ಪಿ. ಶೇಷಾದ್ರಿ

ಕಂಡಿದ್ದು ಕಂಡಂತೆ…

‘ಹರಿಶ್ಚಂದ್ರಾಚಿ ಫ್ಯಾಕ್ಟರಿ’ – ಕಥೆಯೊಳಗೆ ಕಥೆ ಹುಟ್ಟಿ!

ಆತ ಒಬ್ಬ ಸಾಮಾನ್ಯ ಮನುಷ್ಯ. ಆದರೆ ಮಾಡಿದ ಸಾಹಸಗಳು ಒಂದೆರಡಲ್ಲ..

ಅದು 1895ನೇ ಇಸವಿ. ಆಗಿನ್ನೂ ಯಾರೂ ಆ ಬಗ್ಗೆ ಯೋಚನೆಯನ್ನೇ ಮಾಡಿರಲಿಲ್ಲ. ಈತ ಮಾಡಿದ!

ಒಂದು ಪುಟ್ಟ ಸ್ಟಿಲ್ ಕ್ಯಾಮರಾ ತಂದು ತನ್ನದೇ ಒಂದು ಸ್ಟುಡಿಯೋ ಸ್ಥಾಪಿಸಿದ. ತನ್ನ ಈ ಸಾಹಸವನ್ನು ಮೆಚ್ಚಿ ಜನ ಶಹಬ್ಬಾಸ್ ಎನ್ನುತ್ತಾರೆ ಎಂದು ಆತ ಭಾವಿಸಿದ್ದ. ಆದರೆ ಅವರು ಅದನ್ನು ನೋಡಿ ಹೆದರಿ ಓಡತೊಡಗಿದರು. ‘ಕ್ಯಾಮರಾ ತನ್ನ ಎದುರು ನಿಂತವನ ಜೀವವನ್ನೇ ಬಲಿ ತೆಗೆಯುತ್ತದೆ!’ ಎಂಬ ಗಾಳಿ ಸುದ್ದಿ ಹರಡಿ ಯಾರೂ ಸ್ಟುಡಿಯೋ ಕಡೆ ತಲೆ ಹಾಕಲೇ ಇಲ್ಲ. ಪರಿಣಾಮ, ಸ್ಟುಡಿಯೋಗೆ ಬೀಗ ಬಿತ್ತು!

ಆದರೆ ಆತ ಇಷ್ಟಕ್ಕೇ ಸುಮ್ಮನೇ ಕೂರಲಿಲ್ಲ. ಇನ್ನೊಂದು ಸಾಹಸಕ್ಕೆ ಭೂಮಿಕೆ ಸಿದ್ಧವಾಗಿತ್ತು. ಪ್ರಿಂಟಿಂಗ್ ಪ್ರೆಸ್ ಬಿಸಿನೆಸ್‌ಗೆ ಕೈ ಹಾಕಿದ. ಅದು ಸ್ನೇಹಿತನೊಂದಿಗಿನ ಪಾಲುದಾರಿಕೆ ವ್ಯವಹಾರ. ಬಿಸಿನೆಸ್ ಚನ್ನಾಗಿ ನಡೆಯುತ್ತಿದ್ದಾಗ ಅದರಲ್ಲೂ ವೈಮನಸ್ಯ ಬಂದು ಕೈಬಿಡಬೇಕಾಯಿತು. ಮನೆಯಲ್ಲಿ ಹೆಂಡತಿ ಇಬ್ಬರು ಮಕ್ಕಳು. ಹೇಗಾದರೂ ಸರಿ ಬದುಕನ್ನು ನೀಸಲೇ ಬೇಕಿತ್ತು. ಭಾರತಕ್ಕೆ ಬಂದಿದ್ದ ಜರ್ಮನಿಯ ಜಾದೂಗಾರನೊಬ್ಬನಿಂದ ಇಂದ್ರಜಾಲದ ಕೆಲವು ತಂತ್ರಗಳನ್ನು ಕಲಿತು ‘ಫ್ರೊಫೆಸರ್ ಕೆಲ್ಪಾ’ ಹೆಸರಿನಲ್ಲಿ ಶೋ ಕೊಡಲು ಪ್ರಾರಂಭಿಸಿದ. ಇಲ್ಲಿ ‘ಕೆಲ್ಪಾ’ ಎಂಬುದು ಇವನ ‘ಫಾಲ್ಕೆ’ ಹೆಸರಿನ ತಿರುವು ಮುರುವು ಉಚ್ಛಾರಣೆಯಾಗಿತ್ತು! ಈ ಟ್ರಿಕ್ ಕೂಡ ಗಿಟ್ಟಲಿ…

