ಜಲಪಾತದಲ್ಲಿ ‘ಅಜ್ಜಿಗುಂಡಿ.ಕಾಮ್’!
ನಾವು ಈ ‘ಅಜ್ಜಿಗುಂಡಿ’ಯನ್ನು ತಲುಪಿದಾಗ ಇಳಿ ಸಂಜೆಯಾಗುತ್ತಿತ್ತು.
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಸುಮಾರು ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿದೆ ಈ ಅಜ್ಜಿಗುಂಡಿ ಫಾಲ್ಸ್. ನನ್ನೊಂದಿಗೆ ಕುಂ.ವೀರಭದ್ರಪ್ಪ, ಪ್ರಜಾವಾಣಿಯ ಸಂಪಾದಕರಾದ ಶಾಂತಕುಮಾರ್, ಡಿ.ಎಸ್.ಚೌಗಲೆ, ರವೀಂದ್ರಭಟ್ ಐನಕೈ ಹಾಗೂ ಡಿಎಂ ಹೆಗಡೆ ಇದ್ದರು. ನಾವು ಜಲಪಾತ ನೋಡಲು ಹೋದವರಲ್ಲ. ಆ ಜಲಪಾತದಲ್ಲಿ ನಡೆಯುವ ನಾಟಕ ನೋಡಲು ಹೋದವರು! ಆಶ್ಚರ್ಯ ಆಗುತ್ತಿದೆಯೇ? ಹೌದು, ನಾವು ನೋಡಲು ಹೋದದ್ದು ಜಲಪಾತದಲ್ಲಿ ನಡೆಯಲಿದ್ದ ‘ಅಜ್ಜಿಗುಂಡಿ.com’ ಎಂಬ ನಾಟಕವನ್ನು! ಮುಂಚೆಯೇ ಹೇಳಿದ್ದರು. ಇಲ್ಲಿ ಸ್ಟೇಜ್ ಇಲ್ಲ, ಕುರ್ಚಿ ಇಲ್ಲ, ಟಿಕೆಟ್ ಕೂಡ ಇಲ್ಲ ಎಂದು!
ನಾಟಕಗಳನ್ನು ರಂಗದ ಮೇಲೆ ಆಡುವುದನ್ನು ನಾವು ನೋಡಿದ್ದೇವೆ. ಬೀದಿಯಲ್ಲಿ ಆಡುವುದನ್ನೂ ಕಂಡಿದ್ದೇವೆ. ರಂಗಾಯಣದಲ್ಲಿ ಮರ-ಗಿಡಗಳ ನಡುವೆ ‘ವನರಂಗ’ದಲ್ಲೂ ರಂಗಪ್ರದರ್ಶನ ಆಗಿರುವುದನ್ನು ಕಂಡಿರುವುದುಂಟು. ಇತ್ತೀಚೆಗೆ ಬೆಂಗಳೂರಿನ ಕಲಾಗ್ರಾಮದ ನಿಸರ್ಗದ ನಡುವೆ ಅಹೋರಾತ್ರಿ ನಡೆದ ‘ಮಲೆಗಳಲ್ಲಿ ಮದುಮಗಳು’ ನಾಟಕವನ್ನು ಕೂಡ ಕಂಡು, ನಾನು ಬೆರಗಾಗಿದ್ದೆ. ಆದರೆ ಈ ಜಲಪಾತದಲ್ಲಿ ನಾಟಕ ಹೇಗೆ? ಏನು? ಎತ್ತ? ನಾಟಕ ನೋಡುವ ದಿನ ಹತ್ತಿರ ಬಂದಂತೆಲ್ಲ ನನ್ನಲ್ಲಿನ ಕುತೂಹಲವೂ ಹೆಚ್ಚುತ್ತಲೇ ಇತ್ತು.
ನಾನು ಯಲ್ಲಾಪುರಕ್ಕೆ ನಾಟಕ ನೋಡಲು ಹೋಗಲಿರುವ ಸುದ್ದಿ ತಿಳಿದ ಮಿತ್ರರೊಬ್ಬರು ನಗುತ್ತಾ, ‘ಅಲ್ಲ, ಜಲಪಾತದಲ್ಲಿ ನಾಟಕವೇ! ಇವರಿಗೆ ನಾಟಕವಾಡಲು ಬೇರೆ ಜಾಗ ಸಿಗಲಿಲ್ಲವೆ? ಮರದ ಮೇಲೆ ಮಂಗನಂತೆ ನೆಗೆಯುತ್ತಾ ನಾಟಕವಾಡಬೇಕಿತ್ತು’ ಎಂದಿದ್ದರು. ಅಲ್ಲೂ ನಾಟಕ ಆಡಿದ್ದಾರೆ. ಆಲದಮರದ ಬಿಳಲುಗಳ ಮೇಲೆ ನಾಟಕ ಯಶಸ್ವಿಯಾಗಿತ್ತಂತೆ ಅಂದೆ. ನನ್ನ ಮಿತ್ರರು ಸೋಲಲಿಲ್ಲ. ಹಾಗಾದರೆ ಇವರು ಸ್ಮಶಾನವೊಂದನ್ನು ಬಿಟ್ಟಿರಬೇಕು ಎಂದರು. ನಾನು ತಣ್ಣಗೆ, ಅಲ್ಲೂ ನಾಟಕವಾಗಿದೆ ಎಂದಾಗ ಅವರು ಮುಂದೆ ಮಾತಾಡಿರಲಿಲ್ಲ. ಮರ, ಸ್ಮಶಾನ, ಸಮುದ್ರ ಅಷ್ಟೇ ಅಲ್ಲ, ಉತ್ತರಕರ್ನಾಟಕದ ಯಾಣದ ಗುಹೆಯಲ್ಲೂ ನಾಟಕವಾಡಿಸಿದ್ದಾರೆ ಈ ಕೆ.ಆರ್.ಪ್ರಕಾಶ್ ಎಂಬ ಮಹಾನುಭಾವ!
ಇವೆಲ್ಲವುಗಳ ನಂತರದ ಮುಂದಿನ ಸಾಹಸವೇ ಮಾರ್ಚ್ ಒಂದರಂದು ಸಂಜೆ ಜಲಪಾತದಲ್ಲಿ ನಾಟಕ ಮತ್ತು ಎರಡರಂದು ಸಂಜೆ ಬಾವಿಯಲ್ಲಿ ನಾಟಕ! ನನ್ನನ್ನು ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಕರೆದಾಗ ಹಿಂದೆ-ಮುಂದೆ ನೋಡದೆ ಒಪ್ಪಿಕೊಂಡಿದ್ದೆ.
ಒಂದು ವಾರದ ಮುಂಚೆ ನನ್ನ ಕೈಗೆ ನಾಟಕದ ಪಾಂಪ್ಲೆಟ್ ಸಿಕ್ಕಿತು. ಅದರಲ್ಲಿ ಹೀಗೆ ಬರೆಯಲಾಗಿತ್ತು:
‘ವಿಶಿಷ್ಟ ರಂಗ ಪ್ರಯೋಗ ಇದಾಗಿದ್ದು, ಇಲ್ಲಿ ರಂಗಮಂದಿರ ಇಲ್ಲ! ಕುಳಿತುಕೊಳ್ಳಲು ಕುರ್ಚಿಕೂಡಾ ಇಲ್ಲ! ಪ್ರಕೃತಿ ನಡುವಿನ ಇಳಿಜಾರಿನ ಜಾಗದಲ್ಲಿ ನೆಲದ ಮೇಲೆ ಕುಳಿತು ನಾಟಕ ವೀಕ್ಷಿಸಬಹುದಾಗಿದೆ. ತಾರಗಾರಿನ ‘ಅಜ್ಜಿಗುಂಡಿ’ಗೆ ಬರುವವರು ಅರ್ಧಗಂಟೆ ಮುಂಚಿತವಾಗಿ ಬಂದು ಸ್ಥಳವನ್ನು ಕಾಯ್ದಿರಿಸಿಕೊಳ್ಳಬೇಕು. ಊಟ-ತಿಂಡಿ, ನೀರು ಒಳಗೊಂಡಂತೆ ಅಗತ್ಯವಸ್ತುಗಳು ನಿಮ್ಮೊಂದಿಗಿರಲಿ. ಬ್ಯಾಟರಿ ಕೂಡಾ!’
ಇದನ್ನು ಓದಿ ನನಗೆ ಅಚ್ಚರಿಯಾಯಿತು. ಇಷ್ಟು ತ್ರಾಸ ತೆಗೆದುಕೊಂಡು ಯಾರು ನಾಟಕ ನೋಡಲು ಬರುತ್ತಾರೆ? ಇದೊಂದು ಗಿಮಿಕ್ ಇರಬಹುದು ಅಷ್ಟೇ ಎಂದು ನನ್ನ ಮನಸ್ಸಿನ ಮೂಲೆಯಲ್ಲಿ ಒಂದು ಸಣ್ಣ ಅನುಮಾನ ಹುಟ್ಟಿದ್ದು ಸುಳ್ಳಲ್ಲ. ಆದರೆ ಇವರ ಹಿಂದಿನ ಪ್ರದರ್ಶನಗಳು ಯಶಸ್ವಿಯಾಗಿವೆ ಎಂದು ನನ್ನ ಜೊತೆಯಲ್ಲಿದ್ದ ಪತ್ರಕರ್ತ ಮಿತ್ರರಾದ ರವೀಂದ್ರಭಟ್ ಹೇಳಿದಾಗ ಸ್ವಲ್ಪ ಗಂಭೀರವಾಗಿಯೇ ಘಟ್ಟ ಇಳಿದಿದ್ದೆ.
ವಜ್ರಳ್ಳಿಯ ಈ ಪರಿಸರಕ್ಕೆ ಒಂದು ಹಂತದವರೆಗೆ ಮಾತ್ರ ಕಾರು ಇತ್ಯಾದಿ ವಾಹನಗಳು ಹೋಗುತ್ತವೆ. ಆಮೇಲೆ ‘ಅಜ್ಜಿಗುಂಡಿ ಜಲಪಾತ’ಕ್ಕೆ ಸುಮಾರು ಐನೂರಕ್ಕೂ ಹೆಚ್ಚು ಅಡಿ ಕೆಳಕ್ಕೆ ಇಳಿದೇ ಹೋಗಬೇಕು. ಪ್ರಪಾತಕ್ಕೆ ಇಳಿದಿರುವ ಅನುಭವ ನಿಮಗಿದ್ದರೆ ಸುಮ್ಮನೆ ಊಹಿಸಿಕೊಳ್ಳಿ. ನಾವು ಕೈಗೆ ಸಿಕ್ಕ ಬಂಡೆ ತುದಿ, ಬಳ್ಳಿ-ಕಾಂಡ ಇವನ್ನು ಹಿಡಿದು, ಕಾರಂತರ ‘ಬೆಟ್ಟದ ಜೀವ’ ಕಾದಂಬರಿಯ ಶಿವರಾಮಯ್ಯನಂತೆ ಚತುಷ್ಪಾದಿಯಾಗಿ ಕೆಳಗಿಳಿದಿದ್ದೆವು. ಇಳಿಯುತ್ತಾ ಹೋದಂತೆ ನಮಗೆ ಜಲಪಾತದ ನೀರು ಧುಮ್ಮಿಕ್ಕುವ ಸದ್ದು ಸ್ಪಷ್ಟವಾಗಿ ಕೇಳಿಸತೊಡಗಿತು. ಒಂದೆಡೆ ನಿಂತು ಸುತ್ತಲೂ ನೋಡಿದರೆ ಶಾಮಿಲಿ ನದಿ, ಅಜ್ಜಿಗುಂಡಿಯಲ್ಲಿ ಧುಮ್ಮಿಕ್ಕಿ, ಬಳುಕುತ್ತಾ ನಡೆದಿದ್ದಳು. ಅಲ್ಲಲ್ಲಿ ಬ್ಯಾಟರಿ ಹಿಡಿದ ವಜ್ರಳ್ಳಿ ಆಸುಪಾಸಿನ ಗ್ರಾಮಸ್ಥರು, ಮಕ್ಕಳು, ಮಹಿಳೆಯರು ಉತ್ಸಾಹದಿಂದ ನಾಟಕ ನೋಡಲು ನರೆದಿದ್ದಾರೆ!
ಸಭಾಂಗಣ ಆಗಲೇ ಭರ್ತಿಯಾಗಿತ್ತು! ಸಂಭಾಂಗಣ ಎಂದರೆ ಏನು? ನೀರಿನ ಮಧ್ಯೆ ಇರುವ ತುಂಡು ತುಂಡು ಬಂಡೆಗಲ್ಲುಗಳು, ಏರಿ, ಗುಡ್ಡೆ, ಮರ, ಗಿಡಗಳ ಬುಡ, ಇನ್ನೂ ಕೆಲವರು ರೆಂಬೆಗಳ ಮೇಲೆ ಏರಿ ಕುಳಿತಿದ್ದಾರೆ! ನನಗೆ ಆಶ್ಚರ್ಯ ಹುಟ್ಟಿಸಿದ್ದು ಅಲ್ಲಿದ್ದ ಮಕ್ಕಳು ಮತ್ತು ಮಹಿಳೆಯರ ಸಂಖ್ಯೆ. ಈಗ ನನ್ನ ಮನಸ್ಸಿನ ಮೂಲೆಯಲ್ಲಿದ್ದ ಅನುಮಾನ ಸಂಪೂರ್ಣವಾಗಿ ಕರಗಿ ಹೋಯಿತು. ಓಹೋ! ಇವರೇನೋ ಪವಾಡ ಮಾಡಲಿದ್ದಾರೆ ಎಂದು ಖಚಿತವಾಗಿ ಅನ್ನಿಸತೊಡಗಿತ್ತು. ಅಲ್ಲಿ ನಮ್ಮನ್ನು ಎದುರುಗೊಂಡ ನಾಟಕದ ಕರ್ತೃ, ನಿರ್ದೇಶಕ ಪ್ರಕಾಶ್ ಸುಮಾರು ಮೂವತ್ತೈದರ ಆಸು-ಪಾಸಿನಲ್ಲಿರುವ ಕುರುಚಲುಗಡ್ಡದ ವ್ಯಕ್ತಿ. ಒಂದು ದೊಗಳೆ ಶರ್ಟ್ ಹಾಕಿಕೊಂಡು, ತುಂಡು ಪಂಚೆ ಉಟ್ಟಿದ್ದರು. ಆ ವ್ಯಕ್ತಿಯನ್ನು ನೋಡಿದರೆ ವಿಶೇಷ ಅನ್ನಿಸುವಂತಿರಲಿಲ್ಲ ಆದ್ರೆ ಅಲ್ಲಿ ನಡೆದಿದ್ದ ತಯಾರಿ ನಿಜವಾಗಿಯೂ ವಿಶೇಷವಾಗಿತ್ತು!
ವಿಶಾಲವಾಗಿ ಹರಡಿಕೊಂಡಿದ್ದ ಜಲಪಾತದ ಮುಂದೆ ಪ್ರಾಕೃತಿಕವಾಗಿ ನಿರ್ಮಿತವಾಗಿದ್ದ ಕಲ್ಲು, ಬಂಡೆಗಳ ಸ್ಥಳವೇ ನಮ್ಮ ವೇದಿಕೆಯಾಗಿತ್ತು. ಅದರ ಹಿಂದೆ ಒಂದು ಬ್ಯಾನರ್. ಅದರ ಹಿಂದೆ ಸುಮಾರು ಎಪ್ಪತ್ತು ಅಡಿಯಿಂದ ಸಣ್ಣಗೆ ಧುಮ್ಮಿಕ್ಕುತ್ತಿದ್ದ ಜಲಪಾತ. ಅಲ್ಲಿದ್ದ ಸ್ಥಳೀಯರನ್ನೊಬ್ಬರನ್ನು ನಾನು ಕೇಳಿದೆ. ಇದಕ್ಕೆ ‘ಅಜ್ಜಿಗುಂಡಿ’ ಎಂದು ಏಕೆ ಕರೆಯುತ್ತಾರೆ? ಅವರು ಕಥೆ ಹೇಳಿದರು. ಬಹಳ ಹಿಂದೆ ಅಜ್ಜಿಯೊಬ್ಬಳು ಬಂದು ಇಲ್ಲಿ ಮೇಲಿಂದ ಧುಮುಕಿ ಪ್ರಾಣ ಬಿಟ್ಟಿದ್ದಳಂತೆ ಅಂದಿನಿಂದ ಇದನ್ನು ಅಜ್ಜಿಗುಂಡಿ ಎಂದು ಕರೆಯುತ್ತಾರೆ. ಅಜ್ಜಿಯ ಪ್ರೇತಾತ್ಮ ಅಲೆಯುತ್ತಿರಬಹುದಾದ ಈ ಜಾಗಕ್ಕೆ ನಾವು ರಾತ್ರಿ ನಾಟಕ ನೋಡಲು ಬಂದಿದ್ದೇವೆ!
ಅದೇ ವ್ಯಕ್ತಿ ಮುಂದುವರಿಸುತ್ತಾ ಇನ್ನೊಂದು ಬಾಂಬ್ ಹಾಕಿದರು! ಈ ಅಜ್ಜಿಗುಂಡಿಯಲ್ಲಿ ವರ್ಷೊಂಬತ್ತು ಕಾಲವೂ ನೀರು ಹಿಂಗುವುದಿಲ್ಲ. ಈಗ ನೀವು ನೋಡುತ್ತಿರುವ ನೀರು ನೀರೇ ಅಲ್ಲ. ಇವತ್ತು ನಾಟಕ ಇರುವುದರಿಂದ, ಅಲ್ಲಿ ಘಟ್ಟದ ಮೇಲೆ ನದಿಗೆ ಅಡ್ಡಲಾಗಿ ಕಟ್ಟೆ ಕಟ್ಟಿ, ನೀರನ್ನು ಅರುಗು ಮಾಡಿ ಅತ್ತ ಹರಿಸಿದ್ದೇವೆ. ಎಲಾ ಎಲಾ! ಇವರು ಕಟ್ಟಿರುವ ತಾತ್ಕಾಲಿಕ ಕಟ್ಟೆ ನದಿಯ ರಭಸವನ್ನು ತಡೆದೀತೆ? ನಾವು ನಾಟಕ ನೋಡುತ್ತಿದ್ದಾಗ ಕಟ್ಟೆ ಒಡೆದು ಹೋದರೆ ಏನಪ್ಪಾ ಗತಿ? ಸುನಾಮಿಯಂತೆ ನೀರು ಏರಿಬಂದು ನಮ್ಮನ್ನೆಲ್ಲ ಕೊಚ್ಚಿಕೊಂಡು ಹೋಗುವುದಿಲ್ಲವೆ? ಈಗ ತಾನೇ ಕಷ್ಟಪಟ್ಟು ಘಟ್ಟ ಇಳಿದು ಬಂದಿದ್ದೆ. ಮತ್ತೆ ಮೇಲೆ ಹತ್ತಿಹೋಗಲು ನನ್ನಲ್ಲಿ ಶಕ್ತಿಯಿರಲಿಲ್ಲ. ಧೈರ್ಯಮಾಡಿ ಕುಳಿತೆ. ನನ್ನ ಲೈಫ್ ಇನ್ಷೂರೆನ್ಸ್ ಪಾಲಿಸಿಯನ್ನು ಎರಡು ತಿಂಗಳ ಹಿಂದೆ ರಿನೀವಲ್ ಮಾಡಿಸಿಟ್ಟಿರುವು ನೆನಪಿಗೆ ಬಂದು ಕೊಂಚ ಸಮಾಧಾನ ಆಯಿತು. ಅಟ್‌ಲೀಸ್ಟ್ ಮೊಬೈಲ್‌ನಲ್ಲಿ ಮನೆಯವರಿಗೆ ಮೆಸೇಜ್ ಕಳಿಸೋಣ ಎಂದರೆ ಸಿಗ್ನಲ್ ಕೂಡ ಪಡ್ಚ!
ಇಷ್ಟರಲ್ಲಾಗಲೇ ಸೂರ್ಯ ಪೂರ್ತಿ ಮುಳುಗಿದ್ದ. ಈ ಪುಣ್ಯಾತ್ಮರುಗಳು ಎಲ್ಲಿಂದಲೋ ಜನರೇಟರ್ ತಂದು ಕೇಬಲ್ ಎಳೆದು ಕೃತಕ ನಾಟಕದ ಲೈಟುಗಳು ಉರಿಸಿ ವೇದಿಕೆ ಝಗಮಗಿಸುವಂತೆ ಮಾಡಿದ್ದರು. ನಾಟಕಕ್ಕೆ ಮುಂಚೆ ಪುಟ್ಟ ಸಮಾರಂಭ ಬೇರೆ ಇತ್ತು. ಅದನ್ನು ಉದ್ಘಾಟಿಸುತ್ತಾ ಮಾತಾಡಿದ ಕುಂ.ವೀರಭದ್ರಪ್ಪವನವರು ಈ ವಿಶಿಷ್ಟ ಪ್ರಯತ್ನವನ್ನು ತಮ್ಮದೇ ಧಾಟಿಯಲ್ಲಿ ಹಾಡಿಹೊಗಳಿದರು. ನಂತರ ನಮ್ಮ ಡಿ.ಎಸ್.ಚೌಗಲೆಯವರಿಗೆ 2014ನೇ ಸಾಲಿನ ರಂಗಪ್ರಶಸ್ತಿಯನ್ನು ಪ್ರಜಾವಾಣಿ ಸಂಪಾದಕರಾದ ಶಾಂತಕುಮಾರ್ ಅವರು ಪ್ರದಾನ ಮಾಡಿದರು. ನಾನೆರಡು ಮಾತಾಡಿ ಕುಳಿತೆ. ಅರ್ಧಗಂಟೆಯಲ್ಲಿ ಸಭಾ ಕಾರ್ಯಕ್ರಮ ಮುಗಿಯಿತು. ನಮ್ಮನ್ನು ಅಲ್ಲಿಂದ ಏಳಿಸಿ, ಈಗ ನಾಟಕ ಪ್ರಾರಂಭವಾಗಲಿದೆ, ಅಲ್ಲಿ ಹೋಗಿ ಪ್ರೇಕ್ಷಕರ ಮಧ್ಯೆ ಕುಳಿತುಕೊಳ್ಳಿ ಎಂದರು. ನಮ್ಮ ಸೀಟುಗಳು ರಿಸರ್ವ್ ಆಗಿರಲಿಲ್ಲ. ಥೋ, ಸೀಟೆ ಇಲ್ಲ ಎಂದಮೇಲೆ ರಿಸರ್ವೇಶನ್ ಎಲ್ಲಿಂದ ಬರಬೇಕು? ನಾವು ಬೆಂಗಳೂರಿನಿಂದ ಬಂದಿದ್ದೇವೆ ಎಂಬ ಕರುಣೆಯಿಂದ ಯಾರೋ ಎದ್ದು ಒಂದೊಂದು ಪುಟ್ಟ ಬಂಡೆಯನ್ನು ನಮಗೆ ಬಿಟ್ಟುಕೊಟ್ಟರು.
