ಪಿ. ಶೇಷಾದ್ರಿ

ಕಂಡಿದ್ದು ಕಂಡಂತೆ…

ಕ್ಯಾಮರಾ ಹಿಂದಿನ ಕ್ರಾಂತಿಕಾರಿ

ಮೇ 30, ಬೆಳಗ್ಗೆ.  

ನ್ಯೂಸ್‌ಚಾನಲ್‌ನ ಮಿತ್ರರೊಬ್ಬರು ಫೋನ್ ಮಾಡಿ, ಹನ್ನೊಂದು ಗಂಟೆಯ ನ್ಯೂಸ್‌ಗೆ ನಿಮ್ಮದೊಂದು ಬೈಟ್(ಪ್ರತಿಕ್ರಿಯೆ) ಬೇಕಿತ್ತು, ಫೋನ್ ಮಾಡ್ತೀವಿ, ಸಿದ್ಧವಿರುವಿರಾ? ಎಂದು ಕೇಳಿದರು.  ‘ಯಾವ ವಿಷಯದ ಕುರಿತಾಗಿ?’ ಎಂದು ಕೇಳಿದೆ.  ‘ರಿತುಪರ್ಣೋ ಘೋಷ್ ಹೋಗಿಬಿಟ್ಟರಲ್ಲ, ಯಾಕೆ ನಿಮಗೆ ಗೊತ್ತಿಲ್ಲವೇ?’ ಎಂದಾಗ ನನ್ನ ಮನದ ತಲ್ಲಣವನ್ನು ನೀವೇ ಊಹಿಸಿಕೊಳ್ಳಿ…

Imageಛೇ ಛೆ! ಹೀಗಾಗಬಾರದಿತ್ತು. ನಲವತ್ತೊಂಬತ್ತು ಸಾಯುವ ವಯಸ್ಸೆ?

ಹಾಗೆ ನೋಡಿದರೆ ನನಗೂ ಈಗ ನಲವತ್ತೊಂಬತ್ತು.  ನನಗಿಂತ ರಿತುಪರ್ಣರು ಕೇವಲ ಮೂರು ತಿಂಗಳು ದೊಡ್ಡವರು ಅಷ್ಟೇ!  ನಮ್ಮದೇ ವಯಸ್ಸಿನವರು, ಅದೂ ನಮ್ಮದೇ ಕ್ಷೇತ್ರದವರು ಇದ್ದಕ್ಕಿದ್ದಂತೆ ಒಂದು ದಿನ ಇಲ್ಲವಾದರು ಎಂಬ ಸುದ್ದಿ ಬಂದಾಗ ಸಾವು ನಮ್ಮ ಮನೆಯ ಕದವನ್ನೂ ತಟ್ಟಲಿದೆಯೇ ಎಂಬ ಆಲೋಚನೆ ಕ್ಷಣಮಾತ್ರದಲ್ಲಿ ಕಣ್ಣಮುಂದೆ ಹಾದು ಹೋಗುತ್ತದೆ.  ಎದೆಯಲ್ಲಿ ಸಣ್ಣ ಛಳಕು.  ಬೆನ್ನ ಹಿಂದಿನಿಂದ ಮೆಲ್ಲನೆ ಇಣುಕುಹಾಕುವ ಸ್ಮಶಾನ ವೈರಾಗ್ಯ.  ಬದುಕು ಎಷ್ಟೊಂದು ಅನಿಶ್ಚಿತ!

ಕೇವಲ ಮೂರು ವಾರದ ಹಿಂದೆ ರಿತುಪರ್ಣೋ ಘೋಷ್ ಅವರನ್ನು ದೆಹಲಿಯಲ್ಲಿ ಕಂಡಿದ್ದೆ.  ಅದು ಅರವತ್ತನೇ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ.  ರಿತು ನಿರ್ದೇಶನದ ‘ಚಿತ್ರಾಂಗದ’ ಚಲನಚಿತ್ರದ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ಪೋಷಕ ನಟ ಜ್ಯೂರಿ ಪ್ರಶಸ್ತಿ ಬಂದಿತ್ತು.   ಈ ಹಿಂದೆ ಎಂಟು ಬಾರಿ ತಮ್ಮ ಚಿತ್ರದ ನಿರ್ದೇಶನಕ್ಕಾಗಿ ರಾಷ್ಟ್ರಪತಿಗಳ ಮುಂದೆ ನಿಂತಿದ್ದ ರಿತು ಈ ಸಲ ತಮ್ಮ ಅಭಿನಯಕ್ಕಾಗಿ ರಾಷ್ಟ್ರಮಟ್ಟದ ಗೌರವ ಸ್ವೀಕರಿಸಲು ಬಂದಿದ್ದರು.  ಹಾಗಾಗಿ ಅವರಿಗೆ ಚಪ್ಪಾಳೆಗಳ ಸ್ವಾಗತ ಹಿಂದೆಂದಿಗಿಂತಲೂ ಹೆಚ್ಚೇ ದೊರೆತಿತ್ತು. ಮುಗುಳ್ನಗುತ್ತ ಪ್ರಶಸ್ತಿ ಸ್ವೀಕರಿಸಿ ಬಂದು ತಮ್ಮ ಸ್ಥಾನದಲ್ಲಿ ಮೌನವಾಗಿ ಕುಳಿತಿದ್ದರು.  ಪ್ರಶಸ್ತಿ ವಿಜೇತರದ್ದೆಲ್ಲಾ ಒಂದೇ ಹೋಟೆಲ್. ಬೆಳಗ್ಗೆ ಹೋಟೆಲ್‌ನಲ್ಲಿ ನಾನು ದತ್ತಣ್ಣ ತಿಂಡಿ ತಿನ್ನುತ್ತಿದ್ದೆವು.  ನಮ್ಮ ಪಕ್ಕದ ಟೇಬಲ್‌ನಲ್ಲಿ ರಿತು ಕುಳಿತು ಬ್ರೇಕ್‌ಫಾಸ್ಟ್ ಮಾಡುತ್ತಿದ್ದರು.  ನನ್ನತ್ತ ತಿರುಗಿದ ದತ್ತಣ್ಣ, ‘ಅಲ್ಲಯ್ಯ, ಈ ನಿರ್ದೇಶಕರೆಲ್ಲಾ ನಟರಾಗಿ ಪ್ರಶಸ್ತಿ ತಗೊಂಡ್‌ಬಿಟ್ರೆ ನಮ್ಮಂತ ನಟರ ಪಾಡೇನಯ್ಯ?’ ಎಂದು ತಮಾಷೆಯಾಗಿ ಕೇಳಿದರು.  ನಾನು ದತ್ತಣ್ಣನ ಕಿವಿಯಲ್ಲಿ ‘ನೀವೆಲ್ಲ ನಟಿಸ್ತೀರಿ, ಅವರು ನಟಿಸಲ್ಲ, ತೆರೆ ಮೇಲೆ ಜೀವಿಸಿದ್ದಾರೆ ಅಷ್ಟೇ’ ಎಂದು ಪಿಸುಗುಟ್ಟಿದ್ದೆ.  ಆ ಚಿತ್ರದಲ್ಲಿ ರಿತು ಮಾಡಿದ್ದು ಟ್ರಾನ್ಸ್‌ಜೆಂಡರ್ ಪಾತ್ರ!

ದೆಹಲಿಯಲ್ಲಿ ಅಷ್ಟೊಂದು ಲವಲವಿಕೆಯಲ್ಲಿದ್ದ ರಿತುಪರ್ಣೋಗೆ ಖಾಯಿಲೆ ಇದೆ ಎಂದು ಯಾರಿಗೂ ಒಂದೇ ಒಂದು ಸಣ್ಣ ಸುಳಿವೂ ದೊರೆತಿರಲಿಲ್ಲ.  ಅದೇನು ಕರ್ಮವೋ!  ಅದ್ಯಾವುದೋ ಮೇದೋಜೀರಕಗ್ರಂಥಿಯ ಉರಿಯೂತ ಖಾಯಿಲೆಯಂತೆ! ಎರಡು ದಿನದ ಹಿಂದೆ ತಾನೇ ತಮ್ಮ ಇಪ್ಪತ್ತನೇ ಚಿತ್ರ ‘ಸತ್ಯಾನ್ವೇಷಿ’ ಮುಗಿಸಿ ತಮ್ಮ ಟ್ವೀಟ್‌ರ್ ಖಾತೆಯಲ್ಲಿ Wrapped up the shoot of Satyanewshi… ಎಂದು ನಿಟ್ಟುಸಿರುಬಿಟ್ಟಿದ್ದವರು ಇದ್ದಕ್ಕಿದ್ದ ಹಾಗೆ ಬದುಕಿನ ಉಸಿರನ್ನೇ ನಿಲ್ಲಿಸಿಬಿಟ್ಟರೆ?  ಇದು ಅನ್ಯಾಯವಲ್ಲದೆ ಮತ್ತೇನು?

ರಿತು ದಾ ಇನ್ನಿಲ್ಲ ಎಂಬ ಮಾತನ್ನು ಮೊದಲಿಗೆ ನನಗೆ ನಂಬಲಾಗಲೇ ಇಲ್ಲ.  ಕೊಲ್ಕತ್ತಾದಲ್ಲಿದ್ದ ನನ್ನ ಮಿತ್ರರೊಬ್ಬರಿಗೆ ಫೋನ್ ಮಾಡಿದೆ.  ಅವರು ವಿಷಯವನ್ನು ಖಚಿತಪಡಿಸಿದಾಗಲೇ ನನಗೆ ನಂಬಿಕೆ ಬಂದಿದ್ದು.  ಅಲ್ಲಿಯವರೆಗೆ ಇದೊಂದು ಸುಳ್ಳಾಗಿರಲಿ ಎಂದು ಒಳಮನಸ್ಸು ಹೇಳುತ್ತಿತ್ತು.  ನನ್ನ ಆಸೆ ನೆರವೇರಿರಲಿಲ್ಲ!

ಹೃದಯಾಘಾತವಾಗುವಂತಹ ಬದುಕಿನ ಒತ್ತಡ ರಿತುಗೆ ಇರಲಿಲ್ಲ ಎಂಬುದು ನನ್ನ ಗ್ರಹಿಕೆ.  ಆತ ತುಂಬ ಸಾಧು ಸ್ವಭಾವದ ಮಿತುಭಾಷಿ.  ಯಾರೇ ಮಾತನಾಡಿಸಲಿ ಒಂದು ಸಣ್ಣ ಮುಗುಳ್ನಗೆಯಷ್ಟೇ ಅವರ ಉತ್ತರವಾಗಿರುತ್ತಿತ್ತು.

ಆದರೆ ನನ್ನ ಬೆಂಗಾಲಿ ಮಿತ್ರರು ಫೋನಿನಲ್ಲಿ ಹೇಳಿದ ವಿಚಾರಗಳು ನನ್ನನ್ನು ನಿಜಕ್ಕೂ ಚಿಂತೆಗೀಡುಮಾಡಿದ್ದವು.  

ಸುಮಾರು ಐದಾರು ವರ್ಷಗಳ ಹಿಂದಿನ ಮಾತು.  ಬೊಂಬಾಯಿಯಲ್ಲಿ ಚಲನಚಿತ್ರಕ್ಕೆ ಸಂಬಂಧಿಸಿದ ಒಂದು ಕಾರ್ಯಕ್ರಮ.  ಅಲ್ಲಿ ನಾನೂ ಇದ್ದೆ.  ಇತರೆ ಅತಿಥಿಗಳೆಲ್ಲಾ ಬರುತ್ತಿದ್ದರು.  ಆಗ ಸಭಾಂಗಣ ಪ್ರವೇಶಿಸಿದ ಒಬ್ಬ ವ್ಯಕ್ತಿಯ ಮೇಲೆ ಎಲ್ಲರ ಗಮನ ಹೋಯಿತು.  ಎತ್ತರದ, ಆಕರ್ಷಕ ವ್ಯಕ್ತಿತ್ವ.  ನುಣ್ಣಗೆ ಬೋಳಿಸಿದ ತಲೆಬುರುಡೆ, ಕಣ್ಣಿಗೆ ಕಾಡಿಗೆ, ತುಟಿಗೆ ಲಿಪ್‌ಸ್ಟಿಕ್, ಆಗತಾನೇ ಫೇಸಿಯಲ್ ಮಾಡಿಸಿಕೊಂಡಂತೆ ಚರ್ಮದ ಹೊಳಪು, ಸಲ್ವಾರ್ ಕಮೀಜ್ ಅನ್ನು ಹೋಲುವಂತಹ ವಿಚಿತ್ರ ಉಡುಪು, ಕೈಯಲ್ಲಿ ಬಳೆ,  ಕಿವಿಯಲ್ಲಿ ಓಲೆ…   ಯಾರೀಕೆ?

