ಪಿ. ಶೇಷಾದ್ರಿ

ಕಂಡಿದ್ದು ಕಂಡಂತೆ…

‘ಯೆಸ್’ ರಾಮಚಂದ್ರ ‘ನೋ’ ಅನ್ನಬಾರದಿತ್ತಾ?

ಎಸ್. ರಾಮಚಂದ್ರ ತಮ್ಮ ಚಿತ್ರರಂಗದ ವೃತ್ತಿ ಬದುಕಿನಲ್ಲಿ ನಾನು ಕಂಡಂತೆ, ಯಾವುದಕ್ಕೂ ‘ನೋ’ ಅಂದವರೇ ಅಲ್ಲ. ಆರು ವರ್ಷಗಳ ಹಿಂದೆ ನಾನು ‘ಬೇರು’ಚಿತ್ರ ಮಾಡಬೇಕೆಂದಿದ್ದೇನೆ ನೀವು ಛಾಯಾಗ್ರಾಹಕರಾಗಿರಬೇಕು ಎಂದಾಗ ‘ಯೆಸ್’ ಎಂದರು. ದೇವರಾಯನದುರ್ಗದಲ್ಲಿ ಬೋಳುಗುಡ್ಡವನ್ನು ಏರಿ ಚಿತ್ರೀಕರಿಸಬೇಕಲ್ಲ ಎಂದಾಗ ‘ಯೆಸ್, ಕಮಾನ್’ ಎಂದು ನಮಗಿಂತ ಮುಂಚೆಯೇ ಕಲ್ಲುಗುಡ್ಡವನ್ನು ಸರ ಸರ ಏರಿ ಚಿತ್ರೀಕರಿಸಿದ್ದರು.

ಆನಂತರ ೨೦೦೮ರಲ್ಲಿ ದೂರದ ಕಾಶಿಯಲ್ಲಿ ‘ವಿಮುಕ್ತಿ’ಯನ್ನು ಚಿತ್ರೀಕರಿಸಬೇಕೆಂದಿದ್ದೇನೆ ಎಂದಾಗ ‘ಯೆಸ್’ ಎಂದರು. ಆದರೆ ಅಲ್ಲಿಯ ಒಳಾಂಗಣದಲ್ಲಿ ಲೈಟ್ ಬಳಸುವಂತಿಲ್ಲ ಎಂದಾಗ ಕೂಡ ಹಿಂದೆ-ಮುಂದೆ ನೋಡದೆ ‘ಯೆಸ್’ ಎಂದರು. ಹೀಗೆ ಒಂದೇ ಎರಡೇ, ಎಂತಹದೇ ಕ್ಲಿಷ್ಟ ಸಂದರ್ಭಗಳಲ್ಲೂ ‘ಯೆಸ್, ಯೋಚನೆ ಮಾಡಬೇಡಿ, ಆಗುತ್ತೆ, ಮಾಡೋಣ ಬನ್ನಿ’ ಎಂದು ಪಾಸಿಟಿವ್ ಆಟಿಟ್ಯೂಡ್ ತೋರಿಸುತ್ತಾ ನಮಗೆಲ್ಲರಿಗೂ ಉತ್ಸಾಹ ತುಂಬುತ್ತಿದ್ದ ರಾಮಚಂದ್ರ ಈಗ ‘ಕಾಲನ ಕರೆ’ಗೂ ‘ಯೆಸ್’ ಅಂದದ್ದು ಮಾತ್ರ ನನಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮಗ್ಯಾರಿಗೂ ಸಣ್ಣ ಸೂಚನೆಯನ್ನೂ ಕೊಡದೆ ಅವನ ಕರೆದತಕ್ಷಣ ‘ಯೆಸ್’ ಎನ್ನುತ್ತಾ ಹೋಗಿಯೇ ಬಿಡುವುದೇ?

ಮೊನ್ನೆ ಮೊನ್ನೆ ತಾನೇ ಹೊಸಚಿತ್ರದ ಚಿತ್ರೀಕರಣ ಮುಗಿಸಿದ್ದರು. ಇನ್ನೂ ಎರಡು ಮೂರು ಚಿತ್ರಗಳ ಚಿತ್ರೀಕರಣಕ್ಕೆ ಒಪ್ಪಂದ ಆಗಿತ್ತು. ಕಳೆದ ಶನಿವಾರ ನನ್ನ ‘ಬೆಟ್ಟದ ಜೀವ’ ನೋಡಲು ಬಂದಿದ್ದರು. ಅವರ ಇಳಿದ ಮೈ ತೂಕ ಕಂಡು ‘ಯಾಕೆ ಇಷ್ಟು ತೂಕ ಇಳಿಸಿಕೊಂಡಿದ್ದೀರಿ?’ ಎಂದಾಗ, ‘ಸಿಗರೇಟು ಬಿಟ್ಟೆ ನೋಡಿ ಅದಕ್ಕೆ ಹೀಗಾಗಿದೆ ಅಷ್ಟೆ, ಮತ್ತೆ ಸಿಗರೇಟು ಸೇದಲು ಶುರುಮಾಡಿದರೆ ಎಲ್ಲ ಸರಿ ಹೋಗುತ್ತದೆ’ ಎಂದು ನಕ್ಕಿದ್ದರು. ‘ಅಯ್ಯಯ್ಯೋ ನೀವು ದಪ್ಪಗಾಗಲು ಮತ್ತೆ ಸಿಗರೇಟು ಸೇದುವುದು ಬೇಡ. ಹೀಗೇ ಸಣ್ಣಗಿದ್ದರೂ ಪರವಾಗಿಲ್ಲ, ನೋಡಲು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣಿಸುತ್ತಿದ್ದೀರಿ’ ಎಂದು ರೇಗಿಸಿದ್ದೆ. ಆದರೆ ಯಾರಿಗೆ ಗೊತ್ತಿತ್ತು? ದೇಹದ ಒಳಗೆ ಆ ಮಹಾಮಾರಿ ಬೆಳೆದು ಇವರನ್ನು ದೈಹಿಕವಾಗಿ ಕುಗ್ಗಿಸುತ್ತಿದೆ ಎಂದು!

ಅರವತ್ತೈದರಲ್ಲೂ ರಾವಚಂದ್ರ ಐತಾಳರದ್ದು ಎಂಥ ಉತ್ಸಾಹ. ತಮ್ಮ ಊನುಗಾಲಿನಲ್ಲೂ ವಾರಣಾಸಿಯ ಗಂಗಾನದಿಯ ಘಟ್ಟಗಳಲ್ಲಿ ಎರಡು-ಮೂರಡಿಯ ಮೆಟ್ಟಿಲುಗಳನ್ನು ಒಂದೇ ಏಟಿಗೆ ಹತ್ತಿ ಇಳಿದು ಚಿತ್ರೀಕರಿಸುತ್ತಿದ್ದ ಇವರ ಚುರುಕುತನ ಈಗಲೂ ನನ್ನ ಕಣ್ಣ ಮುಂದಿದೆ. ಪ್ರತಿ ಶನಿವಾರ, ಭಾನುವಾರ ನಮ್ಮ ‘ಚಿತ್ರಸಮೂಹ’ದ ಕಾರ್ಯಕ್ರಮಗಳಲ್ಲಿ ಲವಲವಿಕೆಯಿಂದ ಓಡಾಡುತ್ತ, ಅಂತರಾಷ್ಟ್ರೀಯ ಚಿತ್ರಗಳ ಆಯ್ಕೆ, ಅವುಗಳ ಡಿವಿಡಿ ಸಿದ್ಧಮಾಡುವುದು ಇತ್ಯಾದಿ ಕೆಲಸಗಳನ್ನು ಎಷ್ಟು ಅಚ್ಚುಕಟ್ಟಾಗಿ ಮಾಡುತ್ತಿದ್ದರು ಗೊತ್ತೆ? ಚಿತ್ರ ಪ್ರದರ್ಶನದ ನಂತರ ಆ ಚಲನಚಿತ್ರದ ಚರ್ಚೆಯಲ್ಲಿ ಪಾಲ್ಗೊಂಡು ಚಿತ್ರದ ಒಳನೋಟ ಕೊಡುತ್ತಿದ್ದ ರೀತಿ ಮಾತ್ರ ಅನನ್ಯ.

ಚಲನಚಿತ್ರದ ಕುರಿತ ಯಾವುದೇ ತಾಂತ್ರಿಕ ವಿವರ ಬೇಕಿದ್ದರೂ ನಾವು ಮೊರೆ ಹೋಗುತ್ತಿದ್ದದ್ದು ಅವರನ್ನೇ. ಯಾವುದಕ್ಕೂ ಬೇಸರಿಸದೆ ಎಲ್ಲೋ ಮಾಹಿತಿಯನ್ನು ಹುಡುಕಿ ತೆಗೆದು ನಮ್ಮ ಮುಂದೆ ಇಡುತ್ತಿದ್ದರು. ಅವರು ಜೊತೆಗಿದ್ದಾರೆ ಎಂದರೆ ಒಂದು ರೀತಿಯ ಆನೆ ಬಲ ಬಂದಂತಾಗುತ್ತಿದ್ದ. ಚಿತ್ರೀಕರಣದ ಸಂದರ್ಭದಲ್ಲಿ ಸಣ್ಣ ಸಣ್ಣ ವಿವರಗಳ ಕಡೆ ಅವರು ಕೊಡುತ್ತಿದ್ದ ಗಮನ, ಕಲಾವಿದರಿಗೆ ಕೊಡುತ್ತಿದ್ದ ಅಭಿನಯದ ಟಿಪ್ಸ್ ತುಂಬ ಉಪಕಾರಿಯಾಗಿರುತ್ತಿತ್ತು.

‘ಬೇರು’ ಚಿತ್ರೀಕರಣದ ಸಂದರ್ಭ. ಮುಖ್ಯ ಪಾತ್ರಧಾರಿ ದತ್ತಣ್ಣ ಆಫೀಸಿಗೆ ಹೋಗದೆ ಮನೆಯಲ್ಲೇ ಕದ್ದು ಕುಳಿತಿರುತ್ತಾರೆ. ಮಗಳು ಬಂದು ‘ಅಪ್ಪ ನಿಮ್ಮ ಆಫೀಸರ್ ಬರುತ್ತಿದ್ದಾರೆ’ ಎಂದು ಹೇಳುತ್ತಾಳೆ. ಇವರು ಅಲ್ಲೇ ಬದಿಯಲ್ಲಿದ್ದ ಮಂಚದ ಕಡೆ ಹೋಗಿ ಅಲ್ಲಿದ್ದ ಬೆಡ್‌ಶೀಟ್ ಹೊದ್ದು ಜ್ವರ ಬಂದವರಂತೆ ನಟಿಸುತ್ತಾ ಮಲಗಬೇಕು. ರಿಹರ್ಸಲ್ ಆಯಿತು. ದತ್ತಣ್ಣ ತಮ್ಮ ಅನುಕೂಲಕ್ಕೆ ತಕ್ಕಂತೆ ಬೆಡ್‌ಶೀಟ್ ಅನ್ನು ಮುಂಚೆಯೇ ಹಾಸಿಗೆಯ ಮೇಲೆ ಹರಡಿ, ಬಂದು ಮಲಗುವಾಗ ಬೆಡ್‌ಶೀಟ್‌ನ ಅಂಚುಗಳು ಕೈಗೆ ಸಿಗಬೇಕು ಹಾಗೆ ಜೋಡಿಸಿಕೊಂಡು ಟೇಕ್‌ಗೆ ರೆಡಿಯಾದರು. ಇದನ್ನು ಗಮನಿಸುತ್ತಿದ್ದ ರಾಮಚಂದ್ರ ದತ್ತಣ್ಣ ಜೋಡಿಸಿಟ್ಟುಕೊಂಡಿದ್ದ ಬೆಡ್‌ಶೀಟ್ ಅವರಿಗೆ ತಿಳಿಯದಂತೆ ಅಸ್ತವ್ಯಸ್ತವಾಗಿಟ್ಟುಬಿಟ್ಟರು! ಟೇಕ್ ಆರಂಭವಾಯಿತು. ದತ್ತಣ್ಣ ರಗ್ಗು ಹೊದ್ದು ಮಲಗಲು ಹೋಗುತ್ತಾರೆ ಅಂಚುಗಳು ಕೈಗೆ ಸಿಗುತ್ತಿಲ್ಲ. ಬೆಡ್‌ಶೀಟ್ ಹೊದೆಯಲು ಅವರು ಒಂದಿಷ್ಟು ಪರದಾಟ ಮಾಡಬೇಕಾಯಿತು. ಅಂತೂ ಹೇಗೋ ಒದ್ದಾಡಿ ಮಲಗಿದರು. ಟೇಕ್ ಅದ್ಭುತವಾಗಿ ಬಂತು. ಆದರೆ ದತ್ತಣ್ಣ ಕೂಗಾಡತೊಡಗಿದರು. ‘ಯಾರದು ನಾನು ಜೋಡಿಸಿದ್ದ ಬೇಡಶೀಟ್ ಅನ್ನು ಅಸ್ತವ್ಯಸ್ತ ಮಾಡಿಟ್ಟಿದ್ದು?’ ಎಂದು. ಆಗ ರಾಮಚಂದ್ರ- ‘ಅದನ್ನು ನಾನೇ ಮಾಡಿದ್ದು, ನೀವು ಮಲಗುವ ಕ್ರಿಯೆ ಕೃತಕವಾಗಿ ಬರುತ್ತಿತ್ತು, ಅದರಲ್ಲಿ ಗಲಿಬಿಲಿ, ಗೊಂದಲಸ್ ಇರಲಿಲ್ಲ. ನಿಮ್ಮ ಆ ಕ್ರಿಯೆ ಸಹಜವಾಗಿ ಬರಲಿ ಎಂದು ನಿಮಗೆ ತಿಳಿಯದಂತೆ ನಾನೇ ಟೇಕ್ ಟೈಂನಲ್ಲಿ ಬೆಡ್‌ಶೀಟ್ ಅನ್ನು ಅಸ್ತವ್ಯಸ್ತ ಮಾಡಿದೆ’ ಎಂದರು. ಈಗಲೂ ತೆರೆಯ ಮೇಲೆ ದತ್ತಣ್ಣನ ಗಲಿಬಿಲಿ, ಗೊಂದಲ ನೋಡಿದಾಗ ರಾಮಚಂದ್ರ ನೆನಪಾಗುತ್ತಾರೆ. ಎಂಬತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಮಗೆ ತೆಗೆದುಕೊಟ್ಟಿರುವ ಬಿಂಬಗಳು ಕನ್ನಡ ಚಿತ್ರರಂಗ ಇರುವವರೆಗೂ ಶಾಶ್ವತವಾಗಿ ಅವರ ಕೌಶಲವನ್ನು ಸಾರಿ ಸಾರಿ ಹೇಳುತ್ತವೆ.

2 ಟಿಪ್ಪಣಿಗಳು

  1. Touching !

    • I much prefer inrotmafive articles like this to that high brow literature.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: