ಕುಚೇಲನ ಮನೆಗೆ ಕೃಷ್ಣ ಬಂದ…
ಈಗ ನೋಡಿದರೆ ಇದೆಲ್ಲ ಒಂದು ಅಚ್ಚರಿ ಅಂದೆನ್ನಿಸುತ್ತದೆ!
ಅದು ಕಳೆದ ವರ್ಷದ ಜನವರಿ ತಿಂಗಳು. ಎಂದಿನಂತೆ ಆ ಮುಂಜಾನೆ ದಿನಪತ್ರಿಕೆಯನ್ನು ತೆರೆದಾಗ ಮೊದಲ ಪುಟದಲ್ಲೇ ಒಂದು ಸುದ್ದಿ ಗಮನಸೆಳೆಯಿತು. ಅದರ ಶೀರ್ಷಿಕೆ ಹೀಗಿತ್ತು: “ಗ್ರಾಮವಾಸ್ತವ್ಯದಿಂದ ‘ವಾಸ್ತವ್ಯ’ವನ್ನೇ ಕಳೆದುಕೊಂಡವರು!ಹ್” ಈ ಮೂರೂವರೆ ಪದಗಳು ನನ್ನ ಈವತ್ತಿನ ‘ಡಿಸೆಂಬರ್-1’ ಚಲನಚಿತ್ರಕ್ಕೆ ನಾಂದಿ ಹಾಡಿದವು!
ಪತ್ರಿಕೆಯ ಆ ವರದಿಯಲ್ಲಿ ಉತ್ತರಕರ್ನಾಟಕದ ಪುಟ್ಟ ಹಳ್ಳಿಯೊಂದರಲ್ಲಿ ಒಂದು ಬಡ ಕುಟುಂಬ ತಾನು ಬದುಕಿ ಬಾಳಿದ ಊರನ್ನೇ ಹೇಗೆ ತೊರೆದು ಹೋಗಬೇಕಾಯಿತು ಎನ್ನುವುದರ ಬಗ್ಗೆ ಬರೆಯಲಾಗಿತ್ತು. ತತ್ತ್‌ಕ್ಷಣ ನನ್ನೊಳಗಿದ್ದ ಪತ್ರಕರ್ತ, ಕಥೆಗಾರ ಹಾಗೂ ನಿರ್ದೇಶಕ ಎಲ್ಲರೂ ಒಟ್ಟೊಟ್ಟಿಗೇ ಜಾಗ್ರತರಾದರು. ಇವರೆಲ್ಲ ಎದ್ದು ಕುಳಿತಾಗ ನಾನು ಹೇಗೆ ತಡ ಮಾಡುವುದು? ಕೆಲವೇ ದಿನಗಳಲ್ಲಿ ನನ್ನ ಪ್ರಯಾಣ ಆ ಪ್ರದೇಶದತ್ತ ಸಾಗಿತು.
ಪರಿಚಿತರನ್ನು ಜೊತೆಯಲ್ಲಿ ಕರೆದುಕೊಂಡು ಆ ಹಳ್ಳಿಗೆ ಹೋದೆ. ಆ ಕುಟುಂಬ ಬದುಕಿದ್ದ ಮನೆಯನ್ನು ಕಂಡೆ. ಅದೊಂದು ಸುಮಾರು ಐದು ಚದುರದ ಪುಟ್ಟ ಮನೆ. ಅಲ್ಲಿ ಈಗ ಬೇರೆ ಯಾರೋ ಹೊಸಬರು ಇದ್ದರು. ಅವರ ಅಪ್ಪಣೆ ಪಡೆದು ಒಳಗೆ ಹೋಗಿ ಇಂಚಿಂಚನ್ನೂ ಗಮನಿಸಿದೆ. ಜೊತೆಯಲ್ಲಿ ಬಂದವರು ನನ್ನ ಕಿವಿಯ ಬಳಿ ಪಿಸುಗುಡುತ್ತಾ ವಿವರಿಸುತ್ತಿದ್ದರು. ಇದೇ ಜಾಗದಲ್ಲಿ ಅಡುಗೆ ತಯಾರಿಸಿದ್ದು. ಇದೇ ಜಾಗದಲ್ಲಿ ಮಂಚ ಹಾಕಲಾಗಿದ್ದು. ಇಲ್ಲೇ ಕೂಲರ್ ಇಟ್ಟಿದ್ದರು. ಈ ಎಲೆಕ್ಟ್ರಿಕ್ ವೈರಿಂಗ್ ಎಲ್ಲ ಮಾಡಿದ್ದು ಆಗಲೇ. ಬನ್ನಿ ಮನೆಯ ಹಿಂಬಾಗಕ್ಕೆ ಬನ್ನಿ. ಅದೋ ನೋಡಿ ಟಾಯ್‌ಲೆಟ್! ಅದನ್ನು ಕಟ್ಟಿಸಿದ್ದು ಆಗಲೇ. ಯಾರು ಇನ್ಯಾಗುರೇಟ್ ಮಾಡಿದ್ದು ಅಂತ ಗೊತ್ತಲ್ಲ? ಈ ನಾಡಿನ ದೊರೆ! ಈ ಕಡೆ, ಮನೆಯ ಆಚೆ ಬನ್ನಿ. ಸುತ್ತ ನೋಡಿ. ಆವತ್ತು ಅಲ್ಲೆಲ್ಲ ಎಂಥ ಸರ್ಪಗಾವಲು ಇತ್ತು ಗೊತ್ತೇನೂ? ಇಡೀ ಪ್ರದೇಶವನ್ನು ಸುಮಾರು ಸಾವಿರ ಪೊಲೀಸರು ಸುತ್ತುವರಿದಿದ್ದರು. ಒಂದೇ ಒಂದು ಸೊಳ್ಳೆ ಕೂಡ ಇಲ್ಲಿಗೆ ಪ್ರವೇಶಿಸುವ ಹಾಗಿರಲಿಲ್ಲ! ಅಷ್ಟು ಟೈಟ್ ಸೆಕ್ಯುರಿಟಿ!
ಇದೆಲ್ಲ ನೋಡಿಕೊಂಡು. ಸಾಕಷ್ಟು ಫೋಟೋ ತೆಗೆದುಕೊಂಡು ಆಚೆ ಬಂದು ಅಕ್ಕ-ಪಕ್ಕದ ಬೀದಿಗಳಲ್ಲಿ ಕಾಲಾಡಿಸಿದೆವು. ಇದ್ಯಾರು ಹೊಸಬರಿವರು ಎಂದು ಊರಿನವರು ಹತ್ತಿರ ಬಂದು ಮಾತನಾಡಿಸಿದರು. ನಾನು ಚಲನಚಿತ್ರನಿರ್ದೇಶಕ ಎಂದು ಯಾರೂ ಗುರುತಿಸಲಿಲ್ಲ, ನಾನೂ ಹೇಳಲು ಹೋಗಲಿಲ್ಲ. ಅವರೆಲ್ಲ ಪ್ರೀತಿಯಿಂದ ನನ್ನನ್ನು ಕರೆದು ಕೂರಿಸಿ ಚಹಾ ಕೊಟ್ಟರು. ಅದನ್ನು ಹೀರುತ್ತಲೇ ಊರು ತೊರೆದವರ ಕುರಿತು ಮೆಲ್ಲನೆ ಮಾತೆತ್ತಿದೆ.
ಅವರು ಹೇಳಿದರು:
ಆ ಫ್ಯಾಮಿಲಿ ಇಲ್ಲಿಂದ ಹೋಗುವುದಕ್ಕೆ ನಾವು ಊರಿನವರು ಯಾರೂ ಕಾರಣರಲ್ಲವೇ ಅಲ್ಲ. ಈಚೆಗೆ ಒಂದು ದಿನ ಅವರು ತಾವಿದ್ದ ಈ ಮನೆಯನ್ನು ಒಂದೂವರೆ ಲಕ್ಷಕ್ಕೆ ಮಾರಿ ಇಲ್ಲಿಂದ ನಾಲ್ಕೈದು ಕಿಲೋ ಮೀಟರ್ ದೂರದಲ್ಲಿ ಜಮೀನಿನ ಬಳಿ ಮನೆಕಟ್ಟಿಕೊಂಡು ಒಂಟಿಯಾಗಿ ಜೀವಿಸಿದ್ದಾರೆ. ಅದ್ಯಾಕೆ ಹಾಗೆ ಮಾಡಿದರೋ ಏನೋ ಗೊತ್ತಿಲ್ಲ. ಈಗ ನೋಡಿ ಎಲ್ಲರೂ ನಮ್ಮನ್ನು ದೂರುತ್ತಿದ್ದಾರೆ!
ಒಂದೆರಡು ಗಂಟೆ ಹೀಗೇ ಮಾತಾಡಿ ನಂತರ ಆ ದಂಪತಿಗಳು ಈಗ ಜೀವಿಸಿರುವ ಕಡೆಗೆ ಕಾರು ಓಡಿಸಿದೆ. ದೂರದ ನೆರಳಲ್ಲಿ ಕಾರು ನಿಲ್ಲಿಸಿ ಅವರ ಮನೆಯತ್ತ ನಡೆದೇ ಹೋದೆವು. ನನ್ನೊಳಗೆ ವಿಚಿತ್ರ ಭಾವ.
ಮುಖ್ಯವಾಗಿ ಆ ದಂಪತಿಗಳನ್ನು ಕಾಣುವ ಕುತೂಹಲ ನನ್ನಲ್ಲಿ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿತ್ತು. ಆದರೆ ಬಾಗಿಲು ಬಡಿದಾಗ ಆ ಮನೆಯಿಂದ ಹೊರಬಂದವರು ಒಬ್ಬ ವೃದ್ಧೆ! ಆಕೆ ನಮ್ಮನ್ನು ಆಪಾದಮಸ್ತಕ ನೋಡಿದರು. ನೀವು ಯಾರು? ಏಕೆ ಬಂದಿದ್ದೀರಿ? ಇಲ್ಲೇನು ಕೆಲಸ? ಎಂದು ಕಟುವಾಗಿ ಒಂದೊಂದಾಗಿ ಪ್ರಶ್ನೆಗಳ ಬಾಣಗಳನ್ನು ಎಸೆದರು. ಬೇರೆಯದೇ ಸ್ವಾಗತ ನಿರೀಕ್ಷಿಸಿದ್ದ ನಮಗೆ ಇದು ಅನಿರೀಕ್ಷಿತ! ನಾಲಗೆಯಿಂದ ತುಟಿಯನ್ನು ಸವರಿಕೊಂಡು, ಪೆಕರು ನಗೆ ನಕ್ಕು: ನಾವು ದೂರದಿಂದ ಬಂದಿದ್ದೇವೆ. ಹೀಗೇ ಸುಮ್ಮನೇ ನೋಡಿಕೊಂಡು ಹೋಗಲು ಬಂದೆವು ಎಂದೆ. ನೋಡಲು ನಾವೇನು ಕೋಡಂಗಿಗಳೇ? ಈಗ ಯಾರೂ ಬಂದು ನಮ್ಮನ್ನು ನೋಡುವುದೂ ಬೇಡ, ಮಾತಾಡಿಸುವುದೂ ಬೇಡ! ಈಗ ನೋಡಿರುವುದೇ ಈ ಜನ್ಮಕ್ಕಾಗುವಷ್ಟಿದೆ! ಎಂದು ಹೇಳಿ ದಢಾರನೆ ಮನೆ ಬಾಗಿಲು ಹಾಕಿಕೊಂಡು ಹೋದರು… ಪೆಚ್ಚು ಮೋರೆ ಹೊತ್ತು ಅಲ್ಲೇ ಸ್ವಲ್ಪ ಹೊತ್ತು ಕಾದೆವು. ಮತ್ತಿನ್ನಾರಾದರೂ ಮನೆಯಿಂದ ಹೊರಗೆ ಬರಬಹುದು. ನಮ್ಮನ್ನು ಒಳಗೆ ಕರೆದು ಕೂರಿಸಿ ಮಾತಾಡಿಸಬಹುದು ಎಂಬ ಆಸೆ. ಹತ್ತು ನಿಮಿಷದ ನಂತರೆ ಆ ವೃದ್ಧೆಯೇ ಮತ್ತೆ ಬಂದರು. ಇನ್ನೂ ಯಾಕೆ ಇಲ್ಲಿ ನಿಂತಿದ್ದೀರಿ, ಹೊರಡಿ ಇಲ್ಲಿಂದ. ಈ ಬಾರಿ ಜೋರಾಗಿಯೇ ಗದರಿದ್ದರು.
ಸಾಕಲ್ಲ! ಅಲ್ಲಿಂದ ಹಿಂತಿರುಗಲು.
ಆದರೆ ಅಷ್ಟಕ್ಕೆ ಸೋಲುವ ಜಾಯಮಾನ ನನ್ನದಲ್ಲ. ಅದೇ ಪ್ರದೇಶದಲ್ಲಿ ಇನ್ನೂ ಎರಡು ದಿನವಿದ್ದು ಬೇರೆ ಬೇರೆಯವರನ್ನು ಭೇಟಿ ಮಾಡಿ ಇನ್ನಷ್ಟು ಮಾಹಿತಿ ಸಂಗ್ರಹಿಸಿದೆ. ನಂತರ ಬೆಂಗಳೂರಿಗೆ ಬಂದೆ. ಎಂಟು ವರ್ಷದ ಹಿಂದಿನ ಪತ್ರಿಕೆಗಳನ್ನು ಕಲೆ ಹಾಕಿದೆ. ಇನ್ನಷ್ಟು ವಿವರಗಳು ಲಭಿಸಿದವು. ಅಲ್ಲೇ ಆ ದಂಪತಿಗಳ ಫೋಟೋ ಕೂಡ ಸಿಕ್ಕಿತು. ಇದೇ ತರಹ ಮುಖ್ಯಮಂತ್ರಿಗಳು ವಾಸ್ತವ್ಯ ಹೂಡಿದ್ದು ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಮನೆಗಳು ಕರ್ನಾಟಕದಲ್ಲಿ ಇದ್ದವು. ನಾವು ಒಂದು ರೌಂಡ್ ಮೈಸೂರು, ಕನಕಪುರ, ಕೆ.ಆರ್.ಸಾಗರ, ಹುಬ್ಬಳ್ಳಿ, ಗದಗ ಇತ್ಯಾದಿ ಕಡೆಯೆಲ್ಲಾ ಸುತ್ತಾಡಿ ಬಂದೆವು. ಅವರನ್ನೆಲ್ಲ ಮಾತಾಡಿಸಿ, ಕತೆ ಕೇಳಿಕೊಂಡು ಬಂದ ಮೇಲೆ ಎಲ್ಲ ಅನುಭವಗಳನ್ನೂ ಕ್ರೂಢೀಕರಿಸಿ ನನ್ನದೇ ಆದ ದೇವಕ್ಕ, ಮಾದೇವಪ್ಪನ ಕತೆ ಬರೆಯಲು ಕೂತೆ. ಹಾಗಾಗಿ ಇದು ಯಾರೊಬ್ಬರ ಕತೆಯೂ ಅಲ್ಲ; ಆದರೆ ಎಲ್ಲರೂ ಕತೆಯೂ ಹೌದು!
ಇದಕ್ಕೂ ಮುಂಚೆ ನಾನು ನಿಮಗೆ ಒಂದು ಪ್ಲ್ಯಾಷ್‌ಬ್ಯಾಕ್‌ನಲ್ಲಿ ಇನ್ನೊಂದು ವಿಚಾರ ಹೇಳಬೇಕು.
ಸುಮಾರು ಎಂಟು ವರ್ಷಗಳ ಹಿಂದೆ ‘ಗ್ರಾಮವಾಸ್ತವ್ಯ’ ದ ಪರಿಕಲ್ಪನೆಯನ್ನು ಹುಟ್ಟು ಹಾಕಿದ ನಮ್ಮ ಮಾಜೀ ಮುಖ್ಯಮಂತ್ರಿಗಳು ರಾಜ್ಯ, ರಾಷ್ಟ್ರ, ರೇಗನ್ ಮುಂತಾದ ಅಂತರಾಷ್ಟ್ರೀಯ ನಾಯಕರು ಹಾಗೂ ವಿಶ್ವಸಂಸ್ಥೆಯಂಥ ಸಂಸ್ಥೆಯಿಂದಲೂ ಹೊಗಳಿಸಿಕೊಂಡಿದ್ದರು.
ನಾಡಿನ ದೊರೆಯೊಬ್ಬ ಬಡವನ ಮನೆಯಲ್ಲಿ ಒಂದು ದಿನ ಕಳೆಯುವುದು, ಅವನು ಮಾಡಿದ ಊಟವನ್ನೇ ಮಾಡುವುದು, ರಾತ್ರಿ ಅಲ್ಲೇ ತಂಗುವುದು, ಎಂಥ ವಿಶಿಷ್ಟ ಯೋಜನೆ! ಇದು ಒಂದು ಮುಖ. ಅದರೆ ಜಗತ್ತಿಗೆ ಗೊತ್ತಿರದ ಇನ್ನೊಂದು ಮುಖವೂ ಇದೆ. ಅದೇ ‘ಡಿಸೆಂಬರ್-1’.
ಸಿಂಪಲ್ಲಾಗಿ ನಾನು ಬರೆದ ಕಥೆ ಹೇಳಿ ಬಿಡ್ತೀನಿ ಕೇಳಿ.
ದಕ್ಷಿಣಭಾರತದ ಉತ್ತರ ಕರ್ನಾಟಕ ಸೀಮೆಯಲ್ಲಿ ಬಸಾಪುರವೆಂಬುದು ಒಂದು ಪುಟ್ಟ ಹಳ್ಳಿ. ಅಲ್ಲಿ, ರೊಟ್ಟಿ ಮಾರಿ ಜೀವನ ಸಾಗಿಸುತ್ತಿರುವ ದೇವಕ್ಕನದ್ದು ಒಂದು ಪುಟ್ಟ ಕುಟುಂಬ. ಗಂಡ ಮಾದೇವಪ್ಪ ಟ್ರಕ್ ಓಡಿಸುತ್ತಾ ಸೀಮೆ ಸುತ್ತುತ್ತಿದ್ದವನು, ಅಪಘಾತದಲ್ಲಿ ಕಾಲು ಊನ ಮಾಡಿಕೊಂಡು ಈಗ ಹಿಟ್ಟಿನ ಗಿರಣಿಯಲ್ಲಿ ಚಿಕ್ಕಾಸಿಗೆ ದುಡಿಯುತ್ತಿದ್ದಾನೆ. ಪುಟ್ಟ ಮಕ್ಕಳಿಬ್ಬರು ಹಾಗೂ ವೃದ್ಧ ಮುದುಕಿ ಮನೆಯಲ್ಲಿದ್ದಾರೆ. ದೇವಕ್ಕ-ಮಾದೇವಪ್ಪರಿಗೆ ಕಿರಣ-ಜ್ಯೋತಿಯರ ಭವಿಷ್ಯ ತಮ್ಮದರಂತಾಗಬಾರದು ಎಂಬ ಬಗ್ಗೆ ಕಾಳಜಿ.
ಕುಟುಕು ಜೀವಕ್ಕೆ ಎರವಾದಂತೆ ದೇವಕ್ಕನ ರೊಟ್ಟಿ ವ್ಯಾಪಾರ ಸೋಲತೊಡಗಿದಾಗಲೇ ಈ ಕುಟುಂಬಕ್ಕೆ ಹೊಚ್ಚ ಹೊಸ ಸುದ್ದಿ ಬರುತ್ತದೆ. ಅದು, ಮುಖ್ಯಮಂತ್ರಿಗಳ ‘ಗ್ರಾಮ ವಾಸ್ತವ್ಯ’! ದೇವಕ್ಕನ ಮನೆ ಇದಕ್ಕೆ ಆಯ್ಕೆಯಾಗುತ್ತದೆ. ‘ಡಿಸೆಂಬರ್-1’ ರಂದು ರಾಜ್ಯದ ಮುಖ್ಯಮಂತ್ರಿಗಳು ಆ ಮನೆಯಲ್ಲಿ ತಂಗಿ ದೇವಕ್ಕನ ರೊಟ್ಟಿಯೂಟ ಸವಿಯಲಿದ್ದಾರೆ ಎಂಬುದು ಇಡೀ ಪ್ರದೇಶದಲ್ಲಿ ಸಂಚಲನವನ್ನು ಉಂಟು ಮಾಡುತ್ತದೆ. ಊರವರ ಕಣ್ಣಿನಲ್ಲಿ ಈ ದಂಪತಿಗಳು ಧುತ್ತೆಂದು ದೊಡ್ಡವರಾಗುತ್ತಾರೆ. ದೇವಕ್ಕನ ರೊಟ್ಟಿಗೆ ಡಿಮ್ಯಾಂಡ್ ಸೃಷ್ಟಿಯಾಗುತ್ತದೆ. ಹಾಗೆಯೇ ಸಿಎಂ ಬಂದಾಗ ನಮ್ಮ ಕೆಲಸಗಳನ್ನು ಮಾಡಿಸಿಕೊಡಿ ಎಂಬ ಬೇಡಿಕೆಗಳೂ ಬಂದು ಬೀಳುತ್ತವೆ. ಮಾಧ್ಯಮದ ಪ್ರತಿನಿಧಿಗಳ ದೃಷ್ಟಿಯಲ್ಲಿ ದೇವಕ್ಕ-ಮಾದೇವಪ್ಪ ಈಗ ಸೆಲೆಬ್ರಿಟಿಗಳು. ಸೌಲಭ್ಯ ಎನ್ನುವ ಹೆಸರಿನಲ್ಲಿ ದೇವಕ್ಕ-ಮಾದೇವಪ್ಪರ ಪುಟ್ಟ ಮನೆ ಮುಖ್ಯಮಂತ್ರಿಗಳಿಗಾಗಿ ನವೀಕರಣವಾಗುತ್ತದೆ. ಕರೆಂಟು, ಟೀವಿ, ಫ್ರಿಜ್ಜು, ಸೋಫಾ ಬಂದು ಕೂರುತ್ತವೆ. ಆದರೆ ಹುಡುಕಿ ಬಂದ ನೆಂಟರನ್ನು ಮಾತ್ರ ರಕ್ಷಣಾ ಸಿಬ್ಬಂದಿ ಒಳಕ್ಕೆ ಬಿಡುವುದಿಲ್ಲ. ದೇವಕ್ಕ ದಂಪತಿಗಳು ಅಸಹಾಯಕರಾಗುತ್ತಾರೆ.
ಹೆಲಿಕಾಪ್ಟರ್‌ನಲ್ಲಿ ಹಾರಿ ಬಂದ ಸಿಎಂಗೆ ಬಸಾಪುರದ ಮಂದಿ ಅದ್ದೂರಿ ಸ್ವಾಗತ ಕೋರುತ್ತಾರೆ. ತಮ್ಮ ವಂಧಿ-ಮಾಗದರೊಂದಿಗೆ ದೇವಕ್ಕನ ಮನೆ ಪ್ರವೇಶಿಸಿದ ಮುಖ್ಯಮಂತ್ರಿಗಳು ರೊಟ್ಟಿಯೂಟ ಉಂಡು ಹರ್ಷಿಸುತ್ತಾ, ಸ್ಥಳೀಯ ರಾಜಕೀಯ ಪರಾಮರ್ಶಿಸುತ್ತಾರೆ. ಈ ನಡುವೆ ಅವರಿಗೆ ದೇವಕ್ಕ ದಂಪತಿಗಳೊಂದಿಗೆ ಮಾತನಾಡಲು ಪುರುಸೊತ್ತೇ ಸಿಗುವುದಿಲ್ಲ. ಊರವರ, ಬಂಧುಗಳ ಬೇಡಿಕೆಗಳನ್ನು ಹೊತ್ತು ಕೂತಿದ್ದ ದಂಪತಿಗಳು, ಅಂದು ರಾತ್ರಿ ತಮ್ಮ ಮನೆಯಲ್ಲಿ ತಮಗೇ ಉಳಿದುಕೊಳ್ಳಲು ತಾವಿಲ್ಲದೆ ಹೊರಗೆ ಜಗಲಿಯ ಮೇಲೆ ಕಾಲ ಕಳೆಯಬೇಕಾದ ಪ್ರಸಂಗ ಎದುರಾಗುತ್ತದೆ!
ಮುಖ್ಯಮಂತ್ರಿಗಳು ದೇವಕ್ಕನ ಮನೆಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಬಡತನವನ್ನು ಮೀರಿದ ಕಾರಣಗಳಿವೆ. ಯಾವಾಗಲೂ ಬ್ರೇಕಿಂಗ್ ನ್ಯೂಸ್‌ಗೆ ಹಸಿದಿರುವ ಮಾಧ್ಯಮ ಪ್ರತಿನಿಧಿಯೊಬ್ಬ ಆ ಕಾರಣವನ್ನು ಪತ್ತೆ ಮಾಡುತ್ತಾನೆ. ಅದು ಬೆಳಗ್ಗೆ ಪತ್ರಿಕೆ, ಟಿವಿಗಳಲ್ಲಿ ರಟ್ಟಾದಾಗ ಇಡೀ ಹಳ್ಳಿ ದಂಗಾಗುತ್ತದೆ! ಸಾಮಾಜಿಕ ಕಳಕಳಿ ಯಾರಿಗೂ ಮುಖ್ಯವೆನಿಸುವುದಿಲ್ಲ. ಮುಖ್ಯಮಂತ್ರಿ ಹೊರಟ ನಂತರ ದೇವಕ್ಕ ದಂಪತಿಗಳು ಊರಿನವರಿಂದ ಒಂದು ರೀತಿಯ ಅಘೋಷಿತ ಬಹಿಷ್ಕಾರಕ್ಕೆ ಒಳಗಾಗುತ್ತಾರೆ. ಈಗ ದೇವಕ್ಕನ ರೊಟ್ಟಿ ಯಾರಿಗೂ ಬೇಡ. ಮಾದೇವಪ್ಪ ಅನ್ನ ತರುವ ದಾರಿಯಾದ ಗಿರಣಿಯ ಕೆಲಸ ಕಳೆದುಕೊಳ್ಳುತ್ತಾನೆ. ಇದರ ಬಿಸಿ ಶಾಲೆಯಲ್ಲಿ ಕಿರಣನಿಗೂ ತಟ್ಟುತ್ತದೆ.
ಸುದ್ದಿಗೆ ಹಸಿದ ಮಾಧ್ಯಮಕ್ಕೆ ಆಹಾರವಾಗಿ, ಸಂವೇದನಾರಹಿತ ವ್ಯವಸ್ಥೆಯ ಚಕ್ರಕ್ಕೆ ಸಿಲುಕಿ, ಯಾರದ್ದೋ ಸಾಮಾಜಿಕ ಕಳಕಳಿಗೆ ಕೇವಲ ಪ್ರತೀಕವಾಗಿ, ಆಘಾತದ ಮೇಲೆ ಆಘಾತ ಅನುಭವಿಸುವ ದೇವಕ್ಕನ ಕುಟುಂಬಕ್ಕೆ ಡಿಸೆಂಬರ್ ಒಂದರ ರಾತ್ರಿ ಕರಾಳ ರಾತ್ರಿಯಾಗಿ ಪರಿಣಮಿಸುತ್ತದೆ!
(ಉದಯವಾಣಿ (ಸಾಪ್ತಹಿಕ ಸಂಪದ) ಏಪ್ರಿಲ್ 20, 2014, ಪ್ರಕಟವಾದ ಲೇಖನ)
- Posted in: Uncategorized