ಕಟ್ಟಿದ್ದ ಬ್ಯಾನರ್ ಬಿಚ್ಚಿ ವೇದಿಕೆಯನ್ನು ಕ್ಷಣದಲ್ಲಿ ಸಿದ್ಧಗೊಳಿಸಿದರು. ವೇದಿಕೆ ಎಂದರೆ ಏನು ಅಂತೀರಿ? ಜಲಪಾತ, ನೀರು, ಮರ, ಗಿಡ ಅಷ್ಟೇ! ನಿರ್ದೇಶಕ ಪ್ರಕಾಶ್ ಮೈಕ್ ಹಿಡಿದು ಪ್ರಾಸ್ತಾವಿಕವಾಗಿ ನಾಲ್ಕು ಮಾತಾಡುತ್ತಾ, ಎಲ್ಲ ಪ್ರೇಕ್ಷಕರೂ ಹುಷಾರಾಗಿ ಕುಳಿತುಕೊಳ್ಳಿ. ಹೆಚ್ಚು ಕೊಸರಾಡಲು ಹೋಗಬೇಡಿ. ನಿಮ್ಮ ಅಕ್ಕ-ಪಕ್ಕ, ಕಾಲಿನ ಕೆಳಗಿರುವ ಕಲ್ಲು, ಮಣ್ಣು ಉರುಳಿ ನಿಮ್ಮ ಮುಂದಿನ/ಕೆಳಗಿನವರ ಮೇಲೆ ಬೀಳಬಹುದು ಎಂಬ ಎಚ್ಚರಿಕೆಯನ್ನು ಕೊಟ್ಟರು.
ಅಷ್ಟರಲ್ಲಾಗಲೇ ನಾವು ಕುಳಿತ ಬಂಡೆ ನಮ್ಮ ಪೃಷ್ಠಕ್ಕೆ ಒತ್ತಿ ಅಲ್ಲಲ್ಲೆ ರಕ್ತಸಂಚಾರ ನಿಂತು ಮರಗಟ್ಟಿದ ಅನುಭವಾಗುತ್ತಿತ್ತು. ಆದರೆ ಈ ಹುಡುಗರ ಸಾಹಸದ ಮುಂದೆ ನಮ್ಮ ಈ ಕೆಳಗಿನ ಕಷ್ಟ ಏನೇನೂ ಅಲ್ಲ ಎಂದು ಸಮಾಧಾನ ಮಾಡಿಕೊಂಡು ಕುಳಿತಲ್ಲೇ ಕೊಂಚ ಕೊಂಚ ಸರಿಯುತ್ತಾ ಕುಳಿತೆ.
ಹಿನ್ನೆಲೆಯಲ್ಲಿ ತಾಳ-ಮದ್ದಲೆ ಆರಂಭವಾಯಿತು. ಜೊತೆಗೆ ಲೈಟ್ ಜಲಪಾತದ ಎಡ ಬದಿಯ ಸ್ಥಳಕ್ಕೆ ಮತ್ತು ಬಲಬದಿಯ ರಂಗಕ್ಕೆ ಫೋಕಸ್ ಆಯಿತು. ಎರಡೂ ಕಡೆ ಯಕ್ಷಗಾನದ ಒಂದೊಂದು ಪಾತ್ರ ಬಂದು ಹೆಜ್ಜೆಹಾಕತೊಡಗಿತು. ನಾವು ನಮ್ಮ ಕತ್ತುಗಳನ್ನು ಎಡಕ್ಕೊಮ್ಮೆ, ಬಲಕ್ಕೊಮ್ಮೆ ತಿರುಗಿಸುತ್ತಾ ಕಣ್ತುಂಬಿಕೊಳ್ಳತೊಡಗಿದೆವು.
ಈ ದೃಶ್ಯಮುಗಿದ ನಂತರ, ಇದ್ದಕ್ಕಿದ್ದಂತೆಯೇ ಜಲಪಾತ ನೆತ್ತಿಯ ಮೇಲಕ್ಕೆ ಲೈಟ್ ಫೋಕಸ್ ಆಯಿತು. ಅಲ್ಲಿ ಒಂದು ಪುಟ್ಟ ಗುಡಿಸಲಿನ ಸೆಟ್ ಹಾಕಲಾಗಿದೆ! ಅಲ್ಲಿ ಮುದುಕಿಯೊಬ್ಬಳು ಜಗಲಿಯ ಮೇಲೆ ಕುಳಿತು ಮಾತಾಡತೊಡಗಿದಳು. ಅಯ್ಯೋ ಭಗವಂತಾ! ಈ ಮುದುಕಿ ಅಲ್ಲಿಗೆ ಯಾವಾಗ ಹತ್ತಿ ಹೋದಳು? ಒಂದೂ ಗೊತ್ತಿಲ್ಲ. ಆ ದೃಶ್ಯ ಮುಗಿದು ಜಲಪಾತದ ಮುಂದೆ ಲೈಟ್ ಬಂತು. ಅಲ್ಲೊಂದಿಷ್ಟು ಮಂದಿ ಬಂದು, ಸಂಭಾಷಣೆ ಹೇಳಿ ಜಲಪಾತದ ಮೇಲಿಂದ ಇಳಿಬಿಟ್ಟಿದ್ದ ಹಗ್ಗ ಹತ್ತಿ ಸರ ಸರನೆ ಎಪ್ಪತ್ತು ಅಡಿ ಏರಿ ಕತ್ತಲಲ್ಲಿ ಕರಗಿ ಹೋದರು! ಬಲಬದಿಯಲ್ಲಿ ನಾಲ್ಕನೇ ದೃಶ್ಯ. ಮರದ ಮೇಲೆ ಕುಳಿತು ಇಬ್ಬರು ಹೆಬ್ಬಾವನ್ನು ಕೈಯಲ್ಲಿ ಹಿಡಿದು ಮಾತಾಡಿದರು. ಅಲ್ಲೇ ಟಿವಿಯ ರಿಯಾಲಿಟಿ ಶೋ ಆಯಿತು. ಒಂದು ಹುಡುಗಿಯ ಹೆಣಬಿತ್ತು, ಪಂಚಾಯ್ತಿ ನಡೆಯಿತು… ಹೀಗೇ ಒಂದೊಂದು ದೃಶ್ಯವೂ ವಿಭಿನ್ನ, ವಿಶಿಷ್ಟ. ಎಲ್ಲ ಕಲಾವಿದರಿಗೂ ಕಾಲರ್ ಮೈಕ್ ಹಾಕಿದ್ದುದರಿಂದ ಎಲ್ಲರ ಮಾತುಗಳು ಸ್ಪಷ್ಟವಾಗಿ ಕೇಳುತ್ತಿದ್ದವು. ಒಬ್ಬ ಸಿದ್ದಿ ಜನಾಂಗದವನು ಆಡುತ್ತಿದ್ದ ಸ್ಲಾಂಗ್ ಮಾತ್ರ ಅರ್ಥವಾಗಲಿಲ್ಲ ಅಷ್ಟೇ.
ಒಟ್ಟಿನಲ್ಲಿ, ಸುಮಾರು ಒಂದೂವರೆ ಗಂಟೆಯ ಈ ನಾಟಕ ಬರೀ ನಾಟಕವಾಗಿರಲಿಲ್ಲ. ಒಂದು ಅನುಭವವಾಗಿತ್ತು. ಆಧುನಿಕ ಜಗತ್ತು ಹೇಗೆ ಹಳ್ಳಿಗಾಡನ್ನು ಆವರಿಸುತ್ತಾ ಇಲ್ಲಿಯ ಪರಿಸರವನ್ನು ನಿಧಾನವಾಗಿ ಬದಲಾಯಿಸುತ್ತಿದೆ. ಕಾಡು-ಮೇಡಿನಲ್ಲಿರುವವರು ಕೂಡ ನಗರವಾಸಿಗಳನ್ನು ಹೇಗೆ ಕಾಣುತ್ತಿದ್ದಾರೆ. ಟೀವಿಯವರ ಹುಚ್ಚಾಟಗಳು. ಜೊತೆಗೆ ನಗರದವರಲ್ಲಿರುವ ಹಳ್ಳಿಯ ಆಸೆ, ಹಳ್ಳಿಗರಲ್ಲಿರುವರಿಗೆ ನಗರ ಸೇರಿ ಸುಖಿಸುವ ಬಗೆಗಿನ ಬಯಕೆ. ಹಳ್ಳಿಗಳು ವೃದ್ಧಾಶ್ರಮವಾಗುತ್ತಿರುವ ಕುರಿತ ತಾಕಲಾಟ, ದ್ವಂದ್ವ ಇತ್ಯಾದಿ ಈ ಎಲ್ಲ ತಲ್ಲಣಗಳ ಕುರಿತ ಆಪ್ತ ಸಂವಾದ ಇದಾಗಿತ್ತು.
ನಾಟಕ ಮುಗಿದಾಗ ರಾತ್ರಿ ಹತ್ತೂವರೆ ಗಂಟೆ. ಒಮ್ಮೆಲೇ ಎಲ್ಲ ಕಡೆ ಲೈಟ್ ಹರಡಿದಾಗ ಕಂಡಿದ್ದು ಸುಮಾರು ನಾಲ್ಕು ನೂರಕ್ಕೂ ಹೆಚ್ಚು ಪ್ರೇಕ್ಷಕರನ್ನ! ಇವರೆಲ್ಲಾ ಎಲ್ಲಿದ್ದರು ಮಾರಾಯ! ಒಬ್ಬನೇ ಒಬ್ಬ ಪ್ರೇಕ್ಷಕನೂ ಕುಳಿತಲ್ಲಿಂದ ಎದ್ದು ಹೋಗಿರಲಿಲ್ಲ. ನಾವು ಮೆಲ್ಲನೆ ಮೇಲೆದ್ದು ಸೊಂಟ ನೆಟ್ಟಗೆ ಮಾಡಿಕೊಂಡು ಎಲ್ಲರಿಗೂ ಶುಭರಾತ್ರಿ ಹೇಳಿ ಅಲ್ಲಿಂದ ಹೊಸ ಅನುಭವ ಹೊತ್ತು ಹೊರಬಿದ್ದೆವು.
ನನ್ನ ಇಷ್ಟೆಲ್ಲ ಮಾತುಗಳನ್ನು ಕೇಳಿದಮೇಲೆ ನಿಮಗೂ ಇದನ್ನು ನೋಡಬೇಕು ಅನ್ನಿಸಿರಬೇಕಲ್ಲವೆ? ಕ್ಷಮಿಸಿ. ಇದನ್ನು ನೀವು ಸದ್ಯಕ್ಕೆ ನೋಡಲು ಆಗುವುವಿಲ್ಲ! ಈ ರಂಗರೂಪಕವನ್ನು ಜಲಪಾತವಲ್ಲದೆ ಬೇರೆಲ್ಲೂ ಆಡಲು ಸಾಧ್ಯವೇ ಇಲ್ಲ. ಇಲ್ಲಿಯ ಜಲಪಾತಕ್ಕೂ, ಪರಿಸರಕ್ಕೂ, ಸ್ಥಳಕ್ಕೂ, ಮರಗಿಡಕ್ಕೂ ಒಂದಕ್ಕೊಂದು ಬಿಡಿಸಲಾರದ ಸಂಬಂಧವಿದೆ. ಈ ನಾಟಕ ನಿಮ್ಮೂರಲ್ಲಿ ಆಗಬೇಕೆಂದಿದ್ದರೆ ನೀವು ಜಲಪಾತವೊಂದನ್ನು ಹುಡುಕಿಟ್ಟಿರಬೇಕು. ಇಲ್ಲವೇ ಜಲಪಾತದ ಸೆಟ್ ಹಾಕಬೇಕು. ಸೆಟ್ ಹಾಕುವುದಂತೂ ಸಾಧ್ಯವಿಲ್ಲದ ಮಾತು ಬಿಡಿ. ಹಾಗಾಗಿ, ಹತ್ತಿರದಲ್ಲಿ ಇದರ ಇನ್ನೊಂದು ಶೋ ಆಗುತ್ತದೆ ಎಂಬ ನಂಬಿಕೆ ನನಗಿಲ್ಲ. ಬೇಕಿದ್ದರೆ ನನ್ನ ಮೊಬೈಲ್‌ನಲ್ಲಿ ನಾಲ್ಕೈದು ನಿಮಿಷದ ದೃಶ್ಯಗಳನ್ನು ಸೆರೆ ಹಿಡಿದಿದ್ದೇನೆ, (Please check this link: http://youtu.be/FXEnX42t-5A and http://youtu.be/0WZXjzUh9TI)
ಜಲಪಾತದಲ್ಲಿ ಇಂಥ ಸಾಹಸ ಮಾಡಿದ ಕೆ.ಆರ್.ಪ್ರಕಾಶ್ ತಂಡ ಮಾರನೆಯ ದಿನ ಬಾವಿಯಲ್ಲಿ ನಾಟಕವಾಡಿತು. ಅದರದ್ದು ಇನ್ನೊಂದು ಕಥೆ ಬಿಡಿ. ಇವರ ಪ್ರಯೋಗಶೀಲತೆಗೆ ನನ್ನದೊಂದು ಸಲಾಂ. ಈ ಯಪ್ಪ ಮುಂದೆ ಹೆಲಿಕ್ಯಾಪ್ಟರ್‌ನಲ್ಲಿ ನಾಟಕವಾಡಿಸಬೇಕು ಎಂದಿದ್ದಾರಂತೆ! ಉಶ್! ಅಬ್ಬಬ್ಬಾ!!
(ಈ ಲೇಖನ ಪ್ರಜಾವಾಣಿ (೨೩ ಮಾರ್ಚ್ ೨೦೧೪) ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿದೆ)
- Posted in: Uncategorized
Can i get DVD of Bettada jeeva ? is it available in the market?
Yes, it’s available.
pls contact totalkannada.com