ಪ್ಯಾಟೆ ಹುಡ್ಗಿ ದ್ಯಾವಕ್ಕ ಆದ ಕತೆ!
ಎರಡು ವರ್ಷದ ಹಿಂದಿನ ಮಾತು. ನಾನೊಂದು ಸಿನಿಮಾ ಕತೆ ಬರೆದೆ. ಅದು ನನ್ನ ಎಂಟನೆಯ ಕೂಸು. ಅದಕ್ಕೆ ‘ಡಿಸೆಂಬರ್-1’ ಎಂದು ಹೆಸರಿಟ್ಟೆ. ಆ ಚಿತ್ರದ ಮುಖ್ಯಪಾತ್ರಕ್ಕೆ ‘ದೇವಕ್ಕ’ ಎಂದು ನಾಮಕರಣ ಮಾಡಿದೆ.
ಅಲ್ಲಿಯವರೆಗೆ ಅಕ್ಷರಗಳಲ್ಲಿದ್ದ ದೇವಕ್ಕನ ಚಿತ್ರಣ ನಿಧಾನವಾಗಿ ಕಣ್ಣ ಮುಂದೆ ಆಕಾರಗೊಳ್ಳತೊಡಗಿತು.
ದೇವಕ್ಕ ಹೇಗಿರಬೇಕು? ಮೈ ಬಣ್ಣ ನಸುಗಪ್ಪಾಗಿರಬೇಕು, ವಯಸ್ಸು ಇಪ್ಪತ್ತೈದರಿಂದ ಮೂವತ್ತರ ಆಸುಪಾಸಿನಲ್ಲಿರಬೇಕು. ದಿನವೂ ನೂರಾರು ರೊಟ್ಟಿ ಬಡಿದು ಬಡಿದು ಕೈಯ ಗಟ್ಟಿಯಾಗಿರಬೇಕು. ಅಲ್ಲಲ್ಲಿ ನರಗಳು ಎದ್ದು ಕಾಣುವಂತಿರಬೇಕು. ಬಿಸಿಲಲ್ಲಿ ಓಡಾಡಿ ಕಾಲುಗಳು ಬಿರುಕು ಬಿಟ್ಟಿರಬೇಕು. ಮೈಯ್ ಕಾಂತಿ ಸೊರಗಿದಂತಿದ್ದರೂ ಆಕೆಯ ಕಣ್ಣಿನಲ್ಲಿ ಒಂದು ಹೊಳಪು ಇರಲೇಬೇಕು…
ಈಕೆ ಯಾರಂತಿರಬಹುದು?
ಹಾಂ! ಕಿತ್ತೂರು ರಾಣಿ ಚೆನ್ನಮ್ಮನಂತಿರಬಹುದೆ? ಆದರೆ ಕಿತ್ತೂರು ರಾಣಿ ಚನ್ನಮ್ಮನನ್ನು ಯಾರು ಕಂಡಿದ್ದಾರೆ? ನಾವು ಆಕೆಯನ್ನು ಕಂಡಿರುವುದು ಸಿನಿಮಾದಲ್ಲಿ ಮಾತ್ರ! ಕಿತ್ತೂರು ರಾಣಿ ಚೆನ್ನಮ್ಮ ಎಂದರೆ ಕನ್ನಡಿಗರ ಮುಖದ ಮುಂದೆ ಬರುವ ಚಿತ್ರ ಹಿರಿಯನಟಿ ಸರೋಜಾದೇವಿಯವರದ್ದು! ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಸರ್ಕಲ್‌ನಲ್ಲಿ ನಿಲ್ಲಿಸಿರುವ ಕುದುರೆ ಮೇಲೆ ಕೂತ ಪ್ರತಿಮೆಯ ಹೋಲಿಕೆ ಕೂಡ ಸರೋಜಾದೇವಿಯವರನ್ನೇ ಕಣ್ಣ ಮುಂದೆ ನಿಲ್ಲಿಸುತ್ತದೆ. ಇಲ್ಲ ಬೇಡ, ಆಕೆ ಚೆನ್ನಮ್ಮನಂತಿರುವುದು ಬೇಡ. ಹಾಗಾದರೆ ಒನಕೆ ಓಬವ್ವ? ಅಯ್ಯೋ, ಓಬವ್ವನೂ ಸಿನಿಮಾ ಪ್ರಾಡಕ್ಟೇ! ಅಭಿನಯ ಶಾರದೆ ಜಯಂತಿಯವರನ್ನು ಬಿಟ್ಟು ನಾವು ಹೇಗೆ ಓಬವ್ವನನ್ನು ಕಾಣಬಲ್ಲೆವು? ಇಲ್ಲ, ಇದೂ ಬೇಡ.. ಹೀಗೇ ಯೋಚನಾ ಲಹರಿ ಹರಿಯುತ್ತಿತ್ತು. ದಿನಗಳು ಉರುಳತೊಡಗಿದವು… ಶೂಟಿಂಗ್ ಶೆಡ್ಯೂಲ್ ಹತ್ತಿರ ಹತ್ತಿರ ಬರುತ್ತಿತ್ತು. ಭಗವಂತಾ, ಈ ದೇವಕ್ಕನನ್ನು ಎಲ್ಲಪ್ಪ ಹುಡುಕುವುದು?
ಪುಸ್ತಕಗಳನ್ನು ತಡಕಿದೆ. ಇಂಟರ್‌ನೆಟ್‌ನಲ್ಲಿ ಕೆದಕಿದೆ. ಉತ್ತರಕರ್ನಾಟಕದ ಹತ್ತು ಹಲವು ಮುಖಗಳು ಹಾದು ಹೋದವು. ಯಾವುದೂ ಸಮಾಧಾನ ತರಲಲ್ಲಿ. ಆಗ ನೆನಪಿಗೆ ಬಂದದ್ದು ರಂಗಭೂಮಿ. ನಿಮಗೇ ಗೊತ್ತಲ್ಲ, ಉತ್ತರಕರ್ನಾಟಕ ಕಂಪನಿನಾಟಕಗಳಿಗೆ ಪ್ರಸಿದ್ಧಿ. ಎಲ್ಲಿ ಮೋಸವಾದರೂ ಅಲ್ಲಿ ಆಗುವುದಿಲ್ಲ! ರಂಗಭೂಮಿಯ ಹಿನ್ನೆಲೆಯಿಂದ ಬಂದ ಯಾರಾದರೂ ಸಿಕ್ಕೇ ಸಿಗುತ್ತಾರೆ. ಮೇಲಾಗಿ ಈ ಕಲಾವಿದರಿಗೆ ಅಭಿನಯ ಗೊತ್ತಿರುತ್ತದೆ. ಭಾಷೆಯ ಬಳಕೆಯ ಬಗ್ಗೆ ಅರಿವಿರುತ್ತದೆ… ತುಂಬ ತಯಾರಿಯೇನೂ ಬೇಕಾಗುವುದಿಲ್ಲ. ನಮ್ಮ ಕೆಲಸವೂ ಹಗುರವಾಗುತ್ತದೆ. ಅದೇ ಸರಿ!
ಸರಿ, ಬೇಟೆ ಆರಂಭವಾಯಿತು.
ನಾನು ನಮ್ಮ ಕ್ಯಾಮರಾಮನ್ ಅಶೋಕ್ ಹುಬ್ಬಳ್ಳಿಯಲ್ಲಿ ಬೀಡು ಬಿಟ್ಟೆವು. ಅಲ್ಲಿಯ ಹಿರಿಯ ನಟ ಬಸವರಾಜು ತಿರ್ಲಾಪುರ ನಮ್ಮನ್ನು ರಂಗಭೂಮಿಯ ಕಲಾವಿದರು ವಾಸಿಸುವ ಗಲ್ಲಿಗಳಿಗೆಲ್ಲ ಕರೆದುಕೊಂಡು ಹೋದರು. ಹಲವರನ್ನು ಪರಿಚಯಿಸಿದರು. ಆದರೆ ನಮಗೆ ಬೇಕಾದ ಮುಖ ಸಿಗಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಅಲ್ಲಿಯ ಕಲಾವಿದರ ಬದುಕಿನ ಸ್ಥಿತಿ ಕಂಡು ಮನಸ್ಸು ಕಲಕಿ ಹೋಯಿತು. ಈಗ ಬೇಡ ಬಿಡಿ, ಅದು ಬೇರೆಯದೇ ಕಥೆ.
ಗಿರೀಶ್ ಕಾಸರವಳ್ಳಿ ಯಾವಾಗಲೂ ಹೇಳುತ್ತಿರುತ್ತಾರೆ. ನಮ್ಮ ಸಿನಿಮಾಗಳಲ್ಲಿ ನಾನ್ ಆಕ್ಟರ್ಸ್‌ಗಳನ್ನು ಬಳಸಬೇಕು. ಆಗ ಅದಕ್ಕೆ ಒಂದು ವಿಶಿಷ್ಟವಾದ ಲುಕ್ ಬರುತ್ತದೆ. ಸ್ವಲ್ಪ ಕಷ್ಟವಾದರೂ ನಾವು ಅವರಿಂದ ಬೇಕಾದ ಕೆಲಸ ತೆಗೆಯಬಹುದು. ಯಾವುದೇ ಇಮೇಜುಗಳ ಗೋಳು ಇರುವುದಿಲ್ಲ. ಈ ಮಾತು ಯಾವಾಗಲೂ ನನ್ನನ್ನು ಕಾಡುತ್ತಿತ್ತು. ಸರಿ, ಒಂದು ಚಾನ್ಸ್ ತೆಗೆದುಕೊಂಡೇ ಬಿಡೋಣ ಎಂದು ಹುಬ್ಬಳ್ಳಿ, ಧಾರವಾಡ, ಗದಗ ಮುಂತಾದ ಕಡೆಯೆಲ್ಲ ಮಾಧ್ಯಮಗಳ ಮೂಲಕ, ಸ್ನೇಹಿತರ ಮೂಲಕ ಡಂಗೂರ ಹೊಡೆಸಿ ಹೊಸಮುಖಗಳನ್ನು ಆಹ್ವಾನಿಸಿದೆವು. ನೂರಾರು ಜನ ಮುಗಿಬಿದ್ದು ಬಂದರು. ಇಡೀ ದಿನ ಅವರನ್ನೆಲ್ಲಾ ಮಾತಾಡಿಸಿ ಜರಡಿ ಹಿಡಿದೆವು. ಬೇರೆ ಬೇರೆ ಪಾತ್ರಗಳಿಗೆ ಜನ ಸಿಕ್ಕರು. ಆದರೆ ದೇವಕ್ಕ ಸಿಗಲಿಲ್ಲ!
ಮತ್ತೆ ಹಳೇ ಗಂಡನ ಪಾದವೇ ಗತಿ ಎಂಬಂತೆ ಈ ಪಾಪಿ ಬೆಂಗಳೂರಿಗೆ ಹಿಂತಿರುಗಿ ಬಂದೆವು. ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುವವರ ಮಾಹಿತಿ ಕಲೆಹಾಕಿದಾಗ ನಾಲ್ಕೈದು ಹೆಸರುಗಳು ಮೇಲೆದ್ದವು. ಅದರಲ್ಲಿ ಒಂದು ಸ್ಮಿತಾ ಎಂಬ ಹುಡುಗಿಯದ್ದೂ ಒಂದು. ಈಕೆ ಚಿತ್ರರಂಗ ಪ್ರವೇಶಿಸಿದ್ದು ಸ್ಮಿತಾ ಆಗಿಯೇ. ಹತ್ತಾರು ಚಿತ್ರಗಳಲ್ಲಿ ನಟಿಸಿದರೂ ಲಕ್ ತಿರುಗಿರಲಿಲ್ಲ. ಅದಕ್ಕಾಗಿಯೋ ಏನೋ ಗೊತ್ತಿಲ್ಲ. ಈಕೆ ತನ್ನ ಹೆಸರನ್ನು ನಿವೇದಿತಾ ಎಂದು ಬದಲಾಯಿಸಿಕೊಂಡಿದ್ದಳು. ನಾನು ಹಿಂದೆ ಆಕೆಯ ‘ಅವ್ವ’ ಚಿತ್ರದ ಪಾತ್ರ ನೋಡಿದ್ದೆ. ಚಿತ್ರದಲ್ಲಿ ವಿಜಯ್ ಎಂಬ ನಟನ ಜೊತೆ ಲಿಪ್ ಟು ಲಿಪ್ ಕಿಸ್ ಮಾಡಿ ಸುದ್ದಿ ಮಾಡಿದ್ದಳು. ಬೋಲ್ಡ್ ಹುಡುಗಿ ಎಂಬ ಹೆಸರಿತ್ತು. ಆಕೆಯ ಪತ್ತೆ ಕೊಟ್ಟವರು ಪತ್ರಕರ್ತ ಮಿತ್ರ ಬಾನಾಸು.
ಸುಬ್ರಹ್ಮಣ್ಯ ಫೋನ್ ಕರೆ ಮಾಡಿ ವಿಚಾರಿಸಿದಾಗ ‘ನನಗೆ ಶೇಷಾದ್ರಿಯವರ ಚಿತ್ರದಲ್ಲಿ ನಟಿಸಲು ಮನಸ್ಸಿದೆ, ಮಾಡುತ್ತೇನೆ’ ಎಂದಳಂತೆ. ನನ್ನ ಮನಸ್ಸು ಇನ್ನೂ ಕೂತಿರಲಿಲ್ಲ. ಸುಮ್ಮನೇ ಇದ್ದೆ.
ಅದೇ ಸಂದರ್ಭದಲ್ಲಿ ಒಂದು ದಿನ ಕೆ.ವಿ.ಸುಬ್ಬಣ್ಣ ಆಪ್ತರಂಗ ಮಂದಿರದಲ್ಲಿ ನನ್ನ ‘ಬೆಟ್ಟದ ಜೀವ’ ಚಿತ್ರದ ಪ್ರದರ್ಶನ ಏರ್ಪಾಟಾಗಿತ್ತು. ಆಕೆ ಅಲ್ಲಿಗೆ ಚಿತ್ರ ನೋಡಲು ಬಂದಿದ್ದಳು. ಮೊದಲ ಸಾಲಿನಲ್ಲಿ ಕುಳಿತಿದ್ದ ಆಕೆಯನ್ನು ನಾನು ನೋಡಿದೆ, ಈ ಹುಡುಗಿ ತುಂಬಾ ಮಾಡ್ ಆಗಿದ್ದಾಳೆ ದೇವಕ್ಕನಿಗೆ ಸೂಟ್ ಆಗಲಿಕ್ಕಿಲ್ಲ ಅನ್ನಿಸಿತು. ಆದ್ದರಿಂದ ಮಾತಾಡಿಸಲಿಲ್ಲ. ಚಿತ್ರ ಮುಗಿಯಿತು, ಸಂವಾದವೂ ಆಯಿತು. ಎಲ್ಲರೂ ಹೊರಟರು. ಆಗ ಈಕೆ ನನ್ನ ಬಳಿ ಬಂದಳು. ತನ್ನ ಪರಿಚಯ ಮಾಡಿಕೊಂಡು, ಸರ್ ನೀವು ಸಿನಿಮಾ ಮಾಡುತ್ತಿದ್ದೀರಂತೆ, ನನಗೆ ಅಭಿನಯಿಸಲು ಆಸಕ್ತಿಯಿದೆ ಎಂದಳು. ನಾನು ಕೊಂಚ ಹಿಂದು-ಮುಂದು ನೋಡಿದೆ. ಕೊನೆಗೆ ಅಲ್ಲೇ ನಿಂತು ಒಂದು ಸಾಲಿನ ಕಥೆ ಹೇಳುತ್ತಾ, ದೇವಕ್ಕನಿಗೆ ಇಬ್ಬರು ಮಕ್ಕಳಿರುತ್ತಾರೆ, ನೀವು ಎರಡು ಮಕ್ಕಳು ತಾಯಿಯಂತೆ ಕಾಣುವುದಿಲ್ಲವಲ್ಲ. ಮೇಲಾಗಿ ಆ ಪಾತ್ರಕ್ಕೆ ಏಡ್ಸ್ ರೋಗವಿರುತ್ತದೆ, ನಿಮ್ಮ ಇಮೇಜ್‌ಗೆ ಧಕ್ಕೆಯಾಗುವುದಿಲ್ಲವೇ? ಎಂದೆಲ್ಲಾ ಹೆದರಿಸಿದೆ. ಆಕೆ ಅಂಜಲಿಲ್ಲ ಅಳುಕಲಿಲ್ಲ. ನಾನು ರೆಡಿ ಎಂದಳು. ಆದರೆ ನನಗೇ ಹಿಂಜರಿಕೆ. ಆಕೆಯ ಹಾವ-ಭಾವ, ಕೇಶಾಲಂಕಾರ, ವೇಷ_ಭೂಷಣ ನನಗೆ ಸಮಾಧಾನ ತಂದಿರಲಿಲ್ಲ. ಈಕೆ ಬೆಂಗಳೂರಿನಲ್ಲಿ ಬೆಳೆದಾಕೆ. ಇನ್‌ಫೋಸಿಸ್‌ನಲ್ಲಿ ಇಂಜಿನಿಯರ್ ಆಗಿ ದುಡಿದವಳು. ಇವಳು ದೇವಕ್ಕನಾಗಲು ಸಾಧ್ಯವೇ?
ಮತ್ತೆರಡು ದಿನ ಕಳೆಯಿತು. ಮಂಗಳೂರಿನ ಯಜ್ಞಾ ಶೆಟ್ಟಿಯನ್ನು ಸಂಪರ್ಕಿಸಿದೆವು. ಆಕೆ ಒಂದಿಷ್ಟು ಸಮಯ ಕೇಳಿದಳು. ಮತ್ಯಾರೂ ಸಿಗಲಿಲ್ಲ. ದೇವಕ್ಕನನ್ನು ತಲಾಶ್ ಮಾಡಲು ಆಗದೆ ಸೋತಿದ್ದ ನನ್ನ ಸಹಾಯಕರು, ನಿವೇದಿತಾಳಿಗೇ ಒಮ್ಮೆ ಸ್ಕ್ರೀನ್ ಟೆಸ್ಟ್ ಮಾಡಿ ನೋಡೋಣ ಎಂದರು. ಇಲ್ಲ ಎನ್ನುವ ಸ್ಥಿತಿಯಲ್ಲಿ ನಾನಿರಲಿಲ್ಲ.
ಸರಿ, ಒಂದು ದಿನ ನಿವೇದಿತಾಳನ್ನು ನನ್ನ ಕಚೇರಿಗೆ ಕರೆಸಿದೆವು. ದೇವಕ್ಕನಿಗೆಂದು ಸಿದ್ಧಪಡಿಸಿದ್ದ ಉಡುಪು ಕೊಟ್ಟು ಇವನ್ನು ತೊಟ್ಟುಕೊಂಡು ಬಾರಮ್ಮ ಎಂದೆವು. ಆಕೆ, ನನಗೆ ಸೀರೆ ಉಡಲು ಸರಿಯಾಗಿ ಬರೋಲ್ಲ, ಆದರೂ ಪ್ರಯತ್ನಿಸ್ತೀನಿ ಎಂದು ಕೋಣೆಗೆ ಹೋಗಿ ಬಾಗಿಲಿಕ್ಕಿಕೊಂಡಳು. ನಾನು ನನ್ನ ಸಹಾಯಕರನ್ನು ನೋಡಿ ಹುಸಿನಕ್ಕೆ. ಹತ್ತು ನಿಮಿಷ ಕಳೆಯಿತು. ಅಂತೂ ಕೊನೆಗೆ ಹೇಗೋ ಸೀರೆ ಸುತ್ತಿಕೊಂಡು ಆಕೆ ಹೊರಬಂದಳು. ಪರವಾಗಿಲ್ಲ ಅನ್ನಿಸಿತು. ಆದರೆ ಆಕೆ ಹೆಣ್ಣಿಗೆ ಭೂಷಣವಾಗಿರುವ ಮುಂಗುರುಳನ್ನು ಕತ್ತರಿಸಿ ಬಾಬ್ ಸ್ಟೈಲ್ ಮಾಡಿಸಿದ್ದಳು. ತಲೆಬಾಚಿ ಜಡೆ ಹಾಕಿದರೂ ಹಣೆಯ ಮೇಲೆ ಪುಡಿಗೂದಲು ಹರಡಿಕೊಂಡಿತ್ತು. ಬೈತಲೆ ಕೂರುತ್ತಿರಲಿಲ್ಲ. ನಮ್ಮ ಮೇಕಪ್‌ಮನ್ ಮಾರುತಿ ನಾನು ಏನಾದರೂ ಮಾಡುತ್ತೇನೆ ಎಂದು ಧೈರ್ಯ ಕೊಡುತ್ತಾ ಆಕೆಯ ಹಣೆಗೆ ನಾಲ್ಕಾಣೆ ಅಗಲದ ಕುಂಕುಮ ಇಟ್ಟ.
ಆಕೆಗೆ ತಲೆಯ ಮೇಲೊಂದು ಬುಟ್ಟಿ ಕೊಟ್ಟು, ಕಂಕುಳಿಗೆ ಮಗುವಿನ ಗೊಂಬೆ ಕೊಟ್ಟು ನಾಲ್ಕು ಹೆಜ್ಜೆ ನಡೆದು ಬರುವಂತೆ ಹೇಳಿದೆ. ಆಕೆ ಒಂಥರಾ ವಕ್ರವಾಗಿ ನಡೆದು ಬಂದಳು. ಒಂದಿಷ್ಟು ಸಮಾಧಾನವಾಯಿತು. ಕೆಲವು ಸಂಭಾಷಣೆಯ ತುಣುಕುಗಳನ್ನು ಕೊಟ್ಟು ಅದನ್ನು ಹೇಳಲು ಹೇಳಿದೆವು. ಆಕೆ ಉತ್ತರಕರ್ನಾಟಕದ ಭಾಷೆಗೆ ಒಗ್ಗಿಕೊಳ್ಳಲು ತಿಣುಕಾಡಿದರೂ ಪ್ರಾಮಾಣಿಕ ಪ್ರಯತ್ನ ನಡೆಸಿದಳು. ನಾನು ಆಕೆಯನ್ನೇ ದಿಟ್ಟಿಸುತ್ತಾ ನಿಂತೆ. ಆಕೆ, ‘ಸರ್ ನೀವೇನೂ ಚಿಂತೆ ಮಾಡಬೇಡಿ, ನಾನು ನಾರ್ತ್ ಕರ್ನಾಟಕ ಸ್ಲಾಂಗ್ ಕಲಿಯುತ್ತೇನೆ ಎಂದು ಸಮಾಧಾನ ಮಾಡಿದಳು. ಮಾದೇವಪ್ಪನ ಪಾತ್ರಧಾರಿಗಳ ಜೊತೆ ಒಂದು ದೃಶ್ಯ ನಟಿಸಲು ಹೇಳಿ ಅದನ್ನು ನನ್ನ ಹ್ಯಾಂಡಿಕ್ಯಾಮ್‌ನಲ್ಲಿ ಚಿತ್ರೀಕರಿಸಿದೆ.
ಆಕೆ ಕಾಸ್ಟ್ಯೂಮ್, ಮೇಕಪ್ ತೆಗೆದು ಬಂದ ನಂತರ ಕೈಗೆ ಚಿತ್ರಕಥೆಯ ಪ್ರತಿಕೊಟ್ಟು, ಒಂದಿಷ್ಟು ರೆಫರೆನ್ಸ್ ಫೋಟೋಸ್ ಕೊಟ್ಟು ರೊಟ್ಟಿ ಮಾಡುವ ವೀಡಿಯೋ ಕೊಟ್ಟು ಕೆಲವು ದಿನ ಪ್ರಾಕ್ಟೀಸ್ ಮಾಡಿಕೊಂಡು ಬನ್ನಿ, ಆಮೇಲೆ ನೋಡೋಣ ಎಂದು ಹೇಳಿ ಕಳುಹಿಸಿದೆ. ಈ ಮಧ್ಯೆ, ಈಕೆಗಿಂತ ಉತ್ತಮರಾದ ಬೇರೆ ಯಾರಾದರೂ ಸಿಕ್ಕರೂ ಸಿಗಬಹುದು ಎಂಬ ಆಸೆ.
ಚಿತ್ರೀಕರಣದ ದಿನ ಹತ್ತಿರ ಬಂದೇಬಿಟ್ಟಿತು. ಯಾರೂ ಸಿಗಲಿಲ್ಲ. ಧೈರ್ಯವಾಗಿ ಸೋದರಿ ನಿವೇದಿತಾ ಮೇಲೆ ಭಾರ ಹಾಕಿ ಮೂರು ದಿನ ಮುಂಚೆ ಹುಬ್ಬಳ್ಳಿಯ ರೈಲು ಏರಿದೆ. ನಿವೇದಿತಾ ಮತ್ತು ಇತರ ತಂಡ ಚಿತ್ರೀಕರಣದ ಹಿಂದಿನ ದಿನ ಬಂದು ಇಳಿಯಿತು. ನಿವೇದಿತಾ ಹೋಟೆಲ್‌ಗೆ ಬಂದವಳೇ ಇಂಗ್ಲೀಷಿನಲ್ಲಿ ಟಸ್-ಪುಸ್ ಎಂದು ಮಾತಾಡತೊಡಗಿದಳು. ನಾನು ಸ್ವಲ್ಪ ಸೀರಿಯಸ್ ಆದ ಧ್ವನಿಯಲ್ಲಿ, ನೋಡಮ್ಮ ಇನ್ನುಮುಂದೆ ಚಿತ್ರೀಕರಣ ಮುಗಿಯುವವರೆಗೆ ನೀನು ಕನ್ನಡದಲ್ಲೇ ಮಾತಾಡಬೇಕು. ಅದರಲ್ಲಿ ಸಾಧ್ಯವಾದಷ್ಟು ಉತ್ತರಕರ್ನಾಟಕದ ಆಕ್ಸೆಂಟ್ ಇರಬೇಕು ಎಂದೆ. ತಕ್ಷಣವೇ ಆಕೆ, ‘ಹುಂನ್ರೀ ಸಾಯೇಬ್ರ’ ಎಂದು ಚಾಟಿಯೇಟು ಕೊಟ್ಟಳು.
ಮಾರನೆಯ ದಿನ ಚಿತ್ರೀಕರಣದ ಪ್ರಾರಂಭ…
ಬೆಳಗಿನ ಹತ್ತು ಗಂಟೆ. ಉತ್ತರಕರ್ನಾಟಕದ ಬಿರುಬಿಸಿಲು. ನಮ್ಮ ತಂಡ ಬೀಡುಬಿಟ್ಟಿದ್ದು ಊರ ಹೊರಗಿನ ಕಪ್ಪುಹೊಲದ ಬದಿಯಲ್ಲಿ. ನನಗೆ ಬೆಳೆ ಬೆಳೆಯದ ಕಪ್ಪುಮಣ್ಣಿನ ವಿಶಾಲವಾದ ಹೊಲ ಬೇಕಿತ್ತು. ಅದನ್ನು ಹುಡುಕಿಕೊಂಡಿದ್ದೆವು. ಎದುರಿಗೆ ಕಣ್ಣು ಹಾಯಿಸಿದಷ್ಟು ಕಪ್ಪುಮಣ್ಣು. ಆಗ ತಾನೆ ಕುಂಟೆ ಹೊಡೆದು ಹಸನು ಮಾಡಿದ್ದರು. ಸಣ್ಣ ಸಣ್ಣ ಮಣ್ಣ ಹೆಂಟೆಗಳು ಯಥೇಚ್ಚವಾಗಿದ್ದವು. ಅಲ್ಲಲ್ಲಿ ಜೋಳದ ಕೂಳೆಗಳ ಕಾಟ ಬೇರೆ.
ಮೇಕಪ್ ಹಾಕಿಕೊಂಡು ನಿವೇದಿತಾ ‘ದ್ಯಾವಕ್ಕ’ನಾಗಿ ಬಂದಳು. ಇವಳೇನಾ ಪ್ಯಾಟೆ ಹುಡುಗಿ ಎನ್ನುವಷ್ಟು ರೂಪಾಂತರವಾಗಿತ್ತು!
ಆ ದೃಶ್ಯದಲ್ಲಿ ದ್ಯಾವಕ್ಕ ಖಾಲಿ ಹೊಲದಲ್ಲಿ ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು, ತಲೆಯ ಮೇಲೆ ರೊಟ್ಟಿಯ ಬುಟ್ಟಿ ಹೊತ್ತು ನಡೆದು ಬರಬೇಕಿತ್ತು. ಮುಂದಿನದನ್ನು ನಮ್ಮಿಬ್ಬರ ಸಂಭಾಷಣೆಯ ಮಾದರಿಯಲ್ಲಿ ಕೊಟ್ಟಿದ್ದೇನೆ, ಓದಿಕೊಳ್ಳು.
ನಾನು: ನೋಡಮ್ಮ, ನೀನು ಬೆಂಗಳೂರಿನಲ್ಲಿ ಹೈ ಹೀಲ್ಸ್ ಹಾಕಿಕೊಂಡು ಓಡಾಡಿದ ಹುಡುಗಿ. ಈ ಹೊಲದಲ್ಲಿ ನಡೆಯುವುದು ಸುಲಭವಲ್ಲ. ಬರಿಗಾಲಿನಲ್ಲಿ ನಡೆದರೆ ಚನ್ನಾಗಿರುತ್ತದೆ. ನಿನಗೆ ಕಷ್ಟ ಎಂದರೆ ನಿನಗೆ ಹಳೆಯ ಹವಾಯಿ ಚಪ್ಪಲಿ ಕೊಡುತ್ತೇನೆ.
ಆಕೆ: ನನಗೆ ಚಪ್ಪಲಿ ಬೇಡ ಸರ್. ಬರಿಗಾಲಲ್ಲೇ ನಡೆಯುತ್ತೇನೆ
‘ಯೋಚನೆ ಮಾಡು. ನೀನು ಬರಿಗಾಲಲ್ಲಿ ನಡೆಯಲು ಒಮ್ಮೆ ನಿರ್ಧರಿಸಿದರೆ ನಂತರ ಇಡೀ ಚಿತ್ರೀಕರಣದುದ್ದಕ್ಕೂ ಬರಿಗಾಲಲ್ಲೇ ನಡೆಯಬೇಕು. ಎಚ್ಚರಿಕೆ! ಈ ಸುಡುವ ಭೂಮಿಯಲ್ಲಿ ನಿನ್ನ ಅಂಗಾಲು ಸುಟ್ಟು ಬೊಕ್ಕೆಗಳೇಳಬಹುದು!
‘ಪರವಾಗಿಲ್ಲ ಬರಿಗಾಲಲ್ಲಿ ನಡೆಯುತ್ತೇನೆ’
‘ಸರಿ. ಇದು ನೋಡು, ರೊಟ್ಟಿ ಬುಟ್ಟಿ. ನೀನು ಪೇಟೆಗೆ ರೊಟ್ಟಿ ಮಾರಲು ಹೊರಟಿರುತ್ತೀಯ. ಬುಟ್ಟಿ ತುಂಬಿದಂತೆ ಕಾಣಬೇಕೆಂದು ಹಳೇ ಬಟ್ಟೆ ಸೇರಿಸಿ ಗಂಟು ಕಟ್ಟಿದ್ದಾರೆ. ನೀನು ಭಾರ ಹೊರುವವಳಂತೆ ನಟಿಸಬೇಕು’
‘ಸರ್, ಭಾರವಿಲ್ಲದ ಬಟ್ಟೆ ಗಂಟು ಇಟ್ಟುಕೊಂಡು ನಡೆದರೆ ಖಾಲಿ ಬುಟ್ಟಿ ಎಂದು ಗೊತ್ತಾಗಬಹುದು. ಯಾವುದಾದರೂ ಭಾರದ ಕಲ್ಲನ್ನೋ ಮತ್ತೊಂದನ್ನೋ ಇಟ್ಟುಕೊಂಡು ನಡೆಯುತ್ತೇನೆ, ಆಗಬಹುದಾ?’
‘ಆಗಬಹುದು, ಆದರೆ ಒಮ್ಮೆ ಕಲ್ಲಿಟ್ಟುಕೊಂಡು ನಡೆದರೆ ಪೂರ್ತಿ ಚಿತ್ರ ಅದೇ ಭಾರ ಹೊರುತ್ತಿರಬೇಕಾಗುತ್ತದೆ, ಪರವಾಗಿಲ್ಲವೇ?’
‘ಪರವಾಗಿಲ್ಲ ಸರ್..’
‘ನೋಡು ದ್ಯಾವಕ್ಕನ ಕಂಕುಳಲ್ಲಿ ಮಗು ಇರುತ್ತದೆ. ನಿಜವಾದ ಮಗುವನ್ನು ಯಾವಾಗಲೂ ಹೊತ್ತಿರುವುದು ಕಷ್ಟ. ಹಾಗಾಗಿ ನಾವು ಮಗುವಿನ ಗೊಂಬೆ ತಯಾರು ಮಾಡಿದ್ದೇವೆ. ಲಾಂಗ್ ಶಾಟ್‌ನಲ್ಲಿ ಅದು ಗೊಂಬೆ ಎಂದು ಗೊತ್ತಾಗುವುದಿಲ್ಲ. ಕ್ಲೋಸ್ ಅಪ್‌ನಲ್ಲಿ ಮಾತ್ರ ನಿಜವಾದ ಮಗುವನ್ನು ಬಳಸೋಣ’
‘ಗೊಂಬೆ ಬೇಡ ಸರ್. ನಿಜವಾದ ಮಗುವನ್ನೇ ಹೊತ್ತುಕೊಂಡು ನಡೆಯುತ್ತೇನೆ’
ಆಕೆಯ ಉತ್ಸಾಹ, ತೊಡಗಿಸಿಕೊಳ್ಳುವಿಕೆ ಸಂತೋಷ ತಂದಿತು. ‘ಆಕ್ಷನ್’ ಎಂದೆ
ದೇವಕ್ಕ ಕ್ಯಾಮರಾಗೆ ವಿರುದ್ಧ ದಿಕ್ಕಿನಲ್ಲಿ ಮಗುವನ್ನು ಕಂಕುಳಲ್ಲಿಟ್ಟುಕೊಂಡು, ತಲೆಯ ಮೇಲೆ ಬುಟ್ಟಿ ಹೊತ್ತು ಬರಿಗಾಲಲ್ಲಿ ಬಿಸಿಲ ಝಳದಲ್ಲಿ ನಡೆದೇ ನಡೆದಳು. ಹಿಂತಿರುಗಿ ನೋಡಲಿಲ್ಲ.
ಆಕೆಯ ಶ್ರಮಕ್ಕೆ ಸ್ವಲ್ಪದರಲ್ಲಿ ರಾಷ್ಟ್ರಪ್ರಶಸ್ತಿ ಮಿಸ್ ಆಯಿತು ಆದರೆ ಆಕೆಯನ್ನು ಹುಡುಕಿಕೊಂಡು ರಾಜ್ಯಪ್ರಶಸ್ತಿ ಬಂತು!
ಗುಡ್‌ಲಕ್ ನಿವೇದಿತಾ!
(ರೂಪತಾರದಲ್ಲಿ ಪ್ರಕಟವಾದ ಲೇಖನ)