ಎಂಥಾ ಭಾಗ್ಯವಂತ!
ಡಾ.ರಾಜ್‌ಕುಮಾರ್ ನಮ್ಮಿಂದ ಭೌತಿಕವಾಗಿ ದೂರಾಗಿ ಎಂಟು ವರ್ಷಗಳೇ ಕಳೆದಿವೆ. ಆದರೆ ಅವರು ಮಾನಸಿಕವಾಗಿ ಕೋಟ್ಯಾಂತರ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದು ನಾನು ಪ್ರತ್ಯೇಕ ಹೇಳಬೇಕಾಗಿಲ್ಲ. ಒಂದು ಸಮೀಕ್ಷೆಯ ಪ್ರಕಾರ, ಅವರ ಕುರಿತ ಒಂದು ಕಾರ್ಯಕ್ರಮವೋ, ಅವರು ಅಭಿನಯಿಸಿದ ಒಂದಲ್ಲ ಒಂದು ಚಲನಚಿತ್ರವೋ, ಕರ್ನಾಟಕದ ಒಂದಲ್ಲ ಒಂದು ಕಡೆ, ಚಿತ್ರಮಂದಿರದಲ್ಲೋ ಅಥವಾ ಟೀವಿಯಲ್ಲೋ, ಪ್ರತಿ ಕ್ಷಣ ಪ್ರದರ್ಶನವಾಗುತ್ತಿರುತ್ತದೆ!
ಈ ಭಾಗ್ಯ ಎಷ್ಟು ಜನಕ್ಕೆ ಸಿಗುತ್ತದೆ?

ರಾಜ್ ಕಂಪೆನಿಗೆ ‘ನಿಕ್ಷೇಪ’ ಎಂಬ ಧಾರಾವಾಹಿಯನ್ನು ನಿರ್ದೇಶನ ಮಾಡಿಕೊಟ್ಟ ಸಂದರ್ಭ. ಹಿನ್ನೆಲೆಯಲ್ಲಿ ನನ್ನ ಪತ್ನಿ ಅನುಪಮ. (ಇಸವಿ 2000)
ಇಪ್ಪತ್ತೆರಡು ವರ್ಷಗಳ ಹಿಂದೆ ಅವರ ಅಭಿನಯದ ‘ಆಕಸ್ಮಿಕ’ ಚಲನಚಿತ್ರಕ್ಕೆ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಆ ಸಂದರ್ಭದಲ್ಲಿ ಅವರನ್ನು ತೀರ ಹತ್ತಿರದಿಂದ ಕಂಡದ್ದು ನನ್ನ ಸೌಭಾಗ್ಯ ಎಂದೇ ಭಾವಿಸಿದ್ದೇನೆ. ಆಗ ಅವರು ಹೇಳುತ್ತಿದ್ದ ಈ ಮಾತು ಈಗಲೂ ನನ್ನ ಕಿವಿಯಲ್ಲಿವೆ.
“ನಮ್ಮ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಭರ್ಜರಿ ಮೀಸೆ ಬಿಟ್ಟಿದ್ದರು. ನನಗೆ ಅವರನ್ನು ಕಂಡರೆ ವಿಪರೀತ ಭಯ-ಭಕ್ತಿ. ಆಗ ನಾನಿನ್ನೂ ರಾಜಕುಮಾರ್ ಆಗಿರಲಿಲ್ಲ. ನಾಟಕಗಳಲ್ಲಿ ಅವರೊಂದಿಗೆ ಸಣ್ಣ-ಪುಟ್ಟ ಪಾತ್ರ ಮಾಡುತ್ತಿದ್ದೆ. ಒಂದು ದಿನ, ಮುತ್ತುರಾಜ್ ಆಗಿದ್ದ ನನ್ನನ್ನು ಹತ್ತಿರ ಕರೆದು ಹೇಳಿದರು: ‘ಕಂದಾ, ನನಗೆ ನಿನ್ನ ಪ್ರತಿಭೆ ಗೊತ್ತಿದೆ. ಒಂದಲ್ಲ ಒಂದು ದಿನ ನೀನು ಇಡೀ ನಾಡಿನಲ್ಲೇ ದೊಡ್ಡ ಹೆಸರು ಮಾಡತೀ ಕಣಾ… ಇದು ನನ್ನ ಮೀಸೆಯ ಮೇಲಾಣೆ ತಿಳ್ಕಾ’ ಎಂದು ತಮ್ಮ ಗಿರಿಜಾ ಮೀಸೆಯನ್ನು ಹುರಿಮಾಡಿದ್ದರು. ನಾನೋ ಸಿಂಹದ ಹೊಟ್ಟೆಯಲ್ಲಿ ಹುಟ್ಟಿದ ಇಲಿಮರಿಯಂತಿದ್ದೆ. ಆದರೆ ನಮ್ಮ ತಂದೆಯ ಮಾತು ಸುಳ್ಳಾಗಲಿಲ್ಲ. ದುರಾದೃಷ್ಟ, ಇದನ್ನು ನೋಡಲು ಅವರು ಬದುಕಿರಲಿಲ್ಲ! ಅವರ ಆಶೀರ್ವಾದದಿಂದ, ಮುತ್ತೆತ್ತಿರಾಯನ ಕೃಪೆಯಿಂದ ನಾನು ಹೀಗಾಗಿಬಿಟ್ಟೆ. ನಿಜ ಹೇಳ್ತೀನಿ, ಇದರಲ್ಲಿ ನನ್ನ ಶ್ರಮ ಏನೇನೂ ಇಲ್ಲ. ಎಲ್ಲಾ ಅವನದ್ದು” ಎಂದು ಬಾನಿನೆಡೆ ಮುಖ ಮಾಡಿ ಒಂದರೆಕ್ಷಣ ಕಣ್ಣಗಳನ್ನು ಮುಚ್ಚಿ ಧ್ಯಾನಸ್ಥರಾಗುತ್ತಿದ್ದರು.
ಇತ್ತೀಚೆಗೆ ಕನ್ನಡಚಿತ್ರರಂಗದಲ್ಲಿ ಎದ್ದಿರುವ ಡಬ್ಬಿಂಗ್ ಹಾವಳಿ ನಿಮಗೇ ಗೊತ್ತಿದೆಯಲ್ಲ. ಅದರ ಕುರಿತು ನಮ್ಮ ನಮ್ಮಲ್ಲೆ ಒಂದು ಖಾಸಗಿ ಚರ್ಚೆ ನಡೆಯುತ್ತಿತ್ತು. ಅಲ್ಲಿ ನಾವು ಸುಮಾರು ಆರೇಳು ಮಂದಿ ಇದ್ದೆವು. ಆಗ ಅಲ್ಲಿ ಪ್ರಾಸಂಗಿಕವಾಗಿ ರಾಜ್‌ಕುಮಾರ್ ಹೆಸರು ಪ್ರಸ್ತಾಪಕ್ಕೆ ಬಂತು. ‘ನಮ್ಮ ರಾಜ್‌ಕುಮಾರ್ ಇದ್ದಿದ್ದರೆ ಈ ಡಬ್ಬಿಂಗ್ ಬಗ್ಗೆ ಒಬ್ಬನೇ ಒಬ್ಬನೂ ಉಸಿರು ಬಿಡುತ್ತಿರಲಿಲ್ಲ; ಈಗ ನೋಡಿ ಅವರಿಲ್ಲ ಅಂತ ಎಲ್ರೂ ನಿಧಾನವಾಗಿ ಬಾಲ ಬಿಚ್ಚಿಕೊಳ್ಳುತ್ತಿದ್ದಾರೆ…’ ಎಂದು ಸ್ನೇಹಿತರೊಬ್ಬರು ಹೇಳಿದರು. ಈ ಮಾತಿಗೆ ಎಲ್ಲರೂ ತಲೆಯಾಡಿಸಿದರು. ಡಾ.ರಾಜ್ ಶಕ್ತಿಯ ಬಗ್ಗೆ ಯಾರದ್ದೇ ಭಿನ್ನಾಭಿಪ್ರಾಯವಿರಲಿಲ್ಲ.
ಈಗ ರಾಜ್‌ಕುಮಾರ್‌ರನ್ನು ಹೊಗಳಿ ಮಾತಾಡಿದ್ದರಲ್ಲ ಇದೇ ಸ್ನೇಹಿತರು, ಹಿಂದೊಮ್ಮೆ, ರಾಜ್‌ಕುಮಾರ್ ಬದುಕಿದ್ದಾಗ, ಇದೇ ತರಹದ ಖಾಸಗಿ ಬೈಠಕ್ ಒಂದರಲ್ಲಿ ರಾಜ್‌ಕುಮಾರ್ ಅವರನ್ನು ವಿರೋಧಿಸಿ ಮಾತನಾಡುತ್ತಾ, ‘ಅಲ್ರೀ ಈ ರಾಜ್‌ಕುಮಾರ್‌ದು ಏನ್ರೀ ದೊಡ್ಡಸ್ತಿಕೆ? ಎಲ್ಲರೂ ರಾಜ್‌ಕುಮಾರ್.. ರಾಜ್‌ಕುಮಾರ್ ಎಂದು ಮೆರೆಸ್ತಾರಲ್ಲ, ಈ ರಾಜ್‌ಕುಮಾರ್ ತಮ್ಮ ಸ್ವಂತಕ್ಕೆ ಎಲ್ಲ ಮಾಡಿಕೊಂಡ್ರೇ ಹೊರತು ಫಿಲಂ ಇಂಡಸ್ಟ್ರಿಗೆ ಏನ್ ಮಾಡಿದ್ದಾರೆ? ಕನ್ನಡನಾಡಿಗೆ ಏನು ಮಾಡಿದ್ದಾರೆ? ಶಂಕರ್‌ನಾಗ್ ನೋಡಿ ಡಬ್ಬಿಂಗ್ ಸ್ಟುಡಿಯೋ ಮಾಡಿದ್ರು, ಬಾಲಕೃಷ್ಣ, ಅಬ್ಬಯ್ಯನಾಯ್ಡು ಅಂಥವರು ಕೂಡ ಸ್ಟುಡಿಯೋ ಮಾಡಿದ್ರು, ವಜ್ರಮುನಿಯಂಥವರು ಎಷ್ಟೊಂದು ಸಿನಿಮಾ ಪ್ರೊಡ್ಯೂಸ್ ಮಾಡಿದ್ದಾರೆ. ಆದ್ರೆ ಈ ರಾಜ್‌ಕುಮಾರ್ ಏನ್ ಮಾಡಿದ್ದಾರೆ? ಒಂದು ಸ್ಟುಡಿಯೋ ಕಟ್ಟಿದ್ದಾರೆಯೇ, ಒಂದು ಆಸ್ಪತ್ರೆ ಕಟ್ಟಿಸಿದ್ದಾರೆಯೇ, ಒಂದು ಧರ್ಮಛತ್ರ ಕಟ್ಟಿಸಿದ್ದಾರೆಯೇ? ಒಂದೇ ಒಂದು ಜನೋಪಯೋಗಿ ಕೆಲಸ ಮಾಡಿದ್ದಾರೆಯೇ ಹೇಳಿ ನೋಡುವಾ?…’ ಎಂದು ಆವೇಶದಿಂದ ಆರೋಪಗಳ ಬಾಣಗಳನ್ನೇ ತೂರಿದ್ದರು.
ಅಂದು ನಾನು ಅವರಿಗೆ ಹೇಳಿದ್ದೆ. ‘ನಿಜ, ನೀವು ಹೇಳಿದಂತೆ ರಾಜ್‌ಕುಮಾರ್ ಅವರು ಕನ್ನಡ ನಾಡಿಗೆ ಆಸ್ಪತ್ರೆ, ಧರ್ಮಛತ್ರ ಯಾವುದನ್ನೂ ಮಾಡಿಲ್ಲದಿರಬಹುದು. ಆದರೆ ಅದಕ್ಕಿಂತ ಹೆಚ್ಚಿನದನ್ನು ಈ ಕರ್ನಾಟಕದ ಜನತೆಗೆ ಕೊಟ್ಟಿದ್ದಾರೆ. ಕನ್ನಡಚಿತ್ರರಂಗ ಸದೃಢವಾಗಲು ಅವರ ಪಾತ್ರ ಪ್ರಮುಖವಾದುದ್ದು. ನನಗೆ ಗೊತ್ತಿದ್ದ ಹಾಗೆ ಅವರು ತಾವು ಹಾಡಿದ ಯಾವ ಹಾಡಿಗೂ ಸಂಭಾವನೆ ಪಡೆಯದೆ, ಆ ಸಂಭಾವನೆಯ ಹಣವನ್ನು ಮಹಿಳಾ ಸಂಘಟನೆ ಇತ್ಯಾದಿ ಸಂಸ್ಥೆಗಳಿಗೆ ದೇಣಿಗೆಯಾಗಿ ಕೊಡುತ್ತಿದ್ದರು. ಅವರ ಮನೆಯ ಮುಂದೆ ಬೇರೆ ಬೇರೆ ಊರುಗಳಿಂದ ಬಂದ ಸುಮಾರು ಅಭಿಮಾನಿಗಳು ಸಾಲುಗಟ್ಟಿರುತ್ತಿದ್ದರು. ಮದುವೆ ಎಂದೋ, ಶುಭಸಮಾರಂಭ ಎಂದೋ ಸಹಾಯ ಪಡೆದದ್ದನ್ನು ಗಮನಿಸಿದ್ದೇನೆ.
ಇದೆಲ್ಲಕ್ಕಿಂತ ಹೆಚ್ಚಾಗಿ, ರಾಜ್‌ಕುಮಾರ್ ಅವರು ತೆರೆಯ ಮೇಲೆ ನೂರಾರು ಪಾತ್ರಗಳ ಮೂಲಕ ಒಂದು ಒಂದು ಸಾಂಸ್ಕೃತಿಕ ಜಗತ್ತನ್ನು ನಿರ್ಮಾಣ ಮಾಡಿದ್ದಾರೆ. ತಾವು ನಿರ್ವಹಿಸಿದ ಪಾತ್ರಗಳ ಮೂಲಕ ಒಂದು ಮೌಲ್ಯವನ್ನು ಬೆಳೆಸಿದ್ದಾರೆ. ಆದರೆ ಇದನ್ನು ಯಾವ ಮಾನದಂಡದಿಂದ ಅಳೆಯುವುದು? ಇದು ನಮ್ಮ ನಾಡಿಗೆ ಅವರು ಕೊಟ್ಟ ದೊಡ್ಡ ಕೊಡುಗೆಯಲ್ಲವೇ? ಎಂದಿದ್ದೆ. ನನ್ನ ಅಂದಿನ ವಾದ ಯಾರಿಗೂ ಪಥ್ಯವಾಗಿರಲಿಲ್ಲ.
ಇದೇ ವಾದವನ್ನು ಇತ್ತೀಚೆಗೆ ಸಭೆಯೊಂದರಲ್ಲಿ ವಿಸ್ತರಿಸುತ್ತಾ, ಇಂದು ನಮ್ಮ ಸಮಾಜದಲ್ಲಿ ಸಂಬಂಧಗಳು ಕ್ಷೀಣಿಸುತ್ತಿವೆ. ನಮ್ಮಲ್ಲಿ ಒಂದೊಂದು ಸಂಬಂಧಕ್ಕೆ ಒಂದೊಂದು ಸಂಬಂಧ ಸೂಚಕ ಹೆಸರಿದೆ. ಉದಾ: ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅತ್ತೆ-ಮಾವ, ದೊಡ್ಡಮಾವ-ದೊಡ್ಡತ್ತೆ, ಚಿಕ್ಕಮಾವ-ಚಿಕ್ಕತ್ತೆ, ಅಕ್ಕ, ತಂಗಿ, ಭಾವ, ನಾದಿನಿ, ಅತ್ತಿಗೆ, ಮೈದುನ, ಷಡ್ಡಕ, ವಾರಗಿತ್ತಿ… ಹೀಗೇ ಪಟ್ಟಿ ಮಾಡುತ್ತಾ ಹೋದರೆ ಇವುಗಳ ಸಂಖ್ಯೆ ಇಪ್ಪತ್ತನ್ನೂ ದಾಟಿ ಮುಂದೆ ಹೋಗುತ್ತದೆ. ಆದರೆ ಇಂದು ಈ ಎಲ್ಲ ಸಂಬಂಧಸೂಚಕ ಪದಗಳು ಕರೆಯಲ್ಪಡುವುದು ಇಂಗ್ಲೀಷಿನ ಎರಡೇ ಪದಗಳಿಂದ! ‘ಅಂಕಲ್’ ಮತ್ತು ‘ಆಂಟಿ’… ಇದು ಆಧುನಿಕತೆಯ ದೊಡ್ಡ ಕೊಡುಗೆ. ಇದರ ವಿರುದ್ಧ ಯಾರೂ ಮಾತನಾಡುತ್ತಿಲ್ಲ.
ಇರಲಿ. ಅರವತ್ತು, ಎಪ್ಪತ್ತು, ಎಂಭತ್ತರ ದಶಕದಲ್ಲಿ ಬರುತ್ತಿದ್ದ ಚಲನಚಿತ್ರಗಳಲ್ಲಿ ರಾಜ್‌ಕುಮಾರ್ ಮೇಲ್ಕಾಣಿಸಿದ ಸಂಬಂಧಗಳ ಬಹುತೇಕ ಪಾತ್ರಗಳನ್ನ ಅಭಿನಯಿಸಿದ್ದಾರೆ. ಅವುಗಳ ಗುಣ-ವಿಶೇಷಣಗಳನ್ನು ಕಣ್ಣಿಗೆ ಕಟ್ಟುವಂತೆ ಕೆತ್ತಿದ್ದಾರೆ. ಅವುಗಳ ಮೂಲಕ ಮಮತೆ, ಪ್ರೀತಿ, ವಾತ್ಸಲ್ಯವನ್ನು ದೃಗ್ಗೋಚರಿಸಿದ್ದಾರೆ. ಅಲ್ಲೊಬ್ಬ ಆದರ್ಶ ಅಪ್ಪ, ಇನ್ನೊಬ್ಬ ಜವಾಬ್ದಾರಿಯ ಅಣ್ಣ, ವಿಧೇಯ ತಮ್ಮ, ಶ್ರೀರಾಮಚಂದ್ರನಂಥ ಪತಿ ಹೀಗೆ ತಾವು ಅಭಿನಯಿಸಿದ ಪಾತ್ರಗಳ ಮೂಲಕ ಸಾಮಾಜಿಕ ಮೌಲ್ಯಕ್ಕೆ ಒಂದು ಚೌಕಟ್ಟು ಹಾಕಿಕೊಟ್ಟಿದ್ದಾರೆ. ಇದನ್ನು ನೋಡಿದ ಪ್ರೇಕ್ಷಕ, ಅಣ್ಣ ಎಂದರೆ ಹೀಗಿರಬೇಕು, ಅಪ್ಪ ಎಂದರೆ ಹೀಗಿರಬೇಕು, ಗಂಡ ಎಂದರೆ ಹೀಗಿರಬೇಕು ಎಂದು ತಲೆದೂಗಿದ್ದಾರೆ. ಎಷ್ಟೋ ಮಂದಿ ಈ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅನುಸರಿಸಿದ್ದಾರೆ, ಅನುಕರಿಸಿದ್ದಾರೆ, ಆನಂದಿಸಿದ್ದಾರೆ. ಆದರೆ ಇದಾವುದೂ ಕಣ್ಣಿಗೆ ಕಾಣುವಂಥದ್ದಲ್ಲ. ಏನು ಮಾಡುವುದು? ಪ್ರಾಯಶಃ ಇಂದು ರಾಜ್‌ಕುಮಾರ್ ಬದುಕಿದ್ದರೆ ಇನ್ನಷ್ಟು ಬೆಲೆಯುಳ್ಳ ಚಿತ್ರಗಳನ್ನು ಕೊಟ್ಟಿರುತ್ತಿದ್ದರು.
ಇಂದೂ ಕೂಡ ನಮ್ಮ ಚಿತ್ರರಂಗದ ಭಂಡಾರದಲ್ಲಿ ಶ್ರೀರಾಮ, ಹರಿಶ್ಚಂದ್ರ, ಸರ್ವಜ್ಞ, ಮಯೂರ, ಪುಲಕೇಶಿ ಭಕ್ತಕುಂಬಾರ, ಕನಕದಾಸ, ಪುರಂದರದಾಸ, ರಾಘವೇಂದ್ರ ಸ್ವಾಮಿ, ಕೃಷ್ಣದೇವರಾಯ, ಮುಂತಾದ ಪಾತ್ರಗಳು ವಿಜೃಂಭಿಸುತ್ತಿವೆ. ಇವುಗಳಲ್ಲಿ ಡಾ.ರಾಜ್ ಅವರನ್ನು ಬಿಟ್ಟು ಯಾರನ್ನು ಊಹಿಸಿಕೊಳ್ಳುವುದು ಹೇಳಿ?
ಮತ್ತೆ ಡಬ್ಬಿಂಗ್ ವಿಚಾರಕ್ಕೆ ಬರುತ್ತೇನೆ.
ಹನ್ನೆರಡು ವರ್ಷಗಳ ಹಿಂದೆ ನಾನು ಚೆನ್ನೈನ ರಾಧಿಕಾ ಶರತ್ ಅವರ ಕಚೇರಿಯಲ್ಲಿ ಕುಳಿತಿದ್ದೆ. ಸೀರಿಯಲ್ ಒಂದರ ನಿರ್ಮಾಣದ ಕುರಿತಾಗಿ ಚರ್ಚಿಸಲು ನನ್ನನ್ನು ಕರೆಸಿದ್ದರು. ಆಗ ಹೀಗೇ ನಮ್ಮ ಚಲನಚಿತ್ರ ಕ್ಷೇತ್ರದ ಬಗ್ಗೆ ಮಾತನಾಡುತ್ತಾ ರಾಧಿಕಾ ಒಂದು ಮಾತನ್ನು ಕೇಳಿದ್ದರು.
`Is Mr.Rajkumar still strong in your film industry?’
`Yes, very much’ ಎಂದು ನಾನು ಹೇಳಿದ್ದೆ.
`Then, it’s impossible to dub our serial in Kannada…’
ಪ್ರಾಯಶಃ ಅವರು ತಮಿಳಿನಲ್ಲಿ ಹೆಸರುವಾಸಿಯಾಗಿದ್ದ ತಮ್ಮ ‘ಚಿತ್ತಿ’ ಎಂಬ ಧಾರಾವಾಹಿಯೊಂದನ್ನು ಕನ್ನಡಕ್ಕೆ ಡಬ್ ಮಾಡಲು ಯೋಚಿಸಿದ್ದರು ಎಂದು ಕಾಣುತ್ತದೆ. ಆಮೇಲೆ ಈ ಪ್ರಸ್ತಾಪ ಬಿಟ್ಟು ಬೇರೆ ಮಾಡಿದರು ಎನ್ನಿ. ಆದರೆ ಇಂದು ರಾಜ್‌ಕುಮಾರ್ ಇಲ್ಲ ಎಂಬುದನ್ನೇ ಬಂಡವಾಳ ಮಾಡಿಕೊಂಡು ಕನ್ನಡ ಚಲನಚಿತ್ರರಂಗದ ಮೇಲೆ ಧಾಳಿ ಮಾಡಲು ಅದೆಷ್ಟು ಜನ ಕತ್ತಿಮಸೆಯುತ್ತಿದ್ದಾರೋ ಏನೋ? ಇದರಲ್ಲಿ ಹೊರಶತೃಗಳೂ ಇದ್ದಾರೆ, ಹಾಗೆಯೇ ಒಳಶತೃಗಳೂ ಸಾಕಷ್ಟು ಸಂಖ್ಯೆಯಲ್ಲೇ ಇದ್ದಾರೆ ಎನ್ನಿ.
* * *
ರಾಜಕೀಯ ನನ್ನಗಲ್ಲ…
ಇದೀಗ ಚುನಾವಣೆಯ ಕಾವು ಎಲ್ಲೆಡೆ ಹಬ್ಬಿದೆ. ರಾಜ್‌ಕುಮಾರ್ ಅವರ ಸೊಸೆ ಗೀತಾ ಶಿವರಾಜ್‌ಕುಮಾರ್ ಶಿವಮೊಗ್ಗ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ‘ಗೀತಾ ರಾಜ್‌ಕುಮಾರ್ ಸೊಸೆಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ಬಂಗಾರಪ್ಪನವರ ಮಗಳಾಗಿ ಸ್ಪರ್ಧೆಯಲ್ಲಿದ್ದಾಳೆ’ ಎಂದು ಮಧುಬಂಗಾರಪ್ಪ ಡಿಫೆನ್ಸಿವ್ ಬ್ಯಾಟಿಂಗ್ ಮಾಡಿದ್ದಾರೆ. ನಮ್ಮಲ್ಲಿ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿ ಕೊಟ್ಟ ಮೇಲೆ ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ’ ಎಂದು ಸಂಪ್ರದಾಯ ಹೇಳುತ್ತದೆ… ಶಿವರಾಜ್‌ಕುಮಾರ್ ಕೂಡ ಇದಕ್ಕೆ ಪ್ರತಿಕ್ರಿಯಿಸುತ್ತಾ, ‘ಇದು ಗೀತಾಳ ವೈಯಕ್ತಿಕ ಅಭಿಪ್ರಾಯ, ನಾನೊಬ್ಬ ಕಲಾವಿದ, ನಾನ್ಯಾವ ರಾಜಕೀಯ ಪಕ್ಷಕ್ಕೂ ಸೇರಿದವನಲ್ಲ’ ಎಂದು ತಮ್ಮನ್ನು ಸೇಫ್ ಜೋನ್‌ಗೆ ತಳ್ಳಿಕೊಂಡಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸುವುದು ‘ಸರಿ’ ಅಥವಾ ‘ತಪ್ಪು’ ಎಂದು ನಾನು ಹೇಳಲು ಹೊರಟಿಲ್ಲ. ಆದರೆ ರಾಜ್‌ಕುಮಾರ್ ಕುಟುಂಬದ ಒಬ್ಬರು ಸದಸ್ಯರು ಚುನಾವಣಾ ಕಣಕ್ಕೆ ಧುಮಿಕಿದ್ದಾರೆ ಎಂದಾಗ ನನಗೆ ಧುತ್ ಎಂದು ರಾಜ್‌ಕುಮಾರ್ ಮುಖ ಕಣ್ಣಮುಂದೆ ಬರುತ್ತದೆ. ಅವರನ್ನು ಈ ರಾಜಕೀಯ ರಂಗಕ್ಕೆ ಸೆಳೆಯಲು ಎಂತೆಂಥ ಘಟಾನುಘಟಿಗಳು, ಎಷ್ಟೆಷ್ಟು ಶತಪ್ರಯತ್ನ ಪಟ್ಟಿದ್ದರು ಎಂಬುದು ಎಲ್ಲರಿಗೂ ಗೊತ್ತು.
ಇತಿಹಾಸದತ್ತ ಇಣುಕಿ ನೋಡಿದರೆ, ಹೆಚ್ಚೂ-ಕಮ್ಮಿ ದಕ್ಷಿಣ ಭಾರತದ, ಅಷ್ಟೇ ಏಕೆ? ಉತ್ತರಭಾರತದ ಪ್ರಮುಖ ಕಲಾವಿದರನೇಕರು ತಮ್ಮ ಚಿತ್ರರಂಗದ ಸ್ಟಾರ್ ಇಮೇಜನ್ನು ರಾಜಕೀಯದಲ್ಲಿ ಬಳಸಿಕೊಳ್ಳಲು ಪ್ರಯತ್ನಿಸಿರುವವರೇ. ರಾಜ್‌ಕುಮಾರ್ ಮನಸ್ಸು ಮಾಡಿದ್ದರೆ ಅವರು ಕರ್ನಾಟಕದ ಮುಖ್ಯಮಂತ್ರಿಯಾಗುವುದು ಏನೇನೂ ಕಷ್ಟವಿರಲಿಲ್ಲ. ಆದರೆ ಅವರು ಮಾತ್ರ ಕೊನೆಯವರೆಗೂ ‘ರಾಜಕೀಯ ನನ್ನಗಲ್ಲ’ ಎಂಬ ತಮ್ಮ ಗಟ್ಟಿ ನಿಲುವಿಗೆ ಬದ್ಧರಾಗಿಯೇ ಉಳಿದರು. ಈ ನಿಗ್ರಹ ಅಷ್ಟು ಸುಲಭದ ಮಾತಲ್ಲ! ಎಂಥೆಂಥಾ ಪ್ರಲೋಭನೆಗಳೂ ಕೂಡ ರಾಜ್‌ಕುಮಾರ್ ಅವರನ್ನು ಕೊಂಚವೂ ಬಗ್ಗಿಸಲು ಸಾಧ್ಯವಾಗಲೇ ಇಲ್ಲ. ಇದೆಲ್ಲ ನೆನೆದರೆ ಅವರ ಬಗ್ಗೆ ಮನಸ್ಸು ತುಂಬಿ ಬರುತ್ತದೆ.
ಇಂಧಿರಾಗಾಂಧಿ ವಿರುದ್ಧ ಚಿಕ್ಕಮಗಳೂರಿನಲ್ಲಿ ರಾಜ್‌ಕುಮಾರ್‌ರನ್ನು ಸ್ಪರ್ಧೆಗೆ ಒಪ್ಪಿಸಲು ಇದೇ ದೇವೇಗೌಡರು ಎಂಜಿಆರ್‌ರನ್ನು ಕೇಳಿಕೊಂಡಿದ್ದರು. ಅದಕ್ಕೆ ಎಂಜಿಆರ್ ‘ರಾಜ್‌ಕುಮಾರ್ ಭಾರತದಲ್ಲೇ ಅಪರೂಪದ ಕಲಾವಿದ. ಅವರಿಗೆ ರಾಜಕೀಯ ಇಷ್ಟವಿಲ್ಲ. ಸುಮ್ಮನೆ ಅವರನ್ಯಾಕೆ ಇಲ್ಲಿಗೆ ಎಳೀತೀರಿ? ಅವರ ಪಾಡಿಗೆ ಅವರನ್ನ ಬಿಟ್ಟುಬಿಡಿ’ ಎಂದು ಬುದ್ಧಿವಾದ ಹೇಳಿದ್ದರಂತೆ. ಅದೇ ಸಂದರ್ಭದಲ್ಲಿ ಈ ರಾಜಕೀಯ ರಂಗದವರ ಕಾಟ ತಾಳಲಾರದೆ ಒದ್ದಾಡುತ್ತಿದ್ದ ರಾಜ್‌ಕುಮಾರ್‌ಗೆ ಎಂಜಿಆರ್ ತಮ್ಮ ತೋಟದ ಮನೆಯಲ್ಲಿ ಕೆಲ ತಿಂಗಳು ಮುಖಮರೆಸಿಕೊಂಡಿರಲು ಅವಕಾಶವನ್ನೂ ಕಲ್ಪಿಸಿದ್ದರಂತೆ!
ಇಲ್ಲಿ ನಾನು ಇನ್ನೊಂದು ಪ್ರಕರಣವನ್ನು ಹೇಳಲೇಬೇಕು.
ಅದು 1989 ನೇ ಇಸವಿ.
ಆಗ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಮೂರನೇ ಶಕ್ತಿಯ ಉದಯವಾಗುವ ಮಾತು ಕೇಳಿಬರುತ್ತಿತ್ತು. ಡಾ.ರಾಜ್‌ಕುಮಾರ್, ಪ್ರಜಾವಾಣಿ ಬಳಗ, ಸೊರಬದ ಬಂಗಾರಪ್ಪ- ಈ ಮೂರೂ ಕನ್ನಡನಾಡಿನಲ್ಲಿ ಮೂರು ಬಗೆಯ ಶಕ್ತಿಗಳಾಗಿದ್ದವು. ಈ ಶಕ್ತಿಗಳಿಗೆ ದೇವೇಗೌಡರು ವೇದಿಕೆಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿತ್ತು. ದೇವೇಗೌಡರು ರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ದಾರೆ ಎಂಬ ಸುದ್ದಿ ಕೂಡ ಎಲ್ಲೆಡೆ ಹರಡಿತ್ತು. ಆಗ ನಾನು ‘ಸುದ್ದಿಸಂಗಾತಿ’ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೆ. ನಮ್ಮ ಸಂಪಾದಕರು ನನ್ನನ್ನು ಕರೆದು ಹೇಗಾದರೂ ಮಾಡಿ ರಾಜ್‌ಕುಮಾರ್‌ರನ್ನು ಭೇಟಿಯಾಗಿ ಈ ಕುರಿತು ಸ್ಪಷ್ಟನೆ ಪಡೆಯಿರಿ. ಬೇರೆ ಪತ್ರಿಕೆಯಲ್ಲಿ ಈ ಸುದ್ದಿ ಲೀಕ್ ಆಗುವ ಮುಂಚೆ ನಮ್ಮಲ್ಲಿ ಬರಬೇಕು, ಇದೇ ನಮ್ಮ ಈ ವಾರದ ಕವರ್ ಸ್ಟೋರಿ ಎಂದು ತಾಕೀತು ಮಾಡಿದರು.
ಆದರೆ ಡಾ.ರಾಜ್‌ಕುಮಾರ್ ಅವರನ್ನು ಭೇಟಿಯಾಗುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಅವರು ಪತ್ರಕರ್ತರ ಕೈಗೆ ಸಿಗುವುದು ದುಸ್ತರವಾಗಿತ್ತು. ಆದರೂ ಒಂದು ಛಾನ್ಸ್ ತೆಗೆದುಕೊಳ್ಳಲು ನಿರ್ಧರಿಸಿ ಹೊರಟೆ.
ನಾನು ಹಾಗೂ ಎನ್.ಎಸ್.ಶಂಕರ್, ರಾಜ್‌ಕುಮಾರ್ ಅವರ ಭಾವಮೈದುನ ಚಿನ್ನೇಗೌಡರನ್ನು ಅವರ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯಲ್ಲಿ ಬೇಟಿಯಾದೆವು. ಡಾ.ರಾಜ್‌ಕುಮಾರ್ ಅವರ ಭೇಟಿಗೆ ಹತ್ತು ನಿಮಿಷದ ಸಮಯ ಕೊಡಿಸಿ ಎಂದು ಕೋರಿದೆವು. ‘ಏನು ವಿಷಯ?’ ಎಂದು ಚಿನ್ನೇಗೌಡರು ಕೇಳಿದರು. ನಾವು ವಿಧಿಯಿಲ್ಲದ ಇದು ‘ದೇವೇಗೌಡ ಹಾಗೂ ರಾಜ್‌ಕುಮಾರ್ ಭೇಟಿ’ ಕುರಿತು ಸ್ಪಷ್ಟೀಕರಣ ಕೇಳಲು ಅಷ್ಟೇ ಎಂದೆವು. ಅದಕ್ಕೆ ಚಿನ್ನೇಗೌಡರು ಕಡ್ಡಿಮುರಿದಂತೆ, ರಾಜ್‌ಕುಮಾರ್ ಎಂದೂ ರಾಜಕೀಯಕ್ಕೆ ಬರುವುದಿಲ್ಲ. ಅಂಥದ್ದೇನಾದರೂ ಸುದ್ದಿ ಇದ್ದರೆ ನಾವೇ ಕರೆದು ಬಹಿರಂಗವಾಗಿ ಹೇಳ್ತೀವಿ. ಸಧ್ಯಕ್ಕೇನೂ ಈ ಕುರಿತು ಮಾತಾಡಿಸುವುದು ಬೇಡ. ನಿಮಗೆ ಅವರ ಸಂದರ್ಶನ ಬೇಕೇ ಬೇಕು ಅಂದರೆ ಎರಡು ಮೂರು ತಿಂಗಳಲ್ಲಿ ಏನಾದರೂ ವ್ಯವಸ್ಥೆ ಮಾಡೋಣ ಎಂದು ನಮ್ಮನ್ನು ಸಾಗಹಾಕಿದರು.
ಪೆಚ್ಚುಮೋರೆಯಲ್ಲಿ ಆಚೆ ಬಂದ ನಾವು ಇನ್ನೊಂದು ಚಾನ್ಸ್ ತೆಗೆದುಕೊಳ್ಳೋಣ ಎಂದು ಶಿವರಾಜ್‌ಕುಮಾರ್ ಮನೆಗೆ ಹೋದೆವು. ನಾನು ಈ ಹಿಂದೆ ಶಿವಣ್ಣನ ಸಂದರ್ಶನ ಮಾಡಿದ್ದೆ. ಆ ಸಂದರ್ಭದಲ್ಲಿ ಗೀತಾರವರ ಮುಖಪರಿಚಯವೂ ಇತ್ತು. ಆ ಧೈರ್ಯದ ಮೇಲೆ ಸದಾಶಿವನಗರ ಅವರ ಮನೆಯ ಕಾಲಿಂಗ್ ಬೆಲ್ ಒತ್ತಿದೆ. ಬಾಗಿಲು ತೆಗೆದವರು ಸ್ವಯಂ ಗೀತಾಶಿವರಾಜ್‌ಕುಮಾರ್! ನಾನು ಕುಶಲೋಪರಿ ಮಾತಾಡಿ ನಂತರ ಮೆಲ್ಲನೆ, ‘ನಮಗೆ ರಾಜ್‌ಕುಮಾರ್ ಅವರನ್ನು ಭೇಟಿಯಾಗಬೇಕಿದೆ’ ಎಂದು ಹೇಳಿದ್ದಕ್ಕೆ, ಆಕೆ ಅವರು ಊಟಮಾಡುತ್ತಿದ್ದಾರೆ, ಕೂತಿರಿ, ಕೇಳಿಕೊಂಡು ಬರುತ್ತೇನೆ ಎಂದು ಒಳ ಹೋದರು. ನಮ್ಮ ರೊಟ್ಟಿ ಇಷ್ಟು ಸುಲಭವಾಗಿ ಜಾರಿ ತುಪ್ಪಕ್ಕೆ ಬೀಳುತ್ತದೆ ಎಂದು ಗೊತ್ತಿರಲಿಲ್ಲ. ಮುಂದೇನಾಗುತ್ತದೆ ನೋಡೋಣ ಎಂದು ಕಾದು ಕುಳಿತೆವು.
ಇನ್ನೇನು ಗೀತಾ ಹೊರಬರುತ್ತಾರೆ. ಇಂದು ಭೇಟಿ ಸಾಧ್ಯವಿಲ್ಲ ಎಂದು ಹೇಳುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆವು. ಆಶ್ಚರ್ಯ ಎಂದರೆ ಊಟ ಮುಗಿಸಿ, ಪುಟ್ಟ ಟವೆಲ್‌ನಲ್ಲಿ ಕೈಯೊರೆಸಿಕೊಂಡು, ‘ಯಾರು?’ ಎನ್ನುತ್ತಾ ಸ್ವತಃ ರಾಜ್‌ಕುಮಾರ್ ಎದುರಿಗೆ ಬರಬೇಕೆ! ದೇವರೇ ಪ್ರತ್ಯಕ್ಷವಾದಂತೆ, ನಮ್ಮ ಕಣ್ಣುಗಳನ್ನು ನಮಗೇ ನಂಬಲಾಗಲಿಲ್ಲ. ನಾನು ರಾಜ್‌ಕುಮಾರ್ ಅವರನ್ನು ಅಷ್ಟು ಹತ್ತಿರದಿಂದ ನೋಡಿದ್ದು ಅದೇ ಮೊದಲು.
‘ನಿಮ್ಮನ್ನು ನೋಡಿ, ಮಾತಾಡಿಸಿಕೊಂಡು ಹೋಗಲು ಬಂದೆವು ಸಾರ್’ ಎಂದೆ. ನಮ್ಮ ಕುಲ-ಗೋತ್ರ ಏನನ್ನೂ ಕೇಳದೆ, ‘ಬನ್ನಿ ಊಟ ಮಾಡಿ’ ಎಂದು ಆಹ್ವಾನಿಸಿದರು. ನಮ್ಮ ಊಟ ಆಗಿರಲಿಲ್ಲ. ಆದರೂ ಊಟವಾಗಿದೆ ಎಂದು ಸೌಜನ್ಯ ಮೆರೆದೆವು. ಹಾಗಾದರೆ ಕೂಡಿ ಎಂದು ಹೇಳಿ, ನಮ್ಮ ಮುಂದೆ ಬಾಳೆಹಣ್ಣಿನ ತಟ್ಟೆ ತಳ್ಳಿ, ತಾವೂ ಎದುರು ಸೋಫಾದಲ್ಲಿ ಕೂರುತ್ತಾ, ವೀಳೆಯದೆಲೆಯ ನಾರು ಬಿಡಿಸುತ್ತಾ, ಸುಣ್ಣ ಸವರುತ್ತಾ ಮಾತಿಗೆ ಕುಳಿತರು.
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಆ ಮಾತುಕತೆಯ ಆಯ್ದ ಭಾಗಗಳನ್ನು ನನ್ನ ಹಳೆಯ ದಾಖಲೆಯಿಂದ ತೆಗೆದು ಇಲ್ಲಿ ಯಥಾವತ್ ಕೊಡುತ್ತಿದ್ದೇನೆ, ಓದಿಕೊಳ್ಳಿ.
ಪ್ರಶ್ನೆ: ಸಾರ್, ಯಾವ್ಯಾವಾಗ ನಿಮ್ಮ ಮೇಲೆ ರಾಜಕೀಯಕ್ಕೆ ಸೇರಬೇಕೆಂಬ ಒತ್ತಡ ಬಂದಿದೆ? ಚಿಕ್ಕಮಗಳೂರು ಚುನಾವಣೆಯದಂತೂ ಎಲ್ರಿಗೂ ಗೊತ್ತಿದೆ, ಅದು ಬಿಟ್ಟು ಹೇಳಿ…
ರಾಜ್: ಹ್ಞಾಂ… ಮೊದಲು ಕೆಂಗಲ್ ಹನುಮಂತಯ್ಯನವರ ಕಾಲದಲ್ಲೇ ಆಹ್ವಾನ ಬಂದಿತ್ತು… ಕಳೆದ ಹತ್ತು ಹದಿನೈದು ವರ್ಷಗಳಿಂದ ಬರ್ತಾನೇ ಇದೆ. ನನಗಂತೂ ಅದರ ಅನುಭವ ಇಲ್ಲ. ಅನುಭವ ಇಲ್ಲದವರು ರಾಜಕೀಯಕ್ಕೆ ಬಂದಿಲ್ಲವಾ ಅಂತ ನೀವು ಕೇಳಬಹುದು. ಅದು ಅವರವರ ಅಭಿರುಚಿ (ಮುಗುಳ್ನಗು)… ಈಗ ನಾನು ಆಕ್ಟ್ ಮಾಡ್ತೀನಿ. ಇದು ಒಂಥರ ಜೀವನ. ಅದೂ (ರಾಜಕೀಯ) ಒಂಥರ ಜೀವನ. ನಾನು ಇಲ್ಲಿಗೆ ಬಂದಿದ್ದು ಅನ್ನಕ್ಕಾಗಿ. ಅದೂ ಸಿಕ್ತು. ಭಗವಂತ ಇನ್ನೂ ಏನೇನೋ ಕೊಟ್ಟ. ನಾನೇನೂ ಈ ಮಟ್ಟಕ್ಕೆ ಬರಬೇಕು, ಬರ್ತೀನಿ ಅಂದುಕೊಂಡವನೇ ಅಲ್ಲ. ನನ್ನನ್ನ ಸಿನಿಮಾಗೆ ಮ್ಯೂಸಿಕ್ ಮಾಡು, ಡೈರೆಕ್ಟ್ ಮಾಡು ಅಂತ ಎಲ್ಲ ಅಂದ್ರು. ಆದ್ರೆ ಆಕ್ಟ್ ಮಾಡ್ತಿದ್ದೀನಲ್ಲ, ಅದನ್ನೇ ತೃಪ್ತಿಯಾಗೋ ಹಾಗೆ ಮಾಡ್ತಿದ್ದೀನ ಅಂತ ಕೇಳಿಕೊಂಡ್ರೆ, ಅದಕ್ಕೇ ಜವಾಬು ಕೊಡೋಕ್ಕೆ ಆಗೋಲ್ಲ. ಇನ್ನು ಉಳಿದದ್ದಲ್ಲೆ, ಯಾಕೆ?
ಪ್ರಶ್ನೆ : ರಾಜಕೀಯ ಅಂದ್ರೆ ಜವಾಬ್ದಾರಿ ಸ್ಥಾನ ಅಲ್ಲವೇ?
ರಾಜ್: ಇದೂ ಜವಾಬ್ದಾರೀನೇ! ಜೀವನದ ಜವಾಬ್ದಾರಿ…
ಪ್ರಶ್ನೆ : ಆದರೆ ಅದು (ಅಧಿಕಾರ ಸ್ಥಾನ) ನಾಡಿನ ಜವಾಬ್ದಾರಿ ಹೊತ್ತ ಕೆಲಸವಲ್ಲವೇ?
ರಾಜ್: ಇರಬಹುದು… (ನಗುತ್ತ) ಅದೆಲ್ಲ ಅವರವರ ಅನುಭವ. ಅಭಿರುಚಿಗೆ ತಕ್ಕ ಹಾಗೆ. ಈಗ ನೋಡಿ, ಒಂದು ಪತ್ರ ಬರೆಯೋನೂ ಮೊದಲು ನಾನು ಕ್ಷೇಮ ಅಂತ ಬರೆದು, ಆಮೇಲೆ ನೀನು ಕ್ಷೇಮವಾ ಅಂತ ಕೇಳ್ತಾನೆ. ಮೊದಲೇ ನೀನು ಕ್ಷೇಮವಾ ಅಂತ ಅವರಪ್ಪನಾಣೆಗೂ ಕೇಳೋಲ್ಲ! ಈಗ ನನಗೇ ಹೊಟ್ಟೆಗಿಲ್ಲದೆ ಇದ್ರೆ, ಇನ್ನೊಬ್ಬ ಹಸ್ಕೊಂಡಿರುವವನ ಬಗ್ಗೆ ನಾನೇನು ಯೋಚನೆ ಮಾಡ್ತೀನಿ? ಮೊದಲು ನನ್ನ ಹೊಟ್ಟೆ ತುಂಬಿ ತೃಪ್ತಿಯಾದರೆ, ನೋಡಪ್ಪಾ, ಇಲ್ಲೊಬ್ಬ ಹಸಿದುಕೊಂಡಿದ್ದಾನೆ. ಇವನಿಗೇನಾದರೂ ಮಾಡಪ್ಪ ಅಂತೀನಿ! ಎಲ್ಲರೂ ಹಾಗೇನೇ…
ಪ್ರಶ್ನೆ: ಸಾರ್, ನೀವೀಗಾಗಲೇ ಒಂದು ರೀತಿ ಸಾರ್ವಜನಿಕ ಜೀವನ ಪ್ರವೇಶಿಸಿದ್ದೀರಿ, ಗೋಕಾಕ್ ಚಳವಳಿ ಮೂಲಕ…
ರಾಜ್: ಹೌದು. ಅಲ್ಲಿ ನನ್ನ ಕೆಲಸ ಇದೆ ಅಂತ ನನಗನ್ನಿಸಿತು, ಅದಕ್ಕೇ ಹೋದೆ. ಅಲ್ಲಿಗೆ ಹೋದಾಗಲೂ, ನನಗೇ ಅಂತ ಒಂದು ಸ್ಥಾನ ಬೇಡ, ಎಲ್ರೂ ಸಾಮೂಹಿಕವಾಗಿ ಕೆಲಸ ಮಾಡೋಣ ಅಂತಲೇ ಮಾಡಿದೆವು. ಬೇರೆ ಸ್ಥಾನ ಅಂದರೆ ‘ಸಪರೇಟ್’ ಆಗಿ ಬಿಡ್ತೀನಿ ಅಂತ…
(ಇನ್ನೊಂದು ಹಂತದಲ್ಲಿ ರಾಜ್ ‘ಭಗವಂತನ ಕೃಪೆ’ ಬಗ್ಗೆ ಮಾತಾಡುವಾಗ ನಮ್ಮ ಪ್ರಶ್ನೆ ಹೀಗಿತ್ತು!)
ಪ್ರಶ್ನೆ : ಆ ಭಗವಂತನೇ ನೀವು ರಾಜಕೀಯಕ್ಕೆ ಬರಲಿ ಅಂತ ಬಯಸಿದರೆ…
ರಾಜ್: (ನಗುತ್ತ) ಯಾರಿಗ್ಗೊತ್ತು?!… (ತಡೆದು, ಯೋಚಿಸಿ, ಖಚಿತವಾದ ಧ್ವನಿಯಲ್ಲಿ) ಇಲ್ಲ ಆತ ಬರಗೊಡಲ್ಲ. ಇಷ್ಟು ಕಾಲವೇ ಆಯಿತು. ಆತ ಇನ್ನೇನೂ ನನಗೆ ಆ ರೀತಿ ಮಾಡಲ್ಲ…
ಪ್ರಶ್ನೆ : ತಮಗೂ ಭಗವಂತನಿಗೂ ಗುಪ್ತ ಒಪ್ಪಂದವಿರುವಂತಿದೆ?
ರಾಜ್: (ನಗುತ್ತಾ) ಹೌದು!.. ನಮ್ಮನ್ನು ನಾವು ನೋಡಿಕೊಂಡಾಗ ನಮ್ಮ ಹುಳುಕು ನಮಗೇ ಗೊತ್ತಾಗುತ್ತೆ. ಹಾಗೆ ಗೊತ್ತಾದಾಗ, ಅದನ್ನು ಕಮ್ಮಿ ಮಾಡಿಕೋಬೇಕಪ್ಪಾ ಅನಿಸುತ್ತೆ. ಇದೇ ಜೀವನ… ಇದೇ ದೇವತ್ವ…
ಪ್ರಶ್ನೆ : ದೇವೇಗೌಡರು ನಿಮ್ಮ ಸಹಕಾರ ಕೇಳಿದ್ದಾರೆ ಅಂತ ಒಂದು ವಲಯದಲ್ಲಿ ಸುದ್ದಿಯಿದೆ…
ರಾಜ್: ಇಲ್ಲ. ಅವರು ನನ್ನನ್ನು ಆಗಾಗ ಭೇಟಿ ಮಾಡೋದು ನಿಜ. ‘ಸುಮ್ಮನೆ ನೋಡಿಕೊಂಡು ಹೋಗೋಣ ಅಂತ ಬಂದೆ’ ಅಂದು ಹೋಗಿದ್ದಾರೆ ಅಷ್ಟೇ.
ಪ್ರಶ್ನೆ : ಈಗಿನ ರಾಜಕಾರಣದಲ್ಲಿ ನಿಮಗೆ ಇಷ್ಟವಾದವರು ಯಾರಾದರೂ ಇದ್ದಾರಾ?
ರಾಜ್ : ಹಾಗೇನಿಲ್ಲ. ನನಗೆ ಎಲ್ಲರೂ ಬೇಕು!… ನಾನು ಪತ್ರಿಕೇಲೂ ಕೂಡ ರಾಜಕೀಯ ಓದೋನಲ್ಲ. ಸುತ್ತ ಇರೋರೆಲ್ಲ ಹಾಗೆ, ಹೀಗೆ ಅಂತ ಹೇಳ್ತಾರೆ. ಎಲ್ಲಾ ಕೇಳ್ಕೊಂಡು ಹೌದಾ ಅನ್ನೋದು, ಅಷ್ಟೇ!…
(ಏಪ್ರಿಲ್ ತಿಂಗಳ ‘ಸಿನಿಜೋಷ್’ ಪತ್ರಿಕೆಗಾಗಿ ಬರೆದ ಲೇಖನ)
- Posted in: Uncategorized