ಪಿ. ಶೇಷಾದ್ರಿ

ಕಂಡಿದ್ದು ಕಂಡಂತೆ…

ಹೇಳಿ ಹೋಗಬಾರದಿತ್ತೇ?

With S.Ramachandra


ಜನವರಿ ೧೦, ಕಳೆದ ಸೋಮವಾರ, ಸಮಯ ಮಧ್ಯಾಹ್ನ ಸುಮಾರು ೩:೫೦.

ಕಂಪ್ಯೂಟರಿನ ಮುಂದೆ ಕುಳಿತು ಏನೋ ಕೆಲಸ ಮಾಡುತ್ತಿದ್ದೆ. ಮೊಬೈಲ್ ರಿಂಗಾಯಿತು. ಯಾರದ್ದಿರಬಹುದೆಂದು ಕುತೂಹಲದಿಂದ ನೋಡಿದೆ. ಎಸ್.ರಾಮಚಂದ್ರ ಎಂಬ ಹೆಸರು ಸ್ಕ್ರೀನ್ ಮೇಲೆ ಕಾಣಿಸಿತು. ಓಹ್! ನಾನು ಸ್ವೀಕರಿಸಲೇಬೇಕಾದ ಕರೆ ಅದು.

2011ರ ಹೊಸವರ್ಷದ ಮೊದಲದಿನ ಸಂಜೆ ನನ್ನ ‘ಬೆಟ್ಟದಜೀವ’ ಚಿತ್ರದ ಪ್ರಥಮ ಪ್ರದರ್ಶನ ನೋಡಲು ರಾಮಚಂದ್ರ ಮಲ್ಲೇಶ್ವರಂನ ಹದಿನೆಂಟನೇ ಕ್ರಾಸ್‌ನ ‘ಶ್ರೀಗಂಧ’ ಪ್ರೀವ್ಯೂ ಥಿಯೇಟರ್‌ಗೆ ಬಂದಿದ್ದರು. ಹತ್ತಿರ ಬಂದು, ‘ಶೇಷಾದ್ರಿ, ನನಗೆ ಆರೋಗ್ಯ ಸರಿಯಿಲ್ಲ, ಆದರೂ ಈ ಚಿತ್ರ ಮಿಸ್ ಮಾಡಿಕೊಳ್ಳಬಾರದು ಎಂದು ಬಂದಿದ್ದೇನೆ. ಪ್ರದರ್ಶನ ಮುಗಿದ ತಕ್ಷಣ ಯಾರಿಗೂ ಹೇಳದೆ ಹೊರಟು ಹೋಗುತ್ತೇನೆ. ಅಭಿಪ್ರಾಯ ತಿಳಿಸದೆ ಹೋದೆ ಎಂದು ಬೇಸರಿಸಬೇಡಿ. ನಂತರ ನಿಮ್ಮನ್ನು ಫೋನ್ ಅಥವಾ, ಇ-ಮೇಲ್‌ನಲ್ಲಿ ಸಂಪರ್ಕಿಸಿ ಚಿತ್ರದ ಕುರಿತು ನನ್ನ ವಿವರವಾದ ಅಭಿಪ್ರಾಯ ತಿಳಿಸುತ್ತೇನೆ’ ಎಂದು ಹೇಳಿದ್ದರು.

ಅಂದು ಪ್ರದರ್ಶನ ಮುಗಿಸಿ ಹೋದವರು ನಂತರ ಹತ್ತು ದಿನವಾದರೂ ಫೋನೂ ಮಾಡಲಿಲ್ಲ, ಇ-ಮೇಲ್‌ನಲ್ಲೂ ಕಾಣಿಸಿಕೊಳ್ಳಲಿಲ್ಲ. ಬಹುಶಃ ಅವರಿಗೆ ಚಿತ್ರ ಇಷ್ಟವಾಗದೇ ಇರಬಹುದು. ಅದಕ್ಕೇ ಮೌನವಾಗಿದ್ದಾರೆ. ನಾನಾಗೇ ಫೋನ್ ಮಾಡಿ ಸುಮ್ಮನೇ ಏಕೆ ಅವರನ್ನು ಮುಜಗರದಲ್ಲಿ ಸಿಕ್ಕಿಸಿಬೇಕು ಎಂದು ಭಾವಿಸಿ ನಾನೂ ಸಂಪರ್ಕಿಸುವ ಪ್ರಯತ್ನ ಮಾಡಿರಲಿಲ್ಲ.

ಈಗ ಹತ್ತು ದಿನದ ಮೇಲೆ ಫೋನ್ ಮಾಡಿದ್ದಾರೆ! ಖಂಡಿತ ‘ಬೆಟ್ಟದ ಜೀವ’ದ ಬಗ್ಗೆ ಮಾತನಾಡುತ್ತಾರೆ. ಶಿವರಾಮಕಾರಂತರ ಅವರ ಈ ಕಾದಂಬರಿಯನ್ನು ಮೆಚ್ಚಿಕೊಂಡಿದ್ದ ವ್ಯಕ್ತಿ ಇವರು, ಎಂದು ಕುತೂಹಲದಿಂದ ರಿಂಗಾಗುತ್ತಿದ್ದ ಮೊಬೈಲ್ ರಿಸೀವ್ ಮಾಡಿ ನನ್ನ ಮಾಮೂಲಿ ಧಾಟಿಯಲ್ಲಿ, ‘ನಮಸ್ಕಾರ, ಹೇಳಿ ಸಾರ್’ ಎಂದೆ. ಅತ್ತ ಕಡೆಯಿಂದ ‘ನಾನು, ಅವರ ಮಗಳು ವರ್ಷ ಮಾತಾಡ್ತಿರೋದು’ ಎಂಬ ಧ್ವನಿ ಕೇಳಿ ಬಂತು. ‘ಹೇಳಿ ವರ್ಷ’ ಎಂದೆ. ಒಂದು ಸಣ್ಣ ಮೌನ. ನಂತರ, ವರ್ಷ ನಿರ್ಭಾವುಕ ಧ್ವನಿಯಿಂದ- ‘ಅಪ್ಪ… ಹತ್ತು ನಿಮಿಷದ ಹಿಂದೆ ಹೋಗಿಬಿಟ್ರು’ ಅಂದಳು. ‘ಅಯ್ಯಯ್ಯೋ! ಯಾಕೆ? ಏನಾಗಿತ್ತು?’ ಎಂದು ಒಂದೇ ಉಸುರಿನಲ್ಲಿ ಕೇಳಿದೆ. ಹುಷಾರಿರಲಿಲ್ಲ, ಕಾರ್ಪೊರೇಷನ್ ಹತ್ತಿರದ ಆಸ್ಪತ್ರೆಗೆ ಶುಕ್ರವಾರ ಸೇರಿಸಿದ್ವಿ. ಮೂರೇ ದಿನದಲ್ಲಿ ಹೀಗಾಗೋಯ್ತು… ಎಲ್ಲರಿಗೂ ತಿಳಿಸಿಬಿಡಿ’ ಎಂದು ಫೋನಿಟ್ಟಳು. ನಾನು ಒಂದು ಕ್ಷಣ ಸುಮ್ಮನೇ ಕುಳಿತೆ. ಐದು ನಿಮಿಷದ ನಂತರ ಚಿತ್ರರಂಗದ ಮಿತ್ರರಿಗೆ, ಮಾಧ್ಯಮಕ್ಕೆ ಈ ಸುದ್ದಿಯನ್ನು ಬಿತ್ತರಿಸಿದೆ.

ಛೇ! ನಾನೆಂಥಾ ತಪ್ಪು ಮಾಡಿಬಿಟ್ಟೆ! ಈ ಹತ್ತುದಿನದಲ್ಲಿ ಒಮ್ಮೆಯೂ ಅವರೊಂದಿಗೆ ಮಾತನಾಡಲೇ ಇಲ್ಲ. ಅದೇಕೆ ಹಿಂಜರಿದೆನೋ? ಈಗ ಕೊರಗೊಂದು ನನ್ನಲ್ಲಿ ಶಾಶ್ವತವಾಗಿ ಉಳಿದುಹೋಯಿತು. ಆದರೆ, ಎಲ್ಲ ತಿಳಿದಿದ್ದ ಅವರೂ ಏಕೆ ಹೀಗೆ ಮಾಡಿಬಿಟ್ಟರು? ತಮ್ಮ ಅನಾರೋಗ್ಯದ ಬಗ್ಗೆ ಒಂದೇ ಒಂದು ಸಣ್ಣ ಸೂಚನೆಯನ್ನೂ ಕೊಡಲಿಲ್ಲ. ಸಿಗರೇಟ್ ಬಿಟ್ಟಿರುವುದರಿಂದ ತೆಳ್ಳಗಾಗಿದ್ದೇನೆ ಎಂದಷ್ಟೇ ಹೇಳಿದ್ದರು. ರಾಮಚಂದ್ರಾ, ನೀವು ಮಾಡಿದ್ದು ಸರಿಯೇ? ಒಂದು, ಒಂದೇ ಒಂದು ಮಾತು ಕೂಡ ನಮಗೆ ಹೇಳದೆ ಹೋಗಿಬಿಟ್ಟಿರಲ್ಲ! ಲೈಫು ಇಷ್ಟೇನಾ?

ಫ್ಲ್ಯಾಷ್‌ಬ್ಯಾಕ್

ಅದು 2004 ನೇ ಇಸವಿ.

ನಾನು ‘ಮುನ್ನುಡಿ’ ಮತ್ತು ‘ಅತಿಥಿ’ ಚಿತ್ರ ಮುಗಿಸಿ, ಮೂರನೇ ಚಿತ್ರ ‘ಬೇರು’ ಚಿತ್ರ ಕೈಗೆತ್ತಿಕೊಂಡಿದ್ದೆ. ಅದಕ್ಕೆ ಛಾಯಾಗ್ರಾಹಕರಾಗಿ ಯಾರನ್ನು ನೇಮಿಸಿಕೊಳ್ಳುವುದು ಎಂಬ ಪ್ರಶ್ನೆ ಬಂದಾಗ ಎಸ್.ರಾಮಚಂದ್ರ ಅವರ ಹೆಸರು ಕಣ್ಣಮುಂದೆ ನಿಂತಿತು. ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ ಅವರನ್ನು ಹೇಗೆ ಕೇಳುವುದು ಎಂಬ ಹಿಂಜರಿಕೆ ಉಂಟಾಯಿತು. ಅದಕ್ಕಾಗಿ ದತ್ತಣ್ಣನ ಮೊರೆ ಹೋದೆ. ಅವರು ತಮ್ಮ ಬ್ಯಾಚಲರ್ ರೂಮಿನಲ್ಲಿ ಒಂದು ಸಂಜೆ ನಮ್ಮ ಭೇಟಿಗೆ ಸಮಯ ನಿಗದಿ ಮಾಡಿದರು. ನಾವು ಮೂರೇ ಜನ. ಮೂರು ಗ್ಲಾಸುಗಳಲ್ಲಿ ಸದ್ದು ಮಾಡಿದವು. ನಾನು ಆಗ ಸಂಕ್ಷಿಪ್ತವಾಗಿ ‘ಬೇರು’ಚಿತ್ರದ ಕಥೆ ಹೇಳಿದೆ. ‘ನೀವು ಇದಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಬೇಕು’ ಎಂದೆ. ರಾಮಚಂದ್ರ ನಗುತ್ತಾ, ‘ನಾನು ಹಳೆ ತಲೆಮಾರಿನ ಎಲ್ಲರೊಂದಿಗೆ ಕಲಸ ಮಾಡಿದ್ದೆ, ಹೊಸ ತಲೆಮಾರಿನ ನೀವು ಎಲ್ಲಿ ತಪ್ಪಿಸಿಕೊಳ್ಳುತ್ತೀರೋ ಎಂದುಕೊಂಡಿದ್ದೆ, ಈಗ ಸಿಕ್ಕಿ ಬಿದ್ದಿರಿ. ನಿಮ್ಮೊಟ್ಟಿಗೆ ಕೆಲಸ ಮಾಡಲು ನನಗೂ ಸಂತೋಷ’ ಎಂದರು. ಸಹಕಾರಿ ತತ್ವದಲ್ಲಿ ನಿರ್ಮಿಸ ಹೊರಟಿದ್ದ ಚಿತ್ರ ಅದು. ಹಾಗಾಗಿ ನಿರ್ಮಾಣದ ಹೊಣೆ ಕೂಡ ನನ್ನ ಮೇಲಿತ್ತು. ನಾನು ವ್ಯಾವಹಾರಿಕ ಮಾತುಕತೆಯನ್ನೂ ಅಂದೇ ಮುಗಿಸುವ ಉದ್ದೇಶದಿಂದ ‘ನಿಮ್ಮ ಸಂಭಾವನೆ ವಿಚಾರ ಹೇಳಿದರೆ ಅನುಕೂಲವಾಗುತ್ತೆ’ ಎಂದೆ. ಒಂದು ಕ್ಷಣ ಮೌನವಾಗಿ ಕುಳಿತರು ರಾಮಚಂದ್ರ. ನಂತರ, ‘ನನಗೆ ಈ ಚಿತ್ರಕ್ಕೆ ನೀವು ಹನ್ನೊಂದು ಸಾವಿರ ಕೊಟ್ಟರೆ ಸಾಕು’ ಎಂದರು.

ಹನ್ನೊಂದು! ಇದೇನಿದು? ನಾನೂ ದತ್ತಣ್ಣ ಮುಖ ಮುಖ ನೋಡಿಕೊಂಡೆವು. ‘ಇದೇನಯ್ಯಾ, ಬರೀ ಹನ್ನೊಂದು ಸಾವಿರ ಮಾತ್ರ ಕೇಳುತ್ತಿದ್ದೀಯ? ಹನ್ನೊಂದು ನಿನ್ನ ಲಕ್ಕೀ ನಂಬರ್ ಏನು?’ ಎಂದು ದತ್ತಣ್ಣ ಅವರನ್ನು ಕೇಳಿದರು. ಆಗ ರಾಮಚಂದ್ರ ನನ್ನತ್ತ ದೃಷ್ಟಿ ಬೀರಿ, ‘ಇವರು ಸಹಕಾರಿ ತತ್ವದಲ್ಲಿ ಹಿಂದಿನ ಎರಡು ಚಿತ್ರ ಮಾಡಿರುವುದು ನನಗೆ ಗೊತ್ತಿದೆ. ಈ ಕಲಾತ್ಮಕ ಚಿತ್ರಗಳ ಕಷ್ಟ-ನಷ್ಟದ ಅರಿವೂ ನನಗಿದೆ. ಈಗ ನನ್ನನ್ನು ಪ್ರೀತಿಯಿಂದ ಕೆಲಸ ಮಾಡಲು ಕರೆದಿದ್ದಾರೆ. ಬೇರೆ ಚಿತ್ರಗಳನ್ನು ನೋಡಿದಂತೆ ನಾನು ಇದನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡುವುದಿಲ್ಲ. ಈ ಚಿತ್ರಕ್ಕೆ ನನಗೆ ಸಂಭಾವನೆ ಬೇಡ. ಹನ್ನೊಂದು ಸಾವಿರದಲ್ಲಿ ಹತ್ತು ಸಾವಿರ ನನ್ನ ಸಹಾಯಕನ ಸಂಭಾವನೆ. ಇನ್ನು ಒಂದು ಸಾವಿರ ಚಿತ್ರವೊಂದಕ್ಕೆ ನಾನು ನಮ್ಮ ಛಾಯಾಗ್ರಾಹಕರ ಸಂಘಕ್ಕೆ ಕಟ್ಟುವ ಶುಲ್ಕ ಅಷ್ಟೇ…’ ಎಂದರು. ಅವರ ಔದಾರ್ಯ ನಮ್ಮನ್ನ ಚಕಿತಗೊಳಿಸಿತು. ಚಿತ್ರೀಕರಣ ಮುಗಿದ ಮೇಲೆ ನಾನು ಅವರ ಸಂಭಾವನೆಯನ್ನೂ ಕೊಟ್ಟೆ ಎಂಬುದು ಬೇರೆ ಮಾತು.

ಶಕುನ ಅಪಶಕುನ
‘ಬೇರು’ ಚಿತ್ರದ ಚಿತ್ರೀಕರಣ ತುಮಕೂರಿನಲ್ಲಿ ಪ್ರಾರಂಭವಾಯಿತು. ದೇವರಲ್ಲಿ ಅವರಿಗೆ ಹೇಗೆ ನಂಬಿಕೆಯಿರಲಿಲ್ಲವೋ ನನಗೂ ಅಷ್ಟೇ. ಆದರೆ ನಮ್ಮ ಸುತ್ತ-ಮುತ್ತಲಿನವರ ಭಾವನೆಗಳಿಗೆ ಬೆಲೆ ಕೊಡುವ ಕಾರಣದಿಂದ, ಮೊದಲ ಶಾಟ್‌ಗೆ ಮುಂಚೆ ಕ್ಯಾಮರಾಗೆ ಪೂಜೆ ಮಾಡುತ್ತೇವೆ ಎಂದಾಗ ಬೇಡ ಎನ್ನಲಿಲ್ಲ. ಎಲ್ಲ ಸಾಂಪ್ರದಾಯಿಕವಾಗಿ ನಡೆಯಿತು. ಪೂಜೆ ಮುಗಿದ ಮೇಲೆ ಕ್ಯಾಮರಾ ಚಾಲನೆ ಆಗಬೇಕು. ಕಲಾವಿದರು, ಲೈಟಿಂಗ್ ಎಲ್ಲ ಸಿದ್ಧವಾಯಿತು. ನಾನು ಆಕ್ಷನ್ ಹೇಳಿದೆ. ಕಲಾವಿದರು ಸಂಭಾಷಣೆ ಹೇಳಿದರು. ಶಾಟ್ ಓಕೆನಾ? ನಾನು ರಾಮಚಂದ್ರರನ್ನು ಕೇಳಿದೆ. ಓಕೆ ಎಂದರು. ನೆರೆದಿದ್ದವರ ಚಪ್ಪಾಳೆ. ಸಿಹಿ ಹಂಚಿಕೆ ಎಲ್ಲ ಆಯಿತು.

ಮುಂದಿನ ಶಾಟ್‌ಗೆ ಹೋಗುವ ಮುಂಚೆ ರಾಮಚಂದ್ರ ನನ್ನನ್ನು ಪಕ್ಕಕ್ಕೆ ಕರೆದು. ಮೊದಲ ಶಾಟ್ ಇನ್ನೊಮ್ಮೆ ತೆಗೆಯಬೇಕು ಎಂದರು. ನಾನು ‘ಆಗಲೇ ಓಕೆ ಎಂದಿರಿ?’ ಎಂದೆ. ‘ಆಗ, ಮೊದಲ ಶಾಟ್ ಅನ್ನೋ ಕಾರಣದಿಂದ ಹಾಗೆ ಹೇಳಿದೆ. ಕ್ಯಾಮರಾ ಸ್ವಿಚ್ ಆನ್ ಮಾಡಿದರೂ ಅದು ಓಡಲೇ ಇಲ್ಲ. ಬಹುಶಃ ಬ್ಯಾಟರಿಯಿಂದ ಪವರ್ ಸಪ್ಲೈ ಬರುತ್ತಿಲ್ಲ. ಈಗ ಅದನ್ನು ರಿಪೇರಿ ಮಾಡಬೇಕಿದೆ. ನೀವು ಅತಿಥಿಗಳನ್ನು ಕಳುಹಿಸಿಕೊಡಿ. ನಾನು ಕ್ಯಾಮರಾ ಸಿದ್ಧ ಮಾಡುತ್ತೇನೆ, ಎಂದು ಸಿಗರೇಟ್ ಹೊತ್ತಿಸಿದರು. ಮೊದಲ ಶಾಟ್‌ಗೆ ಕ್ಯಾಮರಾ ಓಡಲಿಲ್ಲ ಎನ್ನುವುದು ಎಂಥ ಅಪಶಕುನ! ಉಳಿದವರು ಆತಂಕ ಪಡುತ್ತಾರೆ ಎಂದು ನಾವಿಬ್ಬರೂ ಯಾರಿಗೂ ಈ ವಿಚಾರ ಹೇಳಲಿಲ್ಲ. ಈಗ ಹೇಳುತ್ತಿದ್ದೇನೆ. ಈ ಅಡೆತಡೆಗಳನ್ನೆಲ್ಲ ಮೀರಿ ‘ಬೇರು’ ಎಲ್ಲರ ಮೆಚ್ಚುಗೆ ಪಡೆದದ್ದು, ರಾಷ್ಟ್ರಪ್ರಶಸ್ತಿ ಗಳಿಸಿದ್ದು ನಿಮಗೆ ಗೊತ್ತೇ ಇದೆ…

ಬೆಳಕಿನ ಬಾಲ ಹಿಡಿದು
ಎರಡು ವರ್ಷದ ಹಿಂದಿನ ಮಾತು. ‘ವಿಮುಕ್ತಿ’ಯ ಚಿತ್ರೀಕರಣ ದೂರದ ವಾರಣಾಸಿಯಲ್ಲಿ ಆಗಬೇಕಿತ್ತು. ಆ ಊರು ಅಥವಾ ಸುತ್ತ-ಮುತ್ತ ಎಲ್ಲೂ ಚಿತ್ರೀಕರಣಕ್ಕೆ ಸಂಬಂಧಿಸಿದ ತಾಂತ್ರಿಕ ಉಪಕರಣಗಳು ಲಭ್ಯವಿರಲಿಲ್ಲ. ಎಲ್ಲಾ ಇಲ್ಲಿಂದಲೇ ವ್ಯವಸ್ಥೆಯಾಗ ಬೇಕಿತ್ತು. ಎರಡೂವರೆ ಸಾವಿರ ಕಿಲೋಮೀಟರ್ ದೂರದ ಊರಿಗೆ ಲೈಟು, ಜನರೇಟರ್ ಇಲ್ಲಿಂದ ಒಯ್ಯುವುದು ಹೇಗೆ? ಕ್ಯಾಮರಾ ಬಳಸಿ ಹೊರಾಂಗಣ ಚಿತ್ರೀಕರಣವನ್ನೇನೋ ಹಗಲು ಬೆಳಕಿನಲ್ಲಿ ಚಿತ್ರೀಕರಿಸಬಹುದು. ಆದರೆ ಒಳಾಂಗಣದಲ್ಲಿ? ಒಳಾಂಗಣದ ಸೆಟ್ ಬೆಂಗಳೂರಿನಲ್ಲಿ ಹಾಕಿ ಚಿತ್ರಿಸೋಣ ಎಂದಾಗ ರಾಮಚಂದ್ರ ಬೇಡ ಎಂದರು. ಅಲ್ಲಿಯ ಕಟ್ಟಡದ ವಿನ್ಯಾಸ, ಗೋಡೆಯ ಬಣ್ಣವನ್ನು ಇಲ್ಲಿ ನಿರ್ಮಿಸಲು ಸಾಧ್ಯವಿಲ್ಲ. ಯಾವ ಕೃತಕ ಬೆಳಕನ್ನು ಬಳಸದೇ ನಾನು ನಿಮಗೆ ಅಲ್ಲೇ ಒಳಾಂಗಣದ ಚಿತ್ರೀಕರಣ ಮುಗಿಸಿಕೊಡುತ್ತೇನೆ ಎಂದಾಗ ನನಗೆ ಅಚ್ಚರಿಯಾಯಿತು.

ನಾನು ಮುಂಚೆ ವಾರಣಾಸಿಗೆ ಹೋಗಿ ವೀಡಿಯೋದಲ್ಲಿ ‘ಮುಕ್ತಿಭವನ’ದ ಆವರಣ ಚಿತ್ರೀಕರಿಸಿಕೊಂಡು ಬಂದಿದ್ದೆ. ಇಬ್ಬರೂ ಇಲ್ಲಿ ಕುಳಿತು ‘ಮುಕ್ತಿಭವನ’ದ ಸ್ಕೆಚ್ ಮಾಡಿಕೊಂಡೆವು. ಬಾಗಿಲು, ಕಿಟಕಿ ಯಾವ ಯಾವ ದಿಕ್ಕಿಗೆ ಇವೆ. ನಾವು ಚಿತ್ರೀಕರಿಸುತ್ತಿರುವ ತಿಂಗಳಲ್ಲಿ ಸೂರ್ಯ ಯಾವ ಕೋನದಲ್ಲಿ ಚಲಿಸುತ್ತಾನೆ. ಕಿಟಕಿಯ ದಿಕ್ಕಿನಲ್ಲಿ ಸೂರ್ಯನ ಬೆಳಕು ಎಷ್ಟು ಹೊತ್ತಿನವರೆಗೆ ಒಳಕ್ಕೆ ಬೀಳುತ್ತದೆ, ಇತ್ಯಾದಿ ಲೆಕ್ಕ ಹಾಕಿದರು. ಮಧ್ಯಾಹ್ನ ಮೂರು ಗಂಟೆಯಿಂದ ಸಂಜೆ ಐದು ಗಂಟೆವರೆಗೆ ಮಾತ್ರ ಕೋಣೆಯೊಳಗೆ ಚಿತ್ರೀಕರಿಸಬಹುದು, ಅದರಂತೆ ಪ್ಲಾನ್ ಮಾಡಿಕೊಳ್ಳಿ ಎಂದರು. ಚಿತ್ರೀಕರಣದಲ್ಲಿ ಕಿಟಕಿಯ ಹಿಂದೆ ನಿಂತು ಬಿಳಿಪಂಚೆಯನ್ನು ಹರಡಿ ಅದರ ಪ್ರತಿಫಲನದ ಬೆಳಕಿನಿಂದ ಇಡೀ ದೃಶ್ಯಗಳನ್ನು ಚಿತ್ರೀಕರಿಸಿದರು. ಚಿತ್ರದಲ್ಲಿ ಆ ದೃಶ್ಯಗಳು ಸಾವಿನ ಮನೆಯ ಹಿನ್ನೆಲೆಯಲ್ಲಿ ರಚನೆಯಾಗಿದ್ದವು. ರಾಮಚಂದ್ರರ ತಾಂತ್ರಿಕ ಕೌಶಲ್ಯದಿಂದ ಬೆಳಕು-ನೆರಳಿನ ವಿನ್ಯಾಸ ಚಿತ್ರದಲಿ ಅದ್ಭುತವಾಗಿ ಮೂಡಿ ಬಂತು. ಆ ಚಿತ್ರಿಕೆಗಳನ್ನು ನೋಡಿದಾಗ ಈಗಲೂ ನನಗೆ ರಾಮಚಂದ್ರ, ಅವರ ತಾಂತ್ರಿಕ ಪರಿಣಿತಿ ನೆನಪಾಗುತ್ತದೆ.

Maker of filmmaker!

ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಂಗದ ಹೊಸ ಅಲೆಯ ಚಿತ್ರಗಳ ಪರಂಪರೆ ಆರಂಭವಾದ ದಿನದಿಂದ ಇಂದಿನವರೆಗೂ ಅದರ ಜೊತೆ ಗುರುತಿಸಿಕೊಂಡು ಅದನ್ನು ಬೆಳಸುತ್ತಾ ಬಂದವರು ರಾವಚಂದ್ರ. ಸುಮಾರು ನಾಲ್ಕು ದಶಕಗಳಷ್ಟು ಕಾಲ ಕಲಾತ್ಮಕ ಚಿತ್ರಗಳಿಗೆ ಅವರು ಕೊಟ್ಟಿರುವ ಕೊಡುಗೆ ಅನನ್ಯ. ನಿರ್ದೇಶನದ ಅರಿವೇ ಇಲ್ಲದ ಎಷ್ಟೋ ನಿರ್ದೇಶಕರ ಜೊತೆ ದುಡಿಯುತ್ತಾ ಅವರಿಗೆ ಇವರು ಕಣ್ಣಾಗಿದ್ದಾರೆ. ಹಾಗಾಗಿಯೇ ರಾಮಚಂದ್ರರನ್ನು ನಾವು Maker of filmmaker! ಎಂದು ಕರೆಯಬಹುದು. ಇವರ ಪ್ರತಿಭೆಯಲ್ಲಿ ಮೂಡಿದ ಚಿತ್ರಗಳು ಎಷ್ಟೋ. ‘ಚೋಮನದುಡಿ’, ‘ಘಟಶ್ರಾದ್ಧ’, ‘ಪಲ್ಲವಿ’, ‘ಗ್ರಹಣ’, ‘ಬ್ಯಾಂಕರ್ ಮಾರ್ಗಯ್ಯ’, ‘ಸಂತ ಶಿಶುನಾಳ ಶರೀಫ’, ‘ಮನೆ’, ‘ಕ್ರೌರ್ಯ’, ‘ದೇವೀರಿ’, ‘ಕಾನೂರು ಹೆಗ್ಗಡತಿ’, ‘ಪ್ರವಾಹ’, ‘ಬೇರು’, ‘ಹಸೀನಾ’, ‘ದಾಟು’, ‘ವಿಮುಕ್ತಿ’, ‘ಗುಲಾಬಿ ಟಾಕೀಸ್’, ‘ಮುಖಪುಟ’… ಹೀಗೆ ಪಟ್ಟಿ ಮುಗಿಯುವುದೇ ಇಲ್ಲ.

ಕೆಲವು ವರ್ಷಗಳಿಂದ ಪ್ರತಿವಾರಾಂತ್ಯದಲ್ಲಿ ನಾನು, ಗಿರೀಶ್ ಕಾಸರವಳ್ಳಿ, ಲಿಂಗದೇವರು, ಉಮಾಶಂಕರ್, ಬಿ.ಸುರೇಶ ಇತ್ಯಾದಿ ‘ಚಿತ್ರಸಮೂಹ’ದ ಮಿತ್ರರೆಲ್ಲ ಗೋಪಾಲಕೃಷ್ಣ ಪೈ ಮನೆಯಲ್ಲಿ ಸೇರುತ್ತಿದ್ದೆವು. ಸಂಜೆಯಲ್ಲಿ, ಗುಂಡು ಮೇಜಿನಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಚಿತ್ರಗಳನ್ನ ಕುರಿತು ಚರ್ಚೆ ನಡೆಸುತ್ತಿದ್ದೆವು. ಎಲ್ಲ ಮುಗಿದ ಮೇಲೆ ತಡರಾತ್ರಿಯಲ್ಲಿ ರಾಮಚಂದ್ರರನ್ನು ನಾನು ನನ್ನ ಕಾರಿನಲ್ಲಿ ಕೂರಿಸಿಕೊಂಡು ಬಂದು ಬನಶಂಕರಿ ದೇವಸ್ಥಾನದ ಸರ್ಕಲ್‌ನಲ್ಲಿ ಇಳಿಸಿ ಮನೆಗೆ ಬರುತ್ತಿದ್ದೆ. ಕಳೆದವಾರ ಸಂಜೆಯ ಹೊತ್ತಿಗೇ ಅದೇ ಬನಶಂಕರಿ ಸರ್ಕಲ್‌ನಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ರಾಮಚಂದ್ರರನ್ನು ಶಾಶ್ವತವಾಗಿ ಬಿಟ್ಟು ಬಂದೆ. Now his number is not reachable. Memories will remain ever.

ಅವರೇ ಒಮ್ಮೆ ನನಗೆ ಕಳುಹಿಸಿದ್ದ ಅವರ ಬಯೋಡ್ಯಾಟ ಹೀಗೆ ಹೇಳುತ್ತದೆ:
· ಪಿಯುಸಿಯಲ್ಲಿ ಐದನೇ ರ‍್ಯಾಂಕ್
· ಪುಣೆ ಫಿಲ್ಂ ಅಂಡ್ ಟೆಲಿವಿಷನ್ ಇನ್ಸ್‌ಟಿಟ್ಯೂಟ್‌ನಿಂದ ಡಿಪ್ಲಮೋ (೧೯೭೦)
· ‘ಸ್ಪಂದನ’ದ ಕಪ್ಪು-ಬಿಳುಪು ಚಿತ್ರಕ್ಕಾಗಿ ರಾಜ್ಯಸರ್ಕಾರದ ಪ್ರಶಸ್ತಿ (೧೯೭೨)
· ‘ಋಷ್ಯಶೃಂಗ’ದ ಬಣ್ಣದ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ (೧೯೭೭)
· ‘ಮಾಲ್ಗುಡಿ ಡೇಸ್’ ಧಾರಾವಾಹಿಯ ಚಿತ್ರೀಕರಣಕ್ಕಾಗಿ ಪ್ರಶಸ್ತಿ
· ಐದು ಬಾರಿ ಕರ್ನಾಟಕ ರಾಜ್ಯದಿಂದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ
· ರಾಜ್ಯೋತ್ಸವ ಪ್ರಶಸ್ತಿಯ ಗೌರವಾನ್ವಿತ (೨೦೦೪)
· ಜೀವಮಾನದ ಅತ್ಯುನ್ನತ ಸಾಧನೆ, ರಾಜ್ಯದ ಗೌರವ (೨೦೦೪)

(ಪ್ರಜಾವಾಣಿ/ಜನವರಿ 14,2001)

3 ಟಿಪ್ಪಣಿಗಳು

  1. ಸರ್,ನೀವು ರಾಮಚಂದ್ರ ಅವರ ಬಗ್ಗೆ ಬರೆದ ಮೇಲಿನ ಈ ಲೇಖನ ಕೇವಲ ಅವರ ಅಗಲುವಿಕೆಯ ಭಾವ ವ್ಯಕ್ತನೆ ಮಾತ್ರವಾಗಿರದೆ, ಒಂದು ಅಪರೂಪದ ವ್ಯಕ್ತಿ ಚಿತ್ರಣವಾಗಿಯೂ ಕಣ್ಣು ತೇವ ಮಾಡುತ್ತದೆ. ಕ್ಯಾಮರಾ ಕಣ್ಣಿನಲ್ಲಿ ನೆರಳು-ಬೆಳಕಿನ ಆಟ ಆಡಿದ್ದ ರಾಮಚಂದ್ರ ಅವರು ಕೊನೆಗೂ ಕತ್ತಲೆಯಲ್ಲಿ ಲೀನವಾದದ್ದು ಬೇಸರದ ಸಂಗತಿ. ರಾಮಚಂದ್ರ ಅವರ ಬಗ್ಗೆ ಹೆಚ್ಚು ತಿಳಿದಿರದ ನನಗೆ ಈ ಲೇಖನದ ಮೂಲಕ ಕನ್ನಡ ಚಿತ್ರರಂಗ ಅನೂಹ್ಯ ಪ್ರತಿಭೆಯನ್ನು ಕಳೆದು ಕೊಂಡಿದೆ ಎಂದು ಮನವರಿಕೆಯಾಗಿದ್ದು ಸುಳ್ಳಲ್ಲ. ಹಾಗೆಯೇ ಇಂತಹ ಅಗಾಧ ವ್ಯಕ್ತಿತ್ವದ ಬಗ್ಗೆ ಹೆಚ್ಚು ಅರಿಯದ ನನ್ನ ಬಗ್ಗೆ ನನಗೆ ಕೊಂಚ ನಾಚಿಕೆ ಎನಿಸಿತು. ಮೇರು ವ್ಯಕ್ತಿಯ ಬಗ್ಗೆ ಅಷ್ಟೇ ಅರ್ಥಪೂರ್ಣ “ನುಡಿ ನಮನ”.

    ನಿಮ್ಮೊಳಗಿನ ಒಬ್ಬ ಪತ್ರಕರ್ತ ಇನ್ನೂ ಚೇತನಾಶೀಲನಾದದ್ದು ಈ ಬರವಣಿಗೆಗಳಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಾನೆ. ಈ ಕ್ರಿಯೆ ನಿರಂತರವಾಗಿರಲಿ ಎಂಬುದು ನನ್ನ ಆಶಯ.

  2. 😦

  3. ಶಂಕರ ಐತಾಳ

    ನನ್ನ ಅಣ್ಣ ರಾಮಚಂದ್ರ ಯಾ ರಾಮಿಯ ಮತ್ತು ನಿಮ್ಮ ಒಡನಾಟದ ನಿರೂಪಣೆ ಓದಿ ನನಗೆ ಒಂದು ನಮೂನೆಯ ಸಾಂತ್ವನ ಸಿಕ್ಕಿದೆ. ಅದಕ್ಕಾಗಿ ನಾನು ನಿಮಗೆ ಬಹಳ ಆಭಾರಿ.

    ಶಂಕ್ರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: