ಹೂವಾಗು ಬೆಟ್ಟದಡಿ…
ಮೂವತ್ತು ವರ್ಷಗಳ ಹಿಂದಿನ ಮಾತು. ಆಗ ನಾನು ಹೈಸ್ಕೂಲ್ ಓದುತ್ತಿದ್ದೆ. ವಾರಕ್ಕೊಮ್ಮೆ ನಮ್ಮ ಹಳ್ಳಿಯ ಹಳೇ ಲೈಬ್ರರಿಯಿಂದ ಹೆಚ್.ನರಸಿಂಹಯ್ಯ, ಮಾಭೀಶೇ ಮುಂತಾದವರ ಕಾದಂಬರಿಗಳನ್ನು ತಂದು ಓದಿ ಅಚ್ಚರಿಪಡುತ್ತಾ ನಾನೊಬ್ಬ ಸಾಹಿತ್ಯದ ವಿದ್ಯಾರ್ಥಿ ಎಂದು ಬೀಗುತ್ತಿದ್ದೆ. ಒಮ್ಮೆ ಮೇಷ್ಟ್ರ ಕೈಗೆ ಈ ಕಾದಂಬರಿ ಸಿಕ್ಕಿತು, ನನ್ನನ್ನು ಕರೆದು, ‘ನೀನು ಓದಿದರೆ ಶಿವರಾಮ ಕಾರಂತರು, ಕುವೆಂಪು, ಎಸ್.ಎಲ್.ಭೈರಪ್ಪ ಮುಂತಾದವರ ಕೃತಿಗಳನ್ನು ಓದಬೇಕು, ಬುದ್ಧಿ ಬೆಳೆಯುತ್ತದೆ..’ ಎಂದರು. ಆಗ ನಮ್ಮ ಅಣ್ಣ ಕನ್ನಡ ಎಂ.ಎ. ಮಾಡುತ್ತಿದ್ದ. ಆತನ ಬಳಿ ‘ಬೆಟ್ಟದ ಜೀವ’ ಪಡೆದು ಓದಿದೆ. ಮೊದಲ ಓದಿಗೆ ಆ ಕಾದಂಬರಿ ನನಗೆ ಏನೇನೂ ರುಚಿಸಲಿಲ್ಲ. ಇದರಲ್ಲೇನು ಕಥೆ ಇದೆ? ನಮ್ಮ ಮೇಷ್ಟ್ರು ಇಂಥವನ್ನು ಓದಬೇಕು ಎಂದು ಯಾಕಾದರೂ ಹೇಳುತ್ತಾರೋ! ಈ ಮೇಷ್ಟ್ರುಗಳ ಮಂಡೆ ಸರಿ ಇಲ್ಲ ಎಂದು ಮನಸ್ಸಿನಲ್ಲೇ ಗೊಣಗಿಕೊಂಡಿದ್ದೆ.
ಮುಂದೆ ನಾನು ಎಂ.ಎ. ಓದುವ ಸಂದರ್ಭದಲ್ಲಿ ಮತ್ತೆ ಕಾರಂತರು ನನ್ನನ್ನು ಕಾಡಬೇಕೆ! ಈ ಬಾರಿ ಪರೀಕ್ಷೆಗಾಗಿ ‘ಬೆಟ್ಟದ ಜೀವ’ ಓದುವ ಸಂದರ್ಭ ಬಂತು. ಎಷ್ಟು ಓದಿದರೂ ಅಷ್ಟೇ, ಅಂಕಗಳೇನೂ ಹೆಚ್ಚು ಬರಲಿಲ್ಲ…
ಮುಂದೆ ನಾನು ಆ ದಡ ಈ ದಡ ಬಡಿದು ಈ ಚಿತ್ರರಂಗಕ್ಕೆ ಬಂದೆ. ಇಲ್ಲೂ ಮತ್ತೆ ಕಾರಂತರು ಎದುರಾಗಬೇಕೆ! ಯಾರೋ ಸ್ನೇಹಿತರು ‘ಬೆಟ್ಟದ ಜೀವ’ ಕಾದಂಬರಿ ಓದಿ ಸಿಂಗಲ್ ಲೈನ್ ಮಾಡಿಕೊಡಲು ಕೇಳಿದರು. ಇದಕ್ಕಾಗಿ ದುಡ್ಡು ಕೊಡುತ್ತೇನೆ ಎಂದು ಆಸೆ ಬೇರೆ ತೋರಿಸಿದರು. ಮತ್ತೆ ಕಾದಂಬರಿ ಓದಿದೆ, ಈ ಬಾರಿ ಸಿನಿಮಾ ವಿದ್ಯಾರ್ಥಿಯಾಗಿ. ಆಗಲೂ ಇದು ಹೆಚ್ಚು ದಕ್ಕಲಿಲ್ಲ… ಅವರು ದುಡ್ಡೂ ಕೊಡಲಿಲ್ಲ.
ಮುಂದೆ ನಾಲ್ಕು ಚಿತ್ರಗಳನ್ನು ಮಾಡಿದೆ. ನಾಲ್ಕಕ್ಕೂ ರಾಷ್ಟ್ರಮಟ್ಟದ ಮನ್ನಣೆ ದೊರೆಯಿತು. ಐದನೆಯ ಚಿತ್ರಕ್ಕಾಗಿ ವಸ್ವುವಿನ ಹುಡುಕಾಟದಲ್ಲಿದ್ದಾಗ, ಚಿತ್ರರಂಗದ ಹಿರಿಯ ಮಿತ್ರರೊಬ್ಬರು ‘ಬೆಟ್ಟದ ಜೀವ’ ಮಾಡಿ, ಅದು ಅದ್ಭುತವಾದ ಕಾದಂಬರಿ ಎಂದು ಹುರಿದುಂಬಿಸಿದರು. ನನಗೂ ಕೊಂಚ ವಯಸ್ಸಾಗಿ, ನಾಲ್ಕು ಕೊಂಬು ಬೇರೆ ಮೂಡಿತ್ತಲ್ಲ, ಇನ್ನೊಂದು ಕೈ ನೋಡೇ ಬಿಡೋಣ ಎಂದು ಮತ್ತೆ ಕಾದಂಬರಿ ಓದಿದೆ. ಉಹುಂ, ಈಗಲೂ ಇದು ಹಿಡಿತಕ್ಕೆ ಸಿಗಲಿಲ್ಲ. ನಂತರ ಇದರ ಸಹವಾಸವೇ ಬೇಡ ಎಂದು ‘ವಿಮುಕ್ತಿ’ ಚಿತ್ರ ಮಾಡಿದೆ.
ಮತ್ತೆ ಎರಡು ವರ್ಷ ಕಳೆದು ಚಿತ್ರಮಾಡಲು ಹೊರಟಾಗ ‘ಬೆಟ್ಟದ ಜೀವ’ ಕಣ್ಣ ಮುಂದೆ ಬಂತು. ಮತ್ತೆ ಓದಿದೆ. ಕೆಲವು ಮಿತ್ರರು ಇದನ್ನು ದೃಶ್ಯಕ್ಕೆ ಪರಿವರ್ತಿಸುವುದು ಕಷ್ಟ ಎಂದರು. ನಾನು ನಿರ್ಧರಿಸಿ ಆಗಿತ್ತು. ನಿರ್ಮಾಪಕ ಬಸಂತ್ ಕುಮಾರ ಪಾಟೀಲರು ಜೈ ಅಂದರು. ಸರಿ ಹೊರಟೇ ಬಿಟ್ಟೆ. ಸಾಲಿಗ್ರಾಮಕ್ಕೆ ಹೋಗಿ ಮಾಲಿನಿ ಮಲ್ಯರ ಬಳಿ ಮಾತಾಡಿದೆ. ಅವರೂ ಸೈ ಅಂದರು. ‘ಬೆಟ್ಟದ ಜೀವ’ ಕೃತಿಯ ಬಗ್ಗೆ ಬಂದಿದ್ದ ವಿಮರ್ಶೆಗಳನ್ನೆಲ್ಲಾ ಸಂಗ್ರಹಿಸಿ ಕೊಟ್ಟರು. ಓದುತ್ತಾ, ಓದುತ್ತಾ, ಓದುತ್ತಾ ಕೃತಿ ದಕ್ಕತೊಡಗಿತು.
ಗೆಳೆಯ ಗೋಪಾಲಕೃಷ್ಣ ಪೈ ಜತೆ ಮಾಡಿಕೊಂಡು ಕುಕ್ಕೆ ಸುಬ್ರಹ್ಮಣ್ಯ ಸುತ್ತ ಮುತ್ತೆಲ್ಲಾ ಸುತ್ತಿ ಬಂದೆ. ಕಾರಂತರ ಈ ಕೃತಿಗೆ ಪ್ರೇರಣೆ ಒದಗಿಸಿದ್ದ ಕಟ್ಟಾ ಗೋವಿಂದಯ್ಯನವರ ಮನೆಗೆ ಹೋಗಿಬಂದೆ. ಅವರ ಮಗ ಸಿಕ್ಕರು. ಅವರು ಕಾರಂತರ ಓಡಾಡಿದ ಜಾಗಗಳನ್ನು ತೊರಿಸಿದರು. ಕಾರಂತರು ಐವತ್ತು ವರ್ಷಗಳ ಹಿಂದೆ ಅವರ ತಂದೆಗೆ ಬರೆದಿದ್ದ ಕೆಲವು ಪತ್ರಗಳನ್ನು ಕೊಟ್ಟರು. ಆದರೆ ಕಾದಂಬರಿಯಲ್ಲಿ ಓಡಿ ಹೋಗುವ ‘ಗೋಪಾಲಯ್ಯನ ಮಗ ಶಂಭು ಮಾತ್ರ ನಾನಲ್ಲ’ ಎಂದು ಹೇಳುವುದನ್ನು ಅವರು ಮರೆಯಲಿಲ್ಲ. ಅಲ್ಲೇ ನನಗೆ ‘ಬೆಟ್ಟದ ಜೀವ’ದ ಆರಂಭದ ಮುದ್ರಣದ ಪ್ರತಿ ಸಿಕ್ಕಿತು. ಅದರ ಮುನ್ನುಡಿಯಲ್ಲಿ ಕಾರಂತರ ಹೀಗೆ ಬರೆದಿದ್ದರು:
“… ಈ ಕಾದಂಬರಿಯಲ್ಲಿ ಬರವಣಿಗೆಯ ದಾರಿಯಲ್ಲಿ-ಕಾಲ ಸ್ಥಳ, ಕ್ರಿಯೆ- ಇವುಗಳ ಐಕ್ಯವನ್ನು, ಆಧುನಿಕ ನಾಟಕಗಳಲ್ಲಿ ಇರುವಂತೆ, ತರಲು ಪ್ರಯತ್ನಿಸಿದೆ. ಈ ಮಾದರಿಯಿಂದ ಇದು ಹೊಸತು. ಕಾಡುಗಳನ್ನು ಸದಾ ಸುತ್ತಾಡುತ್ತಿದ್ದ ನನಗೆ, ಆ ಆವರಣ ಪರಿಚಿತವಾದದ್ದು. ವ್ಯಕ್ತಿಗಳು ನವೀನರಲ್ಲ. ಹಳ್ಳಿಗೆ ಹೋಗಿ ಎಷ್ಟೋ ಗೆಳೆಯರ ಕೃಷಿಯ ಸಾಹಸದ ಕೆಲಸಗಳನ್ನು ನೋಡಿ ಮೆಚ್ಚಿದ್ದೇನೆ. ಅದರ ಚಿತ್ರವನ್ನು ಬರೆಯಬೇಕೆಂಬ ಆಸೆ ಮೂಡಿತ್ತು. ಒಮ್ಮೆ ಮಡಕೇರಿಗೆ ಹೋಗುವ ದಾರಿಯಲ್ಲಿ ನಾಲ್ಕು ಕಿಲೋ ಮೀಟರು ಇರುವಾಗ ಬಸ್ಸು ಹಾಳಾಯಿತು. ಅಲ್ಲಿಯೇ ಕುಳಿತಿರಲಾರದೆ, ಮಡಿಕೇರಿಗೆ ನಡೆದು ಮುಂದುವರಿದೆ. ಕಣ್ಣೆದುರಿಗೆ ನಿಂತಿದ್ದ ಗುಡ್ಡ ಮತ್ತು ಕಾಡುಗಳು ‘ಬೆಟ್ಟದ ಜೀವ’ ಎಂಬ ಹೆಸರನ್ನು ಸೂಚಿಸಿದವು. ಮಡಿಕೇರಿಯಲ್ಲಿ ಮಂಜುನಾಥಯ್ಯನವರ ಮನೆಯಲ್ಲಿ ಆರು ದಿನಗಳ ಕಾಲ ಗೀಚಿ, ಹವ್ಯಕ ಬ್ರಾಹ್ಮಣರ ಕತೆಯೊಂದನ್ನು ಮುಗಿಸಿದೆ. ಪ್ರಾದೇಶಿಕ ಚಿತ್ರವಾದ ಅದನ್ನು ಕಂಡು ‘ಅದರಲ್ಲಿ ಕತೆಯೇನಿದೆ?’ ಎಂದರವರೂ ಉಂಟು. ಕತೆ ಹೇಳುವುದಕ್ಕೆ ಕುಳಿತವ ನಾನಲ್ಲ. ಕಾದಂಬರಿಯಿರುವುದು ಶೀಲ ನಿರೂಪಣೆಗೆ…”
ಈ ನಡುವೆ ಕಾದಂಬರಿಯನ್ನು ಮತ್ತೆ ಓದಿದೆ. ಚಿತ್ರದ ಬಿಂಬಗಳು ಸ್ಪಷ್ಟವಾಗತೊಡಗಿದವು. ಚಿತ್ರಕಥೆ ಬರೆದೆ, ಪೈ ಸಂಭಾಷಣೆ ಬರೆದುಕೊಟ್ಟರು. ಚಿತ್ರಕಥೆಯನ್ನು ಕೆಲವು ಮಿತ್ರರಿಗೆ ಓದಲು ಕೊಟ್ಟೆ, ಅವರೂ ಮೆಚ್ಚುಗೆ ಮಾತಾಡಿದರು. ಧೈರ್ಯ ಬಂತು. ಚಿತ್ರೀಕರಣಕ್ಕೆ ಹೊರಟೆ. ಉತ್ಸಾಹೀ ಅನಂತ್ ಅರಸ್ ಕ್ಯಾಮರಾ ಹಿಡಿದರು. ದತ್ತಣ್ಣ, ಸುಚೇಂದ್ರಪ್ರಸಾದ್, ರಾಮೇಶ್ವರಿ ವರ್ಮ ಮುಂತಾದ ಕಲಾವಿರನ್ನು ಒಳಗೊಂಡ ಅರವತ್ತು ಜನರ ತಂಡ ಕಟ್ಟಿಕೊಂಡು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಿಡಾರ ಹೂಡಿದೆವು.
ಕಾರಂತರಂತ ಗಟ್ಟಿ ಜೀವಕ್ಕೆ ಕಾಡು-ಮೇಡು ದೊಡ್ಡ ವಿಚಾರವಲ್ಲ. ಆದರೆ ನಮ್ಮಂಥ ನಗರವಾಸಿಗಳಿಗೆ? ಕಥೆ ನಡೆಯುವ ಕಾಲ ಸ್ವಾತಂತ್ರ್ಯ ಪೂರ್ವದ್ದು, ಜಾಗ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯದ ಬದಿಯ ಕಾಡಿನ ಮೂಲೆಯೊಂದರಲ್ಲಿ… ಕಾರಂತರ ಕೆಳಬೈಲನ್ನು ಸುಬ್ರಹ್ಮಣ್ಯದ ಬಳಿಯ ಕೂಜುಗೋಡಿನ ಬಳಿ ಕಂಡುಕೊಂಡೆವು. ಸುತ್ತಲೂ ಹೊಳೆ ಮಧ್ಯೆ ಒಂಟಿ ಮನೆ. ಆ ಜಾಗಕ್ಕೆ ಮೊದಲು ಹೋದಾಗ ನಮ್ಮನ್ನು ಸ್ವಾಗತಿಸಿದ್ದು ಜಿಗಣೆಗಳು! ಬೆವರು ಹರಿದದ್ದಕ್ಕಿಂತ ರಕ್ತವೇ ಹೆಚ್ಚು ಹರಿಯಿತು.
ಕೂಜುಗೋಡು ಮನೆಯ ಅರ್ಧ ಮೈಲು ದೂರದಲ್ಲಿ ನಮ್ಮ ವಾಹನ ನಿಲ್ಲಿಸಿ ಅಲ್ಲಿಗೆ ಕಾಲ್ನಡಿಗೆಯಲ್ಲಿ ನಡೆದೇ ಹೋಗಬೇಕಿತ್ತು. ಎಪ್ಪತ್ತರ ಹರೆಯದ ದತ್ತಣ್ಣ, ರಾಮೇಶ್ವರಿ ವರ್ಮ ಇವರೆಲ್ಲ ನನ್ನನ್ನು ಎಷ್ಟು ಬೈದುಕೊಂಡರೋ… ಎಲ್ಲವನ್ನೂ ನಾನು ಕುಕ್ಕೆ ಸುಬ್ರಹ್ಮಣ್ಯನ ತಲೆಗೆ ಕಟ್ಟಿದೆ. ಮಧ್ಯೆ ರಾತ್ರಿ ಚುಕ್ಕಿಯ ಬೆಳಕಲ್ಲಿ ಒಬ್ಬರ ಅಂಗಿಯ ಚುಂಗನ್ನು ಇನ್ನೊಬ್ಬರು ಹಿಡಿದು ಕಾಲುದಾರಿಯಲ್ಲಿ ನಮ್ಮ ವಾಹನ ಸೇರಬೇಕಿತ್ತು. ಅಲ್ಲಿಂದ ನಮ್ಮ ಬಿಡಾರಕ್ಕೆ ಒಂದು ಗಂಟೆಯ ಹಾದಿ. ಹೊರಗೆ ಧೋ ಎಂಬ ಮಳೆ… ಗುಂಯ್‌ಗುಡುವ ಜೀರುಂಡೆ… ಹಾವುಗಳ ಕಾಟ… ಆಗಾಗ ಬಂದು ಹೆದರಿಸುವ ಗುಡುಗು-ಸಿಡಿಲು… ಅಬ್ಬ! ಆ ಹದಿನೈದು ದಿನಗಳನ್ನು ಮರೆಯಲು ಸಾಧ್ಯವೇ ಇಲ್ಲ.
ಅರವತ್ತು ಜನರ ನಮ್ಮ ತಂಡ ನನಗೆ ಹಿಡಿ ಹಿಡಿ ಶಾಪ ಹಾಕಿತು. ಇದರಿಂದ ಕಾರಂತರೂ ಹೊರತಾಗಲಿಲ್ಲ. ಒಮ್ಮೆಯಂತೂ ಕುಕ್ಕೆ ಬಳಿಯ ಕುಮಾರಧಾರದಲ್ಲಿ ನಮ್ಮ ದತ್ತಣ್ಣ ಸ್ನಾನ ಮಾಡುವ ದೃಶ್ಯ ಮಾಡುವಾಗ ಕೊಚ್ಚಿಕೊಂಡು ಹೋಗಿಯೇಬಿಟ್ಟರು. ಸುಬ್ರಹ್ಮಣ್ಯ ಕೃಪೆಯಿಂದ ನಾನು ಜೈಲು ಸೇರುವುದು ತಪ್ಪಿತು. ನನ್ನನ್ನು ಹೈಸ್ಕೂಲ್ ದಿನದಿಂದಲೂ ಕಾಡಿದ ಬೆಟ್ಟದ ಜೀವಕ್ಕೆ ಅಂತೂ ಮುಕ್ತಿ ದೊರಕಿತು. ಈಗ ರಾಷ್ಟ್ರಪತಿಗಳು ಕರೆದು ಮಣೆ ಹಾಕುತ್ತಿದ್ದಾರೆ.
ಈ ಕೃತಿ ನಿರ್ಮಾಣದಲ್ಲಿ ಕೈ ಜೋಡಿಸಿದ ಎಲ್ಲ ಕಲಾವಿದರಿಗೂ, ತಂತ್ರಜ್ಞರಿಗೂ ನಮೋ ನಮಃ.
(ಉದಯವಾಣಿಯಲ್ಲಿ ಪ್ರಕಟ)
- Posted in: Uncategorized
http://www.vismayanagari.com/vismaya11/node/9254
ಚಿತ್ರ ತು೦ಬಾ ಇಷ್ಟವಾಗಿತು. ನೈಜತೆಯ ಅನಾವರಣವಿದೆ, ಉತ್ಪ್ರೇಕ್ಷೆಯಿಲ್ಲ. ಎಲ್ಲೂ ಅನಗತ್ಯ ದೃಶ್ಯಗಳಿಲ್ಲ. ಅಪ್ಪಟ , ಅಧಿಕಾರಯುತವಾದ ದಕ್ಷಿಣ ಕನ್ನಡ ಭಾಷೆ ಹಾಗೂ ಜೀವನ ಶೈಲಿ ಮೂಡಿ ಬ೦ದಿದೆ. ಅದಿಕ್ಕೆ ನೂರಕ್ಕೆ ನೂರು ಮಾರ್ಕು 🙂
ಮೇಲಿನ ಲಿ೦ಕಿನ ಬರಹದ ಹೆಚ್ಚಿನ ನ್ಯೂನತೆಗಳನ್ನು ನಾನು ಒಪ್ಪುವುದಿಲ್ಲ. ಒ೦ದು ಒಳ್ಳೆಯ ‘ಕ್ಲಾಸಿಕ್’ ಸಿನೆಮಾ