ಪಿ. ಶೇಷಾದ್ರಿ

ಕಂಡಿದ್ದು ಕಂಡಂತೆ…

ಕಾಶಿ, ಸಾಯಲು ಹೊರಟವರ ಕೊನೇತಾಣ!

ಕಾಶಿಯ ಮಣಿಕರ್ಣಿಕಾ ಘಾಟ್ (ಮುಖ್ಯ ಸ್ಮಶಾನ)


ಕಾಶಿ ಎಂದಾಕ್ಷಣ ಫಕ್ಕನೆ ನೆನಪಿಗೆ ಬರುವುದು:

ಕಾಶಿ ವಿಶ್ವನಾಥ,
ಕಲುಷಿತವಾದ ಗಂಗೆ,
ಜನನಿಬಿಡ ಗಲ್ಲಿಗಳು,
ಸಾಧು ಸನ್ಯಾಸಿಗಳು,
ಬೆನ್ನು ಬಿದ್ದು ಕಾಸು ಕೀಳುವ ಪಂಡಾಗಳು,

ಮತ್ತು
ಅಗಾಧ ಭಕ್ತ ಸಮೂಹ..

ಇಂಥ ಕಾಶಿಗೆ ಬರೀ ಪುಣ್ಯಕ್ಷೇತ್ರ ದರ್ಶನಕ್ಕೆ ಬರುವುದಿಲ್ಲ, ಸಾಯಲೂ ಬರುತ್ತಾರೆ!

ಕಾಶಿಯಲ್ಲಿ ಸಾಯಲು ಬರುವವರಿಗೆ ವಿಶೇಷ ಮರ್ಯಾದೆ ಇದೆ. ಸತ್ತ ನಂತರ ಅವರಿಗೆ ಮುಕ್ತಿಪ್ರಾಪ್ತಿಯಾಗುತ್ತದಂತೆ. ಹಾಗಾಗಿ, ಕೆಲವರು ಸಾಯುವ ಹಂತದಲ್ಲಿ ಇಲ್ಲಿಗೆ ಬಂದು ಕೆಲಕಾಲ ತಂಗಿ ದೇಹತ್ಯಾಗ ಮಾಡಿದರೆ; ಇನ್ನುಳಿದವರು ಸತ್ತನಂತರ ಕೂಡ ದೇಹವನ್ನು ಇಲ್ಲಿಗೆ ತಂದು ಗಂಗೆಯ ದಡದಲ್ಲಿ ದಹನ ಮಾಡುತ್ತಾರೆ. ಹಾಗಾಗಿ ಬಿಹಾರ, ಉತ್ತರಪ್ರದೇಶದ ಎಷ್ಟೋ ಊರುಗಳಲ್ಲಿ ಸ್ಮಶಾನವೇ ಇಲ್ಲ! ಕಾಶಿಯನ್ನೇ ‘ಮಹಾ ಸ್ಮಶಾನ’ ಎಂದು ಕರೆಯುತ್ತಾರೆ.

ಮಣಿಕರ್ಣಿಕಾ ಸ್ಮಶಾನ - ಇದು ನಿಜವಾದ 24x7 !


ಬಹಳ ವರ್ಷಗಳ ಹಿಂದೆ ಇಲ್ಲಿಗೆ ಬರುವವರು ದೇವರ ಸನ್ನಿಧಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದರ ಮೂಲಕ ಸಹಜವಾಗಿ ಬರದ ಸಾವನ್ನು ತಾವೇ ಆಹ್ವಾನಿಸಿಕೊಳ್ಳ್ಳುತ್ತಿದ್ದರಂತೆ! ಅಂತೆಯೇ ಕಾಶಿಯಲ್ಲಿ ‘ಸಾವು’ ಎಂದರೆ ಒಂದು ‘ಸಂಭ್ರಮ’.

ಸಾವನ್ನು ಹುಡುಕಿ ಇಲ್ಲಿಗೆ ಬರುವವರೆಲ್ಲರ ಆಶಯ ಒಂದೇ. ಮೋಕ್ಷ ಪಡೆಯುವುದು. ‘ಮೋಕ್ಷ’ ಎಂದರೆ ಮನುಷ್ಯ ಜನ್ಮದ ಹುಟ್ಟು-ಸಾವುಗಳ ನಿರಂತರ ಚಕ್ರದಿಂದ ಮುಕ್ತಿ. ಇದು ಕಾಶಿಗೆ ಸಾವನ್ನು ಬಯಸಿ ಹೋದವರ ನಂಬಿಕೆ.

ಈ ನಂಬಿಕೆ ಇಂದು-ನಿನ್ನೆಯದಲ್ಲ. ಶತ-ಶತಮಾನಗಳಿಂದ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಇತರೆ ಊರುಗಳಲ್ಲಿ ಸ್ಮಶಾನ ಊರ ಹೊರಗಿದ್ದರೆ ಇಲ್ಲಿ ಮಾತ್ರ ಊರಿನ ಮಧ್ಯದಲ್ಲಿಯೇ ಇದೆ. ಇಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ನಿರಂತರವಾಗಿ ಹೆಣಗಳನ್ನು ಸುಡುತ್ತಲೇ ಇರುತ್ತಾರೆ. ಚಿತೆಯ ಬೆಂಕಿ ಆರಿದ್ದನ್ನು ನಾವು ಕಂಡೇ ಇಲ್ಲ ಎಂದು ಇಲ್ಲಿಯವರು ಹೇಳುತ್ತಾರೆ. ದಿನವೊಂದಕ್ಕೆ ಕನಿಷ್ಠ ನೂರರಿಂದ ನೂರೈವತ್ತು ಶವಗಳ ದಹನ ಕಾರ್ಯ ಇಲ್ಲಿ ನಡೆಯುತ್ತದೆ. ಕೆಲವೊಮ್ಮೆ ಇದು ಇನ್ನೂರು, ಮುನ್ನೂರನ್ನು ದಾಟುವುದೂ ಉಂಟಂತೆ!

ಮುಂಜಾನೆಯಲ್ಲಿ ಗಂಗಾನದಿ

ನಮಗೂ (ಬೆಂಗಳೂರಿಗೂ) ಕಾಶಿಗೂ ಸುಮಾರು ಎರಡೂವರೆ ಸಾವಿರ ಕಿಲೋ ಮೀಟರಿನಷ್ಟು ದೂರ. ಎರಡು ವಿಮಾನ ಬದಲಿಸಬೇಕು. ರೈಲಿನಲ್ಲಿ ಹೋದರೆ ಎರಡು ದಿನದ ಪ್ರಯಾಣ. ಇದು ಇಂದಿನ ವ್ಯವಸ್ಥೆ. ಹಿಂದೆ? ಆಗ ಕಾಶಿಯಾತ್ರೆ ಹೋಗುವುದು ಎಂದರೆ ‘ನೇರ ಸ್ವರ್ಗಕ್ಕೆ ಯಾತ್ರೆ’ ಅನ್ನುತ್ತಿದ್ದರು. ‘ಕಾಶೀಯಾತ್ರೆ, ಸ್ಮಶಾನಯಾತ್ರೆ ಎರಡೂ ಒಂದೇ’ ಹೋದವರು ಹಿಂತಿರುಗಿ ಬರುವುದಿಲ್ಲ, ಎಂದು ಯಾತ್ರೆ ಹೊರಟವರನ್ನು ಕರೆದು ಸತ್ಕರಿಸಿ, ಪಾದಪೂಜೆ ಮಾಡಿ ತಮ್ಮ ಕೈಲಾದ ಕಾಣಿಕೆ ಸಲ್ಲಿಸಿ ಕಳುಹಿಸಿಕೊಡುತ್ತಿದ್ದರು.

ಯಾತ್ರೆ ಹೋದವರು ಅಕಸ್ಮಾತ್ ಹಿಂತಿರುಗಿ ಬಂದರಂತೂ ಅವರಿಗೆ ಸಿಗುತ್ತಿದ್ದ ಸ್ವಾಗತವೇನು? ಎಲ್ಲರೂ ಅವರ ಕಾಲಿಗೆ ಬಿದ್ದದ್ದೂ ಬಿದ್ದದ್ದೇ, ಆಶೀರ್ವಾದ ಪಡೆದದ್ದೂ ಪಡೆದದ್ದೇ. ಕಾಶಿಯಿಂದ ವಾಪಸ್ ಆದವರು ‘ಗಂಗಾಸಮಾರಾಧನೆ’ ಮಾಡುತ್ತಿದ್ದರು. ಗಂಗಾ ಸಮಾರಾಧನೆ ಎಂದರೆ ಪುಟ್ಟ ಪುಟ್ಟ ಗಿಂಡಿಗಳಲ್ಲಿ ತಂದ ಗಂಗೆಯನ್ನು ಎಲ್ಲರಿಗೂ ವಿತರಿಸುವುದು. ಆ ಪುಟ್ಟ ಗಿಂಡಿಗೆ ದೇವರ ಕೋಣೆಯಲ್ಲಿ ವಿಶೇಷ ಸ್ಥಾನ! ದಿನವೂ ಆರತಿ, ಪೂಜೆ.. ಯಾರಾದರೂ ಹಿರಿಯರು ಸಾವಿನ ಅಂಚಿನಲ್ಲಿದ್ದಾಗ ಮಾತ್ರ ಅದಕ್ಕೆ ಮುಕ್ತಿ. ಗಿಂಡಿ ಒಡೆದು ಮೂರು ಉದ್ಧರಣೆ ಗಂಗೆಯನ್ನು ಬಾಯಲ್ಲಿ ಬಿಟ್ಟು ‘ಶಿವ ಶಿವಾ’ ಎನ್ನುತ್ತಿದ್ದರು.

ಮಣಿಕರ್ಣಿಕಾ ಘಾಟ್‌ನ Top Angle


ಇನ್ನು ಮದುವೆಯ ಸಂದರ್ಭದಲ್ಲಿ ನಡೆಯುವ ‘ಕಾಶೀಯಾತ್ರೆ’ ಶಾಸ್ತ್ರದ ಬಗ್ಗೆ ನಿಮಗೆಲ್ಲ ಗೊತ್ತೇ ಇರಬೇಕು. ಕಾಶೀಯಾತ್ರೆಗೆ ಹೊರಟ ವರನನ್ನು ತಡೆದು ನಿಲ್ಲಿಸಿ, ಉಪಚರಿಸಿ, ಒಲಿಸಿ ಮದುವೆ ಮಂಟಪಕ್ಕೆ ಕರೆತರುವುದು ವಾಡಿಕೆ. ಈ ಶಾಸ್ತ್ರದ ನಂತರವೇ ಕನ್ಯಾಪಿತೃ ತನ್ನ ಮಗಳನ್ನು ಆ ವರನಿಗೆ ಧಾರೆ ಎರೆದುಕೊಡುವುದು. ಈ ಸಂಪ್ರದಾಯ ಈಗಲೂ ಕೆಲವು ವರ್ಗದ ಮದುವೆಗಳಲ್ಲಿ ನಡೆದುಕೊಂಡು ಬಂದಿದೆ.

ಈ ಎಲ್ಲ ಕಾರಣಗಳಿಂದ ‘ಕಾಶಿ’ ಎಂದರೆ ಒಂದು ಬಗೆಯ ಅಚ್ಚರಿ.

ಸುಮಾರು ಎಂಟು ವರ್ಷಗಳ ಹಿಂದೆ ಕಾಶಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರರ ‘ಸುಬ್ಬಣ್ಣ’ -ಕಿರು ಕಾದಂಬರಿ ಆಧರಿಸಿದ ಧಾರಾವಾಹಿಯ-ಚಿತ್ರೀಕರಣಕ್ಕೆ ಹೊರಟಾಗ ನನ್ನ ಮನಸ್ಸಿನಲ್ಲಿ ಈ ಎಲ್ಲ ಅಚ್ಚರಿಗಳನ್ನು ಹೊತ್ತೇ ಹೊರಟಿದ್ದೆ.

2003ರಲ್ಲಿ ಸುಚೇಂದ್ರ ಪ್ರಸಾದ ‘ಸುಬ್ಬಣ್ಣ’ನಾಗಿ...


ಒಂದು ವಾರ ಕಾಲದ ಚಿತ್ರೀಕರಣದಲ್ಲಿ ಒಂದಿಷ್ಟು ಕಾಶಿಯನ್ನು ಸುತ್ತಾಡಿದೆ. ಸೈಕಲ್ ರಿಕ್ಷಾದಲ್ಲಿ ಕುಳಿತು ಬೀದಿ ಬೀದಿ ಸುತ್ತಿದೆ. ಫುಟ್‌ಪಾತ್‌ನಲ್ಲಿ ಕಛೋರಿ, ಜಿಲೇಬಿ, ಮೊರಬ್ಬ, ಮಲಾಯಿ, ಲಂಗ್ಡಾ ಆಮ್, ಠಂಡೈ ಪಾನ್ ಮುಂತಾದುವನ್ನು ತಿಂದೆ. ಗಂಗೆಯ ಹರಿವ ನೀರಲ್ಲಿ ಕೈ ಇಟ್ಟು ಸಂಭ್ರಮಿಸಿದೆ. ಜೊತೆಗೆ ದಡದಲ್ಲಿ ಕಣ್ಣುಕುಕ್ಕುವ ಸ್ಮಶಾನಗಳನ್ನು ಕಂಡೆ, ಗಂಗೆಯಲ್ಲಿ ಅರೆಕೊಳೆತ ಹೆಣಗಳು ತೇಲುವುದನ್ನು ಕಂಡು ಬೆಚ್ಚಿ ಹಿಂದೆ ಸರಿದೆ. ನನ್ನ ಅಚ್ಚರಿಗಳೆಲ್ಲಾ ಜಿಗುಪ್ಸೆಯಲ್ಲಿ ಅಂತ್ಯವಾದವು. ಕಾಶಿ ಎಂದರೆ ಹೆಣ, ಕಾಶಿ ಎಂದರೆ ಸ್ಮಶಾನ, ಕಾಶಿ ಎಂದರೆ ಕಲ್ಮಶಗೊಂಡ ಗಂಗೆ, ಕಾಶಿ ಎಂದರೆ ಪೀಡಿಸುವ ಪಂಡಾಗಳ ತವರೂರು, ಕಾಶಿ ಎಂದರೆ ಇಕ್ಕಟ್ಟಾದ ಕೊಳಕು ಗಲ್ಲಿಗಳ ಊರು..

Kashi is Dirt, Decay, Degeneration, Darkness and Death…

ಇಂಥ ಕಾಶಿಗೆ ಮತ್ತೊಮ್ಮೆ ಹೋಗಬಾರದೆಂದು ಮನಸ್ಸಿನಲ್ಲೇ ನಿಶ್ಚಯಿಸಿ ಹಿಂತಿರುಗಿದ್ದೆ.

ಪವಿತ್ರ ಗಂಗೆಯಲ್ಲಿ ತೇಲುವ ಶವ!

….ಇದಾಗಿ ಸುಮಾರು ನಾಲ್ಕು ವರ್ಷಗಳು ಕಳೆದವು. ಒಂದು ದಿನ ಬೆಳಗ್ಗೆ ಕಾಶಿಯ ಕುರಿತ ಸುದ್ದಿಯೊಂದನ್ನು ದಿನಪತ್ರಿಕೆಯ ಮುಖಪುಟದಲ್ಲಿ ಓದಿದೆ. ‘ನೀವಿಲ್ಲ ಹದಿನೈದು ದಿನದಲ್ಲಿ ಸಾಯಬೇಕು; ಇಲ್ಲವೇ ಜಾಗ ಖಾಲಿ ಮಾಡಬೇಕು!’… ಆ ವರದಿ ನನ್ನನ್ನು ಜಾಗೃತಗೊಳಿಸಿತು, ಮತ್ತೊಮ್ಮೆ ಕಾಶಿಯತ್ತ ಮುಖಮಾಡಲು ಪ್ರಚೋದಿಸಿತು. ನನ್ನ ಪ್ರತಿಜ್ಞೆ ಮುರಿದು ಮತ್ತೆ ಕಾಶಿಯಾತ್ರೆಗೆ ಹೊರಟೆ. ಮನಸ್ಸಿನ ತುಂಬೆಲ್ಲ ‘ಮುಕ್ತಿಭವವ’ವೇ ತುಂಬಿತ್ತು…

ಅದು ಕಾಶಿಯ ಹೃದಯ ಸ್ಥಾನದಲ್ಲಿರುವ ಗೊದೋಲಿಯಾದ ಮುಖ್ಯ ರಸ್ತೆ. ಜನನಿಬಿಡ ಪ್ರದೇಶ. ರಸ್ತೆಯ ಎರಡೂ ಬದಿಯಲ್ಲಿ ಅಂಗಡಿ ಮುಂಗಟ್ಟುಗಳ ಸಾಲು ಸಾಲು. ರಸ್ತೆಯಲ್ಲಿ ಕಾರು, ಸ್ಕೂಟರ್, ಆಟೋರಿಕ್ಷಾಗಳ ಜೊತೆಗೆ ಮುಕ್ಕಾಲು ಪಾಲು ಆಕ್ರಮಿಸಿಕೊಂಡಿರುವವರು ಸೈಕಲ್ ರಿಕ್ಷಾ ಸವಾರರು. ಇವರ ಸೈಕಲ್ ಬೆಲ್‌ನ ‘ಟ್ರಿಣ್ ಟ್ರಿಣ್’ ಸದ್ದು ಇಡೀ ಪ್ರದೇಶವನ್ನು ಆವರಿಸಿದೆ. ಅಲ್ಲೇ ಬದಿಯಲ್ಲಿ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಪುಟ್ಟ ಗಲ್ಲಿಯೊಂದಿದೆ. ಅದರಲ್ಲಿ ಸುಮಾರು ಐವತ್ತು ಮೀಟರ್ ಸಾಗಿದರೆ ಸಿಗುವುದೇ ‘ಕಾಶೀಲಾಭ್ ಮುಕ್ತಿಭವನ’.

‘ಮುಕ್ತಿಭವನ’ ಎಂಬ ಸಾವಿನ ಮನೆ!


ಇದು ಕಾಶಿಗೆ ಸಾಯಲು ಬರುವವರ ತಾತ್ಕಾಲಿಕ ತಂಗುದಾಣ. ಇಲ್ಲಿ ಹನ್ನೆರಡು ಕೋಣೆಗಳಿವೆ. ಉಳಿದುಕೊಳ್ಳಲು ಯಾವುದೇ ರೀತಿಯ ಶುಲ್ಕ ನೀಡಬೇಕಿಲ್ಲ. ಕೋಣೆ, ನೀರು, ವಿದ್ಯುತ್ ಎಲ್ಲವೂ ಉಚಿತ! ಒಂದೇ ಕಂಡೀಷನ್. ನಿಮಗೆ ಅರವತ್ತು ವರ್ಷ ದಾಟಿರಬೇಕು! ಸಾವಿನ ಅಂಚಿನಲ್ಲಿರಬೇಕು. ಜೊತೆಗೆ ಮುಂಚೆಯೇ ಕಾಗದ ಬರೆದು ಇಲ್ಲಿಯ ಕೋಣೆಯನ್ನು ಕಾದಿರಿಸಿರಬೇಕು. ಎಲ್ಲವೂ ಸುಸೂತ್ರವಾಗಿ ನಡೆದು, ಅಲ್ಲಿಯ ಮ್ಯಾನೇಜರ್ ಬನ್ನಿ ಎಂದರೆ, ಇಲ್ಲಿಗೆ ಬಂದು ನಾಲ್ಕು ಜನ ಬಂಧುಗಳೊಂದಿಗೆ ತಂಗಬಹುದು. ಹದಿನೈದು ದಿನ ನೀವು ಅವರ ಅತಿಥಿ. ಆ ಅವಧಿಯಲ್ಲಿ ನಿಮಗೆ ಸಾವು ಬಂದು ಸತ್ತರೆ ನೇರ ಸ್ವರ್ಗ, ಇಲ್ಲವೇ ವಾಪಸ್ ನಿಮ್ಮ ಊರಿಗೆ ಟಿಕೆಟ್!

ತಮಾಷೆಯಲ್ಲ,

ಹೀಗೆ, ಸುಮಾರು ಐವತ್ತೆರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ‘ಕಾಶೀಲಾಭ್ ಮುಕ್ತಿಭವನ’ದಲ್ಲಿ ಈಗಾಗಲೇ ಸುಮಾರು ಇಪ್ಪತ್ತು ಸಾವಿರಕ್ಕು ಹೆಚ್ಚು ಜನರ ಪ್ರಾಣ ಹೋಗಿದೆ! ಅವರಿಗೆಲ್ಲ ಸ್ವರ್ಗ ಸಿಕ್ಕಿದೆಯೇ? ಮನುಷ್ಯ ಜನ್ಮದಿಂದ ಮುಕ್ತಿಪಡೆದಿದ್ದಾರೆಯೇ? ಗೊತ್ತಿಲ್ಲ. ಏಕೆಂದರೆ ಹೋದವರು ಯಾರೂ ವಾಪಸ್ ಬಂದು ಹೇಳಿಲ್ಲ…

‘ಮುಕ್ತಿಭವನ’ದ ಒಳ ಹಜಾರ


ಅಂಥ ಒಂದು ಸಾವಿನ ಮನೆಯ ಮುಂದೆ ನಾನು ನಿಂತಿದ್ದೆ. ಆದರೆ ನಾನು ಸಾಯಲು ಬಂದವನಲ್ಲ. ಅದನ್ನು ನೋಡಲು ಬಂದವನು. ಅದನ್ನು ನೋಡಿ ಒಂದು ಕ್ಷಣ ಮೈ ಜುಂ ಎಂದಿತು.

ಹೊರಗಿಂದ ಸಾಧಾರಣ ಬಂಗಲೆಯಂತೆ ಕಾಣುವ ಇದರೊಳಗೆ ಎಷ್ಟು ಪ್ರಾಣಪಕ್ಷಿಗಳು ಹಾರಿವೆ. ಆ ಆತ್ಮಗಳು ಅಲ್ಲಿ ಇನ್ನೂ ಅಲೆದಾಡುತ್ತಿರಬಹುದೇ? ಸಾವನ್ನು ಎಂದೂ ಹತ್ತಿರದಿಂದ ಕಾಣದಿದ್ದ ನನಗೆ ಒಳಗೆ ಹೋಗಲು ಒಂದು ಸಣ್ಣ ಹಿಂಜರಿಕೆ ಉಂಟಾಯಿತು. ಎರಡೂವರೆ ಸಾವಿರ ಕಿಲೋಮೀಟರಿನಿಂದ ಇದನ್ನು ನೋಡಲೆಂದೇ ಬಂದು ಈಗ ಹಿಂಜರಿದರೆ? ಧೈರ್ಯ ಮಾಡಿ ಒಳಗೆ ಅಡಿಯಿಟ್ಟೆವು.

‘ಮುಕ್ತಿಭವನ’ದ ಮಹಡಿ


ಅದು ಎರಡು ಮಹಡಿಯ ದೊಡ್ಡ ಕಟ್ಟಡ. ಇದನ್ನು ಕಟ್ಟಿ ಸುಮಾರು ನೂರು ವರ್ಷ ದಾಟಿರಬಹುದು. ಕಟ್ಟಡ ಪ್ರವೇಶಿಸಲು ದೊಡ್ಡ ಕಬ್ಬಿಣದ ಗೇಟುಗಳನ್ನು ದಾಟಿ ಹೋಗಬೇಕು. ಗೇಟುಗಳಿಗೆ ಯಾವಾಗಲೂ ಚೈನ್ ಹಾಕಿ ಬೀಗ ಜಡಿದಿರುತ್ತಾರೆ. ಜನರು ಓಡಾಡಲು ಮಾತ್ರ ಕೊಂಚ ಸ್ಥಳಾವಕಾಶ ಇದೆ. ನಾಲ್ಕು ಚಕ್ರದ ವಾಹನಗಳು ಬಂದಾಗ ಮಾತ್ರ ಬೀಗಕ್ಕೆ ಮುಕ್ತಿ.

ಗೇಟಿನ ಸಂದಿಯಲ್ಲಿ ನುಸುಳಿಕೊಂಡು ಕಾಂಪೌಂಡ್ ಹೊಕ್ಕೆವು. ಅಲ್ಲಲ್ಲಿ ಕುಳಿತು ಕೊಳ್ಳಲು ಸಿಮೆಂಟಿನ ಜಗುಲಿಗಳು. ಪಕ್ಕದಲ್ಲಿ ಒಂದು ಕೈ ತೋಟ. ಅಲ್ಲಿರುವುದೆಲ್ಲಾ ತುಳಸಿಯ ಗಿಡಗಳೇ. ಜಗುಲಿಯ ಮೇಲೆ ಬಿಸಿಲು ಕಾಯಿಸುತ್ತಾ ಕುಳಿತ ಕೆಲವು ಹಳ್ಳಿಗರು ನಮ್ಮನ್ನು ಕುತೂಹಲದಿಂದ ನೋಡಿದರು.

‘ನಮಶ್ಕಾರ್ ಬಾಬೂಜಿ… ಶುಕ್ಲಾಜಿ ಹೈ?’ ಎಂದು ಕೇಳಿದ್ದಕ್ಕೆ ಒಳಕ್ಕೆ ಕೈ ತೋರಿಸಿದರು.

ಚಪ್ಪಲಿಯನ್ನು ಹೊರಗೇ ಬಿಟ್ಟು, ಕಮಾನಿನಾಕಾರದ ಹಸಿರು ಬಣ್ಣದ ಹಳೆಯ ಹೆಬ್ಬಾಗಿಲನ್ನು ದಾಟಿ ಒಳಗೆ ಹೋದರೆ ವಿಶಾಲವಾದ ಹಜಾರ. ಮೊದಲು ಬಲಕ್ಕೆ ಸಿಗುವುದೇ ಕಾರ್ಯಾಲಯ. ಅಲ್ಲಿ ಒಂದು ಟೇಬಲ್‌ನ ಹಿಂದೆ ಭೈರವನಾಥ ಶುಕ್ಲಾ ಕುಳಿತಿದ್ದರು. ಆತನ ವಯಸ್ಸು ಅರವತ್ತರ ಹತ್ತಿರ ಹತ್ತಿರ. ಬಲಗೈಯನ್ನು ಸಣ್ಣ ಬ್ಯಾಗಿನೊಳಕ್ಕೆ ಇಟ್ಟು ಯಾವುದೋ ಚಲನೆಯಲ್ಲಿ ತೊಡಗಿದ್ದರು. (ಆತ ಬ್ಯಾಗಿನೊಳಗೆ ಕೈ ತೂರಿಸಿ ಬೆರಳನಲ್ಲಿ ಜಪಮಣಿ ಎಣಿಸುತ್ತಿದ್ದರು ಎಂದು ನಂತರ ತಿಳಿಯಿತು)

‘ಮುಕ್ತಿಭವನ’ದ ಮ್ಯಾನೇಜರ್ ಭೈರವನಾಥ ಶುಕ್ಲಾ...


ನಾವು ಬೆಂಗಳೂರಿನಿಂದ ಬಂದ ವಿಚಾರ ಹೇಳುತ್ತಾಲೇ ‘ಆಯಿಯೇ..’ ಎಂದು ಹೇಳಿ ಎದುರಿನ ಖುರ್ಚಿ ತೋರಿಸಿದರು. ‘ಬೇಟಾ…’ ಎಂದು ಯಾರನ್ನೋ ಕೂಗಿದರು. ಹುಡುಗನೊಬ್ಬ ಸ್ಟೀಲ್ ಲೋಟಗಳಲ್ಲಿ ನೀರು, ನಾಲ್ಕು ತುಂಡು ಮಿಠಾಯಿಯನ್ನು ತಂದಿಟ್ಟ. ತಟ್ಟೆಯನ್ನು ನಮ್ಮ ಮುಂದೆ ತಳ್ಳಿದರು ಶುಕ್ಲಾಜಿ. ಸಾವಿನ ಮನೆಯಲ್ಲಿ ಸಿಹಿ ತಿನ್ನುವುದೇ? ವಿಚಿತ್ರ ಗೊಂದಲಕ್ಕೆ ಬಿದ್ದಾಗ ಆತ ಮಿಠಾಯಿ ತಿನ್ನುವಂತೆ ಮತ್ತೊಮ್ಮೆ ಒತ್ತಾಯಿಸಿದರು. ಸಮಾಧಾನಕ್ಕೆ ಒಂದು ತುಂಡು ಬಾಯಿಗಿಟ್ಟು ಮಾತಿಗಿಳಿದೆವು…

ಮಾತಾಡುತ್ತಲೇ ಆ ಕೋಣೆಯನ್ನು ಅವಲೋಕಿಸಿದೆ. ಸುತ್ತಲೂ ಗೋಡೆಯಲ್ಲಿ ಹುದುಗಿರುವ ಕಪಾಟುಗಳಲ್ಲಿ ದೊಡ್ಡ ದೊಡ್ಡ ರಿಜಿಸ್ಟರ್‌ಗಳು, ಹಳೆಯ ದಾಖಲೆಗಳನ್ನು ಪೇರಿಸಲಾಗಿತ್ತು. ಅದರಲ್ಲಿ ಯಾವ ಆಸ್ತಿ-ಪಾಸ್ತಿಯ ದಾಖಲೆ ಇರಬಹುದು? ನಮ್ಮ ಸಂಶಯ ನಿವಾರಣೆಯಾದದ್ದು ಒಂದು ದಿನ ಕಳೆದಮೇಲೆ! ಅದರಲ್ಲಿ ಇದ್ದದ್ದು ಸತ್ತವರ ದಾಖಲೆಗಳು! ಐವತ್ತು ವರ್ಷಗಳಲ್ಲಿ ಇಪ್ಪತ್ತು ಸಾವಿರ ಸಾವು! ಚಿತ್ರಗುಪ್ತ ದಾಖಲೆ.

ಅಲ್ಲಿಂದ ಹೊರಬಂದರೆ ಎಡಕ್ಕೆ ಪುಟ್ಟ ದೇವರ ಕೋಣೆ. ಅದಕ್ಕೆ ಹೊಂದಿಕೊಂಡಂತೆ ಇನ್ನೊಂದು ಪುಟ್ಟ ಹಜಾರ. ಅಲ್ಲಿ ಕರ್ಮಾಚಾರಿಗಳು ಕುಳಿತು ಭಜನೆ ಮಾಡುತ್ತಿದ್ದರು. ಅದನ್ನು ದಾಟಿ ನೇರ ಹೋದರೆ ಬಿಸಿಲುಮಚ್ಚಿನ ಹಜಾರ. ಬಲಕ್ಕೆ, ಎದುರಿಗೆ ಕಾಣುವ ಹಾಸ್ಟೆಲ್ ಮಾದರಿಯ ರೂಮುಗಳು. ‘ಖಮರೆ-೧/೨/೩…’ ಹೀಗೆ ಅದರ ಮೇಲೆ ಬರೆಯಲಾಗಿತ್ತು. ಕೆಳಗೆ ಆರು, ಮೇಲೆ ಆರು ರೂಮುಗಳು, ಒಟ್ಟು ಹನ್ನೆರಡು ಕೋಣೆಗಳ ವಿಶಾಲ ಕಟ್ಟಡ ಅದು. ಕೆಲವು ರೂಮುಗಳಿಗೆ ಬೀಗ ಹಾಕಲಾಗಿತ್ತು. ಕೆಲವು ಅರೆ ತೆರೆದಿದ್ದವು.

ಅರೆ ತೆರೆದ ಬಾಗಿಲುಗಳ ಹಿಂದಿನಿಂದ ಸಣ್ಣ ಉಸುರಿನ ಸದ್ದು ಕೇಳಿ ಬರುತ್ತಿತ್ತು. ಒಳಗೆ ಇಣುಕಿದರೆ ಹನ್ನೆರಡು-ಹದಿನೈದು ಅಡಿ ಅಳತೆಯ ಕೋಣೆ. ಒಂದು ವಿಶಾಲವಾದ ಕಿಟಕಿ. ಒಂದು ಬದಿಯಲ್ಲಿ ಹಳೆಯ ಮಂಚ, ಗೋಡೆಯಲ್ಲಿ ತೆರೆದ ಕಪಾಟು, ಮೇಲೊಂದು ಹಳೇ ಫ್ಯಾನು. ಎರಡೇ ಎರಡು ಇಲಕ್ಟ್ರಿಕ್ ಸ್ವಿಚ್‌ಗಳು. ಇದಿಷ್ಟೇ ಅಲ್ಲಿಯ ನಿರ್ಜೀವ ವಸ್ತುಗಳು. ಇನ್ನೊಂದು ಜೀವವಿರುವ ವಸ್ತು ಎಂದರೆ ಮಂಚದ ಮೇಲಿನ ಮೂಳೆ ಚಕ್ಕಳವಾದ ವೃದ್ಧದೇಹ.

ಸಾವಿನ ಕ್ಷಣಗಣನೆಯಲ್ಲಿರುವ ವೃದ್ಧ ಮಹಿಳೆ


ಇವರೇ ಮೋಕ್ಷಾರ್ಥಿ!

ಅಸ್ತಿಪಂಜರಕ್ಕೆ ಚರ್ಮದ ಹೊದಿಕೆ ಹೊದ್ದಿಸಿದಂತಿರುವ ನವೆದು ಹೋದ ಜೀವ ಅದು. ಅರೆಪ್ರಜ್ಞಾವಸ್ಥೆಯಲ್ಲಿತ್ತು. ಕೊನೆಯ ‘ಆ ಕ್ಷಣ’ಕ್ಕಾಗಿ ಸುತ್ತಲೂ ಕಾದು ಕುಳಿತ ಬಂಧುವರ್ಗ. ಮುಕ್ತಿ ಯಾವಾಗ ದೊರೆಯುವುದೋ? ಹುಟ್ಟನ್ನು ಇಂದಿನ ವೈಜ್ಞಾನಿಕ ಯುಗದಲ್ಲಿ ಖಚಿತವಾಗಿ ಹೇಳಬಹುದು. ಆದರೆ ಸಾವನ್ನು? ಹಾಗಾಗಿಯೇ ಹದಿನೈದು ದಿನಗಳ ಗಡುವು!

‘ಆದರೆ, ಹದಿನೈದೇ ದಿನದೊಳಗೆ ಸಾಯಬೇಕೆಂದರೆ ಹೇಗೆ ಸಾಧ್ಯ?

ಈ ವಿಚಿತ್ರ ನಿಯಮದ ಕುರಿತು ಪ್ರಶ್ನೆಯನ್ನು ಕೇಳದೆ ಇರಲಾಗಲಿಲ್ಲ. ಉತ್ತರ ಸಲೀಸಾಗಿ ಬಂತು.

ಪಂಚಭೂತಗಳಲ್ಲಿ ಲೀನ...


‘ಇಲ್ಲಿಗೆ ಬರುವವರು ಎಂಥವರು ಎಂದುಕೊಂಡಿದ್ದೀರಿ? ಇನ್ನು ಬದುಕುವುದಿಲ್ಲ ಎನ್ನುವ ಸ್ಥಿತಿಯಲ್ಲಿ ಇರುವವರು. ಎಷ್ಟೋ ಸಲ ಇಲ್ಲಿಗೆ ಬಂದ ಕೆಲವು ಗಂಟೆ, ಕೆಲವು ದಿನಗಳಲ್ಲಿ ಅವರು ಮೋಕ್ಷ ಹೊಂದುತ್ತಾರೆ. (ಅಲ್ಲಿ ಅಪ್ಪಿ-ತಪ್ಪಿಯೂ ಯಾರೂ ‘ಸಾವು’ ಎಂಬ ಪದ ಬಳಸುವುದಿಲ್ಲ. ‘ಮೋಕ್ಷ’ ಒಂದೇ ಚಾಲ್ತಿಯಲ್ಲಿರುವ ಪರ್ಯಾಯ ಪದ). ಏನು ಮಾಡುತ್ತೀರಿ? ಕೆಲವೊಮ್ಮೆ ತಿಂಗಳುಗಟ್ಟಲೆ ಕಾದರೂ ಮೋಕ್ಷ ದೊರಕುವುದಿಲ್ಲ. ಆ ಭಗವಂತನ ಇಚ್ಛೆ ಏನಿರುತ್ತದೆಯೋ? ಹಾಗಾಗಿ ಅಂಥವರನ್ನು, ನಿಮ್ಮ ಊರಿಗೆ ಹೋಗಿ ಕೆಲವು ದಿನ ಕಳೆದು ಮತ್ತೆ ಬನ್ನಿ ಎಂದು ಕಳುಹಿಸುತ್ತೇವೆ. ಇದರಿಂದ ಕಾದಿರುವ ಇತರರಿಗೆ ಸ್ಥಳಾವಕಾಶ ಮಾಡಿಕೊಡಲು ಅನುಕೂಲವಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಹದಿನೈದು ದಿನಕ್ಕಿಂತ ಹೆಚ್ಚಿಗೆ ಇರಲು ಅವಕಾಶ ಕೊಟ್ಟಿರುವುದೂ ಉಂಟು…’ ಎನ್ನುತ್ತಾರೆ ಮ್ಯಾನೇಜರ್ ಶುಕ್ಲಾ.

ಇಲ್ಲಿರಲು ಹದಿನೈದು ದಿನದ ಗಡುವಿನ ಹೊರತಾಗಿ ಬೇರೆ ಇನ್ನೇನು ನಿಯಮಗಳಿವೆ?

‘ಕನಿಷ್ಠ ನಾಲ್ಕು ಜನ ಬಂಧುಗಳು ಅವರ ಜೊತೆ ಇರಲೇಬೇಕು. ಆವರ ಆಹಾರವನ್ನು ಅವರೇ ತಯಾರಿಸಿಕೊಳ್ಳಬೇಕು. ಅದಕ್ಕಾಗಿ ಒಂದು ಸ್ಟೌವ್ ಕೊಡುತ್ತೇವೆ, ನೀರು ಇತ್ಯಾದಿ ವ್ಯವಸ್ಥೆ ಇದೆ. ಆದರೆ ಮಾಂಸಾಹಾರ, ಈರುಳ್ಳಿ, ಬೆಳ್ಳುಳ್ಳಿ ಇಲ್ಲಿ ವರ್ಜ್ಯ. ಈ ಸ್ಥಳದ ಶುಚಿತ್ವ ಮತ್ತು ಘನತೆ ಕಾಪಾಡುವುದು ಬಹಳ ಮುಖ್ಯ. ಇವರ ಯಾವುದೇ ಸಹಾಯಕ್ಕೆ ನಮ್ಮ ಕರ್ಮಚಾರಿಗಳು ಇರುತ್ತಾರೆ. ಮೋಕ್ಷಾರ್ಥಿಗೆ ಪುಣ್ಯದ ಬಲವಿದ್ದರೆ, ಕಾಲಭೈರವನ ಕೃಪೆಯಿದ್ದರೆ ಬೇಗ ಮೋಕ್ಷ ದೊರಕುತ್ತದೆ’ ಎನ್ನುವುದು ಶುಕ್ಲಾ ಮಾತು.

‘ಕಾಶ್ಯಾಮ್ ಮರಣಾನ್ ಮುಕ್ತಿ:’ ಅಂದರೆ ಕಾಶಿಯಲ್ಲಿ ಸತ್ತವರಿಗೆಲ್ಲಾ ಮುಕ್ತಿ! ಇಲ್ಲಿ ಶಿವನೇ ಎಲ್ಲರಿಗೂ ಮಿಗಿಲಾದ ಪರಮೇಶ್ವರ. ಸರ್ವಸ್ವತಂತ್ರನಾದ ಶಿವನಿಗೆ ಸಾಂಪ್ರದಾಯಿಕವಾದ ಯಾವ ಕಟ್ಟು ಕಟ್ಟಳೆಗಳ ಬಂಧನವೂ ಇಲ್ಲ. ಅದೂ ಅಲ್ಲದೆ ಇದು ಬ್ರಹ್ಮ ನಿರ್ಮಿತವಲ್ಲ, ಇಲ್ಲಿ ಯಮನ ಆಡಳಿತವಾಗಲಿ, ಚಿತ್ರಗುಪ್ತರ ಲೆಕ್ಕಪತ್ರವಾಗಲಿ, ಯಮಯಾತನೆಯಾಗಲಿ ಇಲ್ಲ. ಸ್ವತಃ ಕಾಲಭೈರವನೇ ಇಲ್ಲಿಯ ಯಜಮಾನ. ಅವನ ಕೃಪೆಯಿಂದ ಇಲ್ಲಿ ಕಿರಿಸ್ತಾನರು, ಮುಸಲ್ಮಾನರು ಇವರೆಲ್ಲರನ್ನು ಒಳಗೊಂಡಂತೆ ಎಲ್ಲ ಮಾನವ ಜೀವಿಗಳಿಗೂ, ಪಶು, ಪಕ್ಷಿ, ಕ್ರಿಮಿ, ಕೀಟಗಳಿಗೂ ಮೋಕ್ಷ ದೊರೆಯುತ್ತದೆ…’ ಎನ್ನುತ್ತಾರೆ ವಿದ್ವಾನ್ ಬಟುಕ್ ಪ್ರಸಾದ್ ಶಾಸ್ತ್ರಿ.

ಕಾಶಿಯ ಪ್ರಖಾಂಡ ಪಂಡಿತ ಶ್ರೀ ಬಟುಕ್ ಶಾಸ್ತ್ರಿ


ಆದರೆ ವೇದಾಂತಿಗಳು ‘ಋತೇ ಜ್ಞಾನಾನ್ ನ ಮುಕ್ತಿ:’ ಅಥವಾ ಜ್ಞಾನನವಿಹೀನನಾದವನಿಗೆ ಮುಕ್ತಿಯಿಲ್ಲ ಎಂದು ಹೇಳುತ್ತಾರಲ್ಲ, ಅದಕ್ಕೇ ಏನು ಹೇಳುವುದು? ಅಷ್ಟೇ ಏಕೆ, ಶಂಕರಾಚಾರ್ಯರೂ ಸಹ ಮುಕ್ತಿ ದೊರೆಯಲು ಜ್ಞಾನ ಅತ್ಯಗತ್ಯ ಎಂದು ಹೇಳಿಲ್ಲವೆ?

ಏನೇ ಇರಲಿ,
ಕಾಶಿ ಮೋಕ್ಷಕ್ಕೆ ಶಾರ್ಟ್‌ಕಟ್ ಅಂದ ಹಾಗಾಯಿತು. ನಾವು ಈ ಜನ್ಮದಲ್ಲಿ ಯಾವುದೇ ಪಾಪ ಮಾಡಿದರೂ ಸರಿ. ಕೊನೆಗಾಲದಲ್ಲಿ ಇಲ್ಲಿಗೆ ಬಂದು ಮರಣ ಹೊಂದಿ ಮೋಕ್ಷ ಪಡೆಯಬಹುದು ಅಲ್ಲವೆ?

ಈ ಮಾತನ್ನು ಕೇಳಿ ಶುಕ್ಲಾಜೊ ಜೋರಾಗಿ ನಕ್ಕುಬಿಟ್ಟರು.

‘ಸಾಧ್ಯವೇ ಇಲ್ಲ. ನಿಮಗೆ ಮೋಕ್ಷ ದೊರಕಬಾರದು ಎಂದು ನಿಮ್ಮ ಹಣೆಯಲ್ಲಿ ಬರೆದಿದ್ದರೆ ನೀವು ಇಲ್ಲಿಯವರೆಗೆ ಬರುವುದಕ್ಕೇ ಸಾಧ್ಯವಿಲ್ಲ. ಕಾಶಿರಾಜ್ಯಕ್ಕೆ ಬರುವುದು ಅಷ್ಟು ಸುಲಭವಲ್ಲ. ಇಲ್ಲೇ ಬದುಕಿ, ಆತ ಪಾಪಿಷ್ಠನಾಗಿದ್ದರೆ ಅವನ ಮರಣವಾಗುವುದು ಬೇರೆಲ್ಲೋ… ನೀವು ನಿಮ್ಮ ಪಾಪದ ಪ್ರಾಯಶ್ಚಿತ್ತಕ್ಕೆ ಮತ್ತೊಂದು ಜನ್ಮ ಎತ್ತಲೇಬೇಕು’

ಇದೆಲ್ಲಾ ಪ್ರಾರಂಭವಾದದ್ದು ಎಂದಿನಿಂದ? ಇದಕ್ಕೆ ವಿಜ್ಞಾನ/ಇತಿಹಾಸ ಏನು ಹೇಳುತ್ತದೆ?

‘ಕಾಶಿ ಒಂದು ವಿಶಿಷ್ಟವಾದ ಪ್ರದೇಶ. ಇಲ್ಲಿ ಗಂಗೆ ಸೌಮ್ಯವಾಗಿ, ವಿಶಾಲವಾಗಿ ಹರಿಯುತ್ತಾಳೆ. ಇಲ್ಲಿಯ ವಾತಾವರಣ ಉತ್ತಮವಾಗಿದೆ. ಒಳ್ಳೆಯ ಗಾಳಿ, ಒಳ್ಳೆಯ ನೀರು, ಒಳ್ಳೆಯ ಮಣ್ಣು ಜನವಸತಿಗೆ ಹೇಳಿ ಮಾಡಿಸಿದಂಥದ್ದು. ಇಲ್ಲಿ ಬುದ್ಧನ ಕಾಲದಿಂದಲೂ ವಸತಿ ಬೆಳೆದು ಬಂದಿದೆ. ಜೊತೆಗೆ ಎಲ್ಲಾ ಧರ್ಮದವರು ಬಂದು ಬೀಡುಬಿಟ್ಟಿದ್ದಾರೆ.

ಸಾರಾನಾಥ್ದಲ್ಲಿರುವ ‘ಸ್ತೂಪ’, ಬುದ್ಧ ಉಪದೇಶಿಸಿದ ಸ್ಥಳ!

ಬುದ್ಧ ತನ್ನ ಶಿಷ್ಯರಿಗೆ ಮೊದಲು ಉಪದೇಶ ಬೋಧಿಸಿದ್ದು ಬಳಿಯ ಸಾರಾನಾಥದಲ್ಲಿ. ಆದಿ ಶಂಕರಾಚಾರ್ಯರು ಇಲ್ಲಿ ಬಂದು ಹೋಗಿದ್ದರೆಂಬ ಪ್ರತೀತಿಯಿದೆ. ಹೀಗೆ ಕ್ರಮೇಣ ಇಲ್ಲಿ ಧಾರ್ಮಿಕ ವಾತಾವರಣ ಬೆಳೆದು, ಋಷಿಮುನಿಗಳು ಬಂದು ನೆಲೆಸಿದ್ದಾರೆ. ತಪಸ್ಸು/ ಸತ್ಸಂಗಗಳಲ್ಲಿ ನಿರತರಾಗಿದ್ದಾರೆ. ಹಾಗಾಗಿ, ಇಲ್ಲಿಗೆ ವಾನಪ್ರಸ್ಥಕ್ಕೆ ಬರುವವರ ಸಂಖ್ಯೆ ಹೆಚ್ಚಿತು. ಭರತ ತನ್ನ ಪೂರ್ವೀಕರ ಆಸ್ತಿಯ ಮೇಲೆ ಗಂಗೆಯನ್ನು ತಂದು ಹರಿಸಿದ ಪುರಾಣದ ಕಥೆ ನೆನಪಿಸಿಕೊಳ್ಳಿ. ಹೀಗೆ ಇದೆಲ್ಲದರ ಸುತ್ತ ನಂಬಿಕೆ ಬೆಳೆದು, ಸತ್ತವರನ್ನು ಇಲ್ಲೇ ಗಂಗೆಯ ದಡದಲ್ಲಿ ದಹನ ಮಾಡಿ ಬೂದಿಯನ್ನು ಗಂಗೆಯಲ್ಲಿ ತೇಲಿಬಿಡುವ ಪರಿಪಾಠ ಬೆಳೆಯಿತು… ನಂತರ ನಿಧಾನವಾಗಿ ಸಾವಿಗೆ, ಸಾವಿನ ನಂತರದ ವಿಧಿ ವಿಧಾನಗಳಿಗೆ ಪ್ರಾಮುಖ್ಯತೆ ಬಂದಿರಬೇಕು…’ ಹೀಗೆನ್ನುತ್ತಾರೆ ವಿಜ್ಞಾನಿ ಪ್ರೊ.ಬಿ.ಡಿ.ತ್ರಿಪಾಠಿ.

ವಾದ-ವಿವಾದಗಳು ಏನೇ ಇರಲಿ, ಅಶೋಕ ಚಕ್ರವರ್ತಿಯ ಕಾಲದಿಂದಲೂ ಗಯಾ, ಪ್ರಯಾಗ ಮತ್ತು ಕಾಶಿಗೆ ಸಾವಿಗೆ ವಿಶೇಷ ಸಂಬಂಧವಿದೆ. ಇಲ್ಲಿಗೆ ಸತ್ತರೆ, ಗಂಗೆಯಲ್ಲಿ ಚಿತಾಬಸ್ಮ ವಿಸರ್ಜನೆಗೊಂಡರೆ ಸ್ವರ್ಗ ಅಥವಾ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಬಲವಾಗಿ ಬೆಳೆಯಿತು.

‘ಪ್ರಯಾಗದಲ್ಲಿ ಅಶೋಕನ ಕಾಲದ ಸ್ಥಂಭವೊಂದು ಈಗಲೂ ಇದೆ. ಗಂಗೆಯ ದಡದಲ್ಲಿರುವ ಈ ಕಲ್ಲಿನ ಕಂಬದ ಮೇಲೆ ಲೋಹದ ಕೀಲು ಇದೆ. ಮೋಕ್ಷದ ಆಸೆ ಹೊತ್ತು ಬಂದವರು ಕಂಬ ಹತ್ತಿ ಕೀಲಿಗೆ ತಮ್ಮ ದೇಹವನ್ನು ಚುಚ್ಚಿಕೊಂಡು ಗರ ಗರ ತಿರುಗಿ, ಬದಿಯ ಗಂಗೆ ಬಿದ್ದು ಸಾಯುತ್ತಿದ್ದರು…’ ಎಂದು ಪ್ರಾಚ್ಯಸಂಶೋಧಕ ಡಾ ಡಿ.ಪಿ. ಶರ್ಮ ಹೇಳುತ್ತಾರೆ.

ಹಾಗೆಯೇ, ಕಾಶಿಯ ವಿಶ್ವನಾಥ ಮಂದಿರದ ಬದಿಯ ಗಲ್ಲಿಯಲ್ಲಿ ‘ಆತ್ಮಾಹುತಿ ಜಾಗ’ ಎಂದೇ ಪ್ರಸಿದ್ಧವಾಗಿದ್ದ ‘ಕಾಶಿ ಕರವಟ್ ಮಂದಿರ’ ಈಗಲೂ ಇದೆ. ಇದನ್ನು ನೋಡಿಕೊಳ್ಳುತ್ತಿರುವ ವೃದ್ಧ ಅಂಬಾಶಂಕರ್ ಉಪಾಧ್ಯಾಯ ಇದರ ಇತಿಹಾಸವನ್ನು ಬಿಡಿಸಿ ಇಡುತ್ತಾರೆ:

ಕಾಶಿ ಕರವಟ್! ಆತ್ಮಾಹುತಿಯ ಸ್ಥಳ


‘ಇದು ಒಂದು ಕಾಲಕ್ಕೆ ‘ಪ್ರಾಣಾಭಿಷೇಕ’ದ ಮಂದಿರವಾಗಿತ್ತು. ಪ್ರಾಣಾಭಿಷೇಕ ಎಂದರ ಪ್ರಾಣಾರ್ಪಣೆ. ಇಲ್ಲಿ ‘ಕರವಟ್’ ಹೆಸರಿನ ಶಸ್ತ್ರವಿತ್ತು (ಕರವಟ್ ಎಂದರೆ ಗರಗಸ). ಶಿವಲಿಂಗದ ಹತ್ತಿರದಲ್ಲೇ ನೆಲಕ್ಕೆ ಅದನ್ನು ಜೋಡಿಸಿದ್ದರಂತೆ. ಮೋಕ್ಷ ಅರಸಿ ಬಂದ ಭಕ್ತರು ಆ ಗರಗಸದ ಮೇಲೆ ಹಾರಿ ಪ್ರಾಣಾರ್ಪಣೆ ಮಾಡಿಕೊಳ್ಳುತ್ತಿದ್ದರು. ಅವರ ಕತ್ತರಿಸಿಹೋದ ದೇಹ ನಂತರ ಸುರಂಗದ ಮೂಲಕ ಸಾಗಿ ಗಂಗಾನದಿಯನ್ನು ಸೇರುತ್ತಿತ್ತು. ಬ್ರಿಟಿಷ್ ಆಡಳಿತ ಬಂದ ಮೇಲೆ, ‘ಸತಿ’ಪದ್ಧತಿ ರದ್ದಾದಂತೆ, ಈ ನರಬಲಿ ಕೂಡ ನಿಷೇಧಿಸಲ್ಪಟ್ಟಿತು. ಇಲ್ಲಿದ್ದ ಗರಗಸವನ್ನು ಬ್ರಿಟಿಷರು ಇಂಗ್ಲೆಂಡಿಗೆ ಒಯ್ದು ತಮ್ಮ ಸಂಗ್ರಹಾಲಯದಲ್ಲಿ ಇಟ್ಟಿದ್ದಾರೆ. ಕೆಲಕಾಲ ಇದನ್ನು ಮುಚ್ಚಿದ್ದರು. ಈಗ ನಿತ್ಯ ಪೂಜೆ ಪುನಸ್ಕಾರ ನಡೆಯುತ್ತಿದೆ. ಈ ಮಹತ್ವದ ಸ್ಥಳ ನೋಡಲು ಈಗಲೂ ಜನ ಬರುತ್ತಾರೆ. ಮೇಲಿನಿಂದ ಬಗ್ಗಿ ನೋಡಿದರೆ ಕೆಳಗೆ ಸುರಂಗ ಹಾಗೂ ಶಿವಲಿಂಗ ಕಾಣಿಸುತ್ತದೆ. ಅಲ್ಲಿಂದ ಗಂಗಾನದಿಗೆ ಸುರಂಗವಿದೆ. ಆದರೆ ಅಲ್ಲಿಗೆ ಯಾರಿಗೂ ಪ್ರವೇಶವಿಲ್ಲ…’

ಹೀಗೆ, ನೂರೈವತ್ತು ವರ್ಷಗಳ ಹಿಂದೆ ನರಬಲಿ ಬಂದ್ ಆದರೂ, ಜನ ಕಾಶಿಗೆ ಸಾಯಲು ಬರುವುದನ್ನು ಮಾತ್ರ ನಿಲ್ಲಿಸಲಿಲ್ಲ.

ತುಳಸೀಘಾಟ್‌ನ ಮಹಾಂತ ವೀರಭದ್ರ ಮಿಶ್ರಾ ಇಂಥವರನ್ನು ತಮ್ಮ ಬಾಲ್ಯದಲ್ಲಿ ನಿತ್ಯವೂ ಕಾಣುತ್ತಿದ್ದರಂತೆ. ಅದನ್ನು ಅವರ ಮಾತುಗಳಲ್ಲೇ ಕೇಳಬೇಕು.

‘ಕೊನೆಗಾಲದಲ್ಲಿ ಸಾಯಲು ಬರುವ ಜನ ಗಂಗೆಯ ದಡದಲ್ಲಿ ಠಿಕಾಣಿ ಹೂಡುತ್ತಿದ್ದರು… ನಾಲ್ಕೈದು ದಿನ, ಕೆಲವೊಮ್ಮೆ ವಾರಗಟ್ಟಲೆ ಇಲ್ಲೇ ಬಿಸಿಲು, ಗಾಳಿ, ಮಳೆಯೆನ್ನದೆ ಮೆಟ್ಟಲುಗಳ ಮೇಲೆ ಮಲಗಿದ್ದು ಪ್ರಾಣ ನೀಗುತ್ತಿದ್ದರು. ಇಂಥವರಿಗಾಗಿ ಕೆಲವು ಘಾಟ್‌ಗಳಲ್ಲಿ ಮಂಟಪಗಳೂ ತಲೆಯೆತ್ತಿದವು. ಕಾಲಾಂತರದಲ್ಲಿ ವ್ಯಾಪಾರೀಕರಣದ ಪ್ರಭಾವದಿಂದ ಗಂಗೆಯ ದಡದ ಉದ್ದಕ್ಕೂ ಲಾಡ್ಜಗಳು ನಿರ್ಮಾಣವಾದವು. ಮಂಟಪಗಳು ಕಾಣೆಯಾದವು. ಲಾಡ್ಜ್‌ಗಳನ್ನು ಕಟ್ಟಿರುವುದು ವ್ಯಾಪಾರಕ್ಕೆ. ಅವರು ಕೋಣೆಗಳನ್ನು ಸಾಯುವವರಿಗೆ ಕೊಡುವುದಿಲ್ಲ, ಇಂದಿನ ಆಸ್ಪತ್ರೆಗಳು ಕೂಡ ಹಣ ಮಾಡುವ ದಂಧೆಯಲ್ಲಿ ತೊಡಗಿವೆ. ಸಾಯುವವರಿಗೆ ಜಾಗವೆಲ್ಲಿದೆ?…’

ಇನ್ನೊಂದು ಸಾವಿನ ಮನೆ, ‘ಗಂಗಾಲಾಭ ಭವನ’


ಆಗ ಹೀಗೆ ಸಾಯುವವರ ರಕ್ಷಣೆಗೆ ಬಂದವರು ಬಿರ್ಲಾ. ಇವರು ಗಂಗೆಯ ದಡದಲ್ಲಿರುವ ಮಣಿಕರ್ಣಿಕಾ ಸ್ಮಶಾನದ ಪಕ್ಕದಲ್ಲೇ ನಾಲ್ಕು ಮಹಡಿಗಳ ಒಂದು ಕಟ್ಟಡವನ್ನು ಕೊಂಡು ಅದಕ್ಕೆ ‘ಗಂಗಾಲಾಭ್ ಮುಕ್ತಿಭವನ್’ ಎಂದು ನಾಮಕರಣ ಮಾಡಿದರು. ಸಾಯಲು ಬರುವ ಬಡವರಿಗಾಗಿ ಇಪ್ಪತ್ತಕ್ಕೂ ಹೆಚ್ಚು ಕೋಣೆಗಳನ್ನು ಕಟ್ಟಿದರು. ಯಾರು ಬೇಕಾದರೂ ಇಲ್ಲಿ ಉಳಿದುಕೊಂಡಿದ್ದು, ಮೋಕ್ಷಾರ್ಥಿಯ ಮರಣದ ನಂತರ ಕೋಣೆ ಖಾಲಿ ಮಾಡಿ ಹೋಗಬೇಕಿತ್ತು. ಎಲ್ಲರಿಗೂ ಉಚಿತ ವಾಸ್ತವ್ಯ.

1936 ರಲ್ಲಿ ಪ್ರಾರಂಭವಾದ ಈ ಗಂಗಾಲಾಭ್ ಭವನದಲ್ಲಿ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಜನ ಪ್ರಾಣ ಬಿಟ್ಟಿದ್ದಾರೆ. ಕಾಲಾಂತರದಲ್ಲಿ ಇದು ಅವರಿವರ ಕೈಗೆ ಹಸ್ತಾಂತರವಾಗಿ ಸರಿಯಾದ ನಿಗಾ ಇಲ್ಲದೆ ಅವ್ಯವಸ್ಥೆಯ ಅಗರವಾಯಿತು. ಈಗ ಇಲ್ಲಿ ಭಿಕ್ಷುಕರು, ಇಸ್ಪೀಟ್ ಆಡುವ ಪೋಲಿ ಹೈಕಳು ಸೇರಿಕೊಂಡಿದ್ದಾರೆ. ಇಂಥವರನ್ನು ಓಡಿಸಲು ಅಲ್ಲೇ ಒಬ್ಬ ಕುಳಿತಿರುತ್ತಾನೆ. ಆದರೆ ಸಾಯಲು ಅಲ್ಲಿಗೆ ಬರುವವರು ಮಾತ್ರ ಅಪರೂಪವಾಗಿದ್ದಾರೆ. ಹಳೆಯ ಅರಮನೆಯಂತಿರುವ ಇದು ಈಗ ಪಾಳುಬಿದ್ದಿದೆ. ಬಾಗಿಲು ಕಿಟಕಿಗಳಿಗೆ ಜೇಡ ಬಲೆ ಕಟ್ಟಿದೆ. ಆದರೆ ಗೋಡೆಗಳ ಮೇಲೆಲ್ಲಾ ಇಷ್ಟೂ ವರ್ಷ ಸತ್ತವರ ಹೆಸರು, ದಿನಾಂಕಗಳು ಮಸುಕು ಮಸುಕಾಗಿ ಕಾಣಿಸುತ್ತಿವೆ.

ಈಗ ಕಾಶಿಯಲ್ಲಿ ಸಾಯುವವರಿಗಾಗಿ ಹೆಚ್ಚು ಪ್ರಚಲಿತದಲ್ಲಿರುವ ಸ್ಥಳ ಎಂದರೆ ‘ಕಾಶೀಲಾಭ್ ಮುಕ್ತಿಭವನ’.

ಸಾವಿಗಾಗಿ ಕಾದು ಕುಳಿತ ಬಂಧುಗಳು...


1958ರಲ್ಲಿ ದಾಲ್ಮಿಯಾ ಟ್ರಸ್ಟ್ ಆಡಿಯಲ್ಲಿ ಕಾರ್ಯ ನಿರ್ವಹಿಸಲು ಪ್ರಾರಂಭವಾದ ಈ ವ್ಯವಸ್ಥೆ ಇಲ್ಲಿಯವರೆಗೂ ಯಾವುದೇ ತೊಡಕುಗಳಿಲ್ಲದೆ ನಡೆದುಕೊಂಡು ಬಂದಿದೆ. ಸುಮಾರು ನಲವತ್ತು ವರ್ಷಗಳಿಂದ ಇದರ ಉಸ್ತುವಾರಿ ಹೊತ್ತಿರುವ ಶುಕ್ಲಾ ಹೇಳುವ ಪ್ರಕಾರ:

“ಕಾಶಿಯಲ್ಲಿ ಸತ್ತರೆ ಮೋಕ್ಷ ಎಂದು ನಮ್ಮ ವೇದ, ಪುರಾಣಗಳಲ್ಲಿ ಹೇಳಿದೆ. ತುಲಸೀದಾಸರು ಬರೆದ ‘ರಾಮಚರಿತಮಾನಸ’ದಲ್ಲಿ ಕೂಡ ಇದರ ಪ್ರಸ್ತಾಪವಿದೆ. ದಾಲ್ಮಿಯಾ ತಾಯಿ 1957ರಲ್ಲಿ ಇಲ್ಲಿ ಕಾಲವಾದರು. ಆಗ ದಾಲ್ಮಿಯಾರಿಗೆ, ಸಾಯಲು ಸರಿಯಾದ ಸ್ಥಳವಿಲ್ಲದೆ ಪರದಾಡುವ ಮೋಕ್ಷಾರ್ಥಿಗಳ ಕಷ್ಟದ ಅರಿವಾಯಿತು. ಅಂಥವರಿಗಾಗಿ ಈ ಭವನವನ್ನು ಕೊಂಡು ‘ಕಾಶೀಲಾಭ್ ಮುಕ್ತಿಭವನ’ ಎಂದು ನಾಮಕರಣ ಮಾಡಿದರು. ಇಲ್ಲಿಗೆ ಬರುವ ಮೋಕ್ಷಾರ್ಥಿಗಳನ್ನು ನಾವು ದೇವರಂತೆ ಕಾಣುತ್ತೇವೆ. ದಿನಕ್ಕೆ ನಾಲ್ಕು ಬಾರಿ ನಮ್ಮಲ್ಲಿ ಆರತಿ ಆಗುತ್ತದೆ. ಮೋಕ್ಷಾರ್ಥಿಗಳು ಮಲಗಿರುವಲ್ಲಿಗೇ ನಮ್ಮ ಅರ್ಚಕರು ಹೋಗಿ ಮಂಗಳಾರತಿ ಕೊಟ್ಟು, ತುಳಸೀ ತೀರ್ಥ ಕೊಟ್ಟು ಬರುತ್ತಾರೆ. ಜೊತೆಗೆ ನಮ್ಮ ಕರ್ಮಾಚಾರಿಗಳು ನಿತ್ಯವೂ ಭಜನೆ ಮಾಡುತ್ತಾರೆ. ಮೋಕ್ಷಾರ್ಥಿಗಳ ಕಡೆಯವರೂ ಇದರಲ್ಲಿ ಭಾಗಿಯಾಗುತ್ತಾರೆ. ಆ ಭಜನೆಯ ಸದ್ದು ಎಲ್ಲ ಕೋಣೆಗೂ ತಲಪುವಂತೆ ಸೌಂಡ್ ಸಿಸ್ಟಂ ವ್ಯವಸ್ಥೆ ಮಾಡಿದ್ದೇವೆ. ಅಲ್ಲದೆ ಆಗಾಗ ಸಾವಿನಂಚಿನಲ್ಲಿವ ವ್ಯಕ್ತಿಯ ಬಳಿ ಕುಳಿತು ಪುರಾಣ ಪುಣ್ಯಕಥೆಗಳನ್ನು ಗಟ್ಟಿಯಾಗಿ ಓದುತ್ತೇವೆ… ಪ್ರಾಣಪಕ್ಷಿ ಹಾರಿ ಹೋಗುವ ಹೊತ್ತಿನಲ್ಲಿ ಅವರ ಕಣ್ಮುಂದೆ ಭಗವಂತನ ಚಿತ್ರ ಮೂಡಬೇಕು. ಕಿವಿಯಲ್ಲಿ ಅವನ ನೀನಾದ ಕೇಳಬೇಕು, ಇದೇ ನಮ್ಮ ಉದ್ದೇಶ…’

ಸಾವಿನ ಮನೆ ಕಟ್ಟಿದವರ ಉದ್ದೇಶ ತಿಳಿಯಿತು. ಆದರೆ ಸಾಯಲು ಬರುವವರ ಕಥೆ ಏನು?

ಸಂಸ್ಕೃತ ಪಂಡಿತ ಶ್ಯಾಮ ಸುಂದರ ಪಾಂಡೆ (ಈತ ಮೂರು ತಿಂಗಳು ಜೀವ ಹಿಡಿದಿದ್ದರು!)


ಆತ ಶ್ಯಾಂಸುಂದರ್ ಪಾಂಡೆ. ವಯಸ್ಸು ಸುಮಾರು ಎಂಬತ್ತು ವರ್ಷ. ಆತನ ಕೊನೆಯ ಕೊನೆಯ ಕ್ಷಣಕ್ಕಾಗಿ ಅವನ ಪತ್ನಿ ಮತ್ತು ಮೊಮ್ಮಗ ಕಾದಿದ್ದಾರೆ. ಪಾಂಡೆ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಮೊಮ್ಮಗನನ್ನು ಮಾತಾಡಿಸಿದೆವು.
“ನಮ್ಮ ಊರು ದೇವರಿಯಾ. ಇಲ್ಲಿಂದ ಸುಮಾರು ಆರುನೂರು ಕಿಲೋ ಮೀಟರ್ ಆಗುತ್ತದೆ. ನನ್ನ ತಾತ ದೊಡ್ಡ ವಿದ್ವಾಂಸರು. ದೇವರಿಯಾ ಕಾಲೇಜಿನಲ್ಲಿ ಸಂಸ್ಕೃತದ ಲೆಕ್ಚರರ್ ಆಗಿದ್ದರು. ನಮ್ಮ ವಂಶಸ್ಥರು ಕಾಶಿಗೆ ಬಂದು ಮೋಕ್ಷ ಪಡೆಯುವುದು ನಡೆದುಕೊಂಡುಬಂದಿರುವ ವಾಡಿಕೆ. ಕೆಲವು ತಿಂಗಳುಗಳ ಹಿಂದೆ ನಮ್ಮ ತಾತ ಮನೆಯವರನ್ನೆಲ್ಲ ಸೇರಿಸಿ, ನನ್ನ ಕಾಲ ಸಮೀಪಿಸುತ್ತಿದೆ, ನಾನು ಕಾಶಿಗೆ ಹೋಗಿ ಮುಕ್ತಿ ಹೊಂದಬೇಕು, ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿರಿ ಎಂದರು. ಅಷ್ಟರಲ್ಲಿ ನಮ್ಮ ಅಕ್ಕನ ಮದುವೆ ತಯಾರಿ ನಡೆದಿತ್ತು. ಹಾಗಾಗಿ ಮದುವೆ ಮುಗಿಯಲಿ ಎಂದು ಕಾದೆವು. ಮದುವೆ ಮುಗಿದ ಮಾರನೇ ದಿನ ಮಂಗಳವಾರ. ನಮ್ಮ ತಾತ, ನಾನು ಕಾಶಿಗೆ ಹೋಗಬೇಕು ಎಂದು ಹಠ ಹಿಡಿದರು. ಮಂಗಳವಾರ ಬೇಡ ಎಂದರೂ ಕೇಳಲಿಲ್ಲ. ನನ್ನನ್ನು ದೇವರು ಕರೆಯುತ್ತಿದ್ದಾನೆ, ನಾನು ಹೋಗಲೇ ಬೇಕು ಎಂದು ರಚ್ಚೆ ಹಿಡಿದರು. ವಿಧಿಯಿಲ್ಲದೆ ಇಲ್ಲಿಗೆ ಕರೆದುಕೊಂಡು ಬಂದೆವು. ನಾವು ಇಲ್ಲಿಗೆ ಬಂದು ಒಂದು ತಿಂಗಳಾಗುತ್ತಾ ಬಂತು… ಇನ್ನೂ ಮುಕ್ತಿ ದೊರೆತಿಲ್ಲ. ಕಳೆದ ಒಂದು ವಾರದಿಂದ ತಾತ ಮಾತುಕತೆ ಕೂಡ ನಿಲ್ಲಿಸಿಬಿಟ್ಟಿದ್ದಾರೆ. ದಿನಕ್ಕೆ ಒಂದೆರಡು ಚಮಚ ಹಾಲು, ಗಂಗಾಮೃತ ಬಿಟ್ಟು ಏನೂ ಸೇವಿಸುತ್ತಿಲ್ಲ. ನಾವೂ ಕಾದಿದ್ದೇವೆ. ವಿಶ್ವನಾಥ್ ಮಹಾರಾಜ್ ಇವರನ್ನು ಬೇಗ ಕರೆಸಿಕೊಂಡರೆ ನಾವು ಬೇಗ ನಮ್ಮ ಊರಿಗೆ ಹೋಗಬಹುದು…”

ಇದು ಪಂಡಿತೋತ್ತಮರ ಕಥೆ. ಇನ್ನು ಪಾಮರರ ಕಥೆ ಕೇಳಬೇಕು ನೀವು.

ಈತ ಸಾಯಲು ಬಂದಿಲ್ಲ, ಸಾಯುತ್ತಿರುವ ಪತ್ನಿಯನ್ನು ಕರೆತಂದಿದ್ದಾನೆ!


ಈತನ ಹೆಸರು ರಾಮನಾರಾಯಣ. ಊರು ಗೋರಖ್‌ಪುರ. ವೃತ್ತಿಯಿಂದ ರೈತ. ಸಾವಿನ ಅಂಚಿನಲ್ಲಿರುವ ತನ್ನ ಪತ್ನಿಯನ್ನು ಇಲ್ಲಿಗೆ ಮೋಕ್ಷಕ್ಕಾಗಿ ಕಾದಿದ್ದಾನೆ. ಇವನಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರು ಯಾರೂ ಜೊತೆಯಲ್ಲಿ ಬಂದಿಲ್ಲ. ಅವರಿಗೆ ಅಪ್ಪ-ಅಮ್ಮನ ಬಗ್ಗೆ ವಿಶ್ವಾಸ ಅಷ್ಟಕಷ್ಟೇ. ನಾಳೆ ತಾಯಿ ಸತ್ತರೂ ಬರುತ್ತಾರೋ ಇಲ್ಲವೋ ಗೊತ್ತಿಲ್ಲ ಎನ್ನುವ ಈತನ ಜೊತೆ ಬಂದಿರುವ ಇನ್ನೊಬ್ಬಾಕೆ ಅದೇ ಊರಿನ ದೂರದ ಬಂಧು. “ಇದ್ದಕ್ಕಿದ್ದಂತೆಯೇ ಹೆಂಡತಿಯ ಆರೋಗ್ಯ ಹದಗೆಟ್ಟಿತು. ಡಾಕ್ಟರ್‌ಗೆ ತೋರಿಸಿದೆವು.. ಅವರು ಬಂದು ಔಷಧಿ ಮಾತ್ರೆ ಕೊಟ್ಟರು. ಆದರೂ ಸರಿಹೋಗಲಿಲ್ಲ… ಇನ್ನು ಉಳಿಯುವುದು ಕಷ್ಟ ಎಂದು ಗೊತ್ತಾಯಿತು. ನಮ್ಮ ಊರಿನ ಸುತ್ತ-ಮುತ್ತಲೆಲ್ಲಾ ಹೀಗೆ ಸಾಯುವ ಹಂತದಲ್ಲಿರುವವರನ್ನು ಕಾಶಿಗೆ ಕರೆದುಕೊಂಡು ಬರುವುದು ವಾಡಿಕೆ. ಇಲ್ಲಿ ಸತ್ತರೆ ಮೋಕ್ಷ ಸಿಗುತ್ತದೆ ಎಂದು ರಾಮಾಯಣದಲ್ಲಿ ಬರೆದಿದೆ. ನನ್ನ ಪತ್ನಿಗೆ ಈ ಜೀವನದಿಂದ ಮುಕ್ತಿ ದೊರೆಯಲಿ ಎಂದು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ… ಇನ್ನು ಒಂದೆರಡು ದಿನದಲ್ಲಿ ದೊರೆಯಬಹುದು ಎಂದು ಕರ್ಮಚಾರಿಗಳು ಹೇಳಿದ್ದಾರೆ. ಕಾದಿದ್ದೇವೆ.. ನೋಡಬೇಕು…”

ಮೋಕ್ಷ ಅರಸಿ ಪತಿಯೊಂದಿಗೆ ಬಂದಿರುವ ಪತ್ನಿ...


ನಾವು ಅಲ್ಲಿ ಇದ್ದ ಮಾರನೆಯ ದಿನವೇ ಆಕೆಯ ಪ್ರಾಣ ಪಕ್ಷಿ ಹಾರಿ ಹೋಯಿತು. ಮುದುಕ ಹೇಳಿದಂತೆ ಆತನ ಮಕ್ಕಳು ಯಾರೂ ಬರಲಿಲ್ಲ. ಕೇವಲ ಅರ್ಧ ಗಂಟೆಯಲ್ಲಿ ಚಟ್ಟದ ಬಂಡಿ ಕಟ್ಟಲಾಯಿತು (ರೆಡಿಮೇಡ್ ಚಟ್ಟಗಳು, ಚಟ್ಟ ಹೊರಲು ಜನ ಎಲ್ಲವೂ ದೊರೆಯುತ್ತವೆ). ‘ರಾಮನಾಮ ಸತ್ಯ ಹೈ’ ಎಂಬ ಜಪದೊಂದಿಗೆ ಅಂತಿಮ ಪ್ರಯಾಣದ ಗಾಡಿ ಹೊರಟಿತು. ರಾಮನಾಮವೇ ಸತ್ಯ ಎಂದು ಕೂಗುವ ಧ್ವನಿಯಲ್ಲಾಗಲೀ, ಹೆಣ ಹೊತ್ತು ನಡೆಯುವ ಪರಿಯಲ್ಲಾಗಲೀ ದುಃಖದ ಛಾಯೆ ಕಂಡುಬರಲಿಲ್ಲ. ನಾವೂ ಶವಯಾತ್ರೆಯಲ್ಲಿ ಪಾಲ್ಗೊಂಡೆವು. ಅಲ್ಲಿಂದ ಮಣಿಕರ್ಣಿಕಾ ಘಾಟ್‌ಗೆ ಸುಮಾರು ಒಂದು ಕಿಲೋ ಮೀಟರ್‌ನ ಹಾದಿ…
ಮಣಿಕರ್ಣಿಕಾದಲ್ಲಿ ದೊಂಡರಾಜ ಎಂಬವನ ವಂಶಸ್ಥರಿದ್ದಾರೆ. ಆ ಸ್ಮಶಾನದ ಮಾಲೀಕತ್ವ ಅವರದ್ದೇ. ಅವರೇ ಬೆಂಕಿಯನ್ನು ಕೊಡುವವರು. ಅದಕ್ಕೆ ಇವರು ಶುಲ್ಕ ನೀಡಬೇಕು. ಸೌದೆ, ಶವದ ವಸ್ತ್ರ, ತುಪ್ಪ, ಸುಗಂಧದ ಪುಡಿ, ಪುರೋಹಿತರು ಇತ್ಯಾದಿ ಎಂದೆಲ್ಲ ಸುಮಾರು ಮೂರು ಸಾವಿರ ಖರ್ಚಾಯಿತು. ಒಂದುಗಂಟೆಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದು ಮುದುಕಿಯ ದೇಹ ಪಂಚಭೂತಗಳಲ್ಲಿ ಲೀನವಾಯಿತು.

ಮಣಿಕರ್ಣಿಕಾದಿಂದ ಹಿಂತಿರುಗಿ ಬಂದಮೇಲೆ ಮುದುಕ ಊರಿಗೆ ಹೊರಟ, ಹೊರಡುವ ಮುಂಚೆ ತನ್ನ ವಿಳಾಸ ಬರೆಸಿ, ನೀವು ತೆಗೆದ ಫೋಟೋ ಪೋಸ್ಟ್‌ನಲ್ಲಿ ಕಳುಹಿಸಿಕೊಡಿ ಎಂದು ಹೇಳುವುದನ್ನು ಮರೆಯಲಿಲ್ಲ.

ಅಲ್ಲೇ ಚತ್ತೀಸ್‌ಗಡ್‌ನ ಮಣಿರಾಮ್ ಚಂದ್ರಾಕರ್ ಕೂಡ ಸಿಕ್ಕ. ತನ್ನ ತಾಯಿಗೆ ಮೋಕ್ಷ ಕೊಡಿಸುವುದು ಇವನ ಉದ್ದೇಶ:

ಮಣಿರಾಮ - ಆಧುನಿಕ ಶ್ರವಣಕುಮಾರ! - ಆಧುನಿಕ ಶ್ರವಣಕುಮಾರ!


“ನಾನು ನನ್ನ ತಮ್ಮಂದಿರನ್ನು ಕಷ್ಟ ಪಟ್ಟು ಸಾಕಿದ್ದೇ ನಮ್ಮ ತಾಯಿ. ನಮ್ಮ ತಂದೆ ನಾವೆಲ್ಲ ತುಂಬ ಚಿಕ್ಕವರಿಗಿದ್ದಾಗಲೇ ತೀರಿ ಹೋದರು. ಒಂದೇ ಒಂದು ತುಂಡು ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸಿದೆವು. ಇಂದು ನಮ್ಮ ಈ ಉತ್ತಮ ಸ್ಥಿತಿಗೆ ನಮ್ಮ ತಾಯಿ ಕಾರಣ. ಆಕೆಯ ಕೊನೆಯ ಇಚ್ಛೆಯಂತೆ ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ. ಜೊತೆಯಲ್ಲಿ ನನ್ನ ಪತ್ನಿ ಹಾಗೂ ತಂಗಿ ಬಂದಿದ್ದಾರೆ. ಊರಿಂದ ಬರುವಾಗ ಅಕ್ಕಿ, ಕಾಳು, ಬೇಳೆ ಇತರೆ ದಿನಸಿ ಎಲ್ಲಾ ತಂದಿದ್ದೇವೆ. ಬರೀ ತರಕಾರಿಯನ್ನು ಇಲ್ಲಿ ಕೊಳ್ಳುತ್ತೇವೆ. ಇಲ್ಲೇ ಅಡುಗೆ ಮಾಡಿಕೊಂಡು ಊಟ ಮಾಡುತ್ತೇವೆ. ದಿನಕ್ಕೆ ಸುಮಾರು ನಲವತ್ತು ಐವತ್ತು ರೂಪಾಯಿ ಖರ್ಚಾಗುತ್ತದೆ. ಬೆಳಗ್ಗೆಯಿಂದ ತಾಯಿಯ ಮುಂದೆ ಕುಳಿತು ಪುರಾಣ ಪುಣ್ಯ ಕಥೆಗಳನ್ನು ಓದುತ್ತೇನೆ. ಅವರ ಕಿವಿಗೆ ದೇವರ ವಿಚಾರ ಬಿಟ್ಟು ಬೇರೆ ಯಾವುದೂ ಕೇಳಬಾರದು ಎಂದು ಇಲ್ಲಿಯ ಕರ್ಮಚಾರಿಗಳು ಹೇಳಿದ್ದಾರೆ. ನಮ್ಮ ತಾಯಿ ಕೊನೆಯ ಉಸಿರು ಎಳೆಯಲು ಎಷ್ಟು ದಿನವಾದರೂ ಪರವಾಗಿಲ್ಲ ಅಲ್ಲಿಯವರೆಗೂ ಕಾಯುತ್ತೇನೆ… ನಾಳೆ ನಾನು ಸಾಯುವ ಹಂತ ಬಂದಾಗಲೂ ನಾನು ಇಲ್ಲೇ ಬರುತ್ತೇನೆ…’ ಎಂದು ಒಂದೇ ಉಸುರಿಗೆ ಹೇಳಿದ.

ಹೀಗೆ, ಇಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ. ಇವರೆಲ್ಲರ ಉದ್ದೇಶ ಕಾಶಿಯಲ್ಲಿ ಮೋಕ್ಷ ಹೊಂದುವುದು. ಇವರ ಮಧ್ಯೆ ನಮಗೆ ಮೋಕ್ಷ ಬೇಡ ಎನ್ನುವವರೂ ಇದ್ದಾರೆ. ಜೈನ ಧರ್ಮೀಯರು ಈ ಮೋಕ್ಷದ ಪರಿಕಲ್ಪನೆಯನ್ನೇ ಒಪ್ಪುವುದಿಲ್ಲ. ಹಾಗೆಯೇ ಬೌದ್ಧ ಧರ್ಮೀಯರೂ ಕೂಡ. ನನಗೂ ಮೋಕ್ಷ ಬೇಡ ಎಂದ ಸಂತ ಕಬೀರ್ ಕೂಡ ಹುಟ್ಟಿದ್ದು ಇಲ್ಲೇ!

ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಕಬೀರನಿಗೆ ‘ರಾಮ ರಹೀಮ ಅಲ್ಲಾ’ ಎಲ್ಲರೂ ಒಂದೇ. ಕಾಶಿಯಲ್ಲಿ ಸತ್ತರೆ ಮುಕ್ತಿ, ಮಗಹರ್‌ನಲ್ಲಿ ಸತ್ತವ ಕತ್ತೆಯಾಗಿ ಹುಟ್ಟುತ್ತಾನೆ ಎಂಬ ನಂಬಿಕೆ ಜನಗಳಲ್ಲಿ ಬೇರೂರಿತ್ತು. ಬೇಕೆಂದೇ ಕಬೀರರು ಕಾಶಿಯನ್ನು ಬಿಟ್ಟು ಮಗಹರ್‌ನಲ್ಲಿ ನೆಲಸುತ್ತಾರೆ. ಕೆಲವರು ಈ ಕುರಿತು ಪ್ರಶ್ನಿಸಿದಾಗ, ‘ಕಬೀರ ಕಾಶಿಯಲ್ಲಿ ಸತ್ತರೆ ರಾಮನ ಹೆಗ್ಗಳಿಕೆಯೇನು?” ಎಂದು ಮರುಸವಾಲು ಮಾಡುತ್ತಾರೆ. ‘ರಾಮನಲ್ಲಿ ನಿಜವಾದ ನಂಬಿಕೆಯಿದ್ದವನಿಗೆ ಕಾಶಿ ಮತ್ತು ಮಗಹರ್ ಎರಡೂ ಒಂದೇ, ಕಾಶಿಯಲ್ಲಿ ಯಾರಿಗೆ ಬೇಕಾದರೂ ಮುಕ್ತಿ ಸಿಗುತ್ತದೆ, ಆದರೆ ಮಗಹರ್‌ನಲ್ಲಿ ಸತ್ತವನಿಗೆ ಮುಕ್ತಿ ದೊರಕಿದಾಗಲೇ ರಾಮನಿಗೆ ಹೆಗ್ಗಳಿಕೆ…’ ಎಂಬುದು ಅವರ ವಾದವಾಗಿತ್ತು.

ಸಾಲು ಸಾಲು ಚಿತೆಗಳು...


ಅದೇನೇ ಇರಲಿ, ಕಾಶಿ ಒಂದು ಜೀವಂತ ಮ್ಯೂಸಿಯಮ್ ಇದ್ದ ಹಾಗೆ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ರೋಮ್ ನಂತರದ ಅತಿ ಪುರಾತನ ನಗರವೆಂದರೆ ಕಾಶಿ ಎಂದು ಹೇಳಲಾಗುತ್ತದೆ. ಚಾರಿತ್ರಿಕವಾಗಿಯೂ ಕೂಡ ಕಾಶಿಯ ಮೇಲೆ ಅನೇಕ ದಂಡಯಾತ್ರೆಗಳು ಜರುಗಿವೆ. ಕ್ರಿ.ಶ. ಹನ್ನೊಂದನೆಯ ಶತಮಾನದಿಂದ ಹದಿನೇಳನೇ ಶತಮಾನದವರೆಗೆ ಮುಸ್ಲಿಂ ದೊರೆಗಳ ದಾಳಿಗೆ ಸಿಲುಕಿ ನಲುಗಿದೆ. ಇಲ್ಲಿಯ ಬಾಹ್ಯ ಜೀವನ ಪದೇ ಪದೆ ಅಸ್ತವ್ಯಸ್ತವಾಗಿದೆ, ಗುಡಿಗೋಪುರಗಳು ಧ್ವಂಸವಾಗಿವೆ, ಲೂಟಿ ದಂಗೆಯಿಂದ ಜನ ತತ್ತರಿಸಿದ್ದಾರೆ. ಮುಸ್ಲಿಮರ ದಬ್ಬಾಳಿಕೆಯಲ್ಲಿ, ಇಂಗ್ಲಿಷರ ಹಿಡಿತದಲ್ಲಿ ನಲುಗಿದ್ದಾರೆ. ಇಷ್ಟೆಲ್ಲಾ ಸ್ಥಿತ್ಯಂತರಗಳನ್ನು ಕಂಡ ಕಾಶಿಯಲ್ಲಿ ಇಂದೂ ‘ವಿಶ್ವನಾಥನು ಮುಕ್ತಿಯನ್ನು ದೊರಕಿಸಿಕೊಡುವನು’ ಎಂಬ ನಂಬಿಕೆಯನ್ನು ಮಾತ್ರ ಕಾಶೀವಾಸಿಗಳು ಕಳೆದುಕೊಂಡಿಲ್ಲ. ಆ ನಂಬಿಕೆ ಜನಮನದಲ್ಲಿ ಆಳವಾಗಿ ಬೇರೂರಿದೆ.

ಇದು ಜೀವನ, ಇದುವೇ ಜೀವನ...

(ಇದು ಪ್ರಜಾವಾಣಿಯ ದೀಪಾವಳಿ ವಿಶೇಷಾಂಕಕ್ಕಾಗಿ ಬರೆದ ಲೇಖನ)

2 ಟಿಪ್ಪಣಿಗಳು

  1. Murali

    Thanks for sharing this story. Although this is somewhat a blind belief, it seems like a great destination to spend the last days of your life, i.e., if you know it! I feel like doing this myself but dont know when!

  2. astonishing images sir..i cant read kannada but still it was amazing!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: