ಪಿ. ಶೇಷಾದ್ರಿ

ಕಂಡಿದ್ದು ಕಂಡಂತೆ…

17 ಸೆಕೆಂಡುಗಳ ರೋಮಾಂಚನ!

2001 ನೇ ಇಸವಿಯ ಡಿಸೆಂಬರ್ ತಿಂಗಳ 12 ನೇ ದಿನದ ಸಂಜೆ.
ಅದು ನನ್ನ ಬದುಕಿನ ತುಂಬ ವಿಶೇಷವಾದ ದಿನ!
I was walking on the ninth cloud!!

ದೆಹಲಿಯ ಪ್ರತಿಷ್ಠ ವಿಜ್ಞಾನಭವನದ ವಿಶಾಲವಾದ ಹಾಲ್‌ನಲ್ಲಿ, ಕಡು ನೀಲಿ Velvet ನ ಮೆತ್ತನೆಯ ಹಾಸ್ ಮೇಲೆ ಡಯಾಸ್‌ಗೆ ಹತ್ತುವ ಮೆಟ್ಟಿಲುಗಳ ಕೆಳಗೆ ಒಂದು ಬದಿಯಲ್ಲಿ ನಾನು ನಿಂತಿದ್ದೆ. ನನಗೆ ಸುಮಾರು ಇಪ್ಪತ್ತು ಅಡಿ ದೂರದಲ್ಲಿ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ನಿಂತಿದ್ದರು. ಅವರಿಂದ ಪ್ರಶಸ್ತಿ ಸ್ವೀಕರಿಸಲು ನಾನು ನನ್ನ ಸರದಿಯನ್ನು ಕಾಯುತ್ತಾ ನಿಂತಿದ್ದೆ…

ಅದೊಂದು ಅದ್ಭುತವಾದ ಸಭಾಂಗಣ. ಮಹಾರಾಜನ ಒಡ್ಡೋಲಗದಂತಿತ್ತು. ಅಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಜನವಿದ್ದರೂ ಎಲ್ಲೆಡೆ ನಿಶ್ಶಬ್ದ ತುಂಬಿತ್ತು. ಇಡೀ ಹಾಲ್‌ನಲ್ಲಿ ಸಂಪೂರ್ಣ ಹವಾನಿಯಂತ್ರಣವಿದ್ದರೂ ನಾನು ಸಣ್ಣಗೆ ಬೆವರುತ್ತಿದ್ದೆ. ನಾನು ನನ್ನ ಕೈ ಗಡಿಯಾರ ನೋಡಿಕೊಂಡೆ, ಆಗ ಸಮಯ ಸರಿಯಾಗಿ ಸಂಜೆ ೭. ಗಂಟೆ ೪೭ ನಿಮಿಷಗಳು…

ಅಗೋ ನಿರೂಪಕಿ ನನ್ನ ಕಡೆ ನೋಡಿ ನನ್ನ ಹೆಸರನ್ನು ಕರೆದಳು… ಹಿಂದಿ ಭಾಷೆಯಲ್ಲಿ ನನ್ನ ಬಗ್ಗೆ ಅವಳ ವ್ಯಾಖ್ಯಾನ ಮುಂದುವರಿದಿತ್ತು… ಇಷ್ಟೇ ನನಗೆ ಗೊತ್ತಿರುವುದು. ಮುಂದಿನ ಯಾವ ಮಾತೂ ಕೇಳಿಸಲಿಲ್ಲ; ಏನೂ ಕಾಣಿಸಲೂ ಇಲ್ಲ! ಉಳಿದೆಲ್ಲ ಕನಸಿನಲ್ಲಿ ನಡೆದಂತೆ ನಡೆದು ಹೋಯಿತು. ಕನಸಿನ ಲೋಕದಿಂದ ನನ್ನ ಸುತ್ತಲಿನ ವಾಸ್ತವ ಜಗತ್ತಿಗೆ ನಾನು ಬಂದಿದ್ದು ಹದಿನೇಳು ಸೆಕೆಂಡುಗಳ ನಂತರವೇ! ನಾನು ಡಯಾಸ್ ಇಳಿದ ಮೇಲೆ.

ಈ ಮಧ್ಯೆ ನಾನು ಕರೆಕ್ಟಾಗಿ ಹದಿನೇಳು ನಿಮಿಷಗಳಲ್ಲಿ ಡಯಾಸ್ ಹತ್ತಿ ರಾಷ್ಟ್ರಪತಿಗಳನ್ನು ಸಮೀಪಿಸಿ ಅವರ ಕೈ ಕುಲುಕಿ, ಅವರ ಸ್ವಹಸ್ತದಿಂದ ನನ್ನ ಕೊರಳಿಗೆ ಪದಕ ಹಾಕಿಸಿಕೊಂಡು, ಫೋಟೋಗೆ ಫೋಸ್ ಕೊಟ್ಟು ಸರ್ಟಿಫಿಕೇಟ್ ಹಿಡಿದು ಮುಂದೆ ಸಾಗಿ ಆ ಬದಿಯಿಂದ ಇಳಿದು ನನ್ನ ಸೀಟಿಗೆ ಬಂದು ಕುಳಿತಿದ್ದೆ.

ಮೇಲಿನ ನನ್ನ ಈ ಕ್ರಿಯೆ ನನ್ನ ಗಮನಕ್ಕೆ ಬಂದದು, ನಾನು ಬೆಂಗಳೂರಿಗೆ ಬಂದು, ಮನೆಯಲ್ಲಿ ಕುಳಿತು, ರೆಕಾರ್ಡ್ ಆಗಿದ್ದ ಈ ದೃಶ್ಯವನ್ನು ವಿಸಿಪಿಯಲ್ಲಿ ಹಾಕಿ ಪದೇ ಪದೇ ನೋಡಿದಾಗಲೇ. ನಾನು ಪ್ರಶಸ್ತಿ ಪಡೆದ ಈ ಒಟ್ಟೂ ಅವಧಿ ಹದಿನೇಳು ಸೆಕೆಂಡುಗಳಷ್ಟು ಎಂದು ಗೊತ್ತಾಗಿದ್ದೂ ಆಗಲೇ!

ಈ ಅಪೂರ್ವ ಘಟನೆಗೆ ಕಾರಣವಾಗಿದ್ದದ್ದು ನನ್ನ ಮೊದಲ ಚಿತ್ರ ‘ಮುನ್ನುಡಿ’. ಈ ಚಲನಚಿತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಎಂಬ ಪ್ರಶಸ್ತಿ ಬಂದಿತ್ತು. ಅದರ ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಹೋಗಿದ್ದೆ. ನನ್ನ ಬಹುದಿನದ ಕನಸು ಅಂದು ನನಸಾಗಿತ್ತು.

ಬೆಂಗಳೂರಿನಿಂದ ವಿಮಾನ ಏರುವಾಗಲೇ ನಾನು ಖುಷಿಯಲ್ಲಿದ್ದೆ. ಮೋಡಗಳ ಮರೆಯಲ್ಲಿ ನಾರದ ಕಾಣಿಸುವನೇನೋ ಎಂದು ವಿಮಾನದ ಪುಟ್ಟ ಕಿಟಕಿಯಿಂದ ಇಣುಕಿ ಇಣುಕಿ ನೋಡುತ್ತಿದ್ದೆ. ಅಂದು ನನ್ನ ಜೊತೆ ನನ್ನ ಪತ್ನಿ ಅನುಪಮ, ನನ್ನ ನಿರ್ಮಾಪಕ ಮಿತ್ರರಾದ ಸೋಮಣ್ಣ ಹಾಗೂ ಅವರ ಕುಟುಂಬ ಕೂಡ ಇತ್ತು… ದೆಹಲಿಯ ಏರ್‌ಪೋರ್ಟ್‌ನಲ್ಲಿ ಇಳಿದಾಗ ಇಲಾಖೆಯ ಅಧಿಕಾರಿಗಳು ನಮ್ಮನ್ನು ಅಶೋಕ ಹೋಟೆಲ್‌ನ ವಾಸ್ತವ್ಯಕ್ಕೆ ಕರೆದೊಯ್ದರು. ರಿಸೆಪ್ಷನ್‌ನಲ್ಲಿ ನಮಗೆ ಒಂದೊಂದು ಫೈಲ್ ಕೊಟ್ಟರು. ಆ ಫೈಲ್‌ನಲ್ಲಿ ನಮ್ಮ ಎರಡು ದಿನದ ಕಾರ್ಯಕ್ರಮಗಳ ಪಟ್ಟಿ ಇತರ ವಿವರಗಳು ಇದ್ದವು. ಅದರಲ್ಲಿನ ಸೂಚನೆಯಂತೆ ನಾವು ಮಾರನೆಯ ದಿನ ಬೆಳಗ್ಗೆ ಹತ್ತುಗಂಟೆಗೆ ಪ್ರಶಸ್ತಿಯ ರಿಹರ್ಸಲ್‌ಗೆ ರೆಡಿಯಾಗಿ ಹೊರಡಬೇಕಿತ್ತು.

ಪ್ರಶಸ್ತಿಯ ರಿಹರ್ಸಲ್!

ಹೌದು, ನಾವು ರಾಷ್ಟ್ರಪತಿಗಳಿಂದ ಪ್ರಶಸ್ತಿಯನ್ನು ಸ್ವೀಕರಿಸುವುದು ಸಂಜೆಯಾದರೂ ಅದಕ್ಕೆ ಮುಂಚೆ ಅಂದು ಬೆಳಗ್ಗೆ ಅದರ ಅಣಕು ಪ್ರದರ್ಶನದಲ್ಲಿ ಭಾಗವಹಿಸಿ ರಿಹರ್ಸಲ್ ಮಾಡಬೇಕಿತ್ತು. ಇದೊಂದು ನಮಗೆ ಹೊಸಾ ಅನುಭವ ಅದರಲ್ಲಿ ಹೆಚ್ಚಿನ ಎಲ್ಲ ಪ್ರಶಸ್ತಿ ವಿಜೇತರೂ ಭಾಗವಹಿಸುತ್ತಾರೆ, ರಾಷ್ಟ್ರಪತಿಗಳನ್ನು ಬಿಟ್ಟು!

ಬೆಳಗ್ಗೆ ಎದ್ದು ನಮ್ಮ ನಮ್ಮ ಕುಟುಂಬವನ್ನು ದೆಹಲಿ ಸುತ್ತಲು ಕಳಿಸಿ ನಾವು ವಿಜ್ಞಾನಭವನಕ್ಕೆ ಹೊರಟೆವು. ನಮ್ಮಂತೆಯೇ ದೇಶದ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದ ಇತರ ಪ್ರಶಸ್ತಿ ವಿಜೇತರ ದಂಡು ಎರಡು ಬಸ್ಸಿಗಾಗುವಷ್ಟಿತ್ತು. ಅಲ್ಲಿ ನಮ್ಮ ಜೊತೆ ಅತ್ಯುತ್ತಮ ಪೋಷಕನಟ ಪ್ರಶಸ್ತಿ ಪಡೆದ ದತ್ತಣ್ಣ, ಮತದಾನ ಚಿತ್ರಕ್ಕೆ ಪ್ರಶಸ್ತಿ ಪಡೆದ ಟಿ.ಎನ್.ಸೀತಾರಾಮ್, ಅದರ ನಿರ್ಮಾಪಕರಾದ ನಾರಾಯಣ್ ಕೂಡ ಸೇರಿಕೊಂಡರು. ಎಲ್ಲರನ್ನೂ ಹೊತ್ತ ಬಸ್ಸು ಅಶೋಕದಿಂದ ವಿಜ್ಞಾನಭವನಕ್ಕೆ ಕರೆದೊಯ್ದಿತು.

ದೆಹಲಿಗೆ ಬಂದು ಇಳಿದಾಗಿನಿಂದ ನನ್ನನ್ನು ಒಂದು ಚಿಂತೆ ಕಾಡುತ್ತಿತ್ತು. ರಾಷ್ಟ್ರಪ್ರಶಸ್ತಿ ಪಡೆಯುವ ಆ ಗಳಿಗೆಯ ಫೋಟೋವನ್ನು ಹೇಗೆ ಸಂಗ್ರಹಿಸುವುದು ಎಂದು. ನನಗೆ ದೆಹಲಿಯಲ್ಲಿ ಯಾವ ಛಾಯಾಗ್ರಾಹಕನ ಪರಿಚಯವೂ ಇರಲಿಲ್ಲ. ನಾನು ಬೆಂಗಳೂರಿನಿಂದ ನನ್ನ ಪುಟ್ಟ ಕ್ಯಾಮರಾವನ್ನು ಹೊತ್ತೊಯ್ದಿದ್ದರೂ ವಿಜ್ಞಾನಭವನಕ್ಕೆ ಯಾವ ಎಲೆಕ್ಷ್ರಾನಿಕ್ ಉಪಕರಣವನ್ನೂ ಬಿಡುವುದಿಲ್ಲ ಎಂದು ಕಾರ್ಯಕ್ರಮ ಪಟ್ಟಿಯಲ್ಲಿ ದೊಡ್ಡದಾಗಿ ನಮೂದಿಸಿದ್ದರು. ಹಾಗಾಗಿ ಬರಿಕೈನಲ್ಲಿ ಹೊರಟಿದ್ದೆ…

ಅದು ತುಂಬಾ ಟೈಟ್ ಸೆಕ್ಯುರಿಟಿ ಇರುವಂತಹ ಪ್ರದೇಶ. ಒಬ್ಬೊಬ್ಬರನ್ನೇ ಉಂಗುಷ್ಠದಿಂದ ನೆತ್ತಿಯ ಕೂದಲಿನವರೆಗೆ ಸೂಕ್ಷ್ಮವಾಗಿ ಚೆಕ್ ಮಾಡಿ ಒಳಕ್ಕೆ ಬಿಡುತ್ತಾರೆ. ಚೆಕಿಂಗ್‌ಗೋಸ್ಕರ ನಾವೆಲ್ಲಾ ಕ್ಯೂನಲ್ಲಿ ನಿಂತಿದ್ದೆವು. ಯಾವುದೋ ವ್ಯಕ್ತಿ ಅನುಮಾನದಲ್ಲಿ ನನ್ನ ಬಳಿ ಬಂದ. ಪಿಸ ಪಿಸನೆ ಹಿಂದಿಯಲ್ಲಿ ಏನೋ ಹೇಳಿದ. ಬಾಲಿವುಡ್ ಸಿನಿಮಾಗಳನ್ನು ನೋಡಿ ಹಿಂದಿಯನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಳ್ಳಬಲ್ಲೆನಾಗಿದ್ದರೂ, ಅವನ ಲೋಕಲ್ ಭಾಷೆ ಸ್ವಲ್ಪವೂ ಗೊತ್ತಾಗಲಿಲ್ಲ. ಸುತ್ತಲೂ ಕೋಟೆ ಕಾಯುವ ಸೈನಿಕರಂತೆ ಕೈಯಲ್ಲಿ ಎಕೆ ೪೭ ಹಿಡಿದು ನಿಂತಿದ್ದ ದೈತ್ಯ ಸೆಕ್ಯುರಿಟಿ ಬೇರೆ ನಮ್ಮನ್ನೇ ನೋಡುತ್ತಿದ್ದುದು ನನ್ನಲ್ಲಿ ಅಧೈರ್ಯ ಉಂಟು ಮಾಡುತ್ತಿತ್ತು.

ಈಗ ನನ್ನ ಬಳಿ ನಿಂತು ಮಾತಾಡುತ್ತಿರುವ ವ್ಯಕ್ತಿ ಉಗ್ರಗಾಮಿಯಾಗಿದ್ದರೆ?!…
ಅವನ ಹೆಗಲಿನ ಬ್ಯಾಗ್‌ನಲ್ಲಿ ಬಾಂಬಿದ್ದರೆ!?…
ನನ್ನನ್ನು ಅವನ ಸಹಪಾಠಿ ಎಂದು ಅನುಮಾನಿಸಿದರೆ?!…

ಈ ರಗಳೆಯೇ ಬೇಡ ಎಂದು ನಾನು ಅವನು ಹೇಳಿದ್ದಕ್ಕೆಲ್ಲ ‘ನಹೀಂ… ನಹೀಂ’ ಎಂದು ಹೇಳುತ್ತಲೇ ಇದ್ದೆ. ಅವನು ಮಾತ್ರ ಪಟ್ಟುಬಿಡದೆ ಏನಕ್ಕೋ ನನ್ನನ್ನು ಒತ್ತಾಯಿಸುತ್ತಲೇ ಇದ್ದ. ಜೊತೆಗೆ ಅವನ ಮಾತಿನ ಮಧ್ಯೆ ಹಣದ ಪ್ರಸ್ತಾಪ ಬೇರೆ ಬರುತ್ತಿತ್ತು. ಇದು ಯಾವ ಗ್ರಹಚಾರವಪ್ಪ ಎಂದು, “please don’t disturb me” ಎಂದು ಗಟ್ಟಿಯಾಗಿ ಹೇಳಿದೆ. ಆತ ಗೊಣಗುತ್ತಾ ಅತ್ತ ನಡೆದ. ಸಧ್ಯ ಪೀಡೆ ತೊಲಗಿತಲ್ಲ ಎಂದು ನನಗೆ ಸಮಾಧಾನವಾಯಿತು. ನನ್ನ ಮುಂದೆ ಸ್ವಲ್ಪ ದೂರದಲ್ಲಿ ನಮ್ಮ ದತ್ತಣ್ಣ ನಿಂತಿದ್ದರು. ಅವನು ಅವರ ಬಳಿಯೂ ಹೋಗಿ ಮಾತಾಡ ತೊಡಗಿದ. ನನಗೆ ಗಾಬರಿ, ಇವರು ಏಕೆ ಇವನೊಂದಿಗೆ ಮಾತನಾಡುತ್ತಿದ್ದಾರೆ ಎಂದು. ಕೊನೆಗೆ ದತ್ತಣ್ಣ ಅವನಿಗೆ ಸ್ವಲ್ಪ ಹಣ ಕೊಟ್ಟರು. ಅವನು ಚೀಟಿ ಬರೆದುಕೊಟ್ಟು ಅತ್ತ ನಡೆದ. ಸೆಕ್ಯುರಿಟಿ ಇದನ್ನೆಲ್ಲಾ ಗಮನಿಸಿಯೂ ಗಮನಿಸದವನಂತೆ ನಿಂತಿದ್ದದ್ದು ನನ್ನಲ್ಲಿ ಇನ್ನಷ್ಟು ಗೊಂದಲಗಳನ್ನು ಹುಟ್ಟಿಹಾಕಿತು.

ಒಳಗೆ ಹೋದ ತಕ್ಷಣ ದತ್ತಣ್ಣನನ್ನು ಸಮೀಪಿಸಿ, ‘ಆ ವ್ಯಕ್ತಿ ಯಾರು? ನಿಮ್ಮ ಹತ್ತಿರ ಏನು ಹೇಳುತ್ತಿದ್ದ?’ ಎಂದು ಕೇಳಿದೆ. ಅದಕ್ಕೆ ಅವರು, ‘ಅವನೊಬ್ಬ ಫೋಟೋಗ್ರಾಫರ್, ಸಂಜೆಯ ಇಡೀ ಕಾರ್ಯಕ್ರಮದ ವೀಡಿಯೋ ಮಾಡಿಕೊಡುತ್ತಾನಂತೆ, ಅದಕ್ಕೆ ಸಾವಿರ ರೂಪಾಯಿಯಂತೆ, ನಾವು ಅವಾರ್ಡ್ ಸ್ವೀಕರಿಸುವ ಫೋಟೋ ಬೇಕೆಂದರೆ ಒಂದಕ್ಕೆ ನೂರು ರೂಪಾಯಿಯಂತೆ…’ ಎಂದರು. ನನಗೆ ನನ್ನ ಮೂರ್ಖತನಕ್ಕೆ ನಗು ಬಂತು. ‘ನನ್ನದೂ ಫೋಟೋ ತೆಗೆಯಲು ಹೇಳಿದ್ದೀರಾ?’ ಎಂದೆ. ‘ಹೂಂ ಅದಕ್ಕೆ ಅಡ್ವಾನ್ಸ್ ಕೂಡ ತೆಗೆದುಕೊಂಡು ಹೋಗಿದ್ದಾನೆ’ ಎಂದರು.

ವಿಜ್ಞಾನಭವನ ವಿಶಾಲವಾದ ಹಾಲ್‌ನಲ್ಲಿ ವೇದಿಕೆಯ ಮುಂದೆ ಪ್ರಶಸ್ತಿವಿಜೇತರು ಕುಳಿತುಕೊಳ್ಳಲು ಮೊದಲ ಗ್ಯಾಲರಿ. ಅದರ ಹಿಂದೆ ಪ್ರೇಕ್ಷಕರ ಗ್ಯಾಲರಿ. ನಾವು ಕುಳಿತುಕೊಳ್ಳುವ ಕುರ್ಚಿಯ ಮುಂದೆ ಒಂದು ಡೆಸ್ಕ್, ಪುಟ್ಟ Name plate ನಲ್ಲಿ ನಮ್ಮ ಹೆಸರು ಬರೆದಿಟ್ಟಿದ್ದರು…. ಹಾಗಾಗಿ ಜಾಗಕ್ಕಾಗಿ ಒದ್ದಾಡಬೇಕಿರಲಿಲ್ಲ. ನನ್ನ ಹೆಸರು ನಾಲ್ಕನೆಯ ಸಾಲಿನಲ್ಲಿತ್ತು…. ಎಲ್ಲರಿಗೂ ನಮ್ಮ ನಮ್ಮ ಸ್ಥಳದಲ್ಲಿ ಕುಳಿತುಕೊಳ್ಳಲು ಸೂಚನೆ ಸಿಕ್ಕಿತು. ಅಧಿಕಾರಿಗಳು ವೇದಿಕೆಗೆ ಬಂದು ಸಂಜೆ ಕಾರ್ಯಕ್ರಮ ಎಷ್ಟು ಹೊತ್ತಿಗೆ ಪ್ರಾರಂಭವಾಗುತ್ತದೆ, ಎಷ್ಟು ಹೊತ್ತಿಗೆ ಮುಗಿಯುತ್ತದೆ. ರಾಷ್ಟ್ರಪತಿಗಳು ಯಾವ ಬಾಗಿಲಿನಿಂದ ಬರುತ್ತಾರೆ. ಅವರು ಬರುವಾಗ- ಹೋಗುವಾಗ ಎಲ್ಲರೂ ಯಾವ ರೀತಿ ಎದ್ದು ನಿಂತು ಮರ್ಯಾದೆ ಸೂಚಿಸಬೇಕು. ಪ್ರಶಸ್ತಿ ಸ್ವೀಕರಿಸುವ ನಮ್ಮ ಸರದಿ ಬಂದಾಗ ನಾವು ಯಾವ ರೀತಿ ನಡೆದುಕೊಳ್ಳಬೇಕು. ಒಬ್ಬೊಬ್ಬರಿಗೆ ಎಷ್ಟೆಷ್ಟು ನಿಮಿಷದ ಅವಧಿ ಮೀಸಲಾಗಿದೆ ಎಂಬಿತ್ಯಾದಿ ವಿವರಗಳನ್ನು ನೀಡಿದರು.

ರಿಹರ್ಸಲ್ ಪ್ರಾರಂಭವಾಯಿತು…

ಡಮ್ಮಿ ರಾಷ್ಟ್ರಪತಿಗಳಾಗಿ ಒಬ್ಬರು ಆ ಸ್ಥಾನ ಅಲಂಕರಿಸಿದರು. ನಾವು ಪಡೆದ ಪ್ರಶಸ್ತಿಯ ವಿವರ, ಹೆಸರನ್ನು ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ಹೇಳತೊಡಗಿದರು. ಹಿಂದಿ ವಿವರ ಪ್ರಾರಂಭವಾಗುವಷ್ಟರಲ್ಲಿ ನಾವು ವೇದಿಕೆಯ ಬದಿಯಲ್ಲಿ ಬಂದು ನಿಂತಿರಬೇಕು. ಇಂಗ್ಲೀಷ್ ಕಾಮೆಂಟರಿ ಪ್ರಾರಂಭವಾದಾಗ ವೇದಿಕೆ ಹತ್ತಿ ಸುಮಾರು ಇಪ್ಪತ್ತು ಹೆಜ್ಜೆ ನಡೆದರೆ ರಾಷ್ಟ್ರಪತಿಗಳು ನಿಂತಿರುವ ಸ್ಥಳ ತಲುಪುತ್ತೇವೆ. ಅವರು ಪದಕ ತೊಡಿಸಿ, ಸರ್ಟಿಫಿಕೇಟ್ ಕೊಡುತ್ತಾರೆ. ಅವರ ಕೈ ಕುಲುಕುವುದನ್ನು ಬಿಟ್ಟು ಬೇರೆ ಯಾವ ವಿಷಯವನ್ನೂ ಅವರ ಬಳಿ ಚರ್ಚಿಸಬಾರದು. ಅನವಶ್ಯಕವಾಗಿ ಅವರ ಮುಂದೆ ಹೆಚ್ಚು ಹೊತ್ತು ನಿಂತುಕೊಳ್ಳಬಾರದು ಎಂದು ಒತ್ತಿ ಒತ್ತಿ ಹೇಳಿದರು. ಈ ರಿಹರ್ಸಲ್ ಮುಗಿಯುವ ಹೊತ್ತಿಗೆ ಮಧ್ಯಾಹ್ನವಾಯಿತು….

ಅಲ್ಲಿಂದ ಎಲ್ಲರು ಹೋಟೆಲ್‌ಗೆ ಹಿಂತಿರುಗಿ ರೆಸ್ಟ್ ತೆಗೆದುಕೊಂಡು, ಸಂಜೆ ಒಂದು ಗಂಟೆ ಮುಂಚಿತವಾಗಿ ವಿಜ್ಞಾನಭವನಕ್ಕೆ ಹೊರಟೆವು. ಸಂಜೆಯ ರಿಯಲ್ ಶೋಗಾಗಿ!

ನನ್ನ ಸೌಭಾಗ್ಯ, ‘ಮುನ್ನುಡಿ’ ನಂತರ ಮರುವರ್ಷ ‘ಅತಿಥಿ’ ಹಾಗೂ ‘ಬೇರು’ ಚಿತ್ರಕ್ಕೂ ದೆಹಲಿ ಯಾತ್ರೆಯಾಯಿತು.

ನಿಜವಾಗಿಯೂ ಈ ಕೆಲವು ಸೆಕೆಂಡುಗಳ ಮೂರೂ ಥ್ರಿಲ್‌ಗಳಲ್ಲಿ ನಾನು ನಾನಾಗಿರಲಿಲ್ಲ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: