ಪಿ. ಶೇಷಾದ್ರಿ

ಕಂಡಿದ್ದು ಕಂಡಂತೆ…

‘ಬೆಟ್ಟದ ಜೀವ’ದ ಬಗ್ಗೆ ಅನಂತಮೂರ್ತಿ…

ಅಂದು, ಗುರುವಾರ ಜೂನ್ ೨೩ನೇ ದಿನ.
‘ಬೆಟ್ಟದ ಜೀವ’ ಚಿತ್ರದ ವಿಶೇಷ ಪ್ರದರ್ಶನವನ್ನು ಐನಾಕ್ಸ್ ಚಿತ್ರಮಂದಿರದಲ್ಲಿ ಏರ್ಪಡಿಸಿದ್ದೆ.
ಡಾ.ಯು.ಆರ್.ಅನಂತಮೂರ್ತಿ ಚಿತ್ರನೋಡಲು ಬಂದಿದ್ದರು.
‘ನೀವು ಬಂದದ್ದು ತುಂಬಾ ಸಂತೋಷ ಸಾರ್’ ಎಂದೆ.
ಅದಕ್ಕೆ ಅವರು, ‘ಆದ್ರೆ ನಂಗೆ ಇರುಸು-ಮುರುಸಾಗ್ತಾ ಇದೆ ಕಣಯ್ಯಾ’ ಎಂದರು.
‘ಯಾಕ್ ಸಾರ್?!’ ಎಂದೆ.
‘ನಾನು ಈ ಮಾಲ್‌ಗಳ ವಿರೋಧಿ. ಇದನ್ನು ಒಡೆದು ಹಾಕಬೇಕು ಅಂತ ಕರೆ ಕೊಟ್ಟವನು. ಈಗ ನೋಡು, ಎಂಥ ವೈರುಧ್ಯ! ನಿನ್ನ ಸಿನಿಮಾ ನೋಡುವ ಕಾರಣದಿಂದ ಇವತ್ತು ಇದರೊಳಕ್ಕೆ ಹೆಜ್ಜೆ ಇಡಲೇ ಬೇಕಾಯಿತು…’ ಎಂದು ನಕ್ಕರು. ಇನ್ನೇನೋ ಅಂದುಕೊಂಡಿದ್ದ ನನಗೆ ಸಮಾಧಾನವಾಯಿತು.

ಅದು ಮುನ್ನೂರು ಜನ ಕುಳಿತು ನೋಡುವ ಚಿತ್ರಮಂದಿರ. ನಾನು ಸುಮಾರು ಐವತ್ತು ಟಿಕೇಟ್ ರಿಸರ್ವ್ ಮಾಡಿಸಿದ್ದೆ. ಉಳಿದದ್ದು ಪ್ರೇಕ್ಷಕರ ಪಾಲು. ಆಶ್ಚರ್ಯ ಎಂದರೆ ಉಳಿದ ಇನ್ನೂರೈವತ್ತು ಪ್ರೇಕ್ಷಕರು ಬಂದು ಚಿತ್ರಮಂದಿರ ಭರ್ತಿಯಾಯಿತು. ಬಸಂತ್‌ಕುಮಾರ್ ಪಾಟೀಲರಂತೂ ಫುಲ್ ಖುಷಿ. ಮಲ್ಲೇಪುರಂ, ಆ ರಾ ಮಿತ್ರ, ಟಿ.ಎನ್.ಸೀತಾರಾಮ್, ಕಪ್ಪಣ್ಣ, ಮರುಳಸಿದ್ದಪ್ಪ, ಪ್ರೊ.ರಾಧಾಕೃಷ್ಣ, ದೀಪಾ ಗಣೇಶ್, ಶೇಖರ್ ಪೂರ್ಣ, ಐ.ಎಂ.ವಿಠಲಮೂರ್ತಿ, ಮುಕುಂದರಾಜ್, ಡಾ.ಆಶಾದೇವಿ, ನಾಗಮಣಿ ಎಸ್.ರಾವ್, ಕೇಶವರಾವ್, ಮಂಗ್ಳೂರ್ ವಿಜಯ ಮುಂತಾದ ಅನೇಕರು ಬಂದಿದ್ದರು.

ಮಧ್ಯಾಹ್ನ ಒಂದೂಮುಕ್ಕಾಲಿಗೆ ಪಾರಂಭವಾದ ಪ್ರದರ್ಶನ ಮೂರೂ ಮುಕ್ಕಾಲಿಗೆ ಮುಗಿಯಿತು. ಹೊರಗೆ ಬಂದ ಎಲ್ಲರೂ ಮಾಮೂಲಿನಂತೆ ‘ಒಳ್ಳೇ ಚಿತ್ರಮಾಡಿದ್ದೀರ…’ ಎಂದು ಹೊಗಳಿದರು. ಇಷ್ಟು ಕಡಿಮೆ ಬಜೆಟ್‌ನಲ್ಲಿ ಇಷ್ಟು ಅದ್ದೂರಿ ಚಿತ್ರ ಹೇಗೆ ಮಾಡಿದಿರಿ ಎಂದು ವಿಠ್ಠಲಮೂರ್ತಿ, ಸೀತಾರಾಮ್ ಕೇಳಿದರು…

ಕೊನೆಯಲ್ಲಿ ಬಂದ ಅನಂತಮೂರ್ತಿಯವರು, ನನ್ನ ಕೈ ಹಿಡಿದು ಪ್ರೀತಿಯಿಂದ ಅಮುಕಿದರು. ಇದೇನು ‘ಸಾರ್ ನಿಮ್ಮ ಕೈ ಇಷ್ಟು ಬೆಚ್ಚಗಿದೆ?’ ಎಂದೆ. ‘ನನ್ನದು ಯಾವಾಗಲೂ warmth ಸ್ವಭಾವ ಕಣಯ್ಯ…’ ಎಂದು ನಕ್ಕರು. ಮತ್ತೆ ಮುಂದುವರಿದು “ಬೆಳಗ್ಗೆ ಯಾಕೋ ಜ್ವರ ಬಂತು. ಸಿನಿಮಾ ಮಿಸ್ ಮಾಡಿಕೋಬಾರದು ಅಂದ ಮಾತ್ರೆ ನುಂಗಿ ಬಂದೆ… ನಾನೀಗ ಹೋಗ್ತೀನಿ… ಆಮೇಲೆ ಮಾತಾಡ್ತೀನಿ” ಎಂದು ಎಸ್ತರ್ ಜೊತೆ ಹೊರಟು ಹೋದರು. ಈ ಹಿಂದೆ, ಎರಡು ವರ್ಷದ ಹಿಂದೆ ನನ್ನ ‘ವಿಮುಕ್ತಿ’ ನೋಡಿದಾಗಲೂ ಹೀಗೇ ಏನೂ ಹೇಳದೆ ಹೋಗಿದ್ದರು. ಕೈ ಕೂಡ ಕುಲುಕಿರಲಿಲ್ಲ. ಆಮೇಲೆ ಯಾರೋ, ಅವರಿಗೆ ಚಿತ್ರ ಇಷ್ಟವಾಗಿಲ್ಲ ಅದಕ್ಕೇ ಹಾಗೆ ಹೋಗಿದ್ದಾರೆ ಎಂದು ಹೇಳಿದರು. ಮುಂದೆ ಅವರನ್ನು ಹಲವು ಬಾರಿ ಭೇಟಿ ಆದಾಗಲೂ ನಾನೂ ಆ ಬಗ್ಗೆ ವಿಚಾರಿಸಲು ಹೋಗಿರಲಿಲ್ಲ.

ಈ ಬಾರಿ ಕೇಳಿಯೇಬಿಡಬೇಕು ಎಂದು ನಿರ್ಧರಿಸಿ, ಬೆಳಗ್ಗೆ ಫೋನ್ ಮಾಡಿದೆ. ರಿಸೀವ್ ಮಾಡಲಿಲ್ಲ. ಸ್ವಲ್ಪ ಹೊತ್ತಿಗೆ, ‘ನಾನು ಮಣಿಪಾಲ ಆಸ್ಪತ್ರೆಗೆ ಅಡ್ಮಿಟ್ ಆಗಿದೀನಿ’ ಅಂತ ಮೆಸೇಜ್ ಕಳುಹಿಸಿದರು.

ಚಿತ್ರದ ಕುರಿತು ಅವರ ಅಭಿಪ್ರಾಯ ತಿಳಿದುಕೊಳ್ಳಲು ಆಗಲಿಲ್ಲವಲ್ಲ ಎಂದು ಕೊರಗಿದೆ. ಒಂದು ವಾರದ ನಂತರ ಮತ್ತೆ ಸಂಪರ್ಕಿಸಿ, ನಾನೇ ನಿಮ್ಮ ಮನೆಗೆ ಬರತೀನಿ, ಹತ್ತು ನಿಮಿಷ ನಿಮ್ಮ ಜೊತೆ ಮಾತಾಡಬೇಕು ಎಂದೆ. ಯಾರೋ ಹೈದರಾಬಾದಿನಿಂದ ಬಂದಿದ್ದಾರೆ, ನಾನೇ ಫೋನ್ ಮಾಡಿ ಹೇಳ್ತೀನಿ, ಆಗ ಬರುವೆಯಂತೆ ಅಂದರು. ಬಹುಶಃ ಅವರಿಗೆ ನನ್ನ ಚಿತ್ರ ಇಷ್ಟವಾಗಿಲ್ಲ ಅದಕ್ಕೇ ಅವಾಯ್ಡ್ ಮಾಡುತ್ತಿದ್ದಾರೆ ಎಂದು ಸುಮ್ಮನಾದೆ. ನಿನ್ನೆ ಅವರೇ ಫೋನ್ ಮಾಡಿ, ನನ್ನ ಅಭಿಪ್ರಾಯವನ್ನು ಬರೆದು ಇಟ್ಟಿದ್ದೀನಿ ಯಾರನ್ನಾದರೂ ಕಳಿಸಿ ಕಲೆಕ್ಟ್ ಮಾಡಿಕೋ ಅಂದರು. ತಕ್ಷಣ ನನ್ನ ಸಹಾಯಕರನ್ನು ಕಳಿಹಿಸಿದೆ. ಟೈಪ್ ಮಾಡಿಸಿ, ಸಹಿ ಹಾಕಿ ಬರೆದುಕೊಟ್ಟಿದ್ದನ್ನು ಅವರ ಒಪ್ಪಿಗೆ ಪಡೆದು ಯಥಾವತ್ ಇಲ್ಲಿ ದಾಖಲಿಸಿದ್ದೇನೆ:

ಗೆಳೆಯ ಶೇಷಾದ್ರಿಯವರ ‘ಬೆಟ್ಟದ ಜೀವ’ ಚಿತ್ರವನ್ನು ನೋಡಿ ನನ್ನ ಮನಸ್ಸಿಗಾದ ಸಂತೋಷವನ್ನು ಹಂಚಿಕೊಳ್ಳುತ್ತೇನೆ. ಇಲ್ಲಿ ‘ಸಂತೋಷ’ ಎನ್ನುವ ಶಬ್ದವನ್ನು ಮನಃಪೂರ್ವಕವಾಗಿ ಬಳಸಿದ್ದೇನೆ. ಯಾಕೆಂದರೆ, ಭಾರತೀಯ ಕಥಾ ಪ್ರಪಂಚದ ಮಹತ್ವದ ಕೃತಿಗಳಲ್ಲಿ ಒಂದಾದ ಶಿವರಾಮಕಾರಂತರ ಬೆಟ್ಟದ ಜೀವವನ್ನು ಸರಿಗಟ್ಟುವ ಸಮಾಧಾನದ ಚಲನಚಿತ್ರ ಸಾಧ್ಯವೇ ಇಲ್ಲವೇನೋ. ಬೆಟ್ಟದ ಜೀವಕ್ಕೆ ಕಥನದ ಶಕ್ತಿ ಮಾತ್ರವಲ್ಲದೆ ಕಥನಕ್ಕಿಂತ ಹೆಚ್ಚನ್ನು ಸೂಚಿಸುವ ಕಾವ್ಯದ ಗುಣವೂ ಇದೆ. ಕಾವ್ಯ ತಾನು ಮೂಡಿದ ಭಾಷೆಯಲ್ಲಿ ಮಾತ್ರ ಇರಬಲ್ಲದು. ಅನುವಾದದಲ್ಲಿ ಸಿಗುವುದು ನಮಗೆ ಅದರ ನೆರಳು ಮಾತ್ರ.

ಶೇಷಾದ್ರಿಯವರ ಚಿತ್ರ ನನಗೆ ಸಂತೋಷವನ್ನು ಕೊಡಲು ಮುಖ್ಯ ಕಾರಣ ಇವು:

೧. ಕಥೆಯನ್ನು ಓದುವಾಗ ನಾವು ಮನಸ್ಸಿನೊಳಗೆ ಕಾಣುವ ಪಾತ್ರಗಳಂತೆಯೇ ಇವರ ಪಾತ್ರಗಳೂ ಕಾಣಿಸಿಕೊಳ್ಳುತ್ತವೆ. ಸಿನಿಮಾದ ಗ್ಲಾಮರ್‌ಗಾಗಿ ಶೇಷಾದಿಯವರು ಏನನ್ನೂ (ಪಾತ್ರಗಳ ಯಾವ ಚರ್ಯೆಯನ್ನೂ) ಉತ್ಪ್ರೇಕ್ಷಿಸುವುದೂ ಇಲ್ಲ, ಕಡಿಮೆ ಮಾಡುವುದೂ ಇಲ್ಲ.

೨. ಕಥಾನಕದ ವಿವರಗಳೆಲ್ಲವೂ ಒಂದು ನೈಜ ಸ್ಥಿತಿಯನ್ನು ಮನಮುಟ್ಟುವಂತೆ ಚಿತ್ರಿಸುತ್ತವೆ. ‘ಧಣೀ…’ ಎಂದು ಒಳಗೆ ಬರುವ ಆಳು, ಪದ್ಧತಿಯಂತೆ ನಾಗಂದಿಗೆಯ ಮೇಲಿನಿಂದ ಕವಳದ ಗಂಟನ್ನೆತ್ತಿ ಕೂತು ಕವಳ ಹಾಕಿಕೊಳ್ಳುವುದು ನಾನು ಮರೆಯಲಾರದ ದೃಶ್ಯ. ಇಲ್ಲಿ ಧಣಿ ಧಣಿಯೇ; ಆಳು ಆಳೇ. ಆದರೆ, ಇಬ್ಬರೂ ಒಂದೇ ಕುಟುಂಬಕ್ಕೆ (ಜಾತಿಗಳಲ್ಲಿ ಅಂತರವಿದ್ದರೂ) ಸೇರಿದವರು. ಇದನ್ನೊಂದು ಆದರ್ಶಪ್ರಾಯವಾದ ಸಂಬಂಧವೆಂದು ಶೇಷಾದ್ರಿ ಹೇಳುತ್ತಿಲ್ಲ. ಹಾಗೆಯೇ ಅನಗತ್ಯವಾಗಿ ಈ ಸಂಗತಿಗಳನ್ನು ಆಧುನಿಕ ಕಾರಣಗಳಿಂದ ನೋಡುವ ತೆವಲುಗಳೂ ಇವರಿಗಿಲ್ಲ. ಇರುವುದನ್ನು ಇದ್ದಂತೆ ಚಿತ್ರಿಸುವ ಗುಣ ಎಲ್ಲೆಲ್ಲೂ ಕಾಣುತ್ತದೆ.

೩. ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನಗೆ ಪ್ರಕೃತಿಯ ಚಿತ್ರಗಳೆಲ್ಲವೂ ಅತೀ ಮೋಹಕವಾಗದಂತೆ ಆದರೆ, ನೈಜವೆನ್ನಿಸುವಂತೆ ಇವೆ.

೪. ಇಲ್ಲಿನ ಪಾತ್ರಗಳೆಲ್ಲವೂ ತಮ್ಮ ದೈನಿಕ ಕ್ರಿಯೆಗಳಲ್ಲೇ ವಿಶೇಷವಾದ್ದನ್ನು ಬಿಂಬಿಸುತ್ತವೆ. ಹುಲಿ ಹಿಡಿಯುವ ದೃಶ್ಯವೂ ಕೂಡ ಆ ಊರಿನ ಜನರ ದೈನಿಕದ ಇನ್ನೊಂದು ಸಂಗತಿಯೋ ಎಂಬಂತೆ ಚಿತ್ರಿತವಾಗಿದೆ. ಇದು ಕೇವಲ ಭೂತಕಾಲದ ಹಳಹಳಿಕೆಯ ಚಿತ್ರವಾಗಿಬಿಡಬಹುದಿತ್ತು. ಕೊನೆಯ ದೃಶ್ಯದಲ್ಲಿ ಇದನ್ನವರು ಉದ್ದೇಶಪೂರ್ವಕವಾಗಿ ನಿರಾಕರಿಸುತ್ತಾರೆ. ಈಗ ಹಳ್ಳಿ ರೆಸಾರ್ಟ್ ಆಗಿದೆ. ಈ ಚಿತ್ರಣವನ್ನು ನಾನು ಕೊಂಚ ಕಿರಿ ಕಿರಿ ಪಡುತ್ತಲೇ, ಆದರೆ ವೈಚಾರಿಕವಾಗಿ ಇಷ್ಟಪಡುತ್ತೇನೆ.

ನಮ್ಮ ಕಾಲದ ಚಲನಚಿತ್ರದಲ್ಲಿ ಜಾಗತಿಕ ಮಹತ್ವವನ್ನು ಸಾಧಿಸಿದವರು ಗಿರೀಶ್ ಕಾಸರವಳ್ಳಿ. ಅವರ ಹಾದಿಯಲ್ಲೇ ಇರುವ ಚಿತ್ರ ನಿರ್ದೇಶಕರಲ್ಲಿ ಶೇಷಾದ್ರಿ ಮುಖ್ಯರು ಎಂದು ನನಗನ್ನಿಸಿದೆ. ಬೆರಳೆಣಿಕೆಯಷ್ಟು ಈ ಬಗೆಯ ಇನ್ನೂ ಕೆಲವು ಯುವ ಚಿತ್ರನಿರ್ದೇಶಕರು ಮಾತ್ರ ಇದ್ದಾರೆ ಅನ್ನಿಸಿದರೂ ಅವರು ಮಾಡುತ್ತಿರುವ ಪರಿಣಾಮ ಮಹತ್ವದ್ದು.

ಒಟ್ಟಿನಲ್ಲಿ ನನಗಂತೂ ಶೇಷಾದ್ರಿಯವರ ‘ಬೆಟ್ಟದ ಜೀವ’ ಮರೆಯಲಾಗದ ಚಿತ್ರ. ಕಾರಂತರ ಕಥೆಯಲ್ಲಿ ತಾಯಿ ತಂದೆಯರು ಒಂಟಿ ಜೀವನ ನಡೆಸುತ್ತ, ಪ್ರಕೃತಿಯೊಡನೆ ಸೆಣೆಸುತ್ತಾ, ಓಡಿ ಹೋದ ಮಗನಿಗಾಗಿ ಹಂಬಲಿಸುತ್ತಾ ಇರುವ ಕಥನದಲ್ಲಿ ಎಂದೆಂದಿಗೂ ಸಲ್ಲುವ ಕಾಲಗತವಾದ್ದು ಎಂದು ಮಾತ್ರ ಅನ್ನಿಸದ ಬರವಣಿಗೆ ಇದೆ. ಆದರೆ ಭಾಷೆಯಲ್ಲಿ ಕಾಲವನ್ನೂ ಮೀರುವಷ್ಟು ಸಹಜವಾಗಿ ಚಿತ್ರೀಕರಣದಲ್ಲಿ ಮೀರುವುದು ತುಂಬ ಕಷ್ಟವೇನೋ? ಶೇಷಾದ್ರಿಯವರು ತುಂಬ ಎಚ್ಚರದಲ್ಲಿ ಆಗಿ ಹೋದದ್ದನ್ನು ಚಿತ್ರಿಸಿದ್ದಾರೆ. ಹಳಹಳಿಕೆಯಿಂದ ಇದನ್ನು ಚಿತ್ರಿಸಿಲ್ಲ ಎಂಬುದು ಅವರ ಚಿತ್ರದ ಒಂದು ಮುಖ್ಯ ಗುಣ. ಆದರೆ, ಇಲ್ಲಿ ಚಿತ್ರಿತವಾದ್ದು ಯಾವ ಕಾಲದ ಮಾನವ ಸಂಬಂಧಗಳ ಬಿಕ್ಕಟ್ಟುಗಳೂ ಆಗಬಹುದು ಎಂದು ನನಗೆ ಅನ್ನಿಸುವಂತೆ ಚಿತ್ರ ತನ್ನದೇ ಆದ ಫ್ರೇಮ್‌ನಿಂದ ಹೊರಬರಲಾರದು. ಕಾರಂತರ ಕಥನ ಕ್ರಿಯೆ ತನ್ನ ಕಾಲದ್ದೂ ಆಗಿದ್ದು, ಎಲ್ಲ ಕಾಲದ್ದೂ ಅನ್ನಿಸುವಂತದ್ದು.

ಇವೆಲ್ಲವನ್ನೂ ಗಮನಿಸಿದಾಗಲೂ ನನಗೆ ಚಿತ್ರ ಎಲ್ಲಿಯೂ ತನ್ನ ಹದವನ್ನು ಕಳೆದುಕೊಳ್ಳದಂತೆ ಉತ್ತಮ ಚಿತ್ರವಾಗಿ ಮೂಡಿಬಂದಿದೆ ಎಂಬುದನ್ನು ಹೇಳಲೇಬೇಕು.

೭ ಜುಲೈ ೨೦೧೧

3 ಟಿಪ್ಪಣಿಗಳು

  1. ಶೇಷಾದ್ರಿಯವರೇ ನನಗೆ ಬೆಟ್ಟದ ಜೀವ ತುಂಬಾ ಇಷ್ಟವಾಯಿತು. ಉತ್ತಮ ಚಿತ್ರ ನೀಡಿದ ನಿಮಗೆ ಅಭಿನಂದನೆಗಳು. ನನ್ನ ಅಭಿಪ್ರಾಯವನ್ನು ನನ್ನ ಬ್ಲಾಗ್ ನಲ್ಲಿ ದಾಖಲಿಸಿದ್ದೇನೆ. ಲಿಂಕ್ http://eeprapancha.raveeshkumar.com/2011/08/bettada-jeeva-movie-review-kannada.html

  2. ಟೋಟಲ್ ಕನ್ನಡದ ಕೃಪೆಯಿಂದ ನಾವೂ ಮನೆಮಂದಿಯೆಲ್ಲ ಜೊತೆಯಾಗಿ ಕೂತು ನಿಮ್ಮ ಕೆಲವು ಸಿನಿಮಾಗಳನ್ನು ನೋಡಲು ಸಾಧ್ಯವಾಗಿದೆ. ನಿಮ್ಮ ಬೆಟ್ಟದ ಜೀವ, ಭಾರತ್ ಸ್ಟೋರ್ಸ್ ಎರಡನ್ನೂ ನೋಡಿದೆವು. ಬೆಟ್ಟದ ಜೀವದ ದೃಶ್ಯಾವಳಿಗಳು, ಕತೆಗೆ ನೀವು ದಕ್ಕಿಸಿದ ಹಲವು ಪಾತಳಿಯ ಆಯಾಮಗಳು ತುಂಬ ಇಷ್ಟವಾದವು. ಸಂಭಾಷಣೆಯಲ್ಲಿ ಆಗಾಗ ಕೃತಕತೆ ಇಣುಕಿ ಕಿರಿಕಿರಿಯುಂಟು ಮಾಡುತ್ತದೆ. ಒಟ್ಟಾರೆಯಾಗಿ ಸಿನಿಮಾ ಮನಕಲಕಿದ ಬಗೆ ತಕ್ಷಣವೇ ನಿಮಗೆ ಅಭಿನಂದನೆ ಹೇಳಬೇಕೆನಿಸುವಷ್ಟು ತೀವ್ರವಾಗಿತ್ತು. ಭಾರತ್ ಸ್ಟೋರ್ಸ್ ಬೆಟ್ಟದ ಜೀವಕ್ಕಿಂತ ಹೆಚ್ಚು ಚೆನ್ನಾಗಿ, ಪ್ರಬುದ್ಧವಾಗಿ ಮತ್ತು ಬಿಗಿಯಾಗಿ ಬಂದಿದೆ ಅನಿಸಿತು. ಎರಡೂ ಚಿತ್ರಗಳ ಪರಿಸರ, ಪಾತ್ರಗಳು, ಸಮಸ್ಯೆ ಎಲ್ಲವೂ ಇನ್ನೂ ಮನಸ್ಸಿನಲ್ಲಿ ಸುತ್ತುತ್ತಿದೆ. ಮತ್ತಷ್ಟು ಒಳ್ಳೊಳ್ಳೆಯ ಚಿತ್ರಗಳ ನಿಮ್ಮಿಂದ ಬರಲಿ, ಯಶಸ್ಸಿನ ಹೊಸ ಎತ್ತರಕ್ಕೆ ನೀವು ಏರುವಂತಾಗಲಿ ಎಂದು ಹಾರೈಸುತ್ತೇನೆ.

    • ಪ್ರಿಯರೇ,

      ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

      ನಿಜ, ಮಾತುಗಳಲ್ಲಿ ಪ್ರಾದೇಶಿಕತೆ ತರುವ ವಿಚಾರದಲ್ಲಿ ನಾನು ಎಡವಿದ್ದೇನೆ.
      ಬೆಂಗಳೂರಿನ ಕಲಾವಿದರನ್ನು ಬಳಸಿಕೊಂಡದ್ದರಿಂದ ಹೀಗಾಯಿತೇನೋ… ಆದರೆ ಇದನ್ನು ನಿರ್ವಹಿಸಲಾರದೆ, ಲಗಾಮು ಬಿಟ್ಟದ್ದು ನನ್ನದೇ ತಪ್ಪು. ಈ ತಪ್ಪನ್ನು ಮತ್ತೆ ಮಾಡಬಾರದು ಎಂದೆಣಿಸಿ ‘ಡಿಸೆಂಬರ್-೧’ ಚಿತ್ರದಲ್ಲಿ ವಿಪರೀತ ಎಚ್ಚರಿಕೆ ವಹಿಸಿದೆ. ಅದು ಪ್ರತಿಫಲ ಕೊಟ್ಟಿತು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: