ಕಥೆ ಹುಟ್ಟಿದ ಸಮಯ…
ನಿಮಗೆ ಗೊತ್ತಿರಬೇಕಲ್ಲವೇ? ನಾನೀಗ ನನ್ನ ಒಂಬತ್ತನೇ ಸಿನಿಮಾ ಮಾಡಲು ಹೊರಟಿದ್ದೇನೆ. ಮತ್ತೊಂದು ಸಾಹಸದ ಅಧ್ಯಾಯ ಪ್ರಾರಂಭ!
‘ವಿದಾಯ’ ಅಂತ ಸಿನಿಮಾದ ಹೆಸರು.
ಈ ಸಿನಿಮಾದ ನಿಜವಾದ ಎಳೆ ಹುಟ್ಟಿದ್ದು ಒಂಬತ್ತು ವರ್ಷಗಳ ಹಿಂದೆ. ಆಗ ನಮ್ಮ ತಂದೆ ಆಸ್ಪತ್ರೆಯಲ್ಲಿದ್ದರು. ಅವರಿಗೆ ಪಾರ್ಕಿನ್‌ಸನ್ ಎಂಬ ವಿದೇಶಿ ಹೆಸರಿನ ಕಾಯಿಲೆ ಬಂದಿತ್ತು. ಇದು ನರಮಂಡಲಕ್ಕೆ ಸಂಬಂಧಿಸಿದ ರೋಗ. ಜೊತೆಗೆ ಹೈ ಡಯಾಬಿಟಿಕ್ ಬೇರೆ. ಸುಮಾರು ಮೂವತ್ತೇಳು ವರ್ಷ ಮಕ್ಕಳಿಗೆ ಪಾಠ ಮಾಡಿದ್ದ ಮೇಷ್ಟ್ರು ಅವರು. ಮಾತಾಡಿ ಮಾತಾಡಿ ಧ್ವನಿ ಗಟ್ಟಿಯಾಗಿತ್ತು. ಆದರೆ ಏಳು ವರ್ಷದ ಹಾಸಿಗೆ ವಾಸ ಅವರನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟಿತು. ತಮ್ಮ ಎಪ್ಪತ್ತನೆಯ ವಯಸ್ಸಿನಲ್ಲಿ ಅವರು ಮಾತು ಅಸ್ಪಷ್ಟವಾಗಿ, ಹಗಲೂ-ರಾತ್ರಿ ಕೈ ಕಾಲು ಒದರುತ್ತಾ ನರಳುವುದನ್ನು ನೋಡಿದರೆ ಸಂಕಟವಾಗುತ್ತಿತ್ತು.
ಅಪ್ಪ-ಅಮ್ಮ ಇಬ್ಬರೂ ಇದ್ದದ್ದು ಬೆಂಗಳೂರಿನಿಂದ ಸುಮಾರು 140 ಕಿಲೋ ಮೀಟರ್ ದೂರದ ಊರಿನಲ್ಲಿ. ದಂಡಿನಶಿವರ ಅನ್ನೋದು ನನ್ನ ಹುಟ್ಟೂರಿನ ಹೆಸರು. ಅದೊಂದು ಹೋಬಳಿ ಕೇಂದ್ರ. ದೊಡ್ಡ ಹಳ್ಳಿ ಎನ್ನಬಹುದು. ಊರಿನಲ್ಲಿ ಇದ್ದವರು ಅಣ್ಣ-ಅಮ್ಮ ಇಬ್ಬರೇ. ಊರಿಗೊಬ್ಬರೇ ವೈದ್ಯರು. ಹಾಗಾಗಿ ಅಣ್ಣನನ್ನು ತಿಂಗಳಿಗೊಮ್ಮೆ ಎರಡು ತಿಂಗಳಿಗೊಮ್ಮೆ ಬೆಂಗಳೂರಿಗೆ ಕರೆದುಕೊಂಡು ಬಂದು ನರಮಂಡಲದ ತಜ್ಞರಿಗೆ ತೋರಿಸಿಕೊಂಡು ಹೋಗಬೇಕಿತ್ತು. ಅಮ್ಮನಿಗೆ ವಯಸ್ಸಾಗಿದ್ದರೂ ಗಟ್ಟಿ-ಮುಟ್ಟಾಗಿದ್ದರು. ಹಾಗಾಗಿ ಅಣ್ಣನನ್ನು ಚನ್ನಾಗಿ ನೋಡಿಕೊಂಡರು. ಬೆಂಗಳೂರಿನಲ್ಲಿದ್ದ ನಮಗಾರಿಗೂ ಕಷ್ಟ ಕೊಡಲಿಲ್ಲ. ಒಮ್ಮೆ ಅಮ್ಮ ಮನೆಯಲ್ಲಿ ಜಾರಿ ಬಿದ್ದು ಸೊಂಟ ಮುರಿದುಕೊಂಡರು. ಆಗ ನಮ್ಮ ಅವಸ್ಥೆ ನೋಡಬೇಕಿತ್ತು.
ಒಮ್ಮೆ ಅಣ್ಣನನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೆವು. ಅಣ್ಣನನ್ನು ನೋಡಿದ ವೈದ್ಯರು. ಇದು ಇಷ್ಟೇ. ಇನ್ನೂ ಕೆಟ್ಟ ಪರಿಸ್ಥಿತಿಗೆ ಹೋಗಬಹುದು. ಕೊನೆಯವರೆಗೂ ಮಾತ್ರೆ ಔಷಧಿ ಕೊಡುತ್ತಿರಿ. ಇರುವಷ್ಟು ದಿನ ಚನ್ನಾಗಿ ನೋಡಿಕೊಳ್ಳಿ ಎಂದರು. ಮುಂದೇನು ಎಂಬುದನ್ನು ಚರ್ಚಿಸಲು ನಾನು, ನಮ್ಮಣ್ಣ ಮತ್ತು ನಮ್ಮಕ್ಕ ಆಸ್ಪತ್ರೆಯಲ್ಲಿ ಸೇರಿದ್ದೆವು. ಆಗ ನಾನು ಪ್ರಾಸಂಗಿಕವಾಗಿ ಮಾತನಾಡುತ್ತಾ ‘ದಯಾಮರಣ’ದ ವಿಚಾರ ತೆಗೆದೆ. ನಮ್ಮಕ್ಕ ಕೆಂಡಾಮಂಡಲವಾಗಿಬಿಟ್ಟಳು. ನೀವು ಗಂಡು ಮಕ್ಕಳು ಸ್ವಾರ್ಥಿಗಳು. ಹೆತ್ತವರನ್ನು ನೋಡಿಕೊಳ್ಳಲು ಕಷ್ಟವಾದರೆ ಸುಮ್ಮನಿದ್ದು ಬಿಡಿ. ಅಣ್ಣನ ಕೊನೆಯ ಉಸಿರಿನವರೆಗೂ ನಾನು ನೋಡಿಕೊಳ್ಳುತ್ತೇನೆ ಎಂದಳು. ಮುಂದೆಂದೂ ‘ದಯಾಮರಣ’ದ ವಿಚಾರ ಬರಲಿಲ್ಲ. ಅದಾದ ಸುಮಾರು ಒಂದು ವರ್ಷದಲ್ಲಿ ಅಣ್ಣ ಸಹಜವಾದ ಕೊನೆಯನ್ನು ಕಂಡರು ಎನ್ನಿ.
ಮತ್ತೆ ನನಗೆ ‘ದಯಾಮರಣ’ದ ಸಂಗತಿ ಕಾಡಿದ್ದು ಅನುಣಾ ಶಾನಭಾಗ್ ಕತೆಯನ್ನು ಓದಿದ ಮೇಲೆ.
ಸುಮ್ಮನೇ ಯೋಚಿಸಿ. ನಮ್ಮ ದೇಶದಲ್ಲಿ ಸಚಿನ್ ತೆಂಡೂಲ್ಕರ್ ಹೆಸರನ್ನು ಕೇಳದವರು ಯಾರಾದರೂ ಇರಬಹುದೆ? ಹುಡುಕಿದರೆ ಸಿಗಬಹುದೇನೋ. ಇಂಥವರು ಪ್ರಾಯಶ: ಹಳ್ಳಿಗಳಲ್ಲಿ, ಗುಡ್ಡ-ಗಾಡುಗಳಲ್ಲಿ ಸಿಕ್ಕರೂ ಸಿಗಬಹುದು. ಆದರೆ ಮುಂಬಯಿನಲ್ಲಂತೂ ಸಾಧ್ಯವೇ ಇಲ್ಲ! ಸಚಿನ್, ಸಲ್ಮಾನ್ ಖಾನ್, ಶಾರುಖ್ ಖಾನ್, ಅಮೀರ್ ಖಾನ್‌ಗಳೆಲ್ಲಾ ಮುಂಬಯಿನಲ್ಲಿ ಸುಪ್ರಸಿದ್ಧ ವ್ಯಕ್ತಿಗಳು.
ಆದರೆ ಮುಂಬಯಿಯ ಹೃದಯಭಾಗದಲ್ಲಿರುವ ಒಬ್ಬ ವ್ಯಕ್ತಿಗೆ ಇವರು ಯಾರೂ ಗೊತ್ತಿಲ್ಲ! ಸಚಿನ್ ಏನಾದರೂ ಮುಂದೆ ಬಂದು ನಿಂತರೆ ‘ನೀನಾರಪ್ಪ?’ ಎಂದು ಖಂಡಿತ ಕೇಳುತ್ತಾರೆ ಎಂದರೆ ನೀವು ನಂಬಲೇ ಪಡಲೇಬೇಕು. ಈಕೆಯೇ ಅರವತ್ತು ವರ್ಷ ದಾಟಿರುವ ಅರುಣಾ ಶಾನಭಾಗ್ ಎಂಬ ಕನ್ನಡತಿ.
ಇಂದೂ ಕೂಡ ಮುಂಬಯಿಯ ಕೆಇಎಂ (ಕಿಂಗ್ ಎಡ್ವರ್ಡ್ ಮೆಮೋರಿಯಲ್) ಆಸ್ಪತ್ರೆಯ ವಾರ್ಡ್ ನಂಬರ ನಾಲ್ಕರಲ್ಲಿ ಮಲಗಿರುವ ಅರುಣಾಳದ್ದು ಘೋರ ಕತೆ. ಹುಟ್ಟಿದ್ದು ಕಾರವಾರದ ಬಳಿಯ ಹಳದೀಪುರದಲ್ಲಿ. ದಾದಿಯಾಗಿ ಸಮಾಜ ಸೇವೆ ಮಾಡುವ ಕನಸನ್ನು ಹೊತ್ತು ನಲವತ್ತು ವರ್ಷಗಳ ಹಿಂದೆ ಆಗಿನ ಬಾಂಬೆಗೆ ಹೋಗಿ ನರ್ಸ್ ಆಗಿ ಆಸ್ಪತ್ರೆ ಸೇರಿಕೊಂಡಿದ್ದಳು. ಅಲ್ಲೇ ಕೆಲಸ ಮಾಡುತ್ತಾ ಅಲ್ಲಿಯ ವೈದ್ಯನೊಬ್ಬನನ್ನು ಪ್ರೀತಿಸಿ ಮದುವೆಯ ಹೊಸ್ತಿಲಲ್ಲಿ ನಿಂತಿದ್ದ ಚಂದದ ಹೆಣ್ಣು ಮಗಳು ಈಕೆ. ಅಂದೊಂದು ದಿನ ಅದೇ ಆಸ್ಪತ್ರೆಯ ಕಸಗುಡಿಸುವ ಸೋಹನ್‌ಲಾಲ್ ಎಂಬುವವನ ತಪ್ಪನ್ನು ಎತ್ತಿ ತೋರಿಸದ್ದೇ ಈಕೆಗೆ ಮುಳುವಾಯಿತು.
ಅಂದು, 1973 ನೆಯ ಇಸವಿ ನವೆಂಬರ್ ತಿಂಗಳ ಇಪ್ಪತ್ತೇಳನೇ ತಾರೀಖಿನ ಇಳಿ ಸಂಜೆ. ಹಗಲಿನ ಡ್ಯೂಟಿ ಮುಗಿಸಿದ ಅರುಣಾ ಆಸ್ಪತ್ರೆಯ ಕೆಳಮಹಡಿಯಲ್ಲಿ ಬಟ್ಟೆ ಬದಲಿಸಲು ಬಂದಳು. ಅಲ್ಲಿ ಹುಲಿಯಂತೆ ಹೊಂಚಿ ಕುಳಿತಿದ್ದ ಆ ದುಷ್ಟ ಸೋಹನ್‌ಲಾಲ್ ಈಕೆಯ ಮೇಲೆ ಆಕ್ರಮಣ ಮಾಡಿ ರೇಪ್ ಮಾಡಲು ಯತ್ನಿಸಿದ. ನಾನು ಬಹಿಷ್ಠೆಯಾಗಿದ್ದೇನೆ ಬಿಟ್ಟುಬಿಡು ಎಂದು ಈಕೆ ಗೋಗರೆದಳು. ಕಾಮುಕ ಹಸಿದಿದ್ದ. ಅರುಣಾಳ ಕುತ್ತಿಗೆಯನ್ನು ನಾಯಿಯ ಚೈನಿನಿಂದ ಬಿಗಿದು ಗುದಸಂಭೋಗ (sodomized) ಮಾಡಿ ಕ್ರೌರ್ಯ ಮೆರೆದುಬಿಟ್ಟ. ಅಂದು ಅರುಣಾಗೆ ಹೋದ ಪ್ರಜ್ಞೆ ಇಂದೂ ಮರಳಿಲ್ಲ!
ನಲವತ್ತೊಂದು ವರ್ಷಗಳಿಂದ ಮಲಗಿದ್ದಲ್ಲೇ ಮಲಗಿರುವ ಅರುಣ ಈಗ ಮುರುಟಿ ಹೋಗಿದ್ದಾಳೆ. ಇರುವ ಒಬ್ಬ ಅಕ್ಕ-ಅಣ್ಣ ಅಸ್ಪತ್ರೆ ಕಡೆ ತಲೆ ಹಾಕಿ ಕೂಡ ಮಲಗಿಲ್ಲ. ಬೇರೆ ಇನ್ಯಾವ ಬಂಧುಗಳೂ ನೀನು ಹೇಗಿದ್ದೀ? ಎಂದು ಕೇಳಿಲ್ಲ. ಇಷ್ಟೂ ವರ್ಷ ಇವಳ ಶುಶ್ರೂಷೆ ಮಾಡುತ್ತಿರುವವರು ಅದೇ ಆಸ್ಪತ್ರೆಯ ದಾದಿಯರು. ಈ ನಲವತ್ತೊಂದು ವರ್ಷದಲ್ಲಿ ನೂರಾರು ಜನ ದಾದಿಯರು ಬಂದಿದ್ದಾರೆ ಹೋಗಿದ್ದಾರೆ. ಆಗಿದ್ದವರೆಲ್ಲಾ ರಿಟೈರ್ ಆಗಿ ಹೋಗಿದ್ದಾರೆ. ಆದರೆ ಅರುಣಾಳ ಆರೈಕೆಯಲ್ಲಿ ಕೊಂಚವೂ ಕಮ್ಮಿಯಾಗಿಲ್ಲ. ಇಂದೂ ಹೊಸಬರು ಡ್ಯೂಟಿಗೆ ಬಂದಾಗ ಅವರನ್ನು ಅರುಣಾ ಮುಂದೆ ನಿಲ್ಲಿಸಿ, ಈಕೆ ನಮ್ಮ ಸಹೋದರಿಯಂತೆ, ಚನ್ನಾಗಿ ನೋಡಿಕೊಳ್ಳಿ ಎಂದು ಪರಿಚಯಿಸುತ್ತಾರೆ. ನಿಜವಾಗಿಯೂ ಇವರೆಲ್ಲ ಗ್ರೇಟ್! ಅವರಿಗೊಂದು ಸಲ್ಯೂಟ್.
ಅರುಣಾ ಬಾಲಕಿಯಾಗಿದ್ದಾಗ ಅವರ ತಾಯಿ ಯಾರೋ ಜ್ಯೋತಿಷಿಗೆ ಮಗಳ ಜಾತಕ ತೋರಿಸಿದ್ದರಂತೆ. ಅವರು ಅದನ್ನು ಅಭ್ಯಸಿಸಿ ನೋಡಿ ಹೇಳಿದರಂತೆ. ‘ಈ ಹುಡುಗಿ ಮುಂದೆ ಲೋಕಪ್ರಸಿದ್ಧಳಾಗುತ್ತಾಳೆ’ ಎಂದು! ಅದನ್ನು ಕೇಳಿ ಹಿರಿ ಹಿರಿ ಹಿಗ್ಗಿದ್ದ ಅರುಣಾ ಎಲ್ಲರ ಬಳಿಯೂ ಮುಂದೊಂದು ದಿನ ನಾನು ದೊಡ್ಡ ಮನುಷ್ಯಳಾಗುತ್ತೇನೆ ಎಂದು ಹೇಳಿಕೊಂಡು ಸಂಭ್ರಮಿಸುತ್ತಿದ್ದಳಂತೆ. ನಲವತ್ತೊಂದು ವರ್ಷಗಳಿಂದ ಅರುಣಾಳ ಬಗ್ಗೆ ಮೀಡಿಯಾಗಳು ಥಾನ್‌ಗಟ್ಟಲೆ ಬರೆದಿವೆ. ಟಿವಿಯಲ್ಲಿ ದಿನಗಟ್ಟಲೆ ಚರ್ಚೆ ಮಾಡಿದ್ದಾರೆ. ದೇಶ, ವಿದೇಶಗಳಲ್ಲಿ ಈಕೆಯ ಹೆಸರು ಚರ್ಚೆಯಾಗುತ್ತಲೇ ಇದೆ. ಆದರೆ ಅರುಣಾ ಮಾತ್ರ ಮಲಗಿದ್ದಲ್ಲಿಯೇ ಮಲಗಿದ್ದಾಳೆ. ಈಕೆಗೆ ನೋಡಲು ಕಣ್ಣಿನ ದೃಷ್ಟಿಯಿಲ್ಲ. ಕಿವಿ ಕೇಳಿಸುತ್ತಿರಬಹುದು, ಆದರೆ ಯೋಚನಾಶಕ್ತಿ ಇಲ್ಲ.
ಪಿಂಕಿ ವಿರಾನಿ ಎಂಬ ಮುಂಬಯಿಯ ಪತ್ರಕರ್ತೆ ಅರುಣಾಳ ಬಗ್ಗೆ `Aruna’s Story’ ಎಂಬ ಒಂದು ಪುಸ್ತಕ ಕೂಡ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅರುಣಾಗೆ ‘ದಯಾಮರಣ’ ಕೊಡಿಸಲು ಆಕೆ ಕೋರ್ಟ್ ಮೆಟ್ಟಿಲೇರಿದರು. ಕೋರ್ಟ್ ವೈದ್ಯರಿಂದ ಅರುಣಾಳ ಸ್ಥಿತಿ ಕುರಿತು ವರದಿ ತರಿಸಿಕೊಂಡು ಪರಿಶೀಲಿಸಿತು. ಅರುಣಾಳ ಅರ್ಧ ಮೆದುಳು ಮಾತ್ರ ಸತ್ತಿದೆ, ಹೃದಯ ಸತ್ತಿಲ್ಲ. ಮೇಲಾಗಿ ಆಕೆ ನನ್ನನ್ನು ಸಾಯಿಸಿ ಎಂದು ಯಾರಲ್ಲೂ ಕೇಳಿಲ್ಲ. ಆಕೆಯ ಬಂಧುಗಳೂ ಕೂಡ ಕೇಳುತ್ತಿಲ್ಲ. ಆಸ್ಪತ್ರೆಯ ದಾದಿಯರು ಅರುಣಾಗೆ ಸಹಜ ಸಾವು ಬರುವವರೆಗೂ ಕಾಪಾಡುತ್ತೇವೆ ಎಂದು ಮಾನವೀಯತೆ ಮೆರೆದಿದ್ದಾರೆ. ಹಾಗಾಗಿ ‘ದಯಾಮರಣ’ಕ್ಕೆ ಅವಕಾಶವಿಲ್ಲ ಎಂದು ಶರಾ ಬರೆದು ಬಿಟ್ಟಿತು. ಜೊತೆಗೆ ಇದೇ ಕೇಸಿನ ಹಿನ್ನೆಲೆಯಲ್ಲಿ ‘ನಿಷ್ಕ್ರಿಯ ದಯಾಮರಣ’ಕ್ಕೆ ಅನುಮತಿಯನ್ನೂ ಕೊಟ್ಟಿತು. ಆದರೆ ಇದಿನ್ನೂ ಕಾನೂನಾಗಿಲ್ಲ.
ಈಗ ಕಳೆದ ಜುಲೈ ತಿಂಗಳಲ್ಲಿ ಸುಪ್ರೀಂ ಕೋರ್ಟ್ ರಾಷ್ಟ್ರದಾದ್ಯಂತ ದಯಾಮರಣದ ಕುರಿತು ಚರ್ಚೆಗೆ ಆಹ್ವಾನ ನೀಡಿದೆ. ಎಲ್ಲ ರಾಜ್ಯಸರ್ಕಾರಗಳಿಗೂ ನೋಟಿಸ್ ನೀಡಿ, ನಿಮ್ಮ ಅಭಿಪ್ರಾಯ ತಿಳಿಸಿ ಎಂದು ತಾಕೀತು ಮಾಡಿದೆ.
ಇದೆಲ್ಲದರ ಹಿನ್ನೆಲೆಯಲ್ಲಿ ನಾನು ‘ವಿದಾಯ’ ಎಂಬ ಚಿತ್ರಕತೆ ಬರೆದೆ. ಅದನ್ನು ದೃಶ್ಯಕ್ಕೆ ಇಳಿಸಲು ಹೊರಟಿದ್ದೇನೆ.
ಹೇಳಿ ಮಿತ್ರರೆ, ನಿಮಗೇನನ್ನಿಸುತ್ತೆ?
ದಯಾಮರಣ ಬೇಕೇ? ಬೇಡವೇ?
- Posted in: Uncategorized
ಸಾರ್ ನಮ್ಮ ಹಿಂದು ಸಂಪ್ರದಾಯ ದಲ್ಲಿ ಮಕ್ಕಳಾಗಲ್ಲಿ ಅಥವ ವ್ರುದ್ಧರಾಗಲ್ಲಿ ಗಂಭಿರ ಕಾಯಿಲೆಯಿಂದ ನರಳುತಿದ್ದರು ಕೊಡ ದಯಮರಣದ ವಿಚಾರದ ಬಗ್ಗೆ ಮಾತನಾಡುವುದಿಲ್ಲ. ನಮ್ಮಲ್ಲಿ ಸಂಸ್ಕ್ರುತಿಗಳು ಸಂಪ್ರದಾಯಗಳು ಬೇರುರಿವೆ. belgium ದೇಶದಲ್ಲಿ ಈಗ ಮಕ್ಕಳಿಗು ದಯಾಮರಣದ ಕಾನೂನನ್ನು ಅಂಗಿಕರಿಸಿದ ಮೊದಲ ದೇಶವಾಗಿದೆ ಈ ಮೊದಲು ವಯಸ್ಕರಿಗೆ ದಯಾಮರಣ ನೀಡುತ್ತಿದ್ದ ಈ ದೇಶ ಈಗ ಮಕ್ಕಳಿಗು ನೀಡಿದೆ.”ಇದೊಂದು ಸಹಿಸಲಾಗದ ನಿರಂತರ ದೈಹಿಕ ವೇದನೆ “ಅದರೆ ಭಾರತದೇಶದಲ್ಲಿ ಯಾವ ತಾಯಿಯಾದರು ಮಗನು ಗಂಭೀರ ಕಾಯಿಲೇಯಿಂದ ನರಳುತಿದ್ದರು ಕೂಡ ತನ ಮಗನನ್ನು ಕೊನೆಯವರೆಗು ಸೇವೆಮಾಡುವಳೆ ವಿನಹ ಮಗನಿಗೆ ದಯಾಮರಣ ಬೇಕೆಂದು ಕೊರುವುದಿಲ್ಲ ಕಾರಣ ನಮ್ಮ ದೇಶ ಸಂಸ್ಕ್ರುತಿಯಿಂದ ಕೊಡಿದೆ ಆದೆ ರೀತಿ ಹೆತ್ತವರು ಕಾಯಿಲೇಯಿಂದ ನರಳುತ್ತಿದ್ದರು ಮಕ್ಕಳು ಅವರ ಸೇವೆ ಮಾಡುವುದೆ ಧರ್ಮ. ಅದೆ ಮನುಷ್ಯನ ಧರ್ಮ.
ಕೀರ್ತಿರಾಜ್
ಮೈಸೂರ್