‘ಭಾರತ್ ಸ್ಟೋರ್ಸ್’ ಹುಟ್ಟಿದ ಕತೆ…
‘ಸಿನಿಮಾ ಮಾಡಲು ನಿಮಗೆ ಕತೆ ಹೇಗೆ ಸಿಗುತ್ತೆ?’
-ಇದು ನನ್ನನ್ನು ಕೆಲವರು ಭೇಟಿಯಾದಾಗ ಕೇಳುವ ಮುಖ್ಯವಾದ ಮಾತು. ಅವರ ಪ್ರಶ್ನೆಗಳು ಮುಂದುವರಿಯುತ್ತವೆ.
‘ಕತೆಯನ್ನು ಎಲ್ಲಿ ಹುಡುಕುತ್ತೀರಿ?
ಇದು ಸಿನಿಮಾಗೆ ಸೂಕ್ತ ಎಂದು ಹೇಗೆ ಆಯ್ಕೆ ಮಾಡಿಕೊಳ್ಳುತ್ತೀರಿ?’ ಇತ್ಯಾದಿ..
***
ನಿಜ ಹೇಳಲಾ?
ಕೆಲವೊಮ್ಮೆ ಕಥೆಯನ್ನು ನಾವು ಹುಡುಕಿಕೊಂಡು ಹೋಗಲೇಬೇಕಿಲ್ಲ. ಅದೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ!
ಉದಾಹರಣೆಗೆ,
ನಾನು ಇತ್ತೀಚೆಗೆ ತಯಾರಿಸಿದ ಚಿತ್ರ ‘ಭಾರತ್ ಸ್ಟೋರ್ಸ್’.
ನಿಮಗೆ ಇದು ಸಿಕ್ಕ ಕತೆ ಹೇಳುತ್ತೇನೆ ಕೇಳಿ.
‘ಬೆಟ್ಟದ ಜೀವ’ ಚಲನಚಿತ್ರದ ನಂತರ ಸುಮಾರು ಒಂದು ವರ್ಷಗಳ ಕಾಲ ನಾನು ಯಾವುದೇ ಸಿನಿಮಾ ಮಾಡಿರಲಿಲ್ಲ. ಸುಮ್ಮನೇ ಕತೆ, ಕಾದಂಬರಿಗಳನ್ನು ಓದುತ್ತಿದ್ದೆ.
ಮೂರು-ನಾಲ್ಕು ಸಣ್ಣ ಕತೆಗಳು ನನಗೆ ಸಿನಮಾದ ಸಾಧ್ಯತೆಯನ್ನು ಕಾಣಿಸಿದ್ದರೂ ಕೂಡ ಸಂಪೂರ್ಣವಾಗಿ ಕೆಣಕಿರಲಿಲ್ಲ.
ಕಳೆದ ವರ್ಷ ಸಪ್ಟೆಂಬರ್ ಹದಿನಾಲ್ಕನೇ ತಾರೀಖು.
ದೆಹಲಿಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಒಂದು ಪ್ರಮುಖ ನಿರ್ಧಾರ ಹೊರಬಂತು.
ಭಾರತದ ಆರ್ಥಿಕ ಸುಧಾರಣೆಯ ನೆಪದಲ್ಲಿ ‘ಬಹುಬ್ರಾಂಡ್ ಚಿಲ್ಲರೆ ವಲಯದಲ್ಲಿ ಶೇಕಡ 51 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಲಾಯಿತು’. ಈ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದ್ದಂತೆಯೇ ಇದರ ‘ಪರ’ ಮತ್ತು ‘ವಿರೋಧ’ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕ್ಷಿಪ್ರವಾಗಿ ಆರಂಭವಾದವು… ನಾನು ಇದನ್ನೆಲ್ಲ ಕುತೂಹಲದಿಂದ ಗಮನಿಸುತ್ತಿದ್ದೆ.
ಒಂದು ಬೆಳಗ್ಗೆ, ನನ್ನ ಮಗನನ್ನು ಟ್ಯೂಷನ್‌ನಿಂದ ಮನೆಗೆ ಕರೆದುಕೊಂಡು ಬರಲು ಹೋಗಿದ್ದೆ. ಇನ್ನೂ ಅವನ ಕ್ಲಾಸ್ ಬಿಟ್ಟಿರಲಿಲ್ಲ. ಹಾಗಾಗಿ ರಸ್ತೆಬದಿಯಲ್ಲಿ ಕಾದಿದ್ದೆ. ಅಲ್ಲೇ ಬದಿಯಲ್ಲಿ ಒಂದು ಪುಟ್ಟ ಕಿರಾಣಿ ಅಂಗಡಿ ಇತ್ತು. ವಯಸ್ಸಾದ ವ್ಯಕ್ತಿಯೊಬ್ಬರು ಗಲ್ಲದಲ್ಲಿಕುಳಿತಿದ್ದರು. ನಿಸ್ತೇಜ ಕಳೆ. ಅಂಗಡಿಯಲ್ಲಿ ಯಾವುದೇ ಆಕರ್ಷಣೆ ಇರಲಿಲ್ಲ. ಮುಂದೆ ಸಾಲಾಗಿ ಜೋಡಿಸಿದ್ದ ಗಾಜಿನ ಶೀಶೆಯಲ್ಲಿ ಚಾಕಲೆಟ್‌ಗಳು, ಪೆಪ್ಪರ್‌ಮೆಂಟ್‌ಗಳು, ತೂಗುಬಿದ್ದ ಪ್ಲಾಸ್ಟಿಕ್ ಚೀಲದಿಂದ ಕರಿದ ತಿಂಡಿ-ಬೋಟಿ, ಮೂಲೆಯಲ್ಲಿ ಕಟ್ಟಿದ್ದ ಒಂದು ಮಾಸಲು ಮಾಸಲಾದ ಬಾಳೆಗೊನೆ, ಹೊರಗೆ ಚೀಲದಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಪೊರಕೆ ಕಟ್ಟು, ಒಳಗೆ ಒಂದಿಷ್ಟು ಸಾಮಗ್ರಿ ಜೊತೆಯಲ್ಲಿ ದಂಡಿಯಾಗಿ ಕತ್ತಲು, ಕತ್ತಲು… ಅವರನ್ನು ನೋಡಿದರೆ ನಮ್ಮೂರಿನ ಶೆಟ್ಟರ ಅಂಗಡಿ ನೆನಪಿಗೆ ಬರುತ್ತಿತ್ತು. ಆದರೆ ಇಲ್ಲಿ ಯಾವುದೇ ಚಟುವಟಿಕೆ ಇರಲಿಲ್ಲ…
‘ಭಾರತ್ ಸ್ಟೋರ್ಸ್’ ಹುಟ್ಟಿದ್ದು ಆಗಲೇ.
ತಕ್ಷಣವೇ ದತ್ತಣ್ಣನಿಗೆ ಫೋನ್ ಮಾಡಿದೆ.
‘ನನಗೆ ಕತೆ ಹುಟ್ಟಿತು ಅಣ್ಣ’ ಎಂದೆ.
‘ಹೌದೇ! ಕಂಗ್ರಾಜ್ಯುಲೇಷನ್ಸ್.. ಮಗು ಹೇಗಿದೆ?’ ಎಂದರು.
ನಾನು ವರ್ಣಿಸಿದೆ.
‘ಗುಡ್! ಇದು ಬರ್ನಿಂಗ್ ಪ್ರಾಬ್ಲಂ ಕಣಯ್ಯ’ ಎಂದರು.
ನಂತರ ನನ್ನ ಸ್ನೇಹಿತ ಪ್ರಹ್ಲಾದ್‌ಗೆ ಫೋನ್ ಮಾಡಿದೆ. ಅವನೂ ಹೊಳಹು ಚನ್ನಾಗಿದೆ ಅಂದ.
ಕತೆಗಾರ ಗೋಪಾಲಕೃಷ್ಣ ಪೈಗೆ ಕರೆ ಮಾಡಿದೆ ಅವರೂ ಬೆನ್ನುತಟ್ಟಿದರು.
ಕೊನೆಯದಾಗಿ ಗಿರೀಶ್ ಕಾಸರವಳ್ಳಿಯ ಮುಂದೆ ನನ್ನ ವಸ್ತು ಇಟ್ಟೆ. ಅವರು ಪಾಸ್ ಮಾಡಿದರು.
ಇನ್ನೇಕೆ ತಡ ನನ್ನ ಮಗುವಿಗೆ ಅಂಗಿ, ಕುಲಾವಿ ಹೊಲೆಯತೊಡಗಿದೆ…
ಮೊದಲಿಗೆ ಗೋವಿಂದಶೆಟ್ಟರು(ದತ್ತಾತ್ರೇಯ) ಪ್ರತ್ಯಕ್ಷವಾದರು, ಚಂದ್ರ(ಬಸುಕುಮಾರ್) ಬಂದ, ಮಂಜುನಾಥ(ಪ್ರಸಾದ್ ಚೆರ್ಕಾಡಿ) ಕಂಡ. ಕೊನೆಗೆ ಭಾರತಿ(ಸುಧಾರಾಣಿ), ಶರತ್(ಚಿ.ಗುರುದತ್) ಸೇರಿಕೊಂಡರು… ಹೀಗೆ ಮಗು ದಷ್ಟಪುಷ್ಟವಾಗಿ ಬೆಳೆಯ ತೊಡಗಿತು.
ವಾರಕ್ಕೊಮ್ಮೆ ಫೋನ್ ಮಾಡಿ, ‘ಸಿನಿಮಾ ಯಾವಾಗ ಮಾಡ್ತೀರಿ ಸಾಹೇಬ್ರೆ?’ ಎಂದು ಕೇಳುವುದು ನಮ್ಮ ಹೆಮ್ಮೆಯ ನಿರ್ಮಾಪಕ ಬಸಂತ್‌ಕುಮಾರ್ ಪಾಟೀಲರ ಧಾಟಿ. ಆವತ್ತು ಅವರು ಫೋನ್ ಮಾಡಿದರು.
ನಾನು, ‘ಶಾಲೆಗೆ ಸೇರಿಸಬೇಕಿದೆ, ಕಾದಿದ್ದೇನೆ’ ಎಂದೆ.
‘ಅದರ ಖರ್ಚು ವೆಚ್ಚ ನನಗಿರಲಿ, ನೀವು ಚಿಂತೆ ಮಾಡಬೇಡಿ’ ಎಂದು ಹಸಿರು ಬಾವುಟ ತೋರಿದರು.
ಮುಂದಿನದು ಇತಿಹಾಸ.
***
‘ಭಾರತ್‌ಸ್ಟೋರ್ಸ್’ ಕಥೆ ಸ್ಥೂಲವಾಗಿ ಹೀಗಿದೆ:
ಆಕೆ ಭಾರತಿ. ಸುಮಾರು ಒಂಬತ್ತು ವರ್ಷಗಳ ನಂತರ ಅಮೆರಿಕಾದಿಂದ ಗಂಡ ಶರತ್‌ನೊಂದಿಗೆ ಬೆಂಗಳೂರಿಗೆ ಬಂದಿದ್ದಾಳೆ. ಆಕೆಯ ಉದ್ದೇಶ ತನ್ನ ತಂದೆಯ ಸ್ನೇಹಿತ ಗೋವಿಂದಶೆಟ್ಟಿಯನ್ನು ಭೇಟಿಯಾಗಿ ಋಣ ಸಂದಾಯ ಮಾಡುವುದು.
‘ಭಾರತ್ ಸ್ಟೋರ್ಸ್’ ಎಂಬುದು ಗೋವಿಂದಶೆಟ್ಟಿ ನಡೆಸುತ್ತಿದ್ದ ಒಂದು ಪುಟ್ಟ ಕಿರಾಣಿ ಅಂಗಡಿ. ಒಂದು ಕಾಲದಲ್ಲಿ ಅದರ ಖ್ಯಾತಿಯಿಂದಾಗಿಯೇ ಆ ಬಸ್‌ನಿಲ್ದಾಣಕ್ಕೆ ‘ಭಾರತ್ ಸ್ಟೋರ್ಸ್ ಸ್ಟಾಪ್’ ಎಂದು ಹೆಸರು ಬಂದಿತ್ತು! ಗೋವಿಂದಶೆಟ್ಟಿಯನ್ನು ಹುಡುಕಿಕೊಂಡು ಬಂದ ಭಾರತಿಗೆ ಭಾರತ್ ಸ್ಟೋರ್ಸ್ ಹೆಸರಿನ ನಿಲ್ದಾಣ ಸಿಗುತ್ತದೆ, ಆದರೆ ಅಂಗಡಿಯಾಗಲಿ, ಶೆಟ್ಟಿಯಾಗಲಿ ಸಿಗುವುದಿಲ್ಲ!
ಶೆಟ್ಟಿಯ ಪತ್ತೆಯನ್ನು ಹುಡುಕುತ್ತಾ ಹೋದವಳಿಗೆ ಆತನ ಅಂಗಡಿಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಚಂದ್ರ ಮತ್ತು ಮಂಜುನಾಥ ಸಿಗುತ್ತಾರೆ. ಶೆಟ್ಟಿಯನ್ನು ತೀರ ಹತ್ತಿರದಿಂದ ಕಂಡ ಅವರಿಬ್ಬರು ಶೆಟ್ಟಿಯ ಒಂದೊಂದು ಹಂತದ ಕತೆಯನ್ನು ಹೇಳತೊಡಗುತ್ತಾರೆ. ಅದರ ಮೂಲಕ ಶೆಟ್ಟಿಯ ಕಿರಾಣಿ ಅಂಗಡಿಯ ವ್ಯಾಪಾರ, ಆತ ಮತ್ತು ಗಿರಾಕಿಗಳ ಸಂಬಂಧ, ಆತನ ಕುಟುಂಬ, ಅಲ್ಲಿನ ಆಗು-ಹೋಗುಗಳು ಎಲ್ಲವೂ ಪರಿಚಯವಾಗುತ್ತವೆ…
ಕೊನೆಗೆ ಭಾರತಿ ಗೋವಿಂದಶೆಟ್ಟಿಯನ್ನು ತುಂಬ ದಯನೀಯ ಸ್ಥಿತಿಯಲ್ಲಿ ಭೇಟಿಯಾಗುತ್ತಾಳೆ…
***
ಇದೇ ತಿಂಗಳು ಹದಿನೆಂಟನೇ ತಾರೀಖು ಮಧ್ಯಾಹ್ನ ಮೂರುಗಂಟೆ. ಸ್ನೇಹಿತರೊಬ್ಬರು ಫೋನ್ ಮಾಡಿ ಟಿವಿ ಆನ್ ಮಾಡಿ ಎಂದರು. ಮಾಡಿದೆ. ಭಾರತದ ಅರವತ್ತನೇ ರಾಷ್ಟ್ರಪ್ರಶಸ್ತಿಗಳು ಪ್ರಕಟವಾದ ಸುದ್ದಿ ಬರುತ್ತಿತ್ತು.
‘ಭಾರತ್ ಸ್ಟೋರ್ಸ್ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರಪ್ರಶಸ್ತಿ’ ಎಂಬ ಸುದ್ದಿಯನ್ನು ನ್ಯೂಸ್ ಚಾನಲ್‌ಗಳು ಬಿತ್ತರಿಸುತ್ತಿದ್ದವು.
ನಮ್ಮ ಮಗು ಡಿಸ್ಟಿನ್ಕ್ಷನ್‌ನಲ್ಲಿ ಪಾಸಾಗಿತ್ತು!
(ಇದು ‘ವಿಜಯವಾಣಿ’ಯಲ್ಲಿ ಮಾರ್ಚ್ 24, 2013 ರಂದು ಪ್ರಕಟವಾದ ಲೇಖನ)
- Posted in: Uncategorized