‘ತಿಮ್ಮರುಸು’ ಎಂಬ ಚತುರ ಮಂತ್ರಿ…
ವಿಜಯನಗರದ ಇತಿಹಾಸದಲ್ಲಿ ಶ್ರೀಕೃಷ್ಣದೇವರಾಯನ ಕಾಲದಲ್ಲಿದ್ದ ಮಹಾಮಂತ್ರಿ ತಿಮ್ಮರುಸುವಿಗೆ ವಿಶೇಷ ಸ್ಥಾನವಿದೆ. ಈತನ ಬದುಕೇ ಒಂದು ದುರಂತ ಪಯಣ.
ತಿಮ್ಮರುಸು ‘ನಿಯೋಗಿ ತೆಲುಗು ಬ್ರಾಹ್ಮಣ’ ಪಂಗಡಕ್ಕೆ ಸೇರಿದವನು. ಕೃಷ್ಣದೇವರಾಯನಿಗೂ ಮುಂಚೆ ವಿಜಯನಗರ ಸಂಸ್ಥಾನವನ್ನು ವೀರನರಸಿಂಹರಾಯ ಆಳುತ್ತಿದ್ದನು. ಅವನ ಆಳ್ವಿಕೆಯಲ್ಲಿಯೇ ತಿಮ್ಮರುಸು ಮಹಾಮಂತ್ರಿಯಾಗಿದ್ದ. ಪೋರ್ಚಗೀಸ್ ಪ್ರವಾಸಿಗ ಫೆರ್ನಾವ್ ನುನಿಜ್ (Fernao Nuniz) ಬರೆದಿರುವ ಪ್ರಕಾರ, ವೀರನರಸಿಂಹರಾಯನಿಗೆ ಮರಣ ಸನ್ನಿಹಿತವಾದ ಸಂದರ್ಭ. ಮರಣಶಯ್ಯೆಯಲ್ಲಿದ್ದ ದೊರೆಗೆ ತನ್ನ ನಂತರ ವಿಜಯನಗರದ ಸಿಂಹಾಸನ ಯಾರ ಪಾಲಾಗುತ್ತದೋ ಎಂಬ ಚಿಂತೆ ಕಾಡುತ್ತಿದೆ. ಆಗ ಸಿಂಹಾಸನವೇರಲು ಮುಂಚೂಣಿಯಲ್ಲಿದ್ದ ಯೋಗ್ಯ ವ್ಯಕ್ತಿ ಎಂದರೆ ಕೃಷ್ಣದೇವರಾಯ ಮಾತ್ರ. ಆದರೆ ವೀರನರಸಿಂಹರಾಯನಿಗೆ ಮಾತ್ರ ಇದು ಕೊಂಚವೂ ಇಷ್ಟವಿಲ್ಲದ ವಿಚಾರ. ಆತನಿಗೆ ತನ್ನ ಮಗನಿಗೆ ಪಟ್ಟ ಸಿಗುವಂತಾಗಲಿ ಎಂಬ ಆಸೆ. ಆದರೆ ಮಗನೋ ಎಂಟುವರ್ಷದ ಅಪ್ರಾಪ್ತ ವಯಸ್ಕ!
ಆಗ ವೀರನರಸಿಂಹರಾಯ ತನ್ನ ಮಂತ್ರಿ ತಿಮ್ಮರುಸುವನ್ನು ಹತ್ತಿರ ಕರೆದು, ‘ನನ್ನ ಸಹೋದರ ಸಂಬಂಧಿ ಕೃಷ್ಣದೇವರಾಯನ ಕಣ್ಣುಗಳನ್ನು ತೆಗೆದು ಕುರುಡನನ್ನಾಗಿಸಿಬಿಡು… ಆಗ ಆತ ರಾಜಾಡಳಿತಕ್ಕೆ ಬರುವುದು ತಪ್ಪುತ್ತದೆ… ಇದು ರಾಜಾಜ್ಞೆ…’ ಎಂದು ಆದೇಶ ಮಾಡಿದನಂತೆ. ತಿಮ್ಮರುಸುವಿಗೆ ಸಂಕಟಕ್ಕಿಟ್ಟುಕೊಂಡಿತು. ಈ ಕೃತ್ಯ ಅವನಿಗೆ ಇಷ್ಟವಿಲ್ಲದಿದ್ದರೂ ರಾಜಾಜ್ಞೆಯನ್ನು ಮೀರುವಂತಿಲ್ಲ. ಆಗ ತಿಮ್ಮರುಸು ಸಾಕಷ್ಟು ಯೋಚಿಸಿ, ಮೇಕೆಯ ಕಣ್ಣುಗಳನ್ನು ಕಿತ್ತು ತಂದು ಮೃತ್ಯುಮಂಚದಲ್ಲಿದ್ದ ವೀರನರಸಿಂಹರಾಯನ ಮುಂದಿಟ್ಟು ಇವೇ ಕೃಷ್ಣದೇವರಾಯನ ಕಣ್ಣುಗಳು ಎಂದು ನಂಬಿಸಿದನಂತೆ. ತಿಮ್ಮರುಸುವಿನ ಈ ಚತುರತೆಯಿಂದಾಗಿ ನಂತರ ಕೃಷ್ಣದೇವರಾಯ ಪಟ್ಟಕ್ಕೆ ಬರುತ್ತಾನೆ. ಹೀಗೆ ಗದ್ದುಗೆ ಹಿಡಿದ ಶ್ರೀಕೃಷ್ಣದೇವರಾಯ (ಕ್ರಿ.ಶ. 1509–1529) ವಿಜಯನಗರದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಏರಿಸಿದ್ದು ಇತಿಹಾಸ.
ಈ ಮೇಲಿನ ಪ್ರಸಂಗದಲ್ಲಿ ಬಂದ ‘ಕಣ್ಣು’ಗಳ ಪಾತ್ರ ಮತ್ತೊಮ್ಮೆ ಕೃಷ್ಣದೇವರಾಯನ ಬದುಕಲ್ಲಿ ಹೇಗೆ ಬರುತ್ತದೆ ಎಂಬುದನ್ನು ಮುಂದೆ ಓದಿ ನೋಡಿ.
1524 ರಲ್ಲಿ ಕೃಷ್ಣದೇವರಾಯನಿಗೂ ವೀರನರಸಿಂಹರಾಯನಿಗೆ ಬಂದಂತಹುದೇ ಸಂದರ್ಭ ಎದುರಾಗುತ್ತದೆ. ತನ್ನ ನಂತರ ವಿಜಯನಗರ ಸಂಸ್ಥಾನದ ಅಧಿಪತಿ ಯಾರಾಗಬೇಕು? ಕೃಷ್ಣದೇವರಾಯನಿಗೂ ಅಪ್ರಾಪ್ತ ವಯಸ್ಸಿನ ಮಗನಿರುತ್ತಾನೆ. ಆದರೂ ಕೃಷ್ಣದೇವರಾಯ ತನ್ನ ಆ ಪುತ್ರನಿಗೇ ಯುವರಾಜನ ಪಟ್ಟಕಟ್ಟುತ್ತಾನೆ. ಕೆಲವೇ ದಿನಗಳಲ್ಲಿ ಆಕಸ್ಮಿಕವಾದ ಘಟನೆಯೊಂದು ಜರುಗುತ್ತದೆ. ರಾಜಪುತ್ರ ವಿಷಪ್ರಾಶನದಿಂದ ಮರಣಿಸುತ್ತಾನೆ. ಇದರಿಂದ ಕೃಷ್ಣದೇವರಾಯನಿಗೆ ಆಘಾತವಾಗುತ್ತದೆ. ತನ್ನ ವಂಶಕ್ಕೆ ಈ ಆಸ್ಥಾನ ಸಿಗದಿರಲಿ ಎಂದು ಯಾರೋ ಕುತಂತ್ರ ಮಾಡಿದ್ದಾರೆ ಎಂದು ಭಾವಿಸುತ್ತಾನೆ. ಈ ಕುಟಿಲತೆಯ ಹಿಂದೆ ಮಂತ್ರಿ ತಿಮ್ಮರುಸುವಿನ ಪಾತ್ರ ಇರಬೇಕೆಂದು ಸಂದೇಹಿಸುವ ಕೃಷ್ಣದೇವರಾಯ ತಿಮ್ಮರುಸು ಮತ್ತು ಅವನ ಮಗ ಗೋವಿಂದರಾಜುವನ್ನೊಳಗೊಂಡಂತೆ ಅವರ ಕುಟುಂಬದ ಎಲ್ಲರ ಕಣ್ಣುಗಳನ್ನು ಕೀಳಿಸಿ ಕುರುಡರನ್ನಾಗಿಸುತ್ತಾನೆ! ಒಂದುಕಾಲದಲ್ಲಿ ಕೃಷ್ಣದೇವರಾಯನ ಕಣ್ಣುಗಳನ್ನು ಉಳಿಸಿದ್ದ ತಿಮ್ಮರುಸು ಈಗ ತನ್ನದಲ್ಲದ ತಪ್ಪಿಗೆ ಸ್ವತಃ ತನ್ನ ಕಣ್ಣುಗಳನ್ನೇ ಕಳೆದುಕೊಳ್ಳುತ್ತಾನೆ.
ಕೆಲಕಾಲದ ನಂತರ ರಾಜನಿಗೆ ಸತ್ಯದ ಅರಿವಾಗುತ್ತದೆ. ತನ್ನ ಪುತ್ರನ ಸಾವಿನ ಕುತಂತ್ರ ಹೆಣೆದದ್ದು ಒರಿಸ್ಸಾದ ದೊರೆ ಗಜಪತಿ ಎಂದು ತಿಳಿಯುತ್ತದೆ. ಕೃಷ್ಣದೇವರಾಯ ತನ್ನ ತಪ್ಪಿಗೆ ಪಶ್ಚಾತ್ತಾಪದ ಬೇಗೆಯಲ್ಲಿ ಬೇಯುತ್ತಾನೆ. ಆದರೆ ಆತನ ಆತುರದ ನಿರ್ಧಾರಕ್ಕೆ ತಿಮ್ಮರುಸು ಶಾಶ್ವತವಾಗಿ ಕುರುಡನಾಗಿರುತ್ತಾನೆ. ಅವನ ಮಗ ಗೋವಿಂದರಾಜ ಕೃಷ್ಣದೇವರಾಯನ ಮೇಲಿನ ಕೋಪದಿಂದ ರಾಜನ ವಿರೋಧಿಗಳೊಂದಿಗೆ ಸೇರಿ ರಾಜ್ಯಬಿಟ್ಟು ಹೋಗಿ ಕತ್ತಿ ಮಸೆಯುತ್ತಾನೆ. ಒಂದು ಮೂಲದ ಮಾಹಿತಿಯು ನಂತರ ತಿಮ್ಮರುಸು ತನ್ನ ಕೊನೆಯ ದಿನಗಳನ್ನು ತಿರುಪತಿಯಲ್ಲಿ ಭಿಕ್ಷೆ ಬೇಡುತ್ತಾ ಕಳೆದು ಅಲ್ಲೇ ಕೊನೆಯುಸಿರೆಳೆದ ಎಂದು ಹೇಳುತ್ತದೆ.
ಈ ತಿಮ್ಮರುಸು ಮಂತ್ರಿಯ ಪಾತ್ರ ಸಾಹಿತ್ಯ, ನಾಟಕ ಹಾಗೂ ಚಲನಚಿತ್ರರಂಗದವರಿಗೆ ತುಂಬ ಇಷ್ಟವಾದ ಪಾತ್ರ. ಇತ್ತೀಚೆಗೆ ಬಿ.ಶಿವಾನಂದ ಅವರು ‘ದುರಂತಪಯಣ’ ಎಂಬ ನಾಟಕ ಬರೆದಿದ್ದಾರೆ. ಅದಕ್ಕೆ ಮುನ್ನುಡಿ ಬರೆದುಕೊಡಲು ನನ್ನನ್ನು ಕೇಳಿಕೊಂಡರು.
ಆಗ ನನಗೆ ಈ ತಿಮ್ಮರುಸು ಕಣ್ಣ ಮುಂದೆ ಬಂದ. ಈತನ ಬಗ್ಗೆ ಇನ್ನೂ ಹೆಚ್ಚು ಅರಿಯಲು ಒಂದಿಷ್ಟು ಇತಿಹಾಸದ ಪುಟಗಳನ್ನು ಮಗುಚಿ ಹಾಕಿದೆ. ಒಬ್ಬೊಬ್ಬರು ತಿಮ್ಮರುಸುವನ್ನು ಒಂದೊಂದು ರೀತಿ ಕಂಡಿದ್ದಾರೆ.
ನಿಮಗೂ ನೆನಪಿರಬಹುದು.
ಕನ್ನಡದಲ್ಲಿ ಬಂದ ‘ಶ್ರೀಕೃಷ್ಣದೇವರಾಯ’ ಎಂಬ ಚಲನಚಿತ್ರ.
ಇದನ್ನು ಶ್ರೀ ಬಿ.ಆರ್.ಪಂತುಲು ಅವರು 1970 ರಲ್ಲಿ ತೆರೆಗೆ ತಂದರು. ಅದರಲ್ಲಿ ಅವರೇ ತಿಮ್ಮರುಸುವಿನ ಪಾತ್ರವನ್ನೂ ನಿರ್ವಹಿಸಿದ್ದರು. ಕರ್ನಾಟಕ ರಾಜ್ಯ ಸರ್ಕಾರ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಘೋಷಿಸಿದಾಗ ಅವರು ಅದನ್ನು ಪಡೆಯಲು ನಿರಾಕರಿಸಿದರು. ‘ಇದು ಕೃಷ್ಣದೇವರಾಯನನ್ನು ಕುರಿತಾದ ಚಿತ್ರ, ರಾಜ್‌ಕುಮಾರ್ ಆ ಪಾತ್ರ ನಿರ್ವಹಿಸಿದ್ದಾರೆ. ಈ ಗೌರವ ಅವರಿಗೆ ಸಲ್ಲಬೇಕು, ನನಗಲ್ಲ…’ ಎಂದು ತಮ್ಮ ದೊಡ್ಡತನ ಮೆರೆದಿದ್ದರು.
ಹಾಗೆಯೇ 1962 ರಲ್ಲಿ ಕೂಡ ‘ಮಹಾಮಂತ್ರಿ ತಿಮ್ಮರುಸು’ ಎಂಬ ಚಿತ್ರ ತೆಲುಗಿನಲ್ಲಿ ತೆರೆಗೆ ಬಂದಿತ್ತು. ಈ ಚಿತ್ರದ ನಿರ್ದೇಶಕರು ಕಮಲಾಕರ ಕಾಮೇಶ್ವರರಾವ್. ಎನ್.ಟಿ.ರಾಮರಾವ್ ಕೃಷ್ಣದೇವರಾಯನ ಪಾತ್ರ ವಹಿಸಿದ್ದರೆ ಗುಮ್ಮಡಿ ವೆಂಕಟೇಶ್ವರರಾವ್ ತಿಮ್ಮರುಸುವಿನ ಪಾತ್ರ ನಿರ್ವಹಿಸಿದ್ದರು. ಈ ಚಿತ್ರ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿತ್ತು.
- Posted in: Uncategorized
ಬಹಳ ಒಳ್ಳೆಯ ಮಾಹಿತಿ. ಧನ್ಯವಾದಗಳು. Another movie “tenali ramakrishna” was produced and directed by B.S.Ranga in 1956 in Telugu. Sorry I am not fluent in Kannada.