‘ಮಾಯಾಬಜಾರ್’ ನೂರು ವರುಷ…
ಯಾರೊಬ್ಬರಿಗಾದರೂ ಅರಿವಿತ್ತೆ?
ಪಶ್ಚಿಮದಲ್ಲಿ ಹುಟ್ಟಿ ಬಂದ ಇದು, ನೂರೇ ವರ್ಷಗಳಲ್ಲಿ ತ್ರಿವಿಕ್ರಮನಾಗಿ ಬೆಳೆದು, ತನ್ನ ಅಸ್ತಿತ್ವವನ್ನು ಸ್ಥಾಪಿಸಿ ನಮ್ಮನ್ನೆಲ್ಲ ಹೀಗೆ ಆಳುತ್ತದೆ ಎಂದು?
ಅದಕ್ಕೇ ಇದನ್ನು ‘ಮಾಯಾಬಜಾರ್’ ಎಂದು ಕರೆಯುವುದು!
* * *
ಡಿಸೆಂಬರ್ 28, 1895 ಪ್ರಪಂಚದ ಚಲನಚಿತ್ರಜಗತ್ತಿಗೆ ವಿಶೇಷ ದಿನವಾದರೆ; ಮೇ 3, 1913 ಭಾರತದ ಚಲನಚಿತ್ರರಂಗಕ್ಕೆ ಪ್ರಮುಖವಾದ ವರ್ಷ. ಅಲ್ಲಿ ಲ್ಯೂಮಿಯೇರ್ ಸಹೋದರರು ಜಗತ್ತಿನ ಚಲನಚಿತ್ರಕ್ಕೆ ಮಾತಾಪಿತೃಗಳಾದರೆ; ಇಲ್ಲಿ ದಾದಾಸಾಹೇಬ್ ಫಾಲ್ಕೆ ‘ರಾಜಾ ಹರಿಶ್ಚಂದ್ರ’ ಚಿತ್ರವನ್ನು ತಯಾರಿಸಿ ಭಾರತದ ಪಾಲಿಗೆ ಚಲನಚಿತ್ರದ ಭೀಷ್ಮರೆನಿಸಿದರು.
ಪ್ಯಾರಿಸಿನಲ್ಲಿ ಲ್ಯೂಮಿಯೇರ್ ಸಹೋದರರು ಆರಂಭಿಸಿದ ಚಲನಚಿತ್ರದ ವಾಸ್ತವಿಕ ದೃಶ್ಯಗಳು ಹೇಗಿದ್ದವು ಗೊತ್ತೇ?
-ಮಗುವೊಂದು ತಿಂಡಿಯನ್ನು ತಿನ್ನುತ್ತಿರುವುದು.
-ಮನೆಯ ಬೆಕ್ಕು ಹಾಲು ಕುಡಿಯುತ್ತಿರುವುದು.
-ಕೆಲಸಗಾರರು ಕಾರ್ಖಾನೆಯ ಕೆಲಸ ಮುಗಿಸಿಕೊಂಡು ಹೊರಗೆ ಬರುತ್ತಿರುವುದು.
-ಸಮುದ್ರದಲ್ಲಿ ದೋಣಿಯೊಂದು ದಡ ಮುಟ್ಟುತ್ತಿರುವುದು.
-ರೈಲೊಂದು ಫ್ಲಾಟ್‌ಫಾರ್ಮ್‌ಗೆ ಬರುತ್ತಿರುವುದು ಇತ್ಯಾದಿ…
ಇಂತಹ ದೃಶ್ಯಗಳಿಂದ ಆರಂಭವಾದ ಚಲನಚಿತ್ರ ಇಂದು ಕೆಲವು ಗಂಟೆಗಳ ಸ್ವಾರಸ್ಯವಾದ, ಕಲ್ಪನಾಶಕ್ತಿಯಿಂದ ಕೂಡಿದ, ಇತರ ಕಲೆಗಳಾದ ಸಾಹಿತ್ಯ, ಸಂಗೀತ, ನೃತ್ಯಗಳನ್ನು ಒಳಗೊಂಡ ಮನೋರಂಜನೆ ಕೊಡುವ ಒಂದು ವಿಶಿಷ್ಟ ಮಾಧ್ಯಮವಾಗಿ ಬೆಳೆದಿದೆ.
ದಾದಾಸಾಹೇಬ್ ಫಾಲ್ಕೆ ನೂರು ವರ್ಷದ ಹಿಂದೆ ತೆರೆಗೆ ತಂದ ಮೂಕಿಚಿತ್ರ ‘ರಾಜಾ ಹರಿಶ್ಚಂದ್ರ’. ಹರಿಶ್ಚಂದ್ರ ಎಂಥವನು? ಸತ್ಯ ಪಾಲನೆಗಾಗಿ ತನ್ನ ಅಧಿಕಾರ, ರಾಜ್ಯ, ಪ್ರಜೆಗಳು, ಬಂಧುಗಳು, ಕೊನೆಗೆ ತನ್ನ ಸತಿ-ಸುತರನ್ನೂ ಕಳೆದುಕೊಂಡ. ಎಂಥದ್ದೇ ಸಂದರ್ಭದಲ್ಲೂ ನಾನು ಸುಳ್ಳನ್ನು ಹೇಳುವುದಿಲ್ಲ ಎಂದು ಪಣತೊಟ್ಟ. ಅದರಂತೆಯೇ ನಡೆದುಕೊಂಡ. ವಿಪರ್ಯಾಸ ಎಂದರೆ ನಮ್ಮ ಸಿನೆಮಾಗಳು ಹೇಳುತ್ತಾ ಬಂದದ್ದು ಏನನ್ನು?
* * *
ಮೂಲಭೂತವಾಗಿ ಸಿನೆಮಾ ವಿಜ್ಞಾನದ ಆವಿಷ್ಕಾರ. ದೃಶ್ಯ ಹಾಗೂ ಶ್ರವಣೇಂದ್ರಿಯಗಳನ್ನು ಏಕಕಾಲದಲ್ಲಿ ಪ್ರಚೋದಿಸುವ ಇದು ಪ್ರೇಕ್ಷಕರ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಬಹುದು ಎಂದು ಭಯ-ಕುತೂಹಲ ಎಲ್ಲರಿಗೂ ಇದ್ದೇ ಇದ್ದವು. ಹೊಸದರಲ್ಲಿ ಇದು ಅಕ್ಷರ ತಿಳಿಯದವರಲ್ಲೂ ಜ್ಞಾನವನ್ನು ಹರಡಲು ಹಾಗೂ ಅವರ ಅರಿವನ್ನು ವಿಸ್ತರಿಸಲು ಬಳಕೆಯಾಗಬಹುದು ಎಂಬ ಉತ್ಸಾಹವಿತ್ತು. ಇನ್ನೂ ಕೆಲವರಲ್ಲಿ ಇದು ಒಂದು ಪ್ರಭಾವಶಾಲಿ ಕಲಾಪ್ರಕಾರವಾಗುತ್ತದೆ ಎನ್ನುವ ನಿರೀಕ್ಷೆಯಿತ್ತು. ಇನ್ನೊಂದು ಮಟ್ಟದಲ್ಲಿ ಚಲನಚಿತ್ರಗಳನ್ನು ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಧಿಸಲು ಬಳಕೆಯಾಗಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ ಎಲ್ಲ ನಿರೀಕ್ಷೆಗಳು ಕರಗುತ್ತಾ ಬಂದವು. ಇದು ಬಹು ಬೇಗನೆ ಮನರಂಜನೆಯ ಹಾಗೂ ವ್ಯಾಪಾರಿ ಉದ್ಯಮದ ದಾರಿಯನ್ನು ಭದ್ರವಾಗಿ ಹಿಡಿಯಿತು. ಇಂದು ಭಾರತದಲ್ಲಷ್ಟೇ ಅಲ್ಲ ಪ್ರಪಂಚದಾದ್ಯಂತ ಸಿನೆಮಾ ಬೆಳೆದಿರುವುದು, ಹರಡಿರುವುದು ಈ ಮಾರ್ಗದಲ್ಲಿಯೇ. ಹಾಗಾಗಿಯೇ, ‘ಚಲನಚಿತ್ರ ಒಂದು ವ್ಯಾಪಾರೀ ಕಲೆಯ ಅತ್ಯುನ್ನತ ರೂಪ’ ಎಂದು ಪ್ರಖ್ಯಾತ ಚಿತ್ರನಿರ್ದೇಶಕ ಸತ್ಯಜಿತ್ ರೇ ಹೇಳುತ್ತಾರೆ.
ಹಾಲಿವುಡ್ (ಅಮೆರಿಕಾದ ಚಲನಚಿತ್ರ ತಯಾರಿಕಾ ಕೇಂದ್ರ) ಘೋಷಣೆ ಹೀಗಿದೆ:
we give what the public wants- ‘ಪ್ರೇಕ್ಷಕ ಏನನ್ನು ಬಯಸುತ್ತಾನೋ ಅದನ್ನು ಕೊಡುತ್ತೇವೆ’. ಮೇಲುನೋಟಕ್ಕೆ ಈ ಘೋಷಣೆಯಲ್ಲಿ ಯಾವ ತಪ್ಪೂ ಕಾಣಿಸುವುದಿಲ್ಲ. ಆದರೆ ಅದರ ಹಿಂದೆ ಅಡಗಿರುವುದು ಚಾಣಾಕ್ಷತನ. ಪ್ರೇಕ್ಷಕರಲ್ಲಿ ಕುಟಿಲತನದಿಂದ ಬಯಕೆಗಳನ್ನು ಪ್ರೇರೇಪಿಸಿ, ನಿಧಾನ ವಿಷದಂತೆ ಆ ಬಯಕೆಗಳನ್ನು ಚಟವಾಗುವಂತೆ ಮಾಡಿ, ಇದೊಂದು ಅತ್ಯುತ್ತಮ ಮನೋರಂಜನೆ ಎಂದು ಪ್ರಚಾರ ನಡೆಸಿ, ಪ್ರೇಕ್ಷಕರ ಮೇಲೆ ಮಂಕು ಬೂದಿಯನ್ನು ಎರಚಿ ಮುಗ್ಧಗೊಳಿಸುವ ತಂತ್ರವಲ್ಲದೆ ಬೇರೇನು? ಎಲ್ಲದರಲ್ಲೂ ಹಾಲಿವುಡ್ ಅನ್ನು ಅನುಕರಿಸುವ ಭಾರತೀಯ ಚಿತ್ರರಂಗದ ಮುಖ್ಯವಾಹಿನಿ ಕೂಡ ಇದನ್ನೇ ಕುರುಡುಗಣ್ಣಿನಿಂದ ಇಲ್ಲಿವರೆಗೂ ಅನುಕರಿಸುತ್ತಾ ಬಂದಿದೆ. ಮುಂದೆಯೂ ಅನುಸರಿಸುತ್ತದೆ!
* * *
ಭಾರತದಲ್ಲಿ ಇಪ್ಪತ್ತು, ಮೂವತ್ತರ ದಶಕದಲ್ಲಿ ಶೈಶವಾವಸ್ಥೆಯಲ್ಲಿದ್ದ ಚಲನಚಿತ್ರ ನಲವತ್ತರ ದಶಕದ ನಂತರ ಹೆಚ್ಚು ಜನರನ್ನು ಆಕರ್ಷಿಸಲು ಪ್ರಾರಂಭಿಸಿತು. ಕಾವ್ಯ, ಪುರಾಣ ಮತ್ತು ನಾಟಕ ಇವು ಮನುಷ್ಯನ ಮೂರು ಭಿನ್ನವಾದ ಪ್ರಜ್ಞೆಗಳ ಒಡಲಿನಿಂದ ಹುಟ್ಟಿಬಂದವುಗಳಾದ್ದರಿಂದ ಇದೇ ವಸ್ತುವನ್ನು ಸಿನಿಮಾ ಮಾಧ್ಯಮ ಸಮರ್ಥವಾಗಿ ಬಳಸಿಕೊಂಡಿತು. ಪೌರಾಣಿಕ ಹಿನ್ನೆಲೆಯ ಚಿತ್ರಗಳು ಭಕ್ತಿಯ ನೆಲೆಯಲ್ಲಿ ಆಕರ್ಷಿಸಿದರೆ, ಜಾನಪದ ಕಥಾವಸ್ತುವಿನ ಚಿತ್ರಗಳು ರಂಜನೆ, ಸಾಹಸ, ತಂತ್ರಗಾರಿಕೆಯನ್ನೇ ಪ್ರಧಾನವಾಗಿರಿಸಿಕೊಂಡು ಅದ್ಭುತ ರಮ್ಯಜಗತ್ತನ್ನು ಸೃಷ್ಟಿಸಿದವು. ನಿಧಾನವಾಗಿ ಸಿನೆಮಾ ಜನಸಾಮಾನ್ಯರ ಬದುಕಿನ ಒಂದು ಸಂಭ್ರಮವಾಗಿ, ಒಂದು ಆಚ್ಚರಿಯಾಗಿ, ಒಂದು ಅನಿವಾರ್ಯವಾಗಿ, ಬಡವ ಶ್ರೀಮಂತ ಅನ್ನುವ ಭೇದ ಅಳಿಸಿ ಹಾಕಿ ವಿಜೃಂಭಿಸತೊಡಗಿತು. ಸಾವಿರ ಜನರ ಭಾವನೆಗಳನ್ನ, ಒಂದೇ ಬಾರಿಗೆ ಅರಳಿಸುವ, ಕೆರಳಿಸುವ, ಸಾಂತ್ವನಗೊಳಿಸುವ ಕೆಲಸವನ್ನ ಈ ಚಲನಚಿತ್ರಗಳು ಮಾಡುತ್ತಿದ್ದವು. ಚಿತ್ರಮಂದಿರದ ಕತ್ತಲ ಜಗತ್ತಿನಲ್ಲಿ ನಡೆಯುತ್ತಿದ್ದ ಈ ಕ್ರಿಯೆ ಹೊರಗೆ ಇಡೀ ಸಮುದಾಯದ ಮೆಚ್ಚುಗೆ ಗಳಿಸಿತ್ತು. ಇದಕ್ಕೆ ಆ ದಿನಗಳಲ್ಲಿ ತಯಾರಾಗುತ್ತಿದ್ದ ಚಿತ್ರಗಳೂ ಕಾರಣವಾಗಿದ್ದವು. ಸಾಮಾನ್ಯವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವವರು ಬಹಳ ಒಳ್ಳೆಯವರು (ನಾಯಕ-ನಾಯಕಿ) ಅಥವಾ ತೀರ ಕೆಟ್ಟವರು (ಖಳನಾಯಕ). ಜೊತೆಗೆ ಇವರೆಲ್ಲ ಹಾಡುವ, ನರ್ತಿಸುವ ಛಾತಿಯಿರುವಂಥಹವರು. ಸಾಮಾನ್ಯರಾಗಿದ್ದರೂ ಅಸಾಮಾನ್ಯ ಕೆಲಸಗಳನ್ನು ಮಾಡುವವರು. ಕೆಲವು ಸಂದರ್ಭಗಳಲ್ಲಿ ಇವರ ಅದ್ದೂರಿಯ ವೇಷ-ಭೂಷಣಗಳು, ವಿಚಿತ್ರ್ರವೆನಿಸುವ ಕೇಶ ಶೃಂಗಾರಗಳು, ಅವರು ವಾಸಿಸುವ ಭವ್ಯ ಸೌಧಗಳು, ಓಡಾಡುವ ಐಷಾರಾಮಿ ಕಾರುಗಳು, ಅವರು ಪ್ರೇಮಿಸುವ ರೀತಿ, ಅವರಿಗೆ ಬರುವ ಕ್ಷುಲ್ಲಕ ಸಮಸ್ಯೆಗಳು, ಅವುಗಳನ್ನು ಎದುರಿಸುವ ಬಾಲಿಶ ರೀತಿಗಳು ಪ್ರೇಕ್ಷಕನಿಗೆ ಇಷ್ಟವಾಯಿತು. ಇದೇ ಈ ಸಿನಿಮಾಗಳ ಜನಪ್ರಿಯತೆಗೆ ಕಾರಣ.
ಸಿನೆಮಾ ತಂತಾನೇ ಸ್ವತಂತ್ರವಲ್ಲದ ಒಂದು ಕಲಾಮಾಧ್ಯಮ. ಅವಲಂಬನೆ ಇದರ ಮೂಲ ಹಾಗೂ ಪ್ರಧಾನ ಲಕ್ಷಣ. ಹಾಗಾಗಿಯೇ ಇದು ಸಮಾಜದಲ್ಲಿನ ಸಿದ್ಧಪರಿಕರಗಳನ್ನು ಬಳಸಿಕೊಳ್ಳುತ್ತಲೇ ಸೃಜನಶೀಲ ಆಯಾಮವನ್ನು ಕೂಡ ಪಡೆದುಕೊಳ್ಳತೊಡಗಿತು. ಇದರ ಪ್ರಯೋಗವನ್ನು ನಾವು ಅರವತ್ತರ ದಶಕದಲ್ಲಿ ಕಾಣಬಹುದು. ಅದು ಭಾರತೀಯ ಚಿತ್ರರಂಗದ ಮಟ್ಟಿಗೆ ಒಂದು ದೊಡ್ಡ ಹೊರಳು. ಕಾದಂಬರಿಯಲ್ಲಿನ ವಾಸ್ತವ ಮತ್ತು ಅತಿವಾಸ್ತವ ನೆಲೆಯ ಅಭಿವ್ಯಕ್ತಿಗಳು ಚಿತ್ರಗಳಲ್ಲಿ ಬಳಕೆಯಾಗತೊಡಗಿದವು. ಇವಕ್ಕೆ ಕೆಳ ಮಧ್ಯಮ ವರ್ಗದ ಜನರು ಉತ್ತಮ ಪ್ರತಿಕ್ರಿಯೆ ತೋರಿದರು. ಇದು ಸರಳ, ಸುಂದರ, ಸಂತೃಪ್ತ ಕೌಟುಂಬಿಕ ಮನಸ್ಥಿತಿಯನ್ನು ಕಟ್ಟಿಕೊಡುವುದರಲ್ಲಿ ಕಾದಂಬರಿ ಆಧಾರಿತ ಚಿತ್ರಗಳು ಪ್ರಮುಖ ಪಾತ್ರ ನಿರ್ವಹಿಸಿದವು. ಇಲ್ಲಿ ಆದರ್ಶ ಪತಿ, ಪತ್ನಿ, ಮಕ್ಕಳು, ತಾಯಿ ಇವರ ನಡುವಿನ ಮಧುರ ಸಂಬಂಧವಾದ ವಿಶಿಷ್ಟ ಪರಂಪರೆಯನ್ನು ಒಂದು ದಶಕಕ್ಕೂ ಹೆಚ್ಚು ಕಾಲ ಸೃಷ್ಟಿಸಿತು.
ಈ ಹಿಂದೆ ಹೇಳಿದಂತೆ ಚಲನಚಿತ್ರ ಮಾಧ್ಯಮ ತನ್ನ ಬುಡದಲ್ಲೇ ಆರ್ಥಿಕ ಹೊರೆಯನ್ನು ಹೊತ್ತುಕೊಂಡೇ ಹುಟ್ಟಿತು. ಹೀಗಾಗಿ, ನಂತರದ ದಶಕದಲ್ಲಿ ಲಾಭದ ಆಸೆಯಿಂದ ಮಸಾಲೆ ಸಿನಿಮಾಗಳ ತಯಾರಿಕೆ ಹೆಚ್ಚಾಗುತ್ತಾ ಹೋಯಿತು. ಕಮರ್ಷಿಯಲ್ ಯಶಸ್ಸಿಗಾಗಿ ಹಲವಾರು ಸೂತ್ರಗಳು ಹೆಣೆಯಲ್ಪಟ್ಟವು. ‘ಒಂದು ತಾರೆ, ಆರು ಹಾಡು, ಮೂರು ನೃತ್ಯ, ನಾಲ್ಕು ಹೊಡೆದಾಟ’ ವಿಜೃಂಭಿಸತೊಡಗಿತು. ನಿಧಾನವಾಗಿ ಸಿನಿಮಾಗಳ ಕತೆಗಳಲ್ಲಿ ಕೋಪ, ದ್ವೇಷ, ಸೇಡು, ಪ್ರತೀಕಾರಗಳು ಮುಖ್ಯ ಸ್ಥಾನಪಡೆದವು. ನಾಯಕ-ಖಳನಾಯಕರ ನಡುವಿನ ವ್ಯತ್ಯಾಸಗಳು ಮಸುಕಾದವು. ನಾಯಕನೇ ಖಳನಾಯಕನಾದ; ಖಳನಾಯನಕನೇ ಜನರಿಗೆ ಅನುಕರಿಸಲು ಯೋಗ್ಯವಾದ ಮಾದರಿ ಎನ್ನುವಂತಾಯಿತು. ಇದರಿಂದ ಚಿತ್ರಗಳಲ್ಲಿ ಹಿಂಸೆ ವಿಜೃಂಭಿಸತೊಡಗಿತು. ಹೆಚ್ಚಿನ ಸಿನಿಮಾಗಳು ಸಮಾಜದ ಕರಾಳ ಮುಖವನ್ನು ತೋರಿಸಲು ಹೊರಟವು; ಈ ಮಾಧ್ಯಮಕ್ಕೆ ಸಹಜವಾದ ಉತ್ಪೇಕ್ಷೆಯಿಂದಾಗಿ ಈ ಕರಾಳ ಮುಖ ಇನ್ನೂ ಕರಾಳವಾಗಿ ಚಿತ್ರಿತವಾಯಿತು. ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳ ಸಿನಿಮಾಗಳು ಅಪರೂಪವಾದವು.
ನಾಯಕನಟ ಅತಿಮುಖ್ಯವಾದದ್ದೂ ಇದೇ ಸಮಯದಲ್ಲಿ. ಕೆಲವೊಮ್ಮೆ ಚಿತ್ರದಲ್ಲಿ ಏನಿರಬೇಕು, ಹೇಗಿರಬೇಕು ಎನ್ನುವುದನ್ನು ನಿರ್ಧರಿಸುವಲ್ಲಿ ನಿರ್ದೇಶಕನಿಗಿಂತ ನಾಯಕನಟ ಮುಖ್ಯನಾದ. ಆತ ತನ್ನ ಇಮೇಜಿಗೆ ತಕ್ಕಂತೆ ತನ್ನ ಪಾತ್ರವನ್ನು, ಪಾತ್ರದ ಸುತ್ತಲಿನ ವಾತಾವರಣವನ್ನು ಪೋಷಿಸಿಕೊಳ್ಳತೊಡಗಿದ…
ಚಲನಚಿತ್ರ ಸಮಾಜದ ಮೇಲೆ ಪ್ರಭಾವ ಬೀರುತ್ತಿದೆ ಎಂಬ ಕೂಗು ಎದ್ದಿತು. ಯಾವುದೋ ಚಲನಚಿತ್ರ ನೋಡಿ ಪ್ರಭಾವಿತರಾದೆವು ಇದರಿಂದ ಕೊಲೆ ಮಾಡಿದೆವು ಎಂದು ಹೇಳಿರುವ ಖೈದಿಗಳು ಅಲ್ಲಲ್ಲಿ ಕಂಡಿದ್ದಾರೆ. ಹಾಗೆಯೇ ಚಲನಚಿತ್ರವೊಂದು ಮದ್ಯಪಾನ ವಿರುದ್ಧ ಆಂದೋಲನಕ್ಕೆ ಜನರನ್ನು ಪ್ರೇರೇಪಿಸಿದ ಉದಾಹರಣೆಯೂ ಇದೆ. ಫಂಡರಿಬಾಯಿ ತಯಾರಿಸಿದ ‘ಅನುರಾಧ’ ಚಿತ್ರದಲ್ಲಿ ಅತಿ ಸಂತಾನದಿಂದ ಬವಣೆಪಡುವ ಸಂಸಾರದ ಕಥೆ ಹೊಂದಿದೆ ಎಂಬ ಕಾರಣಕ್ಕೆ ಸರಕಾರ ಇದನ್ನು ಕುಟುಂಬ ಯೋಜನೆಯ ಪರ ಪ್ರಚಾರಕ್ಕೆಂದು ಬಳಸಿ ಯಶಸ್ವಿಯಾದ ದಾಖಲೆಯೂ ಇದೆ!
ಭಾರತೀಯ ಚಿತ್ರರಂಗದ ಮುಖ್ಯವಾಹಿನಿಯ ಜೊತೆ ಜೊತೆಗೇ ನಲವತ್ತರ ದಶಕದಿಂದಲೇ ‘ಪರ್ಯಾಯ ಮಾರ್ಗದ ಚಿತ್ರ’ಗಳ ಒಂದು ಅಲೆಯೂ ಪ್ರಾರಂಭವಾಯಿತು. ಇದು ಗಟ್ಟಿಯಾದದ್ದು ಐವತ್ತರ ದಶಕದಲ್ಲಿ. ಆದರೆ ಮಾರುಕಟ್ಟೆಯ ಲೆಕ್ಕಾಚಾರದ ಮುಂದೆ ಇವು ಹೆಚ್ಚು ಪ್ರಕಾಶಿಸಲಿಲ್ಲ. ಸಾಮಾನ್ಯ ಪ್ರೇಕ್ಷಕ ಇವುಗಳತ್ತ ಬೆಳೆಸಿಕೊಂಡ ಒಂದು ರೀತಿಯ ಅಸಡ್ಡೆಯನ್ನು ಇಂದೂ ಬಿಟ್ಟಿಲ್ಲ. ಆದರೂ ‘ಪರ್ಯಾಯ ಸಿನೆಮಾ’ಗಳಲ್ಲಿ ಗಂಭೀರವಾದ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಬಂದಿವೆ. ಪಕ್ಕಾಮಸಾಲಾ ಚಿತ್ರಗಳು ತಯಾರಾಗುತ್ತಿದ್ದ ಬಾಲಿವುಡ್‌ನಲ್ಲಿ ಇತ್ತೀಚಿನ ದಶಕದಲ್ಲಿ ಗಂಭೀರ ಚಿತ್ರಗಳು ಬರುತ್ತಿರುವುದು ಸಮಾಧಾನಕರ ಬೆಳವಣಿಗೆ. ಇದಕ್ಕೆ ಮಲ್ಟಿಪ್ಲೆಕ್ಸ್‌ಗಳು ಮುಖ್ಯ ಕಾರಣ ಎಂದರೂ ತಪ್ಪಾಗಲಾರದು. ಕಾರ್ಪೋರೆಟ್ ಸಂಸ್ಥೆಗಳು ಸಿನೆಮಾ ನಿರ್ಮಾಣಕ್ಕೆ ಕೈ ಹಾಕಿದ್ದೂ ಈ ಹೊಸ ಪ್ರಯೋಗಕ್ಕೆ ಶಕ್ತಿ ನೀಡಿತು.
‘ಆದರೆ ಜನಸಾಮಾನ್ಯರಲ್ಲಿ ಈ ಮಾಧ್ಯಮಗಳ ಬಗ್ಗೆ ಇರುವ ಅನಕ್ಷರತೆ ಅಗಾಧವಾದದ್ದು. ಈ ಮಾಧ್ಯಮದಿಂದ ಉತ್ತಮ ಹಾಗೂ ಪೂರ್ಣ ಪ್ರಯೋಜನವನ್ನು, ಇಂದಿನ, ಮುಂದಿನ ಪೀಳಿಗೆಯವರು ಪಡೆಯಬೇಕಾದರೆ ಈ ಅನಕ್ಷರತೆಯನ್ನು ತೊಲಗಿಸುವ ಪ್ರಯತ್ನ ಆಗಬೇಕು…’ ಎಂದು ಚಿತ್ರನಿರ್ಮಾತೃ/ನಿರ್ದೇಶಕ/ಪ್ರಾಧ್ಯಾಪಕ ದಿವಂಗತ ಎಂ.ವಿ.ಕೃಷ್ಣಸ್ವಾಮಿ ಹೇಳಿದ ಮಾತು ಇಂದಿಗೂ ಪ್ರಸ್ತುತವೆನಿಸುತ್ತಿದೆ.
ಹಾಗಾದರೆ ಒಳ್ಳೆಯ ಸಿನಿಮಾ ಎಂದರೆ ಏನು?
Good cinema should lead its audiences and not be led by them- ಎಂದು ಪ್ರಖ್ಯಾತ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಮಾತನ್ನು ಇಲ್ಲಿ ಸ್ಮರಿಸಬಹುದು.
ಅದೇನೇ ಇರಲಿ,
ಈ ನೂರು ವರ್ಷಗಳಲ್ಲಿ ಭಾರತೀಯ ಚಲನಚಿತ್ರರಂಗದ ದೊಡ್ಡ ಸಾಧನೆ ಎಂದರೆ ಸಂಖ್ಯೆ! ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಸಂಖ್ಯೆಯ ಚಲನಚಿತ್ರಗಳು ತಯಾರಾಗುವುದು ನಮ್ಮ ದೇಶದಲ್ಲೇ. ಈಗ ಪ್ರತಿವರ್ಷ ಸರಾಸರಿ ಇಪ್ಪತ್ತಕ್ಕೂ ಹೆಚ್ಚು ಭಾಷೆಗಳೂ ಸೇರಿ ಒಟ್ಟು ಮೂರು ಸಾವಿರಕ್ಕೂ ಹೆಚ್ಚು ಚಲನಚಿತ್ರಗಳು ಇಲ್ಲಿ ತಯಾರಾಗುತ್ತಿವೆ. ನಂತರದ ಸ್ಥಾನ ಅಮೆರಿಕಕ್ಕೆ(ಹಾಲಿವುಡ್) ಮತ್ತು ಚೀನಾಕ್ಕೆ. ನಮ್ಮ ದೇಶದಲ್ಲಿ ಪ್ರತಿದಿನ ಸುಮಾರು ಒಂದು ಕೋಟಿ ನಲವತ್ತು ಲಕ್ಷ ಜನ ಅಂದಾಜು ಎಂಟು ನೂರು ಚಲನಚಿತ್ರಗಳನ್ನು ನೋಡುತ್ತಿದ್ದಾರೆ ಎಂದು ಒಂದು ಅಧ್ಯಯನ ತಿಳಿಸುತ್ತದೆ. ಹಾಗೆಯೇ ಪ್ರಪಂಚದಾದ್ಯಂತ ಸುಮಾರು ಎಂಬತ್ತು ದೇಶಗಳಲ್ಲಿ ಭಾರತೀಯ ಚಿತ್ರಗಳನ್ನು ಜನ ನೋಡುತ್ತಿದ್ದಾರಂತೆ. ಇದರಲ್ಲಿ ಹೆಚ್ಚಿನ ಪಾಲು ದಕ್ಕಿರುವುದು ಬಾಲಿವುಡ್(ಹಿಂದಿ) ಚಿತ್ರಗಳಿಗೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ತನ್ನ ಕಥನಕ್ರಮದಿಂದಲೇ ಖ್ಯಾತಿ ಪಡೆದಿದ್ದ ಭಾರತೀಯ ಚಿತ್ರರಂಗ ಇಂದು ಕಥಾನಿರೂಪಣೆಗಿಂತ ತಂತ್ರಗಾರಿಕೆಗೆ ಹೆಚ್ಚಿನ ಮಣೆ ಹಾಕುತ್ತಿದೆ. 2D ಸಿನಿಮಾ ಜೊತೆ 3D ಪೈಪೋಟಿಗೆ ಇಳಿದಿದೆ. ಈಗ ನೂತನವಾಗಿ ಐಮ್ಯಾಕ್ಸ್-IMAX (Image Maximum)-ಎಂಬ ಅಗಲ ತೆರೆಯ ಪ್ರದರ್ಶನ ವ್ಯವಸ್ಥೆ ನಗರಗಳಿಗೆ ಕಾಲಿಟ್ಟಿದೆ. ಇದರ ಮಧ್ಯೆ 16mm, 35mm, 70mm Gauge ಎಂಬ ಸೆಲ್ಯುಲಾಯ್ಡ್ ಯುಗ ನಿಧಾನವಾಗಿ ತೆರೆಮರೆಗೆ ಸರಿಯುತ್ತಿದೆ. ಅಷ್ಟೇ ವೇಗವಾಗಿ ಡಿಜಿಟಲ್ ಯುಗ ದಾಪುಗಾಲಿಟ್ಟು ಬಂದಿದೆ. ಇನ್ನು ಕೆಲವೇ ವರ್ಷಗಳಲ್ಲಿ ಚಲನಚಿತ್ರದಲ್ಲಿ ಅತ್ಯಂತ ವೇಗದ ಬದಲಾವಣೆಗಳಾಗಲಿವೆ. ಈಗಾಗಲೇ ಹೆಚ್ಚಿನ ಕಡೆ ಫಿಲಂ ಪ್ರೊಜೆಕ್ಟರ್‌ಗಳು ಗುಜರಿ ಅಂಗಡಿ ಸೇರಿವೆ. ಎಲ್ಲವೂ ಡಿಜಿಟಲ್‌ಮಯವಾಗುತ್ತಿದೆ. ಈಗ ಮೆರೆಯುತ್ತಿರುವ ಮಲ್ಟಿಪ್ಲೆಕ್ಸ್ ಮುಂದೆ ಮೆಗಾಪ್ಲೆಕ್ಸ್‌ಗಳು ತಲೆಯುತ್ತುವ ದಿನ ದೂರವಿಲ್ಲ.
ಇಷ್ಟೆಲ್ಲಾ ಆದರೂ ಸಿನಿಮಾ ನಿಧಾನವಾಗಿ ತನ್ನ ಪ್ರಭಾವ ಕಳೆದುಕೊಳ್ಳುತ್ತಿದೆ ಎಂದು ನ್ಯಾಷನಲ್ ರೀಡರ್‌ಷಿಪ್ ಸಮೀಕ್ಷೆ ಹೇಳುತ್ತದೆ. ಅದರಲ್ಲೂ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಿನಿಮಾ ತನ್ನ ಆಕರ್ಷಣೆ ಕಳೆದುಕೊಳ್ಳುತ್ತಿದೆಯಂತೆ. ನಗರದಲ್ಲಿ ಶುರುವಾಗಿರುವ ಮಲ್ಟಿಪ್ಲೆಕ್ಸ್ ಸಂಸ್ಕೃತಿಯಿಂದ ಇಲ್ಲಿಯ ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿರುವುದನ್ನೂ ಈ ಸಂಸ್ಥೆ ಗುರುತಿಸಿದೆ.
ಬಹುತೇಕ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಾಗಿಲು ಮುಚ್ಚಿಕೊಳ್ಳುತ್ತಿವೆ. ಕಳೆದ ನಾಲ್ಕೈದು ವರ್ಷಗಳಲ್ಲಿ ಬೆಂಗಳೂರು ಒಂದು ನಗರದಲ್ಲಿಯೇ ಮೂವತ್ತ್ತಕ್ಕೂ ಹೆಚ್ಚು ಚಿತ್ರಮಂದಿರಗಳು ನೆಲಸಮವಾಗಿವೆ. ಇನ್ನೂ ಇಪ್ಪತ್ತೈದಕ್ಕೂ ಹೆಚ್ಚು ಚಿತ್ರಮಂದಿರಗಳು ಬೀಳಿಸಲು ಪರವಾನಿಗೆ ಬೇಡುತ್ತಾ ನಿಂತಿವೆ. ಸಿನಿಮಾ ಮಾಧ್ಯಮ ತನ್ನ ಪ್ರಭಾವ ಕಳೆದುಕೊಳ್ಳಲು ಪ್ರಮುಖ ಕಾರಣ ಟೆಲಿವಿಷನ್ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ.
ಆರಂಭದ ದಿನಗಳಲ್ಲಿ ರಾತ್ರಿ ಕತ್ತಲಾದ ಮೇಲೆ ಎರಡು ಆಟಕ್ಕೆ ಮಾತ್ರಕ್ಕೆ ಸೀಮಿತವಾದ ಚಿತ್ರಪ್ರದರ್ಶನ ನಂತರ ದಿನಗಳಲ್ಲಿ ಪ್ರಖ್ಯಾತಿ ಹೊಂದಿ ಹಗಲಿನ ಪ್ರದರ್ಶನಗಳು ಸೇರಿ ನಾಲ್ಕು ಪ್ರದರ್ಶನಗಳವರೆಗೆ ಬೆಳೆದಿತ್ತು. ಈಗ ಬೆಳಗಿನ ಪ್ರದರ್ಶನಗಳು ಪ್ರೇಕ್ಷಕರ ಕೊರತೆ ಕಾಣುತ್ತಿವೆ. ಚಿತ್ರಮಂದಿರಗಳ ಮುಂದಿನ ‘ಹೌಸ್‌ಫುಲ್’ ಬೋರ್ಡ್ ಧೂಳು ತಿನ್ನುತ್ತಿದೆ. ವಾರದ ಏಳೂ ದಿನದ ಪ್ರದರ್ಶನಗಳು ಮುಂದೊಂದು ದಿನ ಪಾಶ್ಚಿಮಾತ್ರ ದೇಶಗಳಂತೆ ವಾರಾಂತ್ಯಕ್ಕೆ ಇಲ್ಲೂ ಬಂದರೆ ಆಶ್ಚರ್ಯವೇನಿಲ್ಲ.
ಹಿಂದಿನ ನೂರು ವರ್ಷಗಳ ಹಿಂದೆ ಸಿನೆಮಾ ಇಷ್ಟೆಲ್ಲಾ ರೂಪಾಂತರ ಹೊಂದುತ್ತದೆಂದು ಯಾರೂ ಊಹಿಸಿರಲಿಲ್ಲ. ಹಾಗೆಯೇ ಮುಂದಿನ ನೂರು ವರ್ಷಗಳಲ್ಲಿ ಈ ‘ಮಾಯಾಬಜಾರ್’ನಲ್ಲಿ ಏನೇನೆಲ್ಲ ಅವಿಷ್ಕಾರಗಳು ಕಾಣಲಿಕ್ಕಿದೆಯೋ?
(ವಿಜಯವಾಣಿ ಪತ್ರಿಕೆಯಲ್ಲಿ ಮೇ’3 ರಂದು ಪ್ರಕಟವಾದ ಲೇಖನ)
- Posted in: Uncategorized
ಬಹಳ ಒಳ್ಳೆಯ ಮಾಹಿತಿ. ಧನ್ಯವಾದಗಳು.