ಹತ್ತಿರದವರೊಬ್ಬರು ಪಿಸುಗುಟ್ಟಿದರು.  ಅದು ರಿತುಪರ್ಣೋ ಘೋಷ್!

ಅರೆ! ಈ ಯಪ್ಪನಿಗೇನಾಯಿತು?  ಮೊನ್ನೆ ಮೊನ್ನೆಯವರೆಗೆ ಗುಂಗರು ಕೂದಲು ಬಿಟ್ಟುಕೊಂಡು, ಜೀನ್ಸ್‌ಪ್ಯಾಂಟ್ ಮೇಲೆ ಜುಬ್ಬ ಹಾಕಿಕೊಂಡು ಓಡಾಡುತ್ತಿದ್ದ ಈ ವ್ಯಕ್ತಿ ಇದ್ದಕ್ಕಿದ್ದಂತೆಯೇ ತನ್ನ ವ್ಯಕ್ತಿತ್ವವನ್ನೇ ಬದಲಾಯಿಸಿಕೊಂಡುಬಿಟ್ಟರಲ್ಲಾ!

ಕೆಲವು ದಿನಗಳ ನಂತರ ಯಾವುದೋ ಪತ್ರಿಕೆಯ ಸಂದರ್ಶನವೊಂದರಲ್ಲಿ ನನಗೆ ಇದಕ್ಕೆ ಉತ್ತರ ದೊರೆತಿತ್ತು.  ಅದರಲ್ಲಿ ರಿತು ತಮ್ಮ ಅಂತರಂಗವನ್ನು ಬಹಿರಂಗಗೊಳಿಸಿದ್ದರು.  ‘ಹೌದು, ನಾನೊಬ್ಬ ಟ್ರಾನ್ಸ್‌ಜೆಂಡರ್… ಸಲಿಂಗಿ.  ನನ್ನೊಳಗಿನ ಈ ವ್ಯಕ್ತಿತ್ವವನ್ನು ನಾನು ಇಷ್ಟುದಿನ ಬಚ್ಚಿಟ್ಟುಕೊಂಡಿದ್ದೆ.  ಅದಕ್ಕೆ ಕಾರಣವೂ ಇದೆ.  ಇಲ್ಲಿಯವರೆಗೆ ನನ್ನವರು ಎಂದು ಇದ್ದವರು ನನ್ನ ಹೆತ್ತವರು ಮಾತ್ರ.  ನನಗೆ ಜನ್ಮಕೊಟ್ಟ ತಪ್ಪಿಗೆ ಅವರಿಗೆ ಸಮಾಜದಲ್ಲಿ ನನ್ನ ನಡವಳಿಕೆಯಿಂದ ಅವಮಾನವಾಗಬಾರದಲ್ಲವೇ?.. ಹಾಗಾಗಿ ನನ್ನೊಳಗಿನ ಈ ಬೇಗೆಯನ್ನು ಅನಿವಾರ್ಯವಾಗಿ ಅದುಮಿಟ್ಟುಕೊಂಡಿದ್ದೆ.  ಕೆಲವು ದಿನಗಳ ಹಿಂದೆ ಮೊದಲು ಅಮ್ಮ ಹೋದಳು, ಅಪ್ಪನೂ ಆಕೆಯನ್ನು ಹಿಂಬಾಲಿಸಿದರು.  ನನಗೊಬ್ಬ ತಮ್ಮ ಇದ್ದಾನೆ.  ಆದರೆ ಅವನೂ ನನ್ನನ್ನು ದೂರ ಮಾಡಿಕೊಂಡಿದ್ದಾನೆ. ಈಗ ನಾನು ಯಾರಿಗೂ ಅಂಜಬೇಕಿಲ್ಲ. ಇನ್ನುಮೇಲೆ ನಾನು ನನ್ನ ಇಚ್ಛೆಯಂತೆ ಬದುಕುತ್ತೇನೆ… ನಾನು ಅವನಲ್ಲ; ಅವಳು!’
Rituporno Gosh
ಆಮೇಲೆ ಬಂದ ಬಹುತೇಕ ಚಿತ್ರಗಳಲ್ಲಿ ರಿತು ಒಂದಲ್ಲ ಒಂದು ರೀತಿಯಲ್ಲಿ ಟ್ರಾನ್ಸ್‌ಜೆಂಡರ್‌ಗಳು, ಸಲಿಂಗಿಗಳ ಕುರಿತಾದ ಕತೆಯನ್ನು ಹೇಳುತ್ತಲೇ ಹೋದರು.  ಆ ಚಿತ್ರಗಳ ಸನ್ನಿವೇಶಗಳು ರಿತು ಬದುಕಿಗೆ ಸಮೀಪವಾದಂತಹವು ಎಂದು ಹತ್ತಿರದ ಸ್ನೇಹಿತರು ಹೇಳುತ್ತಾರೆ.  ಕಳೆದ ಕೆಲ ವರ್ಷಗಳಿಂದ ರಿತು ಆ ತರಹದ ಪಾತ್ರಗಳಲ್ಲಿ ತಾವೇ ಅಭಿನಯಿಸಿದರು ಕೂಡ!  ಸುಜಯ್ ಘೋಷ್ ನಿರ್ದೇಶನದ  ‘ಮೆಮೊರೀಸ್ ಆಫ್ ಮಾರ್ಚ್’ ಚಿತ್ರದ ಅವರ ಪಾತ್ರ ಇನ್ನೂ ನನ್ನ ಕಣ್ಣಮುಂದಿದೆ.  ಇತ್ತೀಚಿನ ಅವರದ್ದೇ ನಿರ್ದೇಶನದ ‘ಚಿತ್ರಾಂಗದ್’ ಚಿತ್ರದ ಅಭಿನಯಕ್ಕಾಗಿ ಅವರಿಗೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಪೋಷಕನಟ ತೀರ್ಪುಗಾರರ ಪ್ರಶಸ್ತಿ ಕೂಡ ದೊರೆತಿತ್ತು.  ರಾಷ್ಟ್ರಮಟ್ಟದಲ್ಲಿ ಮನ್ನಣೆ ದೊರೆತಿದ್ದರೂ ಸಮಾಜ ಅವರನ್ನು ಕೊಂಚ ಅನುಮಾನದಿಂದಲೇ ನೋಡುತ್ತಿತ್ತು.  ತಮ್ಮನ್ನು ನೂರಾರು ಕಣ್ಣುಗಳು ನೋಡುತ್ತಿವೆ ಎಂದು ರಿತುಗೆ ಚನ್ನಾಗಿ ಗೊತ್ತಿತ್ತು.  ಅವರು ಯಾವುದಕ್ಕೂ ಕೇರ್ ಮಾಡಿದವರಲ್ಲ.   ತಮಗೆ ಅನ್ನಿಸಿದ ಸತ್ಯವನ್ನು ತೆರೆಯಮೇಲೆ ನಿರ್ಭಿಡೆಯಿಂದ ಹೇಳುತ್ತಾ ಹೋದರು.  ಹಾಗಾಗಿ ಅವರು ‘LGBT’ಗಳ (Lesbian, Gay, Bisexual, and Transgender) ಕಮ್ಯೂನಿಟಿಯ ಆರಾಧ್ಯ ದೈವದಂತಾಗಿದ್ದರು!

ಕೆಲವು ದಿನಗಳ ಹಿಂದೆ ರಿತು ಬೊಂಬಾಯಿಯಲ್ಲಿ ಹಿಂದಿಯ ಸೂಪರ್‌ಸ್ಟಾರ್ ಒಬ್ಬರ ಮನೆಗೆ ಹೋಗಿದ್ದರಂತೆ. ಆಗ ಇವರನ್ನು ಸ್ವಾಗತಿಸಿದ ಅವರ ಮಗ ಇವರನ್ನು ಕಂಡು, ‘ನಿಮ್ಮನ್ನು ರಿತು ಅಂಕಲ್ ಎಂದು ಕರೆಯಲೋ, ರಿತು ಆಂಟಿ ಎಂದು ಕರೆಯಲೋ?’ ಎಂದು ಕುಹಕವಾಡಿದ್ದನಂತೆ. ಈತನೂ ಚಿತ್ರನಟನೇ!  ಈ ಮಾತು ಸಹಜವಾಗಿ ರಿತುಗೆ ಇರುಸುಮುರಸು ಉಂಟು ಮಾಡಿತ್ತಂತೆ.  ಹಾಗಾಗಿ ರಿತು ಇತ್ತೀಚೆಗೆ ಜನರಿಂದ ದೂರ ಉಳಿಯಲು ಹೆಚ್ಚು ಹೆಚ್ಚು ಪ್ರಯತ್ನಿಸುತ್ತಿದ್ದರು ಎಂದು ಹತ್ತಿರದವರು ಹೇಳುತ್ತಾರೆ.   ಸಾಮಾನ್ಯವಾಗಿ ಸಂಜೆ ಆರರ ನಂತರ ಚಿತ್ರೀಕರಣ ಮಾಡುತ್ತಿರಲಿಲ್ಲ.  ಸೆಟ್‌ನಲ್ಲಿ ನಟರೊಂದಿಗೆ ಹೆಚ್ಚಿನ ಸಂಪರ್ಕ ಇಟ್ಟುಕೊಳ್ಳುತ್ತಿರಲಿಲ್ಲ.  ರಾತ್ರಿಯ ವೇಳೆಯಲ್ಲಿ ಚಿತ್ರೀಕರಣಕ್ಕೆ ಸಂಬಂಧಪಟ್ಟಂತೆ ಯಾರಾದರೂ ನಟರೊಂದಿಗೆ ಮಾತನಾಡಲೇ ಬೇಕಾದ ಸನ್ನಿವೇಶ ಬಂದರೂ ಅದನ್ನು ಬೇಕೆಂದೇ ತಪ್ಪಿಸುತ್ತಿದ್ದರಂತೆ ಅಥವಾ ಅದನ್ನು ತಮ್ಮ ಸಹಾಯಕರಿಗೆ ಒಪ್ಪಿಸುತ್ತಿದ್ದರಂತೆ.

ಆದರೆ ತೆರೆಯಮೇಲೆ ಅವರು ಯಾವುದಕ್ಕೂ ಅಂಜಲಿಲ್ಲಿ. ಇತ್ತೀಚಿನ ಚಿತ್ರಗಳಲ್ಲಿ ತಾವು ನಂಬಿದ್ದನ್ನೇ ಮಾಡುತ್ತಾ ಹೋದರು. ನಮ್ಮ ಸಮಾಜವನ್ನು ತಿದ್ದಲು ಒಬ್ಬ ಮನುಷ್ಯ ಬಂದೂಕು ಹಿಡಿದು ಕ್ರಾಂತಿಕಾರಿಯಾಗಲೇಬೇಕು ಎಂದೇನಿಲ್ಲ.  ತನ್ನ ಕೆಲಸಗಳ ಮೂಲಕ ಆತ ಸುತ್ತಲಿನ ಸಮಾಜದಲ್ಲಿನ ಬದಲಾವಣೆಗೆ ಪ್ರೇರಕ ಶಕ್ತಿಯಾಗಬಹುದು.  ರಿತು ತಮ್ಮ ಚಿತ್ರಗಳ ಮೂಲಕ, ಕೆಲವು ಪಾತ್ರಗಳನ್ನು ಸೃಷ್ಟಿಸುವುದರ ಮೂಲಕ, ಅವರ ಒಳತೋಟಿಗಳನ್ನು ತೆರೆಯ ಮೇಲೆ ಬರೆಯುವ ಮೂಲಕ ‘ಎಲ್‌ಜಿಬಿಟಿ’ ಜಗತ್ತಿನಲ್ಲಿ ನಿಜವಾದ ಕ್ರಾಂತಿಕಾರಿಯಾಗಿದ್ದರು.  ಅತ್ಯಂತ ಪ್ರಭಾವಶಾಲಿ ಮಾಧ್ಯಮದಲ್ಲಿದ್ದ ಒಬ್ಬ ಸೆಲೆಬ್ರಿಟಿ ಆ ಕಮ್ಯುನಿಟಿಗೆ ಧ್ವನಿಯಾಗಿ ನಿಂತದ್ದು ಭಾರತೀಯ ಚಿತ್ರರಂಗದ ಮಟ್ಟಿಗೆ ನಿಜಕ್ಕೂ ಆಶ್ಚರ್ಯಕರ ಬೆಳವಣಿಗೆಯೇ ಸರಿ.  ರಿತು ದಾ ನಮ್ಮವರಿಗೆಲ್ಲ ಘನತೆ ತಂದುಕೊಟ್ಟಿದ್ದರು ಎಂದು ಎಲ್‌ಜಿಬಿಟಿಯವರು ಹೆಮ್ಮೆಯಿಂದ ಹೇಳುತ್ತಾರೆ.  

ಈ ಕ್ರಾಂತಿಕಾರಕ ಧೋರಣೆಯೇ ಅವರನ್ನು ಇಷ್ಟು ಬೇಗ ಕರೆದುಕೊಂಡಿತೆ? ತಮ್ಮ ದೈಹಿಕ ಬದಲಾವಣೆಗೆ ರಿತುಪರ್ಣೋ ಅನೇಕ ಆಪರೇಷನ್‌ಗಳನ್ನು ಮಾಡಿಸಿಕೊಂಡಿದ್ದರು ಎಂದು ಹತ್ತಿರದವರು ಹೇಳುತ್ತಾರೆ.  ಇದೇ ಅವರ ಬದುಕಿಗೆ ಮುಳುವಾಯಿತೇನೋ?

ಇರಲಿ, ಒಬ್ಬ ಚಿತ್ರನಿರ್ದೇಶಕನಾಗಿ ಅವರ ಕೊಡುಗೆಯನ್ನು ನಾವು ಮರೆಯುವ ಹಾಗಿಲ್ಲ.

ರಿತುಪರ್ಣೋ ಘೋಷ್‌ರ ಚಿತ್ರಜಗತ್ತಿನ ಮೇಲೆ ಸತ್ಯಜಿತ್ ರೇ ಅವರ ಪ್ರಭಾವ ಸಾಕಷ್ಟಿತ್ತು.  ಅವರು ನನ್ನ ಗುರು ಎಂದು ರಿತು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.  ರಿತ್ವಿಕ್‌ಘಟಕ್, ಮೃಣಾಲ್‌ಸೆನ್, ತಪನ್‌ಸಿನ್ಹ ಮುಂತಾದ ನಿರ್ದೇಶಕರ ನಂತರ ಬೆಂಗಾಲಿಯಲ್ಲಿ ಹೆಚ್ಚು ಪ್ರಚಲಿತವಾದ ಹೆಸರು ರಿತುಪರ್ಣೋ ಘೋಷ್ ಅವರದ್ದು.
ಎರಡು ದಶಕಗಳಲ್ಲಿ (1992-2013) ಇಪ್ಪತ್ತು ಚಿತ್ರಗಳು… ಹನ್ನೆರಡು ರಾಷ್ಟ್ರಪ್ರಶಸ್ತಿಗಳು… ಅನೇಕ ಅಂತಾರಾಷ್ಟ್ರೀಯ ಗೌರವ…  ಇದೇನೂ ಸಾಮಾನ್ಯ ಸಾಧನೆಯೇ!  ತೊಂಬತ್ತರ ದಶಕದ ಆರಂಭದಲ್ಲಿ ಬೆಂಗಾಲಿ ಪ್ರೇಕ್ಷಕ ಚಿತ್ರಮಂದಿರದಿಂದ ದೂರ ಉಳಿಯಲು ಪ್ರಾರಂಭಿಸಿದ ಸಂದರ್ಭದಲ್ಲಿ ರಿತು ಚಿತ್ರರಂಗಕ್ಕೆ ಕಾಲಿಟ್ಟರು.  ‘ಕಮರ್ಷಿಯಲ್’ ಮತ್ತು ‘ಕಲಾತ್ಮಕ’ ಎಂಬ ಪ್ರಭೇದಗಳು ಚಿತ್ರರಂಗದಲ್ಲಿ ಪ್ರಚಲಿತವಾಗಿದ್ದವು.  ಪ್ರೇಕ್ಷಕ ಎರಡನ್ನೂ ತಿರಸ್ಕರಿಸುತ್ತಿದ್ದ.  ಆಗ ರಿತು ತಮ್ಮ ಭಿನ್ನಧಾಟಿಯ ಚಿತ್ರಗಳ ಮೂಲಕ ಎರಡಕ್ಕೂ ಹೊರತಾದ ಮೂರನೆಯ ಪ್ರಾಕಾರವನ್ನು ತುಳಿದರು.  ತಮ್ಮನ್ನು A BAD student of Cinema ಎಂದು ತಾವೇ ಗೇಲಿ ಮಾಡಿಕೊಳ್ಳುತ್ತಲೇ, ಬರಿಯ ಬೆಂಗಾಲಿ ಅಷ್ಟೇ ಅಲ್ಲ, ಹಿಂದಿ ಮತ್ತು ಇಂಗ್ಲೀಷಿನಲ್ಲೂ ರಿತು ಚಿತ್ರಗಳನ್ನು ತೆಗೆದರು.  ಅಮಿತಾಬ್ ಬಚ್ಚನ್, ಐಶ್ಚರ್ಯಾ ರೈ ಮುಂತಾದ ಖ್ಯಾತನಾಮರನ್ನು ತಮ್ಮ ಚಿತ್ರಗಳಲ್ಲಿ ಬಳಸಿಕೊಳ್ಳುವ ಮೂಲಕ ತಮ್ಮದೇ ಆದ ಪ್ರೇಕ್ಷಕವರ್ಗವನ್ನು ಸೃಷ್ಟಿಸಿಕೊಂಡಿದ್ದರು.   ‘ಹಿರೇರ್ ಅಂಗ್ತಿ’, ‘ಉನಿಶೆ ಏಪ್ರಿಲ್’, ‘ದಹನ್’, ‘ಅಸುಖ್’, ‘ಚೋಖೇರ್ ಬಾಲಿ’, ‘ರೈನ್ ಕೋಟ್’, ‘ಬರಿವಾಲಿ’, ‘ಅಂತರ್ ಮಹಲ್’, ‘ನೌಕಾದುಬಿ’, ‘ಅಬಹೊಮನ್’, ‘ದೋಸರ್’ ‘ಚಿತ್ರಾಂಗದ’, ‘ದ ಲಾಸ್ಟ್ ಲಿಯರ್’ ಮುಂತಾದವು ಇವರ ಕೆಲ ಪ್ರಮುಖ ಚಿತ್ರಗಳು.   ಇತ್ತೀಚೆಗೆ ಅವರು ಸಾಯುವುದಕ್ಕೆ ಎರಡು ದಿನ ಮುಂಚೆ ತಮ್ಮ ‘ಸತ್ಯಾನ್ವೇಷಿ’ ಚಿತ್ರದ ಚಿತ್ರೀಕರಣ ಮುಗಿಸಿ ಹೀಗೆ ಟ್ವೀಟ್ ಮಾಡಿದ್ದರು.  
Wrapped up the shoot of Satyanewshi, a crime thriller in the molten glow of the pensive falling afternoon. – 7:44 AM – 28 May 13

ಇಲ್ಲಿ Wrapped up ಎನ್ನುವ ಪದಕ್ಕೆ ಎರಡು ದಿನಗಳ ನಂತರ ಏನೇನು ಅರ್ಥಗಳು ಬರುತ್ತಿದೆ ನೋಡಿ! ಹಾಗೆನೋಡಿದರೆ ಈತನೂ ಒಬ್ಬ ಸತ್ಯಾನ್ವೇಷಿಯೇ ಸೈ!

(‘ಮಯೂರ’ ಜುಲೈ-2013, ಪ್ರಕಟವಾದ ಲೇಖನ)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: