ಸಾಧ್ಯ?

ಈ ವಿಚಿತ್ರ ನಿಯಮದ ಕುರಿತು ಪ್ರಶ್ನೆಯನ್ನು ಕೇಳದೆ ಇರಲಾಗಲಿಲ್ಲ. ಉತ್ತರ ಸಲೀಸಾಗಿ ಬಂತು.

ಪಂಚಭೂತಗಳಲ್ಲಿ ಲೀನ...


‘ಇಲ್ಲಿಗೆ ಬರುವವರು ಎಂಥವರು ಎಂದುಕೊಂಡಿದ್ದೀರಿ? ಇನ್ನು ಬದುಕುವುದಿಲ್ಲ ಎನ್ನುವ ಸ್ಥಿತಿಯಲ್ಲಿ ಇರುವವರು. ಎಷ್ಟೋ ಸಲ ಇಲ್ಲಿಗೆ ಬಂದ ಕೆಲವು ಗಂಟೆ, ಕೆಲವು ದಿನಗಳಲ್ಲಿ ಅವರು ಮೋಕ್ಷ ಹೊಂದುತ್ತಾರೆ. (ಅಲ್ಲಿ ಅಪ್ಪಿ-ತಪ್ಪಿಯೂ ಯಾರೂ ‘ಸಾವು’ ಎಂಬ ಪದ ಬಳಸುವುದಿಲ್ಲ. ‘ಮೋಕ್ಷ’ ಒಂದೇ ಚಾಲ್ತಿಯಲ್ಲಿರುವ ಪರ್ಯಾಯ ಪದ). ಏನು ಮಾಡುತ್ತೀರಿ? ಕೆಲವೊಮ್ಮೆ ತಿಂಗಳುಗಟ್ಟಲೆ ಕಾದರೂ ಮೋಕ್ಷ ದೊರಕುವುದಿಲ್ಲ. ಆ ಭಗವಂತನ ಇಚ್ಛೆ ಏನಿರುತ್ತದೆಯೋ? ಹಾಗಾಗಿ ಅಂಥವರನ್ನು, ನಿಮ್ಮ ಊರಿಗೆ ಹೋಗಿ ಕೆಲವು ದಿನ ಕಳೆದು ಮತ್ತೆ ಬನ್ನಿ ಎಂದು ಕಳುಹಿಸುತ್ತೇವೆ. ಇದರಿಂದ ಕಾದಿರುವ ಇತರರಿಗೆ ಸ್ಥಳಾವಕಾಶ ಮಾಡಿಕೊಡಲು ಅನುಕೂಲವಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಹದಿನೈದು ದಿನಕ್ಕಿಂತ ಹೆಚ್ಚಿಗೆ ಇರಲು ಅವಕಾಶ ಕೊಟ್ಟಿರುವುದೂ ಉಂಟು…’ ಎನ್ನುತ್ತಾರೆ ಮ್ಯಾನೇಜರ್ ಶುಕ್ಲಾ.

ಇಲ್ಲಿರಲು ಹದಿನೈದು ದಿನದ ಗಡುವಿನ ಹೊರತಾಗಿ ಬೇರೆ ಇನ್ನೇನು ನಿಯಮಗಳಿವೆ?

‘ಕನಿಷ್ಠ ನಾಲ್ಕು ಜನ ಬಂಧುಗಳು ಅವರ ಜೊತೆ ಇರಲೇಬೇಕು. ಆವರ ಆಹಾರವನ್ನು ಅವರೇ ತಯಾರಿಸಿಕೊಳ್ಳಬೇಕು. ಅದಕ್ಕಾಗಿ ಒಂದು ಸ್ಟೌವ್ ಕೊಡುತ್ತೇವೆ, ನೀರು ಇತ್ಯಾದಿ ವ್ಯವಸ್ಥೆ ಇದೆ. ಆದರೆ ಮಾಂಸಾಹಾರ, ಈರುಳ್ಳಿ, ಬೆಳ್ಳುಳ್ಳಿ ಇಲ್ಲಿ ವರ್ಜ್ಯ. ಈ ಸ್ಥಳದ ಶುಚಿತ್ವ ಮತ್ತು ಘನತೆ ಕಾಪಾಡುವುದು ಬಹಳ ಮುಖ್ಯ. ಇವರ ಯಾವುದೇ ಸಹಾಯಕ್ಕೆ ನಮ್ಮ ಕರ್ಮಚಾರಿಗಳು ಇರುತ್ತಾರೆ. ಮೋಕ್ಷಾರ್ಥಿಗೆ ಪುಣ್ಯದ ಬಲವಿದ್ದರೆ, ಕಾಲಭೈರವನ ಕೃಪೆಯಿದ್ದರೆ ಬೇಗ ಮೋಕ್ಷ ದೊರಕುತ್ತದೆ’ ಎನ್ನುವುದು ಶುಕ್ಲಾ ಮಾತು.

‘ಕಾಶ್ಯಾಮ್ ಮರಣಾನ್ ಮುಕ್ತಿ:’ ಅಂದರೆ ಕಾಶಿಯಲ್ಲಿ ಸತ್ತವರಿಗೆಲ್ಲಾ ಮುಕ್ತಿ! ಇಲ್ಲಿ ಶಿವನೇ ಎಲ್ಲರಿಗೂ ಮಿಗಿಲಾದ ಪರಮೇಶ್ವರ. ಸರ್ವಸ್ವತಂತ್ರನಾದ ಶಿವನಿಗೆ ಸಾಂಪ್ರದಾಯಿಕವಾದ ಯಾವ ಕಟ್ಟು ಕಟ್ಟಳೆಗಳ ಬಂಧನವೂ ಇಲ್ಲ. ಅದೂ ಅಲ್ಲದೆ ಇದು ಬ್ರಹ್ಮ ನಿರ್ಮಿತವಲ್ಲ, ಇಲ್ಲಿ ಯಮನ ಆಡಳಿತವಾಗಲಿ, ಚಿತ್ರಗುಪ್ತರ ಲೆಕ್ಕಪತ್ರವಾಗಲಿ, ಯಮಯಾತನೆಯಾಗಲಿ ಇಲ್ಲ. ಸ್ವತಃ ಕಾಲಭೈರವನೇ ಇಲ್ಲಿಯ ಯಜಮಾನ. ಅವನ ಕೃಪೆಯಿಂದ ಇಲ್ಲಿ ಕಿರಿಸ್ತಾನರು, ಮುಸಲ್ಮಾನರು ಇವರೆಲ್ಲರನ್ನು ಒಳಗೊಂಡಂತೆ ಎಲ್ಲ ಮಾನವ ಜೀವಿಗಳಿಗೂ, ಪಶು, ಪಕ್ಷಿ, ಕ್ರಿಮಿ, ಕೀಟಗಳಿಗೂ ಮೋಕ್ಷ ದೊರೆಯುತ್ತದೆ…’ ಎನ್ನುತ್ತಾರೆ ವಿದ್ವಾನ್ ಬಟುಕ್ ಪ್ರಸಾದ್ ಶಾಸ್ತ್ರಿ.

ಕಾಶಿಯ ಪ್ರಖಾಂಡ ಪಂಡಿತ ಶ್ರೀ ಬಟುಕ್ ಶಾಸ್ತ್ರಿ


ಆದರೆ ವೇದಾಂತಿಗಳು ‘ಋತೇ ಜ್ಞಾನಾನ್ ನ ಮುಕ್ತಿ:’ ಅಥವಾ ಜ್ಞಾನನವಿಹೀನನಾದವನಿಗೆ ಮುಕ್ತಿಯಿಲ್ಲ ಎಂದು ಹೇಳುತ್ತಾರಲ್ಲ, ಅದಕ್ಕೇ ಏನು ಹೇಳುವುದು? ಅಷ್ಟೇ ಏಕೆ, ಶಂಕರಾಚಾರ್ಯರೂ ಸಹ ಮುಕ್ತಿ ದೊರೆಯಲು ಜ್ಞಾನ ಅತ್ಯಗತ್ಯ ಎಂದು ಹೇಳಿಲ್ಲವೆ?

ಏನೇ ಇರಲಿ,
ಕಾಶಿ ಮೋಕ್ಷಕ್ಕೆ ಶಾರ್ಟ್‌ಕಟ್ ಅಂದ ಹಾಗಾಯಿತು. ನಾವು ಈ ಜನ್ಮದಲ್ಲಿ ಯಾವುದೇ ಪಾಪ ಮಾಡಿದರೂ ಸರಿ. ಕೊನೆಗಾಲದಲ್ಲಿ ಇಲ್ಲಿಗೆ ಬಂದು ಮರಣ ಹೊಂದಿ ಮೋಕ್ಷ ಪಡೆಯಬಹುದು ಅಲ್ಲವೆ?

ಈ ಮಾತನ್ನು ಕೇಳಿ ಶುಕ್ಲಾಜೊ ಜೋರಾಗಿ ನಕ್ಕುಬಿಟ್ಟರು.

‘ಸಾಧ್ಯವೇ ಇಲ್ಲ. ನಿಮಗೆ ಮೋಕ್ಷ ದೊರಕಬಾರದು ಎಂದು ನಿಮ್ಮ ಹಣೆಯಲ್ಲಿ ಬರೆದಿದ್ದರೆ ನೀವು ಇಲ್ಲಿಯವರೆಗೆ ಬರುವುದಕ್ಕೇ ಸಾಧ್ಯವಿಲ್ಲ. ಕಾಶಿರಾಜ್ಯಕ್ಕೆ ಬರುವುದು ಅಷ್ಟು ಸುಲಭವಲ್ಲ. ಇಲ್ಲೇ ಬದುಕಿ, ಆತ ಪಾಪಿಷ್ಠನಾಗಿದ್ದರೆ ಅವನ ಮರಣವಾಗುವುದು ಬೇರೆಲ್ಲೋ… ನೀವು ನಿಮ್ಮ ಪಾಪದ ಪ್ರಾಯಶ್ಚಿತ್ತಕ್ಕೆ ಮತ್ತೊಂದು ಜನ್ಮ ಎತ್ತಲೇಬೇಕು’

ಇದೆಲ್ಲಾ ಪ್ರಾರಂಭವಾದದ್ದು ಎಂದಿನಿಂದ? ಇದಕ್ಕೆ ವಿಜ್ಞಾನ/ಇತಿಹಾಸ ಏನು ಹೇಳುತ್ತದೆ?

‘ಕಾಶಿ ಒಂದು ವಿಶಿಷ್ಟವಾದ ಪ್ರದೇಶ. ಇಲ್ಲಿ ಗಂಗೆ ಸೌಮ್ಯವಾಗಿ, ವಿಶಾಲವಾಗಿ ಹರಿಯುತ್ತಾಳೆ. ಇಲ್ಲಿಯ ವಾತಾವರಣ ಉತ್ತಮವಾಗಿದೆ. ಒಳ್ಳೆಯ ಗಾಳಿ, ಒಳ್ಳೆಯ ನೀರು, ಒಳ್ಳೆಯ ಮಣ್ಣು ಜನವಸತಿಗೆ ಹೇಳಿ ಮಾಡಿಸಿದಂಥದ್ದು. ಇಲ್ಲಿ ಬುದ್ಧನ ಕಾಲದಿಂದಲೂ ವಸತಿ ಬೆಳೆದು ಬಂದಿದೆ. ಜೊತೆಗೆ ಎಲ್ಲಾ ಧರ್ಮದವರು ಬಂದು ಬೀಡುಬಿಟ್ಟಿದ್ದಾರೆ.

ಸಾರಾನಾಥ್ದಲ್ಲಿರುವ ‘ಸ್ತೂಪ’, ಬುದ್ಧ ಉಪದೇಶಿಸಿದ ಸ್ಥಳ!

ಬುದ್ಧ ತನ್ನ ಶಿಷ್ಯರಿಗೆ ಮೊದಲು ಉಪದೇಶ ಬೋಧಿಸಿದ್ದು ಬಳಿಯ ಸಾರಾನಾಥದಲ್ಲಿ. ಆದಿ ಶಂಕರಾಚಾರ್ಯರು ಇಲ್ಲಿ ಬಂದು ಹೋಗಿದ್ದರೆಂಬ ಪ್ರತೀತಿಯಿದೆ. ಹೀಗೆ ಕ್ರಮೇಣ ಇಲ್ಲಿ ಧಾರ್ಮಿಕ ವಾತಾವರಣ ಬೆಳೆದು, ಋಷಿಮುನಿಗಳು ಬಂದು ನೆಲೆಸಿದ್ದಾರೆ. ತಪಸ್ಸು/ ಸತ್ಸಂಗಗಳಲ್ಲಿ ನಿರತರಾಗಿದ್ದಾರೆ. ಹಾಗಾಗಿ, ಇಲ್ಲಿಗೆ ವಾನಪ್ರಸ್ಥಕ್ಕೆ ಬರುವವರ ಸಂಖ್ಯೆ ಹೆಚ್ಚಿತು. ಭರತ ತನ್ನ ಪೂರ್ವೀಕರ ಆಸ್ತಿಯ ಮೇಲೆ ಗಂಗೆಯನ್ನು ತಂದು ಹರಿಸಿದ ಪುರಾಣದ ಕಥೆ ನೆನಪಿಸಿಕೊಳ್ಳಿ. ಹೀಗೆ ಇದೆಲ್ಲದರ ಸುತ್ತ ನಂಬಿಕೆ ಬೆಳೆದು, ಸತ್ತವರನ್ನು ಇಲ್ಲೇ ಗಂಗೆಯ ದಡದಲ್ಲಿ ದಹನ ಮಾಡಿ ಬೂದಿಯನ್ನು ಗಂಗೆಯಲ್ಲಿ ತೇಲಿಬಿಡುವ ಪರಿಪಾಠ ಬೆಳೆಯಿತು… ನಂತರ ನಿಧಾನವಾಗಿ ಸಾವಿಗೆ, ಸಾವಿನ ನಂತರದ ವಿಧಿ ವಿಧಾನಗಳಿಗೆ ಪ್ರಾಮುಖ್ಯತೆ ಬಂದಿರಬೇಕು…’ ಹೀಗೆನ್ನುತ್ತಾರೆ ವಿಜ್ಞಾನಿ ಪ್ರೊ.ಬಿ.ಡಿ.ತ್ರಿಪಾಠಿ.

ವಾದ-ವಿವಾದಗಳು ಏನೇ ಇರಲಿ, ಅಶೋಕ ಚಕ್ರವರ್ತಿಯ ಕಾಲದಿಂದಲೂ ಗಯಾ, ಪ್ರಯಾಗ ಮತ್ತು ಕಾಶಿಗೆ ಸಾವಿಗೆ ವಿಶೇಷ ಸಂಬಂಧವಿದೆ. ಇಲ್ಲಿಗೆ ಸತ್ತರೆ, ಗಂಗೆಯಲ್ಲಿ ಚಿತಾಬಸ್ಮ ವಿಸರ್ಜನೆಗೊಂಡರೆ ಸ್ವರ್ಗ ಅಥವಾ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಬಲವಾಗಿ ಬೆಳೆಯಿತು.

‘ಪ್ರಯಾಗದಲ್ಲಿ ಅಶೋಕನ ಕಾಲದ ಸ್ಥಂಭವೊಂದು ಈಗಲೂ ಇದೆ. ಗಂಗೆಯ ದಡದಲ್ಲಿರುವ ಈ ಕಲ್ಲಿನ ಕಂಬದ ಮೇಲೆ ಲೋಹದ ಕೀಲು ಇದೆ. ಮೋಕ್ಷದ ಆಸೆ ಹೊತ್ತು ಬಂದವರು ಕಂಬ ಹತ್ತಿ ಕೀಲಿಗೆ ತಮ್ಮ ದೇಹವನ್ನು ಚುಚ್ಚಿಕೊಂಡು ಗರ ಗರ ತಿರುಗಿ, ಬದಿಯ ಗಂಗೆ ಬಿದ್ದು ಸಾಯುತ್ತಿದ್ದರು…’ ಎಂದು ಪ್ರಾಚ್ಯಸಂಶೋಧಕ ಡಾ ಡಿ.ಪಿ. ಶರ್ಮ ಹೇಳುತ್ತಾರೆ.

ಹಾಗೆಯೇ, ಕಾಶಿಯ ವಿಶ್ವನಾಥ ಮಂದಿರದ ಬದಿಯ ಗಲ್ಲಿಯಲ್ಲಿ ‘ಆತ್ಮಾಹುತಿ ಜಾಗ’ ಎಂದೇ ಪ್ರಸಿದ್ಧವಾಗಿದ್ದ ‘ಕಾಶಿ ಕರವಟ್ ಮಂದಿರ’ ಈಗಲೂ ಇದೆ. ಇದನ್ನು ನೋಡಿಕೊಳ್ಳುತ್ತಿರುವ ವೃದ್ಧ ಅಂಬಾಶಂಕರ್ ಉಪಾಧ್ಯಾಯ ಇದರ ಇತಿಹಾಸವನ್ನು ಬಿಡಿಸಿ ಇಡುತ್ತಾರೆ:

ಕಾಶಿ ಕರವಟ್! ಆತ್ಮಾಹುತಿಯ ಸ್ಥಳ


‘ಇದು ಒಂದು ಕಾಲಕ್ಕೆ ‘ಪ್ರಾಣಾಭಿಷೇಕ’ದ ಮಂದಿರವಾಗಿತ್ತು. ಪ್ರಾಣಾಭಿಷೇಕ ಎಂದರ ಪ್ರಾಣಾರ್ಪಣೆ. ಇಲ್ಲಿ ‘ಕರವಟ್’ ಹೆಸರಿನ ಶಸ್ತ್ರವಿತ್ತು (ಕರವಟ್ ಎಂದರೆ ಗರಗಸ). ಶಿವಲಿಂಗದ ಹತ್ತಿರದಲ್ಲೇ ನೆಲಕ್ಕೆ ಅದನ್ನು ಜೋಡಿಸಿದ್ದರಂತೆ. ಮೋಕ್ಷ ಅರಸಿ ಬಂದ ಭಕ್ತರು ಆ ಗರಗಸದ ಮೇಲೆ ಹಾರಿ ಪ್ರಾಣಾರ್ಪಣೆ ಮಾಡಿಕೊಳ್ಳುತ್ತಿದ್ದರು. ಅವರ ಕತ್ತರಿಸಿಹೋದ ದೇಹ ನಂತರ ಸುರಂಗದ ಮೂಲಕ ಸಾಗಿ ಗಂಗಾನದಿಯನ್ನು ಸೇರುತ್ತಿತ್ತು. ಬ್ರಿಟಿಷ್ ಆಡಳಿತ ಬಂದ ಮೇಲೆ, ‘ಸತಿ’ಪದ್ಧತಿ ರದ್ದಾದಂತೆ, ಈ ನರಬಲಿ ಕೂಡ ನಿಷೇಧಿಸಲ್ಪಟ್ಟಿತು. ಇಲ್ಲಿದ್ದ ಗರಗಸವನ್ನು ಬ್ರಿಟಿಷರು ಇಂಗ್ಲೆಂಡಿಗೆ ಒಯ್ದು ತಮ್ಮ ಸಂಗ್ರಹಾಲಯದಲ್ಲಿ ಇಟ್ಟಿದ್ದಾರೆ. ಕೆಲಕಾಲ ಇದನ್ನು ಮುಚ್ಚಿದ್ದರು. ಈಗ ನಿತ್ಯ ಪೂಜೆ ಪುನಸ್ಕಾರ ನಡೆಯುತ್ತಿದೆ. ಈ ಮಹತ್ವದ ಸ್ಥಳ ನೋಡಲು ಈಗಲೂ ಜನ ಬರುತ್ತಾರೆ. ಮೇಲಿನಿಂದ ಬಗ್ಗಿ ನೋಡಿದರೆ ಕೆಳಗೆ ಸುರಂಗ ಹಾಗೂ ಶಿವಲಿಂಗ ಕಾಣಿಸುತ್ತದೆ. ಅಲ್ಲಿಂದ ಗಂಗಾನದಿಗೆ ಸುರಂಗವಿದೆ. ಆದರೆ ಅಲ್ಲಿಗೆ ಯಾರಿಗೂ ಪ್ರವೇಶವಿಲ್ಲ…’

ಹೀಗೆ, ನೂರೈವತ್ತು ವರ್ಷಗಳ ಹಿಂದೆ ನರಬಲಿ ಬಂದ್ ಆದರೂ, ಜನ ಕಾಶಿಗೆ ಸಾಯಲು ಬರುವುದನ್ನು ಮಾತ್ರ ನಿಲ್ಲಿಸಲಿಲ್ಲ.

ತುಳಸೀಘಾಟ್‌ನ ಮಹಾಂತ ವೀರಭದ್ರ ಮಿಶ್ರಾ ಇಂಥವರನ್ನು ತಮ್ಮ ಬಾಲ್ಯದಲ್ಲಿ ನಿತ್ಯವೂ ಕಾಣುತ್ತಿದ್ದರಂತೆ. ಅದನ್ನು ಅವರ ಮಾತುಗಳಲ್ಲೇ ಕೇಳಬೇಕು.

‘ಕೊನೆಗಾಲದಲ್ಲಿ ಸಾಯಲು ಬರುವ ಜನ ಗಂಗೆಯ ದಡದಲ್ಲಿ ಠಿಕಾಣಿ ಹೂಡುತ್ತಿದ್ದರು… ನಾಲ್ಕೈದು ದಿನ, ಕೆಲವೊಮ್ಮೆ ವಾರಗಟ್ಟಲೆ ಇಲ್ಲೇ ಬಿಸಿಲು, ಗಾಳಿ, ಮಳೆಯೆನ್ನದೆ ಮೆಟ್ಟಲುಗಳ ಮೇಲೆ ಮಲಗಿದ್ದು ಪ್ರಾಣ ನೀಗುತ್ತಿದ್ದರು. ಇಂಥವರಿಗಾಗಿ ಕೆಲವು ಘಾಟ್‌ಗಳಲ್ಲಿ ಮಂಟಪಗಳೂ ತಲೆಯೆತ್ತಿದವು. ಕಾಲಾಂತರದಲ್ಲಿ ವ್ಯಾಪಾರೀಕರಣದ ಪ್ರಭಾವದಿಂದ ಗಂಗೆಯ ದಡದ ಉದ್ದಕ್ಕೂ ಲಾಡ್ಜಗಳು ನಿರ್ಮಾಣವಾದವು. ಮಂಟಪಗಳು ಕಾಣೆಯಾದವು. ಲಾಡ್ಜ್‌ಗಳನ್ನು ಕಟ್ಟಿರುವುದು ವ್ಯಾಪಾರಕ್ಕೆ. ಅವರು ಕೋಣೆಗಳನ್ನು ಸಾಯುವವರಿಗೆ ಕೊಡುವುದಿಲ್ಲ, ಇಂದಿನ ಆಸ್ಪತ್ರೆಗಳು ಕೂಡ ಹಣ ಮಾಡುವ ದಂಧೆಯಲ್ಲಿ ತೊಡಗಿವೆ. ಸಾಯುವವರಿಗೆ ಜಾಗವೆಲ್ಲಿದೆ?…’

ಇನ್ನೊಂದು ಸಾವಿನ ಮನೆ, ‘ಗಂಗಾಲಾಭ ಭವನ’


ಆಗ ಹೀಗೆ ಸಾಯುವವರ ರಕ್ಷಣೆಗೆ ಬಂದವರು ಬಿರ್ಲಾ. ಇವರು ಗಂಗೆಯ ದಡದಲ್ಲಿರುವ ಮಣಿಕರ್ಣಿಕಾ ಸ್ಮಶಾನದ ಪಕ್ಕದಲ್ಲೇ ನಾಲ್ಕು ಮಹಡಿಗಳ ಒಂದು ಕಟ್ಟಡವನ್ನು ಕೊಂಡು ಅದಕ್ಕೆ ‘ಗಂಗಾಲಾಭ್ ಮುಕ್ತಿಭವನ್’ ಎಂದು ನಾಮಕರಣ ಮಾಡಿದರು. ಸಾಯಲು ಬರುವ ಬಡವರಿಗಾಗಿ ಇಪ್ಪತ್ತಕ್ಕೂ ಹೆಚ್ಚು ಕೋಣೆಗಳನ್ನು ಕಟ್ಟಿದರು. ಯಾರು ಬೇಕಾದರೂ ಇಲ್ಲಿ ಉಳಿದುಕೊಂಡಿದ್ದು, ಮೋಕ್ಷಾರ್ಥಿಯ ಮರಣದ ನಂತರ ಕೋಣೆ ಖಾಲಿ ಮಾಡಿ ಹೋಗಬೇಕಿತ್ತು. ಎಲ್ಲರಿಗೂ ಉಚಿತ ವಾಸ್ತವ್ಯ.

1936 ರಲ್ಲಿ ಪ್ರಾರಂಭವಾದ ಈ ಗಂಗಾಲಾಭ್ ಭವನದಲ್ಲಿ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಜನ ಪ್ರಾಣ ಬಿಟ್ಟಿದ್ದಾರೆ. ಕಾಲಾಂತರದಲ್ಲಿ ಇದು ಅವರಿವರ ಕೈಗೆ ಹಸ್ತಾಂತರವಾಗಿ ಸರಿಯಾದ ನಿಗಾ ಇಲ್ಲದೆ ಅವ್ಯವಸ್ಥೆಯ ಅಗರವಾಯಿತು. ಈಗ ಇಲ್ಲಿ ಭಿಕ್ಷುಕರು, ಇಸ್ಪೀಟ್ ಆಡುವ ಪೋಲಿ ಹೈಕಳು ಸೇರಿಕೊಂಡಿದ್ದಾರೆ. ಇಂಥವರನ್ನು ಓಡಿಸಲು ಅಲ್ಲೇ ಒಬ್ಬ ಕುಳಿತಿರುತ್ತಾನೆ. ಆದರೆ ಸಾಯಲು ಅಲ್ಲಿಗೆ ಬರುವವರು ಮಾತ್ರ ಅಪರೂಪವಾಗಿದ್ದಾರೆ. ಹಳೆಯ ಅರಮನೆಯಂತಿರುವ ಇದು ಈಗ ಪಾಳುಬಿದ್ದಿದೆ. ಬಾಗಿಲು ಕಿಟಕಿಗಳಿಗೆ ಜೇಡ ಬಲೆ ಕಟ್ಟಿದೆ. ಆದರೆ ಗೋಡೆಗಳ ಮೇಲೆಲ್ಲಾ ಇಷ್ಟೂ ವರ್ಷ ಸತ್ತವರ ಹೆಸರು, ದಿನಾಂಕಗಳು ಮಸುಕು ಮಸುಕಾಗಿ ಕಾಣಿಸುತ್ತಿವೆ.

ಈಗ ಕಾಶಿಯಲ್ಲಿ ಸಾಯುವವರಿಗಾಗಿ ಹೆಚ್ಚು ಪ್ರಚಲಿತದಲ್ಲಿರುವ ಸ್ಥಳ ಎಂದರೆ ‘ಕಾಶೀಲಾಭ್ ಮುಕ್ತಿಭವನ’.

ಸಾವಿಗಾಗಿ ಕಾದು ಕುಳಿತ ಬಂಧುಗಳು...


1958ರಲ್ಲಿ ದಾಲ್ಮಿಯಾ ಟ್ರಸ್ಟ್ ಆಡಿಯಲ್ಲಿ ಕಾರ್ಯ ನಿರ್ವಹಿಸಲು ಪ್ರಾರಂಭವಾದ ಈ ವ್ಯವಸ್ಥೆ ಇಲ್ಲಿಯವರೆಗೂ ಯಾವುದೇ ತೊಡಕುಗಳಿಲ್ಲದೆ ನಡೆದುಕೊಂಡು ಬಂದಿದೆ. ಸುಮಾರು ನಲವತ್ತು ವರ್ಷಗಳಿಂದ ಇದರ ಉಸ್ತುವಾರಿ ಹೊತ್ತಿರುವ ಶುಕ್ಲಾ ಹೇಳುವ ಪ್ರಕಾರ:

“ಕಾಶಿಯಲ್ಲಿ ಸತ್ತರೆ ಮೋಕ್ಷ ಎಂದು ನಮ್ಮ ವೇದ, ಪುರಾಣಗಳಲ್ಲಿ ಹೇಳಿದೆ. ತುಲಸೀದಾಸರು ಬರೆದ ‘ರಾಮಚರಿತಮಾನಸ’ದಲ್ಲಿ ಕೂಡ ಇದರ ಪ್ರಸ್ತಾಪವಿದೆ. ದಾಲ್ಮಿಯಾ ತಾಯಿ 1957ರಲ್ಲಿ ಇಲ್ಲಿ ಕಾಲವಾದರು. ಆಗ ದಾಲ್ಮಿಯಾರಿಗೆ, ಸಾಯಲು ಸರಿಯಾದ ಸ್ಥಳವಿಲ್ಲದೆ ಪರದಾಡುವ ಮೋಕ್ಷಾರ್ಥಿಗಳ ಕಷ್ಟದ ಅರಿವಾಯಿತು. ಅಂಥವರಿಗಾಗಿ ಈ ಭವನವನ್ನು ಕೊಂಡು ‘ಕಾಶೀಲಾಭ್ ಮುಕ್ತಿಭವನ’ ಎಂದು ನಾಮಕರಣ ಮಾಡಿದರು. ಇಲ್ಲಿಗೆ ಬರುವ ಮೋಕ್ಷಾರ್ಥಿಗಳನ್ನು ನಾವು ದೇವರಂತೆ ಕಾಣುತ್ತೇವೆ. ದಿನಕ್ಕೆ ನಾಲ್ಕು ಬಾರಿ ನಮ್ಮಲ್ಲಿ ಆರತಿ ಆಗುತ್ತದೆ. ಮೋಕ್ಷಾರ್ಥಿಗಳು ಮಲಗಿರುವಲ್ಲಿಗೇ ನಮ್ಮ ಅರ್ಚಕರು ಹೋಗಿ ಮಂಗಳಾರತಿ ಕೊಟ್ಟು, ತುಳಸೀ ತೀರ್ಥ ಕೊಟ್ಟು ಬರುತ್ತಾರೆ. ಜೊತೆಗೆ ನಮ್ಮ ಕರ್ಮಾಚಾರಿಗಳು ನಿತ್ಯವೂ ಭಜನೆ ಮಾಡುತ್ತಾರೆ. ಮೋಕ್ಷಾರ್ಥಿಗಳ ಕಡೆಯವರೂ ಇದರಲ್ಲಿ ಭಾಗಿಯಾಗುತ್ತಾರೆ. ಆ ಭಜನೆಯ ಸದ್ದು ಎಲ್ಲ ಕೋಣೆಗೂ ತಲಪುವಂತೆ ಸೌಂಡ್ ಸಿಸ್ಟಂ ವ್ಯವಸ್ಥೆ ಮಾಡಿದ್ದೇವೆ. ಅಲ್ಲದೆ ಆಗಾಗ ಸಾವಿನಂಚಿನಲ್ಲಿವ ವ್ಯಕ್ತಿಯ ಬಳಿ ಕುಳಿತು ಪುರಾಣ ಪುಣ್ಯಕಥೆಗಳನ್ನು ಗಟ್ಟಿಯಾಗಿ ಓದುತ್ತೇವೆ… ಪ್ರಾಣಪಕ್ಷಿ ಹಾರಿ ಹೋಗುವ ಹೊತ್ತಿನಲ್ಲಿ ಅವರ ಕಣ್ಮುಂದೆ ಭಗವಂತನ ಚಿತ್ರ ಮೂಡಬೇಕು. ಕಿವಿಯಲ್ಲಿ ಅವನ ನೀನಾದ ಕೇಳಬೇಕು, ಇದೇ ನಮ್ಮ ಉದ್ದೇಶ…’

ಸಾವಿನ ಮನೆ ಕಟ್ಟಿದವರ ಉದ್ದೇಶ ತಿಳಿಯಿತು. ಆದರೆ ಸಾಯಲು ಬರುವವರ ಕಥೆ ಏನು?

ಸಂಸ್ಕೃತ ಪಂಡಿತ ಶ್ಯಾಮ ಸುಂದರ ಪಾಂಡೆ (ಈತ ಮೂರು ತಿಂಗಳು ಜೀವ ಹಿಡಿದಿದ್ದರು!)


ಆತ ಶ್ಯಾಂಸುಂದರ್ ಪಾಂಡೆ. ವಯಸ್ಸು ಸುಮಾರು ಎಂಬತ್ತು ವರ್ಷ. ಆತನ ಕೊನೆಯ ಕೊನೆಯ ಕ್ಷಣಕ್ಕಾಗಿ ಅವನ ಪತ್ನಿ ಮತ್ತು ಮೊಮ್ಮಗ ಕಾದಿದ್ದಾರೆ. ಪಾಂಡೆ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಮೊಮ್ಮಗನನ್ನು ಮಾತಾಡಿಸಿದೆವು.
“ನಮ್ಮ ಊರು ದೇವರಿಯಾ. ಇಲ್ಲಿಂದ ಸುಮಾರು ಆರುನೂರು ಕಿಲೋ ಮೀಟರ್ ಆಗುತ್ತದೆ. ನನ್ನ ತಾತ ದೊಡ್ಡ ವಿದ್ವಾಂಸರು. ದೇವರಿಯಾ ಕಾಲೇಜಿನಲ್ಲಿ ಸಂಸ್ಕೃತದ ಲೆಕ್ಚರರ್ ಆಗಿದ್ದರು. ನಮ್ಮ ವಂಶಸ್ಥರು ಕಾಶಿಗೆ ಬಂದು ಮೋಕ್ಷ ಪಡೆಯುವುದು ನಡೆದುಕೊಂಡುಬಂದಿರುವ ವಾಡಿಕೆ. ಕೆಲವು ತಿಂಗಳುಗಳ ಹಿಂದೆ ನಮ್ಮ ತಾತ ಮನೆಯವರನ್ನೆಲ್ಲ ಸೇರಿಸಿ, ನನ್ನ ಕಾಲ ಸಮೀಪಿಸುತ್ತಿದೆ, ನಾನು ಕಾಶಿಗೆ ಹೋಗಿ ಮುಕ್ತಿ ಹೊಂದಬೇಕು, ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿರಿ ಎಂದರು. ಅಷ್ಟರಲ್ಲಿ ನಮ್ಮ ಅಕ್ಕನ ಮದುವೆ ತಯಾರಿ ನಡೆದಿತ್ತು. ಹಾಗಾಗಿ ಮದುವೆ ಮುಗಿಯಲಿ ಎಂದು ಕಾದೆವು. ಮದುವೆ ಮುಗಿದ ಮಾರನೇ ದಿನ ಮಂಗಳವಾರ. ನಮ್ಮ ತಾತ, ನಾನು ಕಾಶಿಗೆ ಹೋಗಬೇಕು ಎಂದು ಹಠ ಹಿಡಿದರು. ಮಂಗಳವಾರ ಬೇಡ ಎಂದರೂ ಕೇಳಲಿಲ್ಲ. ನನ್ನನ್ನು ದೇವರು ಕರೆಯುತ್ತಿದ್ದಾನೆ, ನಾನು ಹೋಗಲೇ ಬೇಕು ಎಂದು ರಚ್ಚೆ ಹಿಡಿದರು. ವಿಧಿಯಿಲ್ಲದೆ ಇಲ್ಲಿಗೆ ಕರೆದುಕೊಂಡು ಬಂದೆವು. ನಾವು ಇಲ್ಲಿಗೆ ಬಂದು ಒಂದು ತಿಂಗಳಾಗುತ್ತಾ ಬಂತು… ಇನ್ನೂ ಮುಕ್ತಿ ದೊರೆತಿಲ್ಲ. ಕಳೆದ ಒಂದು ವಾರದಿಂದ ತಾತ ಮಾತುಕತೆ ಕೂಡ ನಿಲ್ಲಿಸಿಬಿಟ್ಟಿದ್ದಾರೆ. ದಿನಕ್ಕೆ ಒಂದೆರಡು ಚಮಚ ಹಾಲು, ಗಂಗಾಮೃತ ಬಿಟ್ಟು ಏನೂ ಸೇವಿಸುತ್ತಿಲ್ಲ. ನಾವೂ ಕಾದಿದ್ದೇವೆ. ವಿಶ್ವನಾಥ್ ಮಹಾರಾಜ್ ಇವರನ್ನು ಬೇಗ ಕರೆಸಿಕೊಂಡರೆ ನಾವು ಬೇಗ ನಮ್ಮ ಊರಿಗೆ ಹೋಗಬಹುದು…”

ಇದು ಪಂಡಿತೋತ್ತಮರ ಕಥೆ. ಇನ್ನು ಪಾಮರರ ಕಥೆ ಕೇಳಬೇಕು ನೀವು.

ಈತ ಸಾಯಲು ಬಂದಿಲ್ಲ, ಸಾಯುತ್ತಿರುವ ಪತ್ನಿಯನ್ನು ಕರೆತಂದಿದ್ದಾನೆ!


ಈತನ ಹೆಸರು ರಾಮನಾರಾಯಣ. ಊರು ಗೋರಖ್‌ಪುರ. ವೃತ್ತಿಯಿಂದ ರೈತ. ಸಾವಿನ ಅಂಚಿನಲ್ಲಿರುವ ತನ್ನ ಪತ್ನಿಯನ್ನು ಇಲ್ಲಿಗೆ ಮೋಕ್ಷಕ್ಕಾಗಿ ಕಾದಿದ್ದಾನೆ. ಇವನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರು ಯಾರೂ ಜೊತೆಯಲ್ಲಿ ಬಂದಿಲ್ಲ. ಅವರಿಗೆ ಅಪ್ಪ-ಅಮ್ಮನ ಬಗ್ಗೆ ವಿಶ್ವಾಸ ಅಷ್ಟಕಷ್ಟೇ. ನಾಳೆ ತಾಯಿ ಸತ್ತರೂ ಬರುತ್ತಾರೋ ಇಲ್ಲವೋ ಗೊತ್ತಿಲ್ಲ ಎನ್ನುವ ಈತನ ಜೊತೆ ಬಂದಿರುವ ಇನ್ನೊಬ್ಬಾಕೆ ಅದೇ ಊರಿನ ದೂರದ ಬಂಧು. “ಇದ್ದಕ್ಕಿದ್ದಂತೆಯೇ ಹೆಂಡತಿಯ ಆರೋಗ್ಯ ಹದಗೆಟ್ಟಿತು. ಡಾಕ್ಟರ್‌ಗೆ ತೋರಿಸಿದೆವು.. ಅವರು ಬಂದು ಔಷಧಿ ಮಾತ್ರೆ ಕೊಟ್ಟರು. ಆದರೂ ಸರಿಹೋಗಲಿಲ್ಲ… ಇನ್ನು ಉಳಿಯುವುದು ಕಷ್ಟ ಎಂದು ಗೊತ್ತಾಯಿತು. ನಮ್ಮ ಊರಿನ ಸುತ್ತ-ಮುತ್ತಲೆಲ್ಲಾ ಹೀಗೆ ಸಾಯುವ ಹಂತದಲ್ಲಿರುವವರನ್ನು ಕಾಶಿಗೆ ಕರೆದುಕೊಂಡು ಬರುವುದು ವಾಡಿಕೆ. ಇಲ್ಲಿ ಸತ್ತರೆ ಮೋಕ್ಷ ಸಿಗುತ್ತದೆ ಎಂದು ರಾಮಾಯಣದಲ್ಲಿ ಬರೆದಿದೆ. ನನ್ನ ಪತ್ನಿಗೆ ಈ ಜೀವನದಿಂದ ಮುಕ್ತಿ ದೊರೆಯಲಿ ಎಂದು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ… ಇನ್ನು ಒಂದೆರಡು ದಿನದಲ್ಲಿ ದೊರೆಯಬಹುದು ಎಂದು ಕರ್ಮಚಾರಿಗಳು ಹೇಳಿದ್ದಾರೆ. ಕಾದಿದ್ದೇವೆ.. ನೋಡಬೇಕು…”

ಮೋಕ್ಷ ಅರಸಿ ಪತಿಯೊಂದಿಗೆ ಬಂದಿರುವ ಪತ್ನಿ...


ನಾವು ಅಲ್ಲಿ ಇದ್ದ ಮಾರನೆಯ ದಿನವೇ ಆಕೆಯ ಪ್ರಾಣ ಪಕ್ಷಿ ಹಾರಿ ಹೋಯಿತು. ಮುದುಕ ಹೇಳಿದಂತೆ ಆತನ ಮಕ್ಕಳು ಯಾರೂ ಬರಲಿಲ್ಲ. ಕೇವಲ ಅರ್ಧ ಗಂಟೆಯಲ್ಲಿ ಚಟ್ಟದ ಬಂಡಿ ಕಟ್ಟಲಾಯಿತು (ರೆಡಿಮೇಡ್ ಚಟ್ಟಗಳು, ಚಟ್ಟ ಹೊರಲು ಜನ ಎಲ್ಲವೂ ದೊರೆಯುತ್ತವೆ). ‘ರಾಮನಾಮ ಸತ್ಯ ಹೈ’ ಎಂಬ ಜಪದೊಂದಿಗೆ ಅಂತಿಮ ಪ್ರಯಾಣದ ಗಾಡಿ ಹೊರಟಿತು. ರಾಮನಾಮವೇ ಸತ್ಯ ಎಂದು ಕೂಗುವ ಧ್ವನಿಯಲ್ಲಾಗಲೀ, ಹೆಣ ಹೊತ್ತು ನಡೆಯುವ ಪರಿಯಲ್ಲಾಗಲೀ ದುಃಖದ ಛಾಯೆ ಕಂಡುಬರಲಿಲ್ಲ. ನಾವೂ ಶವಯಾತ್ರೆಯಲ್ಲಿ ಪಾಲ್ಗೊಂಡೆವು. ಅಲ್ಲಿಂದ ಮಣಿಕರ್ಣಿಕಾ ಘಾಟ್‌ಗೆ ಸುಮಾರು ಒಂದು ಕಿಲೋ ಮೀಟರ್‌ನ ಹಾದಿ…
ಮಣಿಕರ್ಣಿಕಾದಲ್ಲಿ ದೊಂಡರಾಜ ಎಂಬವನ ವಂಶಸ್ಥರಿದ್ದಾರೆ. ಆ ಸ್ಮಶಾನದ ಮಾಲೀಕತ್ವ ಅವರದ್ದೇ. ಅವರೇ ಬೆಂಕಿಯನ್ನು ಕೊಡುವವರು. ಅದಕ್ಕೆ ಇವರು ಶುಲ್ಕ ನೀಡಬೇಕು. ಸೌದೆ, ಶವದ ವಸ್ತ್ರ, ತುಪ್ಪ, ಸುಗಂಧದ ಪುಡಿ, ಪುರೋಹಿತರು ಇತ್ಯಾದಿ ಎಂದೆಲ್ಲ ಸುಮಾರು ಮೂರು ಸಾವಿರ ಖರ್ಚಾಯಿತು. ಒಂದುಗಂಟೆಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದು ಮುದುಕಿಯ ದೇಹ ಪಂಚಭೂತಗಳಲ್ಲಿ ಲೀನವಾಯಿತು.

ಮಣಿಕರ್ಣಿಕಾದಿಂದ ಹಿಂತಿರುಗಿ ಬಂದಮೇಲೆ ಮುದುಕ ಊರಿಗೆ ಹೊರಟ, ಹೊರಡುವ ಮುಂಚೆ ತನ್ನ ವಿಳಾಸ ಬರೆಸಿ, ನೀವು ತೆಗೆದ ಫೋಟೋ ಪೋಸ್ಟ್‌ನಲ್ಲಿ ಕಳುಹಿಸಿಕೊಡಿ ಎಂದು ಹೇಳುವುದನ್ನು ಮರೆಯಲಿಲ್ಲ.

ಅಲ್ಲೇ ಚತ್ತೀಸ್‌ಗಡ್‌ನ ಮಣಿರಾಮ್ ಚಂದ್ರಾಕರ್ ಕೂಡ ಸಿಕ್ಕ. ತನ್ನ ತಾಯಿಗೆ ಮೋಕ್ಷ ಕೊಡಿಸುವುದು ಇವನ ಉದ್ದೇಶ:

ಮಣಿರಾಮ - ಆಧುನಿಕ ಶ್ರವಣಕುಮಾರ! - ಆಧುನಿಕ ಶ್ರವಣಕುಮಾರ!


“ನಾನು ನನ್ನ ತಮ್ಮಂದಿರನ್ನು ಕಷ್ಟ ಪಟ್ಟು ಸಾಕಿದ್ದೇ ನಮ್ಮ ತಾಯಿ. ನಮ್ಮ ತಂದೆ ನಾವೆಲ್ಲ ತುಂಬ ಚಿಕ್ಕವರಿಗಿದ್ದಾಗಲೇ ತೀರಿ ಹೋದರು. ಒಂದೇ ಒಂದು ತುಂಡು ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸಿದೆವು. ಇಂದು ನಮ್ಮ ಈ ಉತ್ತಮ ಸ್ಥಿತಿಗೆ ನಮ್ಮ ತಾಯಿ ಕಾರಣ. ಆಕೆಯ ಕೊನೆಯ ಇಚ್ಛೆಯಂತೆ ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ. ಜೊತೆಯಲ್ಲಿ ನನ್ನ ಪತ್ನಿ ಹಾಗೂ ತಂಗಿ ಬಂದಿದ್ದಾರೆ. ಊರಿಂದ ಬರುವಾಗ ಅಕ್ಕಿ, ಕಾಳು, ಬೇಳೆ ಇತರೆ ದಿನಸಿ ಎಲ್ಲಾ ತಂದಿದ್ದೇವೆ. ಬರೀ ತರಕಾರಿಯನ್ನು ಇಲ್ಲಿ ಕೊಳ್ಳುತ್ತೇವೆ. ಇಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡುತ್ತೇವೆ. ದಿನಕ್ಕೆ ಸುಮಾರು ನಲವತ್ತು ಐವತ್ತು ರೂಪಾಯಿ ಖರ್ಚಾಗುತ್ತದೆ. ಬೆಳಗ್ಗೆಯಿಂದ ತಾಯಿಯ ಮುಂದೆ ಕುಳಿತು ಪುರಾಣ ಪುಣ್ಯ ಕಥೆಗಳನ್ನು ಓದುತ್ತೇನೆ. ಅವರ ಕಿವಿಗೆ ದೇವರ ವಿಚಾರ ಬಿಟ್ಟು ಬೇರೆ ಯಾವುದೂ ಕೇಳಬಾರದು ಎಂದು ಇಲ್ಲಿಯ ಕರ್ಮಚಾರಿಗಳು ಹೇಳಿದ್ದಾರೆ. ನಮ್ಮ ತಾಯಿ ಕೊನೆಯ ಉಸಿರು ಎಳೆಯಲು ಎಷ್ಟು ದಿನವಾದರೂ ಪರವಾಗಿಲ್ಲ ಅಲ್ಲಿಯವರೆಗೂ ಕಾಯುತ್ತೇನೆ… ನಾಳೆ ನಾನು ಸಾಯುವ ಹಂತ ಬಂದಾಗಲೂ ನಾನು ಇಲ್ಲೇ ಬರುತ್ತೇನೆ…’ ಎಂದು ಒಂದೇ ಉಸುರಿಗೆ ಹೇಳಿದ.

ಹೀಗೆ, ಇಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ. ಇವರೆಲ್ಲರ ಉದ್ದೇಶ ಕಾಶಿಯಲ್ಲಿ ಮೋಕ್ಷ ಹೊಂದುವುದು. ಇವರ ಮಧ್ಯೆ ನಮಗೆ ಮೋಕ್ಷ ಬೇಡ ಎನ್ನುವವರೂ ಇದ್ದಾರೆ. ಜೈನ ಧರ್ಮೀಯರು ಈ ಮೋಕ್ಷದ ಪರಿಕಲ್ಪನೆಯನ್ನೇ ಒಪ್ಪುವುದಿಲ್ಲ. ಹಾಗೆಯೇ ಬೌದ್ಧ ಧರ್ಮೀಯರೂ ಕೂಡ. ನನಗೂ ಮೋಕ್ಷ ಬೇಡ ಎಂದ ಸಂತ ಕಬೀರ್ ಕೂಡ ಹುಟ್ಟಿದ್ದು ಇಲ್ಲೇ!

ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಕಬೀರನಿಗೆ ‘ರಾಮ ರಹೀಮ ಅಲ್ಲಾ’ ಎಲ್ಲರೂ ಒಂದೇ. ಕಾಶಿಯಲ್ಲಿ ಸತ್ತರೆ ಮುಕ್ತಿ, ಮಗಹರ್‌ನಲ್ಲಿ ಸತ್ತವ ಕತ್ತೆಯಾಗಿ ಹುಟ್ಟುತ್ತಾನೆ ಎಂಬ ನಂಬಿಕೆ ಜನಗಳಲ್ಲಿ ಬೇರೂರಿತ್ತು. ಬೇಕೆಂದೇ ಕಬೀರರು ಕಾಶಿಯನ್ನು ಬಿಟ್ಟು ಮಗಹರ್‌ನಲ್ಲಿ ನೆಲಸುತ್ತಾರೆ. ಕೆಲವರು ಈ ಕುರಿತು ಪ್ರಶ್ನಿಸಿದಾಗ, ‘ಕಬೀರ ಕಾಶಿಯಲ್ಲಿ ಸತ್ತರೆ ರಾಮನ ಹೆಗ್ಗಳಿಕೆಯೇನು?” ಎಂದು ಮರುಸವಾಲು ಮಾಡುತ್ತಾರೆ. ‘ರಾಮನಲ್ಲಿ ನಿಜವಾದ ನಂಬಿಕೆಯಿದ್ದವನಿಗೆ ಕಾಶಿ ಮತ್ತು ಮಗಹರ್ ಎರಡೂ ಒಂದೇ, ಕಾಶಿಯಲ್ಲಿ ಯಾರಿಗೆ ಬೇಕಾದರೂ ಮುಕ್ತಿ ಸಿಗುತ್ತದೆ, ಆದರೆ ಮಗಹರ್‌ನಲ್ಲಿ ಸತ್ತವನಿಗೆ ಮುಕ್ತಿ ದೊರಕಿದಾಗಲೇ ರಾಮನಿಗೆ ಹೆಗ್ಗಳಿಕೆ…’ ಎಂಬುದು ಅವರ ವಾದವಾಗಿತ್ತು.

ಸಾಲು ಸಾಲು ಚಿತೆಗಳು...


ಅದೇನೇ ಇರಲಿ, ಕಾಶಿ ಒಂದು ಜೀವಂತ ಮ್ಯೂಸಿಯಮ್ ಇದ್ದ ಹಾಗೆ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ರೋಮ್ ನಂತರದ ಅತಿ ಪುರಾತನ ನಗರವೆಂದರೆ ಕಾಶಿ ಎಂದು ಹೇಳಲಾಗುತ್ತದೆ. ಚಾರಿತ್ರಿಕವಾಗಿಯೂ ಕೂಡ ಕಾಶಿಯ ಮೇಲೆ ಅನೇಕ ದಂಡಯಾತ್ರೆಗಳು ಜರುಗಿವೆ. ಕ್ರಿ.ಶ. ಹನ್ನೊಂದನೆಯ ಶತಮಾನದಿಂದ ಹದಿನೇಳನೇ ಶತಮಾನದವರೆಗೆ ಮುಸ್ಲಿಂ ದೊರೆಗಳ ದಾಳಿಗೆ ಸಿಲುಕಿ ನಲುಗಿದೆ. ಇಲ್ಲಿಯ ಬಾಹ್ಯ ಜೀವನ ಪದೇ ಪದೆ ಅಸ್ತವ್ಯಸ್ತವಾಗಿದೆ, ಗುಡಿಗೋಪುರಗಳು ಧ್ವಂಸವಾಗಿವೆ, ಲೂಟಿ ದಂಗೆಯಿಂದ ಜನ ತತ್ತರಿಸಿದ್ದಾರೆ. ಮುಸ್ಲಿಮರ ದಬ್ಬಾಳಿಕೆಯಲ್ಲಿ, ಇಂಗ್ಲಿಷರ ಹಿಡಿತದಲ್ಲಿ ನಲುಗಿದ್ದಾರೆ. ಇಷ್ಟೆಲ್ಲಾ ಸ್ಥಿತ್ಯಂತರಗಳನ್ನು ಕಂಡ ಕಾಶಿಯಲ್ಲಿ ಇಂದೂ ‘ವಿಶ್ವನಾಥನು ಮುಕ್ತಿಯನ್ನು ದೊರಕಿಸಿಕೊಡುವನು’ ಎಂಬ ನಂಬಿಕೆಯನ್ನು ಮಾತ್ರ ಕಾಶೀವಾಸಿಗಳು ಕಳೆದುಕೊಂಡಿಲ್ಲ. ಆ ನಂಬಿಕೆ ಜನಮನದಲ್ಲಿ ಆಳವಾಗಿ ಬೇರೂರಿದೆ.

ಇದು ಜೀವನ, ಇದುವೇ ಜೀವನ...

(ಇದು ಪ್ರಜಾವಾಣಿಯ ದೀಪಾವಳಿ ವಿಶೇಷಾಂಕಕ್ಕಾಗಿ ಬರೆದ ಲೇಖನ)

‘ಕತೆ’ಯಾದ ಕಲಾವಿದ!

ಅಂದು, ಸಂಜೆ ಏಳೂವರೆಯ ಸಮಯ.

ಬೆಂಗಳೂರಿನ ಜಯನಗರದ ಐದನೇ ಬ್ಲಾಕ್‌ನ ಮನೆಯ ಹೊರಗಿನ ಅಂಗಳದಲ್ಲಿ ಕುಳಿತು ಅವರು ತದೇಕಚಿತ್ತದಿಂದ ನಾನು ಹೇಳುತ್ತಿದ್ದ ಕತೆ ಕೇಳುತ್ತಿದ್ದರು. ಕತೆ ಕೇಳುವುದಕ್ಕೆ ಮುಂಚೆಯೇ ತಮ್ಮ ಸಹಾಯಕನನ್ನು ಕರೆದು, ಮಧ್ಯೆ ನನ್ನನ್ನು ಡಿಸ್ಟರ್ಬ್ ಮಾಡಬೇಡಿ ಎಂಬ ಸೂಚನೆ ಕೂಡ ಕೊಟ್ಟಿದ್ದರು. ನಂತರ ಸುಮಾರು ಎರಡು ಗಂಟೆಗಳ ಕಾಲ ಕುಳಿತಲ್ಲಿಂದ ಅಲ್ಲಾಡಲಿಲ್ಲ ಹಾಗೂ ಯಾವುದೇ ಫೋನ್ ಕರೆಯನ್ನು ಕೂಡ ಸ್ವೀಕರಿಸಲಿಲ್ಲ. ಕತೆ ಹೇಳುವುದು ಮುಗಿದ ಮೇಲೆ ಆರಾಮ ಕುರ್ಚಿಯ ಹಿಂದೆ ಒರಗಿ ಒಮ್ಮೆ ದೀರ್ಘವಾಗಿ ಉಸಿರನ್ನು ಎಳೆದುಕೊಂಡು ಹೇಳಿದ ಮಾತು, ‘ವಾಹ್! ನಿಮ್ಮ ಕತೆ ಕೇಳಿ, ಒಂದು ಒಳ್ಳೇ ಸಿನಿಮಾ ನೋಡಿದ ಹಾಗಾಯಿತು’ ಎಂದು. ಆ ಮಾತು ಹೃದಯದಾಳದಿಂದ ಬಂದದ್ದು ಎಂಬುದು ಅದರ ಧ್ವನಿಯಿಂದಲೇ ಅರಿವಾಗುತ್ತಿತ್ತು. ಈ ಮಾತುಗಳನ್ನು ಹೇಳಿದ್ದು ವಿಷ್ಟುವರ್ಧನ್. ಈ ಪ್ರಸಂಗ ನಡೆದದ್ದು ಇಂದಿಗೆ ಸುಮಾರು ಎರಡೂವರೆ ವರ್ಷಗಳ ಹಿಂದೆ. ಆಗ ಅವರು ನನ್ನಿಂದ ಕೇಳಿದ ಕತೆ ಎಸ್.ಎಲ್.ಭೈರಪ್ಪನವರ ‘ನಿರಾಕರಣ’ ಕಾದಂಬರಿಯದ್ದು.

ಆಗ ತಾನೇ ನಾನು ‘ವಿಮುಕ್ತಿ’ ಚಿತ್ರ ಮಾಡಿ ಮುಗಿಸಿದ್ದೆ. ಮುಂದಿನ ಚಿತ್ರದ ಕುರಿತು ಯೋಚನೆ ಶುರುವಾಗತೊಡಗಿತ್ತು. ‘ಬೆಟ್ಟದ ಜೀವ’ ಕಾದಂಬರಿಯೂ ಸೇರಿದಂತೆ ಇತರೆ ಎರಡು ಕಾದಂಬರಿಗಳು ಮನಸ್ಸಿನಲಿದ್ದವು. ಅದರಲ್ಲಿ ಒಂದು ‘ನಿರಾಕರಣ’. ಅದನ್ನು ನಾಲ್ಕೈದು ಬಾರಿ ಓದಿದ್ದೆ. ನನಗೆ ತುಂಬ ಇಷ್ಟವಾದ ಕಾದಂಬರಿಗಳಲ್ಲಿ ಅದೂ ಒಂದು. ಅದನ್ನು ತೆರೆಗೆ ತರಲು ಸಮರ್ಥ ಕಲಾವಿದರ ಅವಶ್ಯಕತೆ ಇತ್ತು. ನಾನು ಅವರ ಹುಡುಕಾಟದಲ್ಲಿದ್ದೆ. ಆಗ ಸ್ನೇಹಿತರೊಬ್ಬರು ವಿಷ್ಟುವರ್ಧನ್ ಅವರನ್ನು ಕೇಳಿ ನೋಡಿ ಎಂದಿದ್ದರು. ‘ಏ, ಅವರೀಗ ಸ್ಟಾರ್! ಸಾಹಸಸಿಂಹ ಬೇರೆ… ಅವರೆಲ್ಲ ಇಂಥ ಚಿತ್ರಗಳಲ್ಲಿ ಅಭಿನಯಿಸುತ್ತಾರೆಯೇ?’ ಎಂಬ ನನ್ನ ಅನುಮಾನ ವ್ಯಕ್ತಪಡಿಸಿದ್ದೆ. ಅದಕ್ಕೆ ನನ್ನ ಸ್ನೇಹಿತರು, ‘ವಿಷ್ಟು ಅವರು ಚಿತ್ರರಂಗಕ್ಕೆ ಬಂದದ್ದೇ ಭೈರಪ್ಪನವರ ವಂಶವೃಕ್ಷದಿಂದ, ಈಗ ಅದೇ ಕಾದಂಬರಿಕಾರರ ಚಿತ್ರದಲ್ಲಿ ಅವರು ಏಕೆ ನಟಿಸಬಾರದು? ಅದು ಅವರ ಇನ್ನೂರನೇ ಚಿತ್ರವಾದರೆ ಇನ್ನೂ ಒಳ್ಳೆಯದು. ಅದೂ ಅಲ್ಲದೆ ಕಲಾವಿದ ಹಾಗೂ ಕತೆಗಾರ ಇಬ್ಬರೂ ಮೈಸೂರಿನವರು…’ ಎಂದು ನನ್ನಲ್ಲಿ ಸಣ್ಣ ಆಸೆಯ ಬೀಜ ಬಿತ್ತಿದರು.

ನಾನು ಯೋಚಿಸಿದೆ. ಯಾಕಾಗಬಾರದು ಎನ್ನಿಸಿತು. ಅವರು ಈ ಪ್ರಯತ್ನಕ್ಕೆ ಒಪ್ಪುತ್ತಾರೆ ಎಂಬ ಬಗ್ಗೆ ನನ್ನಲ್ಲಿ ಬಲವಾದ ನಂಬಿಕೆ ಏನೂ ಇರಲಿಲ್ಲ. ಆದರೂ ಒಮ್ಮೆ ಕಲ್ಲೆಸೆದು ನೋಡೋಣ ಎಂದು ಅವರನ್ನು ಸಂಪರ್ಕಿಸಿ ಕತೆ ಹೇಳಲು ನಿರ್ಧರಿಸಿದೆ.

ಈ ಹಿಂದೆ ನಾನು ವಿಷ್ಣುವರ್ಧನ್ ಅವರನ್ನು ಹಲವಾರು ಸಂದರ್ಭದಲ್ಲಿ ಭೇಟಿಯಾಗಿದ್ದೆ. ಎಂಬತ್ತರ ದಶಕದಲ್ಲಿ ನಾನು ಪತ್ರಕರ್ತನಾಗಿದ್ದಾಗ ವಿಷ್ಣುವರ್ಧನ್ ಅವರನ್ನು ‘ದೇವ’ ಚಿತ್ರದ ಸೆಟ್‌ನಲ್ಲಿ ಸುದ್ದಿ ಸಂಗಾತಿ ಪತ್ರಿಕೆಗಾಗಿ ಸಂದರ್ಶಿಸಿದ್ದೆ. ನಂತರ ಆಗಾಗ ಸಭೆ, ಸಮಾರಂಭಗಳಲ್ಲಿ ನಮಸ್ಕಾರ ವಿನಿಮಯ ಆಗುತ್ತಿತ್ತು. ತೊಂಬತ್ತರ ದಶಕದ ಅಂತ್ಯದಲ್ಲಿ ಟಿ.ಎನ್.ಸೀತಾರಾಮ್ ಜೊತೆ ಸೇರಿ ‘ಮಾಯಾಮೃಗ’ ಧಾರಾವಾಹಿ ಮಾಡುತ್ತಿದ್ದಾಗ ಒಮ್ಮೆ ವಿಷ್ಣುವರ್ಧನ್ ಸ್ವತಃ ತಮ್ಮ ಹಸ್ತಾಕ್ಷರದಲ್ಲಿ ಒಂದು ಪತ್ರ ಬರೆದು ಕಳುಹಿಸಿದ್ದರು. ನಾನು ಮಾಯಾಮೃಗದ ಖಾಯಂ ವೀಕ್ಷಕ, ಧಾರಾವಾಹಿ ತುಂಬ ಚನ್ನಾಗಿದೆ ಎಂಬ ಪ್ರಶಂಸೆಯ ಮಾತನಾಡಿದ್ದರು. ಅದನ್ನು ಓದಿ ನಮಗೆ ಅಚ್ಚರಿಯಾಗಿತ್ತು. ಒಂದು ಕೆಲಸ/ಕೃತಿ ಮೆಚ್ಚಿಗೆಯಾದಾಗ ಅದರ ಕರ್ತೃವಿಗೆ ಅಭಿನಂದನೆ ಸಲ್ಲಿಸುವ ಪ್ರಯತ್ನವನ್ನು ಎಷ್ಟು ಜನ ಮಾಡುತ್ತಾರೆ? ಅಂಥವರ ನಡುವೆ ವಿಷ್ಣು ವಿಭಿನ್ನವಾಗಿ ಕಂಡಿದ್ದರು.

ಆಮೇಲೆ ನಾನು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷನಾಗಿದ್ದಾಗ ನಮ್ಮ ಒಂದು ಸಮಾರಂಭಕ್ಕೆ ಅತಿಥಿಯಾಗಿ ಬಂದಿದ್ದರು. ಅಷ್ಟರಲ್ಲಾಗಲೇ ನನ್ನ ‘ಮುನ್ನುಡಿ’ ‘ಅತಿಥಿ’ ಚಿತ್ರಗಳು ಬಂದಿದ್ದವು. ನಿಮ್ಮ ಚಿತ್ರಗಳನ್ನು ನೋಡುವ ಅಸೆ ಇದೆ, ಆದರೆ ಸಾಧ್ಯವಾಗಿಲ್ಲ ಎಂದಿದ್ದರು. ಮರುದಿನವೇ ನಾನು ಅವರ ಮನೆಗೆ ನನ್ನ ಚಿತ್ರದ ಡಿವಿಡಿಗಳನ್ನು ಕಳುಹಿಸಿದ್ದೆ. ಅದನ್ನು ಅವರು ನೋಡಿದರೋ, ಬಿಟ್ಟರೋ ಗೊತ್ತಾಗಲಿಲ್ಲ. ಹೀಗೇ ಇನ್ನೊಂದು ಸಂದರ್ಭದಲ್ಲಿ ರಾತ್ರಿಯ ಔತಣ ಕೂಟವೊಂದರಲ್ಲಿ ಪಕ್ಕ ಕುಳಿತು ಆಧ್ಯಾತ್ಮ, ಅಲೌಕಿಕ ಎಂದು ಗಂಟೆಗಟ್ಟಲೆ ಮಾತಾಡಿದ್ದರು. ಅದನ್ನು ಕಂಡ ಪತ್ರಕರ್ತ ಮಿತ್ರರು, ‘ವಿಷ್ಣು ಜೊತೆ ಅಷ್ಟೊಂದು ಮಾತಾಡ್ತಿದ್ರಿ, ಅವರು ನಿಮಗೆ ಕಾಲ್‌ಶೀಟ್ ಕೊಡೋ ಹಾಗೆ ಕಾಣಿಸುತ್ತೆ’ ಎಂದು ಕಿಚಾಯಿಸಿದ್ದರು.

ಚಿತ್ರನಿರ್ಮಾಪಕ ಮಂಜು ಹಾಗೂ ನಾನು ಒಂದೇ (ತುರುವೇಕೆರೆ) ತಾಲ್ಲೂಕಿನವರು. ಅವರು ಸಿಕ್ಕಾಗಲೆಲ್ಲ, ನನಗೊಂದು ಅವಾರ್ಡ್ ಸಿನಿಮಾ ಮಾಡಿಕೊಡಿ ಎನ್ನುತ್ತಿದ್ದರು. ನಾನು ಚಿತ್ರ ಮಾಡಿ ಆಮೇಲೆ ಅದಕ್ಕೆ ಅವಾರ್ಡ್ ಬರದಿದ್ದಲ್ಲಿ ಸುಮ್ಮನೇ ತಕರಾರು ಏಕೆ ಎಂದು ನಾನು ಮುಂದುವರಿದಿರಲಿಲ್ಲ. ಆದರೂ ಮಂಜು ಭೇಟಿಯಾದಾಗಲೆಲ್ಲ ಇದನ್ನು ಪ್ರಸ್ತಾಪಿಸುವುದನ್ನು ಬಿಟ್ಟಿರಲಿಲ್ಲ. ಬೇಕಿದ್ದರೆ ವಿಷ್ಣು ಸರ್ ಕಾಲ್‌ಶೀಟ್ ನಾನು ತರುತ್ತೇನೆ, ಒಂದು ಒಳ್ಳೇ ಕತೆ ಮಾಡಿ, ಅದಕ್ಕೆ ಅವಾರ್ಡ್ ಬರಬೇಕು ಎಂದಾಗ, ನಾನು ಮತ್ತಷ್ಟು ಅಳುಕಿನಿಂದ ಸುಮ್ಮನಾಗಿದ್ದೆ.

ಹೀಗೆ ವಿಷ್ಣು ಹಾಗೂ ನನ್ನ ನಡುವಿನ ಪರಿಚಯ. ಈಗ ಅವರನ್ನು ಭೇಟಿಯಾಗಿ ಕತೆ ಹೇಳವ ಮಾರ್ಗ ಹುಡುಕತೊಡಗಿದೆ. ಆಗ ನನ್ನ ನೆನಪಿಗೆ ಬಂದವರು ನಾಗತಿಹಳ್ಳಿ ಚಂದ್ರಶೇಖರ್. ಅವರ ಚಿತ್ರದಲ್ಲಿ ವಿಷ್ಣು ಅಭಿನಯಿಸಿದ್ದರು. ಅವರ ದೋಸ್ತಿ ಕೂಡ ಚನ್ನಾಗಿತ್ತು. ಈ ಹಿನ್ನೆಲೆಯಲ್ಲಿ ನಾನು ನನ್ನ ಆಸೆಯನ್ನು ನಾಗತಿಹಳ್ಳಿಯವರ ಬಳಿ ಹೇಳಿದೆ. ಅವರು, ಅದಕ್ಕೇನಂತೆ ನಾನು ಅಪಾಯಿಂಟ್‌ಮೆಂಟ್ ಫಿಕ್ಸ್ ಮಾಡ್ತೀನಿ ಅಂದರು. ಅವರಿಬ್ಬರೂ ಭೇಟಿಯಾದಾಗ ಈ ವಿಷಯ ಪ್ರಸ್ತಾಪ ಮಾಡಿದ್ದಾರೆ. ಆಗ ವಿಷ್ಣು ತಕ್ಷಣ ತಾವೇ ಫೋನ್ ಮಾಡಿ, ‘ಮೇಷ್ಟು ಮೂಲಕ ಏಕೆ ರಾಯಭಾರ, ನೀವೇ ನೇರವಾಗಿ ಸಂಪರ್ಕಿಸಬಹುದಿತ್ತಲ್ಲ, ಸಂಕೋಚ ಏಕೆ? ನಾಳೆ ಸಂಜೆ ಬನ್ನಿ, ನಿಮ್ಮ ಕತೆ ಕೇಳಲು ನನಗೂ ಆಸಕ್ತಿ ಇದೆ’ ಎಂದಾಗ ನನ್ನಲ್ಲಿ ಆಸೆ ಬಲವಾಗತೊಡಗಿತು.

ಈ ಹಿನ್ನೆಲೆಯಲ್ಲೇ ನಾನು ಅಂದು ಅವರನ್ನು ಭೇಟಿ ಮಾಡಿ ನಿರಾಕರಣದ ಕತೆ ಹೇಳಿದ್ದು.

ನಾನು ಅಲ್ಲಿಯವರೆಗೆ ಬೇರೆ ಬೇರೆ ಸಂದರ್ಭಗಳಲ್ಲಿ, ಬೇರೆ ಬೇರೆ ನಟ ನಟಿಯರಿಗೆ ಕತೆಯನ್ನು ಹೇಳಿದ್ದೆ. ಆದರೆ ವಿಷ್ಣುವರ್ಧರ್ ಅವರಷ್ಟು ತಾಳ್ಮೆಯಿಂದ, ಆಸಕ್ತಿಯಿಂದ ಕತೆಯನ್ನು ಕೇಳಿದವರು ಕಡಿಮೆ. ಕತೆ ಕೇಳುವವರ ಪ್ರತಿಕ್ರಿಯೆ ಕತೆ ಹೇಳುವವರಿಗೆ ಒಂದು ವಿಚಿತ್ರವಾದ ಆತ್ಮವಿಶ್ವಾಸ ಕೊಡುತ್ತದೆ. ಅಂದು ಅವರಿಗೆ ಸಂಭ್ರಮದಿಂದ ಕತೆ ಹೇಳುವ ಒಂದು ವಾತಾವರಣವನ್ನು ವಿಷ್ಣು ನನಗೆ ಕಲ್ಪಿಸಿ ಕೊಟ್ಟಿದ್ದರು. ಕತೆ ಹೇಳುವುದು ಕೂಡ ಒಂದು ಸಂತೋಷದ ಕ್ರಿಯೆ. ನನಗೆ ಆ ಸಂತೋಷ ಅಂದು ದಕ್ಕಿತ್ತು. ಅದಕ್ಕಾಗಿ ಅವರಿಗೆ ನಾನು ಕೃತಜ್ಞತೆ ಹೇಳಿದೆ.

‘ಇದರಲ್ಲಿ ನನ್ನದೇನಿದೆ, ಕತೆ ಹೇಳುವವರು ನಮ್ಮಂತ ಕೇಳುಗರನ್ನು ಕಟ್ಟಿ ಹಾಕಬೇಕು, ಆ ಕೆಲಸ ನೀವು ಮಾಡಿದ್ದೀರಿ. ನನಗೆ ಕತೆ ಇಷ್ಟವಾಗದಿದ್ದಲ್ಲಿ ಮಧ್ಯೆಯೇ ಹೇಳಿಬಿಡುತ್ತಿದ್ದೆ ಎಂದ ವಿಷ್ಣು ತಮ್ಮ ಮನೆಯ ಬಾಗಿಲಿನತ್ತ ತಿರುಗಿ ತಮ್ಮ ಡ್ರೈವರ್ ಅನ್ನು ಕೂಗಿ ಕರೆಯುತ್ತಾ, ‘ಕಾರಿನ ಹಿಂದಿನ ಸೀಟಿನಲ್ಲಿ ಒಂದು ಪುಸ್ತಕ ಇದೆ, ತಗೊಂಡು ಬಾ’ ಎಂದರು. ಡ್ರೈವರ್ ಆ ಪುಸ್ತಕ ತಂದು ಕೊಟ್ಟ. ಅದನ್ನು ನನ್ನ ಮುಂದೆ ಹಿಡಿದರು ವಿಷ್ಣು. ನಾನು ಕುತೂಹಲದಿಂದ ಆ ಪುಸ್ತಕದತ್ತ ನೋಡಿದೆ. ಅದು ಸ್ವಾಮಿರಾಮ ಬರೆದ ‘ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ’ ಎಂಬ ಪುಸ್ತಕ.

ನಿರಾಕರಣದಲ್ಲಿ ಅದರ ನಾಯಕ ಲೌಕಿಕ ಜೀವನದಲ್ಲಿ ಜಿಗುಪ್ಸೆ ಹೊಂದಿ ಹಿಮಾಲಯಕ್ಕೆ ಅಲೌಕಿಕ ಸಂತೋಷ, ಸಮಾಧಾನ ಅರಸಿ ಹೋಗುತ್ತಾನೆ. ಕೆಲವು ಕಾಲ ಅಲ್ಲಿ ಹಲವು ಮಹಾತ್ಮರ ಸನ್ನಿಧಾನದಲ್ಲಿ ಇದ್ದು, ತಾನು ಬಯಸಿದ್ದು ಸಿಗದೆ ಕಾಶಿಗೆ ಹಿಂತಿರುಗಿ ಅಲ್ಲಿ ಕೆಲವು ದಿನ ಕಳೆದು ಮತ್ತೆ ತನ್ನ ಲೌಕಿಕ ಬದುಕಿಗೆ ಹಿಂತಿರುಗುತ್ತಾನೆ. ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ ಪುಸ್ತಕ ಕೂಡ ಅಲೌಕಿಕ ವಿಚಾರ ಹೇಳುವ ಕೃತಿ. ವಿಷ್ಣು ಅವರಿಗೆ ಅಲೌಕಿಕ ವಿಚಾರಗಳ ಬಗ್ಗೆ ಇದ್ದ ಆಸಕ್ತಿ ಎಲ್ಲರಿಗೂ ತಿಳಿದದ್ದೇ.

ವಿಷ್ಣು ಹೇಳತೊಡಗಿದರು:

‘ನೋಡಿ ಶೇಷಾದ್ರಿ, ಎಂಥ ಕಾಕತಾಳೀಯ, ನೀವು ನಿರಾಕರಣದ ಕತೆ ಹೇಳುವುದಕ್ಕೂ, ನಾನು ಈ ಪುಸ್ತಕ ಓದುವುದಕ್ಕೂ ಎಂಥ ಸಂಬಂಧ! ನೀವು ನಿರಾಕರಣದ ಕತೆ ಹೇಳುತ್ತಿದ್ದಾಗ ನನಗೆ ಈ ಪುಸ್ತಕದ ಹಲವಾರು ಘಟನೆಗಳು ನೆನಪಿಗೆ ಬರುತ್ತಿದ್ದವು. ನಿಜವಾಗಿ ನನಗೆ ಈ ಕತೆ ಇಷ್ಟವಾಯಿತು’ ಎಂದರು. ‘ಹಾಗಾದರೆ ನಿಮಗೆ ಇದರಲ್ಲಿ ನಟಿಸಿಲು ಒಪ್ಪಿಗೆಯೇ? ಎಂದು ತಕ್ಷಣ ಕೇಳಿದ. ‘ಖಂಡಿತ, ಇದು ನನ್ನ ವೃತ್ತಿ ಜೀವನದಲ್ಲಿ ಮತ್ತೊಂದು ಎತ್ತರಕ್ಕೇರುವ ಮೆಟ್ಟಿಲಾದೀತು’ ಎಂದರು. ನಾನು ಅವರಿಂದ ಈ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ‘ಹಾಗಾದರೆ ನೀವು ಇದಕ್ಕೆ ಯಾವಾಗ ಬಿಡುವು ಮಾಡಿಕೊಳ್ಳಬಹುದು?’ ಎಂದೆ. ‘ಈಗ ಕೈನಲ್ಲಿ ಎರಡು ಚಿತ್ರಗಳಿವೆ ಅವನ್ನು ಮುಗಿಸುತ್ತೇನೆ. ಆನಂತರ ಇದನ್ನು ಮಾಡೋಣ’ ಎಂದರು. ನಾನು ಯುದ್ಧ ಗೆದ್ದ ಸಂಭ್ರಮದಲ್ಲಿ ಹಿಂತಿರುಗಿದೆ. ಇದಾದ ಆರೇ ತಿಂಗಳಿಗೆ ವಿಷ್ಣು ಇನ್ನಿಲ್ಲವಾದರು.

ಒಬ್ಬ ವ್ಯಕ್ತಿ ಕಾಲವಾದಾಗ ಸಾಮಾನ್ಯವಾಗಿ ಕೇಳಿಬರುವ ಮಾತು. ‘ಇದು ತುಂಬಲಾರದ ನಷ್ಟ’. ಪದೇ ಪದೇ ಈ ವಾಕ್ಯದ ಬಳಕೆಯಿಂದ ನಮಗೇ ಕೆಲವು ಬಾರಿ ಕಿರಿ ಕಿರಿಯಾಗಿ ಇದು ಎಂಥ ಕ್ಲೀಷೆ ಎನ್ನಿಸಿ ಬಿಡುತ್ತದೆ.

ಆದರೆ ಈಗ ನಾನು ಇದೇ ಮಾತುಗಳನ್ನು ಅನಿವಾರ್ಯವಾಗಿ ಪುನರುಚ್ಚರಿಸಲೇಬೇಕಾಗಿದೆ.

‘ವಿಷ್ಣುವರ್ಧನ್ ಅವರು ಇಲ್ಲವಾಗಿದ್ದು, ವೈಯಕ್ತಿಕವಾಗಿ ನನ್ನ ಪಾಲಿಗೆ ತುಂಬಲಾರದ ನಷ್ಟ’

ವಿಷ್ಣು ಇದ್ದಿದ್ದರೆ ಈ ಚಿತ್ರ ಸೆಟ್ ಏರುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅದಕ್ಕೆ ಒಂದು ಚಾಲನೆಯಂತೂ ಸಿಕ್ಕಿತ್ತು. ಈಗಲೂ ನಾನು ನಿರಾಕರಣದ ಬಗ್ಗೆ ಯೋಚಿಸಿದಾಗ ವಿಷ್ಣು ಅವರ ಮುಖ ಕಣ್ಣ ಮುಂದೆ ಬರುತ್ತದೆ. ಇಂದೂ ನನ್ನ ಮಹತ್ವಾಕಾಂಕ್ಷೆಯ ‘ನಿರಾಕರಣ’ಕ್ಕೆ ಕಲಾವಿದರನ್ನು ಹೊಂದಿಸಲು ನನಗೆ ಸಾಧ್ಯವಾಗಿಲ್ಲ. ಮುಂದೆ ಇದು ಸಾಧ್ಯವಾಗುತ್ತದೆಯೋ ಏನೋ ಕಾದು ನೋಡಬೇಕು.

(ಇಂದಿಗೆ ವಿಷ್ಣು ಕಾಲವಾಗಿ ಎರಡು ವರ್ಷ. ಆ ನೆನಪಿಗಾಗಿ ‘ಟೈಮ್ಸ್ ಆಫ್ ಕರ್ನಾಟಕ’ ಪತ್ರಿಕೆಗೆ ಈ ಲೇಖನವನ್ನು ಮಿತ್ರ ಬಾನಾಸು ನನ್ನಿಂದ ಬರೆಸಿ ಇಂದು ಪ್ರಕಟಿಸಿದ್ದಾರೆ)

‘ಬೆಟ್ಟದ ಜೀವ’ದ ಬಗ್ಗೆ ಅನಂತಮೂರ್ತಿ…

ಅಂದು, ಗುರುವಾರ ಜೂನ್ ೨೩ನೇ ದಿನ.
‘ಬೆಟ್ಟದ ಜೀವ’ ಚಿತ್ರದ ವಿಶೇಷ ಪ್ರದರ್ಶನವನ್ನು ಐನಾಕ್ಸ್ ಚಿತ್ರಮಂದಿರದಲ್ಲಿ ಏರ್ಪಡಿಸಿದ್ದೆ.
ಡಾ.ಯು.ಆರ್.ಅನಂತಮೂರ್ತಿ ಚಿತ್ರನೋಡಲು ಬಂದಿದ್ದರು.
‘ನೀವು ಬಂದದ್ದು ತುಂಬಾ ಸಂತೋಷ ಸಾರ್’ ಎಂದೆ.
ಅದಕ್ಕೆ ಅವರು, ‘ಆದ್ರೆ ನಂಗೆ ಇರುಸು-ಮುರುಸಾಗ್ತಾ ಇದೆ ಕಣಯ್ಯಾ’ ಎಂದರು.
‘ಯಾಕ್ ಸಾರ್?!’ ಎಂದೆ.
‘ನಾನು ಈ ಮಾಲ್‌ಗಳ ವಿರೋಧಿ. ಇದನ್ನು ಒಡೆದು ಹಾಕಬೇಕು ಅಂತ ಕರೆ ಕೊಟ್ಟವನು. ಈಗ ನೋಡು, ಎಂಥ ವೈರುಧ್ಯ! ನಿನ್ನ ಸಿನಿಮಾ ನೋಡುವ ಕಾರಣದಿಂದ ಇವತ್ತು ಇದರೊಳಕ್ಕೆ ಹೆಜ್ಜೆ ಇಡಲೇ ಬೇಕಾಯಿತು…’ ಎಂದು ನಕ್ಕರು. ಇನ್ನೇನೋ ಅಂದುಕೊಂಡಿದ್ದ ನನಗೆ ಸಮಾಧಾನವಾಯಿತು.

ಅದು ಮುನ್ನೂರು ಜನ ಕುಳಿತು ನೋಡುವ ಚಿತ್ರಮಂದಿರ. ನಾನು ಸುಮಾರು ಐವತ್ತು ಟಿಕೇಟ್ ರಿಸರ್ವ್ ಮಾಡಿಸಿದ್ದೆ. ಉಳಿದದ್ದು ಪ್ರೇಕ್ಷಕರ ಪಾಲು. ಆಶ್ಚರ್ಯ ಎಂದರೆ ಉಳಿದ ಇನ್ನೂರೈವತ್ತು ಪ್ರೇಕ್ಷಕರು ಬಂದು ಚಿತ್ರಮಂದಿರ ಭರ್ತಿಯಾಯಿತು. ಬಸಂತ್‌ಕುಮಾರ್ ಪಾಟೀಲರಂತೂ ಫುಲ್ ಖುಷಿ. ಮಲ್ಲೇಪುರಂ, ಆ ರಾ ಮಿತ್ರ, ಟಿ.ಎನ್.ಸೀತಾರಾಮ್, ಕಪ್ಪಣ್ಣ, ಮರುಳಸಿದ್ದಪ್ಪ, ಪ್ರೊ.ರಾಧಾಕೃಷ್ಣ, ದೀಪಾ ಗಣೇಶ್, ಶೇಖರ್ ಪೂರ್ಣ, ಐ.ಎಂ.ವಿಠಲಮೂರ್ತಿ, ಮುಕುಂದರಾಜ್, ಡಾ.ಆಶಾದೇವಿ, ನಾಗಮಣಿ ಎಸ್.ರಾವ್, ಕೇಶವರಾವ್, ಮಂಗ್ಳೂರ್ ವಿಜಯ ಮುಂತಾದ ಅನೇಕರು ಬಂದಿದ್ದರು.

ಮಧ್ಯಾಹ್ನ ಒಂದೂಮುಕ್ಕಾಲಿಗೆ ಪಾರಂಭವಾದ ಪ್ರದರ್ಶನ ಮೂರೂ ಮುಕ್ಕಾಲಿಗೆ ಮುಗಿಯಿತು. ಹೊರಗೆ ಬಂದ ಎಲ್ಲರೂ ಮಾಮೂಲಿನಂತೆ ‘ಒಳ್ಳೇ ಚಿತ್ರಮಾಡಿದ್ದೀರ…’ ಎಂದು ಹೊಗಳಿದರು. ಇಷ್ಟು ಕಡಿಮೆ ಬಜೆಟ್‌ನಲ್ಲಿ ಇಷ್ಟು ಅದ್ದೂರಿ ಚಿತ್ರ ಹೇಗೆ ಮಾಡಿದಿರಿ ಎಂದು ವಿಠ್ಠಲಮೂರ್ತಿ, ಸೀತಾರಾಮ್ ಕೇಳಿದರು…

ಕೊನೆಯಲ್ಲಿ ಬಂದ ಅನಂತಮೂರ್ತಿಯವರು, ನನ್ನ ಕೈ ಹಿಡಿದು ಪ್ರೀತಿಯಿಂದ ಅಮುಕಿದರು. ಇದೇನು ‘ಸಾರ್ ನಿಮ್ಮ ಕೈ ಇಷ್ಟು ಬೆಚ್ಚಗಿದೆ?’ ಎಂದೆ. ‘ನನ್ನದು ಯಾವಾಗಲೂ warmth ಸ್ವಭಾವ ಕಣಯ್ಯ…’ ಎಂದು ನಕ್ಕರು. ಮತ್ತೆ ಮುಂದುವರಿದು “ಬೆಳಗ್ಗೆ ಯಾಕೋ ಜ್ವರ ಬಂತು. ಸಿನಿಮಾ ಮಿಸ್ ಮಾಡಿಕೋಬಾರದು ಅಂದ ಮಾತ್ರೆ ನುಂಗಿ ಬಂದೆ… ನಾನೀಗ ಹೋಗ್ತೀನಿ… ಆಮೇಲೆ ಮಾತಾಡ್ತೀನಿ” ಎಂದು ಎಸ್ತರ್ ಜೊತೆ ಹೊರಟು ಹೋದರು. ಈ ಹಿಂದೆ, ಎರಡು ವರ್ಷದ ಹಿಂದೆ ನನ್ನ ‘ವಿಮುಕ್ತಿ’ ನೋಡಿದಾಗಲೂ ಹೀಗೇ ಏನೂ ಹೇಳದೆ ಹೋಗಿದ್ದರು. ಕೈ ಕೂಡ ಕುಲುಕಿರಲಿಲ್ಲ. ಆಮೇಲೆ ಯಾರೋ, ಅವರಿಗೆ ಚಿತ್ರ ಇಷ್ಟವಾಗಿಲ್ಲ ಅದಕ್ಕೇ ಹಾಗೆ ಹೋಗಿದ್ದಾರೆ ಎಂದು ಹೇಳಿದರು. ಮುಂದೆ ಅವರನ್ನು ಹಲವು ಬಾರಿ ಭೇಟಿ ಆದಾಗಲೂ ನಾನೂ ಆ ಬಗ್ಗೆ ವಿಚಾರಿಸಲು ಹೋಗಿರಲಿಲ್ಲ.

ಈ ಬಾರಿ ಕೇಳಿಯೇಬಿಡಬೇಕು ಎಂದು ನಿರ್ಧರಿಸಿ, ಬೆಳಗ್ಗೆ ಫೋನ್ ಮಾಡಿದೆ. ರಿಸೀವ್ ಮಾಡಲಿಲ್ಲ. ಸ್ವಲ್ಪ ಹೊತ್ತಿಗೆ, ‘ನಾನು ಮಣಿಪಾಲ ಆಸ್ಪತ್ರೆಗೆ ಅಡ್ಮಿಟ್ ಆಗಿದೀನಿ’ ಅಂತ ಮೆಸೇಜ್ ಕಳುಹಿಸಿದರು.

ಚಿತ್ರದ ಕುರಿತು ಅವರ ಅಭಿಪ್ರಾಯ ತಿಳಿದುಕೊಳ್ಳಲು ಆಗಲಿಲ್ಲವಲ್ಲ ಎಂದು ಕೊರಗಿದೆ. ಒಂದು ವಾರದ ನಂತರ ಮತ್ತೆ ಸಂಪರ್ಕಿಸಿ, ನಾನೇ ನಿಮ್ಮ ಮನೆಗೆ ಬರತೀನಿ, ಹತ್ತು ನಿಮಿಷ ನಿಮ್ಮ ಜೊತೆ ಮಾತಾಡಬೇಕು ಎಂದೆ. ಯಾರೋ ಹೈದರಾಬಾದಿನಿಂದ ಬಂದಿದ್ದಾರೆ, ನಾನೇ ಫೋನ್ ಮಾಡಿ ಹೇಳ್ತೀನಿ, ಆಗ ಬರುವೆಯಂತೆ ಅಂದರು. ಬಹುಶಃ ಅವರಿಗೆ ನನ್ನ ಚಿತ್ರ ಇಷ್ಟವಾಗಿಲ್ಲ ಅದಕ್ಕೇ ಅವಾಯ್ಡ್ ಮಾಡುತ್ತಿದ್ದಾರೆ ಎಂದು ಸುಮ್ಮನಾದೆ. ನಿನ್ನೆ ಅವರೇ ಫೋನ್ ಮಾಡಿ, ನನ್ನ ಅಭಿಪ್ರಾಯವನ್ನು ಬರೆದು ಇಟ್ಟಿದ್ದೀನಿ ಯಾರನ್ನಾದರೂ ಕಳಿಸಿ ಕಲೆಕ್ಟ್ ಮಾಡಿಕೋ ಅಂದರು. ತಕ್ಷಣ ನನ್ನ ಸಹಾಯಕರನ್ನು ಕಳಿಹಿಸಿದೆ. ಟೈಪ್ ಮಾಡಿಸಿ, ಸಹಿ ಹಾಕಿ ಬರೆದುಕೊಟ್ಟಿದ್ದನ್ನು ಅವರ ಒಪ್ಪಿಗೆ ಪಡೆದು ಯಥಾವತ್ ಇಲ್ಲಿ ದಾಖಲಿಸಿದ್ದೇನೆ:

ಗೆಳೆಯ ಶೇಷಾದ್ರಿಯವರ ‘ಬೆಟ್ಟದ ಜೀವ’ ಚಿತ್ರವನ್ನು ನೋಡಿ ನನ್ನ ಮನಸ್ಸಿಗಾದ ಸಂತೋಷವನ್ನು ಹಂಚಿಕೊಳ್ಳುತ್ತೇನೆ. ಇಲ್ಲಿ ‘ಸಂತೋಷ’ ಎನ್ನುವ ಶಬ್ದವನ್ನು ಮನಃಪೂರ್ವಕವಾಗಿ ಬಳಸಿದ್ದೇನೆ. ಯಾಕೆಂದರೆ, ಭಾರತೀಯ ಕಥಾ ಪ್ರಪಂಚದ ಮಹತ್ವದ ಕೃತಿಗಳಲ್ಲಿ ಒಂದಾದ ಶಿವರಾಮಕಾರಂತರ ಬೆಟ್ಟದ ಜೀವವನ್ನು ಸರಿಗಟ್ಟುವ ಸಮಾಧಾನದ ಚಲನಚಿತ್ರ ಸಾಧ್ಯವೇ ಇಲ್ಲವೇನೋ. ಬೆಟ್ಟದ ಜೀವಕ್ಕೆ ಕಥನದ ಶಕ್ತಿ ಮಾತ್ರವಲ್ಲದೆ ಕಥನಕ್ಕಿಂತ ಹೆಚ್ಚನ್ನು ಸೂಚಿಸುವ ಕಾವ್ಯದ ಗುಣವೂ ಇದೆ. ಕಾವ್ಯ ತಾನು ಮೂಡಿದ ಭಾಷೆಯಲ್ಲಿ ಮಾತ್ರ ಇರಬಲ್ಲದು. ಅನುವಾದದಲ್ಲಿ ಸಿಗುವುದು ನಮಗೆ ಅದರ ನೆರಳು ಮಾತ್ರ.

ಶೇಷಾದ್ರಿಯವರ ಚಿತ್ರ ನನಗೆ ಸಂತೋಷವನ್ನು ಕೊಡಲು ಮುಖ್ಯ ಕಾರಣ ಇವು:

೧. ಕಥೆಯನ್ನು ಓದುವಾಗ ನಾವು ಮನಸ್ಸಿನೊಳಗೆ ಕಾಣುವ ಪಾತ್ರಗಳಂತೆಯೇ ಇವರ ಪಾತ್ರಗಳೂ ಕಾಣಿಸಿಕೊಳ್ಳುತ್ತವೆ. ಸಿನಿಮಾದ ಗ್ಲಾಮರ್‌ಗಾಗಿ ಶೇಷಾದಿಯವರು ಏನನ್ನೂ (ಪಾತ್ರಗಳ ಯಾವ ಚರ್ಯೆಯನ್ನೂ) ಉತ್ಪ್ರೇಕ್ಷಿಸುವುದೂ ಇಲ್ಲ, ಕಡಿಮೆ ಮಾಡುವುದೂ ಇಲ್ಲ.

೨. ಕಥಾನಕದ ವಿವರಗಳೆಲ್ಲವೂ ಒಂದು ನೈಜ ಸ್ಥಿತಿಯನ್ನು ಮನಮುಟ್ಟುವಂತೆ ಚಿತ್ರಿಸುತ್ತವೆ. ‘ಧಣೀ…’ ಎಂದು ಒಳಗೆ ಬರುವ ಆಳು, ಪದ್ಧತಿಯಂತೆ ನಾಗಂದಿಗೆಯ ಮೇಲಿನಿಂದ ಕವಳದ ಗಂಟನ್ನೆತ್ತಿ ಕೂತು ಕವಳ ಹಾಕಿಕೊಳ್ಳುವುದು ನಾನು ಮರೆಯಲಾರದ ದೃಶ್ಯ. ಇಲ್ಲಿ ಧಣಿ ಧಣಿಯೇ; ಆಳು ಆಳೇ. ಆದರೆ, ಇಬ್ಬರೂ ಒಂದೇ ಕುಟುಂಬಕ್ಕೆ (ಜಾತಿಗಳಲ್ಲಿ ಅಂತರವಿದ್ದರೂ) ಸೇರಿದವರು. ಇದನ್ನೊಂದು ಆದರ್ಶಪ್ರಾಯವಾದ ಸಂಬಂಧವೆಂದು ಶೇಷಾದ್ರಿ ಹೇಳುತ್ತಿಲ್ಲ. ಹಾಗೆಯೇ ಅನಗತ್ಯವಾಗಿ ಈ ಸಂಗತಿಗಳನ್ನು ಆಧುನಿಕ ಕಾರಣಗಳಿಂದ ನೋಡುವ ತೆವಲುಗಳೂ ಇವರಿಗಿಲ್ಲ. ಇರುವುದನ್ನು ಇದ್ದಂತೆ ಚಿತ್ರಿಸುವ ಗುಣ ಎಲ್ಲೆಲ್ಲೂ ಕಾಣುತ್ತದೆ.

೩. ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಪ್ರಕೃತಿಯ ಚಿತ್ರಗಳೆಲ್ಲವೂ ಅತೀ ಮೋಹಕವಾಗದಂತೆ ಆದರೆ, ನೈಜವೆನ್ನಿಸುವಂತೆ ಇವೆ.

೪. ಇಲ್ಲಿನ ಪಾತ್ರಗಳೆಲ್ಲವೂ ತಮ್ಮ ದೈನಿಕ ಕ್ರಿಯೆಗಳಲ್ಲೇ ವಿಶೇಷವಾದ್ದನ್ನು ಬಿಂಬಿಸುತ್ತವೆ. ಹುಲಿ ಹಿಡಿಯುವ ದೃಶ್ಯವೂ ಕೂಡ ಆ ಊರಿನ ಜನರ ದೈನಿಕದ ಇನ್ನೊಂದು ಸಂಗತಿಯೋ ಎಂಬಂತೆ ಚಿತ್ರಿತವಾಗಿದೆ. ಇದು ಕೇವಲ ಭೂತಕಾಲದ ಹಳಹಳಿಕೆಯ ಚಿತ್ರವಾಗಿಬಿಡಬಹುದಿತ್ತು. ಕೊನೆಯ ದೃಶ್ಯದಲ್ಲಿ ಇದನ್ನವರು ಉದ್ದೇಶಪೂರ್ವಕವಾಗಿ ನಿರಾಕರಿಸುತ್ತಾರೆ. ಈಗ ಹಳ್ಳಿ ರೆಸಾರ್ಟ್ ಆಗಿದೆ. ಈ ಚಿತ್ರಣವನ್ನು ನಾನು ಕೊಂಚ ಕಿರಿ ಕಿರಿ ಪಡುತ್ತಲೇ, ಆದರೆ ವೈಚಾರಿಕವಾಗಿ ಇಷ್ಟಪಡುತ್ತೇನೆ.

ನಮ್ಮ ಕಾಲದ ಚಲನಚಿತ್ರದಲ್ಲಿ ಜಾಗತಿಕ ಮಹತ್ವವನ್ನು ಸಾಧಿಸಿದವರು ಗಿರೀಶ್ ಕಾಸರವಳ್ಳಿ. ಅವರ ಹಾದಿಯಲ್ಲೇ ಇರುವ ಚಿತ್ರ ನಿರ್ದೇಶಕರಲ್ಲಿ ಶೇಷಾದ್ರಿ ಮುಖ್ಯರು ಎಂದು ನನಗನ್ನಿಸಿದೆ. ಬೆರಳೆಣಿಕೆಯಷ್ಟು ಈ ಬಗೆಯ ಇನ್ನೂ ಕೆಲವು ಯುವ ಚಿತ್ರನಿರ್ದೇಶಕರು ಮಾತ್ರ ಇದ್ದಾರೆ ಅನ್ನಿಸಿದರೂ ಅವರು ಮಾಡುತ್ತಿರುವ ಪರಿಣಾಮ ಮಹತ್ವದ್ದು.

ಒಟ್ಟಿನಲ್ಲಿ ನನಗಂತೂ ಶೇಷಾದ್ರಿಯವರ ‘ಬೆಟ್ಟದ ಜೀವ’ ಮರೆಯಲಾಗದ ಚಿತ್ರ. ಕಾರಂತರ ಕಥೆಯಲ್ಲಿ ತಾಯಿ ತಂದೆಯರು ಒಂಟಿ ಜೀವನ ನಡೆಸುತ್ತ, ಪ್ರಕೃತಿಯೊಡನೆ ಸೆಣೆಸುತ್ತಾ, ಓಡಿ ಹೋದ ಮಗನಿಗಾಗಿ ಹಂಬಲಿಸುತ್ತಾ ಇರುವ ಕಥನದಲ್ಲಿ ಎಂದೆಂದಿಗೂ ಸಲ್ಲುವ ಕಾಲಗತವಾದ್ದು ಎಂದು ಮಾತ್ರ ಅನ್ನಿಸದ ಬರವಣಿಗೆ ಇದೆ. ಆದರೆ ಭಾಷೆಯಲ್ಲಿ ಕಾಲವನ್ನೂ ಮೀರುವಷ್ಟು ಸಹಜವಾಗಿ ಚಿತ್ರೀಕರಣದಲ್ಲಿ ಮೀರುವುದು ತುಂಬ ಕಷ್ಟವೇನೋ? ಶೇಷಾದ್ರಿಯವರು ತುಂಬ ಎಚ್ಚರದಲ್ಲಿ ಆಗಿ ಹೋದದ್ದನ್ನು ಚಿತ್ರಿಸಿದ್ದಾರೆ. ಹಳಹಳಿಕೆಯಿಂದ ಇದನ್ನು ಚಿತ್ರಿಸಿಲ್ಲ ಎಂಬುದು ಅವರ ಚಿತ್ರದ ಒಂದು ಮುಖ್ಯ ಗುಣ. ಆದರೆ, ಇಲ್ಲಿ ಚಿತ್ರಿತವಾದ್ದು ಯಾವ ಕಾಲದ ಮಾನವ ಸಂಬಂಧಗಳ ಬಿಕ್ಕಟ್ಟುಗಳೂ ಆಗಬಹುದು ಎಂದು ನನಗೆ ಅನ್ನಿಸುವಂತೆ ಚಿತ್ರ ತನ್ನದೇ ಆದ ಫ್ರೇಮ್‌ನಿಂದ ಹೊರಬರಲಾರದು. ಕಾರಂತರ ಕಥನ ಕ್ರಿಯೆ ತನ್ನ ಕಾಲದ್ದೂ ಆಗಿದ್ದು, ಎಲ್ಲ ಕಾಲದ್ದೂ ಅನ್ನಿಸುವಂತದ್ದು.

ಇವೆಲ್ಲವನ್ನೂ ಗಮನಿಸಿದಾಗಲೂ ನನಗೆ ಚಿತ್ರ ಎಲ್ಲಿಯೂ ತನ್ನ ಹದವನ್ನು ಕಳೆದುಕೊಳ್ಳದಂತೆ ಉತ್ತಮ ಚಿತ್ರವಾಗಿ ಮೂಡಿಬಂದಿದೆ ಎಂಬುದನ್ನು ಹೇಳಲೇಬೇಕು.

೭ ಜುಲೈ ೨೦೧೧

ಒಂದೇ ದಿನ, ಮೂರು ಕಡೆ, ಮೂರು ಚಿತ್ರಗಳ ಪ್ರದರ್ಶನ…

ನಿನ್ನೆ,
ಅಂದರೆ ೨೦೧೧ ಜುಲೈ ತಿಂಗಳ ಹದಿಮೂರನೇ ದಿನ, ನನಗೆ ಸಂತೋಷವಾಗಲು ಮೂರು ಕಾರಣಗಳಿದ್ದವು.

ಒಂದು,
‘ಬೆಟ್ಟದ ಜೀವ’ ಚಿತ್ರ ಮೂರನೇ ವಾರ ಚಿತ್ರಮಂದರದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇಂದೂ ಕೂಡ ತುಂಬ ಫೋನ್ ಮಾಡಿ ಚಿತ್ರನೋಡಲು ಎರಡನೇ ಬಾರಿ ಹೋಗುತ್ತಿದ್ದೇವೆ ಎಂದು ಹೇಳಿದ್ದರು. ಇದು ನಿಜವಾದ ಸಮಾಧಾನವಲ್ಲವೇ?

ಎರಡು,
ಮಧ್ಯಾಹ್ನ ಬೆಂಗಳೂರಿನ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ‘ತುತ್ತೂರಿ’ಚಿತ್ರವನ್ನು ಪ್ರದರ್ಶಿಸಿ ನಂತರ ಪ್ರೇಕ್ಷಕರೊಂದಿಗೆ ಚರ್ಚೆ ಏರ್ಪಡಿಸಿದ್ದರು. ಚಿತ್ರ ಬಂದು ಆರು ವರ್ಷ ಕಳೆದಿದ್ದರೂ, ಈ ಕಥಾವಸ್ತು ಅಂದಿಗಿಂತ ಇಂದಿಗೆ ಇನ್ನೂ ಹೆಚ್ಚಿನ ಪ್ರಸ್ತುತತೆ ಹೊಂದಿದೆ ಎಂದು ಪ್ರೇಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದರು. ‘ಮಕ್ಕಳ ಚಿತ್ರ ಎಂದರೇನು?’ ಎಂಬ ಪ್ರಶ್ನೆ ಎದ್ದಿತು. ಆಸ್ಟ್ರೇಲಿಯಾದಲ್ಲಿರುವ ಮಿತ್ರ ಸುದರ್ಶನ (‘ಮುಖಾಮುಖಿ’ ಚಿತ್ರ ನಿರ್ದೇಶಕ) ಬಂದಿದ್ದರು. ಆಸ್ಟ್ರೇಲಿಯಾದ ಮಕ್ಕಳ ಸಮಸ್ಯೆಗೂ, ಭಾರತದ ಮಕ್ಕಳ ಸಮಸ್ಯೆಗೂ ವ್ಯತ್ಯಾಸ ಮಾತಿನ ನಡುವೆ ಬಂತು…

ಈ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದಾಗಲೇ ರಾತ್ರಿ ಹತ್ತಾಗಿತ್ತು. ಊಟ ಮಾಡಿ ಮಲಗುವ ಮುಂಚೆ ನ್ಯೂಸ್ ನೋಡೋಣವೆಂದು ಟಿವಿ ಆನ್ ಮಾಡಿದೆ. ಆಗ ರಾತ್ರಿ ಸುಮಾರು ಹನ್ನೊಂದು ದಾಟಿತ್ತು. ದೂರದರ್ಶನದ (ಡಿಡಿ-೧) ನ್ಯಾಷನಲ್ ನೆಟ್‌ವರ್ಕ್‌ನಲ್ಲಿ ‘ವಿಮುಕ್ತಿ’ ಚಿತ್ರ ಪ್ರದರ್ಶನವಾಗುತ್ತಿದೆ! ನನ್ನ ಮೂರನೇ ಸಂತೋಷಕ್ಕೆ ಇಷ್ಟು ಸಾಕಲ್ಲವೆ?

ರಾತ್ರಿ ಒಂದರವರೆಗೂ ಪಾಂಡಿಚರಿಯಿಂದ, ಹುಬ್ಬಳ್ಳಿಯಿಂದ, ಹೈದರಾಬಾದಿನಿಂದ ಫೋನ್ ಬರುತ್ತಲೇ ಇತ್ತು. ಭಾರತದ ಉದ್ದಗಲಕ್ಕೂ ‘ವಿಮುಕ್ತಿ’ ಹರಡಿದೆ. ಯಾವುದೇ ಖಾಸಗಿ ಚಾನಲ್ ಏನೇ ಹೇಳಿದರೂ ದೂರದರ್ಶನನದ ವ್ಯಾಪ್ತಿ ಬಹಳ ದೊಡ್ಡದು. ಚಿತ್ರ ಅಷ್ಟು ಜನರನ್ನು ತಲಪಿತಲ್ಲ ಎಂದು ನನಗೆ ಸಮಾಧಾನವಾಯಿತು. ಇದು ಯಾವುದೇ ಪ್ರಶಸ್ತಿಗಿಂತಲೂ ದೊಡ್ಡದು. ಒಬ್ಬ ನಿರ್ದೇಶಕನಿಗೆ ಇನ್ನೇನು ಬೇಕು?

ಇದೇ ಸಂದರ್ಭದಲ್ಲಿ ‘ತುತ್ತೂರಿ’ ಚಿತ್ರ ಮಾಡಿದ ಹಿನ್ನೆಲೆ ಎಲ್ಲಾ ನೆನಪಿಗೆ ಬರುತ್ತಿದೆ. ಅದನ್ನು ನಿಮಗೆ ಹೇಳುತ್ತಿದ್ದೇನೆ:

ನಾನು ಮಕ್ಕಳ ಚಿತ್ರವೊಂದನ್ನು ಮಾಡಬೇಕೆಂದು ಹೊರಟಿದ್ದು ಹನ್ನೆರಡು ವರ್ಷಗಳ ಹಿಂದೆ, ೧೯೯೮ ರ ಸುಮಾರಿನಲ್ಲಿ, ಗೆಳೆಯ ಪ್ರಹ್ಲಾದ್ ಒಮ್ಮೆ ಮಾತನಾಡುತ್ತಾ ಈಗಿನ ‘ತುತ್ತೂರಿ’ಯ ವಸ್ತುವನ್ನು ಹೇಳಿದಾಗ. ಆಗ ನಾನು ಸ್ವತಂತ್ರವಾಗಿ ಯಾವುದೇ ಚಲನಚಿತ್ರವನ್ನು ನಿರ್ದೇಶಿಸಿರಲಿಲ್ಲ. ಈ ವಸ್ತುವನ್ನು ಹಿಡಿದು ಕಥೆ ಹೆಣೆಯುತ್ತಾ ಚರ್ಚೆಗಳನ್ನು ಪ್ರಾರಂಭಿಸಿದೆ. ಈ ಚಿತ್ರದ ಆಶಯ ಏನಾಗಿರಬೇಕು? ಯಾರನ್ನು ತಲಪಬೇಕು? ಏನನ್ನು ಹೇಳಬೇಕು? ಎಂಬ ಪ್ರಶ್ನೆಗಳು ಮುಂದಿದ್ದವು. ಇವಕ್ಕೆ ನಾನು ಉತ್ತರಿಸಿಕೊಂಡದ್ದು ಹೀಗೆ: ಮುಖ್ಯವಾಗಿ ಚಿತ್ರ ಮಕ್ಕಳನ್ನು ಮನರಂಜಿಸಬೇಕು ಮತ್ತು ಅವರನ್ನು ಚಿಂತನೆಗೆ ಹಚ್ಚಬೇಕು. ಹಾಗೆಯೇ ಪೋಷಕರಿಗೆ ಮಕ್ಕಳ ಮನಸ್ಸನ್ನು ಅರಿಯಲು ಸಹಾಯ ಮಾಡಬೇಕು, ಜೊತೆಗೆ ಸರ್ಕಾರದ ಗಮನ ಮಕ್ಕಳ ಸಮಸ್ಯೆಗಳ ಮೇಲೆ ಅರಿಯಬೇಕು. ಈ ಮೂರೂ ಅಂಶಗಳನ್ನು ಇಟ್ಟುಕೊಂಡು ಚಿತ್ರಕಥೆ ಪ್ರಾರಂಭಿಸಿದೆ. ಆದರೆ ಇದು ತೆರೆಯ ಮೇಲೆ ಬಂದದ್ದು ಎಂಟು ವರ್ಷಗಳ ಮೇಲೆ, ೨೦೦೫ರಲ್ಲಿ!

ಎಂಟು ವರ್ಷಗಳ ಕಾಲ ಚಿತ್ರದ ಕಥೆ ನನ್ನೊಳಗೆ ಸುತ್ತತ್ತಲೇ ಇತ್ತು. ಅಷ್ಟು ವರ್ಷ ಕಥೆಯ ಹಿನ್ನೆಲೆಯಲ್ಲಿ ಮಕ್ಕಳ ಮನಸ್ಸನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದೆ, ಜೊತೆಯಲ್ಲಿ ನನ್ನ ಮಗ ಪ್ರಥಮ ಕೂಡ ಬೆಳೆಯುತ್ತಿದ್ದ. ತೀರ ಹತ್ತಿರದಿಂದ ಮಗುವಿನ ಮನಸ್ಸನ್ನು ಅರಿಯಲು ಇದು ಸಹಕಾರಿಯಾಯಿತು. ಅವನ ಮನರಂಜನೆಯ ಆಯ್ಕೆಯನ್ನು ಗಮನಿಸುತ್ತಿದ್ದೆ. ಇದರಲ್ಲಿ ಟಿವಿ ಪ್ರಮುಖ ಪಾತ್ರ ವಹಿಸಿತ್ತು. ಅದರಲ್ಲೂ ಮುಖ್ಯವಾಗಿ ಕಾರ್ಟೂನ್ ನೆಟ್‌ವರ್ಕ್ ಹಾಗೂ WWF ಹಾಗೂ ಇತರ ಕಂಪ್ಯೂಟರ್ ಗೇಮ್‌ಗಳು ಅವರನ್ನು ಸುಲಭವಾಗಿ ಸೆಳೆಯುತ್ತಿದ್ದವು. ಆದರೆ ನನ್ನ ಚಿತ್ರದಲ್ಲಿ ಇವು ಯಾವುವೂ ಇರಲಿಲ್ಲ!

ಮಕ್ಕಳನ್ನು ಆಟದ ಜೊತೆಗೆ ಆಕರ್ಷಿಸುವ ಇನ್ನೊಂದು ಮಾಧ್ಯಮ ಸಂಗೀತ ಹಾಗೂ ಹಾಡುಗಳು. ಹೀಗಾಗಿ ನನ್ನ ಚಿತ್ರದಲ್ಲಿ ಯಥೇಚ್ಛವಾಗಿ ಹಾಡುಗಳನ್ನು ಸೇರಿಸಲು ತೀರ್ಮಾನಿಸಿದೆ. ಇವು ಎಲ್‌ಕೆಜಿಯ ಮಕ್ಕಳಿಗೆ ಹೇಳಿಕೊಡುವ ರೈಮ್ ಮಾದರಿಯಲ್ಲಿರಬೇಕು ಎಂಬುದರ ಕಡೆ ಗಮನ ಹರಿಸಿದೆ.

ಕಥೆ ಹುಟ್ಟಿದ್ದಕ್ಕೂ ತೆರೆಯ ಮೇಲೆ ಬಂದದ್ದಕ್ಕೂ ಅಷ್ಟು ವರ್ಷಗಳ ಅಂತರವಿದ್ದರೂ ಮೂಲ ಆಶಯದಲ್ಲಿ ಹೆಚ್ಚಿನ ಬದಲಾವಣೆಗಳಾಗಲಿಲ್ಲ. ಈ ಚಿತ್ರ ಅಷ್ಟು ವರ್ಷ ಪೇಪರ್ ಮೇಲೆಯೇ ಇರಲು ಮುಖ್ಯ ಕಾರಣ ಮಕ್ಕಳಚಿತ್ರಗಳಿಗೆ ಹಣ ಹೂಡವವರ ಕೊರತೆ. ನಿರ್ಮಾಪಕಿ ಜಯಮಾಲ ಚಿತ್ರನಿರ್ಮಾಣದ ಹೊಣೆ ಹೊತ್ತ ಮೇಲೆಯೇ ಇದು ಪ್ರಾರಂಭವಾದದ್ದು.

‘ತುತ್ತೂರಿ’ಯ ಕಥೆ ನಗರಪ್ರದೇಶದಲ್ಲಿರುವ ಮಕ್ಕಳನ್ನು ಕುರಿತದ್ದಾದರೂ, ಹಳ್ಳಿಯಿಂದ ಬರುವ ಶಿವಲಿಂಗ ಇಲ್ಲಿಯವರ ಮೇಲೆ ತನ್ನ ಪ್ರಭಾವ ಬೀರುತ್ತಾನೆ. ಇವನೊಂದಿಗೆ ಚಿತ್ರದ ಉದ್ದಕ್ಕೂ ಸುಮಾರು ಮುನ್ನೂರಕ್ಕೂ ಹೆಚ್ಚು ಮಕ್ಕಳು ಬಂದು ಹೋಗುತ್ತಾರೆ. ಸುಮಾರು ಒಂದು ಸಾವಿರ ಮಕ್ಕಳನ್ನು ಸಂದರ್ಶಿಸಿ ಅದರಲ್ಲಿ ಮುನ್ನೂರು ಮಕ್ಕಳನ್ನು ಆಯ್ಕೆ ಮಾಡಿಕೊಂಡೆ. ಮುಖ್ಯವಾದ ಮೂವತ್ತು ಮಕ್ಕಳಿಗೆ ನಾಲ್ಕು ದಿನಗಳ ಒಂದು ತರಬೇತಿ ಶಿಬಿರವನ್ನು ಏರ್ಪಡಿಸಿದೆ. ಆ ಮೂಲಕ ಅವರಿಗೆ ಹತ್ತಿರವಾಗಬೇಕಿತ್ತು. ಜೊತೆಗೆ ನನ್ನ ಮತ್ತು ಅವರ ನಡುವೆ ಒಂದು ಬಾಂಧವ್ಯ ಬೆಳೆಯಬೇಕಿತ್ತು. ಇದಕ್ಕೆ ಸಾಕಷ್ಟು ಸಹಾಯ ಮಾಡಿದ್ದು ಚಾಕ್‌ಲೇಟ್ ಹಾಗೂ ಐಸ್‌ಕ್ರೀಂಗಳು. ಶಿಬಿರದ ಕೊನೆಯ ದಿನ ಅಷ್ಟೂ ಮಕ್ಕಳನ್ನು ಒಂದೆಡೆ ಸೇರಿಸಿ ಈ ಚಿತ್ರದ ಕಥೆ ಹೇಳಿದೆ. ಕಥೆ ಹೇಳುವಾಗ ಒಂದು ತಂತ್ರ ಬಳಸಿದೆ. ಮೊದಲಿಗೆ ಒಂದೊಂದೇ ದೃಶ್ಯ ಹೇಳಿ ಮುಂದಿನ ದೃಶ್ಯದಲ್ಲಿ ಕಥೆ ಏನಾಗಬಹುದು, ಎಂದು ಮಕ್ಕಳ ಬಾಯಿಂದಲೇ ಹೊರ ಬರುವಂತೆ ಮಾಡಿದೆ. ಸಣ್ಣ-ಪುಟ್ಟ ಬದಲಾವಣೆಗಳನ್ನು ಬಿಟ್ಟರೆ ನಾವು ಈ ಹಿಂದೆ ಮಾಡಿಕೊಂಡ ಕಥೆಗೂ ಇದಕ್ಕೂ ಹೆಚ್ಚಿನ ಬದಲಾವಣೆಗಳಾಗಲಿಲ್ಲ. ಕಥೆ ಹೇಳುವ ಕ್ರಿಯೆ ಮುಗಿದು ಕೇಳಿದ ಮಕ್ಕಳು ಚಪ್ಪಾಳೆ ತಟ್ಟಿದಾಗ ಅರ್ಧ ಗೆದ್ದಂತಾಯಿತು.

ಇಡೀ ‘ತುತ್ತೂರಿ’ಯ ಕಥೆ ಮಕ್ಕಳ ಆಟದ ಸುತ್ತ ಸುತ್ತುತ್ತಿದ್ದುದರಿಂದ ಮಕ್ಕಳು ಶೂಟಿಂಗ್ ಅನ್ನು ಒಂದು ಆಟ ಎಂಬಂತೆಯೇ ಭಾವಿಸಿದರು, ಸಂಭ್ರಮದಿಂದ ಭಾಗವಹಿಸಿದರು. ಜೊತೆ ಚಿತ್ರೀಕರಣ ನಡೆದದ್ದು ಬೇಸಿಗೆ ರಜದಲ್ಲಿ. ಅವರಿಗೆ ಇದು ಒಂದು ಪಿಕ್‌ನಿಕ್‌ನಂತೆಯೇ ಭಾಸವಾಗಬೇಕು ಎಂದು ಎಚ್ಚರಿಕೆ ವಹಿಸಿದ್ದೆವು. ಚಿತ್ರದಲ್ಲಿ ಒಂದು ಬರಡು ಪ್ರದೇಶವನ್ನು ಮಕ್ಕಳೆಲ್ಲ ಸೇರಿ ಸುಂದರವಾದ ಆಟದ ಮೈದಾನ ಮಾಡಿಕೊಳ್ಳುತ್ತವೆ. ಅಲ್ಲೇ ಸಿಗುವ ವಸ್ತುಗಳಿಂದ ಬಗೆ ಬಗೆಯ ಆಟಗಳನ್ನು ಆಡುತ್ತವೆ. ಆಟದ ಮೈದಾನವನ್ನು ಸಿದ್ಧ ಮಾಡುವುದರಲ್ಲಿ ಚಿತ್ರೀಕರಣದ ಮಕ್ಕಳ ಪಾಲೂ ಇತ್ತು. ಕೊನೆಯಲ್ಲಿ ಮಕ್ಕಳು ಕಟ್ಟಿದ್ದ ಆಟದ ಮೈದಾನವನ್ನು ಬುಲ್ಡೋಜರ್ ಬಂದು ಬೀಳಿಸಿ ನೆಲಸಮ ಮಾಡುತ್ತದೆ. ನಿಜವಾಗಿ ಸಮಸ್ಯೆ ಎದುರಾದದ್ದು ಇಲ್ಲಿ!

ಈ ಸನ್ನಿವೇಶದಲ್ಲಿ ಸುಮಾರು ಐವತ್ತು ಮಕ್ಕಳು ಭಾಗವಹಿಸಿದ್ದವು. ನಾವು ಚಿತ್ರೀಕರಣಕ್ಕೆಂದು ಎಲ್ಲ ಸಿದ್ಧಮಾಡಿಕೊಂಡೆವು. ಒಂದೆಡೆಯಿಂದ ಮೈದಾನವನ್ನು ಬೀಳಿಸುವುದು ಮಕ್ಕಳು ಅದನ್ನು ತಡೆಯಲು ಪ್ರಯತ್ನಿಸುವುದು ಈ ಸನ್ನಿವೇಶವನ್ನು ಚಿತ್ರೀಕರಿಸಬೇಕಿತ್ತು. ಮಕ್ಕಳು ಇದರಲ್ಲಿ ಹೇಗೆ ಭಾಗವಹಿಸುತ್ತಾರೆ ಎಂಬ ಕುತೂಹಲವಿತ್ತು. ಮಕ್ಕಳು ಭಿನ್ನವಾಗಿ ಪ್ರಕ್ರಿಯಿಸಿದರು. ತಾವು ಕಟ್ಟಿದ ಆಟದ ಮೈದಾನ ಹಾಳಾಗುವುದನ್ನು ಅದು ಚಿತ್ರೀಕರಣ ಎಂದರೂ ಕೂಡ ಒಪ್ಪಿಕೊಳ್ಳಲಿಲ್ಲ. ‘ಪ್ಲೀಸ್ ಬೀಳಿಸಬೇಡಿ ಅಂಕಲ್’ ಎಂದು ಬಂದು ನನ್ನ ಕೈ ಹಿಡಿದು ನಿಜವಾದ ಕಣ್ಣೀರು ಹಾಕಿದಾಗ ಚಿತ್ರೀಕರಿಸುವುದು ನಮಗೆ ತುಂಬ ಕಷ್ಟವಾಯಿತು. ಸ್ವಲ್ಪ ಕಾಲ ಚಿತ್ರೀಕರಣ ಸ್ಥಗಿತಗೊಳಿಸಿ ಅವರಿಗೆ ಸಮಾಧಾನ ಹೇಳಿ ಚಿತ್ರೀಕರಣ ಮುಂದುವರಿಸಿದಾಗ ಬಿಕ್ಕಿ ಬಿಕ್ಕಿ ಅತ್ತರು. ಸನ್ನಿವೇಶವೂ ಇದೇ ಆಗಿದ್ದುದರಿಂದ ಇದು ನೈಜವಾಗೇನೋ ಬಂತು. ಆದರೆ ಚಿತ್ರೀಕರಣ ಮುಗಿದ ಮೇಲೆ ಮಕ್ಕಳು ಸುಧಾರಿಸಿಕೊಳ್ಳಲು ಸ್ವಲ್ಪ ಸಮಯವೇ ಇಡಿಯಿತು. ಈಗಲೂ ಚಿತ್ರಮಂದಿರದಲ್ಲಿ ಈ ದೃಶ್ಯ ತೆರೆಯ ಮೇಲೆ ಬಂದಾಗ ಮಕ್ಕಳ ಕಣ್ಣಲ್ಲಿ ನೀರು ಬರುವುದನ್ನು ಚಿತ್ರಮಂದಿರದಲ್ಲಿ ಗಮನಿಸಿದ್ದೇನೆ. ಆಗ ಅನ್ನಿಸುತ್ತದೆ ನನ್ನ ಚಿತ್ರದ ಯಶಸ್ಸು ಇದೇ ಎಂದು.

‘ತುತ್ತೂರಿ’ ಬರೀ ನಮ್ಮ ಊರಿನಲ್ಲಿ ಅಷ್ಟೇ ಅಲ್ಲ, ಹೊರಗಿನ ಹಲವಾರು ದೇಶಗಳಲ್ಲಿ ನಮ್ಮ ಭಾಷೆ, ಸಂಸ್ಕೃತಿ ಗೊತ್ತಿಲ್ಲದ ಮಕ್ಕಳ ಮನಸ್ಸನ್ನೂ ಗೆದ್ದಿದೆ, ಜೊತೆಗೆ ಪ್ರಶಸ್ತಿಯನ್ನೂ ತಂದಿದೆ. ಅಲ್ಲಿಗೆ ಒಂದು ಅರ್ಥವಾದ ಸಂಗತಿ ಎಂದರೆ ಮಕ್ಕಳು ಎಲ್ಲಿದ್ದರೂ ಹೇಗಿದ್ದರೂ ಮಕ್ಕಳೇ! ಮಕ್ಕಳ ಚಿತ್ರ ಮಕ್ಕಳನ್ನು ಬರೀ ರಂಜಿಸಿದರೆ ಸಾಲದು, ಅವರನ್ನು ಚಿಂತನೆಗೂ ಹಚ್ಚಬೇಕು. ಆಗ ನಿಜವಾದ ರೀತಿಯಲ್ಲಿ ಒಂದು ಮಕ್ಕಳ ಚಿತ್ರ ಯಶಸ್ವಿಯಾದಂತೆ.

ಆದರೆ ದುರಾದೃಷ್ಟವಶಾತ್ ನಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಳ್ಳೆಯ ಮಕ್ಕಳ ಚಿತ್ರಗಳು ತಯಾರಾಗುತ್ತಿಲ್ಲ. ಸಿನಿಮಾ ತನ್ನೊಳಗೆ ವ್ಯಾಪಾರವನ್ನು ಮೂರ್ತೀಭವಿಸಿಕೊಂಡಿರುವುದರಿಂದ ಕಮರ್ಷಿಯಲ್ ಚಿತ್ರಗಳೊಂದಿಗೆ ವ್ಯಾವಹಾರಿಕ ಪೈಪೋಟಿಯಲ್ಲಿ ಗೆಲ್ಲಲಾಗದೆ ಮಕ್ಕಳ ಚಿತ್ರಗಳು ಸೊರಗುತ್ತಿವೆ. ಇತ್ತ ನಮ್ಮ ಮಕ್ಕಳು ಟಿವಿಯಲ್ಲಿ ಕಾರ್ಟೂನ್ ನೆಟ್‌ವರ್ಕ್ ಎಂಜಾಯ್ ಮಾಡುತ್ತಾ, WWF ಆನಂದಿಸುತ್ತಾ ಬೆಳೆಯುತ್ತಿವೆ. ನನ್ನ ಮಗ ಹೇಳುತ್ತಿದ್ದಾನೆ- ‘ಅಪ್ಪಾ, ನಿನ್ನ ಮುಂದಿನ ಚಿತ್ರದಲ್ಲಿ ಫೈಟಿಂಗ್ ಇರಲಿ…’ ಎಂದು!

ಪುಟ್ಟಕ್ಕನ ಹೆದ್ದಾರಿ!

ಸುಮಾರು ಏಳೆಂಟು ವರ್ಷಗಳ ಹಿಂದಿನ ಮಾತು.

ಆಗ ನಾನು ಕರ್ನಾಟಕ ಟೆಲಿವಿಷನ್ ಸಂಘಟನೆಯ ಅಧ್ಯಕ್ಷನಾಗಿದ್ದೆ, ಗೆಳೆಯ ಬಿ.ಸುರೇಶ ಕಾರ್ಯದರ್ಶಿಯಾಗಿದ್ದ. ದಾವಣಗೆರೆಯಲ್ಲಿ ನಮ್ಮ ಸಂಘಟನೆಯಿಂದ ಮನರಂಜನಾ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದೆವು. ಹಾಗಾಗಿ ಒಂದು ತಿಂಗಳುಗಳ ಕಾಲ ದಾವಣಗೆರೆಗೂ ಬೆಂಗಳೂರಿಗೂ ವಾರಕ್ಕೆ ಎರಡು ಮೂರು ಬಾರಿಯಂತೆ ಕಾರಿನಲ್ಲಿ ಹೋಗಿ ಬಂದು ಮಾಡುತ್ತಿದ್ದೆವು.

ತುಮಕೂರು ದಾಟಿದ ನಂತರ ವಾಜಪೇಯಿ ಕನಸಿನ ಕೂಸಾದ ಷಟ್ಪಥದ ಹೆದ್ದಾರಿ ಕೆಲಸ ತ್ವರಿತಗತಿಯಲ್ಲಿ ನಡೆಯುತ್ತಿತ್ತು. ಆಗಿನ್ನೂ ಈ ‘ನೈಸ್’ ಇತ್ಯಾದಿಗಳು ಬಂದಿರಲಿಲ್ಲ. ಕರ್ನಾಟಕದ ಮಟ್ಟಿಗೆ ಇದೇ ದೊಡ್ಡ ಹೆದ್ದಾರಿ. ಸಾವಿರಾರು ಜನ ಬೆವರು ಹರಿಸಿ ರಸ್ತೆ ಕೆಲಸ ಮಾಡುತ್ತಿದ್ದರು. ಹೆದ್ದಾರಿ ಬದಿಯ ಅಕ್ಕ-ಪಕ್ಕದ ರೈತರು ಅದನ್ನು ಅಚ್ಚರಿ, ಬೆರಗು, ಭಯದಿಂದ ನೋಡುತ್ತಾ ನಿಂತಿರುತ್ತಿದ್ದರು. ಉದ್ದಕ್ಕೂ ಬೆಳೆಯುತ್ತಾ ಹೋಗುತ್ತಿದ್ದ ಹೆಬ್ಬಾವು ಮಾದರಿಯ ಈ ಹೆದ್ದಾರಿ, ಬದಿಯ ಹೊಲ-ಗದ್ದೆಗಳಲ್ಲೆಲ್ಲಾ ನುಂಗುತ್ತಾ ಹೋಗುತ್ತಿತ್ತು. ಹಳ್ಳಿಯ ಹಿನ್ನೆಲೆಯಿಂದ ಬಂದ ನನಗೆ ಕೃಷಿ ಭೂಮಿಯ ಕಬಳಿಕೆ ಕೊಂಚ ಕಸಿವಿಸಿಯನ್ನು ಉಂಟು ಮಾಡಿತ್ತು. ಈ ಅಭಿವೃದ್ಧಿ ಎಂಬ ಮರೀಚಿಕೆಯಯ ಲಾಭ-ನಷ್ಟಗಳ ವಿಚಾರವಾಗಿ ಸುರೇಶ-ನಾನು ಮಾತಾಡುತ್ತಾ ಸಾಗುತ್ತಿದ್ದೆವು…

‘ಇದು ಸಿನಿಮಾಗೆ ಒಳ್ಳೇ ಸಬ್ಜೆಕ್ಟ್… ನಾವು ಇದನ್ನೇ ಇಟ್ಟುಕೊಂಡು ಒಂದು ಒಳ್ಳೇ ಸಿನಿಮಾ ಮಾಡಬಹುದು…’ ಎಂದು ಸುರೇಶ ಪದೇ ಪದೇ ಹೇಳುತ್ತಿದ್ದ. ಆಗ ಸುರೇಶನ ತಲೆಯಲ್ಲಿ ಪುಟ್ಟಕ್ಕ ಹೊಕ್ಕಿದ್ದಳೋ ಇಲ್ಲವೋ ಗೊತ್ತಿಲ್ಲ. ನಂತರದ ದಿನಗಳಲ್ಲಿ ಅವನಲ್ಲಿ ಚಿಗುರೊಡೆಯುತ್ತಾ ಹೋದ ಯೋಚನೆ ಕ್ರಮೇಣ ಗಟ್ಟಿಯಾಗಿ ಇಂದು ‘ಪುಟ್ಟಕ್ಕನ ಹೈವೇ’ ಆಗಿ ರೂಪಾಂತರವಾಗಿದೆ. ಚಿತ್ರ ನೋಡಿ ನನಗೆ ಸಂತೋಷವಾಯಿತು. ಜೊತೆಗೆ ಇದೆಲ್ಲಾ ನೆನಪಿಗೆ ಬಂತು, ಪ್ರಸ್ತುತ ಜ್ವಲಂತ ಸಮಸ್ಯೆಗೆ ಸೃಜನಶೀಲನೊಬ್ಬ ಪ್ರತಿಕ್ರಿಯಿಸಿರುವ ರೀತಿ ಇದು. ಚಿತ್ರ ಈ ಸಮಸ್ಯೆಗೆ ಉತ್ತರವನ್ನೇನೂ ಕೊಡುವುದಿಲ್ಲ; ಕೊಡಬೇಕು ಎನ್ನುವುದೂ ಉಚಿತವಲ್ಲ. ಆದರೆ ಒಂದು ಪ್ರಮುಖ ಸಮಸ್ಯೆಯ ಮೇಲೆ ಬೆಳೆಕು ಚಲ್ಲುವುದರೊಂದಿಗೆ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುತ್ತದೆ.

ಮೊನ್ನೆ ಮೊನ್ನೆ ಅದೇ ರಸ್ತೆಯಲ್ಲಿ ಚಿತ್ರದುರ್ಗದವರೆಗೆ ಹೋಗಿ ಬಂದೆ. ಈಗ ರಸ್ತೆ ಸಂಪೂರ್ಣವಾಗಿ ಸಿದ್ಧವಾಗಿ ಬಳಕೆಯಾಗುತ್ತಿದೆ. ಉದ್ದಕ್ಕೂ ಅಕ್ಕ-ಪಕ್ಕ ಬೇಲಿಯೆಂಬ ಕೋಟೆಯನ್ನು ಭದ್ರವಾಗಿ ಕಟ್ಟಿಕೊಂಡಿದೆ. ಈಗಲೂ ಅಲ್ಲಲ್ಲಿ ಮಕ್ಕಳು ಅಚ್ಚರಿ, ಬೆರಗಿನಿಂದ ಓಡಾಡುವ ಕಾರು, ಬಸ್ಸುಗಳನ್ನು ನೋಡುತ್ತಿರುವುದು ಕಾಣುತ್ತದೆ. ಅಭಿವ್ರೃದ್ಧಿಯ ಸುಖಕ್ಕೆ ತಮ್ಮ ಬದುಕನ್ನು ದಾರೆ ಎರೆದುಕೊಟ್ಟ ಹಳ್ಳಿಗರು ಬೇಲಿಯಾಚೆ ತಮ್ಮ ನಿತ್ಯದ ಬದುಕನ್ನು ಕಟ್ಟಿಕೊಳ್ಳಲು ಒದ್ದಾಡುತ್ತಿದ್ದಾರೆ…

ರಸ್ತೆ ಮಧ್ಯೆ ವಿಶ್ರಾಂತಿಗಾಗಿ ನಿಲ್ಲಿಸಿದಾಗ ಒಬ್ಬ ರೈತ ಭೇಟಿಯಾದ. ಅವನ ಹೆಸರು ಭೋಜಣ್ಣ. ಅವನ ಹಳ್ಳಿ ಇರುವುದು ಹೆದ್ದಾರಿಯ ಬಲಗಡೆ. ಜಮೀನು ಇರುವುದು ರಸ್ತೆಯ ಎಡಗಡೆ. ಹೆದ್ದಾರಿ ಇವನ ಬದುಕನ್ನು ಇಭ್ಭಾಗಿಸಿಬಿಟ್ಟಿದೆ! ಮುಂಚೆಯೆಲ್ಲಾ ಹೊಲದ ಕೆಲಸಕ್ಕೆ ಸಲೀಸಾಗಿ ರಸ್ತೆ ದಾಟಿ ಬರುತ್ತಿದವನು ಈಗ ಬಲಬದಿಯಿಂದ ಎಡಬದಿಗೆ ಬರಬೇಕಾದರೆ ಕೆಲವು ಕಿಲೋಮೀಟರ್ ನಡೆದು, ಸುರಂಗದಲ್ಲಿ ದಾಟಿ iತ್ತೆ ಕೆಲವು ಕಿಲೋಮೀಟರ್ ನಡೆದು ತನ್ನ ಹೊಲ ತಲಪಬೇಕು! ಮುಂಚೆ ಕಲ್ಲೆಸೆತದ ದೂರದಲ್ಲಿದ್ದ ಅವನ ಹೊಲ ಈಗ ಗಾವುದ ದೂರ. ನನ್ನ ಹೊಲವನ್ನು ಮಾರಬೇಕೆಂದಿದ್ದೇನೆ, ಯಾರಾದರೂ ಪಟ್ಟಣದವರು ಕೊಳ್ಳಲು ಬರುತ್ತಾರೆಯೇ ಎಂದು ಕಾದಿದ್ದೇನೆ ಎಂದ..

ಇಂಥ ಹಲವಾರು ನೋವಿನ ಕಥೆಗಳು ಹೆದ್ದಾರಿಯ ಮೋಟಾರಿನ ಸದ್ದಿನಲ್ಲಿ ತಮ್ಮ ಧ್ವನಿ ಕಳೆದುಕೊಂಡಿವೆ. ಕಾರಿನವರ ಮುಖದಲ್ಲಿ ರಸ್ತೆ ಮೇಲೆ ತೇಲಿ ಹೋಗುವ ಸುಖದ ನಗು ಇದ್ದರೆ, ರೈತರಲ್ಲಿ ವಿಷಾದವಿದೆ.

ಈ ಹಿನ್ನೆಲೆಯಲ್ಲಿ ರೂಪುಗೊಂಡಿರುವ ‘ಪುಟ್ಟಕ್ಕನ ಹೈವೇ’ ವಿಭಜನೆಗೊಂಡ ಸಾಮಾನ್ಯನ ಬದುಕನ್ನು ನಮ್ಮ ಮುಂದೆ ಸಾಕಾರಗೊಳಿಸುತ್ತದೆ. ಚಿತ್ರದಲ್ಲಿ ಬರುವ ಪುಟ್ಟಕ್ಕ, ಅಂಬಕ್ಕ, ಚಿನ್ನು, ಚನ್ನಯ್ಯ, ಮಾದಯ್ಯ… ಎಲ್ಲರೂ ಅಭಿವೃದ್ಧಿಯ ಹೊಡೆತಕ್ಕೆ ಬಿದ್ದವರೇ. ಇವರೆಲ್ಲಾ ಯಾವ ಹಾದಿ ಹಿಡಿಯಬೇಕು?

ಚಿತ್ರ ಹೇಳುವಂತೆ: ಅಭಿವೃದ್ಧಿ ಎನ್ನುವುದು ಎಲ್ಲ ಆಡಳಿತ ಯಂತ್ರಗಳ ಮಂತ್ರ. ಈ ಅಭಿವೃದ್ಧಿಯಿಂದ ಲಾಭ ಪಡೆಯುವವರ ಸಂಖ್ಯೆ ಎಷ್ಟಿರುತ್ತದೋ ನಷ್ಟ ಅನುಭವಿಸುವವರ ಸಂಖ್ಯೆಯೂ ಅಷ್ಟೇ ಇರುತ್ತದೆ. ಈ ಹಿನ್ನೆಲೆಯಲ್ಲಿಯೇ ಒಬ್ಬರಿಗೆ ಒಳ್ಳೆಯದು ಅನ್ನಿಸುವುದು ಮತ್ತೊಬ್ಬರಿಗೆ ದೊಡ್ಡ ಅವಘಡ ಎನಿಸಲೂ ಬಹುದು… ಆದರೆ ಸಾಮಾನ್ಯವಾಗಿ ಇಲ್ಲಿ ಬಲಿಯಾಗುವವರು ಸಾಮಾನ್ಯ ಜನ. ಅಭಿವೃದ್ಧಿಯ ಹೆಚ್ಚಿನ ಅನುಕೂಲ ಹೊಂದುವವರು ಸ್ಥಿತಿವಂತರು. ಅದೇ ಚಿತ್ರದ ಹಾಡೊಂದು ಹೀಗೆ ಧ್ವನಿಸುತ್ತದೆ:

ಕಾಡಿಗೆ ದಾರಿಗಳ ಮುಚ್ಚುವುದೇ ಚಾಳಿ
ನಾಡಿಗೆ ದಾರಿಗಳ ಹುಡುಕುವುದೇ ಗೀಳು
ನಾಡಿನ ದಾರಿ ಕಾಡಿಗೆ ಬಿದ್ದರೆ
ಅಳಿಯುವುದೇ ದಾರಿ…

(೩ ಜುಲೈ ೨೦೧೧, `ಉದಯವಾಣಿ`ಯಲ್ಲಿ ಪ್ರಕಟ)