ಸಿಂಹನಿಗೆ ಸಿಂಹನೇ ಸಾಟಿ!
ಇಲ್ಲಿಗೆ ಸರಿಯಾಗಿ ಇಪ್ಪತ್ತೈದು ವರ್ಷಗಳ ಹಿಂದಿನ ಮಾತು.
ಆಗ ನಾನು ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೆ. ಎಂಭತ್ತರ ದಶಕದ ಕೊನೆಯಲ್ಲಿ ಸಿ.ಆರ್.ಸಿಂಹ ಕುಮಾರ್ ಬಂಗಾರಪ್ಪ ಅಭಿನಯದ ‘ಅಶ್ವಮೇಧ’ ಚಲನಚಿತ್ರದ ನಿರ್ದೇಶನದಲ್ಲಿ ತೊಡಗಿದ್ದರು. ಸಿಂಹ ಕಮರ್ಷಿಯಲ್ ಚಿತ್ರ ಕೈಗೆತ್ತಿಕೊಂಡದ್ದು ನಮಗೆಲ್ಲ ಅಚ್ಚರಿಯುಂಟು ಮಾಡಿತ್ತು. ಹಾಗಾಗಿ ಅವರನ್ನು ಈ ಕುರಿತು ಮಾತನಾಡಿಸಲು ಅವರ ಜಯನಗರದ ಮೂರನೇ ಬ್ಲಾಕಿನ ಮನೆಗೆ ಹೋಗಿದ್ದೆ. ಇದು ನನ್ನ ಅವರ ಮೊದಲ ಭೇಟಿ.
ನಾನು ಅವರನ್ನು ಕೇಳಿದ್ದ ಎರಡು ಪ್ರಶ್ನೆಗಳು ಇನ್ನೂ ನನ್ನ ನೆನಪಿನಲ್ಲಿವೆ.
ನಿಮಗಿಟ್ಟಿರುವ ಈ ‘ಸಿಂಹ’ ಹೆಸರಿನ ಬಗ್ಗೆ ನಿಮಗೆ ಖುಷಿಯಿದೆಯೋ, ವಿಷಾದವಿದೆಯೋ?
-ನಿಜ ಹೇಳ್ತೀನಿ. ನನಗೆ ಈ ನಾಯಿ, ಬೆಕ್ಕು ಕಂಡರೇನೆ ಭಯ! ಈ ‘ಸಿಂಹ’ ಅಂತ ಹೆಸರಿಟ್ಟು ಕೊಂಡು ಸಣ್ಣ-ಪುಟ್ಟ ಪ್ರಾಣಿಗಳಿಗೂ ಹೆದರುವಂತಾಯಿತಲ್ಲಾ ಅನ್ನೋ ವಿಷಾದವಿದೆ. ಹಾಗೇನೆ, ಒಳ್ಳೆಯ ಕೆಲಸ ಮಾಡಿ ಶಭಾಷ್ ಅನ್ನಿಸಿಕೊಂಡಾಗ ಈ ಹೆಸರಿಟ್ಟಿದ್ದಕ್ಕೆ ಸಾರ್ಥಕವಾಯಿತು ಅನ್ನೋ ಖುಷೀನು ಇದೆ.
‘ನೀವು ಕಲಾತ್ಮಕ ಚಿತ್ರಗಳನ್ನು ಬಿಟ್ಟು ಕಮರ್ಷಿಯಲ್ ಚಿತ್ರಗಳತ್ತ ಹೊರಳಿದಿರಲ್ಲಾ ಯಾಕೆ?
-ಒಂದು ಮಾತು ಹೇಳ್ತೀನಿ ಶೇಷಾದ್ರಿ, ಈ ಆರ್ಟ್ ಸಿನಿಮಾ ಮಾಡ್ತಾ ಸಾಯೋದಕ್ಕಿಂತ ಕಮರ್ಷಿಯಲ್ ಸಿನಿಮಾ ಮಾಡ್ತಾ ಬದುಕೋದು ವಾಸಿ? ಇದು ನನ್ನ ಸ್ವಂತ ಅನುಭವ. ಏನಂತೀರಿ?
ಎಂದು ಸೀರಿಯಸ್ ಆಗಿ ಹೇಳಿ, ಕ್ಷಣ ಬಿಟ್ಟು ಜೋರಾಗಿ ನಕ್ಕಿದ್ದರು.
ಸಿಂಹ ಇದ್ದ ಕಡೆ ನಗುವಿನದ್ದೇ ರಾಜ್ಯಭಾರ. ಅವರ ಬತ್ತಳಿಕೆಯಿಂದ ಜೋಕುಗಳು ಪುಂಖಾನುಪುಂಖವಾಗಿ ಹೊರ ಬರುತ್ತಿದ್ದವು. ಅಷ್ಟು ಆಕರ್ಷಕವಾದ ಮಾತುಗಾರಿಕೆ ಇವರದ್ದು. ಆದರೆ ಸಿಂಹ ತಾವು ಜೋಕ್ ಹೇಳುತ್ತಿದ್ದಾಗ ಮಾತ್ರ ತಪ್ಪಿಯೂ ನಗುತ್ತಿರಲಿಲ್ಲ, ಆದರೆ ಮಿಕ್ಕವರೆಲ್ಲಾ ಬಿದ್ದು ಬಿದ್ದು ನಗುತ್ತಿದ್ದರು.
ಅವರು ಹೇಳಿದ್ದ ಪಿ.ಲಂಕೇಶ್ ಬಗೆಗಿನ ಜೋಕ್ ಒಂದು ಹೀಗಿದೆ. ಇದು ಜೋಕ್ ಅಲ್ಲ ನಿಜವಾಗಿ ನಡೆದದ್ದು ಎಂದು ಸಿಂಹ ಒತ್ತಿ ಹೇಳುತ್ತಿದ್ದರು, ಜೊತೆಗೆ ಲಂಕೇಶ್ ಮತ್ತು ಆರತಿ ಅವರಂತೆಯೇ ಅದ್ಭುತವಾಗಿ ಅಭಿನಯಿಸಿ ತೋರಿಸುತ್ತಿದ್ದರು. ಸಿಂಹನ ಮಾತುಗಳಲ್ಲೇ ಇದನ್ನು ಕಟ್ಟಿಕೊಡಲು ಪ್ರಯತ್ನಿಸುತ್ತೇನೆ.
ಲಂಕೇಶ್ ಆಗ ‘ಅನುರೂಪ’ ಚಿತ್ರ ಮಾಡ್ತಿದ್ರು. ಆರತಿ ಆ ಚಿತ್ರದ ಹೀರೋಯಿನ್. ಆರತಿ ಶೂಟಿಂಗ್‌ಗೆ ಬರತಾರೆ ಅಂತ ನಮಗೆಲ್ಲ ಥ್ರಿಲ್ಲು. ಆದ್ರೆ ಆವತ್ತು ಬೆಳಗಿನಿಂದ ಲಂಕೇಶ್ ಟೆನ್ಷನ್‌ನಲ್ಲಿದ್ದರು. ಯಾಕೇಂದ್ರೆ ಆವತ್ತು ಅನಂತನಾಗ್ ಮತ್ತು ಆರತಿ ಮಧ್ಯೆ ಒಂದು ಪ್ರೇಮ ಪ್ರಸಂಗವನ್ನು ಚಿತ್ರೀಕರಿಸಬೇಕಿತ್ತು. ಅದನ್ನು ಹೇಗೆ ಚಿತ್ರೀಕರಿಸುವುದು ಎಂಬ ಬಗ್ಗೆ ಯೋಚಿಸಿ ಯೋಚಿಸಿ ಹೈರಾಣಾಗಿದ್ದರು. ಸಿಗರೇಟನ್ನು ಮುಷ್ಠಿಯ ಬೆರಳುಗಳ ಮಧ್ಯೆ ಸಿಕ್ಕಿಸಿಕೊಂಡು ಪುಫ್ ಪುಫ್ ಎಂದು ಸೇದುತ್ತಾ ಶತಪಥ ಹಾಕುತ್ತಿದ್ದರು.
ಅನಂತ್‌ನಾಗ್‌ಗೆ ಆಗಲೇ ದೃಶ್ಯವನ್ನು ವಿವರಿಸಿ ಆಗಿತ್ತು. ಆರತಿ ಸೆಟ್‌ಗೆ ಬಂದರು. ಮೇಕಪ್ ಎಲ್ಲ ಆಯಿತು. ಶಾಟ್ ರೆಡಿ ಆಯಿತು. ಲಂಕೇಶ್ ಆರತಿಯನ್ನು ಒಂದು ಪಕ್ಕಕ್ಕೆ ಕರೆದುಕೊಂಡು ಹೋಗಿ ಪ್ರೇಮ ದೃಶ್ಯವನ್ನು ವಿವರಿಸುತ್ತಾ, ನೋಡೀಮ್ಮ, ಅನಂತ್ ಇಲ್ಲಿ ಬಂಡೆ ಮೇಲೆ ಕೂತಿರತಾರೆ, ನೀವು ಅಲ್ಲಿಂದ ಬರತೀರಿ. ಬಂದವರೇ ಇವರನ್ನ ನೋಡಿ ಸಂತೋಷದಿಂದ ಓಡಿ ಬಂದು ಅಪ್ಪಿಕೋತೀರಿ. ಅಪ್ಪುಗೆ ಹೇಗಿರಬೇಕು ಅಂದ್ರೆ, ರೋಮಿಯೋ ಜೂಲಿಯಟ್ ಅಪ್ಪುಗೆ ಹಾಗಿರಬೇಕು. ಅಪ್ಪಿಕೊಂಡ ಮೇಲೆ ಇಬ್ರೂ ಕಿಸ್ ಮಾಡಬೋದು… ಯೆಸ್! ಯೆಸ್! ಯು ಶುಡ್ ಕಿಸ್ ಹಿಮ್!
ಆರತಿ ಒಂದು ಕ್ಷಣ ಯೋಚಿಸಿದವರಂತೆ ಮಾಡಿ, ಲಂಕೇಶ್ ಹತ್ರ ಬಂದು, ಅಲ್ಲಾ ಸರ್, ಅಪ್ಪಿಕೊಂಡು ಕಿಸ್ ಮಾಡೋದರ ಬದಲು, ನಾನು ಕಣ್ಣಲ್ಲೇ ಎಲ್ಲಾ ತೋರಿಸ್ಲಾ? ಎಂದು ಕೇಳಿದರು. ಲಂಕೇಶ್‌ಗೆ ಇದ್ದಕ್ಕಿದ್ದಂತೆ ಸಿಟ್ ಬಂದ್ ಬಿಡ್ತು. ಏನ್ರೀ ನೀವು! ಎಲ್ಲಾನೂ ಕಣ್ಣಲ್ಲೇ ತೋರಿಸ್ತೀನಿ ಅಂತೀರಿ. ಎಲ್ಲಾನೂ ಕಣ್ಣಲ್ಲೇ ತೋರಿಸೋ ಹಾಗಿದ್ರೆ ದೇವ್ರು ಮಿಕ್ಕಿದ್ದೆಲ್ಲಾ ಯಾಕ್ ಕೊಡ್ತಿದ್ದ? ದೊಽಽಽಡ್ಡದೊಂದು ಕಣ್ಣ ಕೊಟ್ಟು ಸುಮ್ಮನಿರತಿದ್ದ ಅಷ್ಟೇ… ನಾನು ಹೇಳಿದಷ್ಟು ಮಾಡಿ ಎಂದು ನಡೆದು ಹೋದರು.
ಇದನ್ನು ಓದುತ್ತಾ ನಿಮ್ಮ ಕಣ್ಣ ಮುಂದೆ ದೃಶ್ಯ ಹೇಗೆ ತೆರೆದುಕೊಂಡಿತೋ ಗೊತ್ತಿಲ್ಲ. ಆದರೆ ಸಿಂಹರ ಬಾಯಲ್ಲಿ ಇದನ್ನು ಕೇಳಬೇಕು. ಇಪ್ಪತ್ತೈದು ವರ್ಷದಲ್ಲಿ ನಾನು ಹಲವಾರು ಬಾರಿ ಇದನ್ನು ಕೇಳಿದ್ದೇನೆ. ನಕ್ಕಿದ್ದೇನೆ. ವ್ವಾಹ್! ಎಂಥಾ ಚಾತುರ್ಯ!
* * *
ಸಿಂಹ ಯಾವುದೇ ಪಾತ್ರ ವಹಿಸಲಿ, ಅದೇ ಆಗಿ ಹೋಗ್ತಿದ್ರು. ಉದಾಹರಣೆಗೆ ಕೈಲಾಸಂ. ನಾವಂತೂ ಕೈಲಾಸಂರನ್ನು ನೋಡಿಲ್ಲ. ಕೈಲಾಸಂ ತೀರಿಕೊಂಡಾಗ ಸಿಂಹರಿಗೆ ಆರು ವರ್ಷ. ಹಾಗಾಗಿ ಇವರೂ ಕೈಲಾಸಂನ ಕಂಡಿರಲಿಕ್ಕಿಲ್ಲ. ಆದರೂ ‘ಟಿಪಿಕಲ್ ಟಿಪಿ ಕೈಲಾಸಂ’ ನಾಟಕವನ್ನು ನೋಡಿದರೆ ಕೈಲಾಸಂ ಹೀಗೆಯೇ ಇದ್ದಿರಬೇಕು ಅನ್ನಿಸುವಷ್ಟು ಸೊಗಸಾಗಿ ಪಾತ್ರ ನಿರ್ವಹಿಸುತ್ತಿದ್ದರು. ಕೈಲಾಸಂರ ಕ್ಲಿಷ್ಟ ಭಾಷೆ, ಮಾತುಗಾರಿಕೆ, ಹಾವ-ಭಾವವನ್ನು ಎಷ್ಟು ಜೀವಂತವಾಗಿರಿಸುತ್ತಿದ್ದರೆಂದರೆ ಈಗಲೂ ಕೈಲಾಸಂ ಎಂದಾಗ ಕಣ್ಣಮುಂದೆ ಬರುವುದು ಸಿಂಹರ ಮುಖವೇ!
ನಾಲ್ಕು ವರ್ಷಗಳ ಹಿಂದೆ ನಾನು ಕೈಲಾಸಂ ಬಗ್ಗೆ ಒಂದು ಸಾಕ್ಷ್ಯಚಿತ್ರ ಮಾಡುತ್ತಿದ್ದೆ. ಅದರಲ್ಲಿ ಕೈಲಾಸಂರ ಪಾತ್ರವನ್ನು ಮರುಸೃಷ್ಟಿ ಮಾಡಲು ಯೋಚಿಸಿ ಹಾಗೆಯೇ ಸ್ಕ್ರಿಪ್ಟ್ ಬರೆದುಕೊಂಡಿದ್ದೆ. ಆಗ ಸಿಂಹರಿಗೆ ಆರೋಗ್ಯ ಕೊಂಚ ಸರಿ ಇರಲಿಲ್ಲ. ಅವರು ಯಾವುದೂ ಪಾತ್ರ ಒಪ್ಪಿಕೋತಾ ಇಲ್ಲ ಅಂತ ಯಾರೋ ಹೇಳಿದರು. ನಾನು ವಿಧಿಯಿಲ್ಲದೆ ನನ್ನ ಫೇವರೆಟ್ ಆರ್ಟಿಸ್ಟ್ ದತ್ತಣ್ಣನ ಬಳಿ ಹೋಗಿ, ದತ್ತಣ್ಣ ನೀವು ಕೈಲಾಸಂ ಪಾತ್ರ ಮಾಡಬೇಕು ಎಂದು ಕೇಳಿದೆ. ಅವರು ಹೌಹಾರಿ ಬಿದ್ದರು. ‘ಏನಯ್ಯಾ ನೀನು, ನಿಂಗೇನು ಹುಚ್ಚು-ಗಿಚ್ಚು ಹಿಡಿದಿದೆಯಾ? ಸಿಂಹ ಇರೋವಾಗ ಕೈಲಾಸಂನ ಬೇರೆ ಯಾರಾದ್ರು ಮಾಡೋಕಾಗುತ್ತ? ನೀನು ಹೋಗಿ ಸಿಂಹನ್ನೇ ಕೇಳು. ನಾನು ಬೇಕಿದ್ರೆ ಕೈಲಾಸಂ ಅಪ್ಪ ಪರಶಿವನ್ ಪಾತ್ರ ಮಾಡ್ತೀನಿ’ ಅಂದ್ರು.
ನಾನು ಮತ್ತೆ ಗುಹೆ ಹೊಕ್ಕೆ.
ಕೈಲಾಸಂ ಹೆಸರು ಕೇಳ್ತಿದ್ದ ಹಾಗೆ ಮಲಗಿದ್ದ ಸಿಂಹ ಎದ್ದು ಕುಳಿತೇ ಬಿಟ್ರು. ನನ್ನ ಆರೋಗ್ಯ ಅತ್ಲಾಗಿರಲಿ. ಯಾವತ್ತು ಶೂಟಿಂಗ್ ಹೇಳಿ ನಾನು ರೆಡಿ ಅಂದ್ರು. ನೀವು ಅದಕ್ಕೇಂತ ಕಾಸ್ಟ್ಯೂಮ್, ವಿಗ್ ಎಲ್ಲ ಮಾಡಿಸೋಕ್ ಹೋಗಬೇಡಿ. ನನ್ನ ಹತ್ರ ಎಲ್ಲಾ ಇದೆ. ಅದನ್ನೇ ತರತೀನಿ ಅಂದ್ರು. ಮೂರು ದಿನ ಶೂಟಿಂಗ್ ಮಾಡಿದ್ವಿ. ಕೈಲಾಸಂನ ಅವತರಿಸಿಕೊಂಡಿದ್ದ ಸಿಂಹರನ್ನು ಆಗ ನೋಡಬೇಕಿತ್ತು. ಅದನ್ನು ದೃಶ್ಯಮಾಧ್ಯಮದಲ್ಲಿ ಹಿಡಿದಿಟ್ಟಿರುವ ಖುಷಿ ನನಗಿದೆ.
ಬರೀ ಕೈಲಾಸಂ ಅಷ್ಟೇ ಅಲ್ಲ. ಕುವೆಂಪು ಪಾತ್ರವನ್ನೂ ಕೂಡ ಸಿಂಹ ಅಷ್ಟೇ ಸೊಗಸಾಗಿ ಮಾಡ್ತಿದ್ರು. ಅವರ ಮಗ ಋತ್ವಿಕ್ ನಿರ್ದೇಶಿಸಿದ ‘ರಸಋಷಿ ಕುವೆಂಪು’ ಚಲನಚಿತ್ರದಲ್ಲಿ ಇವರಿಗೆ ಅತ್ಯುತ್ತಮ ನಟ ಪ್ರಶಸಿ ಬರಲಿಲ್ಲವಲ್ಲ ಅನ್ನೋ ಕೊರಗು ಈಗಲೂ ನನಗಿದೆ. ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿ ಬಂದಾಗ ನಾನು ಸಿಂಹರಿಗೆ ಫೋನ್ ಮಾಡಿ, ಚಿತ್ರದ ಪ್ರಶಸ್ತಿ ಜೊತೆಗೆ ನಿಮ್ಮ ಪಾತ್ರಕ್ಕೂ ಪ್ರಶಸ್ತಿ ಬರಬೇಕಿತ್ತು ಅಂದೆ. ‘ಏ ಬಿಡ್ರೀ, ಜನ ನನಗೆ ಪ್ರಶಸಿ ಕೊಟ್ಟಿದ್ದಾರೆ, ಅದಕ್ಕಿಂತ ಇದು ಮುಖ್ಯಾನ?’ ಅಂದಿದ್ರು.
* * *
ಇಪ್ಪತ್ತು ವರ್ಷಗಳ ಹಿಂದೆ. ಆಗಿನ್ನೂ ಬನಶಂಕರಿಯ ರಿಂಗ್ ರೋಡ್ ಈಗಿನಂತೆ ಆಗಿರಲಿಲ್ಲ. ಇಟ್ಟಮಡುವಿನ ಅಂಚಿನಲ್ಲಿ ಸಿಂಹನ ‘ಗುಹೆ’ ತಲೆಯೆತ್ತಿತ್ತು. ನಿಮ್ಮ ಮನೆ ಡೈಮೆನ್ಷನ್ ಏನು? ಎಂದು ಯಾರಾದರೂ ಸಿಂಹರನ್ನು ಕೇಳಿದರೆ, 50x 80 x 30 ಎನ್ನುತ್ತಿದ್ದರು! ಕೇಳಿದವರು ಅರ್ಥವಾಗದೆ ತಲೆಕೆರೆದುಕೊಂಡಾಗ ಸಿಂಹನೇ ಮುಂದುವರಿದು, 50x 80 ಸೈಟ್ ಡೈಮೆನ್ಷನ್ನು, ಸೈಟ್ ಆಳ ರಸ್ತೆಯಿಂದ ಮೂವತ್ತು ಅಡಿ ಕೆಳಕ್ಕಿದೆ ಅಷ್ಟೇ! ಎಂದು ನಗುತ್ತಿದ್ದರು.
ಇಂಥ ವಿಚಿತ್ರ ಆಕಾರದ ಈ ಗುಹೆ(ಮನೆ)ಯನ್ನು ಪ್ರಖ್ಯಾತ ವಿನ್ಯಾಸಗಾರ ಜಯಸಿಂಹ ಡಿಸೈನ್ ಮಾಡಿದ್ದರು. ವಿಶೇಷ ಎಂದರೆ ಮನೆಯ ಮಧ್ಯೆ ಕಲ್ಲಿನಲ್ಲಿ ಎತ್ತರದ ಚಾರ್ಲಿ ಚಾಪ್ಲಿನ್ ಪ್ರತಿಮೆಯನ್ನು ಕಂಬದೋಪಾದಿಯಲ್ಲಿ ಕೆತ್ತಿ ನಿಲ್ಲಿಸಲಾಗಿತ್ತು. ಇದರ ಕಲೆ ಜಾನ್‌ದೇವರಾಜ್ ಅವರದ್ದು! ಮನೆಯೊಳಕ್ಕೆ ಅಲ್ಲಲ್ಲಿ ಸೂರ್ಯನ ಬೆಳಕು ನೇರವಾಗಿ ಹರಡುವಂತೆ ವಿನ್ಯಾಸ ಮಾಡಲಾಗಿತ್ತು. ಮನೆಯ ಹೊರಗೆ ಕಾಂಪೌಂಡ್‌ನಲ್ಲಿ ಒಂದು ರಂಗವೇದಿಕೆ ಮಾಡಿ ಪ್ರೇಕ್ಷಕರು ಕೂರಲು ಮೆಟ್ಟಿಲನ್ನು ಜೋಡಿಸಲಾಗಿತ್ತು. ಈಗಿರುವ ಸಂಸ ರಂಗಮಂದಿರದ ಮಾದರಿಯನ್ನು ನೆನಪಿಸಿಕೊಳ್ಳಿ. ಅಲ್ಲಿ ನಿತ್ಯ ನಾಟಕದ ರಿಹರ್ಸಲ್ ಆಗುತ್ತಿತ್ತು. ಕೆಲವು ನಾಟಕಗಳ ಪ್ರದರ್ಶನಗಳೂ ಆಗಿದ್ದುಂಟು. ಪ್ರತಿ ವರ್ಷ ಡಿಸೆಂಬರ್ ಮೂವತ್ತೊಂದರ ರಾತ್ರಿ ಇಲ್ಲಿ ನಡೆಯುತ್ತಿದ್ದ ಹೊಸವರ್ಷದ ಆಚರಣೆಯಲ್ಲಿ ಭಾಗಿಯಾಗದ ಮಿತ್ರರೇ ಕಡಿಮೆ!
ಈ ಗುಹೆ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ವಿಶೇಷ ಸುದ್ದಿ ಮಾಡಿತ್ತು. ಇದರ ವೈಶಿಷ್ಟ್ಯವನ್ನು ನೋಡಲೆಂದೇ ಜನರು ದೂರದಿಂದ ಬರುತ್ತಿದ್ದರು. ಎಲ್ಲರ ಬಾಯಲ್ಲೂ ಸಿಂಹನ ಗುಹೆಯದ್ದೇ ಮಾತು. ಇದೇನು ಸಿಂಹ, ಇಷ್ಟು ದೂರ ಬಂದು ಮನೆ ಕಟ್ಟಿದ್ದೀರಲ್ಲ, ಈ ಕಾಡಿನಲ್ಲಿ ಹೇಗೆ ವಾಸಿಸುತ್ತೀರಪ್ಪ? ಎಂದು ಯಾರಾದರೂ ಕೇಳಿದರೆ, ಸಿಂಹ ತಮ್ಮದೇ ಶೈಲಿಯಲ್ಲಿ ನಗುತ್ತಾ, ‘ಸಿಂಹ ಕಾಡಲ್ಲಿರದೆ ನಾಡಿನಲ್ಲಿರುತ್ತೇನು?’ ಎನ್ನುತ್ತಿದ್ದರು.
ಈಗ ಇದು ಸಂಪೂರ್ಣ ಕಾಂಕ್ರೀಟ್ ನಾಡೇ ಆಗಿ ಹೋಗಿದೆ. ಹಾಗಾಗಿ ಗುಹೆಯೂ ಕೊಂಚ ಮಂಕಾಗಿತ್ತು. ಇಲ್ಲಿಯ ಸಿಂಹಕ್ಕೂ ವಯಸ್ಸಾಗಿತ್ತು. ಹುಲಿಯಾದರೇನು, ಸಿಂಹವಾದರೇನು? ಈ ಕಾಯಿಲೆ ಅನ್ನುವುದು ಯಾರನ್ನೂ ಬಿಟ್ಟಿದ್ದಲ್ಲ. ಎಪ್ಪತ್ತೆರಡರ ಹರೆಯದ ಸಿಂಹನನ್ನೂ ಬಿಡಲಿಲ್ಲ…
ನಿಜಕ್ಕೂ ಸಿಂಹ ಅಪರೂಪದ ವ್ಯಕ್ತಿಯಾಗಿದ್ದರು.
ಇವರು, ರಂಗಭೂಮಿಯ ಕಲಾವಿದರೂ ಹೌದು ನಿರ್ದೇಶಕರೂ ಹೌದು.
ಇವರು ಚಲನಚಿತ್ರದ ಕಲಾವಿದರೂ ಹೌದು, ನಿರ್ದೇಶಕರೂ ಹೌದು.
ಇವರು ಸಾಹಿತ್ಯ ಪ್ರೇಮಿಯೂ ಹೌದು, ಅಂಕಣಕಾರರೂ ಹೌದು.
ಚುರುಕು ಮಾತಿನ ಸ್ನೇಹಜೀವಿಯೂ ಹೌದು, ಅಪ್ರತಿಮ ಪ್ರತಿಭಾವಂತರೂ ಹೌದು….
ಇಷ್ಟೆಲ್ಲ ಗುಣ-ಲಕ್ಷಣಗಳು ಎಷ್ಟು ಜನರಲ್ಲಿ ಇರಲು ಸಾಧ್ಯ?
ಹಾಗಾಗಿಯೇ ಸಿಂಹನಿಗೆ ಸಿಂಹನೇ ಸಾಟಿ!
(ಮಾರ್ಚ್ ೧, ೨೦೧೪, ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ)
- Posted in: Uncategorized