ಅದು 1911 ನೇ ಇಸವಿಯ ಏಪ್ರಿಲ್ ತಿಂಗಳ 14 ನೇ ದಿನ, ಸ್ಥಳ ಬೊಂಬಾಯಿ.
ಅಂದು ಅವನನ್ನು ಹಿಂಬಾಲಿಸಿಕೊಂಡು ಬರುತ್ತಿದ್ದವರಿಂದ ತಪ್ಪಿಸಿಕೊಂಡು ಸ್ವಲ್ಪ ಹೊತ್ತು ಬಚ್ಚಿಟ್ಟುಕೊಳ್ಳಲು ಒಂದು ಸ್ಥಳದ ಅವಶ್ಯಕತೆ ಇತ್ತು. ಅಲ್ಲೊಂದು ಟೆಂಟ್ ಇತ್ತು. ಒಳಗೆ, ವಿದೇಶದಲ್ಲಿ ತಯಾರಾದ ಮೂಕಿ ಚಿತ್ರಗಳ ಪ್ರದರ್ಶನ ನಡೆಯುತ್ತಿತ್ತು. ಸಾಮಾನ್ಯರು ಯಾರೂ ಅಲ್ಲಿಗೆ ಹೋಗುತ್ತಿರಲಿಲ್ಲ. ವಿದೇಶೀಯರು ಹಾಗೂ ಮೇಲ್ವರ್ಗದ ಕೆಲವು ಭಾರತೀಯರು ಮಾತ್ರ ಹೋಗುತ್ತಿದ್ದರು. ಪ್ರವೇಶದರ ಎರಡು ಆಣೆ. ಹಣ ತೆತ್ತು ಒಳಗೆ ಹೋಗಿ ಕುಳಿತ. ಅಂದು ‘ಅಮೇಜಿಂಗ್ ಅನಿಮಲ್ಸ್’ ಎಂಬ ಮೂಕಿಚಿತ್ರದ ಪ್ರದರ್ಶನ ನಡೆಯುತ್ತಿತ್ತು. ಕೌತುಕದಿಂದ ಕೂತು ಅದನ್ನು ನೋಡಿದ. ಅಚ್ಚರಿಯನ್ನು ಹೊತ್ತು ಹೊರಬಂದ. ಆ ಪ್ರದರ್ಶನ ಅವನ ಬದುಕಲ್ಲಿ ಅತೀ ದೊಡ್ಡ ತಿರುವನ್ನು ತಂದಿತು. ಹಾಗೇ ಭಾರತೀಯ ಚಿತ್ರರಂಗಕ್ಕೂ ಕೂಡ! ಪ್ರದರ್ಶನ ಮುಗಿಸಿ ಹೊರಬಂದವನಲ್ಲಿ ಸಹಜವಾಗಿದ್ದ ಸಾಹಸಪ್ರವೃತ್ತಿ ಜಾಗೃತವಾಯಿತು. ‘ಅರೆ! ನಾನೂ ಏಕೆ ಸಿನಿಮಾ ಮಾಡಬಾರದು?’ ಹೀಗೆ ಮೊಳಕೆಯೊಡೆದ ಯೋಚನೆ ಮುಂದೆ ಹೆಮ್ಮರವಾಗಿ ಬೆಳೆದು ಭಾರತದ ಪ್ರಪ್ರಥಮ ಚಿತ್ರ ‘ರಾಜಾ ಹರಿಶ್ಚಂದ್ರ’ ಎಂಬ ಕಥಾಚಿತ್ರಕ್ಕೆ ನಾಂದಿಯಾಯಿತು. ಮುಂದೆ ಭಾರತದಲ್ಲಿ ಚಲನಚಿತ್ರ ರಂಗ ಅಗಾಧವಾಗಿ ಬೆಳೆಯಲು ಇದು ಮುನ್ನುಡಿ ಬರೆಯಿತು.

ಆ ಹುಚ್ಚು ಸಾಹಸಿಯೇ ದುಂಡಿರಾಜ್ ಗೋವಿಂದ ಫಾಲ್ಕೆ. ಉರುಫ್ ದಾದಾ ಸಾಹೇಬ್ ಫಾಲ್ಕೆ.

ಈ ಸಾಹಸಿಗ ಮಾಡಿದ ಮೊದಲ ಮೂಕಿ ಚಲನಚಿತ್ರ ‘ರಾಜಾಹರಿಶ್ಚಂದ್ರ’.

ಆ ಚಿತ್ರ ತಯಾರಾದ ಹಿನ್ನೆಲೆಯನ್ನು ಆಧರಿಸಿ ಮರಾಠಿಯ ಕಳೆದ ವರ್ಷ ನಿರ್ಮಿಸಿದ ಚಿತ್ರವೇ ‘ಹರಿಶ್ಚಂದ್ರಾಚಿ ಫ್ಯಾಕ್ಟರಿ’.

‘ಹರಿಶ್ಚಂದ್ರಾಚಿ ಫ್ಯಾಕ್ಟರಿ’ ಚಿತ್ರದಲ್ಲಿ ಒಂದು ಸನ್ನಿವೇಶ ಬರುತ್ತದೆ. ಫಾಲ್ಕೆ ಈ ಚಿತ್ರ ತಯಾರಿಸಲು ಫಾಲ್ಕೆ ಎಲ್ಲೆಲ್ಲಿಂದಲೋ ಜನರನ್ನು ಕಷ್ಟಪಟ್ಟು ಒಟ್ಟು ಹಾಕಿರುತ್ತಾನೆ. ಅದರಲ್ಲಿ ಒಬ್ಬ ಕೆಲಸಗಾರ ತನ್ನ ಸಹವರ್ತಿಯೊಂದಿಗೆ ತನ್ನ ನೋವನ್ನು ಹಂಚಿಕೊಳ್ಳುತ್ತಾ ಹೀಗೆ ಮಾತನಾಡುತ್ತಾನೆ:

‘ನನಗೆ ಮನೆಯಲ್ಲಿ ಹೆಣ್ಣು ನೋಡಿದ್ದರು, ಹುಡುಗಿ ಕಡೆಯವರು ನೀನು ಎಲ್ಲಿ ಕೆಲಸ ಮಾಡುತ್ತಿದ್ದೀಯ ಎಂದು ಕೇಳಿದರು. ನಾನು, ನಾಟಕವನ್ನು ಸಿನಿಮಾ ಮಾಡುತ್ತಿರುವವರ ಜೊತೆ ಇದ್ದೇನೆ ಎಂದೆ… ಅದಕ್ಕೆ ಅವರು, ಅದೆಂಥ ಕೆಲಸ! ನಿನ್ನಂಥವನಿಗೆ ನಾವು ಹೆಣ್ಣು ಕೊಡುವುದಿಲ್ಲ ಎಂದು ಬೈದು ಹೊರಗೆ ಹಾಕಿದರು’
‘ನಿಜ ನಿನ್ನ ಮಾತು. ಯಾರಾದರೂ ಕೇಳಿದರೆ, ನಾವೇನು ಮಾಡ್ತಿದ್ದೀವಿ ಅಂತ ಜನಕ್ಕೆ ಅರ್ಥವಾಗೋ ಹಾಗೆ ಹೇಗೆ ಹೇಳೋದು ನಂಗೂ ಗೊತ್ತಾಗುತ್ತಿಲ್ಲ…’

ಆಗ ಪರದೆಯ ಹಿಂದಿನಿಂದ ಬರುವ ಫಾಲ್ಕೆ, ‘ಕಾರ್ಖಾನೆ… ನಾವು ಕಾರ್ಖಾನೇಲಿ ಕೆಲಸ ಮಾಡ್ತೀವಿ ಅಂತ ಹೇಳಿ’ ಎನ್ನುತ್ತಾನೆ.

‘ಹಾಂ! ಕಾರ್ಖಾನೆ!? ಯಾವ ಕಾರ್ಖಾನೆ?’

‘ಪಿಕ್ಚರ್‌ದು.. ಪಿಕ್ಚರ್ ಅನ್ನೋದು ಇಂಗ್ಲೀಷ್ ಶಬ್ದ. ನೀವು ಇಂಗ್ಲೀಷ್ ಶಬ್ದ ಬಳಸಿ ಹೇಳಿದ್ರೆ ಅವರು ನಿಮ್ಮನ್ನು ಕೀಳಾಗಿ ಕಾಣೋಲ್ಲ. ಹಾಗಾಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ದೀವಿ ಅನ್ನಿ..’ ಎನ್ನುತ್ತಾನೆ. ಎಲ್ಲರೂ ತಲೆಯಾಡಿಸುತ್ತಾರೆ.

ಹೀಗೆ, ಸದರಿ ಚಿತ್ರಕ್ಕೆ ‘ಹರಿಶ್ಚಂದ್ರಾಚಿ ಫ್ಯಾಕ್ಟರಿ’ ಎಂದು ನಾಮಕರಣ ಮಾಡಿರುವ ಸೂಚನೆ ನಮಗೆ ಇಲ್ಲಿ ದೊರೆಯುತ್ತದೆ.

1911 ರಿಂದ 1913 ರ ಮೂರು ವರ್ಷದ ದುಂಡಿರಾಜ್ ಗೋವಿಂದ ಫಾಲ್ಕೆಯ ಬದುಕಿನ ಕಥೆಯನ್ನು ಈ ಚಿತ್ರ ಹೇಳುತ್ತದೆ.

Common man with uncommon vision ಎಂಬುದು ಫಾಲ್ಕೆ ಬಗ್ಗೆ ಹೇಳುವ ಮಾತು. ದುಂಡಿರಾಜ್ ಗೋವಿಂದ ಫಾಲ್ಕೆ ಇದ್ದದ್ದೇ ಹಾಗೆ!
ಸಾಮಾನ್ಯವಾಗಿ ನಾವೆಲ್ಲ ಚಿತ್ರವನ್ನು ಹೇಗೆ ನೋಡುತ್ತೇವೆ?

ಪರದೆಯ ಮುಂದೆ ಕುಳಿತು, ಅದಕ್ಕೆ ಕಣ್ಣನ್ನು ನೆಟ್ಟು… ಅಲ್ಲವೇ? ಆದರೆ ಈ ಚಿತ್ರದಲ್ಲಿ ನಮ್ಮ ನಾಯಕ ಫಾಲ್ಕೆ (ನಂದು ಮಾಧವ್) ಸಿನಿಮಾ ನೋಡುವುದು ಹೇಗೆ ಗೊತ್ತೇ? ಪರದೆಗೆ ಬೆನ್ನು ಹಾಕಿ! ತಾನು ಮೊದಲ ದಿನ ಕಂಡ ಚಲಿಸುವ ಬಿಂಬಗಳ ಅಚ್ಚರಿಯನ್ನು ಹೆಂಡತಿ ಮಕ್ಕಳಿಗೂ ತೋರಿಸಲು ಮತ್ತೆ ಅವರನ್ನೂ ಚಿತ್ರಕ್ಕೆ ಕರೆದುಕೊಂಡು ಹೋಗುವ ಈತ, ಎಲ್ಲರೂ ಪರದೆ ನೋಡುತ್ತಿದ್ದರೆ, ತಾನು ಮುಖ ಮಾಡಿ ಕೂರುವುದು ಪ್ರೊಜೆಕ್ಟರ್ ರೂಮ್ ಕಡೆಗೆ! ಸಿನಿಮಾ ಹೇಗಿರುತ್ತದೆ ಎಂಬುದಕ್ಕಿಂತ ಸಿನಿಮಾ ಹೇಗೆ ಮೂಡುತ್ತದೆ ಎಂಬುದೇ ಇವನಿಗೆ ಮೊದಲ ಕುತೂಹಲದ ವಸ್ತು. ಅವನಲ್ಲಿ ಯಾವಾಗಲೂ ಕೆಲಸ ಮಾಡುವುದು ಪ್ರಯೋಗಶೀಲ ಬುದ್ಧಿ. ಹಾಗಾಗೇ ಈತ ಪ್ರೊಜೆಕ್ಟರ್ ರೂಮಿಗೆ ನುಗ್ಗುತ್ತಾನೆ, ಬೈಸಿಕೊಳ್ಳುತ್ತಾನೆ, ಬಿಡದೆ ಹೇಗೋ ಆಪರೇಟರ್ ಸ್ನೇಹ ಸಂಪಾದಿಸಿ ಸಿನಿಮಾದ ಗುಟ್ಟು ತಿಳಿಯಲು ಪ್ರಯತ್ನಿಸುತ್ತಾನೆ.

ಇವನ ಸಹಧರ್ಮಿಣಿ ಸರಸ್ವತಿ (ವಿಭಾವರಿ ದೇಶಪಾಂಡೆ) ಇಲ್ಲಿ ನಿಜಕ್ಕೂ ಸಹಧರ್ಮಿಣಿಯೇ! ಗಂಡನ ಎಲ್ಲ ಸಾಹಸಗಳಿಗೆ ಉದ್ದಕ್ಕೂ ಬೆನ್ನೆಲುಬಾಗಿ ನಿಲ್ಲುತ್ತಾಳೆ. ಸಂಸಾರದೊಂದಿಗೆ ಕುಳಿತು ಕ್ರಿಸ್ತನ ಕುರಿತ ಸಿನಿಮಾ ನೋಡಿ ಬಂದು, ನಾನೂ ನಮ್ಮ ದೇವರುಗಳನ್ನು ಪರದೆ ಮೇಲೆ ತರಬೇಕು ಎಂದು ಗಂಡ ಕನಸು ಕಾಣುತ್ತಾನೆ. ಮನೆಯಲ್ಲಿರುವ ಹಣವನ್ನೆಲ್ಲ ಹೆಂಡತಿ ಗಂಡನ ಮುಂದೆ ಸುರಿಯುತ್ತಾಳೆ. ಎಣಿಸಿದಾಗ ಬರುವ ಮೊತ್ತ 57 ರೂಪಾಯಿ. ದೇವರ ವಿಗ್ರಹದ ಕೆಳಗಿದ್ದ ಎರಡು ರೂಪಾಯಿಯೂ ಸೇರಿ ಒಟ್ಟು 59 ಆಗುತ್ತದೆ! ಅದನ್ನೇ ಹಿಡಿದು ಸಾಹಸಕ್ಕೆ ಮುಂದಾಗುತ್ತಾರೆ. ಸಿನಿಮಾ ಬಗೆಗಿನ ಪುಸ್ತಕಗಳನ್ನು ಕೊಂಡು ಓದುತ್ತಾನೆ. ಮನೆಯ ಗೋಡೆ ಮೇಲೆ ಸಿನಿಮಾ ಫ್ರೇಂಗಳನ್ನು ಪ್ರೊಜೆಕ್ಟ್ ಮಾಡಿ ಸಿನಿಮಾದ ಮೂಲ ಕೆದಕುತ್ತಾನೆ…

ಮನೆಯಲ್ಲಿ ಒಂದೊಂದೇ ಸಾಮಾನು ಗಿರವಿ ಅಂಗಡಿ ಸೇರುತ್ತವೆ. ಅಕ್ಕ-ಪಕ್ಕದವರು ಇವನನ್ನು ವಿಚಿತ್ರವಾಗಿ ನೋಡುತ್ತಾರೆ. ಫಾಲ್ಕೆಗೆ ಹುಚ್ಚು ಹಿಡಿದಿದೆ ಎಂದು ಹುಚ್ಚಾಸ್ಪತ್ರೆಗೆ ಎಳೆದುಕೊಂಡು ಹೋಗುತ್ತಾರೆ. ಇವನು ಅಲ್ಲಿಂದಲೂ ತಪ್ಪಿಸಿಕೊಂಡು ಓಡಿ ಬರುತ್ತಾನೆ. ಈ ಮಧ್ಯೆ ಫಾಲ್ಕೆ ತನ್ನ ದೃಷ್ಟಿ ದೋಷದಿಂದ ನರಳುತ್ತಾನೆ; ಆದರೆ ದೃಷ್ಟಿಕೋನ ಬದಲಾಗುವುದಿಲ್ಲ.

ತನ್ನ ಕನಸನ್ನು ಸಾಕಾರಗೊಳಿಸಿಕೊಳ್ಳಲು ಬೇಕಾದ ತಾಂತ್ರಿಕ ಪರಿಣತಿ ಪಡೆಯಲು ಕಷ್ಟಪಟ್ಟು ಲಂಡನ್‌ಗೆ ಪ್ರಯಾಣ ಬೆಳೆಸುತ್ತಾನೆ. ಅಲ್ಲಿಯ ಫಿಲಂ ಸಂಸ್ಥೆಯೊಂದರ ಮ್ಯಾನೇಜರ್ ಕೊಠಡಿಗೆ ನುಗ್ಗಿ, ತನ್ನ ಮರಾಠಿ ಶೈಲಿಯ ಇಂಗ್ಲೀಷಿನಲ್ಲಿ ‘ನಾನು ದುಂಡಿರಾಜ್ ಗೋವಿಂದ ಫಾಲ್ಕೆ, ಭಾರತದಿಂದ ಬಂದಿದ್ದೇನೆ, ನನಗೆ ಸಿನಿಮಾದ ಬಗ್ಗೆ ಕಲಿಯಬೇಕಿದೆ, ನೀವು ಕಲಿಸುತ್ತೀರ?’ ಎಂದು ಕೇಳುತ್ತಾನೆ. ಇವನ ಈ ನೇರ ಮಾತುಗಳು ಅವರಲ್ಲಿ ಅಚ್ಚರಿ/ಮೆಚ್ಚುಗೆ ಎರಡನ್ನೂ ಹುಟ್ಟಿಸಿ ಇವನಿಗೆ ತರಬೇತಿ ಕೊಡುತ್ತಾರೆ.

ಎರಡು ತಿಂಗಳ ನಂತರ ಭಾರತಕ್ಕೆ ಹಿಂತಿರುಗಿ ಬಂದ ಫಾಲ್ಕೆ ‘ರಾಜಾ ಹರಿಶ್ಚಂದ್ರ’ ಚಿತ್ರದ ತಯಾರಿಗೆ ನಿಲ್ಲುತ್ತಾನೆ. ಕಲಾವಿದರು, ತಂತ್ರಜ್ಞರು, ಇತರೆ ವಿವಿಧ ವಿಭಾಗಗಳ ಕೆಲಸಗಾರರ ಆಯ್ಕೆ ಪ್ರಾರಂಭವಾಗುತ್ತದೆ. ಕೊನೆಗೆ ಹರಿಶ್ಚಂದ್ರನ ಪತ್ನಿ ತಾರಾಮತಿಯ ಪಾತ್ರಕ್ಕೆ ಒಬ್ಬ ನಟೀಮಣಿ ದೊರೆಯುವುದು ದುಸ್ತರವಾಗುತ್ತದೆ. ಪಾತ್ರಧಾರಿಯನ್ನು ಹುಡುಕುತ್ತಾ ವೇಶ್ಯಾವಾಟಿಕೆಗಳನ್ನೂ ಎಡತಾಕುತ್ತಾನೆ. ಅವರೂ ಕೂಡ ಸಿನಿಮಾದಲ್ಲಿ ಪಾತ್ರ ಮಾಡುವುದು ತಮ್ಮ ಗೌರವಕ್ಕೆ ಕುಂದು ಎಂದು ಭಾವಿಸಿ ಹಿಂಜರಿಯುತ್ತಾರೆ. ಕೊನೆಗೆ ಗಂಡು ಪಾತ್ರಧಾರಿಗೆ ಸ್ತ್ರೀ ಪಾತ್ರ ಹಾಕಲು ಒಪ್ಪಿಸಲಾಗುತ್ತದೆ. ಆದರೆ ಆತ ತನ್ನ ತಂದೆ ಇನ್ನೂ ಬದುಕಿರುವುದರಿಂದ ತಾನು ಮೀಸೆ ಬೋಳಿಸುವಂತಿಲ್ಲ ಎಂದು ಹಠ ಹಿಡಿಯುತ್ತಾನೆ! ಇಂಥ ಹಲವಾರು ಅಡೆ-ತಡೆಗಳ ನಡುವೆ ಚಿತ್ರ ಚಿತ್ರೀಕರಣವಾಗುತ್ತದೆ…

‘ರಾಜಾ ಹರಿಶ್ಚಂದ್ರ’ ಬೊಂಬಾಯಿಯ ಕಾರೋನೇಷನ್ ಥಿಯೇಟರ್‌ನಲ್ಲಿ ಮೇ 3, 1913 ರಂದು ತೆರೆಕಾಣುತ್ತದೆ.

ಆರಂಭದಲ್ಲಿ ಪ್ರದರ್ಶನ್ರಕ್ಕೆ ಜನರೇ ಬರುವುದಿಲ್ಲ! ಪ್ರಚಾರದ ವೈಖರಿಯನ್ನು ಬದಲಿಸಿದ ನಂತರ- ಎರಡು ಮೈಲು ಉದ್ದದ, 57,000 ಬಿಂಬಗಳ ಚಿತ್ರ, ಅದೃಷ್ಟದ ಟಿಕೆಟ್ ಪಡೆದವರಿಗೆ ಒಂಬತ್ತು ಗಜದ ಸೀರೆಯ ಉಡುಗೊರೆ… ಇತ್ಯಾದಿ-ನಿಧಾನವಾಗಿ ಅದು ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಮುಂದೆ ಫಾಲ್ಕೆ ಇದೇ ಚಿತ್ರವನ್ನು ಲಂಡನ್‌ಗೆ ಒಯ್ಯುತ್ತಾರೆ. ಅಲ್ಲಿಯ ಸಿನಿಮಾ ಸಂಸ್ಥೆ ಸಾವಿರಾರು ಪೌಂಡ್‌ಗಳ ಆಸೆ ತೋರಿಸಿ, ಇಲ್ಲೇ ಇದ್ದು ಚಿತ್ರಗಳನ್ನು ಮಾಡಿಕೊಡು ಎಂಬ ಆಸೆ ತೋರಿಸಿದರೂ ಆತ ಒಪ್ಪದೆ ‘ನಮ್ಮ ಭಾರತದಲ್ಲೇ ಚಲನಚಿತ್ರರಂಗವನ್ನು ಬೆಳೆಸುತ್ತೇನೆ…’ ಎಂಬ ಹೆಬ್ಬಯಕೆಯಿಂದ ಭಾರತಕ್ಕೆ ಮರಳಿ ಬರುತ್ತಾನೆ. ಹಿಂತಿರುಗಿ ಮನೆಗೆ ಹೋಗುವ ಹಾದಿಯಲ್ಲಿ ಟ್ರಾಮ್‌ನಲ್ಲಿ ಹುಡುಗನೊಬ್ಬ ಬುಟ್ಟಿಯಲ್ಲಿ ವಿಧ ವಿಧ ಗೊಂಬೆಗಳನ್ನು ಇಟ್ಟು, ‘ನಾಲ್ಕು ಆಣೆಗೆ ಫಾಲ್ಕೆ ಗೊಂಬೆ ಕೊಳ್ಳಿ, ಫಾಲ್ಕೆ ಗೊಂಬೆ!’ ಎಂದು ಕೂಗುತ್ತಾ ಮಾರುತ್ತಿರುತ್ತಾನೆ. ಫಾಲ್ಕೆ ಕುತೂಹಲದಿಂದ ಅವನನ್ನು ಕೂಗಿ ನಾಲ್ಕು ಆಣೆಕೊಟ್ಟು ಆ ಗೊಂಬೆಯನ್ನು ಕೊಳ್ಳುತ್ತಾನೆ. ಅದು ಆನೆಯೊಂದರ ಗೊಂಬೆ! ಅದರ ಬಾಲವನ್ನು ಮೀಟಿದರೆ ಅದು ತನ್ನ ಮುಂದಿನ ಸೊಂಡಿಲನ್ನು ಎತ್ತಿ ಆಡಿಸುವ ಚಮತ್ಕಾರ ಉಳ್ಳದ್ದು. ‘ನಾಲ್ಕು ಆಣೆಗೆ ಫಾಲ್ಕೆ!’ ಈ ಇಮೇಜ್‌ನ ಮೇಲೆ ಚಿತ್ರ ನಿಲ್ಲುತದೆ.

ತೆರೆಯ ಮೇಲೆ ಕೆಲವು ಸಾಲುಗಳು ಮೂಡುತ್ತವೆ.

‘ಭಾರತೀಯ ಚಿತ್ರರಂಗದ ಪಿತಾಮಹ ಎಂದೇ ಗುರುತಿಸಲ್ಪಡುವ ಫಾಲ್ಕೆ ನಂತರದ ಹತ್ತೊಂಬತ್ತು ವರ್ಷಗಳಲ್ಲಿ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದರು. ಈಗ ಭಾರತದ ಇಪ್ಪತ್ತು ಭಾಷೆಗಳಲ್ಲಿ ವರ್ಷಕ್ಕೆ ಸುಮಾರು 900 ಕ್ಕೂ ಹೆಚ್ಚು ಚಿತ್ರಗಳು ತಯಾರಾಗುತ್ತಿವೆ. ಸುಮಾರು ಮೂರು ಮಿಲಿಯನ್ ಜನ ಚಿತ್ರತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಇಂದು ಪ್ರಪಂಚದಲ್ಲಿ ಅತಿ ಹೆಚ್ಚು ಚಿತ್ರ ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ!’

ಸಾಮಾನ್ಯ ಭಾರತೀಯನ ದೃಷ್ಟಿಯಲ್ಲಿ ‘ದಾದಾಸಾಹೇಬ್ ಫಾಲ್ಕೆ’ ಎಂಬುದು ಭಾರತೀಯ ಚಿತ್ರರಂಗದಲ್ಲಿ ಕೇಂದ್ರ ಸರ್ಕಾರ ಕೊಡುತ್ತಿರುವ ಅತ್ಯುನ್ನತ ಚಿತ್ರ ಪ್ರಶಸ್ತಿ ಎಂದಷ್ಟೇ ತಿಳಿದಿರುವ ಮಾಹಿತಿ. ತೊಂಬತ್ತೊಂಬತ್ತು ವರ್ಷಗಳ ಹಿಂದೆ ಒಬ್ಬ ಸಾಮಾನ್ಯ ಮನುಷ್ಯ ತನ್ನ ಸಾಹಸೀ ಪೃವೃತ್ತಿಯಿಂದ ಯುರೋಪಿನ ಹೊಸ ಅವಿಷ್ಕಾರವನ್ನು ನಮ್ಮೆಲ್ಲರಿಗೂ ಪರಿಚಿಯಿಸಿದ ಸಾಹಸಗಾಥೆಯನ್ನು ‘ಹರಿಶ್ಚಂದ್ರಾಚಿ ಫ್ಯಾಕ್ಟರಿ’ ಚಿತ್ರದಲ್ಲಿ ಹೇಳಲಾಗಿದೆ. ಇದರಿಂದ ಇಂದಿನ ಪ್ರೇಕ್ಷಕರಿಗೆ ಅಂದಿನ ಚಲನಚಿತ್ರ ಕ್ಷೇತ್ರದಲ್ಲಿನ ಆರಂಭದ ದಿನಗಳ ಚಿತ್ರಣ ಸ್ಪಷ್ಟವಾಗಿ ದೊರೆಯುತ್ತದೆ.

ದಾದಾ ಫಾಲ್ಕೆ ಕುರಿತು ಕೆಲವು ಸಾಕ್ಷ್ಯಚಿತ್ರಗಳು ಇಲ್ಲಿಯವರೆಗೆ ಬಂದಿವೆಯಾದರೂ, ಜೀವನವೃತ್ತಾಂತವನ್ನು ಮರುಸೃಷ್ಟಿ ಮಾಡಿದ ಚಿತ್ರಕಥಾನಕ ಬಂದಿರಲಿಲ್ಲ. ಫಾಲ್ಕೆ ಯಾವ ಜಾಗದಲ್ಲಿ ತಮ್ಮ ಸಾಹಸ ಮೆರೆದರೋ ಅದೇ ನೆಲದಿಂದ ಅಂಥದೊಂದು ಕೃತಿ ಬಂದಿರುವುದು ಒಂದು ವಿಶೇಷ.

ಚಿತ್ರದ ಅವಧಿ ಎರಡು ಗಂಟೆ ಎಂಟು ನಿಮಿಷಗಳು. ಚಿತ್ರದಲ್ಲಿ ಕಥೆ ನಡೆಯುವ ಕಾಲ ಮೂರು ವರ್ಷಗಳು. ಯಾವ ರೂಪಕಗಳು ಸಂಕೇತಗಳೂ ಇಲ್ಲದ ಸರಳ ನಿರೂಪಣೆಯ ಈ ಚಿತ್ರ ಎರಡು ಹಂತಗಳಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಪೂರ್ವಾರ್ಧ ದುಂಡಿರಾಜ್ ಫಾಲ್ಕೆ ಕೌತಕದಿಂದ ಸಿನಿಮಾ ನೋಡುವುದು, ಅದರ ಬಗ್ಗೆ ಕನಸು ಕಾಣುವುದನ್ನು ಹೇಳಿದರೆ, ಉತ್ತರಾರ್ಧ ಆತ ತಾನು ಕಂಡ ಕನಸನ್ನು ಸಾಕಾರಗೊಳಿಸುವಲ್ಲಿ ಪಡುವ ಶ್ರಮವನ್ನು ವಿವರವಾಗಿ ಬಿಚ್ಚಿಡುತ್ತದೆ. ಒಂದು ಸಾಕ್ಷ್ಯಚಿತ್ರವಾಗಿ ಉಳಿದುಬಿಡಬಹುದಾಗಿದ್ದ ಈ ವಸ್ತುವನ್ನು ನಿರ್ದೇಶಕ ಪರೇಶ್ ಮೊಕಾಶಿ ಒಂದು ಕಥಾಚಿತ್ರವಾಗಿ ಮಾಡಿದ್ದಾರೆ. ಉದಾತ್ತ ಜೀವನ ಚರಿತ್ರೆ ಹೇಳುತ್ತಿದ್ದೇನೆಂಬ ಗಾಂಭೀರ್ಯತೆಯಾಗಲೀ, ಸೂಕ್ಷ್ಮ ವಿವರಗಳಲ್ಲಾಗಲೀ ಚಿತ್ರದಲ್ಲಿ ಕಾಣುವುದಿಲ್ಲ. ಈ ಚಿತ್ರದ ನಿರೂಪಣೆಗೆ ನಿರ್ದೇಶಕರು ಆಯ್ದುಕೊಂಡಿರುವ ಮಾರ್ಗ ಲಘು ಹಾಸ್ಯಧಾಟಿಯದು.

ಹಾಗಾಲಿ ಇಲ್ಲಿ ಫಾಲ್ಕೆಯನ್ನು ಮೊಕಾಶಿ ಕೊಂಚ ಚಾಪ್ಲಿನ್ ಮಾದರಿಯಲ್ಲಿ ಚಿತ್ರಿಸುವ ಪ್ರಯತ್ನ ಪಟ್ಟಿದ್ದಾರೆ. ಹಾಗಾಗಿ ಅಲ್ಲಲ್ಲಿ ಕೆಲವು ದೃಶ್ಯಗಳನ್ನು ಸಹಜ ವೇಗಕ್ಕಿಂತ ತುಸು ಹೆಚ್ಚಿನ ವೇಗದಚಲನೆಯನ್ನು ಕೊಟ್ಟು ಚಿತ್ರಿಸಲಾಗಿದೆ. ಇದು ವೀಕ್ಷಕರಿಗೆ ಒಂದು ವಿಶಿಷ್ಟ ಅನುಭವ ನೀಡಿ ಇಡೀ ಚಲನಚಿತ್ರವನ್ನು ಹಿಂದಕ್ಕೆ ಕೊಂಡೊಯ್ಯಲು ನೆರವಾಗಿದೆ. ಮೊದಲೇ ಹೇಳಿದಂತೆ ಇಲ್ಲಿ ಬಳಸಿರುವ ಲಘು ಹಾಸ್ಯ ಕುತೂಹಲಕರವಾದುದು. ಕೆಲವೊಮ್ಮೆ ಕೆಲವು ಮಾತು ಹಾಗೂ ಸಂದರ್ಭಗಳು ರಂಜನೆಯ ಮಟ್ಟಕ್ಕೆ ಏರಿ ನಗು ಉಕ್ಕಿಸುವ ಮೂಲಕ ಸನ್ನಿವೇಶದ ಘನತೆಯನ್ನು ಕೊಂಚ ತಗ್ಗಿಸಿರುವುದು ಸುಳ್ಳಲ್ಲ.

ಜೊತೆಗೆ ಇಡೀ ಚಿತ್ರವನ್ನು ನಾವು ಫಾಲ್ಕೆಯನ್ನು ಮರೆತೂ ನೋಡುವ ಅವಕಾಶವನ್ನು ನಿರ್ದೇಶಕರು ಕೊಟ್ಟಿದ್ದಾರೆ. ಹಾಗಾಗಿ ನಾವು ಇದನ್ನು ಫಾಲ್ಕೆಯ ಜೀವನವೃತ್ತಾಂತ ಎಂದು ಕರೆಯಬೇಕಿಲ್ಲ. ಆ ಕಾಲದ ಚಿತ್ರನಿರ್ಮಾಣದಲ್ಲಿ ನಿರ್ಮಾತೃಗಳು ಎದುರಿಸಬೇಕಾದ ಸನ್ನಿವೇಶಗಳ ಒಂದು ಚಿತ್ರಣ ಎನ್ನಲಡ್ಡಿಯಿಲ್ಲ. ಮೇಲಾಗಿ ಇದು ಮೊಕಾಶಿಯವರ ಮೊದಲ ಚಿತ್ರ. ಈ ಹಿಂದೆ ಅವರು ಎರಡು ದಶಕಗಳ ಕಾಲ ರಂಗಭೂಮಿಯಲ್ಲಿ ಕೆಲಸಮಾಡಿದವರು. ರಂಗಭೂಮಿಯ ಪ್ರಭಾವ ಚಿತ್ರದಲ್ಲೂ ನಾವು ಕಾಣಬಹುದು. ಹಾಗಾಗೇ ಕೆಲವು ದೃಶ್ಯಗಳು ನಾಟಕೀಯತೆಯನ್ನು ದಾಟಲು ಸಾಧ್ಯವಾಗಿಲ್ಲ. ಇದನ್ನು ಉದ್ದೇಶಪೂರ್ವಕ ಎನ್ನದೆ ಪ್ರಭಾವ ಎನ್ನುವುದು ಸೂಕ್ತವೇನೋ.

2004 ರಲ್ಲಿ ಬಂದ ‘ಶ್ವಾಸ್’ ನಂತರ ಆಸ್ಕರ್ ಬಾಗಿಲು ಬಡಿದ ಮರಾಠಿಯ ಎರಡನೇ ಚಿತ್ರ ಇದು ಎಂಬ ಹೆಗ್ಗಳಿಕೆ ‘ಹರಿಶ್ಚಂದ್ರಾಚಿ ಫ್ಯಾಕ್ಟರಿ’ಯದು. ಆಸ್ಕರ್ ಪ್ರಶಸ್ತಿಯ ಆಯ್ಕೆಗಾಗಿ ಈ ಚಿತ್ರ ಕಳೆದವರ್ಷ ಭಾರತದಿಂದ ಅಧಿಕೃತ ಪ್ರವೇಶ ಪಡೆದ ಏಕೈಕ ಚಿತ್ರವಾಗಿತ್ತು. ಆದರೆ ಕೊನೆಯ ಹಂತದ ಆಯ್ಕೆಯಲ್ಲಿ ಆಸ್ಕರ್ ಪ್ರಶಸ್ತಿಯಿಂದ ಹೊರಗುಳಿದಿರುವುದಕ್ಕೆ ನಾವೇನೂ ವಿಷಾದ ಪಡಬೇಕಾಗಿಲ್ಲ. ಆಸ್ಕರ್ ಪ್ರಶಸ್ತಿಗಳ ಮಾನದಂಡವೇ ಬೇರೆ!

ಈ ಚಿತ್ರ ಮಾಸ್ ಹಾಗೂ ಕ್ಲಾಸ್ ಎರಡೂ ವರ್ಷದ ಪ್ರೇಕ್ಷಕರನ್ನು ಮೆಚ್ಚಿಸಿದೆ. ಎರಡು ಕೋಟಿ ಹಣದಲ್ಲಿ ತಯಾರಾಗಿರುವ ಚಿತ್ರ ನಾಲ್ಕು ಕೋಟಿ ಬಿಸಿನೆಸ್ ಮಾಡಿದೆ. ಹಲವಾರು ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ಪ್ರಶಸ್ತಿ/ಗೌರವ ಗಳಿಸಿದೆ.

ಇದೆಲ್ಲದರ ನಡುವೆ ಒಂದು ಅಂಶವನ್ನಂತೂ ನಾವು ಗಮನಿಸಲೇಬೇಕು. ಬಾಲಿವುಡ್ ಎಂಬ ರಕ್ಕಸನ ಅಟ್ಟಹಾಸಕ್ಕೆ ಪ್ರಾದೇಶಿಕ ಚಿತ್ರಗಳೆಲ್ಲ ನಲುಗುತ್ತಿದ್ದುದು ಎಲ್ಲರಿಗೂ ಗೊತ್ತೇ ಇದೆ. ಈ ರಕ್ಕಸನ ಕೆಳಗೇ ಇದ್ದ ಮರಾಠಿ ಚಿತ್ರರಂಗವೂ ಇದರಿಂದ ಹೊರತಾಗಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಫೀನಿಕ್ಸ್‌ನಂತೆ ಈ ಚಿತ್ರರಂಗ ಎದ್ದು ನಿಂತಿದೆ. ಇಲ್ಲಿಂದ ಬರುತ್ತಿರುವ ಚಿತ್ರಗಳು ಇಡೀ ಭಾರತದ ಗಮನ ಸೆಳೆದಿವೆ. ಕಳೆದ ವರ್ಷ ರಾಷ್ಟ್ರಪ್ರಶಸ್ತಿ ಪಟ್ಟಿಯಲ್ಲಿ ಬಹುಪಾಲನ್ನು ಮರಾಠೀ ಚಿತ್ರಗಳೇ ಬಾಚಿಕೊಂಡಿರುವುದೇ ಇದಕ್ಕೆ ಉದಾಹರಣೆ. ಈ ನಿಟ್ಟಿನಲ್ಲಿ ‘ಹರಿಶ್ಚಂದ್ರಾಚಿ ಫ್ಯಾಕ್ಟರಿ’ ಕೂಡ ಒಂದು ಉತ್ತಮ ಪ್ರಯತ್ನ.

ಚಿತ್ರದ ನಿರ್ದೇಶಕರು : ಪ್ರಕಾಶ್ ಮೊಕಾಶಿ.
ಫಾಲ್ಕೆ ಪಾತ್ರಧಾರಿ : ನಂದು ಮಾಧವ್.
ಛಾಯಾಗ್ರಹಣ : ಅಮಲೇಂದು ಚೌಧರಿ
ಸಂಗೀತ : ನರೇಂದ್ರ ಭಿಂದೆ
ಕಲೆ : ನಿತಿನ್ ಚಂದ್ರಕಾಂತ್ ದೇಸಾಯಿ

ಎಲ್ಲರೂ ಅಭಿನಂದನೆಗೆ ಅರ್ಹರು. ಈ ಚಿತ್ರ ಸಿಕ್ಕರೆ ಮಿಸ್ ಮಾಡಿಕೊಳ್ಳದೇ ನೋಡಿ. ಸಧ್ಯದಲ್ಲೇ ಬೆಂಗಳೂರಿನಲ್ಲಿ ಆರಂಭವಾಗಲಿರಿರುವ ಇಂಡೋ-ಜರ್ಮನ್ ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವ ಸಾಧ್ಯತೆಗಳಿವೆ.

(೨೫ನೇ ಜುಲೈ ೨೦೧೦ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ)

1 ಟಿಪ್ಪಣಿ

  1. Dr.S.K. Nataraj, BSS, Cavendish Lab, University of Cambridge, Cambridge CB3 0HE, UK

    ಡಿಯರ್ ಸರ್,
    ನಾನು ಇತ್ತೀಚಿಗೆ ಹಟಕ್ಕೆ ಬಿದ್ದಂತೆ ಹುಡುಕಿ “ಹರಿಸ್ಚಂದ್ರಾಚಿ ಫ್ಯಾಕ್ಟರಿ” ನೋಡಿದೆ. ತದೇಕ ಚಿತ್ತದಿಂದ ಎರಡು ಬಾರಿ. ನೀವು ಹೇಳಿದಂತೆ ಎರಡು ಚಿತ್ರಗಳನ್ನು ನಾನು ನಾಲ್ಕು ಬಾರಿ ನೋಡಿದ ಅನುಭವ. “ಕೆಲ್ಫಾ” ಇಂಗ್ಲೆಂಡ್ ಗೆ ಬಂದು ಸ್ಟುಡಿಯೋದಲ್ಲಿ ಕ್ಯಾಮೆರ ವನ್ನು ಅಚ್ಚರಿಯಿಂದ ನೋಡಿದ ಅನುಭವವೇ ನನಗೂ ಪ್ರತಿ ದೃಶ್ಯದಲ್ಲಯಿತು. ಇದನ್ನೆಲ್ಲಾ ಮತ್ತೆ ನೆನೆಸಿದ್ದಕ್ಕೆ ವಂದನೆಗಳು.

    ಎಸ್.ಕೆ. ನಟರಾಜ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: