ಪಿ. ಶೇಷಾದ್ರಿ

ಕಂಡಿದ್ದು ಕಂಡಂತೆ…

ಕನ್ನಡ ಸಿನಿಮಾ ಹಾಗೂ ಕನ್ನಡ ಸಾಹಿತ್ಯ

‘ನೀವು ಎಷ್ಟು ಪುಸ್ತಕ ಓದಿದ್ದೀರಿ?’
ಎಂಬ ಪ್ರಶ್ನೆ ಕೇಳಿದಾಗ ಸಿಗುವ ಉತ್ತರಕ್ಕಿಂತ,
‘ನೀವು ಎಷ್ಟು ಸಿನಿಮಾ ನೋಡಿದ್ದೀರಿ?’
ಎಂಬ ಪ್ರಶ್ನೆಗೆ ಸಿಗುವ ಉತ್ತರ ಖಂಡಿತ ಭಿನ್ನವಾಗಿರುತ್ತದೆ! ನಮ್ಮ ನಡುವೆ ಪುಸ್ತಕ ಓದದವರು ಸಾಕಷ್ಟು ಸಂಖ್ಯೆಯಲ್ಲಿ ಸಿಗಬಹುದೇನೋ, ಆದರೆ ಸಿನಿಮಾ ನೋಡದ ಕಣ್ಣುಗಳು ಸಿಗುವುದು ಸ್ವಲ್ಪ ದುಸ್ತರವೇ!

ಹಾಗೆಂದ ಮಾತ್ರಕ್ಕೇ ಸಿನಿಮಾ ಹೆಚ್ಚು, ಸಾಹಿತ್ಯ ಕೃತಿ ಕಡಿಮೆ ಎಂದೇನೂ ಅಲ್ಲ. ಆದರೆ ‘ಓದುಗರಿಗಿಂತ’ ‘ನೋಡುಗರ’ ಸಂಖ್ಯೆಯೇ ಹೆಚ್ಚಾಗಿರುವುದು ಇಂದಿನ ಸ್ಥಿತಿ. ಇದು ಸದ್ಯದ ಸಮಾಜಕ್ಕೆ ಹಿಡಿದ ಕನ್ನಡಿಯೂ ಹೌದು. ಮನೋರಂಜನೆಯನ್ನೇ ಮೂಲ ಬಂಡವಾಳವನ್ನಾಗಿಟ್ಟುಕೊಂಡ ಸಿನಿಮಾ ಇಂದು ನಿಸ್ಸಂದೇಹವಾಗಿ ಅತ್ಯಂತ ಆಕರ್ಷಕ ಹಾಗೂ ಜನಪ್ರಿಯ ಮಾಧ್ಯಮ.

ಹೌದು, ಈ ಸಿನಿಮಾದ ಮೋಡಿಯೇ ಅಂಥದ್ದು. ಅದು ಚಲನಚಿತ್ರ ಇರಲಿ ಟಿವಿ ಧಾರಾವಾಹಿಗಳಿರಲಿ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇದಕ್ಕೆ ಕಾರಣ ಇದರ ಚುಂಬಕ ಶಕ್ತಿ. ಚಲನಚಿತ್ರ ಹಲವು ಮಾಧ್ಯಮಗಳ ನೆರವಿನಿಂದ ರೂಪುಗೊಳ್ಳುವ ವಿಶಿಷ್ಟವಾದ ಕಲೆ. ಹಾಗಾಗಿಯೇ ಚಲನಚಿತ್ರವನ್ನು ಹಲವು ಕಲೆಗಳ ಒಂದು ಮೊತ್ತ ಎಂದು ಕರೆಯಲಾಗುತ್ತದೆ.

ಈ ದೃಶ್ಯಮಾಧ್ಯಮದ ರಾಜನಿಗೆ ಇಷ್ಟೆಲ್ಲ ಮನ್ನಣೆ ಸಿಕ್ಕಿರುವುದರಲ್ಲಿ ಸಾಹಿತ್ಯ ಲೋಕದ ಕೊಡುಗೆಯೂ ಕಡಿಮೆಯೇನಿಲ್ಲ. ಚಲನಚಿತ್ರ ಮಾಧ್ಯಮವು ಅತ್ಯಂತ ಪ್ರಬಲವಾದ ಸಂವಹನ ಮಾಧ್ಯಮವಾಗಿ ಬೆಳೆದು ಉಳಿದಿರುವುದಕ್ಕೆ ಅದರ ಅತ್ಯಪೂರ್ವ ರೀತಿಯ ‘ಕಥಾನಕ’ ಸಾಧ್ಯತೆ ಒಂದು ಪ್ರಮುಖ ಕಾರಣವಾಗಿದೆ. ಹಾಗಾಗಿಯೇ ಯಾವುದೇ ಒಂದು ಸಿನಿಮಾದ ಪ್ರಧಾನ ಆತ್ಮವು ‘ಕಥೆ’ ಮತ್ತು ಕಥಾವಸ್ತುವಾಗಿದೆ.

ಪ್ರಕಟಿತ ಕಥೆಯನ್ನು ಆಧರಿಸಿದ ಜಗತ್ತಿನ ಮೊದಲ ಚಿತ್ರ (ದಿ ಗ್ರೇಟ್ ಟ್ರೈನ್ ರಾಬರಿ) ನಿರ್ಮಾಣವಾದದ್ದು ನೂರಾನಾಲ್ಕು ವರ್ಷಗಳ ಹಿಂದೆ, ೧೯೦೩ರಲ್ಲಿ. ಆ ಚಿತ್ರವು ಅಂದು ಗಳಿಸಿದ ಯಶಸ್ಸು ಸಿನಿಮಾಕ್ಕಿರುವ ಒಂದು ಬಹುಮುಖ್ಯ ಶಕ್ತಿ ಅಥವಾ ದೌರ್ಬಲ್ಯವನ್ನು ಆಗಲೇ ದಾಖಲಿಸಿಕೊಟ್ಟಿತು. ಹಾಗೆಯೇ ಚಿತ್ರವೊಂದರ ಯಶಸ್ಸಿಗೆ ಚಿತ್ರಕಥೆಯ ಅನಿವಾರ್ಯತೆಯನ್ನ್ನೂ ಕೂಡ ಎತ್ತಿ ತೋರಿಸಿತು. ಚಲನಚಿತ್ರ ಹುಟ್ಟಿದಂದಿನಿಂದ ಇಲ್ಲಿಯ ತನಕ ಜಗತ್ತಿನ ನೂರಾರು ಭಾಷೆಗಳಲ್ಲಿನ ಸಾವಿರಾರು ಸಾಹಿತ್ಯ ಕೃತಿಗಳು ಚಲನಚಿತ್ರಗಳಾಗಿವೆ. ಪುರಾಣಗಳು, ಐತಿಹಾಸಿಕ ಘಟನೆಗಳು, ಜಾನಪದ ಕಥೆಗಳು ಚಲನಚಿತ್ರರೂಪವನ್ನು ಪಡೆದಿವೆ. ಭಾಷೆ, ಸಾಹಿತ್ಯವನ್ನು ಹೆಚ್ಚು ಜನಪ್ರಿಯಗೊಳಿಸುವುದರಲ್ಲಿ ಮತ್ತು ಅದನ್ನು ಹೆಚ್ಚು ಜನರಿಗೆ ತಲುಪಿಸುವುದರಲ್ಲಿ ಚಲನಚಿತ್ರವು ಯಶಸ್ವಿವಾಹಕವಾಗಿ ಕೆಲಸ ಮಾಡುತ್ತಿದೆ.

ಈಗ ಕನ್ನಡ ಚಿತ್ರಗಳ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ಇಲ್ಲಿಯವರೆಗೆ ಅಂದರೆ ಈ ಎಪ್ಪತ್ತೈದು ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ತಯಾರಾಗಿರುವ ಚಿತ್ರಗಳ ಸಂಖ್ಯೆ ಸರಿ ಸುಮಾರು ಎರಡೂವರೆ ಸಾವಿರದಷ್ಟು. ಇದರಲ್ಲಿ ಕನಿಷ್ಠ ಏಳುನೂರು ಚಿತ್ರಗಳು ಸಾಹಿತ್ಯಲೋಕದ ಪ್ರಕಾರಗಳಾದ ಕಥೆ/ಕಾವ್ಯ/ನಾಟಕ/ ಅಥವಾ ಕಾದಂಬರಿಗಳನ್ನು ಆಧರಿಸಿವೆ ಎಂದು ಹೇಳಬಹುದು. ಹಾಗಾಗಿ ‘ಅಕ್ಷರಮಾಧ್ಯಮ’ದ ಪ್ರಭಾವ ‘ದೃಶ್ಯಮಾಧ್ಯಮ’ದ ಮೇಲೆ ನಿರಂತರವಾಗಿ ಇದ್ದೇ ಇದೆ.

ಕನ್ನಡದ ಪೂರ್ಣಪ್ರಮಾಣದ ಸಾಹಿತ್ಯ ಕೃತಿಯೊಂದು ಚಲನಚಿತ್ರವಾಗಿ ರೂಪಗೊಂಡದ್ದು ೧೯೨೧ರಲ್ಲಿ, ‘ನಿರುಪಮಾ’ ಹೆಸರಿನಲ್ಲಿ. ಇದು ನಾಟಕ ಕೃತಿ ಆಧರಿಸಿದ ಮೂಕಿಚಿತ್ರ. ಆನಂತರ, ಕೈಲಾಸಂ ‘ವಸಂತಸೇನಾ’(೧೯೨೯), ಶಿವರಾಮಕಾರಂತರು ‘ಭೂತರಾಜ್ಯ’ (೧೯೨೯) ಬಂದವು.

ಚಿತ್ರರಂಗದ ಆರಂಭದ ದಿನಗಳನ್ನು ನೋಡುವುದಾದರೆ, ಪ್ರಥಮ ಚಿತ್ರದಿಂದ ಚಿತ್ರರಂಗ ಬಾಲ್ಯಾವಸ್ಥೆಗೆ ಬರುವವರೆಗೂ ಕನ್ನಡದ ರಂಗಕೃತಿಗಳೇ ಚಿತ್ರಭಾಷೆಗೆ ತರ್ಜುಮೆಯಾಗುತ್ತಾ ಬಂದವು. ‘ಸತಿಸುಲೋಚನ’, ‘ಸದಾರಮೆ’, ‘ಸಂಸಾರನೌಕ’, ‘ಭಕ್ತದ್ರುವ’, ‘ಸತ್ಯಹರಿಶ್ಚಂದ್ರ’, ‘ಚಂದ್ರಹಾಸ’ ಮುಂತಾದವು… ಹೀಗೆಯೇ ಆಧುನಿಕ ನಾಟಕಗಳಿಗೆ ಬಂದರೆ ಮಾಸ್ತಿಯವರ ‘ಕಾಕನಕೋಟೆ’, ಮೂರ್ತಿರಾಯರ ‘ಆಷಾಢಭೂತಿ’, ಮತ್ತು ‘ಕಳಸಾಪುರದ ಹುಡುಗರು’, ‘ಸಿಕ್ಕು’, ‘ಋಷ್ಯಶೃಂಗ’, ‘ನಾಗಮಂಡಲ’ ಹೀಗೆ…

ಕೃಷ್ಣಮೂರ್ತಿ ಪುರಾಣಿಕರ ‘ಧರ್ಮದೇವತೆ’ಯನ್ನು ಆಧರಿಸಿದ ‘ಕರುಣೆಯೇ ಕುಟುಂಬದ ಕಣ್ಣು’ (೧೯೬೨) ತಾಂತ್ರಿಕವಾಗಿ ಕಾದಂಬರಿ ಆಧಾರಿತ ಮೊದಲ ಚಿತ್ರ ಎಂದು ಹೇಳಬಹುದು. ನಂತರ ಇದೇ ಲೇಖಕರ ‘ಕುಲವಧು’ ಹಾಗೂ ತರಾಸು ಅವರ ‘ಚಂದವಳ್ಳಿಯ ತೋಟ’ ಈ ಪರಂಪರೆಯನ್ನು ಮುಂದುವರಿಸಿದವು. ೧೯೬೬ರಲ್ಲಿ ತೆರೆಕಂಡ ‘ಸಂಧ್ಯಾರಾಗ’ ಅನಕೃ ಅವರ ಕಾದಂಬರಿಯನ್ನು ಆಧರಿಸಿದ್ದು. ಅಲ್ಲಿಯವರೆಗೆ ಪ್ರಗತಿಶೀಲರ ಕಾದಂಬರಿಗಳನ್ನು ಆಧರಿಸಿ ಸಿನಿಮಾಗಳು ಹೊರಬಂದಿದ್ದರೆ ‘ಸಂಧ್ಯಾರಾಗ’ಕ್ಕೆ ಇನ್ನೊಂದು ವಿಶಿಷ್ಟ ಸಾಧ್ಯತೆಯಿತ್ತು. ಸಂಗೀತಕಾರನ ಬದುಕಿನ ತಲ್ಲಣಗಳನ್ನು ಹೇಳುವ ಈ ಕಥೆಗೆ ಹೇರಳ ಮೆಲೋಡ್ರಾಮಾದ ಆಯಾಮಗಳಿದ್ದವು. ಚಲನಚಿತ್ರ ಈ ಮೆಲೋಡ್ರಾಮಾವನ್ನೇ ಮುಖ್ಯವಾಗಿ ಆಧರಿಸಿತ್ತು. ಇದೂ ಕೂಡ ಒಂದು ಕಥಾಸ್ವರೂಪದ ಹುಟ್ಟಿಗೆ ಕಾರಣವಾಯಿತು.

ಕನ್ನಡ ಚಿತ್ರರಂಗ ಇಲ್ಲಿಯವರೆಗೆ ಹಲವಾರು ಸಾಹಿತ್ಯ ದಿಗ್ಗಜರ ಸೇವೆಯನ್ನು ಪಡೆದಿದೆ. ‘ಸತಿ ಸುಲೋಚನ’ (೧೯೩೪) ಚಿತ್ರಕ್ಕೆ ಚಿತ್ರಸಾಹಿತ್ಯ ಒದಗಿಸಿದ ಬೆಳ್ಳಾವೆ ನರಹರಿಶಾಸ್ತ್ರಿಗಳಿಂದ ಹಿಡಿದು, ದೇವುಡುರಂಥವರನ್ನು ಒಳಗೊಂಡಂತೆ, ಕುವೆಂಪು, ಮಾಸ್ತಿ, ಬೇಂದ್ರೆ, ಶಿವರಾಮಕಾರಂತ, ಅನಕೃ, ಕೆ.ಎಸ್. ನರಸಿಂಹಸ್ವಾಮಿ, ಗೊರೂರು, ತರಾಸು, ತ್ರಿವೇಣಿ, ವಾಣಿ, ಎಂ.ಕೆ.ಇಂದಿರಾ, ವಿ.ಎಂ.ಇನಾಂದಾರ್, ಗಿರೀಶ್‌ಕಾರ್ನಾಡ್, ಎಸ್.ಎಲ್.ಭೈರಪ್ಪ, ಅನಂತಮೂರ್ತಿ, ಅಲನಹಳ್ಳಿ, ಚಿತ್ತಾಲ, ಚಂದ್ರಶೇಖರ ಕಂಬಾರ, ತೇಜಸ್ವಿ, ಲಂಕೇಶ್, ಬೊಳುವಾರು… ಹೀಗೆ ಇನ್ನೂ ಮುಂತಾದ ಅನೇಕ ಪ್ರಖ್ಯಾತ ಸಾಹಿತಿಗಳನ್ನು ಈ ಕ್ಷೇತ್ರ ದುಡಿಸಿಕೊಂಡಿದೆ.

ಕನ್ನಡದ ನಿರ್ದೇಶಕರಲ್ಲಿ ಹೆಚ್ಚು ಕಾದಂಬರಿಗಳನ್ನೇ ಆಧರಿಸಿ ಚಿತ್ರಮಾಡಿದ ಖ್ಯಾತಿ ಪುಟ್ಟಣ್ಣ ಕಣಗಾಲ್, ಅವರಿಗೆ ಸಲ್ಲಬೇಕು. ಅವರು ನಿರ್ದೇಶಿಸಿದ ೩೩ ಚಿತ್ರಗಳಲ್ಲಿ ಹೆಚ್ಚಿನವು ಕಾದಂಬರಿಯನ್ನು ಆಧರಿಸಿದಂಥಹವು. ‘ಬೆಳ್ಳಿಮೋಡ’ದಿಂದ ಆರಂಭವಾದ ಈ ಯಾತ್ರೆ ‘ಗೆಜ್ಜೆಪೂಜೆ’, ‘ಶರಪಂಜರ’, ‘ನಾಗರಹಾವು’, ‘ಎಡಕಲ್ಲುಗುಡ್ಡದ ಮೇಲೆ’, ‘ಶುಭಮಂಗಳ’, ‘ಉಪಾಸನೆ’, ‘ಅಮೃತಗಳಿಗೆ’, ‘ಋಣಮುಕ್ತಳು’ ಗಳಲ್ಲಿ ಮುಂದುವರಿಯಿತು. ಇವರು ನಿರ್ದೇಶಿಸಿದ ‘ಕಥಾಸಂಗಮ’ ಕನ್ನಡದ ಮೂರು ಸಣ್ಣ ಕಥೆಗಳನ್ನು ಆಧರಿಸಿ (ಗಿರಡ್ಡಿ ಗೋವಿಂದರಾಜು, ವೀಣಾ ಎಲಬುರ್ಗಿ, ಈಶ್ವರಚಂದ್ರ) ತಯಾರಾದ ಹೊಸಾ ಪ್ರಯೋಗ. ಹಾಗೆಯೇ ‘ನಾಗರಹಾವು’ ಕೂಡ ತ.ರಾ.ಸು. ಅವರ ಮೂರು ಕಾದಂಬರಿಗಳಾದ ‘ನಾಗರಹಾವು’, ‘ಎರಡು ಹೆಣ್ಣು, ಒಂದು ಗಂಡು’ ಮತ್ತು ‘ಸರ್ಪಮತ್ಸರ’ಗಳನ್ನು ಆಧರಿಸಿದ ಚಿತ್ರ. ಈ ಚಿತ್ರ ಕಾದಂಬರಿಗಳಿಗಿಂತ ಹೆಚ್ಚು ಜನಪ್ರಿಯವಾಯಿತು. ಕಾದಂಬರಿಯಲ್ಲಿ ನಿರ್ಭಾವುಕವಾಗಿದ್ದ ನಾಯಕಪಾತ್ರಧಾರಿಯನ್ನು ಪುಟ್ಟಣ್ಣ ಇಲ್ಲಿ ಜೀವಂತವಾಗಿರಿಸಿದರು. ಜೊತೆಗೆ ಇದೇ ಚಿತ್ರದಲ್ಲಿ ಬರುವ ಚಾಮಯ್ಯ ಮೇಷ್ಟ್ರು ಪಾತ್ರ ಇಡೀ ಚಿತ್ರಕ್ಕೆ ಸಹಜತೆಯನ್ನು ತಂದುಕೊಟ್ಟು ಚಲನಚಿತ್ರವೊಂದರಲ್ಲಿ ಸೃಷ್ಟಿಯಾದ ಅತ್ಯುತ್ತಮ ಪಾತ್ರಗಳಲ್ಲೊಂದು ಎಂದು ಖ್ಯಾತವಾಯಿತು. ಆದರೆ ಕೃತಿಕಾರರು ಮಾತ್ರ ಚಿತ್ರವನ್ನು ಮೆಚ್ಚಲಲ್ಲಿ! ಇದನ್ನು ಕುರಿತು ತ.ರಾ.ಸು. ‘ಇದು ನಾಗರಹಾವಲ್ಲ; ಕೇರೆಹಾವು’ ಎಂದು ಜರಿದದ್ದೂ ನಡೆಯಿತು. ಆದರೂ ಈ ಚಿತ್ರ ವ್ಯಾಪಾರದ ದೃಷ್ಟಿಯಿಂದ ಯಶಸ್ವಿಯಾದದಷ್ಟೇ ಅಲ್ಲದೆ ಜನಪ್ರಿಯತೆಯನ್ನೂ ಪ್ರಶಸ್ತಿಗಳನ್ನೂ ಒಟ್ಟೊಟ್ಟಿಗೇ ಪಡೆಯಿತು.

ತಮ್ಮ ಹಲವಾರು ಕೃತಿಗಳು ಸಿನಿಮಾಗಳಾಗಿರುವ ಹಿನ್ನೆಲೆಯಲ್ಲಿ ತರಾಸು ಒಂದೆಡೆ ಹೀಗೆ ಹೇಳುತ್ತಾರೆ: ‘ಸಾಹಿತ್ಯವು ದೃಶ್ಯಮಾಧ್ಯಮದ ಮೂಲಕ ನಮಗೆ ಕಂಡಾಗ ಅದಕ್ಕೊಂದು ವಿಶಿಷ್ಟ ಗುಣ ಬರುತ್ತದೆ. ಕೃತಿಯೊಂದನ್ನು ನಿರ್ದೇಶಕ ಸಿನಿಮಾ ಮಾಡಲು ಸಿದ್ಧಮಾಡುವುದು ಆ ಕೃತಿ ಜನಮನ್ನಣೆ ಪಡೆದಾಗ ಮಾತ್ರ. ಮನ್ನಣೆ ಎಂಬುದು ಸಿಗುವುದು ಕೃತಿಯನ್ನು ಹೆಚ್ಚು ಮಂದಿ ಓದಿದಾಗ. ಆ ದಿಸೆಯಲ್ಲಿ ಇಂತಹ ಕೃತಿಯಿಂದ ಸಿನಿಮಾ ಬಂದಿದ್ದೇ ಆದರೆ; ಇದೇ ಜನ ಮೂಲಕತೆಯ ಒಟ್ಟಾರೆ ಪರಿಣಾಮವನ್ನು ನಿರೀಕ್ಷಿಸುತ್ತಾರೆ. ನನ್ನ ಈ ಪೀಠಿಕೆ ಕೃತಿಯನ್ನೇ ಕ್ಯಾಮರಾದ ಮುಂದೆ ಇಟ್ಟು ಫಿಲಂ ಓಡಿಸಿ ಎನ್ನುವುದಲ್ಲ. ಕಾದಂಬರಿಯಲ್ಲಿ ಕೃತಿಕಾರನ ವರ್ಣನೆ ಪೇಜುಗಟ್ಟಲೆ ಇರಬಹುದು. ಆದರೆ ಸಿನಿಮಾದ ಚೌಕಟ್ಟಿನಲ್ಲಿ ಇಂತಹದು ಖಂಡಿತ ತೋರಿಸಲು ಆಗುವುದಿಲ್ಲ. ನಿರ್ದೇಶಕ ಕೃತಿಯನ್ನು ಬದಲಾವಣೆ ಮಾಡಿಕೊಳ್ಳುವುದಕ್ಕೆ ಅಭ್ಯಂತರವಿಲ್ಲ. ಈ ಬದಲಾವಣೆ ಮೂಲ ಉದ್ದೇಶಕ್ಕೆ ಚ್ಯುತಿ ಬರದಂತೆ ಆಗಬೇಕು…. ಆ ದಿಸೆಯಲ್ಲಿ ನನ್ನ ‘ಹಂಸಗೀತೆ’ ಕಾದಂಬರಿ ಚಿತ್ರವಾದಾಗ ಅದರ ಬಗ್ಗೆ ನಾನು ಇನ್ನೊಂದು ಮಾತು ಆಡುವಂತೆಯೇ ಇರಲಿಲ್ಲ…’

‘ವಂಶವೃಕ್ಷ’ ಅದೇ ಹೆಸರಿನ ಎಸ್.ಎಲ್.ಭೈರಪ್ಪನವರ ಕಾದಂಬರಿಯನ್ನಾಧರಿಸಿ ಗಿರೀಶ್ ಕಾರ್ನಾಡ್ ಹಾಗೂ ಬಿ.ವಿ.ಕಾರಂತ್ ಜೋಡಿ ನಿರ್ದೇಶಿಸಿದ ಚಿತ್ರ. ಇದು ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಕೂಡ ಗಳಿಸಿತು. ಇದರ ಕಾದಂಬರಿ ಕರ್ತ ಭೈರಪ್ಪನವರಿಗೆ ೧೯೭೧ರ ಅತ್ಯುತ್ತಮ ಕಥಾಲೇಖಕ ಪ್ರಶಸ್ತಿಯನ್ನು ನೀಡಿದಾಗ ಅವರು ಅದನ್ನು ಸ್ವೀಕರಿಸಲು ನಿರಾಕರಿಸಿದರು. ತಾವು ಸಿನಿಮಾಗಾಗಿ ಕಥೆ ಬರೆಯಲಿಲ್ಲವೆಂದೂ ತಮ್ಮ ಕಥೆಯನ್ನು ಸಿನಿಮಾ ಕಥೆಯಂತೆ ಪರಿಗಣಿಸಿರುವುದು ತಮಗೆ ಅವಮಾನವೇ ಆಗಿದೆಯೆಂದೂ ಹೇಳುವ ಧಾಟಿಯಲ್ಲಿ ಭೈರಪ್ಪನವರು ಬಹಿರಂಗ ಹೇಳಿಕೆಯೊಂದನ್ನು ನೀಡಿದರು. ಅವರ ಈ ಧೋರಣೆಗೆ ಪ್ರಭಟನೆಗಿಂತ ಹೆಚ್ಚಾಗಿ ಪುರಸ್ಕಾರವೇ ಸಿಕ್ಕಿತು!

ಕನ್ನಡಚಿತ್ರರಂಗದ ಅರವತ್ತರ ದಶಕದಲ್ಲಿ ಕಾದಂಬರಿ ಆಧಾರಿತ ಚಿತ್ರಗಳ ಸಂಖ್ಯೆ ಹೆಚ್ಚಿತ್ತು. ಇವು ಹೆಚ್ಚಾಗಿ ಕೆಳ ಹಾಗೂ ಮಧ್ಯಮವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಬಂದಂಥ ವಸ್ತುಗಳು. ಇವು ಶ್ರೀಮಂತಿಕೆಯ ಅವಾಸ್ತವಿಕ ವೈಭವೀಕರಣ ಹಾಗೂ ಮಧ್ಯಮವರ್ಗದ ಕನಸುಗಳ ಭ್ರಮಾತ್ಮಕ ಲೋಕವನ್ನು ಸೃಷ್ಟಿಸಿದವು. ಸಾವಾನ್ಯವಾಗಿ ಇವುಗಳಲ್ಲಿ ಸರಳ, ಸುಂದರ, ಸಂತೃಪ್ತ ಕುಟುಂಬಗಳು ಚಿತ್ರಿತವಾಗುತ್ತಿದ್ದವು. ಇಲ್ಲಿ ಆದರ್ಶ ಪಾತ್ರಗಳಾದ ತಂದೆ-ತಾಯಿ, ಪತಿ-ಪತ್ನಿ, ಮಕ್ಕಳು, ತಾಯಿ ಹಾಗೂ ಇವರ ನಡುವಿನ ಮಧುರ ಸಂಬಂಧಗಳ ವಿಶಿಷ್ಟ ಪರಂಪರೆಯತ್ತ ಗಮನವಿಟ್ಟಿದ್ದವು.

ಎಪ್ಪತ್ತರ ದಶಕವನ್ನು ಕನ್ನಡದ ಚಿತ್ರರಂಗದ ಮಟ್ಟಿಗೆ ಸುವರ್ಣಯುಗ ಎಂದು ಕರೆಯುತ್ತಾರೆ. ಸಾಹಿತ್ಯ ಲೋಕದ ಅನೇಕ ಪ್ರತಿಭೆಗಳು ಚಿತ್ರರಂಗ ಪ್ರವೇಶಿಸಿದವು. ಹಾಗಾಗಿಯೇ ಹೊಸ ಅಲೆ ಎಂಬ ಪ್ರಕಾರ ಕೂಡ ಜನಪ್ರಿಯವಾಗಿ ಇಡೀ ಭಾರತದ ಗಮನ ಸೆಳೆಯಿತು. ಈ ದಶಕದಲ್ಲಿ, ‘ಸಂಸ್ಕಾರ’, ‘ಕಾಡು’, ‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೆ’, ‘ಘಟಶ್ರಾದ್ಧ’, ‘ಹೇಮಾವತಿ’, ‘ಮೂರುದಾರಿಗಳು’, ‘ಅಬಚೂರಿನ ಪೋಸ್ಟ್ ಆಫೀಸ್’, ‘ಮಾಡಿ ಮಡಿದವರು’, ‘ಹಂಸಗೀತೆ’, ‘ಚೋಮನದುಡಿ’, ‘ಪಲ್ಲವಿ’ ಮುಂತಾದ ಕಾದಂಬರಿ-ಕಥೆ ಆಧಾರಿತ ಚಿತ್ರಗಳು ಬಂದವು. ಮುಂದಿನ ವರ್ಷಗಳಲ್ಲೂ ಇದು ಮುಂದುವರಿದು, ‘ಬ್ಯಾಂಕರ್ ಮಾರ್ಗಯ್ಯ’, ‘ತಬರನಕತೆ’, ‘ಭುಜಂಗಯ್ಯನ ದಶಾವತಾರ’, ‘ಮೈಸೂರುಮಲ್ಲಿಗೆ’, ‘ಸಂಗ್ಯಾಬಾಳ್ಯಾ’, ‘ಗಂಗವ್ವ ಗಂಗಾಮಾಯಿ’, ‘ಮಲೆಗಳಲ್ಲಿ ಮದುಮಗಳು’, ‘ತಾಯಿಸಾಹೇಬ’, ‘ಕಾನೂರು ಹೆಗ್ಗಡತಿ’, ‘ದೇವೀರಿ’(ಅಕ್ಕ), ‘ಮುತ್ತುಚ್ಚೇರ’(ಮುನ್ನುಡಿ), ‘ದ್ವೀಪ’, ‘ಹಸೀನ’…. ಮುಂತಾದ ಮೌಲ್ಯಾಧಾರಿತ ಕೃತಿಗಳಿಗೆ ದಾರಿತೋರಿತು.

ಈ ಮಧ್ಯೆ ಎಂಭತ್ತರ ದಶಕದ ಹೊತ್ತಿಗೆ ಹೊಸ ಅಲೆಯ ಪ್ರವಾಹ ತಗ್ಗಿತು. ‘ಅಂತ’, ‘ಗಾಳಿಮಾತು’, ‘ಹೊಸಬೆಳಕು’, ‘ಹಾಲುಜೇನು’, ‘ಸಮಯದಗೊಂಬೆ’, ‘ಬಾಡದಹೂ’ ಮುಂತಾದ ಚಿತ್ರಗಳು ನೆಪಮಾತ್ರಕ್ಕೆ ಕಾದಂಬರಿ ಆಧರಿಸಿದ ಚಿತ್ರಗಳು. ಇಲ್ಲೆಲ್ಲ ಪಾತ್ರದ ಹೆಸರು, ಕೆಲವು ಸಣ್ಣ ವಿಷಯಗಳನ್ನು ಕಾದಂಬರಿಯಿಂದ ಪಡೆದರೆ ಮುಗಿಯಿತು. ಉಳಿದಂತೆ ಕಾದಂಬರಿಯ ಯಾವ ಧ್ವನಿಯೂ ಚಿತ್ರದಲ್ಲಿ ಇರುತ್ತಿರಲಿಲ್ಲ. ಹೀಗೆ ಎಂಭತ್ತರ ದಶಕದಲ್ಲಿ ಕ್ಷೀಣಿಸುತ್ತಾ ಬಂದ ಸಾಹಿತ್ಯ ಮತ್ತು ಸಿನಿಮಾ ಸಂಬಂಧ ತೊಂಬತ್ತರ ದಶಕದಲ್ಲಿ ಇನ್ನಷ್ಟು ವಿಷಮಿಸಿತು. ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಕಾದಂಬರಿ ಅಥವಾ ಸಿದ್ಧಗೊಂಡ ಸಾಹಿತ್ಯ ರೂಪವನ್ನು ಅವಲಂಬಿಸಿದ್ದವು. ಕನ್ನಡ ನೆಲಕ್ಕೆ ಒಗ್ಗುವ ಚಿತ್ರಗಳು ಕಣ್ಮರೆಯಾಗಿ ಹಾಲಿವುಡ್, ಬಾಲಿವುಡ್ ಸೇರಿದಂತೆ ವಿಕ್ಕ ಭಾರತೀಯ ಚಿತ್ರಗಳ ಅಂಧಾನುಕರಣೆ ಹೆಚ್ಚಾಯಿತು. ತಾಂತ್ರಿಕತೆ ಮೇಲುಗೈ ಸಾಧಿಸುತ್ತಾ ಹೋಗಿ ಚಿತ್ರದ ಆಕೃತಿ ಸಂಪೂರ್ಣ ಬದಲಾಗುತ್ತಾ ಹೋಯಿತು. ಅಲ್ಲದೆ ರೀಮೇಕ್ ಭೂತ ಕನ್ನಡಚಿತ್ರರಂಗವನ್ನು ಆವರಿಸಿದ್ದು ಎಲ್ಲರಿಗೂ ಗೊತ್ತೇ ಇದೆ…

ಜೊತೆಗೆ, ಕಾದಂಬರಿ ಆಧಾರಿತ ಚಿತ್ರ ಎಂಬ ಹಣೆಪಟ್ಟಿ ಪಡೆಯಲು ಹಲವು ನಿರ್ದೇಶಕರು ತಾವು ನೋಡಿದ ವಿದೇಶೀ ಸಿನಿಮಾಗಳ ಕಥೆಯನ್ನು ಇಲ್ಲಿಯ ಲೇಖಕ/ಕಿಯರಿಗೆ ಹೇಳಿ ಅವರಿಂದ ಕಾದಂಬರಿ ರೂಪ ಬರೆಸಿ ಚಿತ್ರ ಮಾಡಿದ ಅಡ್ಡ ಹಾದಿಗಳನ್ನೂ ಕಂಡು ಕಂಡರು. ಇಂಥವರನ್ನು ಟೀಕಿಸಲೆಂದೇ ತರಾಸು ಒಂದೆಡೆ, ‘ತೂಕವಿಲ್ಲದ ಸಾಹಿತ್ಯ ಬಂದು ಅದು ಸಿನಿಮಾ ಆದಾಗ ಅಂಥವರಿಂದು ಸಿನಿಮಾ ಇಂಡಸ್ಟ್ರಿಗೆ ಯಾವ ಲಾಭ? ಸಿನಿಮಾಕ್ಕಾಗಿಯೇ ಕಾದಂಬರಿಯನ್ನು ಸೃಷ್ಟಿಸುವುದು ಬೇಡ…’ ಎಂದು ಹೇಳುತ್ತಾರೆ.

ಆದರೆ ಸಾಹಿತ್ಯ ಕೃತಿಯೊಂದು ದೃಶ್ಯಮಾಧ್ಯಮಕ್ಕೆ ಬರುವುದನ್ನು ಒಪ್ಪದ ಒಂದು ವರ್ಗವೂ ಇದೆ. ಮೆಕ್ಸಿಕೋದ ಪ್ರಸಿದ್ಧ ಲೇಖಕ ಕಾರ್ಲೋಸ್ ಪುಯೆಂಟಸ್ ತನ್ನ ‘ಡಯಾನಾ, ದಿ ಗಾಡೆಸ್ ಹೂ ಹಂಟ್ಸ್ ಅಲೋನ್’ ಎಂಬ ಕಾದಂಬರಿಯಲ್ಲಿ ಒಂದೆಡೆ ಹೀಗೆ ಹೇಳುತ್ತಾನೆ: ಒಬ್ಬ ವ್ಯಕ್ತಿಯ ನಿಜವಾದ ಭಾವಚಿತ್ರ ಸಿನಿಮಾಗಳಲ್ಲಿ ಆತ ಅಥವಾ ಆಕೆ ಯಾವುದೇ ವೇಷ ಹಾಕಿದರೂ ಮರೆಯಾಗುವುದಿಲ್ಲ. ಹೇಗೆಂದರೆ ಗ್ರೇಟಾ ಗಾರ್ಬೋ, ರಾಣಿ ಕ್ರಿಸ್ತೀನಾಳ ಹಾಗೆ ನಟಿಸಿದರೂ ಗ್ರೇಟಾ ಗಾರ್ಬೋ ಆಗಿಯೇ ಉಳಿದಿರುತ್ತಾರೆ. ಮಾರ್ಲೀನ್ ಡೀಟ್ರಿಚ್ ರಷ್ಯದ ಕ್ಯಾಥೆರಿನ್‌ನಂತೆ ಸೋಗುಹಾಕುತ್ತಿದ್ದರೂ ಆಕೆ ಮಾರ್ಲೀನ್ ಡೀಟ್ರಿಚ್ಚೇ…

ಪಾತ್ರವೊಂದು ಪಡೆದುಕೊಳ್ಳಬಹುದಾದ ಆಯಾಮಕ್ಕೆ ಸಂಬಂಧಿಸಿದಂತೆ ಈ ಮಾತು ನಿಜವಿರಬಹುದು. ಆದರೆ ಸಿನಿಮಾ ಇಷ್ಟೇ ಅಲ್ಲವಲ್ಲ. ಬರ್ಗ್‌ಮನ್, ಸತ್ಯಜಿತ್‌ರಾಯ್, ಕುರಾಸೋವಾ… ಮೊದಲಾದ ಶ್ರೇಷ್ಟ ನಿರ್ದೇಶಕರ ಚಿತ್ರಗಳು ಸಾಹಿತ್ಯ ಕೃತಿಗಳನ್ನು ಆಧರಿಸಿದ್ದೂ ಸಾಹಿತ್ಯ ಕೃತಿಗಳ ಅನುವಾದಗಳಾಗದೆ ಸಾಹಿತ್ಯ ಕೃತಿಗಳಂತೆಯೇ ಅನನ್ಯ ಸೃಷ್ಟಿಗಳಾಗಿಲ್ಲವೆ? ನಮ್ಮ ಭಾಷೆಯಲ್ಲೂ ಅಂಥ ಪ್ರಯತ್ನಗಳು ಹೇರಳವಾಗಿ ಆಗಿವೆ. ಒಳ್ಳೆಯ ಕತೆಯೊಂದು ಹೇಗೆ ತನಗೆ ತಾನೇ ಅನನ್ಯವೋ, ಹಾಗೇ ಆ ಕತೆಯನ್ನು ಆಧರಿಸಿದ ಚಲನಚಿತ್ರವೂ ಅನನ್ಯವಾಗಿರಬಲ್ಲುದು.

ಇನ್ನು ಚಿತ್ರಸಂಗೀತದತ್ತ ಒಂದಿಷ್ಟು ಗಮನಹರಿಸುವುದಾದರೆ, ಸಿನಿಮಾ ಗೀತೆಗಳ ರಚನೆಯಲ್ಲಿ ‘ಸಂಗೀತವೇ ಗಂಡ; ಸಾಹಿತ್ಯವೇ ಹೆಂಡತಿ’ ಎನ್ನುವ ಸ್ಥಿತಿ ಇಷ್ಟೂ ವರ್ಷದಂತೆ ಈಗಲೂ ಮುಂದುವರಿದುಕೊಂಡೇ ಬಂದಿದೆ. ಗಂಡ ಹೇಳಿದ ಹಾಗೆ ಹೆಂಡತಿ ಕೇಳಬೇಕು ಎಂಬ ಸಂಪ್ರದಾಯದಂತೆ!? ಮೊದಲ ಟಾಕಿಚಿತ್ರ ‘ಸತಿಸುಲೋಚನ’ದಲ್ಲಿ ಕೂಡ ಮೊದಲು ಹಾಡಿನ ಸ್ವರ ಪ್ರಸ್ತಾರವನ್ನು ಅಣಿ ಮಾಡಿಕೊಂಡು ಅದಕ್ಕೆ ಪದಗಳನ್ನು ಜೋಡಿಸಿ ಹಾಡುಗಳನ್ನಾಗಿ ಮಾಡಲಾಗಿತ್ತಂತೆ.

೧೯೬೩ರಲ್ಲಿ ತೆರೆಗೆ ಬಂದ ಎಸ್.ಕೆ.ಚಾರಿ ನಿರ್ದೇಶಿತ ‘ಗೌರಿ’ ಪ್ರಪ್ರಥಮ ಬಾರಿಗೆ ಮಹಾಕವಿಗಳ ಕವಿತೆಗಳನ್ನು ಕನ್ನಡ ಚಿತ್ರಗಳಲ್ಲಿ ಅಳವಡಿಸುವುದನ್ನು ಪ್ರಾರಂಭಿಸಿದರು. ಕುವೆಂಪು ಅವರ ‘ಯಾವ ಜನ್ಮದ ಮೈತ್ರಿ…’, ಹಾಗೂ ಕೆ.ಎಸ್.ನರಸಿಂಹಸ್ವಾಮಿಗಳ ‘ಇವಳು ಯಾರು ಬಲ್ಲೆಯೇನು?….’ ಕವಿತೆಗಳು ಚಿತ್ರದ ಮೌಲ್ಯವನ್ನು ಹೆಚ್ಚಿಸಿದವು. ಮುಂದೆ ಪುಟ್ಟಣ್ಣಕಣಗಾಲ್ ದ.ರಾ.ಬೇಂದ್ರೆಯವರ, ‘ಮೂಡಣ ಮನೆಯ…’ ಹಾಡನ್ನು ಬಳಸಿದರು. ಇವರೇ ಮುಂದೆ ಜಿ.ಎಸ್.ಶಿವರುದ್ರಪ್ಪ, ಎಕ್ಕುಂಡಿ, ಸಿದ್ಧಲಿಂಗಯ್ಯ ಮುಂತಾದವರ ಕವಿತೆಗಳಿಗೆ ರಾಗ ಸಂಯೋಜಿಸಿದರು. ವೀ.ಸೀ.ಯವರ ‘ಯಾವ ಜನ್ಮದ ಕಳೆಯೋ ಕಾಣೆನೋ…’, ಬೇಂದ್ರೆಯವರ ‘ಬಂದಿತೋ ಶೃಂಗಾರ ಮಾಸ..’ ಗೋವಿಂದ ಪೈ ಅವರ ‘ತಾಯೆ ಬಾರ ಮೊಗವ ತೋರ…’, ಗೋಪಾಲಕೃಷ್ಣ ಅಡಿಗರ ‘ಎಂಥ ಕಣ್ಣು…’, ಲಕ್ಷ್ಮೀನಾರಾಯಣ ಭಟ್ಟರ ‘ಎಂಥ ಮರುಳಯ್ಯ…’, ಕುವೆಂಪು ಅವರ ‘ನಾನೇ ವೀಣೆ, ನೀನೇ ತಂತಿ…’, ಇವು ಇತರ ಕೆಲವು ಇಂಪಾದ ಸಾಹಿತ್ಯದ ಸೊಗಡಿರುವ ಗೀತೆಗಳು…

ಹೀಗೆ ಸಾಹಿತ್ಯ, ನಾಟಕ, ಕಾವ್ಯ, ಕಥೆ, ಕಾದಂಬರಿ ಹಾಗೂ ಕವನಗಳನ್ನು ಬಳಸಿಕೊಂಡು ಕನ್ನಡಚಿತ್ರಗಳು ಅವುಗಳ ಘನತೆಯ ಜೊತೆಗೆ ತಮ್ಮ ಮೌಲ್ಯವನ್ನು ಹೆಚ್ಚಿಸಿಕೊಂಡವು.

ಇಷ್ಟೆಲ್ಲಾ ಆದರೂ ಶೈಕ್ಷಣಿಕ ಹಾಗೂ ಬೌದ್ಧಿಕ ವಲಯಗಳಲ್ಲಿ ಜನಪ್ರಿಯ ಕಾದಂಬರಿಗಳ ಬಗ್ಗೆ ಹೇಗೋ ಹಾಗೇ ಸಿನಿಮಾ ಬಗೆಗೂ ಹಿಂದಿನಂತೆ ಇಂದಿಗೂ ಒಂದು ಬಗೆಯ ಕೀಳುಭಾವನೆ ಉಳಿದುಬಂದಿದೆ. ಸರಳ ನಿರೂಪಣೆ, ಅಚ್ಚು ಹೊಯ್ದ ಪಾತ್ರಗಳು, ಪುನರಾವರ್ತಿತ ಸನ್ನಿವೇಶಗಳು, ಜೀವನಕ್ಕಿಂತ ಬೇರೆಯಾದ ಅವಾಸ್ತವ ಜಗತ್ತು ಇಲ್ಲಿ ಪ್ರತಿಬಿಂಬಿತವಾಗುತ್ತಿರುವುದೇ ಇದಕ್ಕೆ ಕಾರಣ. ಜೊತೆಗೆ ವ್ಯಾಪಾರೀಕರಣದ ಪ್ರಭಾವ ಇತ್ತೀಚಿನ ಚಲನಚಿತ್ರಗಳ ಮೇಲೆ ಸಂಪೂರ್ಣ ಆವರಿಸಿಕೊಂಡಿದೆ. ಇದರ ನಡುವೆ ಕಲೆಯನ್ನು ಹುಡುಕುವುದೆಲ್ಲಿ? ಆದರೂ ಸಿನಿಮಾ ಒಂದು ಆಕರ್ಷಕ ಮನರಂಜನೆಯ ಸಮೂಹಮಾಧ್ಯಮವಾಗಿ ಮುಂದುವರಿದಿದೆ.

3 ಟಿಪ್ಪಣಿಗಳು

 1. Very informative article about film history and its transformation.

 2. Dr.S.K. Nataraj, BSS, Cavendish Lab, University of Cambridge, Cambridge CB3 0HE, UK

  ಡಿಯರ್ ಸರ್,
  ಕೇಂಬ್ರಿಡ್ಜ್ ನಿಂದ ನಿಮ್ಮ ಅಭಿಮಾನಿ (‘ಏಕಲವ್ಯ’ನೆಂದು ಕರೆದುಕೊಳ್ಳುತ್ತೇನೆ)ಯ ನಮಸ್ಕಾರಗಳು. ನಾನು ಸಿನಿಮಾದಂತಹ ಅಗಾಧ ಸಾಧ್ಯತೆಗಳ ಸಾಗರನ ದಡದಲ್ಲಿ ಕುಳಿತ ವಿಧ್ಯಾರ್ಥಿ. ನಾನು ಈ ದಡದಲ್ಲಿ ಕುಳಿತು ಸಿನಿಮಾದ ದೃಶ್ಯಗಳನ್ನು ಏರುವ ಅಲೆಗಳಲ್ಲಿ ಕಾಣುತ್ತಲೇ ಇಂದಿಗೆ ಹತ್ತು ವರ್ಷಗಳೇ ಆಗಿವೆ, ಅನಿವಾರ್ಯ ಕಾರಣಗಳಿಂದ ಓದನ್ನು ಸ್ವಲ್ಪ ಸೀರಿಯಸ್ಸಾಗೆ ತೆಗೆದುಕೊಂಡು ಎಂ.ಎಸ್ಸಿ, ಪಿ.ಹೆಚ್ ಡಿ ಮುಗಿಸಿ ಇಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ದಲ್ಲಿ ಸಂಶೋದಕನಾಗಿ ಕೆಲಸ ಮಾಡುತ್ತಿದ್ದೇನೆ. ಸಿನಿಮಾದ ಹಸಿವು ಮಾತ್ರ ಹೆಚ್ಚಾಗುತ್ತಿದೆ. ನಿಮ್ಮ ಈ ಬರಹ ನನಗೆ ನಿಮ್ಮ ನಾನು ಸಣ್ಣವನಾಗಿದ್ದಾಗ ನೋಡುತ್ತಿದ್ದ ನಿಮ್ಮ-ಸೀತಾರಾಮ್ ಸರ್ ರ “ಮಾಯಾಮೃಗ”ದಿಂದ ಹಿಡಿದು ಇತೀಚಿಗೆ ನೋಡಿದ ಗಿರೀಶ್ ಸರ್ ರ “ಗುಲಾಬಿ ಟಾಕೀಸ್” (ನಿಮ್ಮ “ಬೆಟ್ಟದ ಜೀವ” ವನ್ನು ಇನ್ನು ನೋಡಲಾಗಿಲ್ಲ, ಕ್ಷಮಿಸಿ) ವರೆಗಿನ “ದೃಶ್ಯ ಕೃತಿಗಳ” ಆತ್ಮವನ್ನು ಹೀಗೆ ಹುಡುಕಬೇಕು ಎನ್ನುವದನ್ನು ಮತ್ತಷ್ಟು ಸ್ಪಷ್ಟವಾಗಿ ಮನದಟ್ಟು ಮಾಡಿಕೊಟ್ಟಿದೆ. ನಿಮಗೆ ಸಾವಿರ ವಂದನೆಗಳು. ನಮ್ಮ ಮನಸಿನ ನೂರು ಆಲೋಚನೆಗಳಿಗೆ ಒಂದು ರೂಪ, ಬಣ್ಣ, ಮಾತು ಕೊಟ್ಟು ಒಂದು ಪಾತ್ರ ಅಥವಾ ವ್ಯಕ್ತಿಯನ್ನು ೯ ತಿಂಗಳ ವೇದನೆ ಇಲ್ಲದೆ ಹೆತ್ತು ನನ್ನಂತವರಿಗೆ ಹೊಸ ಸಂವೇದನೆಯನ್ನ ಬಿತ್ತುತ್ತಿರುವ ನಿಮಗೆ ಮತ್ತು “ಚಿತ್ರ ಸಮೂಹ “ದ “ಮೇಸ್ಟ್ರು”ಗಳಿಗೆ ಕೋಟಿ ಕೋಟಿ ವಂದನೆಗಳು. ತಡವಾಗಿ ನಿಮಗೆ ಬರೆದಕ್ಕೆ ಕ್ಷಮೆ ಇರಲಿ.

  ಎಸ್.ಕೆ. ನಟರಾಜ್
  ಕೆವೆಂಡಿಶ್ ಲ್ಯಾಬ್
  ಕೇಂಬ್ರಿಡ್ಜ್ ವಿಶ್ವವಿದ್ಯಾಲಯ
  ಇಂಗ್ಲೆಂಡ್

 3. ANIL KUMAR S

  ಕನ್ನಡ ಚಲನಚಿತ್ರಕ್ಕೆ ಮೂಲ ಬೇರು ನಮ್ಮ ಕನ್ನಡ ಸಾಹಿತ್ಯ ಅದನ್ನು ಎಳೆ ಎಳೆಯಾಗಿ ಬಿಡಿಸಿ ವಿಶ್ಲೇಷಣೆ ಮಾಡಿರುವುದಕ್ಕೆ ನನ್ನ ಹೃದಯ ತುಂಬಿದ ನಮನಗಳು ನಿಮಗೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: