ಪಿ. ಶೇಷಾದ್ರಿ

ಕಂಡಿದ್ದು ಕಂಡಂತೆ…

ಬೊಳುವಾರರ ಮಹಾ ಓಟ!

(ವಿಲನ್ ಇಲ್ಲದಿರುವುದೊಂದೇ ಈ ಕಾದಂಬರಿಯ ಕೊರತೆ!)

(ಈಗ ಅವರ ಕೂದಲು ಬೆಳ್ಳಗಾಗಿದೆ!)
ಕೆಲ ವರ್ಷದ ಹಿಂದಿನ ನೆನಪು ಇದು. ಒಂದು ದಿನ ಬೊಳುವಾರು ದಂಪತಿಗಳು ಮನೆಗೆ ಬಂದಿದ್ದರು. ಪ್ರಾಸಂಗಿಕವಾಗಿ ಅದೂ ಇದೂ ಮಾತನಾಡುತ್ತಾ ನನ್ನ ಮುಂದಿನ ಚಿತ್ರದ ಬಗ್ಗೆ ಕೇಳಿದರು. ಅಷ್ಟರಲ್ಲಾಗಲೇ ನಾನು ‘ಮುನ್ನುಡಿ’, ‘ಅತಿಥಿ’ ಮತ್ತು ‘ಬೇರು’ ಚಿತ್ರ ಮಾಡಿದ್ದೆ. ನಾನು ಹೊಸ ಕತೆಯ ಹುಡುಕಾಟದಲ್ಲಿ ಇರುವ ವಿಚಾರ ಹೇಳಿದೆ. ‘ನಿಮಗೆ ಹೇಗೂ ಮುನ್ನುಡಿಯಲ್ಲಿ ನನ್ನೊಂದಿಗಿದ್ದು ಅನುಭವವಿದೆಯಲ್ಲಾ, ಮುಂದಿನ ಸಿನಿಮಾಗೆ ಒಂದು ಒಳ್ಳೇ ಕತೆ ಬರೆದುಕೊಡಿ’ ಎಂದೆ. ‘ನಾನು ಬ್ಯಾಂಕಿನ ಕೆಲಸ ಬಿಡುವವರೆಗೆ ಪೆನ್ನು ಮುಟ್ಟುವುದಿಲ್ಲ ಎಂದು ಶಪಥ ಮಾಡಿದ್ದೇನೆ’ ಎಂದರು. ಅವರದ್ದು ಯಾವಾಗಲೂ ಕಡ್ಡಿ ಮುರಿದಂತೆ ಮಾತು. ಆದರೆ ಅವರ ಮನಸ್ಸು ಬೆಣ್ಣೆ. ಇಪ್ಪತ್ತು ವರ್ಷದಿಂದ ಅವರನ್ನು ಹತ್ತಿರದಿಂದ ಬಲ್ಲ ನಾನು ಅವರ ಮಾತಿನ ಚುರುಕೇಟನ್ನು ಎಂಜಾಯ್ ಮಾಡುತ್ತೇನೆಯೇ ಹೊರತು ತಲೆಕೆಡಿಸಿಕೊಳ್ಳುವುದಿಲ್ಲ.

‘ಹೋಗಲಿ, ನಿಮ್ಮ ಹಳೇ ಕತೆಗಳಲ್ಲಿ ಯಾವುದಾದರು ಒಂದನ್ನು ಸಜೆಸ್ಟ್ ಮಾಡಿ’ ಎಂದೆ. ‘ನನಗೆ ಅದೆಲ್ಲಾ ಗೊತ್ತಾಗುವುದಿಲ್ಲಪ್ಪ’ ಎಂದು ಕೈಯಾಡಿಸಿದರು. ‘ಹೋಗಲಿ ನಿಮಗೆ ಇಷ್ಟವಾಗುವ ಒಂದು ಕತೆ ಹೇಳಿ’ ಎಂದೆ
‘ಸ್ವಾತಂತ್ರ್ಯದ ಓಟ’ ಎಂದರು.
‘ಸರಿ ಅದೇ ಕತೆಯನ್ನು ನಾನು ಸಿನಿಮಾ ಮಾಡುತ್ತೇನೆ’ ಎಂದೆ ನಾನು. ‘ಆ ಕತೆ ಓದಿದ್ದೀರ ನೀವು?’ ಖಾರವಾಗಿಯೇ ಇತ್ತು ಅವರ ಪ್ರಶ್ನೆ. ‘ಹುಂ, ಅದು ಪಾರ್ಟಿಷನ್ ಸಂದರ್ಭದ ಕತೆ ಅಲ್ಲವೆ? ಬಹಳ ಹಿಂದೆ ಓದಿದ ನೆನಪು… ಎಲ್ಲಿ ಒಮ್ಮೆ ಆದರ ಕತೆ ಹೇಳಿ…’ ಎಂದೆ.

ಬೊಳುವಾರು 1947ರ ಫ್ಲ್ಯಾಷ್‌ಬ್ಯಾಕ್‌ಗೆ ಜಾರಿದರು. ಕರಾಚಿಯ ಯಾವುದೋ ಒಂದು ಶಾಲೆಯ ಬಯಲಲ್ಲಿ ಆರ್.ಎಸ್.ಎಸ್ ಹುಡುಗರು ಕವಾಯತು ನಡೆಸುತ್ತಿರುವಲ್ಲಿಂದ ಕತೆ ಶುರುವಾಯಿತು. ಕವಾಯತು ಮುಗಿಸಿದವರ ಜೊತೆಗೆ ಆಟವಾಡುತ್ತಿರುವ ಒಬ್ಬ ಹತ್ತು ಹನ್ನೆರಡು ವರ್ಷದ ಮುಸ್ಲಿಮ್ ಹುಡುಗನನ್ನು, ಅವನ ಪೋಷಕರು ಅಲ್ಲಿಂದ ಎಳೆದುಕೊಂಡು ಹೋಗುವ ಘಟನೆ ವಿವರಿಸುತ್ತಿದ್ದಂತೆ ನನಗೆ ಅರ್ಥವಾಗಿತ್ತು; ನಾನು ಸಿನೆಮಾ ಮಾಡಬಾರದು ಎಂಬ ಸ್ಪಷ್ಟ ಉದ್ದೇಶದಿಂದಲೇ ಬೊಳುವಾರು ತನ್ನ ಕತೆಯನ್ನು ಆರ್.ಎಸ್.ಎಸ್. ಕ್ಯಾಂಪಿನಿಂದ ಶುರು ಮಾಡುತ್ತಿದ್ದಾರೆ ಎಂದು. ಆದರೂ ನಾನು ಆಸಕ್ತಿಯಿಂದ ಕೇಳುವವನಂತೆ ನಟಿಸುತ್ತಿದ್ದೆ. ಅವರು ಕತೆ ಹೇಳುವುದದರಲ್ಲಿ ಮುಳುಗಿದ್ದರು.
ಬೊಳುವಾರರ ಜೊತೆಗೆ ಹರಟುವ ಗೆಳೆಯರಿಗೆ ಗೊತ್ತು. ಅವರ ಮಾತು ಕೇಳುವುದೇ ಒಂದು ಸೊಗಸು. ಅದರಲ್ಲೂ ಅವರ ಬಾಯಿಯಿಂದ ಕತೆ ಕೇಳುವುದೆಂದರೆ, ಲೊಕೇಶನ್‌ನಲ್ಲಿ ಫಿಲ್ಮ್ ಶೂಟಿಂಗ್ ಸ್ಕ್ರಿಪ್ಟ್ ಕೇಳುವಂತಿರುತ್ತದೆ. ಎಡಕ್ಕೆ ಯಾವನಿದ್ದ, ಬಲಕ್ಕೆ ಯಾವನಿರುತ್ತಾನೆ, ಅವನ ಕಣ್ಣುಗಳು ಏನನ್ನು ನೋಡಬೇಕು, ಪಕ್ಕದವನ ರಿಯಾಕ್ಷನ್ ಏನು ಎಂಬುದನ್ನೆಲ್ಲ ಕಣ್ಣಿಗೆ ಕಟ್ಟುವಂತೆ ಬಣ್ಣಿಸುತ್ತಾರೆ. ಸಿನೆಮಾ ಆಗಲಿ ಆಗದಿರಲಿ, ಕತೆಯಂತೂ ಕುತೂಹಲ ಕೆರಳಿಸುವಂತಿತ್ತು.
ಐದೇ ನಿಮಿಷದಲ್ಲಿ ಕತೆಯ ಲೊಕೇಶನ್ ಕರಾಚಿಯಿಂದ ಬಹಳ ದೂರದ ಲಾಹೋರು ಪ್ರಾಂತ್ಯದ ಬಹವಾಲಪುರಕ್ಕೆ ಶಿಪ್ಟ್ ಆಗಿತ್ತು. ‘ಇದು ನಿಮ್ಮ ಕತೆಯಲ್ಲಿ ಇದ್ದಿರಲಿಲ್ಲವಲ್ಲಾ’ ಎಂದೆ. ‘ಆವತ್ತಿನ ಕತೆಯಲ್ಲಿ ಇರಲಿಲ್ಲವಾದರೆ ಈವತ್ತು ಇರಬಾರದಾ? ಕತೆಗಳಲ್ಲಿ ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲವೆಂದು ನಾನೇನು ಪ್ರಮಾಣ ಮಾಡಿಲ್ಲವಲ್ಲಾ? ನಿಮಗೆ ಬದಲಾವಣೆಯಲ್ಲಿ ನಂಬಿಕೆ ಇಲ್ಲವೆಂದಾದರೆ ನಾಳೆ ಪ್ರಿಂಟೆಡ್ ಕತೆ ಕಳಿಸ್ತೇನೆ, ಓದಿ ಆನಂದಿಸಿ’ ಎಂದರು. ನಾನು ‘ಮುಂದುವರಿಸಿ ಮಾರಾಯರೇ’ ಎಂದೆ.
‘ನಿಮಗೆ ಆರೆಸ್ಸಸ್ ಕ್ಯಾಂಪ್ ಬೇಡವಾದರೆ ‘ನಿರಾಶ್ರಿತರ ಕ್ಯಾಂಪ್’ನಿಂದ ಶುರು ಮಾಡುತ್ತೇನೆ ಎಂದರು. ‘ಮೊಹಿಂದರ್ ಭಾಬಿ ಎಂಬ ಹೆಸರು ಹೇಗಿದೆ?’ ಎಂದು ಪ್ರಶ್ನಿಸಿದರು. ‘ಚೆನ್ನಾಗಿದೆ’ ಎಂದೆ. ‘ತನ್ವೀರ್?’ ಎಂದರು. ‘ಇದೂ ಚೆನ್ನಾಗಿದೆ’ ಎಂದೆ. ಒಮ್ಮೆಲೆ ಮಾತು ಮರೆತವರಂತೆ ಮೌನವಾದರು. ಸುಮ್ಮನೆ ಕೂತರು. ಮುನ್ನುಡಿ ಸ್ಕ್ರಿಪ್ಟ್ ಮಾಡುತ್ತಿರುವಾಗಲೂ ಹಾಗೆಯೇ. ಲೋಕಾಭಿರಾಮ ಮಾತಾಡುತ್ತಿರುವಾಗ ಎದುರಿದ್ದವರನ್ನೆಲ್ಲ ಹುಚ್ಚು ಹಿಡಿಸುವಂತೆ ನಗಿಸುವ ಈ ಬೊಳುವಾರು, ಕತೆ ಹೇಳುವಾಗ, ಅದನ್ನು ಅನುಭವಿಸುತ್ತಾ ಕಣ್ಣೀರು ಹಾಕಲು ಆರಂಭಿಸುತ್ತಾರೆ. ನನಗೊತ್ತಿತ್ತು ಇವರು ಯಾವುದೋ ಗಟ್ಟಿಯಾದುದನ್ನೇ ಕತೆಯಾಗಿ ಹೇಳುತ್ತಿದ್ದಾರೆಂದು. ನಾನು ಸುಮ್ಮನೆ ಕುಳಿತೆ.
ಅವರು ನಕ್ಕರು.
‘ವಿಭಜನೆಯ ದಿನಗಳಲ್ಲಿ ನಾವಿಬ್ಬರು ಒಂದೇ ಗಲ್ಲಿಯಲ್ಲಿ ಬದುಕುತ್ತಿದ್ದ ಗೆಳೆಯರಾಗಿರುತ್ತಿದ್ದರೆ, ನಾವೂ ಪರಸ್ಪರ ತಲವಾರು ಬೀಸುತ್ತಿದ್ದೆವು ಅಂತ ನಿಮಗೆ ಈಗ ಯೋಚನೆ ಮಾಡಲು ಸಾಧ್ಯವಾ?’ ಎಂದು ಪ್ರಶ್ನಿಸಿದಾಗ ನಾನು ಉದ್ದೇಶಪೂರ್ವಕವಾಗಿ, ‘ಗೊತ್ತಿಲ್ಲ’ ಎಂದೆ. ‘ನಿಮಗೆ ಹೆಣ್ಣು ಮಕ್ಕಳಿಲ್ಲ, ನಿಮ್ಮ ಹೆಣ್ಣು ಮಕ್ಕಳನ್ನು ನಿಮ್ಮೆದುರೇ ಕೆಡಿಸುತ್ತಿರುವಾಗ, ನೀವು ಭಜನೆ ಮಾಡುತ್ತಾ ಕುಳಿತುಕೊಳ್ಳುತ್ತಿದ್ದಿರಾ?’
‘ಅದೆಲ್ಲ ಹೋಗಲಿ ನೀವು ಕತೆ ಮುಂದುವರಿಸಿ’ ಎಂದೆ.
ಹೇಳಿದರು.
ನನ್ನ ಕಣ್ಣುಗಳೂ ಮಂಜಾಗತೊಡಗಿದ್ದವು.
ಸುಮಾರು ಅರ್ಧ ತಾಸಿನಲ್ಲಿ ಅವರು ಹೇಳಿದ್ದ ಕತೆ ಎಂತಹ ಕಲ್ಲು ಮನಸ್ಸುಗಳನ್ನೂ ಕರಗಿಸುವಂತಿತ್ತು. ವಿಭಜನೆಯ ಸಂದರ್ಭದಲ್ಲಿ ಚಾಂದ್ ಅಲೀಗೆ ಹದಿನೆಂಟು. ಅವನ ಸರ್ದಾರ್ಜಿ ಯಜಮಾನನ ಹೆಂಡತಿ ಮೊಹಿಂದರ್ ಭಾಬಿಗೆ ಒಂದಿಪ್ಪತ್ತು, ಆಕೆಯ ಸೋದರಿ ತನ್ವೀರಳಿಗೆ ಅವನದ್ದೇ ಪ್ರಾಯ. ಭಾರತ ಮತ್ತು ಪಾಕಿಸ್ತಾನದ ನಡುವೆ ಹೊತ್ತಿಕೊಂಡ ದಳ್ಳುರಿ. ಅಲ್ಲಿಯ ಹಿಂದೂಗಳು, ಇಲ್ಲಿಯ ಮುಸಲ್ಮಾನರ ತಲ್ಲಣಗಳು… ಹಿಂದೂ ಹೆಣ್ಣುಮಕ್ಕಳನ್ನು ಸುರಕ್ಷಿತವಾಗಿ ಪಾಕಿಸ್ತಾನದ ಗಡಿ ದಾಟಿಸಲು ಹೊರಟ ಚಾಂದ್ ಅಲೀ ಆಕಸ್ಮಿಕವಾಗಿ ಭಾರದ ಗಡಿಯೊಳಕ್ಕೆ ಬಂದದ್ದು, ಹಿಂತಿರುಗಿ ಹೋಗದ ಪರಿಸ್ಥಿತಿ ನಿರ್ಮಾಣವಾದದ್ದು…. ನಿರಾಶ್ರಿತ ಶಿಬಿರದಲ್ಲಿನ ದಿನಗಳು… ಶಿಬಿರದಿಂದ ಹೊರಟ ಮೊಹಿಂದರ್, ತನ್ವೀರ್ ಮತ್ತು ಚಾಂದ್ ಆಲೀ… ಬಂಧುಗಳನ್ನು ಹುಡುಕುತ್ತಾ ಬಂದು ತಲಪಿದ್ದು ದೆಹಲಿಯ ರೈಲು ನಿಲ್ದಾಣಕ್ಕೆ. ಅಲ್ಲಿ ನಡೆದ ವಿಚಿತ್ರ ಘಟನೆಗಳು… ಚಾಂದ್ ಆಲೀ ಅನಾಥನಾದದ್ದು ಅಲ್ಲಿವರೆಗೆ ಬಂದು ನಿಂತಿತು. ಅಷ್ಟರಲ್ಲಿ ನನ್ನ ಕಣ್ಣ ಮುಂದೆ ನನ್ನದೇ ಆದ ಚಾಂದ್ ಆಲೀ ರೂಪುಗೊಂಡಿದ್ದ. ಕತೆ ಹೇಳಿ ಮುಗಿಸಿದ್ದ ಬೊಳುವಾರು ಹೇಳಿದರು, ‘ಇದು ಕತೆ, ಇದನ್ನು ಸಿನಿಮಾ ಮಾಡಬೇಕಾದರೆ ನೀವು ಪಾಕಿಸ್ತಾನಕ್ಕೆ ಹೋಗಬೇಕು. ನಿಮಗೆ ವೀಸಾ ಯಾರು ಕೊಡುತ್ತಾರೆ ಸ್ವಾಮಿ?’ ನಾನು ತಮಾಷೆಯಾಗಿ, ‘ಇಲ್ಲೇ ಪಾಕಿಸ್ತಾನವನ್ನು ಕ್ರಿಯೇಟ್ ಮಾಡುತ್ತೇನೆ’ ಎಂದೆ. ‘ನಿಮಗೆ ಇದುವರೆಗೆ ಹಿಂದೂಸ್ತಾನವನ್ನೂ ಕ್ರಿಯೇಟ್ ಮಾಡಲು ಸಾಧ್ಯವಾಗಿಲ್ಲ, ನಿಮಗೆಲ್ಲೋ ಭ್ರಾಂತು’ ಎಂದು ನಕ್ಕರು ಬೊಳುವಾರು. ಅವರು ಅಪರೂಪಕ್ಕೆಂಬಂತೆ ಜೋರಾಗಿ ನಕ್ಕರು. ಎದುರಿಗಿದ್ದವರನ್ನೆಲ್ಲ ಮಾತು ಮಾತಿಗೂ ನಗಿಸುವ ಅವರು ಮಾತ್ರ ನಗುವುದೇ ಇಲ್ಲ. ‘ಮುನ್ನುಡಿ’ ಸಿನೆಮಾದ ದಿನಗಳಲ್ಲಿ ಅವರದೊಂದು ನಗುವ ಫೊಟೋ ಹಿಡಿಯುವಷ್ಟರಲ್ಲಿ ನಮ್ಮ ಕ್ಯಾಮರಾಮನ್ ಕಣ್ಣೀರು ಹಾಕಿದ್ದ.
‘ಏನಿಲ್ಲ, ನಿಮ್ಮ ಸ್ವಾತಂತ್ರ್ಯದ ಓಟವನ್ನು ನಾನು ಸಾಯುವದರೊಳಗೆ ಸಿನಿಮಾ ಮಾಡಿಯೇ ತೀರುತ್ತೇನೆ’ ಎಂದು ನಾನು ಕೂಡ ಅಷ್ಟೇ ತಮಾಷೆಯಾಗಿ ಹೇಳಿ, ಪರ್ಸಿನಿಂದ ಒಂದು ರೂಪಾಯಿಯ ನೋಟನ್ನು ತೆಗೆದು ಕೊಡುತ್ತಾ, ‘ಇದೇ ಅದರ ಅಡ್ವಾನ್ಸ್, ತೆಗೆದುಕೊಳ್ಳಿ’ ಎಂದೆ. ಅವರು ಮರು ಮಾತಾಡದೆ ಆ ನೋಟನ್ನು ಕಿಸೆಗಿರಿಸಿದರು. ಅದನ್ನು ಅವರು ಖರ್ಚು ಮಾಡುವಂತಿರಲಿಲ್ಲ. ಏಕೆಂದರೆ ಅಷ್ಟರಲ್ಲಾಗಲೇ ಒಂದು ರೂಪಾಯಿ ನೋಟಿನ ಚಲಾವಣೆ ನಿಂತಿತ್ತು!
ಇದೆಲ್ಲ ಆದ ನಂತರ ವರ್ಷಗಳಲ್ಲಿ ನಾನು ಮತ್ತೆ ‘ತುತ್ತೂರಿ’, ‘ವಿಮುಕ್ತಿ’ ಮತ್ತು ‘ಬೆಟ್ಟದಜೀವ’ ಸಿನಿಮಾಗಳನ್ನು ಮಾಡಿದೆ.

ಎರಡು ವರ್ಷದ ಹಿಂದೆ ಒಂದು ದಿನ ಬೊಳುವಾರು, ‘ನನ್ನ ಸ್ವಾತಂತ್ರ್ಯದ ಓಟ’ ಕಾದಂಬರಿಯಾಗುತ್ತಿದೆ ಎಂದರು.
‘ಒಳ್ಳೆಯದೇ ಆಯಿತು. ನನ್ನ ಸಿನಿಮಾಗೆ ಇನ್ನಷ್ಟು ಸರಕು ಸಿಕ್ಕಂತಾಯಿತು ಬೇಗ ಬೇಗ ಮಾಡಿ’ ಎಂದೆ.
ನನಗೆ ಗೊತ್ತಿದ್ದಂತೆ ಅವರ ಮನಸ್ಸಿನಲ್ಲಿದ್ದದ್ದು ಸುಮಾರು ಇನ್ನೂರು ಇನ್ನೂರೈವತ್ತು ಪುಟದ ಕಾದಂಬರಿ ಇರಬೇಕು. ‘ನನಗೆ ಬ್ಯಾಂಕಿನಿಂದ ಮುಂದಿನ ವರ್ಷ ಅಕ್ಟೋಬರಿಗೆ ಬಿಡುಗಡೆಯಾಗುತ್ತದೆ. ಇನ್ನು ಸುಮಾರು ಎರಡು ವರ್ಷ ಇದೆ. ನನ್ನ ಬೀಳ್ಕೊಡುಗೆ ಸಮಾರಂಭದಲ್ಲಿಯೇ ಕಾದಂಬರಿ ಬಿಡುಗಡೆ ಮಾಡುತ್ತೇನೆ’ ಎಂದರು. ಬೊಳುವಾರರ ಸಮಯ ಪಾಲನೆಯ ಹಠ ನನಗೆ ಗೊತ್ತಿದ್ದದ್ದೇ. ‘ಮುನ್ನುಡಿ’ ಸಿನೆಮಾ ಮಾಡುತ್ತಿದ್ದಾಗ ಸುಮಾರು ಒಂದು ತಿಂಗಳ ಕಾಲ ರಜ ಹಾಕಿ ನಮ್ಮ ಜೊತೆಗೆ ಇದ್ದ ಅವರನ್ನು, ಆ ಸಿನೆಮಾದ ಕಲಾವಿದರೆಲ್ಲ ನೆನಪಿಟ್ಟುಕೊಂಡಿರುವುದು ಅವರ ಅದೇ ಗುಣಕ್ಕೆ. ಹಿರಿಯ ನಟ ನಟಿಯರಿಗೂ ಇದರಲ್ಲಿ ಯಾವುದೇ ರಿಯಾಯಿತಿ ಇರಲಿಲ್ಲ. ಮುಲಾಜಿಲ್ಲದೆ ನಿದ್ರೆಯಿಂದ ಎಬ್ಬಿಸಿಬಿಡುತ್ತಿದ್ದರು. ಮರುದಿನದ ಶೂಟಿಂಗಿಗೆ ಬೇಕು ಎಂದಾಗ ಒಂದೇ ರಾತ್ರಿಯಲ್ಲಿ, ಚಿತ್ರಕ್ಕೆ ನಾಲ್ಕು ಅದ್ಭುತವಾದ ಹಾಡುಗಳನ್ನು ಬರೆದು ಜೈಸಿಕೊಂಡ ಭೂಪ.
‘ನಾನೊಂದು ಪಥಪರಿವೀಕ್ಷಕರ ಪಟ್ಟಿ ಮಾಡುತ್ತಿದ್ದೇನೆ. ವಾರಕ್ಕೆ ಅಷ್ಟೋ ಇಷ್ಟೋ ಬರೆದು ಕೊಡುವುದನ್ನು 48 ಗಂಟೆಯೊಳಗೆ ಓದಿ ಅಭಿಪ್ರಾಯ ಹೇಳಬೇಕು. ನಿಮ್ಮನ್ನು ಪಟ್ಟಿಯಲ್ಲಿ ಸೇರಿಸಿಕೊಂಡಿದ್ದೇನೆ’ ಎಂದರು. ಬೇಡವೆನ್ನುವ ಆಯ್ಕೆಯನ್ನೂ ನನಗೆ ಉಳಿಸಿರಲಿಲ್ಲ.
ಮೊದಲಿಗೆ ಸುಮಾರು ಐವತ್ತು ಪುಟ ಕಳುಹಿಸಿದರು. ನಾನು ಓದಿದೆ. ಕುತೂಹಲವಿತ್ತು. ಫೋನಿನಲ್ಲೇ ಚರ್ಚೆ ಮಾಡಿದೆವು. ಮುಂದೆ ಸುಮಾರು ಎರಡು ವರ್ಷಗಳ ಕಾಲ ಅವರು ಕಳುಹಿಸುವುದು, ನಾನು ಓದುವುದು. ಫೋನು ಮಾಡುವುದು ನಡೆದೇ ಇತ್ತು. ಹೀಗೇ ನಡೆದುಕೊಂಡು ಬಂದು ಸಾವಿರ ದಾಟಿತು! ಅವರ ‘ಸ್ವಾತಂತ್ರ್ಯದ ಓಟ’ದ ಪ್ರತಿ ಪುಟಗಳಲ್ಲೂ ಕುತೂಹಲವಿತ್ತು. ಲೇಖಕನ ಪ್ರವೇಶವಿಲ್ಲದ ಘಟನೆಗಳ ಸಾಲು ಸಾಲೇ ಇದ್ದವು. ಮನುಷ್ಯನ ಒಳ್ಳೆಯತನವನ್ನು ಓದುವಾಗ ಅಲ್ಲಲ್ಲಿ ಕಣ್ಣು ನೀರಾಗುತ್ತಿತ್ತು. ಒಳ್ಳೆಯವರನ್ನು ಗಲಿಬಿಲಿಗೊಳಿಸುವ ಘಟನೆಗಳು ಗಾಬರಿ ಹುಟ್ಟಿಸುವಂತಿತ್ತು. ಬರಹದಲ್ಲಿ ತಮಾಷೆಯಿತ್ತು, ಸಿಟ್ಟು ಇತ್ತು, ಅವೆಲ್ಲವುಗಳ ನಡುವೆ ಅದ್ಭುತವಾದ ಮನುಷ್ಯರು ಇದ್ದರು. ಅಚ್ಚರಿಯೆಂದರೆ ಸಾವಿರ ಪುಟಗಳ ಕಾಂದಂಬರಿಯಲ್ಲಿ ಹುಡುಕಿದರೂ ಒಂದು ಕೆಟ್ಟ ಹೆಣ್ಣು ಇರಲಿಲ್ಲ! ಇಡೀ ದೇಶದ ಎಲ್ಲ ಗ್ರಾಮಗಳೂ ಅವರ ಕನಸಿನ ಮುತ್ತುಪ್ಪಾಡಿಯಂತೆ ಇದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಅನ್ನಿಸುತ್ತಿತ್ತು. ನಾನು ಇದನ್ನು ಸಿನಿಮಾ ಮಾಡಬೇಕು ಎಂದರೆ ನೂರು ಪುಟಕ್ಕೆ ಒಂದರಂತೆ ಸುಮಾರು ಹತ್ತು ಸಿನಿಮಾ ಮಾಡಬಹುದು. ಅಷ್ಟೊಂದು ವಿಸ್ತಾರ, ಅಷ್ಟೊಂದು ವಿಚಾರ, ಮುನ್ನೂರರಷ್ಟು ಪಾತ್ರಗಳು. ಇದನ್ನು ಈಗ ಸಿನಿಮಾ ಮಾಡಬೇಕಾದರೆ, ನಾನು ಎಷ್ಟು ರೀಲು ಖರ್ಚು ಮಾಡಬೇಕು, ಎಷ್ಟು ಹಣ ಸುರಿಯಬೇಕು, ಎಷ್ಟು ಪಾತ್ರ ಸೃಷ್ಟಿಸಬೇಕು!
ಇದೆಲ್ಲ ಸಾಧ್ಯವೇ? ‘ಸ್ವಾತಂತ್ರ್ಯದ ಓಟ’ ಸಿನಿಮಾ ಆಗಬಲ್ಲುದೆ? ಒಳ್ಳೆಯ ಸಿನೆಮಾದ ಎಲ್ಲ ಸರಕುಗಳೂ ಇದರಲ್ಲಿವೆ. ಪ್ರೀತಿಯಿದೆ, ಹಾಸ್ಯವಿದೆ, ಕ್ರೌರ್ಯವಿದೆ, ಗಂಭೀರ ಚರ್ಚೆಗಳಿವೆ, ಮನಕಲಕುವ ಸಂಭಾಷಣೆಗಳಿವೆ. ಕಣ್ಣೀರಿಳಿಸುವ ಘಟನೆಗಳಿವೆ. ಗುಂಡು ಹಾರಾಟವಿದೆ. ಹೊಡೆದಾಟಗಳಿವೆ.
ಒಂದೇ ಒಂದು ಕೊರತೆ; ಕಾದಂಬರಿಯಲ್ಲಿ ಸ್ಟ್ರಾಂಗ್ ಆದ ಒಬ್ಬನೇ ಒಬ್ಬ ವಿಲನ್ ಇಲ್ಲದಿರುವುದು!
ಆದರೆ ಒಂದಂತೂ ನಿಜ. ಬೊಳುವಾರರ ಮಹಾ ಕಾದಂಬರಿ ಇದು ನನ್ನ ಕಣ್ಣ ಮುಂದೆ ಒಂದು ಬದುಕನ್ನು ತೆರೆದಿಟ್ಟಿದೆ. ನನ್ನ ಅನುಭವವನ್ನು ವಿಸ್ತಾರಗೊಳಿಸಿದೆ. ಇದು ನಮ್ಮ ರಾಮಾಯಣದ ವಿಸ್ತಾರವನ್ನೂ, ಮಹಾಭಾರತದ ಸಂಕೀರ್ಣತೆಯನ್ನೂ ಹೊಂದಿದೆ. ಇದರ ಓದೇ ಒಂದು ಖುಷಿ ಕೊಡುತ್ತದೆ. ಮಾರ್ಚ್ ಹದಿನೆಂಟಕ್ಕೆ ಈ ಕಾದಂಬರಿಯನ್ನು ಸರೋದ್ ದಿಗ್ಗಜ ಪಂಡಿತ್ ರಾಜೀವ್ ತಾರಾನಾಥರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೆಳಗ್ಗೆ 10 ಗಂಟೆಗೆ ಬಿಡುಗಡೆ ಮಾಡುತ್ತಾರೆ.
ಈ ಕಾದಂಬರಿಯಲ್ಲಿ ನನಗೆ ಇಷ್ಟವಾದ ಎರಡು ಪುಟ್ಟ ಪ್ರಸಂಗಳು ನಿಮಗಾಗಿ, ಈ ಪತ್ರಿಕೆಯೊಂದಿಗೆ, ಉಚಿತವಾಗಿ.


ಪ್ರಸಂಗ-೧

“ಬಿತ್ತಾ?”
“ಇಲ್ಲ”
“ಬಿತ್ತಾ?”
“ಇಲ್ಲ”
“ಈಗ ಬಿತ್ತಾ?”
“ಇಲ್ಲ”
“ಈಗಾ?”
“ಇಲ್ಲ”
“ಏನೂ!? ಈಗ್ಲೂ ಬೀಳ್ಳಿಲ್ವಾ? ”
“ಇಲ್ಲಾ…, ಇಲ್ಲಾ…, ಇಲ್ಲಾ.”
“ಛೇ!.. ಈಗಾ?”
“ಹಾಂ.., ಬಿತ್ತೂ!, ಇಲ್ಲ.. ಇಲ್ಲ.., ಹೋಯ್ತು. ಸ್ವಲ್ಪ ಎಡಕ್ಕೆ ತಿರ್ಗಿಸು ನೋಡ್ವಾ..”
“ಇದು ಕೊನೇದ್ದು, ಇನ್ನು ನನ್ನಿಂದ ಆಗ್ಲಿಕ್ಕಿಲ್ಲ; ಈಗ ಬಿತ್ತಾ?”
“ಇಲ್ಲ”
“ಈಗಾ?”
“ಹಾಂ.., ಬಿತ್ತು! ಸಾಕ್, ಸಾಕ್, ಇನ್ನು ತಿರ್ಗಿಸಬೇಡ. ಹಾಗೇ ಇರ್ಲಿ, ನೀನು ಇಳ್ದು ಬಾ.”
ಮನೆಯ ಬಲಭಾಗದ ಎತ್ತರದ ಮಣ್ಣಿನ ದಿನ್ನೆಯ ಮೇಲೇರಿದ್ದ ಮಾಂಕು ಪೂಜಾರಿಯ ಮೊಮ್ಮಗಳು ಗುಲಾಬಿಯ ಕಣ್ಣುಗಳಲ್ಲಿ ಗೆಲುವಿನ ನಗು ಅರಳಿತು. ಈ ವರ್ಷ ಅವಳು ಐದನೇ ಕ್ಲಾಸ್ ಸ್ಟೂಡೆಂಟ್. ಹೆಚ್ಚು ಕಮ್ಮಿ ಜಾರುತ್ತಲೇ ದಿನ್ನೆಯಿಳಿದು ಅಂಗಳವನ್ನು ಹಾದು ‘ಆಯಿಷಾ ಮಂಜಿಲ್’ ಜಗಲಿಯೇರಿದವಳು ಬಾಗಿಲ ಬಳಿಯೇ ಕುಳಿತುಕೊಂಡಿದ್ದ ಸಣ್ಣತಮ್ಮ ಸಂಜೀವನನ್ನು ಪಕ್ಕಕ್ಕೆ ಸರಿಸಿ, ಅಲ್ಲಿಯೇ ಕುಳಿತುಕೊಂಡಳು. ಆ ಹೊತ್ತಿಗೆ ಸರಿಯಾಗಿ, ತೋಟದಲ್ಲಿ ಎಂದಿನ ಕೆಲಸ ಮುಗಿಸಿಕೊಂಡು ಬೇಲಿ ಸರಿಸಿ ಅಂಗಳಕ್ಕೆ ಕಾಲಿರಿಸಿದ ಚಾಂದಜ್ಜ, ಜಗಲಿಯೇರಿ ಹೊಸ್ತಿಲಿಗಡ್ಡವಾಗಿ ಕುಳಿತಿದ್ದ ಗುಲಾಬಿಯ ರಟ್ಟೆ ಹಿಡಿದು ಬದಿಗೆ ಸರಿಸಿ ಒಳಗೆ ಬಂದವರು, ಬೇಸರದಿಂದ, “ಓಹ್! ಆಗ್ಲೇ ಶುರುವಾಗಿಯೇಬಿಟ್ಟಿತಾ?” ಎಂದು ಗಡಬಡಿಸಿದ್ದರು.
“ಶುರು ಎಂಥದ್ದು?, ಮುಗೀಲಿಕ್ಕೆ ಬಂತು.” ಐಸಮ್ಮ ತಾನು ಕುಳಿತ ಭಂಗಿಯನ್ನು ಎಳ್ಳಷ್ಟೂ ಬದಲಿಸದೆ ಉತ್ತರಿಸಿದರು.
“ಶುರುವಾಗ್ವಾಗ ನನ್ನನ್ನು ಕರೀಬೇಕು ಅಂತ ಎಷ್ಟು ಸರ್ತಿ ಹೇಳ್ಳಿಲ್ಲ ನಿನ್ಗೇ?” ಚಾಂದಜ್ಜನವರಿಗೆ ಎಲ್ಲಿಲ್ಲದ ಕೋಪ ಬಂದಿತ್ತು.
“ನೀವು ಹೇಳ್ಳಿಲ್ಲ ಅಂತ ನಾನು ಯಾವಾಗ ಹೇಳಿದೇ? ನಮ್ಮ ಮನೆಯಲ್ಲಿ ಶುರುವಾದದ್ದೇ ಈಗ; ಅರ್ಧ ಮುಗ್ದ ಮೇಲೆ. ಆ ಕಂಭದ ಮೇಲೆ ಇದ್ದ ಅಡ್ಡಪಟ್ಟಿ ಮತ್ತೆ ತಿರುಗಿತ್ತು. ಅದನ್ನು ಸರಿಮಾಡುವಾಗ ಅರ್ಧ ಮುಗ್ದೇ ಹೋಗಿತ್ತು” ಎಂದು ತಮ್ಮ ನಿರಾಸೆಯನ್ನು ಹೊರಹಾಕಿದ್ದರು ಐಸಮ್ಮ.
ಹಜಾರದ ಎಡ ಭಾಗದಲ್ಲಿದ್ದ ತನ್ನ ನೆಚ್ಚಿನ ಆರಾಮ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾ, “ನಿನ್ಗೆ ನಾನು ಮಗುವಿಗೆ ಹೇಳಿದ ಹಾಗೆ ಹೇಳಿದ್ದೇನಾ ಇಲ್ವಾ? ಮೀನು ಕೊಯ್ದು ಆರಿಸುವ ಕೆಲ್ಸವನ್ನು ಆ ಕಂಭದ ಹತ್ರ ಮಾಡ್ಬೇಡಾ ಅಂತಾ? ಕಾಗೆಗಳು ಆ ಅಡ್ಡಕೋಲಿನ ಮೇಲೆ ಕೂತ್ರೆ ಅದು ತಿರ್ಗದೆ ಇರ್ತದಾ?” ತಪ್ಪೆಲ್ಲ ಹೆಂಡತಿಯದ್ದೇ ಎನ್ನುವಂತೆ ಚಾಂದಜ್ಜ ಹೇಳಿದ್ದರು.
“ಹೌದೌದು, ತಪ್ಪೆಲ್ಲ ನನ್ನದೇ. ನಿಮ್ಗೆ ಎಷ್ಟು ಸರ್ತಿ ದಮ್ಮಯ್ಯ ಹಾಕ್ಲಿಲ್ಲಾ? ಆ ಕಂಭವನ್ನು ಅಲ್ಲಿಂದ ತೆಗ್ದು, ಅಂಗಳದ ಎಡ ಬದಿಯಲ್ಲಿ ಹಾಕ್ಸಿ ಅಂತಾ? ನೀವು ಹೆಂಡ್ತಿ ಮಾತಿಗೆ ಯಾವಾಗ್ಲಾದ್ರೂ ಬೆಲೆ ಕೊಟ್ಟದ್ದು ಉಂಟಾ?” ಸಿಡುಕಿದ್ದರು ಐಸಮ್ಮ. ಹೆಂಡತಿಯ ಮುಖವನ್ನು ನೇರವಾಗಿ ದಿಟ್ಟಿಸುತ್ತಾ, “ಹೆಂಡ್ತಿ ಮಾತಿಗೆ ಬೆಲೆ ಕೊಟ್ರೆ ಏನಾಗ್ತದೆ ಅಂತ ನೀನೇ ನೋಡಿದಿಯಲ್ವಾ? ಬಂಗಾರದಂತ ಮಗ ಮತ್ತು ಸೊಸೆ ಕಾಡಿಗೆ ಹೋಗುವ ಹಾಗೆ ಆಗ್ಲಿಲ್ವಾ?” ವ್ಯಂಗ್ಯವಾಡಿದ್ದರು ಚಾಂದಜ್ಜ.
ಐಸಮ್ಮ ಸುಲಭದಲ್ಲಿ ಸೋಲುವವರಲ್ಲ; ಎಚ್ಚರಿಸುವ ಸ್ವರದಲ್ಲೇ ಹೇಳಿದ್ದರು, “ಎರಡು ಮೂರು ಕಟ್ಟಿಕೊಳ್ಳುವವರಿಗೆ ಅಲ್ಲಾಹು ಕೊಡುವ ಶಿಕ್ಷೆ ಅದು.”

ಪ್ರಸಂಗ-೨

ಗಡಬಡಿಸಿ ಕಿಟಿಕಿಯಿಂದ ಹೊರಗೆ ದಿಟ್ಟಿಸಿದವಳಿಗೆ ಗಾಜಿನ ಆಚೆಗೆ ಏನೂ ಕಾಣಿಸಿದ್ದಿರಲಿಲ್ಲ. ಅವಸರದಿಂದ ಹೊರಗೆ ಬಂದು ಕಣ್ಣು ಹಾಯಿಸಿದಾಗ ‘ಎಲ್ ಕೆಮಿನೋ ರಿಯಲ್’ ಮೇಲೆ ಮುಂಜಾನೆಯ ಮಂಜು ಹತ್ತಿಯ ರಾಶಿಯಂತೆ ಬಿದ್ದುಕೊಂಡದ್ದು ಕಾಣಿಸಿತು. ಕಣ್ಣೆದುರಿನ ಡ್ರೈವ್ ಏರಿಯಾದಲ್ಲಿ ಹಾರುವ ತಟ್ಟೆ ಬಂದು ಇಳಿದಿದ್ದರೂ ಕಾಣಿಸದು; ಹಾಗಿರುವಾಗ ಹಾಲು ಬಣ್ಣದ ‘ಟೊಯೊಟೋ ಕರೋಲಾ’ ಕಾಣಿಸುವುದು ಹೇಗೇ? ಅತ್ತಿತ್ತ ಕಣ್ಣು ಹಾಯಿಸುತ್ತಿದ್ದವಳಿಗೆ, ಮಂಜಿನ ಮರೆಯಲ್ಲಿ ನಿಂತಿರುವ ಅವನು ತನ್ನನ್ನು ಗುಟ್ಟಾಗಿ ಗಮನಿಸುತ್ತಿರಬಹುದೇ ಎಂಬ ಯೋಚನೆ ಚಿಗುರಿದಾಗ ಮೈಯೆಲ್ಲ ಕಚಗುಳಿ. ಈ ಸರ್ದಾರ್ಜಿಗಳಿಗೆ ಮಾತ್ರ ಯಾಕೆ ಅಲ್ಲಾಹು ಅಂತಹ ‘ಐಲ್ಯಾಷಸ್’ ಕೊಟ್ಟಿರ್ತಾನೇ? ಅವನ ಐಬ್ರೋಸ್ ಆಗಷ್ಟೇ ಪಾರ್ಲರ್‌ನಿಂದ ಸೆಟ್ ಮಾಡಿಕೊಂಡು ಬಂದ ಹುಡುಗಿಯ ಹುಬ್ಬಿನ ಹಾಗೆ; ಕ್ಯೂಟ್. ಆವತ್ತು ಶುಕ್ರವಾರ -ಸರಿಯಾಗಿ ನೆನಪು ಯಾಕೆಂದರೆ, ಅವತ್ತು ಡ್ಯಾಡಿಯ ಷಾಪ್ ಸಂಜೆಯವರೆಗೆ ಓಪನ್ ಇರುವುದಿಲ್ಲ- ಮೊದಲ ‘ಕಾಮನ್ ಕ್ಲಾಸ್’ನಲ್ಲಿ ಮೊತ್ತ ಮೊದಲ ಸಲ ನೋಡಿದಾಗ ಅವನ ಐಲ್ಯಾಷನ್ನು ಮತ್ತೆ ಮತ್ತೆ ನೋಡಬೇಕು ಅನ್ನಿಸಿತ್ತು.
ಅವಳು ಸೇರಿದ್ದದ್ದು ಮೂರು ವರ್ಷದ ‘ಲಾ’ ಕೋರ್ಸಿಗೆ. ಹಾಗೆಂದು ಮಾನವ ಹಕ್ಕುಗಳ ಅಂತರ ರಾಷ್ಟ್ರೀಯ ಒಪ್ಪಂದ, ಒಡಂಬಡಿಕೆ ಮತ್ತು ಅನುಷ್ಠಾನಗಳ ಬಗ್ಗೆ ವಿಶೇಷ ಒತ್ತು ಕೊಡುವ, ‘ಅಂತರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಯನ ಕಾನೂನು’ ವಿಷಯವನ್ನು ಅವಳು ಇಷ್ಟ ಪಟ್ಟು ಆರಿಸಿದ್ದೇನಲ್ಲ. ‘ಸ್ಯಾನ್ ಫ್ರಾನ್ಸಿಸ್ಕೋ’ ಮತ್ತು ‘ಸ್ಯಾನ್ ಜೋಸ್’ ನಡುವಿನ ಸಿಲಿಕಾನ್ ಸಿಟಿಯಲ್ಲಿರುವ ಪ್ರಖ್ಯಾತ ‘ಸ್ಟ್ಯಾನ್‌ಫೋರ್ಡ್’ ಯುನಿವರ್ಸಿಟಿಯಲ್ಲಿ, ‘ಪೌಷ್ಟಿಕಾಂಶಗಳು ನಷ್ಟವಾಗದ ಹಾಗೆ ಆಡುಗೆ ಮಾಡುವುದು ಹೇಗೇ’ ಎಂಬಿತ್ಯಾದಿ ಯಾವುದಾದರೊಂದು ಡಿಗ್ರಿ ಕೋರ್ಸಿಗೆ ಸೇರಿ, ಮೂರು ವರ್ಷ ಮಜಾ ಉಡಾಯಿಸಬೇಕು ಅಂತ ಪ್ರಯತ್ನಿಸಿದ್ದವಳಿಗೆ ಸುಲಭದಲ್ಲಿ ಸಿಕ್ಕಿದ ಕೋರ್ಸ್ ಇದು. ಮೊದಲ ವರ್ಷದಲ್ಲಿ ಬೇರೆ ವಿಷಯಗಳಲ್ಲಿ ಡಿಗ್ರಿ ಮಾಡುವವರೇನಾದರೂ ‘ಆಪ್ಷನಲ್ ಸಬ್ಜೆಕ್ಟ್’ ಆಗಿ ‘ಇಂಟರ್ ನ್ಯಾಷನಲ್ ಹ್ಯೂಮನ್ ರೈಟ್ಸ್’ ತೆಗೆದುಕೊಂಡಿದ್ದರೆ, ಅವರು ಕೂಡ ಲಾ ಸ್ಟೂಡೆಂಟ್‌ಗಳ ಜೊತೆಯಲ್ಲೇ ಕಾಮನ್ ಕ್ಲಾಸ್ ಎಟೆಂಡ್ ಮಾಡಬೇಕು. ಅವನ ‘ಐಡಿ’ ಕಾರ್ಡ್ ಹೇಳುವಂತೆ ತನ್ನ ಮಾಸ್ಟರ್ಸ್’ಗೆ ‘ರಿಲಿಜಿಯಸ್ ಸ್ಟಡೀಸ್’ ತೆಗೆದುಕೊಂಡಿದ್ದಾನೆ. ಇಂಟರ್ ನ್ಯಾಷನಲ್ ಹ್ಯೂಮನ್ ರೈಟ್ಸ್ ಅವನಿಗೆ ಅಪ್ಷನಲ್ ಸಬ್ಜೆಕ್ಟ್.
ಈ ಡೂಡ್ ಇಂಡಿಯನ್ ಫ್ಯಾಮಿಲಿ ಬಾಯ್; ಕನಸರ್ವೇಟಿವ್ ಇರಬಹುದಾ?
ಛೆ!, ತಾನು ಹೀಗೆಲ್ಲಾ ಯೋಚಿಸುತ್ತಿರುವುದು ಡ್ಯಾಡಿಗೆ ಗೊತ್ತಾಗಿಬಿಟ್ಟರೇ?
ಡ್ಯಾಡಿಯದ್ದು ಸ್ಪಷ್ಟ ಅಭಿಪ್ರಾಯ; ತಮ್ಮ ಕುತ್ತಿಗೆಯೆತ್ತರಕ್ಕೆ ಬೆಳೆದಿದ್ದ ಹೈಸ್ಕೂಲ್ ಮುಗಿಸಿದ ಮಗಳನ್ನು ಎದುರಿಗೆ ಕುಳ್ಳಿರಿಸಿಕೊಂಡೇ ಮಮ್ಮಿಯ ಹತ್ತಿರ ಹೇಳಿದ್ದರು, ‘ಇವ್ಳಿಗೆ ಯಾವುದರಲ್ಲಿ ಇಂಟರೆಸ್ಟ್ ಉಂಟೋ ಆ ಕೋರ್ಸಿಗೆ ಸೇರಲಿ. ಡಿಗ್ರಿ ಅಂತ ಒಂದು ಇದ್ರೆ ಸಾಕು. ಮದುವೆಗೆ ಇಂಡಿಯನ್ ಹುಡುಗನನ್ನೇ ಹುಡುಕುವುದು. ಅನ್ವರ್‌ನಿಗೆ ಹೇಳಿಟ್ಟಿದ್ದೇನೆ. ಭಟ್ಕಳದ ಫ್ಯಾಮಿಲಿಯಲ್ಲೇ ನೋಡು ಅಂತ. ಸೌದಿ, ದುಬೈ, ಬೆಹರಿನ್ ಯಾವುದೂ ಆದೀತು. ಬೆಂಗ್ಳೂರಲ್ಲೇ ಇದ್ರೆ ಮತ್ತೂ ಒಳ್ಳೆಯದೆ. ಇಲ್ಲಿ ಒಬ್ನಿಗೆ ಒಂದು ಹೆಂಡ್ತಿ ಅಂತ ಇರುವುದು ಮದುವೆ ಆದರೆ ಮಾತ್ರ. ಮದುವೆಗೆ ಮೊದ್ಲೇ ನಾಲ್ಕು ನಾಲ್ಕು ಗರ್ಲ್ ಫ್ರೆಂಡ್ಸ್ ಇರ್ತಾರೆ. ನನ್ಗೆ ಒಮ್ಮೊಮ್ಮೆ ಅನ್ನಿಸ್ತಾ ಉಂಟು, ಇಲ್ಲಿ ಇರುವುದನ್ನೆಲ್ಲ ಯಾರಿಗಾದ್ರೂ ಕೊಟ್ಟುಬಿಟ್ಟು ಊರಿಗೆ ಗಾಡಿ ಕಟ್ಟುವುದು ಒಳ್ಳೆಯದು ಅಂತ.’
ಶಬಾನಾ ಒಳಗೊಳಗೇ ನಕ್ಕಿದ್ದಳು ಆಗ. ಆದರೆ ಬಾಯಿ ಬಿಟ್ಟಿರಲಿಲ್ಲ.
ಹುಡುಗರು ಮಾತ್ರವಾ? ಬಾಯ್ ಫ್ರೆಂಡ್ ಇಲ್ಲದ ಹುಡುಗಿಯರಾದರೂ ಯಾರಿದ್ದಾರೆ? ತನ್ನಂತೆ ಬೆಳೆಯುತ್ತಿರುವ ಎಲ್ಲ ಹುಡುಗಿಯರಿಗೂ ಒಳಗೊಳಗೇ ಭಯ. ಗರ್ಲ್ ಫ್ರೆಂಡ್ ಇಲ್ಲದ ಹುಡುಗರೇ ಇಲ್ಲವೆಂದ ಮೇಲೆ, ತಮ್ಮನ್ನು ಮುಂದೆ ಮದುವೆಯಾಗುವವರು ಯಾರು? ಹಾಗಾಗಿ, ಆದಷ್ಟು ಬೇಗ -ಕ್ಲಾಸ್ ಮೇಟ್ ಸಾಂಡ್ರಾ ಹೇಳುವಂತೆ ಮೀಸೆ ಹುಟ್ಟುವ ಮೊದಲು- ಯಾರನ್ನಾದರೂ ‘ಸೆಟ್’ ಮಾಡಿಕೊಂಡು ಇಟ್ಟುಕೊಳ್ಳದಿದ್ದರೆ, ಮುಂದೆ ಸೆಟ್ಲ್ ಆಗುವುದು ಕನಸಿನಲ್ಲಿ ಮಾತ್ರ. ಫ್ರೆಷ್ ಆಗಿ ಉಳಿದಿರುವ ಹುಡುಗನನ್ನು ಹುಡುಕುತ್ತಾ ಹೋದರೆ ‘ನನ್’ ಆಗಬೇಕಾದೀತು.
‘ಸ್ಟಾರ್‌ಬಕ್ಸ್’ನಲ್ಲಿ ಕಾಫಿ ಹೀರುವಾಗ ನಾಲ್ಕು ಕಣ್ಣುಗಳು ಪರಸ್ಪರ ಕೂಡಿದ್ದು ಹೌದೋ ಅಲ್ಲವೋ ಎಂಬುದು ಇನ್ನೂ ಅನುಮಾನ. ಸಲ. ಆ ಡ್ಯೂಡ್ ನಾಚಿಕೆ ಸ್ವಭಾವದವನಿದ್ದಿರಬೇಕು; ಇಲ್ಲವಾದರೆ ತಾನು ಅಷ್ಟು ನೇರವಾಗಿ ದಿಟ್ಟಿಸಿ ನೋಡಿದಾಗಲೂ ‘ಹೈ’ ಅನ್ನುವಷ್ಟು ಮುಂದುವರಿದವನಲ್ಲ. ಹಾಗಾದರೆ ಇವನಿಗೆ ಗರ್ಲ್ ಫ್ರೆಂಡ್ ಯಾರೂ ಇರಲಿಕ್ಕಿಲ್ಲವೇ?
ಇದ್ದೇ ಇರುತ್ತಾಳೆ; ಎಷ್ಟು ಮಂದಿ ಎಂಬುದನ್ನಷ್ಟೆ ಲೆಕ್ಕ ಹಾಕಬೇಕು; ಹಾಗಿದ್ದಾನೆ ಅವನು.
ಅವನ ಕರೋಲಾವನ್ನು ಹುಡುಕಿದ್ದು ಅದೇ ಮೊದಲಲ್ಲ. ಈ ಹಿಂದೆಯೂ ಒಂದೆರಡು ಸಲ ಹುಡುಕಿದ್ದು ಇದೆ. ‘ಸ್ಟಾರ್‌ಬಕ್ಸ್’ನ ಎಡಗಡೆಯ ಪಾರ್ಕಿಂಗ್ ಲಾಟಿನಲ್ಲಿ ಕರೋಲಾ ನಿಂತಿದ್ದರೆ, ಅದರ ಬದಿಯಲ್ಲೇ ಶಬಾನಾ ಕಾರು ನಿಲ್ಲಿಸುತ್ತಿದ್ದದ್ದು. ಹಾಗೆಂದು ಅದಕ್ಕೆ ಯಾವುದೇ ಪ್ರತ್ಯೇಕ ಉದ್ದೇಶವಿದ್ದಿರಲಿಲ್ಲ; ಸುಮ್ಮನೆ ಒಂದು ಮಜಾ ಅಷ್ಟೇ.
ಎಂಟು ಗಂಟೆಗೆ ಕ್ಲಾಸು ಶುರುವಾಗುತ್ತದೆ. ‘ಸ್ಯಾನ್ ಹೊಸೇ’ಯಿಂದ ‘ಸ್ಟ್ಯಾನ್‌ಫೋರ್ಡ್ ಯುನಿವರ್ಸಿಟಿ’ಗೆ ಬಹಳವೆಂದರೆ ಮೂವತ್ತು ನಿಮಿಷಗಳ ದಾರಿ. ಅಬ್ಬ ಹೊಸದಾಗಿ ಕೊಡಿಸಿದ್ದ ಹಳದಿ ಬಣ್ಣದ -ಸೆಕೆಂಡ್ ಹ್ಯಾಂಡ್- ವೊಲ್ಸ್ ವ್ಯಾಗನ್ ಬೀಟಲ್. ಒಳಗೆ ಕೂತರೆ ಮುಂಜಾನೆಯ ಚಳಿ ಬಾಧಿಸುವುದಿಲ್ಲ ನಿಜ; ಆದರೆ, ಮನೆಯಿಂದ ಹತ್ತು ನಿಮಿಷದ ದಾರಿಯಲ್ಲಿ ಕಾಣಿಸುವ ‘ಸ್ಟಾರ್‌ಬಕ್ಸ್’ ನಲ್ಲಿ ‘ಸ್ಮಾಲ್ ಲಾಟೆ’ ಕಾಫಿ ಕುಡಿದರೆ ಮಾತ್ರ ಚಳಿ ಬಿಡುತ್ತದೆ ಎಂಬುದು ಹೊಸದಾಗಿ ಶುರುವಾಗಿದ್ದ ನಂಬಿಕೆ. ಲಾ-ಕಾಲೇಜಿಗೆ ಸೇರುವ ಮೊದಲು ಈ ಅಭ್ಯಾಸವಿದ್ದಿರಲಿಲ್ಲ; ಅಗ ಕಾರೂ ಇರಲಿಲ್ಲ. ಡ್ಯಾಡಿಯೊಟ್ಟಿಗೆ ಅಲ್ಲಿಗೆ ಹೋಗಿ ಒಮ್ಮೆಯೂ ‘ಸ್ಮಾಲ್ ಲಾಟೆ’ ಟಚ್ ಮಾಡಿದ್ದಿಲ್ಲ. ಡ್ಯಾಡಿ ಮನೆಯಿಂದ ಹೊರಗೆ ಏನೂ ತಿನ್ನುವುದಿಲ್ಲ. ನೀರು ಖರೀದಿಸುವಾಗಲೂ ಅದು ‘ಹಲಾಲ್’ ಇರುತ್ತದೋ ಇಲ್ಲವೋ ಎಂದು ಅನುಮಾನ ಪಡುವಷ್ಟು ಕನ್ಸರ್ವೇಟಿವ್.
ಅವನಾಗಲೇ ಜರ್ನಲಿಸಂ ಡಿಗ್ರಿ ಗಿಟ್ಟಿಸಿಕೊಂಡಿದ್ದ. ಈಗ ಮಾಡುತ್ತಿರುವುದು ‘ಮಾಸ್ಟರ್ಸ್ ಇನ್ ರಿಲಿಜಿಯಸ್ ಸ್ಟಡೀಸ್’. ಇಷ್ಟಪಟ್ಟು ಆರಿಸಿಕೊಂಡ ಒಂದು ವರ್ಷದ ಕೋರ್ಸ್ ಅಂತೆ ಅದು. ಕ್ರಿಸ್ಮಸ್ ಬಾಲ್‌ಗೆ ಬಂದವನನ್ನು ಪೋರ್ಟಿಕೋದಲ್ಲೇ ತಡೆದು ಮಾತನಾಡಿಸಿದಾಗ ನಾಚುತ್ತಾ ಅವನು ಒಪ್ಪಿಕೊಂಡ ಸತ್ಯ ಅದು. ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ ಐದನೆಯ ಪ್ರಶ್ನೆ ಕೇಳುತ್ತಿದ್ದಂತೆ, “ಎಸ್‌ಕ್ಯೂಸ್ ಮಿ” ಎಂದು ತಪ್ಪಿಸಿಕೊಂಡವನ ಬಗ್ಗೆ ಶಬಾನಾಳಿಗೆ ಕೋಪ ಬರಲಿಲ್ಲ; ಗುಪ್ತಚಾರಿಣಿಯರ ಮೂಲಕ -ಸಾಂಡ್ರಾ ಆ ತಂಡಕ್ಕೆ ಲೀಡರು- ಸಂಗ್ರಹಿಸಿದ ಮಾಹಿತಿಯಂತೆ ಅವನಿಗೆ ಇನ್ನೂ ಗರ್ಲ್ ಫ್ರೆಂಡ್ ಅಂತ ಯಾರೂ ಇಲ್ಲ. ನಂಬಲು ಕಷ್ಟವಾದ ಆದರೆ ಇಷ್ಟವಾದ ಮಾಹಿತಿ ಅದು. ಕ್ರಿಸ್ಮಸ್ ಬಾಲ್‌ಗೆ ಬಂದಿದ್ದವನನ್ನು ಡ್ಯಾನ್ಸಿಗೆ ಕರೆದು ಅವನಿಂದ ‘ಸಾರಿ, ಐ ಡೋಂಟ್ ಡ್ಯಾನ್ಸ್’ ಎಂದು ಹೇಳಿಸುವ ಮೂಲಕ ಸಾಂಡ್ರಾ ತನ್ನ ಗುಪ್ತಚರ ಮಾಹಿತಿಗೆ ಎವಿಡೆನ್ಸ್ ಕೂಡಾ ಕೊಟ್ಟುಬಿಟ್ಟಾಗ, ಶಬಾನಾ ತನ್ನ ಹೊಸವರ್ಷದ ರೆಸಲ್ಯೂಷನ್ ಯಾವುದು ಎಂಬುದನ್ನು ನಿರ್ಧರಿಸಿಬಿಟ್ಟಿದ್ದಳು. ಹೊಸ ವರ್ಷದ ಮೊದಲ ಶುಕ್ರವಾರವೇ ಅದನ್ನು ಕಾರ್ಯರೂಪಕ್ಕೂ ಇಳಿಸಿದ್ದಳು.
‘ಸ್ಟಾರ್‌ಬಕ್ಸ್’ನ ಗಾಜಿನ ಬಾಗಿಲು ತೆಗೆದು ಹೊರಬರುತ್ತಿದ್ದಂತೆ ತಡೆದು ನಿಲ್ಲಿಸಿ, “ನಾವು ಯಾಕೆ ಕಾರ್ ಪೂಲ್ ಮಾಡಿ ಗ್ಯಾಸ್ ಸೇವ್ ಮಾಡಬಾರದೂ?” ಎಂದು ಪ್ರಶ್ನಿಸಿದ್ದ ಪಂಜಾಬಿ ಧಿರಸಿನ ಚಂದದ ಹುಡುಗಿಯ ದೊಡ್ಡ ದೊಡ್ಡ ಕಣ್ಣುಗಳನ್ನು ಅಚ್ಚರಿಯ ಕಣ್ಣುಗಳಿಂದ ನೋಡುತ್ತಾ ನಿಂತುಬಿಟ್ಟಿದ್ದ ಜೆಸ್ವಿಂದರ್. ಯಾವಾಗಲೂ ಟೈಟ್ ಫಿಟ್ಟಿಂಗ್ ಜೀನ್ಸ್ ಮತ್ತು ಟಾಪ್‌ನಲ್ಲಿ ಕಣ್ಣು ಕೋರೈಸುತ್ತಿದ್ದವಳು, ಆವತ್ತು ಫಿರೋಜ್ ಕಲರಿನ ಕಮೀಜ್, ಅದಕ್ಕೊಪ್ಪುವ ತೆಳು ಗುಲಾಬಿ ಕಲರಿನ ಸೆಲ್ವಾರ್, ಅರೆವಾಸಿ ಕಪ್ಪು ತಲೆಗೂದಲನ್ನು ಮುಚ್ಚಿಕೊಂಡಿದ್ದ ಗುಲಾಬಿ ಕಲರಿನ ದುಪ್ಪಟ್ಟಾದ ಮರೆಯಲ್ಲಿ ಬೆಳದಿಂಗಳು ಹರಡುತ್ತಿದ್ದ ಶಬಾನಾಳ ದೊಡ್ಡ ದೊಡ್ಡ ಕಣ್ಣುಗಳ ಕರೆಯನ್ನು ನಿರಾಕರಿಸುವಂತೆಯೇ ಇರಲಿಲ್ಲ.
ಆ ದಿನವೇ ಜೆಸ್ವಿಂದರ್ ಸಿಂಗ್ ಹೇಳಿದ್ದು, “ಕಾಲ್ ಮಿ ಜೆಸ್ಸಿ.”
ಆವತ್ತು ಇಬ್ಬರೂ ಜೊತೆಯಾಗಿ ಮತ್ತೊಂದು ಸ್ಮಾಲ್ ಲಾಟೆ ಕಾಫಿ ಸಿಪ್ ಮಾಡಿದ್ದರು.
ಅವರಿಬ್ಬರು ಮದುವೆಯಾಗಿದ್ದದ್ದು ಆರು ವರ್ಷಗಳ ಆನಂತರ.

(ಇಂದಿನ-ಮಾರ್ಚ್ ೪, ೨೦೧೨-ಉದಯವಾಣಿಯಲ್ಲಿ ಈ ಲೇಖನ ಪ್ರಕಟವಾಗಿದೆ)

1 ಟಿಪ್ಪಣಿ

  1. Girish

    (please excuse ardhum-bhardum kannada) 🙂

    Ninne “that anta heli” karikramnalli nimmanu nodi kushi patte. Karikram tumbha chennagiitu. Alli nimma cinemage haakide duddu vapas baraite anta kelli ashchairya vaytu. daiyavitu iddera bagge blognalli swalpa detail alli adhu hege sadya anta vivarasi. 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: